ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ

Date: 19-09-2022

Location: ಬೆಂಗಳೂರು


ಆಳರಸರ ವಿರುದ್ಧ, ಶ್ರೀಮಂತರ ವಿರುದ್ಧ ಶರಣರು ದಂಗೆ ಏಳಲಿಲ್ಲ, ಆದರೆ ಅವರಿಗೆ ಸತ್ಯ ಸಂಗತಿಗಳನ್ನು ತಿಳಿಸಿಕೊಟ್ಟರು. ಮನುಷ್ಯನಾಗಿ ಮಾನವೀಯತೆಯಿಂದ ಅಂತಃಕರಣದಿಂದ ಬದುಕಬೇಕೆಂದು ಕಲಿಸಿಕೊಟ್ಟರು. ರಾಜಸತ್ತೆಯ ವ್ಯವಸ್ಥೆಯಲ್ಲಿ ಇದು ಸುಲಭವಾಗಿರಲಿಲ್ಲ. ಆದರೂ ಶರಣರು ಅಂತಹ ಪ್ರಯತ್ನಗಳನ್ನು ಮಾಡಿದರು ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ವರ್ಗಸಮಾನತೆ ತರಲು ಶರಣರು ಅನುಸರಿಸಿದ ಮನಪರಿವರ್ತನೆಯ ಮಾರ್ಗದ ಬಗ್ಗೆ ಬರೆದಿದ್ದಾರೆ.

ರಾಜಸತ್ತೆಯೆಂಬುದು ಶರಣರಿಗೆ ವೈರಿಯೂ ಆಗಿರಲಿಲ್ಲ, ಸ್ನೇಹಿತನೂ ಆಗಿರಲಿಲ್ಲ, ಸಮಾಜದಲ್ಲಿ ಬದಲಾವಣೆ ತರಲು ಅದು ಅವರಿಗೊಂದು ಮಾಧ್ಯಮವಾಗಿತ್ತು. ಮಾದ್ಯಮವನ್ನು ಬದಲಿಸುವುದು ಅವರ ಉದ್ದೇಶವಾಗಿರಲಿಲ್ಲ. ಈ ಮಾದ್ಯಮವನ್ನು ಸದುಪಯೋಗಪಡಿಸಿಕೊಳ್ಳುವುದು ಅವರ ಗುರಿಯಾಗಿತ್ತು. ಹೀಗಾಗಿ ಅಲ್ಲಿ ರಾಜಸತ್ತೆ ಬದಲಾಗಲಿಲ್ಲ, ರಾಜವ್ಯವಸ್ಥೆ ಬದಲಾಗಲಿಲ್ಲ; ಸಮಾಜ ಬದಲಾಯಿತು; ಸಮಾಜದಲ್ಲಿದ್ದ ಜನತೆ ಬದಲಾಯಿತು. ಕಾಯಕ-ದಾಸೋಹತತ್ವಗಳಿಂದ; ಅರಿವು-ಆಚಾರಗಳಿಂದ, ನಡೆ-ನುಡಿ ಸಿದ್ಧಾಂತದಿಂದ ಶರಣರು ಸಮಾಜವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು. ಇದು ಅವರ ಮಹತ್ವದ ರಾಜಕೀಯ ನೀತಿಯಾಗಿದೆ. ವರ್ಣಹೋರಾಟದಂತೆ ವರ್ಗಹೋರಾಟ ನಡೆಯದಿದ್ದರೂ ಇಡೀ ಶ್ರಮಜೀವಿಗಳ ಸಮೂಹ ಅವರೊಟ್ಟಿಗಿತ್ತು. ಅಂತೆಯೇ ಬಸವಣ್ಣನವರು “ಊರಮುಂದೆ ಹಾಲಹಳ್ಳ ಹರಿಯುತ್ತಿರಲು ಬಿಜ್ಜಳನ ಭಂಡಾರವೆನಗೇಕಯ್ಯಾ” ಎಂದು ಹೇಳಿದರು. ಶ್ರಮಜೀವಿಗಳ ಸಮೂಹವೇ ಅವರಿಗೆ ಹಾಲಹಳ್ಳವಾಗಿತ್ತು.

“ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ
ನೆಲವಾಳ್ದನ ಹೆಣನೆಂದಡೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ
ಮೊಲನಿಂದ ಕರಕಷ್ಟ ನರನ ಬಾಳುವೆ
ಸಲೆನಂಬೊ ನಮ್ಮ ಕೂಡಲಸಂಗಮದೇವನ”
- ಬಸವಣ್ಣ (ಸ.ವ.ಸಂ.1, ವ:158)

ಈ ವಚನದಲ್ಲಿ ಬಸವಣ್ಣನವರ ರಾಜಕೀಯನೀತಿ ಸ್ಪಷ್ಟವಾಗಿದೆ. ಇಲ್ಲಿ ಅವರು ಹೋರಾಟ ರೂಪಿಸಿದ್ದು ಆಳುವ ಅರಸನೊಂದಿಗೆ ಮತ್ತು ಶ್ರೀಮಂತ ಭವಿಗಳೊಂದಿಗೆಂಬುದು ಮಹತ್ವದ ಸಂಗತಿಯಾಗುತ್ತದೆ. ಒಬ್ಬ ಬೇಟೆಯಾಡಿ ಮೊಲವನ್ನು ತಂದರೆ ಜನರು ಅದಕ್ಕೆ (ಹಾಗಕೊಟ್ಟು) ನಾಣ್ಯಕೊಟ್ಟು ಕೊಂಡುಕೊಳ್ಳಲು ಹಾತೊರೆಯುತ್ತಾರೆ. ಆದರೆ ಅದೇ ಅರಸನ ಹೆಣವೆಂದರೆ ಯಾರೂ ಕೊಂಡುಕೊಳ್ಳುವುದಿಲ್ಲ. “ಮೊಲನಿಂದ ಕರಕಷ್ಟ ನರನ ಬಾಳುವೆ” ಎಂಬ ನುಡಿ ಒಂದು ನೀತಿತತ್ವವಾಗಿ ಕಾಣಿಸಿಕೊಂಡರೂ ಇಲ್ಲಿ ಅದು ಅರಸನ ಹೆಣಕ್ಕೇ ಸಂಬಂಧಿಸಿದ್ದಾಗಿದೆ. ರಾಜನು ಪ್ರತ್ಯಕ್ಷದೇವತೆಯೆಂಬ ನಂಬಿಕೆಯಿದ್ದ ಆ ಕಾಲದಲ್ಲಿ; ಹೀಗೆ ಅರಸನ ಹೆಣಕ್ಕೆ ಬೆಲೆಯಿಲ್ಲವೆಂದು ಹೇಳುವುದು ಸಣ್ಣಮಾತಲ್ಲ. ರಾಜನಿಗೆ ನಮಿಸಲಾರದ ಕಾರಣಕ್ಕೆ ಎಷ್ಟೋ ಜನರಿಗೆ ಮರಣದಂಡನೆಯಾದ ಉದಾಹರಣೆಗಳಿವೆ. ಅಂದಿನ ವ್ಯವಸ್ಥೆ ಹಾಗಿದ್ದಾಗ, ಅಲ್ಲಿ ಮಂತ್ರಿಯಾಗಿದ್ದುಕೊಂಡೇ ಇಂತಹ ಮಾತುಗಳನ್ನಾಡಿರುವುದು ಸಣ್ಣ ಸಂಗತಿಯಲ್ಲ. ಇದೇರೀತಿ ಇನ್ನೂ ಅನೇಕ ವಚನಗಳಿವೆ. ಅರಸರ ಮನೆಯಲ್ಲಿ ಅರಸಿಯಾಗಿರುವುದಕ್ಕಿಂತ ಭಕ್ತರ ಮನೆಯಲ್ಲಿ ಆಳಾಗಿರುವುದು ಎಷ್ಟೋ ಉತ್ತಮವೆಂದು ಹೇಳಿರುವ ಮಾತು ಸಣ್ಣದೇನಲ್ಲ. “ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ” ಎಂದು ಬಸವಣ್ಣನವರು ಹೇಳಿರುವುದು, ಕೇವಲ ನೀತಿಮಾತಿನಂತೆ ಮಾತ್ರ ಕಾಣುವುದಿಲ್ಲ. ಅದು ಅರಸೊತ್ತಿಗೆಯ ವಿರುದ್ಧ, ಅರಸನ ವಿರುದ್ಧ ಹುಟ್ಟುಹಾಕಿದ ಬಂಡಾಯವೇ ಆಗಿದೆ.

“ಆನೆ ಅಂಕುಶಕ್ಕೆ ಅಂಜೂದೆ ಅಯ್ಯಾ?
ಮಾಣದೆ ಸಿಂಹದನಖವೆಂದು ಅಂಜೂದಲ್ಲದೆ
ಆನೀ ಬಿಜ್ಜಳಂಗಂಜುವನೆ ಅಯ್ಯಾ?
ಕೂಡಲಸಂಗಮದೇವಾ
ನೀನು ಸರ್ವಜೀವದಯಾಪರನಾದ ಕಾರಣ
ನಿನಗಂಜುವೆನಲ್ಲದೆ”
-ಬಸವಣ್ಣ (ಸ.ವ.ಸಂ.1, ವ:737)

ಈ ವಚನದಲ್ಲಿ ಲೌಕಿಕದ ಉದಾಹರಣೆಯ ಮೂಲಕ ತಮ್ಮ ರಾಜಕೀಯ ನೀತಿಯನ್ನು ಬಸವಣ್ಣನವರು ಹೇಳಿದ್ದಾರೆ. ಅಂಕುಶ ತುಂಬಾ ಸಣ್ಣದು; ಆನೆ ತುಂಬಾ ದೊಡ್ಡದು. ಆದರೆ ಆನೆ ಅಂಕುಶಕ್ಕೆ ಅಂಜುತ್ತದೆ. ಕಾರಣವೆಂದರೆ ಆ ಅಂಕುಶದ ತುದಿ ಸಿಂಹದ ಉಗುರಿನಂತಿರುತ್ತದೆ. ದೇವರೇ ಸಕಲಜೀವಿಗಳ ಬದುಕಿಗೆ ಕಾರಣಾಗಿದ್ದಾನೆ. ಸರ್ವಜೀವ ದಯಾಪರನಾದ ದೇವರಿಗಂಜಬೇಕಲ್ಲದೆ, ನರಮನುಷ್ಯನಾದ ಬಿಜ್ಜಳಂಗಂಜುವೆನೆ ಅಯ್ಯಾ? ಎಂದು ಹೇಳಿದ್ದಾರೆ. ಅರಸನ ವಿರುದ್ಧ ನಡೆದ ನೇರಹೋರಾಟ ಇದಾಗಿರದಿದ್ದರೂ; ಅರಸನೊಂದಿಗೆ ಮತ್ತು ಅರಸೊತ್ತಿಗೆಯೊಂದಿಗೆ ಅವರು ಎಂತಹ ದೂರವನ್ನು ಕಾಯ್ದುಕೊಂಡಿದ್ದರೆಂಬುದು ಇದರಿಂದ ಸ್ಪಷ್ಟವಾಗುತ್ತದೆ. “ಅರಸುಮುನಿದಡೆ ನಾಡೊಳಗಿರಬಾರದಯ್ಯ” ಎಂಬ ಬಸವಣ್ಣನವರ ಈ ನುಡಿ ಚಳವಳಿ ತೀವ್ರಗೊಂಡು, ಮಧುವಯ್ಯ-ಹರಳಯ್ಯನವರ ಎಳೆಹೂಟೆ ಶಿಕ್ಷೆ ಪ್ರಕಟವಾದಾಗ ಮೂಡಿ ಬಂದಿರಬಹುದಾಗಿದೆ. ಅರಸನೊಂದಿಗೆ ವೈರತ್ವ ಕಟ್ಟಿಕೊಂಡು ಏನೂ ಮಾಡಲು ಸಾಧ್ಯವಿಲ್ಲವೆಂಬ ಸತ್ಯ ಕೊನೆಯ ಘಟ್ಟದಲ್ಲಿ ಅನುಭವಕ್ಕೆ ಬಂದಿದೆ. ಕಾಯಕ-ದಾಸೋಹ ತತ್ವಗಳು ಬಿಜ್ಜಳನ ಭಂಡಾರವನ್ನು ಹೆಚ್ಚಿಸಿದವು ಆ ಕಾರಣಕ್ಕೆ ರಾಜಪ್ರಭುತ್ವ ಶರಣರೊಂದಿಗೆ ಚೆನ್ನಾಗಿಯೇ ಇತ್ತು. ಯಾವಾಗ ಅಂತರ್ಜಾತಿ ವಿವಾಹದ ಪ್ರಸಂಗ ನಡೆಯಿತೊ ಅದನ್ನು ವೈದಿಕ ವ್ಯವಸ್ಥೆ ಸಹಿಸಿಕೊಳ್ಳಲಿಲ್ಲ. ಬಿಜ್ಜಳನನ್ನು ಬಂಧಿಸಿದ ಕೊಂಡೆಮಂಚಣ್ಣನವರ ಗುಂಪು, ಸೋವಿದೇವನಿಗೆ ಅವಸರವಸರದಲ್ಲಿ ಪಟ್ಟಕಟ್ಟಿ ಶರಣರಿಗೆ ಎಳೆಹೂಟೆ ಶಿಕ್ಷೆಯನ್ನು ಪ್ರಕಟಿಸಿಬಿಟ್ಟಿತ್ತು. ಆಗ ಶರಣರು ಅಸಹಾಯಕರಾದರು. ವೈದಿಕವ್ಯವಸ್ಥೆಯ ಕುತಂತ್ರಕ್ಕೆ ರಾಜಪ್ರಭುತ್ವ ಅಡಿಯಾಳಾದಾಗ ಶರಣರ ಮಾರಣಹೋಮ ನಡೆಯಿತು. ಪ್ರಭುತ್ವದ ಆದೇಶದಂತೆ ಸೈನಿಕರು ಶರಣರನ್ನು ಅಟ್ಟಾಡಿಸಿಕೊಂಡು ಕೊಂದರು. ಇದು ಶರಣರ ರಾಜನೀತಿಗೆ ಉಂಟಾದ ಹಿನ್ನಡೆಯಾದರೂ, ಅವರ ಸಮಾನತೆಯ ಸಿದ್ಧಾಂತದ ಸೋಲಲ್ಲ. ಶರಣರ ದೇಹಗಳನ್ನು ಕೊಲ್ಲಲು ಅಂದಿನ ಪ್ರಭುತ್ವಕ್ಕೆ ಸಾಧ್ಯವಾಯಿತೇ ಹೊರತು, ಶರಣರ ಸಿದ್ಧಾಂತಗಳನ್ನು ಕೊಲ್ಲುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಅವರ ದೇಹಗಳು ಅಳಿದಿದ್ದರೂ, ಅವರ ಸಿದ್ಧಾಂತಗಳು ಇಂದಿಗೂ ಉಳಿದುಕೊಂಡಿವೆ. ರಾಜಸತ್ತೆಯ ಸಂದರ್ಭದಲ್ಲಿ ರಾಜನೇ ಪ್ರತ್ಯಕ್ಷ ದೇವರಾಗಿದ್ದಂತಹ ಆ ಕಾಲಘಟ್ಟದಲ್ಲಿ ಶರಣರು ನಡೆಸಿದ ಹೋರಾಟ ಸಣ್ಣದಾಗಿರಲಿಲ್ಲವೆಂಬುದು ಅಷ್ಟೇ ಸತ್ಯವಾಗಿದೆ.

“ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ
ಹುಸಿ ಹಣ್ಣಾಗಿ ತೊಟ್ಟುಬಿಟ್ಟಿತ್ತು ಅರಸನಲ್ಲಿ.....”
-ಚೆನ್ನಬಸವಣ್ಣ (ಸ.ವ.ಸಂ.3, ವ: 1775)

ಚೆನ್ನಬಸವಣ್ಣನವರ ಈ ವಚನದಲ್ಲಿ ಒಂದು ಮಹತ್ವದ ಸತ್ಯವಡಗಿದೆ. ಹುಸಿಯ ಪರಮಾವಧಿ, ತೀವ್ರತೆ ಅರಸನಲ್ಲಿ ಕಾಣಿಸಿಕೊಳ್ಳುತ್ತದೆಯೇ ಹೊರತು ಜನಸಾಮಾನ್ಯರಲ್ಲಿ ಅಲ್ಲ. ನಮ್ಮ ಶರಣರು ಹುಸಿಯನ್ನು ಬಿಟ್ಟು ನಿಜಲಿಂಗೈಕ್ಯರಾದರೆಂದು ಚೆನ್ನಬಸವಣ್ಣ ಹೇಳಿದ್ದಾರೆ. ಅಂದರೆ ಇಂದಿನ ರಾಜಕಾರಣಿಗಳು ಸುಳ್ಳುಹೇಳುತ್ತಾರೆಂಬ ಮಾತಿಗೆ ಒಂದುಪರಂಪರೆಯಿದೆ. ಇಂತಹ ಸುಳ್ಳಿನ ಪರಂಪರೆ ಆಳುವ ಅರಸರಿಂದಲೇ ಪ್ರಾರಂಭವಾಗಿದೆ. ಸುಳ್ಳು ಹೇಳದಿದ್ದರೆ, ಹುಸಿಯ ನುಡಿಯದ್ದಿದರೆ ಅವರಿಗೆ ಅಧಿಕಾರ ನಡೆಸುವುದಕ್ಕೇ ಆಗುವುದಿಲ್ಲವೆಂಬ ಕಹಿಸತ್ಯವನ್ನು ಚೆನ್ನಬಸವಣ್ಣನವರು ಇಲ್ಲಿ ಹೇಳಿದ್ದಾರೆ. “ಹುಸಿಯೆಂಬುದು ಹಣ್ಣಾಗಿ ತೊಟ್ಟು ಬಿಚ್ಚಿದ್ದೇ ಅರಸನಲ್ಲಿ” ಎಂಬ ಮಾತು ಸಣ್ಣದಲ್ಲ.

“ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ?” (ವ:710) ಎಂದು ಆಯ್ದಕ್ಕಿ ಲಕ್ಕಮ್ಮ ಹೇಳಿರುವ ಮಾತು; ಅರಸನ ಬಗೆಗೆ ಶರಣರಿಗಿರುವ ಭಾವನೆ ಹೇಗಿತ್ತೆಂಬುದನ್ನು ಹೇಳುತ್ತದೆ. ಹುಸಿಯ ಕೇಂದ್ರವೇ ಅರಸನೆಂದು ಚೆನ್ನಬಸವಣ್ಣನವರು ಹೇಳಿದರೆ; ಆಸೆಯ ಮೂಲವೇ ಅರಸನೆಂದು ಆಯ್ದಕ್ಕಿ ಲಕ್ಕಮ್ಮ ಹೇಳಿದ್ದಾರೆ. ಇಂತಹ ಅತಿಯಾಸೆ, ಅತಿಸುಳ್ಳುಗಳು ಸಾಮ್ರಾಜ್ಯಶಾಹಿಯ ಲಕ್ಷಣಗಳಾಗಿವೆ. ಅರಸೊತ್ತಿಗೆಯ ವ್ಯವಸ್ಥೆಯಲ್ಲಿದ್ದುಕೊಂಡೇ ಇಂತಹ ಮಾತುಗಳನ್ನಾಡಿರುವುದು ಶರಣರ ಬದ್ಧತೆಯ ಬದುಕಿಗೆ, ನಡೆನುಡಿ ಸಿದ್ದಾಂತಕ್ಕೆ ಹಿಡಿದ ಕನ್ನಡಿಯಾಗಿದೆ. “ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ”ಎಂದು ಇನ್ನೊಂದು ವಚನದಲ್ಲಿ ಆಯ್ದಕ್ಕಿ ಲಕ್ಕಮ್ಮ ಹೇಳಿದ್ದಾರೆ. ಇದೂ ಕೂಡ ಅರಸನನ್ನು ಅರಸುಪರಿವಾರವನ್ನು ಕುರಿತು ಆಡಿದ ಮಾತೇ ಆಗಿದೆ. ರಾಜಕೀಯ ನೀತಿಯಿಲ್ಲದೆ, ಸೈದ್ದಾಂತಿಕ ಬದ್ಧತೆ ಇರಲಾರದೆ ಯಾರೂ ಮಾತನಾಡಲಾರರು. ಶರಣರಿಗಿದ್ದ ಸೈದ್ದಾಂತಿಕ ಬದ್ಧತೆಯೇ ಇಂತಹ ಮಾತುಗಳನ್ನಾಡಿಸಿದೆ.

“ತಮ್ಮ ನುಡಿಯಿಂದ ಅರಸು ಅರಸನಲ್ಲ
ಆಳುಗಳಿಂದರಸನೆಂಬ ಬಿರುದು ತೋರ್ದಡೂತೋರಲಿ”
- ಸಿದ್ಧರಾಮ (ಸ.ವ.ಸಂ.4, ವ: 460)

ಈ ವಚನದಲ್ಲಿ ಸಿದ್ಧರಾಮ ಶಿವಯೋಗಿಗಳು, ನುಡಿಯಿಂದ ಅರಸನಾಗುವುದಿಲ್ಲ. ಆಳಾಗುವುದರಿಂದ ಅರಸನಾಗುತ್ತಾನೆಂದು ಹೇಳುತ್ತ, ಆಳುಗಳಿಗಿಂತ ಅರಸೊತ್ತಿಗೆ ದೊಡ್ಡದಲ್ಲವೆಂದು ಹೇಳಿದ್ದಾರೆ. ಅಲ್ಲಿ ಅಧಿಕಾರದ ಆಸೆ ಅರಸನಿಗಲ್ಲದೆ, ಆಳಿಗೆ ಅಲ್ಲವೆಂದು ತಿಳಿಸಿದ್ದಾರೆ. ಆಳು-ಅರಸ ಎಂಬ ಭೇದ ಹೋಗಬೇಕು, ಎಲ್ಲರೂ ಮನುಷ್ಯರೇ ಆಗಿರುವಾಗ ತಾರತಮ್ಯನೀತಿ ಸರಿಯಲ್ಲವೆಂದು ಹೇಳಿದ್ದಾರೆ.

“ರಾಜರ ಬಾಗಿಲಲ್ಲಿ ನಿಂತು ಕೂಗಿ ಮೊರೆಯಿಟ್ಟು ನೀನಾರೊ ಎಂದು ಕೇಳಿದೊಡೆ ನಾನೊಡೆಯ ಎಂದಡೆ ಅಡಗುವದೇ ನಿನ್ನಬಾಯಿ” ಎಂದು ಮೆರೆಮಿಂಡಯ್ಯನವರು ಕೇಳಿದ್ದಾರೆ. ಪ್ರಜೆಗಳಿಗೆ ಸ್ಪಂದಿಸದ ಅರಸ ಇದ್ದರೇನುಪಯೋಗ? ಎಂಬಂತಹ ಪ್ರಶ್ನೆಗಳನ್ನು ಶರಣರು 12ನೇ ಶತಮಾನದಲ್ಲಿಯೇ ಕೇಳಿದ್ದಾರೆ.

“ಅರಸಿಂಗೆ ಆಚಾರ ಅನುಸರಣೆಯಾಯಿತ್ತೆಂದು
ಸದಾಚಾರಿಗಳೆಲ್ಲ ಬನ್ನಿ ಎಂದು
ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರನಂತೆ.....”
- ಅಕ್ಕಮ್ಮ (ಸ.ವ.ಸಂ.5, ವ:443)

ಈ ವಚನದಲ್ಲಿ ಅಕ್ಕಮ್ಮ ಅರಸನನ್ನು ಅರಸೊತ್ತಿಗೆಯನ್ನು ವಿಡಂಬಿಸಿದ್ದಾಳೆ. ಅರಸ ಸದಾಚಾರಿಯಾಗಿರುವುದು ತುಂಬ ವಿರಳ. ಆದರೆ ರಾಜನ ಹಿಂಬಡಕರು ಅರಸ ಸದಾಚಾರಿಯಾಗಿದ್ದಾನೆಂದು ಕರೆದಾಗ, ಸದಾಚಾರಿಗಳೆಲ್ಲ ಅರಸನ ಬಳಿ ಹೋಗುವದೆಂದರೆ ಕೂಲಿಗೆ ಹಾವಕಚ್ಚಿಸಿಕೊಂಡು ಸಾಯುವ ತೆರನಂತೆಂದು ಗಾದೆಮಾತಿನ ಮೂಲಕ ಅರಸನ ಅಹಂಭಾವವನ್ನು ಹೇಳಿದ್ದಾಳೆ.

“ಖ್ಯಾತಿಗೆ ಜೋತು ಲಾಭಕ್ಕೆ ಲೋಭಿಸಿ
ಪೂಜೆಯ ಮಾಡದೆ ರಾಜದ್ವಾರದಲ್ಲಿ ಸುಳಿದು
ಬಳಲುವ ಹಿರಿಯರೆಲ್ಲರೂ ಇತ್ತಿತ್ತಲಲ್ಲದೆ ಅತ್ತತ್ತಲೆಲ್ಲಿಯದೊ
ಸೌರಾಷ್ಟ್ರಸೋಮೇಶ್ವರ ಲಿಂಗದಲ್ಲಿ ತಲ್ಲೀನವಾದ
ಶರಣರತ್ತಲ್ಲಲದೆ ಇತ್ತಿತ್ತಲೆಂತಿಹರೊ”
-ಆದಯ್ಯ (ಸ.ವ.ಸಂ.6, ವ:897)

ಆದಯ್ಯನವರು ಈ ವಚನದಲ್ಲಿ ರಾಜದ್ವಾರದ ಸುತ್ತ ತಿರುಗುವವರನ್ನು ಕಂಡು ವಿಡಂಬಿಸಿದ್ದಾರೆ. ಅರಸನಿಂದ ಖ್ಯಾತಿ ಪಡೆಯಲೆಂದು, ಲಾಭ ಗಳಿಸಲೆಂದು ಪೂಜೆಯ ಮಾಡದೆ, ದೇವರನ್ನು ಧ್ಯಾನಿಸದೆ ಸದಾ ರಾಜ್ಯದ್ವಾರದ ಸುತ್ತ ಸುಳಿಯುತ್ತಿರವವರನ್ನು ಖಂಡಿಸಿದ್ದಾರೆ. ಇಂತವರು ಆಕಡೆ ಇರುತ್ತಾರೆಯೇ ಹೊರತು ಈಕಡೆ ಬರುವುದಿಲ್ಲ. ಇಂತಹ ಹಿಂಬಡಕರು, ಬಾಲಬಡಕರು, ಪರಾಕು ಹೇಳುವುವರಿದ್ದಾರೆಂದೇ ಅರಸನ ಅಹಂಭಾವ ಹೆಚ್ಚಾಗಿದೆಯೆಂದು ಆದಯ್ಯ ವಿವರಿಸಿದ್ದಾರೆ.

ಅಕ್ಕಮಹಾದೇವಿ ಅರಸನಾಗಿದ್ದ ಕೌಶಿಕನನ್ನು ಧಿಕ್ಕರಿಸಿ ಎಲ್ಲವನ್ನೂ ತೊರೆದು ಹೊರ ನಡೆಯುತ್ತಾಳೆ. ತಂದೆ-ತಾಯಿಯರನ್ನು ಕೌಶಿಕಅರಸ ಕೊಲ್ಲಿಸುತ್ತಾನೆಂದು ಭಯಪಟ್ಟ ಅಕ್ಕ, ತಂದೆ-ತಾಯಿಯ ಜೀವ ಉಳಿಸಲು ಒಲ್ಲದ ಮದುವೆಗೆ ಅನಿವಾರ್ಯವಾಗಿ ಬಲಿಯಾಗುತ್ತಾಳೆ. ಮದುವೆಯಾದರೇನು? ಮಡದಿಯಾಗುವುದಿಲ್ಲ. ಮದುವೆ ತಿರಸ್ಕರಿಸುವುದು ಅವಳ ಕೈಯಲ್ಲಿರಲಿಲ್ಲ, ಆದರೆ ಮಡದಿಯಾಗದೆ ಅವನನ್ನು ತಿರಸ್ಕರಿಸುವುದು ಅವಳ ಕೈಯಲ್ಲಿತ್ತು. ಆಕೆ ಎರಡನೆಯದನ್ನೇ ಮಾಡಿದಳು. ಸ್ವಾಭಿಮಾನ-ಆತ್ಮಾಭಿಮಾನಕ್ಕೋಸ್ಕರ ಅರಸನನ್ನೇ ತಿರಸ್ಕರಿಸಿ, ಪತಿಯಾದವನನ್ನೇ ಧಿಕ್ಕರಿಸಿದ ಮೊದಲ ಬಂಡಾಯಗಾರ್ತಿ ಅಕ್ಕಮಹಾದೇವಿ. ಆಕೆಯ ರಕ್ಷಣೆಗೆ ಯಾರೂ ಬರಲಿಲ್ಲ. ಆದರೂ ಅರಸನ ವಿರುದ್ಧ ಏಕಾಂಗಿಯಾಗಿ ಹೋರಾಡಿ ಆಕೆ ಹೊರಬರುತ್ತಾಳೆ.

ಅನೇಕ ಶರಣರು ಅರಸನನ್ನು, ಅರಸೊತ್ತಿಗೆಯನ್ನು ವಿರೋಧಿಸಿದ್ದಾರೆ, ವಿಡಂಬಿಸಿದ್ದಾರೆ. ಆದರೆ ಅವರು ಆಳುವ ವ್ಯವಸ್ಥೆಯೊಂದಿಗೆ ಸಂಘರ್ಷಕ್ಕಿಳಿಯಲಿಲ್ಲ, ಎಲ್ಲ ಶ್ರಮಿಕರನ್ನು ಕೂಡಿಸಿಕೊಂಡು ಅರಸೊತ್ತಿಗೆಯನ್ನು ಅರಸನನ್ನು ಕಿತ್ತೊಗೆಯಬಹುದಿತ್ತು. ಆದರೆ ಆಗ ಇಂತಹ ಚಿಂತನೆಗಳಿಗೆ ಕಾಲ ಪಕ್ವವಾಗಿರಲಿಲ್ಲ. ಒಬ್ಬ ಅರಸನ್ನು ತೆಗೆದು ಹಾಕಿದರೆ, ಮತ್ತೊಬ್ಬ ಅರಸ ಬದುತ್ತಿದ್ದ. ಹೀಗಾಗಿ ಶರಣರು ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತ ಮನಪರಿವರ್ತನೆಯ ಕಾರ್ಯಕ್ಕೆ ತೊಡಗಿದರು. ಇದು ವರ್ಗಹೋರಾಟದ ಮೊದಲ ಹಂತವಾಗಿತ್ತು.

ಅರಸನನ್ನು ಅರಸೊತ್ತಿಗೆಯನ್ನು ಕಿತ್ತೊಗೆಯುವುದು ಹೇಗೆ ಶರಣರ ಉದ್ದೇಶವಾಗಿರಲ್ಲಿಲ್ಲವೋ ಅದೇರೀತಿ ಶ್ರೀಮಂತರ ವಿರುದ್ಧ ದಂಗೆಯೆದ್ದು, ಶ್ರಮಿಕರ ಮೂಲಕ ಶ್ರೀಮಂತರನ್ನು ಸದೆಬಡಿಯುವದೂ ಕೂಡ ಶರಣರ ಉದ್ದೇಶವಾಗಿರಲಿಲ್ಲ. ಆದರೆ ಶ್ರೀಮಂತರ ಬಗೆಗೆ, ಶರಣರಲ್ಲಿ ಅಸಮಾಧಾನವಿದೆ. ಅವರು ಸಂಪತ್ತಿನ ಐಸಿರಿಯಿಂದ ಶ್ರಮಿಕರನ್ನು ಶೋಷಿಸುತ್ತಿದ್ದುದರ ಬಗೆಗೆ ಸಿಟ್ಟಿದೆ. ಆದರೆ ಶ್ರೀಮಂತರ ವಿರುದ್ಧ ಬಡವರನ್ನು ಕಾರ್ಮಿಕರನ್ನು ಸಂಘಟಿಸಿ ವರ್ಗಹೋರಾಟ ಮಾಡುವ ಉದ್ದೇಶ ಅವರಲ್ಲಿರಲಿಲ್ಲ. ಅರಸನನ್ನು ಶ್ರೀಮಂತರನ್ನು ಕೊಲ್ಲುವುದಾಗಲಿ, ಅವರಿಂದ ಅಧಿಕಾರ ಕಸಿದುಕೊಳ್ಳುವುದಾಗಲಿ, ಅವರ ವಿರುದ್ಧ ಶ್ರಮಿಕರನ್ನು ಎದುರು ನಿಲ್ಲಿಸಿ ವರ್ಗಹೋರಾಟ ಮಾಡುವದಾಗಲಿ ಅವರ ಯೋಚನೆಯಾಗಿರಲಿಲ್ಲ. ಆದರೆ ಅರಸನ ದಬ್ಬಾಳಿಕೆಯನ್ನು, ಶ್ರೀಮಂತರ ಶೋಷಣೆಯನ್ನು ಕಂಡು ಅವರು ಸುಮ್ಮನೇ ಕೂಡಲಿಲ್ಲ. ಜನರಲ್ಲಿ ಜಾಗೃತಿಯನ್ನುಂಟು ಮಾಡಿದರು. ಅರಿವನ್ನು ಮೂಡಿಸಿದರು. ಚಳವಳಿ ತೀವ್ರಗೊಂಡಾಗ ಕೊನೆಗೆ ಅದರಲ್ಲಿ ತಾವೇ ಜೀವಂತ ಹೆಣವಾದರು. ಇದನ್ನು ವರ್ಗಹೋರಾಟದ ಮೊದಲನೇ ಹಂತವೆಂದು ಕರೆಯಬಹುದಾಗಿದೆ. ಯಾವಾಗಲೂ ಹೋರಾಟವೆಂಬುದು ಪ್ರಾರಂಭವಾಗುತ್ತದೆ. ಆದರೆ ಮುಗಿಯುವುದಿಲ್ಲ. ಶರಣರ ಹೋರಾಟವೂ ಅಷ್ಟೇ; ಅದು ಇಂದಿಗೂ ನಮ್ಮೊಂದಿಗೆ ಜೀವಂತವಾಗಿದೆ. ಶ್ರೀಮಂತರ ಬಗೆಗಿರುವ ಶರಣರ ಪ್ರತಿಕ್ರಿಯೆ ಗಮನಿಸುವಂತಿವೆ.

“ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿಹೊಗಲು
ಒಡನೆ ನುಡಿವರಯ್ಯಾ ಕೂಡಲಸಂಗಮದೇವಾ”
-ಬಸವಣ್ಣ (ಸ.ವ.ಸಂ.1, ವ: 132)

ಬಸವಣ್ಣನವರು ಇಲ್ಲಿ ಶ್ರೀಮಂತರ ಬಗೆಗಿರುವ ತಮ್ಮ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಹಾವುಕಚ್ಚಿ ಮೂರ್ಚೆಹೋದವರನ್ನು ಮಾತನಾಡಿಸಬಹುದು, ದೆವ್ವ ಬಡಿದವರನ್ನೂ ನುಡಿಸಬಹುದು ಆದರೆ ಈ (ಸಿರಿಗರ) ಸಿರಿಯೆಂಬ ದೆವ್ವ ಬಡಿದುಕೊಂಡವರನ್ನು ಮಾತನಾಡಿಸಲಾಗುವುದಿಲ್ಲವೆಂದು ಹೇಳಿದ್ದಾರೆ. ಬಡತನವೆಂಬ ಮಂತ್ರವಾದಿ ಬಂದಾಗ ಇವರು ತಾವೇ ಬಾಯಿತೆರೆಯುತ್ತಾರೆಂದು ತಿಳಿಸಿದ್ದಾರೆ. ಸಿರಿವಂತಿಕೆ ಬಂದ ಕೂಡಲೇ ಮನುಷ್ಯನಿಗೆ ಸಹಜವಾಗಿಯೇ ಅಹಂಭಾವ, ಅಹಂಕಾರ ಕಾಣಿಸಿಕೊಳ್ಳುತ್ತವೆ. ಆಗ ಶ್ರೀಮಂತರಾದವರು ತಾವೇ ಸರ್ವಸ್ವವೆಂಬ ಭ್ರಮೆಯಲ್ಲಿ ಬೀಗುತ್ತಾರೆ. ಇಂತವರಿಗೆ ಬಡತನದ ಪರಿಚಯವಾದರೆ ಮಾತ್ರ ಮನುಷ್ಯರಾಗುತ್ತಾರೆ. ಶರಣರ ಇಂತಹ ಮಾತುಗಳು ವರ್ಗಹೋರಾಟದ ಸಂಘರ್ಷವುಂಟು ಮಾಡುವಂತವುಗಳಾಗಿರಲಿಲ್ಲ. ಬದಲಾಗಿ ಒಳಗಡೆಯ ಅಹಂಕಾರವನ್ನು ಕಳೆಯುವ ಮಾತ್ರೆಗಳಾಗಿದ್ದವು. ಮಾಕ್ರ್ಸನ ವರ್ಗಹೋರಾಟದ ಪರಿಕಲ್ಪನೆಯನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬಾರದು. ಬಸವಣ್ಣ-ಕಾರ್ಲ್‍ಮಾಕ್ರ್ಸ ರ ನಡುವೆ 800 ವರ್ಷಗಳ ಅಂತರವಿದೆ. ಹೀಗಾಗಿ ಇಂದಿನದಕ್ಕೆ ಸಮಾನಂತರವಾಗಿ ಹಿಂದಿನದನ್ನು ನೋಡಬಾರದು. ಹಾಗೆಂದು ಶರಣರು ಶ್ರೀಮಂತ-ಬಡವ ಭೇದದ ಬಗೆಗೆ ಚಿಂತಿಸದೇ ಇರಲಿಲ್ಲ. ಆದರೆ ಅವರ ಚಿಂತನೆಯ ಮಾರ್ಗಗಳು ಬೇರೆಯಾಗಿದ್ದವು. ಹಿಂದೆ ಕಂಡರಿಯದ ಹೊಸ ಮಾರ್ಗಗಳನ್ನವರು ಶೋಧಿಸಿದರು. ಇದು ತುಂಬಾ ಮುಖ್ಯವಾಗುತ್ತದೆ.

“ಅರ್ಥವುಂಟೆಂದು ಅಹಂಕರಿಸಿ ಮಾಡುವವನಭಕ್ತಿ
ತೊತ್ತಿನಕೂಟ ತೊರೆಯನ ಮೇಳದಂತೆ
ತನು-ಮನ-ಧನದಲ್ಲಿ ವಂಚನೆಯುಳ್ಳ
ಪ್ರಪಂಚಿಯ ಮನೆಯಕೂಳು
ಶುನಕನಬಾಯ ಎಲುವ, ಪ್ರತಿಶುನಕ ತಿಂದಂತೆ ಕಾಣಾ ರಾಮನಾಥ”
- ಜೇಡರ ದಾಸಿಮಯ್ಯ (ಸ.ವ.ಸಂ.728)

ಜೇಡರ ದಾಸಿಮಯ್ಯನವರು ಇಲ್ಲಿ ಅಹಂಕಾರದಿಂದ ಶ್ರೀಮಂತಿಕೆಯ ಸೊಕ್ಕಿನಿಂದ ಮಾಡುವವನ ಭಕ್ತಿ ಹೇಗೆ ಅಸಹ್ಯವಾಗಿರುತ್ತದೆಂದು ಹೇಳಿದ್ದಾರೆ. ಶ್ರೀಮಂತ ತನ್ನ ಸಂಪತ್ತಿನ ಅಹಂಭಾವವನ್ನು ಕಳೆದುಕೊಂಡಾಗಲೇ ನಿಜವಾದ ಭಕ್ತನಾಗುತ್ತಾನೆ. ಅದಾಗದಿದ್ದರೆ ಅದು ಡಾಂಭಿಕ ಭಕ್ತಿಯಾಗುತ್ತದೆ. ನಾಯಿಯ ಬಾಯಿಯಲ್ಲಿರುವ ಎಲುಬನ್ನು ಮತ್ತೊಂದು ನಾಯಿ ಕಚ್ಚಿ ತಿಂದಂತಾಗುತ್ತದೆಂದು ಹೇಳಿರುವಲ್ಲಿ; ಓಣಿಯಲ್ಲಿ ಕಾಣುವ ಚಿತ್ರಣ ಕಣ್ಮುಂದೆ ಬಂದು ನಿಂತಂತಾಗುತ್ತದೆ.

“ಕುದುರೆಸತ್ತಿಗೆಯವರ ಕಂಡಡೆ ಹೊರಳಿಬಿದ್ದು ಕಾಲಹಿಡಿವರು. ಬಡಭಕ್ತರು ಬಂದಡೆ ಎಡೆಯಿಲ್ಲ ಅತ್ತಸನ್ನಿ ಎಂಬರು” ಎನ್ನುವ ಬಸವಣ್ಣನವರ ನುಡಿಯಲ್ಲಿ, ಶ್ರೀಮಂತರಿಗೆ-ಬಡವರಿಗೆ ಇರುವ ಭೇದವನ್ನು ಹೇಳಲಾಗಿದೆ. ಅಂದಿನ ಸಮಾಜವ್ಯವಸ್ಥೆ ಶ್ರೀಮಂತರಿಗೆ ಬೆಲೆಕೊಡುತ್ತಿತ್ತೇ ಹೊರತು ಬಡವನಿಗಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಶರಣರು ಬಡವರ ಪರವಾಗಿದ್ದರು, ಶ್ರೀಮಂತರ ವಿರೋಧ ಕಟ್ಟಿಕೊಂಡರೆಂಬುದು ಬಹುಮುಖ್ಯ ಸಂಗತಿಯಾಗುತ್ತದೆ. ಇದನ್ನೇ ಅಮುಗೆರಾಯಮ್ಮ ಹೀಗೆ ಹೇಳಿದ್ದಾಳೆ. “ಇಮ್ಮೆಯ ಸಿರಿವಂತರ ಕಂಡಡೆ ಎನ್ನಯ್ಯಾ ಇತ್ತಬನ್ನಿ ಎಂಬರಯ್ಯಾ, ಕರ್ಮಿಗಳ ಕಂಡಡೆ ಕತ್ತುಹಿಡಿದು ನೂಕೆಂಬರಯ್ಯಾ” ಎಂದು ಹೇಳುತ್ತಾ ಶರಣರು, ಕರ್ಮಿಗಳ ಪರವಾಗಿದ್ದರೆಂಬುದನ್ನು ತಿಳಿಸಿದ್ದಾಳೆ. “ಗರ್ವದಿಂದ ಮಾಡುವ ಭಕ್ತಿ ದ್ರವ್ಯದಕೇಡೆಂದು” ಆಯ್ದಕ್ಕಿ ಲಕ್ಕಮ್ಮ ಹೇಳಿದ್ದಾಳೆ. ಹಣಕ್ಕೆ ಬಡತನವಿರಬಹುದು, ಆದರೆ ಮನಕ್ಕೆ-ಗುಣಕ್ಕೆ ಬಡತನವಿರಬಾರದೆಂದು ತಿಳಿಸಿದ್ದಾಳೆ. ಬಡವನಾದರೂ ಪ್ರಾಮಾಣಿಕತೆಯಿಂದ ಯಾರ ಹಂಗಿಲ್ಲದಂತೆ ಬದುಕಬೇಕೆಂದು ಶರಣರು ಹೇಳಿದ್ದಾರೆ.

ಇಲ್ಲಿ ಆಳರಸರ ವಿರುದ್ಧ, ಶ್ರೀಮಂತರ ವಿರುದ್ಧ ಶರಣರು ದಂಗೆ ಏಳಲಿಲ್ಲ, ಆದರೆ ಅವರಿಗೆ ಸತ್ಯ ಸಂಗತಿಗಳನ್ನು ತಿಳಿಸಿಕೊಟ್ಟರು. ಮನುಷ್ಯನಾಗಿ ಮಾನವೀಯತೆಯಿಂದ ಅಂತಃಕರಣದಿಂದ ಬದುಕಬೇಕೆಂದು ಕಲಿಸಿಕೊಟ್ಟರು. ರಾಜಸತ್ತೆಯ ವ್ಯವಸ್ಥೆಯಲ್ಲಿ ಇದು ಸುಲಭವಾಗಿರಲಿಲ್ಲ. ಆದರೂ ಶರಣರು ಅಂತಹ ಪ್ರಯತ್ನಗಳನ್ನು ಮಾಡಿದರು. ಅಂತೆಯೇ ಅನೇಕ ಆಳರಸರು ತಮ್ಮ ಅರಸೊತ್ತಿಗೆಯನ್ನು ತ್ಯಜಿಸಿ ಶರಣರ ಸಿದ್ಧಾಂತಗಳಿಗೆ ಆಕರ್ಷಿತರಾಗಿ ಬಂದರು. ಅವರಲ್ಲಿ ಕಾಶ್ಮೀರದಿಂದ ಬಂದಿದ್ದ ಮೋಳಿಗೆಯ ಮಾರಯ್ಯನೂ ಒಬ್ಬ. ಕಾಶ್ಮೀರದರಸನಾಗಿದ್ದ ಮಾರಯ್ಯ ಕಲ್ಯಾಣ ಕ್ರಾಂತಿಯಲ್ಲಿ ಪಾಲ್ಗೊಂಡು ಕಟ್ಟಿಗೆ ಕಾಯಕ ಮಾಡಿಕೊಂಡು ಸರಳಜೀವನ ಸಾಗಿಸುತ್ತಿದ್ದ. ಇಂತಹ ಅನೇಕ ಉದಾಹರಣೆಗಳಿವೆ. ಶರಣರ ವರ್ಗಸಮಾನತೆಯ ಪರಿಕಲ್ಪನೆ ಸಂಘರ್ಷದಿಂದ ಕೂಡಿರಲಿಲ್ಲ. ಸಹನೆಯಿಂದ ತಿದ್ದುವ ಕೆಲಸವಾಗಿತ್ತು. ಮನಪರಿವರ್ತನೆಯ ಕಾರ್ಯವಾಗಿತ್ತು ಎಂಬುದು ಬಹುಮುಖ್ಯವಾಗುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...