ಶರಣರ ಪರಿಕಲ್ಪನೆಯಲ್ಲಿ ಪ್ರಸಾದ

Date: 21-11-2022

Location: ಬೆಂಗಳೂರು


''ಶರಣರ ಪರಿಕಲ್ಪನೆಯಲ್ಲಿ ಪ್ರಸಾದವೆಂದರೆ ಸುಜ್ಞಾನವಾಗಿದೆ. ಆತ್ಮದ ಮೂಲಕ ಹುಟ್ಟಿಕೊಂಡ ಅಂತರಂಗದ ಅರಿವಾಗಿದೆ. ಜಂಗಮ ಪ್ರಸಾದವೇ ಇಲ್ಲಿ ಪ್ರಾಣವಾಗಿದೆ. ಗುರು-ಲಿಂಗ-ಜಂಗಮಗಳ ಮೂಲಕ, ಅರಿವು-ಆಚಾರ-ಸುಜ್ಞಾನಗಳು ಅನುಷ್ಠಾನಗೊಂಡು ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಗಳಾಗಿವೆಯೆಂದು ಶರಣರು ಹೇಳಿದ್ದಾರೆ'' ಎನ್ನುತ್ತಾರೆ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಪ್ರಸಾದ’ದ ಪರಿಕಲ್ಪನೆಯನ್ನು ಚರ್ಚಿಸಿದ್ದಾರೆ.

“ಪ್ರಸಾದ” ಪದವು ಅನೇಕ ಧಾರ್ಮಿಕಾಚರಣೆಗಳಲ್ಲಿ ಬಳಕೆಯಲ್ಲಿದೆ. ಆದರೆ ಲಿಂಗಾಯತ ಧರ್ಮದಲ್ಲಿ ಪ್ರಸಾದದ ಪರಿಕಲ್ಪನೆ ತುಂಬ ಉದಾತ್ತವಾದುದಾಗಿದೆ. ಸ್ಥಾವರಲಿಂಗಕ್ಕೆ ನೈವೇದ್ಯ ಮಾಡಿ ಪಡೆಯುವ ಹಣ್ಣು-ಹಾಲು-ಆಹಾರ ಇವುಗಳನ್ನು ಪ್ರಸಾದವೆಂದು ಉಳಿದ ಧರ್ಮದ ಭಕ್ತರು ನಂಬಿದರೆ, ಶರಣರು ಹೇಳಿರುವ ಪ್ರಸಾದದ ಪರಿಕಲ್ಪನೆಗಳು ವಿನೂತನವಾದವುಗಳಾಗಿದೆ.

ಶರಣರ ಪರಿಕಲ್ಪನೆಯಲ್ಲಿ ಪ್ರಸಾದವೆಂದರೆ ಸುಜ್ಞಾನವಾಗಿದೆ. ಆತ್ಮದ ಮೂಲಕ ಹುಟ್ಟಿಕೊಂಡ ಅಂತರಂಗದ ಅರಿವಾಗಿದೆ. ಜಂಗಮ ಪ್ರಸಾದವೇ ಇಲ್ಲಿ ಪ್ರಾಣವಾಗಿದೆ. ಗುರು-ಲಿಂಗ-ಜಂಗಮಗಳ ಮೂಲಕ, ಅರಿವು-ಆಚಾರ-ಸುಜ್ಞಾನಗಳು ಅನುಷ್ಠಾನಗೊಂಡು ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಗಳಾಗಿವೆಯೆಂದು ಶರಣರು ಹೇಳಿದ್ದಾರೆ. ಅಂಗ ಗುಣವನ್ನಳಿದು, ಲಿಂಗಗುಣ ಪಡೆಯುವದೇ ಪ್ರಸಾದವಾಗಿದೆ. ಕಾಮ-ಕ್ರೋಧಗಳನ್ನು ತೊರೆದು ದಯೆ-ಅಂತಃಕರಣಗಳನ್ನು ಪಡೆದುಕೊಳ್ಳುವದೇ ನಿಜವಾದ ಪ್ರಸಾದದ ಪರಿಕಲ್ಪನೆಯಾಗಿದೆ.

ದಿನನಿತ್ಯಮಾಡುವ ಅಡುಗೆ ಪದಾರ್ಥವಾದರೆ, ಅದನ್ನು ದೇವರಿಗೆ ಅರ್ಪಿಸಿ, ನೈವೇದ್ಯ ಮಾಡಿದ ನಂತರ ಸ್ವೀಕರಿಸುವುದು ಪ್ರಸಾದವೆಂದು ಇತರ ಧಾರ್ಮಿಕಾಚರಣೆಗಳಲ್ಲಿ ಕಾಣಬಹುದಾಗಿದೆ. ಆದರೆ ಲಿಂಗಾಯತ ಧರ್ಮದಲ್ಲಿ ಬರುವ ಪ್ರಸಾದದ ಪರಿಕಲ್ಪನೆ ತುಂಬ ಭಿನ್ನವಾದುದಾಗಿದೆ.

“ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ
ಕುಲವುಂಟೆ ಜಂಗಮವಿದ್ದೆಡೆಯಲ್ಲಿ?
ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ?”

-ಬಸವಣ್ಣ (ಸ.ವ.ಸಂ.1, ವ:770)

ಈ ವಚನದಲ್ಲಿ ಬಸವಣ್ಣ ಪ್ರಸಾದದ ಮಹತ್ವವನ್ನು ತಿಳಿಸಿದ್ದಾರೆ. ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ? ಎಂದು ಕೇಳಿದ್ದಾರೆ. ಬಸವಣ್ಣನವರ ಪ್ರಕಾರ ಲಿಂಗವು ಹೊಲೆಯನ್ನು ಹೋಗುಲಾಡಿಸುತ್ತದೆ, ಜಂಗಮನು ಕುಲಭೇದವನ್ನು ಅಳಿಸಿ ಹಾಕುತ್ತಾರೆ. ಅದೇರೀತಿ ಪ್ರಸಾದವು ಎಂಜಲವಾಗದೆ ಪವಿತ್ರವಾಗುತ್ತದೆ. ಹೀಗಾಗಿ ಈ ಲಿಂಗ-ಜಂಗಮ-ಪ್ರಸಾದಗಳು ಕೇವಲ ಅಲಂಕಾರಿಕವಾಗಿರದೆ, ಹೊಲೆಯನ್ನೋಡಿಸಲು, ಕುಲಭೇಧವನ್ನಳಿಸಿಹಾಕಲು, ಸಹಾಯಕವಾಗಿವೆ. ಇನ್ನೊಂದು ವಚನದಲ್ಲಿ ಪ್ರಾಣಲಿಂಗವು ಪ್ರಸಾದದಲ್ಲಿ ಸನ್ನಿಹಿತವಾಯಿತೆಂದು ಬಸವಣ್ಣ ತಿಳಿಸಿದ್ದಾರೆ.

“ಪ್ರಸಾದ ಪ್ರಸಾದವೆಂದು ಹೆಸರಿಟ್ಟು ನುಡಿವವರಿಗೆ ಪ್ರಸಾದವೆಲ್ಲಿಯದೋ?
ಮನಮುಟ್ಟಿ ಕೊಂಡುದು ಪ್ರಸಾದವಲ್ಲ, ತನುಮುಟ್ಟಿ ಕೊಂಡುದು ಪ್ರಸಾದವಲ್ಲ

ಧನಮುಟ್ಟಿ ಕೊಂಡುದು ಪ್ರಸಾದವಲ್ಲ........
ಇಕ್ಕುವವ ಶಿವದ್ರೋಹಿ; ಕೊಂಬವ ಗುರುದ್ರೋಹಿ.
ಇದು ಕಾರಣ ಕೂಡಲಚೆನ್ನಸಂಗಯ್ಯನ ಪ್ರಸಾದ
ಘನಕ್ಕೆ ಮಹಾಘನ ನಾನೇನೆಂದು ಬಣ್ಣಿಸುವೆ...”
-ಚೆನ್ನಬಸವಣ್ಣ (ಸ.ವ.ಸಂ.3, ವ:242)

ಚೆನ್ನಬಸವಣ್ಣ ಈ ವಚನದಲ್ಲಿ ಪ್ರಸಾದ ಎಲ್ಲಕ್ಕಿಂತಲೂ ಘನವಾದುದೆಂದು ಹೇಳಿದ್ದಾರೆ. ತನು-ಮನ-ಧನಗಳನ್ನು ಮೀರಿ ನಿಂತುದೇ ಪ್ರಸಾದವೆಂದು ತಿಳಿಸಿದ್ದಾರೆ. ಪ್ರಸಾದವಾವುದು ಓಗರವಾವುದು? ಎಂಬುದನ್ನು ತಿಳಿಯದ ಮೂಢರನ್ನು ಕಂಡು ವಿಡಂಬಿಸಿದ್ದಾರೆ. ಪ್ರಸಾದಕ್ಕೂ-ಅನ್ನಕ್ಕೂ ವ್ಯತ್ಯಾಸವಿದೆಯೆಂದು ಇಲ್ಲಿ ತಿಳಿಸಲಾಗಿದೆ.

“ಗುರು ಮುಟ್ಟಿಬಂದ ಶುದ್ಧ ಪ್ರಸಾದಿಯಾದಡೆ,
ವಾತ ಪಿತ್ತ ಶ್ಲೇಷ್ಮವಳಿದಿರಬೇಕು,
ಲಿಂಗ ಮುಟ್ಟಿಬಂದ ಸಿದ್ಧ ಪ್ರಸಾದಿಯಾದಡೆ
ಆದಿ ವ್ಯಾದಿಗಳಿಲ್ಲದಿರಬೇಕು.
ಮೂರರ ಅರುಹುಗಟ್ಟಿಗೊಳ್ಳುವ ಮಹಾ ಪ್ರಸಾದಿಯಾದಡೆ
ಮರಣವಿಲ್ಲದಿರಬೇಕು.
-ಸಿದ್ಧರಾಮ (ಸ.ವ.ಸಂ.4, ವ:1280)

ಗುರು ಮುಟ್ಟಿಬಂದುದು ಶುದ್ಧಪ್ರಸಾದವಾದಡೆ, ಲಿಂಗ ಮುಟ್ಟಿಬಂದುದು ಸಿದ್ಧಪ್ರಸಾದವಾಗಿದೆ ಮತ್ತು ಜಂಗಮ ಮುಟ್ಟಿಬಂದುದು ಪ್ರಸಿದ್ಧ ಪ್ರಸಾದವಾಗಿದೆ. ಇಂತಹ ತ್ರಿವಿಧ ಪ್ರಸಾದವ ಸೇವಿಸಿದ ನಂತರ ಮಲತ್ರಯಕ್ಕೊಳಗಾಗಬಾರದೆಂದು ಈ ವಚನದಲ್ಲಿ ಸಿದ್ಧರಾಮ ಸ್ಪಷ್ಟಪಡಿಸಿದ್ದಾರೆ. ಅಂದರೆ ಪ್ರಸಾದವೆಂದರೆ ಇಲ್ಲಿ ಓಗರವಲ್ಲ, ನಿಜವಾದ ಪ್ರಸಾದ ಮಲತ್ರಯಕ್ಕೊಳಗಾಗುವುದಿಲ್ಲವೆಂದು ಹೇಳಲಾಗಿದೆ. ಅಡಿಗೆಮಾಡಿ ಉಣ್ಣುವುದು ಭೂತ, ಹಾಗೆ ಮಾಡದೆ ಬದುಕಿನ ಗುರಿಯನರಿಯಬಲ್ಲಡೆ ಅದೇ ಮಹಾಪ್ರಸಾದವೆಂದು ಸಿದ್ಧರಾಮ ತಮ್ಮ ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಪ್ರಸಾದಕಾಯನಾದ ಬಳಿಕ ರಸೌಷಧಿಯ ಅವಶ್ಯಕತೆಯಿರುವುದಿಲ್ಲ, ಮನದಿಚ್ಛೆ ಪೂರ್ಣವಾದ ಬಳಿಕ ಮಂತ್ರದ ಹಂಗಿರುವುದಿಲ್ಲ, ಆತ್ಮವೇ ಪರಮಾತ್ಮನಾದ ಬಳಿಕ ಪರ್ವತದ ಹಂಗಿರುವುದಿಲ್ಲವೆಂದು ತಿಳಿಸಿದ್ದಾರೆ.

“ಪ್ರಾಣ ಲಿಂಗವೆಂದರಿದ ಬಳಿಕ
ಪ್ರಾಣ ಪ್ರಸಾದವಾಯಿತ್ತು
ಲಿಂಗ ಪ್ರಾಣವೆಂದರಿದ ಬಳಿಕ
ಅಂಗದಾಸೆ ಹಿಂಗಿತ್ತು.”
-ಅಕ್ಕಮಹಾದೇವಿ (ಸ.ವ.ಸಂ.5, ವ:284)

2) “ಬಸವಣ್ಣನ ಪ್ರಸಾದವಕೊಂಡು ಎನ್ನಕಾಯ ಶುದ್ಧವಾಯಿತ್ತಯ್ಯಾ
ಚೆನ್ನಬಸವಣ್ಣನ ಪ್ರಸಾದವಕೊಂಡು ಎನ್ನಜೀವ ಶುದ್ಧವಾಯಿತ್ತಯ್ಯಾ
ಮಡಿವಾಳಯ್ಯನ ಪ್ರಸಾದವಕೊಂಡು ಎನ್ನಭಾವ ಶುದ್ಧವಾಯಿತ್ತಯ್ಯಾ”

-ಆಯ್ದಕ್ಕಿ ಲಕ್ಕಮ್ಮ (ಸ.ವ.ಸಂ.5,ವ:721)

3) “ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ
ತಾವು ಪ್ರಸಾದಿಗಳಾದ ಪರಿಯೆಂತಯ್ಯ?
ಪರಿಪೂರ್ಣದ ನೆಲೆಯ ತಿಳಿದು
ಪರಂಜ್ಯೋತಿಯ ಅನುಭಾವವನರಿಯದನ್ನಕ್ಕ
ತಾವು ಪ್ರಸಾದಿಗಳಾದ ಪರಿಯೆಂತಯ್ಯ?”
-ನೀಲಮ್ಮ (ಸ.ವ.ಸಂ.5, ವ:998)

ಈ ಮೂರೂ ವಚನಗಳಲ್ಲಿ ಪ್ರಸಾದಕ್ಕೆ ಸಂಬಂಧಿಸಿದ ವಿವಿಧ ಅಭಿವ್ಯಕ್ತಿಗಳನ್ನು ನೋಡಬಹುದಾಗಿದೆ. ಪ್ರಾಣವೇ ಲಿಂಗವಾದಾಗ ಪ್ರಾಣಪ್ರಸಾದವಾಯಿತೆಂದು ಹೇಳಿರುವ ಅಕ್ಕಮಹಾದೇವಿ ಇಲ್ಲಿ ಪ್ರಸಾದವೆಂದರೆ ಆಹಾರವಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಬಸವಣ್ಣ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವರ ಪ್ರಸಾದವಕೊಂಡು, ತನ್ನ ಕಾಯ-ಜೀವ-ಭಾವ ಶುದ್ಧವಾಯಿತೆಂದು ಆಯ್ದಕ್ಕಿ ಲಕ್ಕಮ್ಮ ಹೇಳಿದರೆ, ಪ್ರಸಾದಿಗಳಾಬೇಕಾದರೆ, ಪರಿಪೂರ್ಣದ ನೆಲೆಯನರಿತು ಪರಂಜ್ಯೋತಿಯ ಅನುಭಾವವನರಿಯಬೇಕೆಂದು ನೀಲಮ್ಮ ಹೇಳಿದ್ದಾರೆ.

“ಗುರುವಿಲ್ಲದವಂಗೆ ಲಿಂಗವಲ್ಲ
ಲಿಂಗವಿಲ್ಲದವಂಗೆ ಜಂಗಮವಿಲ್ಲ
ಜಂಗಮವಿಲ್ಲದವಂಗೆ ಪ್ರಸಾದವಿಲ್ಲ
ಪ್ರಸಾದವಿಲ್ಲದವಂಗೆ ನಿರ್ವಾಣವಿಲ್ಲ”
-ಆದಯ್ಯ (ಸ.ವ.ಸಂ.6, ವ:1129)

2) “ಪಾದೋದಕದಿಂದ ಪದಂ ನಾಸ್ತಿಯಾಗಿರಬೇಕು
ಲಿಂಗೋದಕದಿಂದ ಅಂಗ ಮಂಗಳಮಯವಾಗಬೇಕು
ಪ್ರಸಾದೋದಕದಿಂದ ಆತ್ಮಭಾವಕ್ಕೆ ಬೀಜವಿಲ್ಲದಿರಬೇಕು.”
-ಮೋಳಿಗೆ ಮಾರಯ್ಯ (ಸ.ವ.ಸಂ.8, ವ:1894)

ಗುರು-ಲಿಂಗ-ಜಂಗಮವಿಲ್ಲದವರಿಗೆ ಪ್ರಸಾದವಿಲ್ಲವೆಂದು ಆದಯ್ಯ ಹೇಳಿದರೆ, ಪಾದೋದಕದಿಂದ ಪದಂ ನಾಸ್ತಿಯಾಗಿರಬೇಕೆಂದು ಮೋಳಿಗೆ ಮಾರಯ್ಯ ಹೇಳಿದ್ದಾರೆ. ಹೀಗೆ ಶರಣರು ಪ್ರಸಾದದ ಬಗೆಗೆ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡಿದ್ದಾರೆ. ಅಷ್ಟಾವರಣಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ಅವು ಕೇವಲ ಹೊರಾವರಣಗಳಾಗದೆ, ಒಳಗೆ ಬೆಳೆಯಬಹುದಾದ ಶಕ್ತಿ ಸಂಕೇತಗಳಾಗಿವೆ. ಅಷ್ಟಾವರಣಗಳ ಬಗೆಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕಾಗಿದೆ.

- ಬಸವರಾಜ ಸಬರದ

ಈ ಅಂಕಣದ ಹಿಂದಿನ ಬರಹಗಳು:
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ

04-12-2023 ಬೆಂಗಳೂರು

''ಕಾಂತಾವರ ಎಂಬ ದಿವ್ಯ ಸನ್ನಿಧಿಯಲ್ಲಿ ಕುಳಿತುಕೊಂಡು ಲೋಕವನ್ನು ನೋಡುವ ಏಕಲವ್ಯನ ಧ‍್ಯಾನ ಅವರು ಜೀವಂತವಾಗ...

ಕನ್ನಡ ಪದಕೋಶ ಎಶ್ಟು ದೊಡ್ಡದು?

03-12-2023 ಬೆಂಗಳೂರು

''ನಮಗೆ ತಿಳಿದಿರುವ ಪ್ರಕಾರ ಸರಿ ಸುಮಾರು ಸಾವಿರ ವರುಶ ಹಳೆಯದಾಗಿರಬಹುದಾದ 'ರನ್ನ ಕಂದ' ಹೆಸರಿನ ಸಣ್ಣ...

ಪಾರ್ಶ್ವೋತ್ತನಾಸನ, ಪರಿವೃತ್ತ ಜಾನುಶೀರ್ಷಾಸನ

30-11-2023 ಬೆಂಗಳೂರು

''ಒಂದು ಬದಿಗೆ ದೇಹವನ್ನು ತಿರುಗಿಸಿಟ್ಟು, ಮೇಲ್ಮುಖವಾಗಿ ಚಾಚಿಟ್ಟು ಅಭ್ಯಾಸ ನಡೆಯುವುದೇ `ಪಾರ್ಶ್ವೋತ್ತಾನಾಸನ&...