ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ

Date: 13-06-2022

Location: ಬೆಂಗಳೂರು


'ಪಂಚಾಚಾರ ಶುದ್ಧವಾದ ಸದ್ಭಕ್ತನಿಗೆ ಮಾತ್ರ ಕಾಯಕ ಒಲಿಯುತ್ತದೆ. ಆದುದರಿಂದ ಕಾಯಕವೆಂದರೆ ಕೇವಲ ವೃತ್ತಿಯಲ್ಲ, ದುಡಿಮೆಯಲ್ಲ ಅದು ನಡೆ-ನುಡಿ ಸಿದ್ಧಾಂತವಾಗಿದೆಯೆಂದು ಸ್ಪಷ್ಟಪಡಿಸಿದ್ದಾರೆ' ಎನ್ನುತ್ತಾರೆ ಹಿರಿಯ ಲೇಖಕ ಬಸವರಾಜ ಸಬರದ ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಕಾಯದ ಉದ್ದೇಶದ ಕುರಿತು ವಿಶ್ಲೇಷಿಸಿದ್ದಾರೆ.

ವೃತ್ತಿಗಳಿಗೆ ಇರದ ಮಹತ್ವದ ಉದ್ದೇಶ ಕಾಯಕಕ್ಕಿದೆ. ಹಣ ಸಂಪಾದನೆಯೊಂದೇ ವೃತ್ತಿಯ ಉದ್ದೇಶವಾದರೆ; ಸಂಪಾದಿಸಿದ ಹಣವನ್ನು ದಾಸೋಹದ ಮೂಲಕ ಹಂಚುವುದು ಕಾಯಕದ ಗುರಿಯಾಗಿದೆ. ಸತ್ಯದ ಕಾಯಕವಾವುದೆಂಬುದನ್ನು ಚೆನ್ನಬಸವಣ್ಣ ಹೀಗೆ ಹೇಳಿದ್ದಾರೆ.

“ಸತ್ಯಕಾಯಕ ಸತ್ಯಕಾಯಕವೆಂದು ನುಡಿವಿರಿ,
ಸತ್ಯಕಾಯಕವಾವುದೆಂದರಿಯಿರಿ,
ಭಕ್ತ ಗೃಹಂಗಳಿಗೆ ಭೃತ್ಯಕಾಯಕವನೊಡಗೊಂಡು
ಹೋಗಿ ಆ ಭಕ್ತರಿಗೆ
ತಾನು ಭೃತ್ಯನಾಗಿ ಶರಣೆಂದು, ತನ್ನ ಕಾಯಕವನೊಪ್ಪಿಸಿ
ಪದಾರ್ಥಂಗಳನು ಪಡೆವಲ್ಲಿ ಭಕ್ತಿ ಬಂಧನವಿಲ್ಲದೆ,
ಆ ಭಕ್ತನ ಮನವ ನೋಯಿಸದೆ,
ಭಕ್ತಿಮಹೋತ್ಸಾಹದಿಂದ ಬಂದ ಪದಾರ್ಥಗಳನು
ತಂದು ಲಿಂಗಜಂಗಮಕ್ಕೆ ನೀಡಿ,
ಅವರೊಕ್ಕುದ ಕೊಂಡಿಪ್ಪುದೆ ಸತ್ಯಕಾಯಕ, ಆತನೆ ಸದ್ಭಕ್ತ.......”
-ಚೆನ್ನಬಸವಣ್ಣ (ಸ.ವ.ಸಂ.3, ವ:1 711)

ಈ ವಚನದ ಮೂಲಕ ಚೆನ್ನಬಸವಣ್ಣ ಕಾಯಕದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಭಕ್ತರ ಮನೆಗಳಲ್ಲಿ ಕಾಯಕ ಮಾಡುವಾಗ, ಸಮಾಜದಲ್ಲಿ ಕಾಯಕ ಮಾಡುವಾಗ ಅವರ ಮನಸ್ಸು ನೋಯಿಸದೆ, ತಾನು ದುಡಿದ ದುಡಿಮೆಯ ಫಲಕ್ಕೆ ಪದಾರ್ಥಗಳನ್ನು ಪಡೆದು, ಅವುಗಳನ್ನು ಗುರು-ಲಿಂಗ-ಜಂಗಮಕ್ಕೆ ನೀಡಿ, ಅದರಲ್ಲಿ ಉಳಿದದ್ದನ್ನು ಪ್ರಸಾದವೆಂದು ಸೇವಿಸುವುದೇ ಸತ್ಯ ಕಾಯಕವಾಗುತ್ತದೆ. ಅಂತಹ ಕಾಯಕಜೀವಿಯೇ ಸದ್ಭಕ್ತನಾಗುತ್ತಾನೆಂದು ಚೆನ್ನಬಸವಣ್ಣನವರು ಹೇಳಿದ್ದಾರೆ. “ವೃತ್ತಿ” ಯಲ್ಲಿ ತಾನು ದುಡಿದ ಸಂಪಾದನೆಯನ್ನು ತಾನೊಬ್ಬನೇ ಖರ್ಚು ಮಾಡಬಹುದು, ಇಲ್ಲವೆ ತನ್ನವರಿಗಾಗಿ ಸಂಗ್ರಹಿಸಿಡಬಹುದು. ಆದರೆ “ಕಾಯಕ”ದಲ್ಲಿ ಹೀಗೆ ಮಾಡಲಾಗದು. ತಾನೇ ದುಡಿದರೂ ಅದು ತನ್ನ ಸಂಪತ್ತಲ್ಲ, ಅದು ತನ್ನ ಪದಾರ್ಥವಲ್ಲ, ಅದು ಸಮಾಜದ ಸಂಪತ್ತೆಂಬ ಭಾವನೆ ಇರುತ್ತದೆ. ಹೀಗಾಗಿ ಸಮಾಜದ ಸಂಪತ್ತನ್ನು ಮತ್ತೆ ಸಮಾಜಕ್ಕೆ ಗುರು-ಲಿಂಗ-ಜಂಗಮರಿಗೆ ಅರ್ಪಿಸಬೇಕೆಂಬ ನಿಬಂಧನೆಯಿದೆ. ಆದುದರಿಂದ ವೃತ್ತಿಯೆಂಬ ಪದಕ್ಕೂ, ಕಾಯಕ ಪದಕ್ಕೂ ತುಂಬಾ ವ್ಯತ್ಯಾಸವಿದೆ. ಇದನ್ನೇ ಶರಣರು ತಮ್ಮ ಅನೇಕ ವಚನಗಳಲ್ಲಿ ವಿವರಿಸಿ ಹೇಳಿದ್ದಾರೆ.

“ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು
ನಾನಾವಾವ ಕರ್ಮಂಗಳ ಮಾಡಿದಡೆಯು
ಆ ಕರ್ಮಫಲಭೋಗವ ನೀ ಕೊಡುವೆಯೆಂಬುದ ನಾನು ಬಲ್ಲೆನು
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು.......”
-ಬಸವಣ್ಣ (ಸ.ವ.ಸಂ.1, ವ:709)

ಬಸವಣ್ಣನವರ ಈ ವಚನವು ಕಾಯಕದ ಉದ್ದೇಶವನ್ನು ಇನ್ನೂ ಸ್ಪಷ್ಟವಾಗಿ ಹೇಳುತ್ತದೆ. ಆರಂಭವೆಂದರೆ ಕೃಷಿ, ಕೃಷಿಯಾಗಲಿ, ವ್ಯವಹಾರವಾಗಲಿ, ಪರಸೇವೆಯಾಗಲಿ ಯಾವುದೇ ಕೆಲಸ ಮಾಡಲಿ, ಆ ಕೆಲಸದ ಫಲ ಪರಮಾತ್ಮ ಕೊಡುತ್ತಾನೆಂಬುದು ಶರಣರ ನಂಬಿಕೆ. ಹೀಗೆ ಆತನಿಂದ ಬಂದ ದ್ರವ್ಯವನ್ನು ಆತನಿಗೆ ಅರ್ಪಿಸುವ ಸಮರ್ಪಣಾಭಕ್ತಿ ಕಾಯಕತತ್ವದಲ್ಲಿದೆ. ಆತನಿಗೆ ರೂಪವಿಲ್ಲ. ಸಮಾಜವೇ ಆತನ ಪ್ರತಿರೂಪವಾಗಿದೆ. ಅಂತಹ ಸಮಾಜಕ್ಕೆ, ಸಮುದಾಯಕ್ಕೆ, ಹಸಿದು ಬಂದವರಿಗೆ ನೀಡುವುದೇ ಕಾಯಕದ ಪ್ರಮುಖ ಉದ್ದೇಶವಾಗಿದೆ. ಸಮಾಜದ ದುಡ್ಡು ಸಮಾಜಕ್ಕೆ ಸಲ್ಲಬೇಕು. ನಾನು ದುಡಿದೆ, ನನ್ನ ದುಡಿಮೆಯೆಂಬ ಅಹಂಭಾವ ಸಲ್ಲದೆಂದು ಶರಣರು ಹೇಳಿದ್ದಾರೆ.

(1) “ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು?
ಕೊಡದಡೆ ಒಡಗೂಡಿ ಬಯ್ಯಲೇತಕ್ಕೆ?
ಒಡೆಯರು ಭಕ್ತರಿಗೆ ಮಾಡಿಹೆನೆಂದು
ಗಡಿಚಡಿಗಳಲ್ಲಿ ಕವಾಚ ಮಂದಿರ ಮುಂದೆ
ಗೊಂದಿಗಳಲ್ಲಿ ನಿಂದು ಕಾಯಲೇತಕ್ಕೆ?
ಈ ಗುಣ ಕಾಯಕದಂದವೆ?....”
- ಕಲಕೇತಯ್ಯ (ಸ.ವ.ಸಂ.7, ವ:41)

(2) “ಸತ್ಯ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತ ವಿಚ್ಛಂದವಾಗದಿರಬೇಕು
ನೇಮದ ಕೂಲಿ ಅಂದಿನ ನಿತ್ಯನೇಮದಲ್ಲಿ ಸಂದಿಲ್ಲದಿರಬೇಕು
ನೇಮದ ಕೂಲಿಯ ಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ
ತಾ ಮಾಡುವ ಸೇವೆ ನಷ್ಟವಯ್ಯಾ.....”
-ನುಲಿಯ ಚಂದಯ್ಯ (ಸ.ವ.ಸಂ.7, ವ:1337)

ಈ ಎರಡು ವಚನಗಳಲ್ಲಿ ಸತ್ಯಶುದ್ಧ ಕಾಯಕವಾವುದೆಂದು ತಿಳಿಸಲಾಗಿದೆ. ಕಾಯಕ ಮಾಡಿದಾಗ ಪ್ರತಿಫಲ ಸಿಗದಿದ್ದಾಗ, ಕಾಯಕ ನೀಡಿದವರನ್ನು ಬಯ್ಯಬಾರದೆಂದು ಕಲಕೇತಯ್ಯ ಹೇಳಿದ್ದಾರೆ. ಸಂದಿಗೊಂದಿಗಳಲ್ಲಿ ನಿಂತು ಕಾಯಲೇಕೆ? ಎಂದು ಪ್ರಶ್ನಿಸಿರುವ ಕಲಕೇತಯ್ಯನವರು, ಇಂತಹ ಸ್ವಭಾವ ಕಾಯಕಕ್ಕೆ ಹೊರಗು ಎಂದು ತಿಳಿಸಿದ್ದಾರೆ. ಸತ್ಯಶುದ್ಧ ಕಾಯಕದಿಂದ ಬಂದ ದ್ರವ್ಯವ ನೋಡಿ ಚಿತ್ತ ಚಂಚಲವಾಗಿ ಅದನ್ನು ಸ್ವಾರ್ಥಕ್ಕೆ ಬಳಸಿಕೊಂಡರೆ. ಅದು ಕಾಯಕನೀತಿಯಲ್ಲವೆಂದು ನುಲಿಯ ಚಂದಯ್ಯ ಹೇಳಿದ್ದಾರೆ. ನೇಮದ ಕೂಲಿಯಬಿಟ್ಟು ಹೇಮದಾಸೆಗೆ ಕಾಮಿಸಿದರೆ ತಾ ಮಾಡಿದ ಸೇವೆ, ವ್ಯರ್ಥವೆಂದು ಚಂದಯ್ಯ ವಿವರಿಸಿದ್ದಾರೆ.

(1) “ಕಾಯದಲ್ಲಿ ನಿಂದ ಶರಣಂಗೆ ಸೇವೆಯವರ ತಪ್ಪ ಹಿಡಿದೆನೆಂದಡೆ
ಕಾಯಕವೆಂತು ನಡೆವುದಯ್ಯಾ?
ಅವಗುಣಕ್ಕೆ ಮುನಿಯಬೇಕಲ್ಲದೆ ಲಾಂಛನಕ್ಕೆ ಮುನಿಯಬೇಕೆ?....”
-ಮಡಿವಾಳ ಮಾಚಿದೇವ (ಸ.ವ.ಸಂ.8, ವ:563)

(2) “ಲಿಂಗವೆಂಬುದು ಜಂಗಮದಂಗ
ಆ ಲಿಂಗವಿಲ್ಲದೆ ಪ್ರಾಣವುಂಟೆ?
ಹಣ್ಣಿಲ್ಲದೆ ರುಚಿಯ ಬಯಸುವಂತೆ
ನಿನ್ನ ಕಾಯಕದ ಕ್ರಿಯೆಲ್ಲವೂ ಲಿಂಗವಾದ ಬಳಿಕ
ಮತ್ತೇನು ಭಾವಭೇದವೆ?
-ಮಡಿವಾಳ ಮಾಚಿದೇವ (ಸ.ವ.ಸಂ.8, ವ:603)

ಮಡಿವಾಳ ಮಾಚಿದೇವರು ತಮ್ಮ ಈ ಎರಡು ವಚನಗಳಲ್ಲಿ ಕಾಯಕದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಸೇವೆ ಮಾಡುವಾಗ, ಮಾಡಿಸಿಕೊಳ್ಳುವವರಿಂದ ಮತ್ತು ಮಾಡುವವರಿಂದ ತಪ್ಪುಗಳಾಗುವುದು ಸಹಜ. ಆ ತಪ್ಪುಗಳನ್ನೇ ದೊಡ್ಡದು ಮಾಡಿದರೆ ಕಾಯಕ ಹೇಗೆ ನಡೆಯಬೇಕೆಂದು ಮಾಚಿದೇವರು ಪ್ರಶ್ನಿಸಿದ್ದಾರೆ. ಕುದುರೆಯ ಕಾಲಿಗೆ ನೋವಾದರೆ, ಕುದುರೆಯ ಕಾಲು ಕತ್ತರಿಸಿದವರುಂಟೆ? ಕಚ್ಚುವ ತಿಗುಣೆಗಾಗಿ ಮನೆಯ ಸುಟ್ಟುವರುಂಟೆ? ಎಂದು ಪ್ರಶ್ನಸಿರುವ ಮಾಚಿದೇವರು ಕಾಯಕದಲ್ಲಿ ಸಹನೆ-ತಾಳ್ಮೆ ಇರಬೇಕೆಂದು ತಿಳಿಸಿದ್ದಾರೆ. ತಮ್ಮ ಮತ್ತೊಂದು ವಚನದಲ್ಲಿ ಅವರು ಲಿಂಗ ಮತ್ತು ಕಾಯಕದ ಸಂಬಂಧವನ್ನು ಕುರಿತು ಹೇಳಿದ್ದಾರೆ. ಲಿಂಗವೆಂಬುದು ಜಂಗಮದಂಗವಾದಾಗ ಅದು ಪ್ರಾಣಲಿಂಗವಾಗುತ್ತದೆ. ಆಗ ಲಿಂಗ ಮತ್ತು ಪ್ರಾಣ ಒಂದೇಯಾಗುತ್ತದೆ. ಕಾಯಕದ ಕ್ರಿಯೆಯೆಲ್ಲ ಲಿಂಗವಾದ ಬಳಿಕ ಮತ್ತೆ ಭೇದಭಾವಸಲ್ಲದೆಂದು ವಿವರಿಸಿದ್ದಾರೆ.

(1) “ಅಸಿಯಾಗಲಿ ಮಸಿಯಾಗಲಿ ಕೃಷಿಯಾಗಲಿ
ವಾಣಿಜ್ಯ ಮುಂತಾದ ಕೃಷಿಯ ಮಾಡುವಲ್ಲಿ,
ಪಶುಪತಿಗೆಂದೇ ಪ್ರಮಾಣಿಸಿ ಭಕ್ತಿಯೆಸಕದಿಂದ
ಹಸಿವಿಲ್ಲದೆ, ತೃಷೆಯಿಲ್ಲದೆ, ವಿಷಯವನರಿಯದೆ
ಮಾಡುವ ಭಕ್ತಿಯಲ್ಲಿ ಹುಸಿಯಿಲ್ಲದೆ ಮಾಡುತ್ತಿರ್ಪ
ಭಕ್ತನಂಗಣವೇ ವಾರಣಾಸಿ....”
- ಮೋಳಿಗೆ ಮಾರಯ್ಯ (ಸ.ವ.ಸಂ.8, ವ:1485)

(2) “ನಡೆನುಡಿ ಸಿದ್ಧಾಂತವಾಗಿ ಲಿಂಗವ ಒಡಗೂಡಿಪ್ಪ
ಕಾಯಕದಿರವೆಂತೆಂದಡೆ ನಿರತವಾಗಿ ಆ ಮುಖದಿಂದ ಬಂದ ದ್ರವ್ಯ
ಗುರುಲಿಂಗಜಂಗಮ ಮುಂದಿಟ್ಟು
ಲಿಂಗಕ್ಕೆ ಪರಸುಖ, ಜಂಗಮಕ್ಕೆ ಪರಮಸುಖ....”
- ಅಕ್ಕಮ್ಮ (ಸ.ವ.ಸಂ.5, ವ:521)

ಮೋಳಿಗೆ ಮಾರಯ್ಯನವರು ತಮ್ಮ ವಚನದಲ್ಲಿ ಕಾಯಕಕ್ಕೂ ಮತ್ತು ಭಕ್ತಿಗೂ ಇರುವ ಸಂಬಂಧದ ಬಗ್ಗೆ ಹೇಳಿದ್ದಾರೆ. ಯಾವುದೇ ಕಾಯಕ ಮಾಡಲಿ ಅದು ದೇವರ ಕಾಯಕವೆಂದು ಮಾಡಬೇಕು. ಅದನ್ನು ಭಕ್ತಿಯಿಂದ ಮಾಡಬೇಕು. ಅಂತಹ ಕಾಯಕದಲ್ಲಿ ಹುಸಿಯಿರಬಾರದು. ಕೃತಕತೆ ಇರಬಾರದು; ಅಂತಹ ಭಕ್ತನ ಅಂಗಳವೇ ವಾರಣಾಸಿಯೆಂದು ತಿಳಿಸಿದ್ದಾರೆ. ಅಂತಹ ಭಕ್ತನ ಪಾದವೇ ಪವಿತ್ರವೆಂದು ಹೇಳಿದ್ದಾರೆ. ಅಂದರೆ ಕಾಯಕ ಇರುವುದು ಭಕ್ತರಿಗೆ ಹೊರತು, ಭವಿಗಳಿಗಲ್ಲವೆಂಬ ಸತ್ಯ ಸ್ಪಷ್ಟವಾಗುತ್ತದೆ.

ಅಕ್ಕಮ್ಮ ತಮ್ಮ ವಚನದಲ್ಲಿ ಕಾಯಕದಲ್ಲಿ ನಡೆ-ನುಡಿ ಸಿದ್ಧಾಂತವನ್ನು ಹೇಳಿದ್ದಾರೆ. ನುಡಿದಂತೆ ನಡೆಯುವ, ನಡೆದಂತೆ ನುಡಿಯುವ ನಡೆ-ನುಡಿ ಒಂದಾದ ಕ್ರಿಯೆಯೇ ನಡೆನುಡಿ ಸಿದ್ಧಾಂತವಾಗಿದೆ. ತಾ ಮಾಡುವ ಕಾಯಕದಲ್ಲಿ ಮೇಲು-ಕೀಳಿಲ್ಲವೆಂದು ಹೇಳಿರುವ ಅಕ್ಕಮ್ಮ ಕಾಯಕದಿಂದ ಬಂದ ದ್ರವ್ಯವನ್ನು ಗುರು-ಲಿಂಗ-ಜಂಗಮದ ಮುಂದಿಟ್ಟು ಪ್ರಸಾದ ಪಡೆಯಬೇಕೆಂದು ಹೇಳಿದ್ದಾರೆ. ಪಂಚಾಚಾರ ಶುದ್ಧವಾದ ಸದ್ಭಕ್ತನಿಗೆ ಮಾತ್ರ ಕಾಯಕ ಒಲಿಯುತ್ತದೆ. ಆದುದರಿಂದ ಕಾಯಕವೆಂದರೆ ಕೇವಲ ವೃತ್ತಿಯಲ್ಲ, ದುಡಿಮೆಯಲ್ಲ ಅದು ನಡೆ-ನುಡಿ ಸಿದ್ಧಾಂತವಾಗಿದೆಯೆಂದು ಸ್ಪಷ್ಟಪಡಿಸಿದ್ದಾರೆ. ಇಂತಹ ಅನೇಕ ವಚನಗಳಲ್ಲಿ ಶರಣರು ಕಾಯಕದ ಉದ್ದೇಶವನ್ನು ವಿವರಿಸಿ ಹೇಳಿದ್ದಾರೆ. ಸುಮ್ಮನೇ ದುಡಿದು ಹೊಟ್ಟೆ ತುಂಬಿಸಿಕೊಳ್ಳುವುದಾಗಲಿ, ವ್ಯವಹಾರ ಮಾಡಿ ಸಂಪತ್ತು ಗಳಿಸುವುದಾಗಲಿ ಕಾಯಕದ ಉದ್ದೇಶವಲ್ಲ. ಕಾಯಕದೊಂದಿಗೆ ನೀತಿಯಿದೆ, ಕಾಯಕಧರ್ಮವಿದೆ. ನಡೆನುಡಿ ಸಿದ್ಧಾಂತವಿದೆ.

ಮುಂದುವರೆಯುತ್ತದೆ....
ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...