ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’

Date: 11-11-2022

Location: ಬೆಂಗಳೂರು


2010ರಲ್ಲಿ ಪ್ರಕಟವಾದ ಚಂದ್ರಶೇಖರ ಕಂಬಾರರ ಪ್ರಸಿದ್ಧ ನಾಟಕ "ಶಿವರಾತ್ರಿ"ಯಲ್ಲಿ ಸೂಳೆಸಂಕವ್ವೆ, ನಾಟಕದ ಕೇಂದ್ರವಾಗಿ ಬೆಳೆದು ನಿಂತಿದ್ದಾಳೆ. ಶಿವರಾತ್ರಿಯ ದಿನ ಸೂಳೆ ಸಂಕವ್ವೆಯ ಮನೆಯಲ್ಲಿ ಇಷ್ಟಲಿಂಗ ಪೂಜೆ ನಡೆಯುವುದು ತುಂಬ ವಿಶಿಷ್ಟವಾಗಿ ಮೂಡಿಬಂದಿದೆ ಎನ್ನುತ್ತಾರೆ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ‘ಸೂಳೆ ಸಂಕವ್ವೆ’ಬಗ್ಗೆ ಬರೆದಿದ್ದಾರೆ.

ಸೂಳೆಸಂಕವ್ವೆ ಪ್ರಾರಂಭದಲ್ಲಿ ಸೂಳೆವೃತ್ತಿಯನ್ನು ಮಾಡುತ್ತಿದ್ದು, ಶರಣ ಚಳುವಳಿಯಲ್ಲಿ ಭಾಗವಹಿಸಿದ ನಂತರ, ಶರಣೆಯಾಗಿ ಬಾಳಿದಳೆಂದು ತಿಳಿದುಬರುತ್ತದೆ. ಈಕೆಯು ಶರಣರ ಸಮಕಾಲೀನ ವಚನಕಾರ್ತಿಯಾಗಿದ್ದು, ಈಕೆಯ ಕಾಲವನ್ನು ಕ್ರಿ.ಶ.1160 ಎಂದು ಕವಿಚರಿತೆಕಾರರು ಹೇಳಿದ್ದಾರೆ.

ಪಾತಿವ್ರತ್ಯವನ್ನು ಒಂದು ಮೌಲ್ಯವೆಂದು ನಂಬಿರುವ ಶರಣಸಿದ್ಧಾಂತದಲ್ಲಿ ಸೂಳೆಯರಿಗೆ, ಕಳ್ಳರಿಗೆ, ಕೊಲೆಗಾರರಿಗೆ ಅವಕಾಶವಿರಲಿಲ್ಲ. ಪ್ರಾರಂಭದಲ್ಲಿ ಕಳ್ಳನಾಗಿದ್ದ ಉರಿಲಿಂಗಪೆದ್ದಿ ಕಳ್ಳತನದವೃತ್ತಿಯನ್ನು ತೊರೆದು ಶರಣನಾದ. ಅದರಂತೆ ಕಾಳವ್ವೆ ಕೂಡ ತನ್ನ ಸೂಳೆಗಾರಿಕೆಯ ವೃತ್ತಿಯನ್ನು ಬಿಟ್ಟು ಶರಣೆಯಾಗಿ ಬೆಳೆದುದು ತಿಳಿದುಬರುತ್ತದೆ.

ಸೂಳೆಯರನ್ನು ಶರಣರು ನಿಂದಿಸಿದ್ದಾರೆ. ಸೂಳೆಗಾರಿಕೆಯನ್ನು ವಿರೋಧಿಸಿದ್ದಾರೆ. ಅವರ ಅನೇಕ ವಚನಗಳಲ್ಲಿ ಈ ಸಂಗತಿಯನ್ನು ನೋಡಬಹುದಾಗಿದೆ. ಬಸವಣ್ಣನವರ ಈ ಕೆಳಗಿನ ವಚನಗಳನ್ನು ಗಮನಿಸಬಹುದು.

"ಕೂಸುಳ್ಳ ಸೂಳೆ ಧನದಾಸೆಗೊತ್ತೆಯ ಕೊಂಡಡೆ
ಕೂಸಿಂಗಲ್ಲ, ಬೊಜಗಂಗಲ್ಲ...." (ಬ.ವ.101)
"ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದಡೆಯೂ ಅಯ್ಯಾ, ಅಯ್ಯಾ, ಎನಲಾರೆ" - (ಬ.ವ.347)
"ಸೂಳೆಯ ಮಚ್ಚಿ ಸೂಳೆಯ ಬಂಟರೆಂಜಲ ತಿಂಬುದೀ ಲೋಕ..."
- (ಬ.ವ.769)

ಬಸವಣ್ಣನ ಈ ವಚನಗಳನ್ನು ಗಮನಿಸಿದರೆ, ಶರಣರು ಸೂಳೆವೃತ್ತಿ ಯವರನ್ನು ಸೇರುತ್ತಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಈ ಕಾರಣಕ್ಕಾಗಿ ಸಂಕವ್ವೆ ತನ್ನ ಮೊದಲಿನ ಸೂಳೆವೃತ್ತಿಯನ್ನು ತೊರೆದು ಶರಣರ ಮನೆಗೆಲಸ ಮಾಡುವ ಕಾಯಕವನ್ನು ಕೈಗೊಂಡಳೆಂದು ತಿಳಿದುಬರುತ್ತದೆ. ಒಂದು ಹೆಣ್ಣು ಸೂಳೆಯಾಗಲು ಒಂದು ಗಂಡು ಕಳ್ಳನಾಗಲು ಈ ವ್ಯವಸ್ಥೆಯೇ ಕಾರಣವಾಗಿದೆ. ಹಾಗೆಂದು ಶರಣರು ಸೂಳೆಯರನ್ನು, ಕಳ್ಳರನ್ನು, ಚಾಂಡಲರನ್ನು ಮನ್ನಿಸಲಿಲ್ಲ. ಸತ್ಯಶುದ್ಧ ಕಾಯಕ ಮಾಡಿ ಬದುಕಬೇಕೆಂದು ಹೇಳಿದರು. ಹೀಗಾಗಿ 12ನೇ ಶತಮಾನದಲ್ಲಿದ್ದ ಅನೇಕ ಸೂಳೆಯರು, ವೇಶ್ಯೆಯರು ಬಸವಣ್ಣನವರ ಕಾಲಕ್ಕೆ ಪುಣ್ಯಸ್ತ್ರೀಯರಾಗಿ, ಶರಣೆಯರಾಗಿ ಬೆಳೆದು ನಿಂತರು.

ಇದು ವಚನ ಚಳುವಳಿಯ ಕ್ರಾಂತಿಕಾರಕ ಬದಲಾವಣೆಯಾಗಿದೆ. ಇಂತಹ ಅನೇಕ ಪುಣ್ಯಸ್ತೀಯರನ್ನು ಶರಣರು ಮದುವೆಯಾದರು, ಇದು ಚಳವಳಿಯ ನಿಜವಾದ ಯಶಸ್ಸಾಗಿದೆ. ಸೂಳೆ ಸಂಕವ್ವೆಯನ್ನು ಕುರಿತು ಪುರಾಣಕವಿಗಳು ಉಲ್ಲೇಖಿಸಿಲ್ಲ. ಜಾನಪದ ಕಾವ್ಯದಲ್ಲಿಯೂ ಈಕೆಯ ಪ್ರಸ್ತಾಪವಿಲ್ಲ. ಆದರೆ ಆಧುನಿಕ ಸಾಹಿತ್ಯದಲ್ಲಿ ಅದರಲ್ಲೂ ನಾಟಕಗಳಲ್ಲಿ ಸೂಳೆಸಂಕವ್ವೆ ಕಾಣಿಸಿಕೊಂಡಿದ್ದಾಳೆ. 1998ರಲ್ಲಿ ಪ್ರಕಟವಾಗಿರುವ ಮುದೇನೂರು ಸಂಗಣ್ಣ ಅವರ "ಸೂಳೆಸಂಕವ್ವೆ" ನಾಟಕ ಈಕೆಯನ್ನು ಕುರಿತು ಬರೆದಾದ ಸ್ವತಂತ್ರ ನಾಟಕವಾಗಿದೆ.

ಸಾಣೇಹಳ್ಳಿಯ ಶಿವಸಂಚಾರ ತಂಡವು ಈ ನಾಟಕವನ್ನು ನಾಡಿನಾದ್ಯಂತ ಪ್ರದರ್ಶನ ಮಾಡಿದೆ. ಸಂಗಣ್ಣನವರ ಸಂಕವ್ವೆ ಒಬ್ಬ ಶರಣಸಾಧಕಿಯಾಗಿ ಕಾಣಿಸಿಕೊಂಡಿದ್ದಾಳೆ. ಭಕ್ತಿ, ಆಧ್ಯಾತ್ಮ ಸಾಧನೆಯೆಂಬುದು ಕೇವಲ ಊರೊಳಗಿನವರಿಗೆ ಮಾತ್ರ ಸಂಬಂಧಿಸಿಲ್ಲ. ಅದು ಊರ ಹೊರಗಿನ ಅಸ್ಪೃಶ್ಯರಿಗೂ, ಸೂಳೆಸಂಕವ್ವೆಯಂತವರಿಗೂ ಸಂಬಂಧಿಸಿದೆ. ಸಂಕವ್ವೆ ಹಿಂದೆ ಸೂಳೆಯಾಗಿದ್ದವಳು. ನಂತರದಲ್ಲಿ ಶರಣರ ಪ್ರಭಾವದಿಂದ ತಾನೂ ಶರಣೆಯಾಗಿ ಬೆಳೆಯುತ್ತಾಳೆ. ಇಂಥಹ ವಿಶಿಷ್ಟ ಶರಣೆಯ ಜೀವನಗಾಥೆಯನ್ನು ಮುದೇನೂರು ಸಂಗಣ್ಣನವರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

2010ರಲ್ಲಿ ಪ್ರಕಟವಾದ ಚಂದ್ರಶೇಖರ ಕಂಬಾರರ ಪ್ರಸಿದ್ಧ ನಾಟಕ "ಶಿವರಾತ್ರಿ"ಯಲ್ಲಿ ಸೂಳೆಸಂಕವ್ವೆ, ನಾಟಕದ ಕೇಂದ್ರವಾಗಿ ಬೆಳೆದು ನಿಂತಿದ್ದಾಳೆ. ಶಿವರಾತ್ರಿಯ ದಿನ ಸೂಳೆ ಸಂಕವ್ವೆಯ ಮನೆಯಲ್ಲಿ ಇಷ್ಟಲಿಂಗ ಪೂಜೆ ನಡೆಯುವುದು ತುಂಬ ವಿಶಿಷ್ಟವಾಗಿ ಮೂಡಿಬಂದಿದೆ. ಸಂಕವ್ವೆಯ ಮನೆಗೆ ಶಿವರಾತ್ರಿಯಂದು ಬಸವಣ್ಣನ ಶಿಷ್ಯ ಬರುತ್ತಾನೆ, ನಂತರದಲ್ಲಿ ಬಸವಣ್ಣ ಬರುತ್ತಾನೆ, ಬಿಜ್ಜಳನೂ ಬರುತ್ತಾನೆ.

ಸೂಳೆಸಂಕವ್ವೆಯ ಮನೆಯಲ್ಲಿ ಬಿಜ್ಜಳ-ಬಸವಣ್ಣನ ಮುಖಾಮುಖಿಯಾಗುವುದು ತುಂಬ ಕುತೂಹಲಕಾರಿ ದೃಶ್ಯವಾಗಿದೆ. ಸಂಕವ್ವೆಯ ಮೂಲಕ ಬಸವಣ್ಣ ಮತ್ತು ಇತರ ಶರಣರ ಮಹತ್ವ ಈ ನಾಟಕದಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಇದು ಕಂಬಾರರ ತುಂಬ ಯಶಸ್ವಿ ನಾಟಕವಾಗಿದೆ. ಈ ಎರಡು ನಾಟಕಗಳನ್ನು ಕುರಿತೇ ದೀರ್ಘವಾಗಿ ಚರ್ಚಿಸಬಹುದು. ಆದರೆ ಇಲ್ಲಿ ಶರಣೆಯರ ಜೀವನಚರಿತ್ರೆಯನ್ನು ಕಟ್ಟಿಕೊಡಬೇಕಾಗಿರುವುದರಿಂದ ಇಂತಹ ಕೃತಿಗಳ ಬಗೆಗೆ ಕೇವಲ ಪರಿಚಯವನ್ನು ಮಾತ್ರ ಮಾಡಿಕೊಡಲಾಗಿದೆ.

ಸೂಳೆ ಸಂಕವ್ವೆ ವಚನ ರಚಿಸಿದ್ದಾಳೆ. "ನಿರ್ಲಜ್ಜೇಶ್ವರಾ" ಅಂಕಿತದಲ್ಲಿ ಈಕೆಯ ಒಂದು ವಚನ ಪ್ರಕಟವಾಗಿದೆ. ಕೊಟ್ಟಣದ ಸೋಮವ್ವನ ವಚನಾಂಕಿತವೂ "ನಿರ್ಲಜ್ಜೇಶ್ವರಾ" ಆಗಿದೆ. ಈ ವಚನದಲ್ಲಿ ಸಂಕವ್ವೆ ವೃತ್ತಿಪ್ರತಿಮೆಯ ಮೂಲಕ ಮಾತನಾಡಿದ್ದಾಳೆ. "ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯ" ಎಂಬ ನುಡಿ ಈ ವಚನದಲ್ಲಿ ಬರುತ್ತದೆ. ಒತ್ತೆ ಎಂದರೆ ಸೂಳೆಗೆ ಕೊಡುವ ಹಣ ಎಂದರ್ಥ.

ಹೀಗೆ ಒಬ್ಬರಿಂದ ಹಣ ಪಡೆದು, ಮತ್ತೊಬ್ಬರಿಂದ ಅದೇ ಸಮಯದಲ್ಲಿ ಹಣ ಪಡೆದಡೆ ಅಪಾಯ ಕಾದಿರುತ್ತದೆಂದು ತನ್ನ ಹಿಂದಿನ ವೃತ್ತಿಜೀವನದ ಬಗ್ಗೆ ಹೇಳುತ್ತ ವ್ರತಹೀನನನ್ನು ಬೆರೆಯಬಾರದೆಂದು ಹೇಳಿದ್ದಾಳೆ.

ಈ ಅಂಕಣದ ಹಿಂದಿನ ಬರೆಹಗಳು:
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...