ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ

Date: 06-06-2022

Location: ಬೆಂಗಳೂರು


'ದೇಹವನ್ನೇ-ದೇವಾಲಯವನ್ನಾಗಿ ಮಾಡಿದ್ದು ಶರಣರ ಧಾರ್ಮಿಕ ಸಿದ್ಧಾಂತವಾದರೆ, ಕಾಯದಿಂದಲೇ ಕಾಯಕವನ್ನು ಕಟ್ಟಿದ್ದು ಅವರ ಸಾಮಾಜಿಕ ಸಿದ್ಧಾಂತವಾಗಿದೆ' ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತ ಅಂಕಣದಲ್ಲಿ ಶರಣರ ಸಾಮಾಜಿಕ ಸಿದ್ಧಾಂತವಾದ ಕಾಯಕದ ಕುರಿತು ವಿವರಿಸಿದ್ದಾರೆ.

ಕಾಯಕ: ಪ್ರಾಸ್ತಾವಿಕ
ದೇಹವನ್ನೇ-ದೇವಾಲಯವನ್ನಾಗಿ ಮಾಡಿದ್ದು ಶರಣರ ಧಾರ್ಮಿಕ ಸಿದ್ಧಾಂತವಾದರೆ, ಕಾಯದಿಂದಲೇ ಕಾಯಕವನ್ನು ಕಟ್ಟಿದ್ದು ಅವರ ಸಾಮಾಜಿಕ ಸಿದ್ಧಾಂತವಾಗಿದೆ. ಈ ಎರಡೂ ಸಿದ್ಧಾಂತಗಳಿಗೆ ದೇಹ(ಕಾಯ)ವೇ ಕೇಂದ್ರವಾಗಿದೆ. ಈ ದೇಹವು ಮೂಳೆಮಾಂಸದ ತಡಿಕೆಯೆಂಬ ನಂಬಿಕೆಯಿದ್ದಂತಹ ಕಾಲಘಟ್ಟದಲ್ಲಿ ಈ ಕಾಯ ವ್ಯರ್ಥವಾದದ್ದೆಂದು ನಂಬಿದವರ ನಡುವೆ, ಬಸವಾದಿ ಶರಣರು ಈ ಸಿದ್ಧಾಂತಗಳನ್ನು ಹುಟ್ಟುಹಾಕಿ, ಕಾಯದಿಂದಲೇ ಸಕಲ ಸಾಧನೆ ಸಾಧ್ಯವೆಂದು ತಿಳಿಹೇಳಿದ ಅವರು; ಕಾಯಕದಿಂದ ಆ ದೇವರನ್ನು ಕಾಣಲು ಸಾಧ್ಯವೆಂದು ಸ್ಪಷ್ಟಪಡಿಸಿದರು. ಆಗ ಕಾಯಕವೇ ಕೈಲಾಸವಾಯಿತು. ದಯೆಯೇ-ಧರ್ಮವಾಯಿತು, ಜೀವನೇ-ದೇವನಾದ ಇದು ಶರಣರ ಕ್ರಾಂತಿಯ ಫಲಿತಾಂಶವಾಗಿದೆ.

ಚಾತುರ್ವರ್ಣ ವ್ಯವಸ್ಥೆಯ ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಶರಣರು ಕಾಯಕ ಸಿದ್ದಾಂತವನ್ನು ಕಟ್ಟಿದರು. ಕರ್ಮ ವಿಭಜನೆಯ ಮೂಲಕ ಜಾತಿವ್ಯವಸ್ಥೆಯನ್ನು ಹುಟ್ಟುಹಾಕಿದ್ದ ವರ್ಣವ್ಯವಸ್ಥೆಯನ್ನು ವಿರೋಧಿಸಿದ ಅವರು ಕಾಯಕ ಸಿದ್ಧಾಂತದ ಮೂಲಕ ಜಾತಿಯ ತಾರತಮ್ಯವನ್ನು ಹೋಗಲಾಡಿಸಿದರು. ಹೀಗಾಗಿ ಕಾಯಕ ಸಿದ್ಧಾಂತವು ಕೇವಲ ಕೆಲಸ-ದುಡಿಮೆಗೆ ಮಾತ್ರ ಸಂಬಂಧಿಸಿರದೆ, ಅದು ಜಾತಿವಿನಾಶದ ಪ್ರಬಲ ಅಸ್ತ್ರವೂ ಆಯಿತೆಂಬುದನ್ನು ಮರೆಯುವಂತಿಲ್ಲ.“ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ” ಎಂಬ ಬಸವಣ್ಣನವರ ವಚನದಲ್ಲಿ ಈ ಸೈದ್ಧಾಂತಿಕ ಸ್ಪಷ್ಟತೆಯಿದೆ. ಶರಣರ ವಚನಗಳಲ್ಲಿ ಜಾತಿನಿರಸನ ಸಿದ್ಧಾಂತವಿದೆ. ಹೀಗಾಗಿ ಕಾಯಕವೆಂದರೆ ಕೇವಲ ದುಡಿಯುವ, ಕೆಲಸ ಮಾಡುವ ವಿಷಯಕ್ಕೆ ಮಾತ್ರ ಸಂಬಂಧಿಸಿರದೆ; ಅದು ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಕಾರಣವಾಯಿತೆಂಬುದನ್ನು ಮರೆಯುವಂತಿಲ್ಲ. ಜಾತಿನಿರ್ಮೂಲನೆ ಮಾಡುವ ಸಂದರ್ಭದಲ್ಲಿ ಕಾಯಕದಂತಹ ಮೌಲ್ಯ ಬಹುದೊಡ್ಡ ಅಸ್ತ್ರವಾಗಿದೆ.

2. ವೃತ್ತಿ ತಾರತಮ್ಯ ನಿವಾರಣೆ

ಈ ದೇಶದ ಸಮಾಜ ವ್ಯವಸ್ಥೆಯಲ್ಲಿ ವೃತ್ತಿಗಳೇ ಜಾತಿಗಳಾಗಿ ಬೆಳೆದು ನಿಂತವು. ಹೀಗಾಗಿ ವೃತ್ತಿಗೂ-ಜಾತಿಗೂ ಸಂಬಂಧವಿದೆ. ಜಾತಿಗಳಲ್ಲಿರುವ ತಾರತಮ್ಯ ಹೋಗಬೇಕಾದರೆ, ಮೊದಲು ವೃತ್ತಿಗಳಲ್ಲಿರುವ ತಾರತಮ್ಯ ಹೋಗಬೇಕು. ಹೀಗಾಗಿ ಶರಣರು, ಕಾಯಕ ಸಿದ್ಧಾಂತದ ಮೂಲಕ ವಿವಿಧ ವೃತ್ತಿಗಳಲ್ಲಿದ್ದ ತಾರತಮ್ಯವನ್ನು ಹೋಗಲಾಡಿಸಿದರು. ಇದು ಪರೋಕ್ಷವಾಗಿ ಜಾತಿತಾರತಮ್ಯದ ವಿರುದ್ಧ ನಡೆದ ಹೋರಾಟವೂ ಆಯಿತು. ಚಾತುರ್ವರ್ಣ ವ್ಯವಸ್ಥೆಯು ವೃತ್ತಿ-ವೃತ್ತಿಗಳಲ್ಲಿ, ಜಾತಿ-ಜಾತಿಗಳಲ್ಲಿ ತಾರತಮ್ಯದ ವಿಷಬೀಜ ಬಿತ್ತಿದ್ದ ಸಂದರ್ಭದಲ್ಲಿ, ಶರಣರು ಈ ಸಮಸ್ಯೆಯನ್ನು ತುಂಬ ಸೂಕ್ಷ್ಮವಾಗಿ ಗ್ರಹಿಸಿದರು. ಹೀಗಾಗಿ ಅವರಿಗೆ ಜಾತಿನಾಶಕ್ಕಿಂತ, ಜಾತ್ಯಾತೀತತೆ ಮುಖ್ಯವಾಯಿತು. ವೃತ್ತಿತಾರತಮ್ಯಕ್ಕಿಂತ ವೃತ್ತಿಗೌರವ ಮಹತ್ವದ್ದಾಯಿತು. ಆದುದರಿಂದ ಅವರು ಜಾತ್ಯಾತೀತ ಸಮಾಜ ಕಟ್ಟಲು ಮುಂದಾದರು. ಆ ಮೂಲಕ ವೃತ್ತಿ ಸಮಾನತೆಯನ್ನು ತಂದರು. ಕಾಯಕ ಸಿದ್ಧಾಂತವು ವೃತ್ತಿಗೌರವದ ಸಂಕೇತವಾಗುತ್ತಲೇ, ಜಾತ್ಯಾತೀತವೆಂಬ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿತು.

1) “ಆವ ಕಾಯಕವಾದಡೂ ಒಂದೇ ಕಾಯಕವಯ್ಯಾ
ಆವ ವ್ರತವಾದರೂ ಒಂದೇ ವ್ರತವಯ್ಯಾ...”
- ಅಲ್ಲಮಪ್ರಭು (ಸ.ವ.ಸಂ.2, ವ: 919)

2) “ಸೆಟ್ಟಿಯೆಂಬೆನೆ ಸಿರಿಯಾಳನ? ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ? ಮಾದಾರನೆಂಬೆನೆ ಚೆನ್ನಯ್ಯನ?
- ಬಸವಣ್ಣ (ಸ.ವ.ಸಂ.1, ವ:345)

3) ಕಾಸಿಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ...”
- ಬಸವಣ್ಣ (ಸ.ವ.ಸಂ.1, ವ: 590)

ಅಲ್ಲಮಪ್ರಭು ಮತ್ತು ಬಸವಣ್ಣನವರ ಈ ವಚನಗಳಲ್ಲಿ ವೃತ್ತಿಕಾಯಕದ ಜತೆ, ಜಾತಿಯೂ ಸೇರಿಕೊಂಡಿದೆ. ವೃತ್ತಿತಾರತಮ್ಯ ನಿವಾರಣೆಗಾಗಿ ಶರಣರು ಎಲ್ಲ ವೃತ್ತಿಗಳನ್ನು ಸಮಾನತೆಯಿಂದ ಕಂಡರು. ಯಾವ ಕಾಯಕವಾದರೂ ಒಂದೇ ಎಂದು ಸ್ಪಷ್ಟಪಡಿಸಿದರು. ಸಿರಿಯಾಳನು ಸೆಟ್ಟಿಯಾಗಿರುವುದು, ಮಾಚಯ್ಯ ಮಡಿವಾಳನಾಗಿರುವುದು, ಕಕ್ಕಯ್ಯ ಡೋಹರನಾಗಿರುವುದು, ಚೆನ್ನಯ್ಯ ಮಾದಾರನಾಗಿರುವುದು ಅವರವರ ವೃತ್ತಿಯಿಂದ, ಹೀಗಾಗಿ ಇಲ್ಲಿ ಒಂದು ವೃತ್ತಿ ಶ್ರೇಷ್ಠ ಮತ್ತೊಂದು ಗೌಣವೆಂದು ಪರಿಗಣಿಸಲಾಗದೆಂದು ಸ್ಪಷ್ಟಪಡಿಸಿದರು. ಎಲ್ಲ ವೃತ್ತಿಗಳೂ ಸಮಾನವೆಂದು ಸಾರಿ ಹೇಳಿದರು. ವೃತ್ತಿಸಮಾನತೆಯನ್ನು ಕಾಯಕ ಸಿದ್ಧಾಂತ ಹುಟ್ಟು ಹಾಕಿದರೆ, ಜಾತಿ ಸಮಾನತೆಯನ್ನು ದಾಸೋಹ ಸಿದ್ಧಾಂತ ತಂದಿತು. ಹೀಗಾಗಿ ಶರಣರ ಕಾಯಕ-ದಾಸೋಹ ಸಿದ್ಧಾಂತಗಳು ಒಂದಕ್ಕೊಂದು ಪೂರಕವಾಗಿವೆ. ವೃತ್ತಿಸಮಾನತೆ ತರದೆ, ಜಾತಿಸಮಾನತೆ ಬರಲಾರದೆಂದು ತಿಳಿದುಕೊಂಡ ಶರಣರು ವೃತ್ತಿಸಮಾನತೆಗೆ ಮಹತ್ವನೀಡಿ ಎಲ್ಲ ವೃತ್ತಿಗಳೂ ಒಂದೇಯೆಂದು ಹೇಳಿ ವೃತ್ತಿ ಗೌರವವನ್ನು ಹೆಚ್ಚಿಸಿದರು.

1) ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರುಲಿಂಗಜಂಗಮದ ಮುಂದಿಟ್ಟು....”
- ಲದ್ದೆಯ ಸೋಮಯ್ಯ (ಸ.ವ.ಸಂ.9, ವ:20)

2) “ಅಸಿಮಸಿ, ಕೃಷಿ, ವಾಣಿಜ್ಯ ಮುಂತಾದ ಕಾಯಕವ ಮಾಡಿ
ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ
ಮುಂತಾದ ಕಾಯಕವ ಮಾಡಿಕೊಂಡು....”
- ಲಕ್ಕಮ್ಮ (ಸ.ವ.ಸಂ.5, 445)

3) “ಆವ ಕಾಯಕವ ಮಾಡಿದಡೂ ಒಂದೇ ಕಾಯಕವಯ್ಯಾ
ಆವ ವ್ರತವಾದಡೂ ಒಂದೇ ವ್ರತವಯ್ಯಾ....”
- ಹಾದರ ಕಾಯಕದ ಗಂಗಮ್ಮ (ಸ.ವ.ಸಂ.5, ವ: 1349)

ಈ ವಚನಗಳಲ್ಲಿಯೂ ಕೂಡ ಯಾವುದೇ ಕಾಯಕ ಮಾಡಿದರೂ ಒಂದೇ ಎಂಬ ಭಾವವಿದೆ. ಇಂತಹ ಭಾವನೆಗಳೇ ವೃತ್ತಿಗೌರವವನ್ನು ಹೆಚ್ಚಿಸಿವೆ. ಅಕ್ಕಮ್ಮ ಅನೇಕ ಕಾಯಕಗಳ ಪಟ್ಟಿಯನ್ನೇ ಕೊಟ್ಟಿದ್ದಾರೆ. ಹಾದರದ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮಳ ಕಾಯಕ ಯಾವುದಾದರೇನು ಎಲ್ಲಾ ಒಂದೇಯೆಂದು ಹೇಳುತ್ತ ಕಾಯಕಕ್ಕೂ ವ್ರತಕ್ಕೂ ಸಂಬಂಧವನ್ನು ಕಟ್ಟಿಕೊಟ್ಟಿದ್ದಾರೆ. ಅಂದರೆ ಕಾಯಕದ ಹಿಂದೆ, ವಿವಿಧ ವೃತ್ತಿಗಳಿವೆ ಮತ್ತು ಆ ಕಾಯಕ ವ್ರತದಂತಿರಬೇಕೆಂಬ ಬದ್ಧತೆಯಿದೆ. ಕಾಯಕಗಳಲ್ಲಿ ತಾರತಮ್ಯವಿಲ್ಲವೆಂದು ಸ್ಪಷ್ಟಪಡಿಸಿದ ವಚನಕಾರರು ವ್ರತವೆಂಬುದು ಬೇರೆಯಲ್ಲ, ಕಾಯಕವೇ ವ್ರತವೆಂದು ಸ್ಪಷ್ಟಪಡಿಸಿದರು.

ತಾರತಮ್ಯ ನೀತಿಯೇ ಚಾತುರ್ವರ್ಣ ವ್ಯವಸ್ಥೆಯ ಪ್ರಮುಖ ಲಕ್ಷಣವಾಗಿದೆ. ದೇವತೆಗಳಲ್ಲಿಯೇ ತಾರತಮ್ಯ ನೀತಿಯನ್ನನುಸರಿಸಿದ ಈ ವ್ಯವಸ್ಥೆ, ಮನುಷ್ಯರಲ್ಲಿ ಮಾಡದೆ ಇರುತ್ತದೆಯೆ? ಈ ವೃತ್ತಿಯನ್ನು ಇಂತವರೇ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದ ಈ ವ್ಯವಸ್ಥೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಜನಸಮುದಾಯವನ್ನು ವರ್ಗೀಕರಿಸಿ ಅವರು ಇಂತಹದ್ದೇ ವೃತ್ತಿ ಮಾಡಬೇಕೆಂದು ಆದೇಶಿಸಿತು. ಇಂತಹ ತಾರತಮ್ಯತೆ ಇರುವ ಆದೇಶಗಳನ್ನೇ ನೀತಿ ಸಂಹಿತೆಗಳೆಂದು ನಂಬಿಸಲಾಯಿತು. ಅದಕ್ಕೆ ಧರ್ಮದ ಲೇಪ ಬಳಿಯಲಾಯಿತು. ಇಂತಹ ಅಸಮಾನತೆಯ ಅನೀತಿಯಿಂದ ಕೂಡಿದ ವರ್ಣವ್ಯವಸ್ಥೆಯನ್ನು ನೇರವಾಗಿ ವಿರೋಧಿಸಿದ ಶರಣರು ಕಾಯಕ-ದಾಸೋಹ-ಸಾಮಾಜಿಕನ್ಯಾಯದಂತಹ ಸಿದ್ಧಾಂತಗಳನ್ನು ಜಾರಿಗೆ ತಂದರು.

“ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ ಕಾಯಕ ನಿವೃತ್ತಿಯಾಗಬೇಕು (ವ:145)” ಎಂದು ಹೇಳಿರುವ ಅಕ್ಕಮಹಾದೇವಿಯ ವಚನದಲ್ಲಿ ವೃತ್ತಿಗಳಲ್ಲಿದ್ದ ತಾರತಮ್ಯ ನೀತಿಯನ್ನು ಅಲ್ಲಗಳೆಯಲಾಗಿದೆ. ಕಾಯಕ ಸಿದ್ಧಾಂತವನ್ನೊಪ್ಪಿಕೊಂಡು ಲಿಂಗಧರಿಸಿದ ಮೇಲೆ ಕಾಯಕದ ಹೆಸರು ಮುಖ್ಯವಾಗುವುದಿಲ್ಲ. ಅಲ್ಲಿ ಹೆಸರಿನ ಕಾಯಕ ನಿವೃತ್ತಿಯಾಗಿ ಸಮಾನತೆಯ ಕಾಯಕ ಮುಖ್ಯವಾಗುತ್ತದೆ. “ಆವಾವ ಕಾಲದಲ್ಲಿಯೂ ಎನಗೆ ಎಮ್ಮವರೆ ಗತಿಮತಿಗಳಯ್ಯ” (ವ:852) ಎನ್ನುವ ನೀಲಮ್ಮ, ಕಾಯಕವು ಕಪಟನಾಟಕವಾಗಬಾರದೆಂದು ಎಚ್ಚರಿಸಿದ್ದಾಳೆ. ಕಾಯಕದಲ್ಲಿ ತಾರತಮ್ಯತೆ ಇರಬಾರದೆಂದು ಅನೇಕ ವಚನಕಾರರು ಹೇಳಿದ್ದಾರೆ. “ವ್ರತನೇಮಗಳೆಲ್ಲ ಕಾಯಕದ ನೇಮಗಳಾದವು” ಎಂದು ಹೇಳಿರುವ ಸಿದ್ಧರಾಮ ಶಿವಯೋಗಿ ವ್ರತವೆಂದರೆ ಬೇರೆಯಲ್ಲ, ಕಾಯಕವೆಂದರೆ ಬೇರೆಯಲ್ಲವೆಂದು ಹೇಳಿದ್ದಾರೆ. ಶರಣರಿಗೆ ಕಾಯಕವೇ ಒಂದು ದೊಡ್ಡ ವ್ರತವಾಯಿತು. ಹೀಗಾಗಿ ಶರಣರ ಕಾಲಕ್ಕೆ ಧರ್ಮ-ಕರ್ಮ-ವ್ರತ-ನೇಮಗಳಂತಹ ಪದಗಳು ಮರುವ್ಯಾಖ್ಯಾನಕ್ಕೊಳಗಾದವು. ವೃತ್ತಿಗಳಲ್ಲಿರುವ ತಾರತಮ್ಯವನ್ನು ನೇರವಾಗಿ ವಿರೋಧಿಸಿದ ಶರಣರು ಕಾಯಕ ಸಿದ್ಧಾಂತದ ಮೂಲಕ ಸಮಾನತೆಯನ್ನು ತಂದರು.

“ದೇವಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತನರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮ ರಾಣೆವಾಸದಾಣೆ”
- ಬಸವಣ್ಣ (ಸ.ವ.ಸಂ.1, ವ: 453)

ಬಸವಣ್ಣನವರ ಈ ವಚನದಲ್ಲಿ ಕಾಯಕ ಮತ್ತು ಕುಲದ ಪ್ರಸ್ತಾಪವಿದೆ. “ಕಾಯಕವಾವುದೆಂದು ಕೇಳಬಾರದು” ಎಂಬ ನಿಲುವು ಮೊದಲಿನ ಸಾಲುಗಳಲ್ಲಿದ್ದರೆ ಭಕ್ತರಲ್ಲಿ “ಕುಲವನರಸಬಾರದೆಂಬ” ಹೇಳಿಕೆ ವಚನದ ಕೊನೆಯಸಾಲುಗಳಲ್ಲಿದೆ. ಈ ಮೊದಲೇ ತಿಳಿಸಿದಂತೆ ಕಾಯಕಕ್ಕೂ ಮತ್ತು ಕುಲ-ಜಾತಿಗಳಿಗೂ ಸಂಬಂಧವಿದೆಯೆಂಬುದನ್ನು ಈ ವಚನ ಸ್ಪಷ್ಟಪಡಿಸುತ್ತದೆ. ಹೀಗೆ ಕಾಯಕವಾವುದೆಂದು ಕೇಳಿ ತಾರತಮ್ಯ ಮಾಡುವುದು, ಕುಲವನ್ನು ಹುಡುಕಿ ಮಾತನಾಡುವುದು ಸರಿಯಲ್ಲವೆಂದು ಶರಣರು ಸ್ಪಷ್ಟಪಡಿಸಿದ್ದಾರೆ. ಒಂದುವೇಳೆ ಹಾಗೆ ತಾರತಮ್ಯ ಮಾಡಿದರೆ ತಲೆದಂಡ! ತಲೆದಂಡ! ಎಂದು ಎರಡು ಸಾರಿ ಹೇಳಲಾಗಿದೆ. ಕಾಯಕವೆಂದರೆ ಕೇವಲ ವೃತ್ತಿಯಲ್ಲ, ಅದು ಕುಲ-ಜಾತಿಗಳನ್ನು ಅಳಿಸಿಹಾಕಿ ಸಮಾನತೆಯ ಸಮಾಜವನ್ನು ಕಟ್ಟುವ ಅಸ್ತ್ರವಾಗಿತ್ತೆಂದು ಈ ವಚನದಿಂದ ತಿಳಿದುಬರುತ್ತದೆ.

ವೃತ್ತಿ-ಜಾತಿ ತನ್ನ ಅಸ್ಮಿತೆಯನ್ನು ಹೇಳಿದರೆ; ಕಾಯಕ ಸಿದ್ಧಾಂತವು ಮನುಷ್ಯನ ಅಸ್ತಿತ್ವವನ್ನು ಕಟ್ಟಿಕೊಡುತ್ತದೆ. ಆ ಮೂಲಕ ಹೊಸವ್ಯಕ್ತಿತ್ವವನ್ನು ರೂಪಿಸುತ್ತದೆ. ಸಮಾಜವ್ಯವಸ್ಥೆಯಲ್ಲಿ ಅನೇಕ ರೀತಿಯ ವೃತ್ತಿಗಳಲ್ಲಿದ್ದ ಮೇಲು-ಕೀಳು ಭಾವನೆಗಳನ್ನು ಅಳಿಸಿಹಾಕಿದ ಶರಣರು ವೃತ್ತಿಗಳಲ್ಲಿ ಸಮಾನತೆಯನ್ನು ತರುವುದರ ಮೂಲಕ ಸಮಾನ ಗೌರವ ನೀಡಿದರು. ಆಗ ವೃತ್ತಿಯೆಂಬುದು ಕಾಯಕವಾಯಿತು. ಹೀಗೆ ಶರಣರ ಅನೇಕ ವಚನಗಳಲ್ಲಿ ವೃತ್ತಿತಾರತಮ್ಯ ನೀತಿಯನ್ನು ಖಂಡಿಸಿ, ಕಾಯಕ ಸಿದ್ಧಾಂತವನ್ನು ಕಟ್ಟಿದ ಅನೇಕ ಉದಾಹರಣೆಗಳಿವೆ.

ಮುಂದುವರೆಯುತ್ತದೆ....

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...