ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

Date: 16-01-2022

Location: ಬೆಂಗಳೂರು


‘ಬೇರೆ ಬೇರೆ ಧರ್ಮಗಳಿಗೆ ಅವುಗಳಿಗೆ ಸಂಬಂಧಿಸಿದ ಧರ್ಮಗ್ರಂಥಗಳಿವೆ. ಲಿಂಗಾಯತ ಧರ್ಮಕ್ಕೆ ಯಾವುದೇ ಒಂದು ನಿರ್ದಿಷ್ಟವಾದ ಧರ್ಮಗ್ರಂಥವಿರದೆ, ವಚನ ಭಂಡಾರವೇ ಲಿಂಗಾಯತ ಧರ್ಮದ ಧರ್ಮ ಗ್ರಂಥವಾಗಿದೆ’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ಅಂಕಣದಲ್ಲಿ ಬಸವಧರ್ಮ ಮತ್ತು ಶರಣ ಸಾಹಿತ್ಯದ ಕುರಿತು ವಿಶ್ಲೇಷಿಸಿದ್ದಾರೆ. 

ಯಾವುದೇ ಒಂದು ಹೊಸ ಧರ್ಮ ಸುಮ್ಮನೇ ಹುಟ್ಟಿಕೊಳ್ಳುವುದಿಲ್ಲ. ಅದರ ಹುಟ್ಟಿಗೆ ಅನೇಕ ಕಾರಣಗಳಿರುತ್ತವೆ. ಜನಸಾಮಾನ್ಯರನ್ನು ಆಧ್ಯಾತ್ಮದತ್ತ ಕರೆದುಕೊಳ್ಳಲು, ನೈತಿಕ ಮೌಲ್ಯಗಳನ್ನು ಹೆಚ್ಚಿಸಲು, ಅನುಭಾವದ ಚಿಂತನೆಗೆ ತೊಡಗಿಸಲು ಕಾಲಕಾಲಕ್ಕೆ ಬೇರೆ ಬೇರೆ ಧರ್ಮಗಳು ಹುಟ್ಟಿಕೊಂಡಿವೆ. ಒಂದೊಂದು ಧರ್ಮದ ಹಿಂದೆ ಒಬ್ಬೊಬ್ಬ ಧರ್ಮ ಸಂಸ್ಥಾಪಕರಿದ್ದಾರೆ. ಇಂತಹ ಧರ್ಮ ಸಂಸ್ಥಾಪಕರು ತಮ್ಮ ಹಿಂದಿದ್ದ ಧರ್ಮಗಳನ್ನು ಕುರಿತು ಮೊದಲು ಅಧ್ಯಯನ ಮಾಡುತ್ತಾರೆ. ಅವುಗಳಲ್ಲಿದ್ದ ಕೊರತೆಯನ್ನು ಗಮನಿಸಿ, ಅಂದಿನ ಕಾಲದ ಆಧ್ಯಾತ್ಮದ ಅನಿವಾರ್ಯತೆಗಳ ಬಗೆಗೆ ಚಿಂತಿಸಿ ಹೊಸಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಅಂತಹ ಧರ್ಮದ ಸಿದ್ಧಾಂತಗಳನ್ನು ಒಪ್ಪಿಕೊಂಡವರು ಆ ಧರ್ಮದ ಅನುಯಾಯಿಗಳಾಗುತ್ತಾರೆ. ಹೀಗೆ ಭಾರತ ದೇಶದಲ್ಲಿ ಅನೇಕ ಧರ್ಮಗಳು ಹುಟ್ಟಿವೆ, ಅನೇಕ ಧರ್ಮಗಳು ಬೆಳೆದಿವೆ.

ಸಾಹಿತ್ಯ ಕೃತಿ ಬರೆದಂತೆ, ಧರ್ಮಕೃತಿ ಬರೆಯುವುದು ಸುಲಭವಲ್ಲ. ಒಂದು ಧರ್ಮದ ಹುಟ್ಟು, ಬೆಳವಣಿಗೆ, ಅದರ ಸಿದ್ಧಾಂತಗಳನ್ನು ಕುರಿತು ಬರೆಯಲು ಅನೇಕ ರೀತಿಯ ಅಧ್ಯಯನಗಳನ್ನು ನಡೆಸಬೇಕಾಗುತ್ತದೆ. ವಿವಿಧ ರೀತಿಯ ಆಕರಗಳನ್ನು ಗಮನಿಸಬೇಕಾಗುತ್ತದೆ. ಇಷ್ಟೆಲ್ಲ ಸಂಶೋಧನೆ ಮಾಡಿ ಧರ್ಮದ ಕೃತಿಯೊಂದನ್ನು ರಚಿಸಿದರೂ ಅದು ಪೂರ್ಣಪ್ರಮಾಣದ್ದೆಂದು ಅನ್ನಿಸುವುದಿಲ್ಲ. ಒಂದು ಸಾಹಿತ್ಯ ಕೃತಿಗೆ ಮಿತಿಗಳಿರುವಂತೆ, ಒಂದು ಧಾರ್ಮಿಕ ಕೃತಿಯಲ್ಲಿ ಇನ್ನೂ ಹೆಚ್ಚಿನ ಮಿತಿಗಳು ಕಾಣಿ ಸಿಕೊಳ್ಳುವುದು ಸಹಜವಾದದ್ದಾಗಿದೆ. ನಾನು ರಚಿಸಿರುವ ಈ “ಬಸವಧರ್ಮ” (ಲಿಂಗಾಯತ ಧರ್ಮ) ಕೃತಿಯಲ್ಲಿಯೂ ಅನೇಕ ಮಿತಿಗಳಿವೆಯೆಂಬುದನ್ನು ವಿನಮ್ರವಾಗಿ ತಿಳಿಸಬಯಸುತ್ತೇನೆ. ಇಂತಹ ಇನ್ನೂ ಅನೇಕ ಧರ್ಮ ಕೃತಿಗಳನ್ನು ರಚಿಸಲು ಅವಕಾಶವಿದೆ.

ಬಸವಧರ್ಮದ ಸಂಸ್ಥಾಪಕರು 12ನೇ ಶತಮಾನದ ವಚನಚಳವಳಿಯ ನೇತಾರ ಬಸವಣ್ಣನವರೇ ಆಗಿದ್ದಾರೆ. ಇದಕ್ಕೆ ಲಿಂಗಾಯತ ಧರ್ಮವೆಂದು ಕರೆಯುತ್ತಾರೆ. ಬಸವಣ್ಣನವರೇ ಈ ಧರ್ಮದ ಸಂಸ್ಥಾಪಕರಾಗಿದ್ದರೂ ಅನುಭವ ಮಂಟಪದಲ್ಲಿ ನಡೆದ ಚರ್ಚೆಯ ಮೂಲಕ ಈ ಧರ್ಮ ಬೆಳೆದು ನಿಂತಿದೆ. ಅನುಭವ ಮಂಟಪದ ಅನೇಕ ಶರಣರು ಈ ಧರ್ಮದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಬಸವಣ್ಣನವರೇ ಈ ಧರ್ಮದ ಸಂಸ್ಥಾಪಕರಾದರೂ, ಇದು ಜನರಿಂದ, ಜನರಿಗಾಗಿ, ಜನರೇ ಕಟ್ಟಿಕೊಂಡ ವಿಶಿಷ್ಟ ಧರ್ಮವಾಗಿದೆ. ಬಸವಣ್ಣನವರ ಮೂಲಕ ಹುಟ್ಟಿ, ಅನುಭವ ಮಂಟಪದ ಚರ್ಚೆಯ ಮೂಲಕ ಬೆಳೆದು ಇಂದಿಗೂ ಚರ್ಚಾಸ್ಪದವಾಗಿರುವ ಬಸವಧರ್ಮವು ವಿಶಿಷ್ಟ ಧರ್ಮವಾಗಿದೆ.

ಬಸವಣ್ಣನವರು ಹೊಸಧರ್ಮ ಸ್ಥಾಪಿಸಬೇಕಾದರೆ, ಅನೇಕ ಬಲವಾದ ಕಾರಣಗಳಿದ್ದವು.12ನೇ ಶತಮಾನದ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಕೋಲಾಹಲವೇ ನಡೆದಿತ್ತು. ಕೋಮು ಸೌಹಾರ್ದತೆಯ ಬದಲು ಕೋಮು ಗಲಭೆಗಳು ನಡೆದಿದ್ದವು. ಬ್ರಹ್ಮಶಿವನ “ಸಮಯ ಪರೀಕ್ಷೆ” ಕೃತಿಯಲ್ಲಿ ಈ ಬಗೆಗೆ ವಿವರಗಳಿವೆ. ಬೌದ್ಧಧರ್ಮವು 12ನೇ ಶತಮಾನದ ಹೊತ್ತಿಗೆ ಈ ದೇಶದಿಂದ ಹೊರಟು ಹೋಗಿತ್ತು. ಜೈನಧರ್ಮವು ನಿಸ್ತೇಜವಾಗಿತ್ತು. ವೈದಿಕ ಧರ್ಮದ ಹಾವಳಿ ಅತಿಯಾಗಿತ್ತು. ಶೈವಧರ್ಮ, ಜೈನಧರ್ಮ ಮತ್ತು ಬೌದ್ಧಧರ್ಮ ಈ ದೇಶದ ಪ್ರಾಚೀನ ಧರ್ಮಗಳು. ಈ ಮೂರು ಧರ್ಮಗಳು ವೈದಿಕ ಧರ್ಮದೊಂದಿಗೆ ಸದಾ ಮುಖಾಮುಖಿಯಾಗಿರುತ್ತಿದ್ದವು. ಚಾರ್ವಾಕ ಧರ್ಮದ ಆಕರಗ್ರಂಥಗಳನ್ನು ಪುರೋಹಿತಶಾಹಿಗಳು ತುಂಬ ಹಿಂದೆಯೇ ಸುಟ್ಟುಹಾಕಿದ್ದರು. 12ನೇ ಶತಮಾನದ ಕಾಲಘಟ್ಟದಲ್ಲಿ ಕನ್ನಡ ನಾಡಿನಲ್ಲಿ ಯಾವ ಅವೈದಿಕ ಧರ್ಮವೂ ಜೀವಂತವಾಗಿರಲಿಲ್ಲ. ಶಂಕರಾಚಾರ್ಯರ ಅದ್ವೈತಮತದ ಪ್ರಭಾವವೂ ಕಡಿಮೆಯಾಗಿತ್ತು. ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಮತವು ಶರಣರು ಹುಟ್ಟುವ ಐವತ್ತು ವರ್ಷಗಳ ಮೊದಲೇ ಹುಟ್ಟಿಕೊಂಡಿತ್ತು. ಆದರೂ ವಿಶಿಷ್ಟಾದ್ವೈತ ಮತದ ಪ್ರಭಾವ ಕನ್ನಡನಾಡಿನಲ್ಲಿ ಆಗಿರಲಿಲ್ಲ. ಶೈವಧರ್ಮ, ಚಾರ್ವಾಕ ಧರ್ಮ, ಬೌದ್ಧಧರ್ಮ, ಜೈನಧರ್ಮಗಳನ್ನು ಅವೈದಿಕ ಧರ್ಮಗಳೆಂದು ಕರೆಯಲಾಗುತ್ತದೆ. ಈ ಅವೈದಿಕ ಧರ್ಮಗಳು ಕ್ರಿಯಾಶೀಲವಾಗಿದ್ದರೆ, ಬಸವಣ್ಣನವರು ಹೊಸ ಧರ್ಮವನ್ನು ಸ್ಥಾಪಿಸುವ ಅಗತ್ಯವೇ ಇರಲಿಲ್ಲ. ಚಾರ್ವಾಕ ಧರ್ಮ, ಬೌದ್ಧಧರ್ಮ, ಜೈನಧರ್ಮಗಳು ನಿಸ್ತೇಜವಾಗಿದ್ದರೆ, ಶೈವಧರ್ಮವು ನಾಲ್ಕು ಗುಂಪುಗಳಾಗಿ ಒಡೆದುಹೋಗಿತ್ತು. ಪಾಶುಪತ, ಕಾಪಾಲಿಕ, ಕಾಳಾಮುಖ, ಲಕುಲೀಶ ಈ ನಾಲ್ಕು ಗುಂಪುಗಳಲ್ಲಿ ಹಂಚಿಹೋಗಿದ್ದ ಶೈವಧರ್ಮವು ಛಿದ್ರಛಿದ್ರವಾಗಿತ್ತು. ಇವುಗಳಲ್ಲಿ ಕೆಲವು ಗುಂಪುಗಳು ಹಿಂಸೆಯ ಮಾರ್ಗ ಹಿಡಿದಿದ್ದವು, ವಾಮಾಚಾರಗಳನ್ನು ಮಾಡುತ್ತಿದ್ದವು. 12ನೇ ಶತಮಾನದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಗೊಂದಲಮಯ ವಾತಾವರಣವಿತ್ತು. ಬಸವಣ್ಣನವರು ಇದನ್ನೆಲ್ಲ ಅಧ್ಯಯನ ಮಾಡಿ “ಲಿಂಗಾಯತ” ಎಂಬ ಹೊಸಧರ್ಮವನ್ನು ಸ್ಥಾಪಿಸಿದರು. ತದನಂತರದಲ್ಲಿ ಈ ಧರ್ಮವನ್ನು “ಬಸವಧರ್ಮ” “ಶರಣಧರ್ಮ” ಎಂದು ಕರೆಯಲಾಯಿತು.

13-14ನೇ ಶತಮಾನದಲ್ಲಿ “ಸಿದ್ಧಾಂತ ಶಿಖಾಮಣಿ” ಕೃತಿ ಹುಟ್ಟಿಕೊಂಡಿತು. 16ನೇ ಶತಮಾನದ ಹೊತ್ತಿಗೆ ಪಂಚಜಗದ್ಗುರುಗಳು ಬಂದರು. ಇವರು ಪ್ರಾರಂಭದಲ್ಲಿ ಲಿಂಗಿಬ್ರಾಹ್ಮಣರಾಗಿದ್ದರು. ನಂತರದಲ್ಲಿ ಇಷ್ಟಲಿಂಗ ಮತ್ತು ಸ್ಥಾವರಲಿಂಗ ಎರಡನ್ನೂ ಪೂಜಿಸತೊಡಗಿದರು. ಶರಣರ ಕ್ರಾಂತಿಯ ನಂತರ, ಶರಣರ ಅನುಯಾಯಿಗಳು ಉಳಿಯಲಿಲ್ಲ. ಅದೊಂದು ಹತ್ಯಾಕಾಂಡವಾಗಿತ್ತು. ಹೀಗಾಗಿ ಶರಣರು ಕಟ್ಟಿದ ಲಿಂಗಾಯತಧರ್ಮವು ಶರಣರೊಂದಿಗೆ ಹೊರಟು ಹೋಗಿತ್ತು. ಆಗ ವೀರಶೈವ ಹೆಸರಿನಲ್ಲಿ ಈ ಧರ್ಮವನ್ನು ಕರೆಯತೊಡಗಿದರು. ಪಂಚಜಗದ್ಗುರುಗಳು ಬಸವಣ್ಣನನ್ನು ಧರ್ಮಸಂಸ್ಥಾಪಕನೆಂದು ಒಪ್ಪಿಕೊಳ್ಳಲಿಲ್ಲ. ವಿರಕ್ತರು ಬಸವಣ್ಣನೇ ಧರ್ಮ ಸಂಸ್ಥಾಪಕನೆಂದು ಹೇಳಿದರು. ಹೀಗಾಗಿ 16ನೇ ಶತಮಾನದಿಂದ ಇಲ್ಲಿಯವರೆಗೆ ಗುರು-ವಿರಕ್ತರ ಜಗಳ ನಡೆದೇ ಇದೆ. ಈ ಗುರು (ಪಂಚಜಗದ್ಗುರುಗಳು) - ವಿರಕ್ತರ (ನೂರೊಂದು ವಿರಕ್ತಮಠಗಳ ಸ್ವಾಮಿಗಳು) ಜಗಳದಲ್ಲಿ ಲಿಂಗಾಯತ - ವೀರಶೈವವೆಂಬ ಭೇದ ಹುಟ್ಟಿ, ಇಪ್ಪತ್ತೊಂದನೇ ಶತಮಾನದವರೆಗೂ ಆ ಜಗಳ ಮುಂದುವರಿದಿದೆ.

ಪಂಚಜಗದ್ಗುರುಗಳು ಮತ್ತು ಅವರ ಅನುಯಾಯಿಗಳು ವೀರಶೈವಧರ್ಮ ಎಂಬ ಹೆಸರನ್ನು ಇತ್ತೀಚೆಗೆ ಪ್ರಚುರ ಪಡಿಸಿದರು. ಮೊದಲಿನಿಂದ ಇದ್ದದ್ದು ಲಿಂಗಾಯತಧರ್ಮ. ಇದಕ್ಕೆ ಅನೇಕ ಆಧಾರಗಳಿವೆ. ಕೋರ್ಟ್ ಆದೇಶಗಳಲ್ಲಿ, ಹಿಂದಿನ ಗೆಜಿಟಿಯರ್‍ಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳಿವೆ. ವೀರಶೈವವೆಂಬುದು ಸ್ವತಂತ್ರ ಧರ್ಮವಲ್ಲ. ಅದಕ್ಕೆ ಪ್ರತ್ಯೇಕ ಧಾರ್ಮಿಕ ಸಿದ್ಧಾಂತಗಳಿಲ್ಲ. ವೀರಶೈವವೂ ಕೂಡ ಅಷ್ಟಾವರಣ -ಪಂಚಾಚಾರ- ಷಟ್‍ಸ್ಥಲಗಳಂತಹ ಧಾರ್ಮಿಕ ಸಿದ್ಧಾಂತಗಳನ್ನೇ ಒಪ್ಪಿಕೊಂಡಿದೆ. ಗುರುವಿರಕ್ತರ ಈ ಜಗಳ ಇಂದು ರಾಜಕಾರಣದ ಮೂಲಕ ಬೆಳೆದು ನಿಂತಿದೆ. ಒಂದು ರಾಷ್ಟ್ರೀಯ ರಾಜಕೀಯ ಪಕ್ಷದ ಸರಕಾರವು ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೆಂದು ಕೇಂದ್ರಸರಕಾರಕ್ಕೆ ಶಿಫಾರಸ್ ಮಾಡಿದರೆ, ಮತ್ತೊಂದು ರಾಷ್ಟ್ರೀಯ ರಾಜಕೀಯ ಪಕ್ಷವು ಇದನ್ನು ಸ್ವತಂತ್ರಧರ್ಮವೆಂದು ಸ್ವೀಕರಿಸಲಿಲ್ಲ.

ಧಾರ್ಮಿಕ ಜಗಳಗಳ ಮೂಲಕ ಹುಟ್ಟಿಕೊಂಡ ಈ ಸಂಘರ್ಷ ಇಂದು ರಾಷ್ಟ್ರ ರಾಜಕೀಯ ಪಕ್ಷಗಳೊಂದಿಗೆ ತಳಕು ಹಾಕುಕೊಂಡಿದೆ. ಹಾಗೆ ನೋಡಿದರೆ ಇವು ಒಂದೇ ಧರ್ಮಕ್ಕಿರುವ ಎರಡು ಹೆಸರುಗಳೇ ಹೊರತು ಇವು ಪ್ರತ್ಯೇಕ ಧರ್ಮಗಳಲ್ಲ. ಬ್ರಾಹ್ಮಣ ಗ್ರಾಂಥಿಕ ಪದ, ಹಾರುವ ಗ್ರಾಮ್ಯ ಪದ. ಬ್ರಾಹ್ಮಣರನ್ನು ಬ್ರಾಹ್ಮಣರೆಂದು ವಿದ್ಯಾವಂತ ಜನ ಕರೆದರೆ, ಹಳ್ಳಿಯ ಜನ ಹಾರುವರೆಂದು ಕರೆಯುತ್ತಾರೆ. ಬ್ರಾಹ್ಮಣ-ಹಾರುವ ಬೇರೆ ಬೇರೆ ಪದಗಳಾಗಿದ್ದರೂ ಅವುಗಳ ಅರ್ಥ ಒಂದೇಯಾಗಿದೆ. ಅದೇ ರೀತಿ ಲಿಂಗಾಯತ-ವೀರಶೈವ ಎಂಬ ಎರಡು ಪದಗಳಿದ್ದರೂ ಅವುಗಳ ಅರ್ಥ ಒಂದೇಯಾಗಿದೆ. ಈ ಸತ್ಯವನ್ನು ಸಾಮಾನ್ಯ ಭಕ್ತರು ಸರಿಯಾಗಿ ತಿಳಿದುಕೊಂಡರೆ ಇಲ್ಲಿ ಜಗಳವೇ ಇರುವುದಿಲ್ಲ. ಮತ ರಾಜಕೀಯದ ಲಾಭ ಪಡೆಯುವುದಕ್ಕಾಗಿ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮತ-ಧರ್ಮಗಳ ನಡುವೆ ಜಗಳವನ್ನು ಹಚ್ಚುತ್ತಲೇ ಇರುತ್ತಾರೆ. ಇದನ್ನು ಜನಸಾಮಾನ್ಯರು ಸರಿಯಾಗಿ ತಿಳಿದುಕೊಂಡರೆ ಜಗಳ-ಕೋಮು ಗಲಭೆಗಳಿರುವುದೇ ಇಲ್ಲ. ಧರ್ಮವೆಂಬುದು ಜನಸಮುದಾಯವನ್ನು ಕೂಡಿಸಬೇಕೇ ಹೊರತು, ಅಗಲಿಸುವುದಲ್ಲ. ಧರ್ಮದ ಹೆಸರಿನಲ್ಲಿ ಜಗಳ, ಕೋರ್ಟು-ಕಚೇರಿ ತಿರುಗುವುದೆಂದರೆ, ಧರ್ಮವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ಯಾವುದೇ ಒಂದು ಧರ್ಮವು, ಸ್ವತಂತ್ರ ಧರ್ಮವೆಂದು ಅಂಗೀಕಾರವಾಗಬೇಕಾದರೆ, ಧರ್ಮದ ಸಿದ್ಧಾಂತಗಳು, ಆಚರಣೆಗಳು ಉಳಿದ ಧರ್ಮಗಳಿಗಿಂತ ಭಿನ್ನವಾಗಿರಬೇಕು. ಆ ಧರ್ಮಕ್ಕೊಂದು ದೀರ್ಘವಾದ ಪರಂಪರೆ ಇರಬೇಕು. ಆ ಧರ್ಮಕ್ಕೆ ಧರ್ಮಗ್ರಂಥ, ಧರ್ಮಸಂಸ್ಥಾಪಕ ಇರಬೇಕು. ಇದೇ ನಿಯಮಗಳನ್ನು ಮುಂದಿಟ್ಟುಕೊಂಡು, ಜೈನಧರ್ಮವು 2014ರಲ್ಲಿ ಸ್ವತಂತ್ರ ಧರ್ಮವಾಯಿತು. ಲಿಂಗಾಯತ ಧರ್ಮವು ಸ್ವತಂತ್ರಧರ್ಮವೆಂದು ಗುರುತಿಸಿಕೊಳ್ಳಲು ಎಲ್ಲ ಅರ್ಹತೆಯನ್ನೂ ಪಡೆದಿದೆ. ಆದರೆ ರಾಜಕೀಯ ಸ್ವಾರ್ಥದಿಂದ, ಈ ಧರ್ಮದ ಅನುಯಾಯಿಗಳ ಕಚ್ಚಾಟದಿಂದ ಸ್ವತಂತ್ರ ಧರ್ಮದ ಕನಸು ನನಸಾಗಿಯೇ ಉಳಿದಿದೆ. ಈ ಕೃತಿಯಲ್ಲಿ ಬಸವಧರ್ಮದ ತಾತ್ವಿಕಸಿದ್ಧಾಂತಗಳಾದ ಅಷ್ಟಾವರಣ, ಪಂಚಾಚಾರ, ಷಟ್‍ಸ್ಥಲಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಈ ಧಾರ್ಮಿಕ ಸಿದ್ಧಾಂತಗಳನ್ನು ಬಸವಾದಿ ಶರಣರೇ ಹುಟ್ಟುಹಾಕಿದರೆಂದು ಸ್ಪಷ್ಟಪಡಿಸಲಾಗಿದೆ.

ಧರ್ಮಗ್ರಂಥಗಳನ್ನು ರಚಿಸಬೇಕಾದರೆ ತುಂಬ ಶ್ರಮ ಪಡಬೇಕಾಗುತ್ತದೆ. ಬೇರೆ ಬೇರೆ ಆಕರಗಳ ಮೂಲಕ ಆ ಧರ್ಮದ ಸಿದ್ಧಾಂತಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಲಿಂಗಾಯತ ಧರ್ಮ ಅಥವಾ ಬಸವಧರ್ಮವು 12ನೇ ಶತಮಾನದಲ್ಲಿ ಹುಟ್ಟಿದ್ದೆಂದು ಹೇಳಲಿಕ್ಕೆ ಅನೇಕ ಆಧಾರಗಳಿವೆ. ಅಂತಹ ಆಧಾರಗಳು ಆಚರಣೆಗಳ ಮೂಲಕ ಕಾಣಿಸಿಕೊಳ್ಳುತ್ತವೆ. ಜನಸಮುದಾಯದಲ್ಲಿರುವ ಆಚರಣೆಗಳ ಮೂಲಕ ಅವುಗಳನ್ನು ಗುರುತಿಸಬೇಕಾಗುತ್ತದೆ. ಅಷ್ಟಾವರಣ - ಪಂಚಾಚಾರ - ಷಟ್‍ಸ್ಥಲ ಸಿದ್ಧಾಂತಗಳು ಇಂದಿಗೂ ಲಿಂಗಾಯತ ಧರ್ಮೀಯರ ಆಚರಣೆಗಳಲ್ಲಿವೆ. ಬಸವಣ್ಣನವರೇ ಧರ್ಮಸಂಸ್ಥಾಪಕರೆನ್ನಲು ಅನೇಕ ಆಧಾರಗಳಿವೆ. ಅನೇಕ ವಚನಕಾರರು ಬಸವಣ್ಣನೇ ಧರ್ಮಸ್ಥಾಪಕನೆಂದು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಶರಣರ ವಚನಗಳ ಮೂಲಕವೇ ಇಲ್ಲಿ ಬಸವಧರ್ಮವನ್ನು ಕಟ್ಟಿಕೊಳ್ಳಲಾಗಿದೆ. ಶರಣರ ವಚನಗಳು, ಅನುಭವ ಮಂಟಪದ ಚರ್ಚೆಯ ಮೂಲಕ ಹುಟ್ಟಿದವುಗಳಾಗಿವೆ. ಹೀಗಾಗಿ ಇವು ಅಧಿಕೃತ ದಾಖಲೆಗಳಾಗುತ್ತವೆ. ಬಸವಾದಿ ಶರಣರ ನಂತರ ಹುಟ್ಟಿಕೊಂಡ ಅನೇಕ ಕವಿಗಳಲ್ಲಿ ಈ ಧರ್ಮದ ಪ್ರಸ್ತಾಪವಿದೆ. ಹರಿಹರ, ರಾಘವಾಂಕ, ಚಾಮರಸ, ಭೀಮಕವಿ, ಲಕ್ಕಣ ದಂಡೇಶ ಈ ಮೊದಲಾದ ಕವಿಗಳ ಕೃತಿಗಳಲ್ಲಿ ಲಿಂಗಾಯತ ಧರ್ಮದ ಪ್ರಸ್ತಾಪವಿದೆ. ಈ ಎಲ್ಲ ಕೃತಿಗಳ ಅಧ್ಯಯನದ ಮೂಲಕವೂ ಧಾರ್ಮಿಕ ಕೃತಿಯೊಂದನ್ನು ಕಟ್ಟಿಕೊಳ್ಳಬಹುದಾಗಿದೆ. ಈ ಎರಡು ಶತಮಾನಗಳ ಅವಧಿಯಲ್ಲಿ ನಡೆದ ಲಿಂಗಾಯತ - ವೀರಶೈವಗಳ ಜಗಳಗಳಲ್ಲಿ ಬಂದ ಕೋರ್ಟ್ ತೀರ್ಪುಗಳು, ಸರಕಾರದ ಗೆಜಿಟಿಯರ್‍ಗಳು, ಅಂದಿನ ಪತ್ರಗಳು ಮತ್ತೊಂದು ರೀತಿಯ ದಾಖಲೆಗಳಾಗಿವೆ. ಈ ಎಲ್ಲ ದಾಖಲೆಗಳಲ್ಲಿಯೂ ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವೆಂದು ದಾಖಲಾಗಿದೆ. ಹೀಗೆ ಬೇರೆ ಬೇರೆ ದಾಖಲೆಗಳನ್ನಿಟ್ಟುಕೊಂಡು ಒಂದು ಧಾರ್ಮಿಕ ಕೃತಿಯನ್ನು ರಚಿಸಲು ಸಾಧ್ಯವಿದೆ. ನಾನು ಶರಣರ ವಚನಗಳನ್ನೇ ಮುಖ್ಯ ಆಧಾರವನ್ನಾಗಿಟ್ಟುಕೊಂಡು ಈ ಗ್ರಂಥ ರಚಿಸಿದ್ದೇನೆ. ಈ ಕಾರಣಕ್ಕಾಗಿಯೇ ಈ ಕೃತಿಗೆ “ವಚನಗಳಲ್ಲಿ ಬಸವಧರ್ಮ” ಎಂದು ಹೆಸರಿಡಲಾಗಿದೆ.

ಅಂದಿನ ಮತ್ತು ಇಂದಿನ ಧಾರ್ಮಿಕ ಸಂಘಟನೆಗಳ ಮೂಲಕವೂ ಒಂದು ಧಾರ್ಮಿಕ ಕೃತಿಯನ್ನು ಕಟ್ಟಿಕೊಳ್ಳಬಹುದಾಗಿದೆ. 12ನೇ ಶತಮಾನದ ಶರಣರು ಧರ್ಮ ಸಂಘಟನೆ ಮಾಡುತ್ತಿದ್ದರೆಂಬುದಕ್ಕೆ ವಚನಗಳಲ್ಲಿಯೇ ಆಧಾರಗಳಿವೆ. ಇನ್ನು ಈ ಒಂದು ಶತಮಾನದಲ್ಲಿ ಲಿಂಗಾಯತ ಧರ್ಮದ ಜಾಗೃತಿಗಾಗಿ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಹಿಂದಿನ ಮತ್ತು ಇಂದಿನ ಧಾರ್ಮಿಕ ಸಂಘಟನೆಗಳು ಬಸವಧರ್ಮವನ್ನು ಹೇಗೆ ಜೀವಂತವಾಗಿಟ್ಟಿವೆಯೆಂಬುದು ಕುತೂಹಲಕಾರಿ ಸಂಗತಿಯಾಗುತ್ತದೆ. ಕೋರ್ಟ್ ತೀರ್ಪುಗಳು, ಗೆಜಿಟಿಯರ್‍ಗಳು, ಸರಕಾರಿ ದಾಖಲೆಗಳು ಇವೆಲ್ಲವುಗಳನ್ನು ದೀರ್ಘವಾಗಿ ಪರಿಶೀಲಿಸಿ ಡಾ. ಎಸ್.ಎಂ. ಜಾಮದಾರ ಅವರು ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವೆಂದು ತಮ್ಮ ಕೃತಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರು ಸಂಗ್ರಹಿಸಿರುವ ದಾಖಲೆಗಳು ಮುಂದೆ ನ್ಯಾಯಾಲಯದ ಮೆಟ್ಟಿಲೇರಲು ಸಹಾಯಕವಾಗಿವೆ. ಇನ್ನು ನಾನು ಈ ಕೃತಿಯಲ್ಲಿ ಬಸವಧರ್ಮದ ಪರಿಕಲ್ಪನೆಗಳನ್ನು ಮೊದಲ ಬಾರಿಗೆ ಸ್ಪಷ್ಟಪಡಿಸಿದ್ದೇನೆ. ಶರಣರ ಧರ್ಮ, ದೇವರು, ದೇವಾಲಯಗಳ ಪರಿಕಲ್ಪನೆಗಳು, ಉಳಿದ ಧರ್ಮೀಯರ ಧರ್ಮ, ದೇವರು, ದೇವಾಲಯಗಳಿಗಿಂತ ಹೇಗೆ ಭಿನ್ನವಾಗಿವೆಯೆಂಬುದನ್ನು ವಚನಗಳ ಆಧಾರದಿಂದಲೇ ವಿವರಿಸಿ ಹೇಳಿದ್ದೇನೆ. ಶರಣರ ಧಾರ್ಮಿಕ ಸಿದ್ಧಾಂತಗಳಾದ ಅಷ್ಟಾವರಣ, ಪಂಚಾಚಾರ, ಷಟ್‍ಸ್ಥಲಗಳನ್ನು ಬಸವಾದಿ ಶರಣರೇ ಪ್ರಥಮ ಬಾರಿಗೆ ಕಟ್ಟಿಕೊಟ್ಟರೆಂದು ಉದಾಹರಣೆಗಳ ಮೂಲಕ ತಿಳಿಸಿದ್ದೇನೆ. ಶರಣರ ಸಾಮಾಜಿಕ ಸಿದ್ಧಾಂತಗಳ ಬಗೆಗೆ ವಿವರವಾಗಿ ಹೇಳಿದ್ದೇನೆ.

ಭಾರತದ ಇತರ ಧರ್ಮಗಳೆಲ್ಲ ತತ್ವ, ನೀತಿ, ಆದರ್ಶಗಳ ಬಗೆಗೆ ಮಾತನಾಡಿವೆಯೇ, ಹೊರತು, ಅವು ಎಂದೂ ಚಳವಳಿ ಮಾಡಿಲ್ಲ, ಹೀಗಾಗಿ ಧಾರ್ಮಿಕ ಕ್ಷೇತ್ರದಲ್ಲಿ ರಕ್ತಕ್ರಾಂತಿಯಾಗಿಲ್ಲ. ಆದರೆ ಬಸವಧರ್ಮ ಚಳವಳಿಯ ಧರ್ಮವಾದ್ದರಿಂದ ಇಲ್ಲಿ ರಕ್ತಕ್ರಾಂತಿಯಾಗಿದೆ, ಹತ್ಯಾಕಾಂಡವಾಗಿದೆ. ಶರಣರು ಧಾರ್ಮಿಕ ಕ್ಷೇತ್ರಕ್ಕೆ ಕೊಟ್ಟ ಮಹತ್ವವನ್ನು ಸಾಮಾಜಿಕ - ಆರ್ಥಿಕ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಹೀಗಾಗಿ ಇವರು ಕಟ್ಟಿದ ಧರ್ಮದಲ್ಲಿ ಧಾರ್ಮಿಕದಷ್ಟೇ ಮಹತ್ವದ ಸ್ಥಾನವನ್ನು ಸಾಮಾಜಿಕ ಕ್ಷೇತ್ರವೂ ಪಡೆದಿದೆ. ಶರಣರ ಧಾರ್ಮಿಕ ಸಿದ್ಧಾಂತಗಳ ಜತೆಗೆ, ಅವರ ಸಾಮಾಜಿಕ ಸಿದ್ಧಾಂತಗಳೂ ಮುಖ್ಯವಾಗುತ್ತವೆ. ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯ ಇವು ಮೂರೂ ಶರಣರ ಸಾಮಾಜಿಕ ಸಿದ್ದಾಂತಗಳಾಗಿವೆಯೆಂದು ಇಲ್ಲಿ ಮೊದಲ ಬಾರಿಗೆ, ಆ ಸಾಮಾಜಿಕ ಸಿದ್ಧಾಂತಗಳ ಬಗೆಗೆ ವಿವರವಾಗಿ ಚರ್ಚಿಸಿದ್ದೇನೆ.

ಡಾ. ಜಾಮದಾರ ಅವರ ಕೃತಿ ಹಾಗೂ ನನ್ನ ಈ ಕೃತಿಯನ್ನು ಹೊರತು ಪಡಿಸಿ ಇನ್ನೂ ಕೆಲವು ಧಾರ್ಮಿಕ ಕೃತಿಗಳನ್ನು ರಚಿಸಲು ಸಾಧ್ಯವಿದೆ. “ಲಿಂಗಾಯತ ಕವಿಗಳಲ್ಲಿ ಕಾಣಿಸಿಕೊಂಡ ಬಸವಧರ್ಮ” ಒಂದು ಕೃತಿಯಾದರೆ, “ಸಂಘಟನೆಗಳ ಮೂಲಕ ಬೆಳೆದು ಬಂದ ಬಸವಧರ್ಮ” ಎಂಬುದು ಮತ್ತೊಂದು ಕೃತಿಯಾಗಬಹುದಾಗಿದೆ. ಇಂತಹ ಹೊಸ ಹೊಸ ಧಾರ್ಮಿಕ ಕೃತಿಗಳನ್ನು ಯುವ ಸಂಶೋಧಕರು ಬರೆಯಬೇಕಾಗಿದೆ. “ಶೂನ್ಯಸಂಪಾದನೆಗಳಲ್ಲಿ ಪ್ರತಿಪಾದಿತವಾಗಿರುವ ಬಸವಧರ್ಮವು”, ಮತ್ತೊಂದು ರೀತಿಯದ್ದಾಗಿದೆ. ಸಿದ್ಧರಾಮನ ಲಿಂಗದೀಕ್ಷೆ ಪ್ರಕರಣ ಬಿಟ್ಟ ಕಾರಣಕ್ಕಾಗಿಯೇ ಮತ್ತೊಂದು ಶೂನ್ಯಸಂಪಾದನೆ ಹುಟ್ಟಿಕೊಂಡಿದೆ. ನಾಲ್ಕು ಶೂನ್ಯಸಂಪಾದನೆಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಬೆಳವಣಿಗೆಯಿದೆ. ಪ್ರಾರಂಭಿಕ ಶೂನ್ಯಸಂಪಾದನೆಗಳಲ್ಲಿ ಕಾಣಿಸದ ಇತರ ವಚನಕಾರರ ಪ್ರಸಂಗಗಳು ನಂತರದ ಶೂನ್ಯಸಂಪಾದನೆಗಳಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ಶೂನ್ಯ ಸಂಪಾದನೆಗಳಲ್ಲಿ ಕಾಣಿಸಿಕೊಳ್ಳುವ ಬಸವಧರ್ಮದ ಕುರಿತು ಪ್ರತ್ಯೇಕ ಚರ್ಚೆ ಮಾಡಬೇಕಾಗುತ್ತದೆ.

ಬಸವಧರ್ಮಕ್ಕೆ ಸಂಬಂಧಿಸಿದಂತೆ ಹರಿಹರನ ದೃಷ್ಟಿಕೋನ ಒಂದು ರೀತಿಯದ್ದಾದರೆ, ಚಾಮರಸನ ದೃಷ್ಟಿಕೋನ ಮತ್ತೊಂದು ರೀತಿಯದ್ದಾಗಿದೆ. ಮಾದರ ಚೆನ್ನಯ್ಯ ಶ್ವಪಚಯ್ಯನಂತಹ ದಲಿತ ವಚನಕಾರರ ಬಗೆಗೆ ಹರಿಹರ ಕವಿ ಭಕ್ತಿಯಿಂದ ರಗಳೆಕಾವ್ಯ ರಚಿಸಿದ್ದಾನೆ. 12ನೇ ಶತಮಾನದ ಶರಣರ ಸಿದ್ಧಾಂತಕ್ಕೆ ಹರಿಹರ ಸಮೀಪವಾದರೆ, ಚಾಮರಸ ಶರಣರ ಸಿದ್ಧಾಂತಗಳನ್ನು ಮತ್ತೊಂದು ರೀತಿಯಲ್ಲಿ ಪ್ರತಿಪಾದಿಸುತ್ತಾನೆ. “ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ”ಯೆಂದು ಅಲ್ಲಮಪ್ರಭು ಹೇಳಿದ್ದರೆ, ಚಾಮರಸನು ತನ್ನ “ಪ್ರಭುಲಿಂಗಲೀಲೆ” ಕೃತಿಯಲ್ಲಿ ಅಲ್ಲಮನನ್ನು ಮಾಯಾ ಕೋಲಾಹಲದ ಪಾತ್ರದಂತೆ ಚಿತ್ರಿಸಿದ್ದಾನೆ. ಹೆಣ್ಣು ಮಾಯೆಯೆಂದು ತಿಳಿದಿದ್ದ ಚಾಮರಸನು, ಅಲ್ಲಮನು ಮಾಯೆಯನ್ನು ಸೋಲಿಸಿದನೆಂದು ಹೇಳುತ್ತಾನೆ. ಚಾಮರಸ ನೂರೊಂದು ವಿರಕ್ತದಲ್ಲಿ ಒಬ್ಬನಾಗಿದ್ದ. ನೂರೊಂದು ವಿರಕ್ತರಲ್ಲಿ ಶೈವಧರ್ಮದ ಅನುಯಾಯಿಗಳೂ ಇದ್ದರು. ಹೀಗೆ ಲಿಂಗಾಯತ ಕವಿಗಳಲ್ಲಿಯೇ ಬಸವಧರ್ಮದ ಸಿದ್ಧಾಂತಗಳ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಈ ಎಲ್ಲ ಕವಿಗಳ ಕೃತಿಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿ ಲಿಂಗಾಯತ ಧರ್ಮವನ್ನು ಮತ್ತೊಂದು ರೀತಿಯಲ್ಲಿ ಕಟ್ಟಿಕೊಳ್ಳಬಹುದಾಗಿದೆ.

ಧಾರ್ಮಿಕ ಸಂಘಟನೆಗಳ ಮೂಲಕ ಈ ಧರ್ಮವನ್ನು ಹೇಗೆ ಕಟ್ಟಿಕೊಳ್ಳಬೇಕೆಂಬುದಕ್ಕೆ ಕೆಲವು ದಾಖಲೆಗಳು ದೊರೆಯುತ್ತವೆ. ಅಂತಹ ದಾಖಲೆಗಳನ್ನು ಜೋಡಿಸಿಕೊಂಡು ಧಾರ್ಮಿಕ ಕೃತಿಗಳನ್ನು ರಚಿಸಬಹುದಾಗಿದೆ. 12ನೇ ಶತಮಾನದಲ್ಲಿ ಈ ಧರ್ಮವನ್ನು ಸ್ಥಾಪಿಸಿದ ಬಸವಣ್ಣನವರು, ಅದನ್ನು ಆಚರಣೆಗೆ ತರಲು ಕೆಲವು ಯೋಜನೆಗಳನ್ನವರು ಹಾಕಿಕೊಂಡಿದ್ದರು. ಈ ವಿಷಯವನ್ನು ಅಲ್ಲಮಪ್ರಭುಗಳ ವಚನದಲ್ಲಿ ಮತ್ತು ಇತರ ವಚನಕಾರರಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

“ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ,
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ
ಕೈಲಾಸವ ಮಾಡಿ
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು
ಅಮರಗಣಂಗಳೆಂದು ಹೆಸರಿಟ್ಟು ಕರೆದು,
ಅಗಣಿತ ಗಣಂಗಳೆಲ್ಲರ ಹಿಡಿತಂದು
ಅಸಂಖ್ಯಾತರೆಂಬ ಹೆಸರಿಟ್ಟು ಕರೆದು,
ಜಗವರಿಯಲು ಶಿವಲೋಕವೆರಡಕ್ಕೆ ನಿಚ್ಚಣಿಗೆಯಾದನು.
ಆ ಶಿವಶರಣನ ಮೆನಯೊಳಗೆ ಶಿವಗಣಂಗಳ ತಿಂಥಿಣಿಯ ಕಂಡು
ಎನ್ನ ಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ!
ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ
ದಾಸೋಹದ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ”
- ಅಲ್ಲಮಪ್ರಭು (ಸ.ವ.ಸಂ. 2, ಪ: 1454)

ಅಲ್ಲಮಪ್ರಭುಗಳ ಈ ವಚನದ ಮೂಲಕ ಬಸವಣ್ಣನವರು ಕೇವಲ ಧರ್ಮಸ್ಥಾಪಕರು ಮಾತ್ರವಾಗಿರಲಿಲ್ಲ. ಅವರು ಧರ್ಮ ಸಂಘಟಕರೂ ಆಗಿದ್ದರೆಂದು ಸ್ಪಷ್ಟವಾಗುತ್ತದೆ. ಬಸವಣ್ಣನವರು ಕೇವಲ ಲಿಂಗಾಯತ ಧರ್ಮವನ್ನು ಮಾತ್ರ ಸ್ಥಾಪಿಸಲಿಲ್ಲ. ಅದರೊಂದಿಗೆ ಕಲ್ಯಾಣ ಪಟ್ಟಣವನ್ನು ಕೈಲಾಸ ಮಾಡಿದರೆಂದು ಪ್ರಭು ಹೇಳಿದ್ದಾರೆ. ಮರ್ತ್ಯಲೋಕ - ಶಿವಲೋಕವೆರಡಕ್ಕೆ ನಿಚ್ಚಣ ಗೆಯಾದರೆಂಬ ಮಾತು ಮಹತ್ವದ್ದಾಗಿದೆ. ಇಹ-ಪರಗಳನ್ನು ಕೂಡಿಸುವ, ಜೀವ-ದೇವನಾಗುವುದನ್ನು ಹೇಳಿಕೊಡುವ, ಎಲ್ಲ ಭೇದಗಳನ್ನು ತೊರೆದು ಐಕ್ಯದ ಹೆಸರಿನಲ್ಲಿ ಎಲ್ಲರನ್ನೂ ಕೂಡಿಸುವ ಬಸವಣ್ಣನವರ ಧರ್ಮವು ವಿಶಿಷ್ಟವಾದದ್ದೆಂದು ಪ್ರಭು ಹೇಳಿದ್ದಾರೆ.

ಈ ವಚನದಲ್ಲಿ ಬಸವಣ್ಣನವರ ಸಂಘಟನಾ ಶಕ್ತಿ ಎಷ್ಟೊಂದು ಪ್ರಬಲವಾಗಿತ್ತೆಂಬುದು ಗೊತ್ತಾಗುತ್ತದೆ. ರುದ್ರಗಣ ಪ್ರಮಥಗಣಂಗಳನ್ನು ಕರೆತಂದು ಅವರಿಗೆ ಅಮರಗಣಂಗಳೆಂದು ಹೆಸರಿಟ್ಟು ಅವರ ಮೂಲಕ ಈ ಧರ್ಮವನ್ನು ಸಂಘಟನೆ ಮಾಡುತ್ತಾರೆ. ಅಗಣಿತ ಗಣಂಗಳನ್ನು ಕರೆತಂದು ಅಸಂಖ್ಯಾತರೆಂಬ ಹೆಸರಿಟ್ಟು ಅವರ ಮೂಲಕ ಶಿವಗಣಂಗಳನ್ನು ಬೆಳೆಸುತ್ತಾರೆ. ಇಲ್ಲಿ ಬಳಸಿರುವ “ಸಂಗನ ಬಸವಣ್ಣನ ದಾಸೋಹವು” ಅನ್ನದಾಸೋಹವಾಗುವುದರ ಜತೆಗೆ, ಧರ್ಮ ದಾಸೋಹವೂ ಆಗಿದೆ, ಜ್ಞಾನ ದಾಸೋಹವೂ ಆಗಿದೆ. ಬಸವಣ್ಣನವರು ಒಂದು ಧರ್ಮವನ್ನು ಸ್ಥಾಪಿಸಿ ಸುಮ್ಮನೇ ಕೂಡಲಿಲ್ಲ. ಅದನ್ನು ಪ್ರಸಾರಗೊಳಿಸಲು ಅದ್ಭುತವಾದ ಸಂಘಟನೆಯನ್ನೂ ಕಟ್ಟಿದರು.

ಚೆನ್ನಬಸವಣ್ಣನವರ ವಚನದಲ್ಲಿ (ವಚನ ಸಂಖ್ಯೆ 1294) ಮೋಳಿಗೆ ಮಾರಯ್ಯನವರ ವಚನದಲ್ಲಿ (ವಚನ ಸಂಖ್ಯೆ 1556), ಮೆರೆಮಿಂಡಯ್ಯನವರ ವಚನದಲ್ಲಿ (ವಚನ ಸಂಖ್ಯೆ 1358), ಆಯ್ದಕ್ಕಿ ಮಾರಯ್ಯನವರ ವಚನದಲ್ಲಿ (ವಚನ ಸಂಖ್ಯೆ 1161), ಡಕ್ಕೆಯ ಬೊಮ್ಮಣ್ಣನವರ ವಚನದಲ್ಲಿ (ವಚನ ಸಂಖ್ಯೆ 913), ನೀಲಾಂಬಿಕೆಯವರ ವಚನದಲ್ಲಿ (ವಚನ ಸಂಖ್ಯೆ 844), ಅಕ್ಕಮ್ಮನವರ ವಚನದಲ್ಲಿ (ವಚನ ಸಂಖ್ಯೆ 527), ಏಳುನೂರೆಪ್ಪತ್ತು ಅಮರಗಣಂಗಳ ಪ್ರಸ್ತಾಪ ಬರುತ್ತದೆ. ಈ ಏಳುನೂರೆಪ್ಪತ್ತು ಅಮರಗಣಂಗಳು ಲಿಂಗಾಯತ ಧರ್ಮವನ್ನು ಪ್ರಸಾರ ಮಾಡಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದರು. ಇವರೊಂದಿಗೆ 1,96,000 ಪ್ರಥಮ ಗಣಂಗಳಿದ್ದರು, ಇವರು ಧರ್ಮ ಪ್ರಸಾರಕರಾಗಿದ್ದರು. ಹೀಗೆ 12ನೇ ಶತಮಾನದಲ್ಲಿಯೇ ಧರ್ಮ ಪ್ರಸಾರಕ್ಕಾಗಿ ಹುಟ್ಟಿಕೊಂಡ ಸಂಘಟನೆಗಳ ಬಗೆಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಈ ಗಣಂಗಳು ಯಾವ ಯಾವ ಪ್ರದೇಶಗಳಿಗೆ ಹೋಗುತ್ತಿದ್ದರು? ಯಾವ ಯಾವ ಊರುಗಳಲ್ಲಿ ಹೇಗೆ ಧರ್ಮ ಪ್ರಸಾರ ಮಾಡುತ್ತಿದ್ದರು? ಅಂದಿನ ಆ ಧಾರ್ಮಿಕಾಚಾರಣೆಗಳು ಹೇಗಿದ್ದವು? ಧರ್ಮ ಪ್ರಸಾರ ಕಾರ್ಯಕ್ಕೆ ಹೋದಾಗ, ಪರಧರ್ಮೀಯರಿಂದ ಎದುರಿಸಿದ ಸಮಸ್ಯೆಗಳಾವುವು? ಎಂಬಂತಹ ಪ್ರಶ್ನೆಗಳನ್ನಿಟ್ಟುಕೊಂಡು ಸಂಶೋಧನೆ ಮಾಡಿದಾಗ ಮತ್ತೊಂದು ಧಾರ್ಮಿಕ ಕೃತಿಯನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ಲಿಂಗಾಯತ ಧರ್ಮದ ಈ ಸಂಘಟನೆ ಕೇವಲ 12ನೇ ಶತಮಾನಕ್ಕೆ ಮಾತ್ರ ನಿಲ್ಲದೆ ಇಂದಿನವರೆಗೂ ಮುಂದುವರೆದುಕೊಂಡು ಬಂದಿರುವುದು ಮಹತ್ವದ ಸಂಗತಿಯಾಗುತ್ತದೆ.

15-16ನೇ ಶತಮಾನಗಳಲ್ಲಿ ಈ ಧರ್ಮವು ಲಿಬರಲ್ ಆಯಿತು. ನೂರೊಂದು ವಿರಕ್ತರು ನೂರೊಂದು ಮಠಗಳನ್ನು ಕಟ್ಟಿಕೊಂಡು ಈ ಧರ್ಮಪ್ರಸಾರಕ್ಕಿಳಿದರು. ಆಧುನಿಕ ಕಾಲದ 20-21ನೇ ಶತಮಾನಗಳಲ್ಲಿ ಅನೇಕ ಧಾರ್ಮಿಕ - ಸಂಘಟನೆಗಳು ಹುಟ್ಟಿಕೊಂಡು ಈ ಧರ್ಮವನ್ನು ಪ್ರಸಾರ ಮಾಡಿದವು. ಅವುಗಳಲ್ಲಿ ಅಖಿಲಭಾರತ ವೀರಶೈವ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಜಿಲ್ಲಾ ಅನುಭವ ಮಂಟಪಗಳು, ಬಸವ ಕೇಂದ್ರಗಳು, ಜಾಗತಿಕ ಲಿಂಗಾಯತ ಮಹಾಸಭಾ ಹೀಗೆ ಅನೇಕ ಧಾರ್ಮಿಕ ಸಂಘಟನೆಗಳು ಬಸವಧರ್ಮವನ್ನು ಪ್ರಸಾರ ಮಾಡಿವೆ. ಅಖಿಲ ಭಾರತ ವೀರಶೈವ ಮಹಾಸಭಾದಿಂದ ಹಿಡಿದು ಜಾಗತಿಕ ಲಿಂಗಾಯತ ಮಹಾಸಭಾದವರೆಗೆ ಇವುಗಳ ಬೆಳವಣಿಗೆಯಿದೆ. ಹೀಗೆ 12ನೇ ಶತಮಾನದಿಂದ ಹಿಡಿದು 21ನೇ ಶತಮಾನದವರೆಗೆ ಬಸವಧರ್ಮವನ್ನು ಪ್ರಸಾರ ಮಾಡಲು ಅನೇಕ ಧಾರ್ಮಿಕ ಸಂಘಟನೆಗಳು ಪ್ರಯತ್ನಿಸಿವೆ. ಇವುಗಳ ಹಿಂದೆ ಅನೇಕ ಧಾರ್ಮಿಕ ಮುಖಂಡರಿದ್ದಾರೆ, ದಾನಿಗಳಿದ್ದಾರೆ, ಸ್ವಾಮೀಜಿಗಳಿದ್ದಾರೆ, ಸಂಘಟಿಕರಿದ್ದಾರೆ. ಈ ಕುರಿತು ಸಂಶೋಧನೆ ನಡೆದರೆ ಅನೇಕ ಸತ್ಯಗಳು ಕಾಣಿಸಿಕೊಳ್ಳುವ ಸಂಭವವಿದೆ. ಇವೆಲ್ಲವುಗಳನ್ನೂ ಕೂಡಿಸಿಕೊಂಡು ಮತ್ತೊಂದು ಧಾರ್ಮಿಕ ಕೃತಿಯನ್ನು ರಚಿಸಬಹುದಾಗಿದೆ.

ಒಂದು ಧರ್ಮದ ಬೆಳವಣಿಗೆಗೆ ಅದರ ಇತಿಹಾಸ, ಅದರ ಪರಂಪರೆ, ಆಚರಣೆಗಳು, ಆ ಧರ್ಮದ ಅನುಯಾಯಿಗಳು, ಧಾರ್ಮಿಕ ಮುಖಂಡರು, ಧಾರ್ಮಿಕ ಸಂಘಟನೆಗಳು ಬಹುಮುಖ್ಯವಾಗುತ್ತವೆ. ಹೀಗಾಗಿ ಒಂದು ಧರ್ಮದ ಸಾಧ್ಯತೆಗಳನ್ನು ಕಂಡುಕೊಳ್ಳಲು ಅನೇಕ ಧಾರ್ಮಿಕ ಕೃತಿಗಳ ಅಗತ್ಯವಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗ ಕೆಲವು ಧಾರ್ಮಿಕ ಕೃತಿಗಳು ಮಾತ್ರ ಪ್ರಕಟವಾಗಿವೆ. ಪ್ರಕಟವಾಗಬೇಕಾದ ಕೃತಿಗಳು ಇನ್ನೂ ಅನೇಕ ಇವೆ. ಈ ನಿಟ್ಟಿನಲ್ಲಿ ಶರಣರ ವಚನಗಳ ಮೂಲಕ ಬಸವಧರ್ಮವನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ. “ವಚನಗಳಲ್ಲಿ ಶೈವಧರ್ಮ”, “ವಚನಗಳಲ್ಲಿ ವೀರಶೈವ ಧರ್ಮ”ದಂತಹ ಕೃತಿಗಳು ಈಗಾಗಲೇ ಪ್ರಕಟವಾಗಿವೆ. “ವಚನಗಳಲ್ಲಿ ಬಸವಧರ್ಮ” ಕೃತಿಯು ಈ ಮೊದಲಿನ ಕೃತಿಗಳಿಗಿಂತ ಭಿನ್ನವಾಗಿದೆ. ಇಲ್ಲಿ ಅನೇಕ ಹೊಸ ವಿಷಯಗಳನ್ನೆತ್ತಿಕೊಂಡು ಚರ್ಚಿಸಲಾಗಿದೆ. 

ಜಗತ್ತಿನಲ್ಲಿ ಧರ್ಮಗಳ ಒಂದು ಪರಂಪರೆಯೇ ಇದೆ. ಅನೇಕ ಧರ್ಮಗಳು ಆಗಿ ಹೋಗಿವೆ. ಅದೇ ರೀತಿ ಚಳವಳಿ - ಹೋರಾಟಗಳ ಒಂದು ಪರಂಪರೆಯೇ ಇದೆ. ಅನೇಕ ಚಳವಳಿಗಳು ಆಗಿ ಹೋಗಿವೆ. ಆದರೆ 12ನೇ ಶತಮಾನದಲ್ಲಿ ಹುಟ್ಟಿಕೊಂಡ ಬಸವ ಧರ್ಮವು ಒಂದುಕಡೆ ಧರ್ಮವಾಗಿ ಕಾಣಿಸಿದರೆ, ಮತ್ತೊಂದು ಕಡೆ ಚಳವಳಿಯಾಗಿ ಕಾಣಿಸುತ್ತದೆ. ಧರ್ಮ ಮತ್ತು ಚಳವಳಿ ಬಸವನಾಣ್ಯದ ಎರಡು ಮುಖಗಳಾಗಿವೆ. ಧರ್ಮವಾಗಿದ್ದರಿಂದ ಅಂದಿನಿಂದ ಇಂದಿನವರೆಗೂ ಇದರ ಅನುಯಾಯಿಗಳಿದ್ದಾರೆ.

ಚಳುವಳಿಯಾಗಿದ್ದರಿಂದ ಶರಣರ ಹತ್ಯಾಕಾಂಡ ನಡೆದಿದೆ. ಹೀಗಾಗಿ ಇದು ಜಗತ್ತಿನಲ್ಲಿಯೇ ವಿಶಿಷ್ಟವಾದ ಧರ್ಮವಾಗಿದೆ. ಧರ್ಮದ ಮೂಲಕ ಹುಟ್ಟಿಕೊಂಡ ಈ ಶರಣ ಚಳವಳಿ ಜಗತ್ತಿನಲ್ಲಿಯೇ ವಿಶಿಷ್ಟವಾದುದಾಗಿದೆ. ಶರಣರು ತಾವು ಕಟ್ಟಿದ ಧರ್ಮ ಮತ್ತು ಚಳವಳಿಯಲ್ಲಿ ಜನಸಾಮಾನ್ಯರಿಗೆ ಅನೇಕ ಆಯ್ಕೆಗಳನ್ನು ಕೊಟ್ಟರು. ಅವರು ಯಾರನ್ನೂ ಒತ್ತಾಯ ಮಾಡಲಿಲ್ಲ. ಯಾರಿಗೂ ಮತಾಂತರ ಮಾಡಲಿಲ್ಲ. ಶರಣರ ಧರ್ಮದ ಜನಪರ ಆಶಯಗಳನ್ನು ನೋಡಿ ಜನಸಾಮಾನ್ಯರು, ದಲಿತರು, ಮಹಿಳೆಯರು, ಕೆಳವರ್ಗದವರು ಸಾಲುಸಾಲಾಗಿ ಬಂದು ಸೇರಿಕೊಂಡರು. ಅವರೇ ಈ ಚಳವಳಿಯ ಕೇಂದ್ರವಾದರು, ಈ ಧರ್ಮದ ವಾರಸುದಾರರಾದರು. ಜನಸಾಮಾನ್ಯರು ಧರ್ಮವೊಂದನ್ನು ಕಟ್ಟಬಹುದು, ಆಧ್ಯಾತ್ಮ ಕ್ಷೇತ್ರದಲ್ಲಿ ಬೆಳೆಯಬಹುದು. ಅನುಭಾವಿಗಳಾಗಿ ಬೆಳಗಬಹುದೆಂಬುದಕ್ಕೆ ಬಸವಧರ್ಮವೇ ಸಾಕ್ಷಿಯಾಗಿದೆ. ಕಾಶ್ಮೀರದರಸ ಈ ಬಸವಧರ್ಮಕ್ಕೆ ಆಕರ್ಷಿತನಾಗಿ ತನ್ನ ಸಾಮ್ರಾಜ್ಯವನ್ನು ತೊರೆದು ಒಬ್ಬ ಸಾಮಾನ್ಯ ಭಕ್ತನಾಗಿ ಬಂದು ಬಸವಧರ್ಮವನ್ನು ಸೇರಿಕೊಂಡ. ಗಂಡ-ಹೆಂಡತಿ ಕಟ್ಟಿಗೆ ಮಾರುವ ಕಾರ್ಯಮಾಡುತ್ತ ಮೋಳಿಗೆಯ ಮಾರಯ್ಯ-ಮಹಾದೇವಮ್ಮ ಎಂಬ ಹೆಸರಿನಲ್ಲಿ ಈ ರಾಜದಂಪತಿಗಳು ಹೆಸರುವಾಸಿಯಾದರು. ದುಡಿಯುವವರು, ಕಾರ್ಮಿಕರು ಈ ದೇಶದಲ್ಲಿ ಚಳವಳಿ ಮಾಡಿದ್ದಾರೆ. ಆದರೆ 12ನೇ ಶತಮಾನದಲ್ಲಿ ಇವರೆಲ್ಲ ಧರ್ಮ ಸಂಘಟಿಸಿದ್ದಾರೆ, ಅನುಭಾವಿಗಳಾಗಿದ್ದಾರೆ, ಶರಣರಾಗಿದ್ದಾರೆ. ಇದು ಜಗತ್ತಿನಲ್ಲಿ ಎಲ್ಲಿಯೂ ನಡೆದಿಲ್ಲ, ಇದು ಬಸವಧರ್ಮದ ವಿಶಿಷ್ಟತೆಯಾಗಿದೆ.

ಬಸವಧರ್ಮದ ಬಹುದೊಡ್ಡ ಚಿಂತನೆಯೆಂದರೆ ಬಹುತ್ವವನ್ನುಳಿಸಿಕೊಂಡೇ ಚಳವಳಿ ಕಟ್ಟಿದ್ದು. ಈ ಚಳವಳಿಯಲ್ಲಿ ಎಲ್ಲ ರೀತಿಯ ಬಹುತ್ವಗಳಿವೆ. ವಿವಿಧ ಜಾತಿ-ಜನಾಂಗಗಳಿಂದ ಬಂದ ಜನಸಾಮಾನ್ಯರ ವಂಶಪಾರಂಪರ್ಯದಿಂದ ಮಾಡುತ್ತಿದ್ದ ವೃತ್ತಿಗಳನ್ನೇ ಮೇಲ್ದರ್ಜೆಗೇರಿಸಿ, ವೃತ್ತಿಗೌರವ ಹೆಚ್ಚಿಸಿ ಕಾಯಕಸಿದ್ಧಾಂತ ತಂದದ್ದು ಬಹುಸಂಸ್ಕೃತಿ ಉಳಿಯಲು-ಬೆಳೆಯಲು ಕಾರಣವಾಯಿತು. ಬೇರೆ ಬೇರೆ ವಚನಾಂಕಿತಗಳನ್ನಿಟ್ಟುಕೊಂಡು ವಚನಗಳನ್ನು ರಚಿಸಿದ ವಚನಕಾರರ ಮೂಲ ಅಸ್ಮಿತೆಯನ್ನು ಉಳಿಸಿಕೊಳ್ಳಲಾಯಿತು. ವಿವಿಧ ಜಾತಿ-ವೃತ್ತಿ-ಸಂಸ್ಕಾರಗಳನ್ನು ಬಿಟ್ಟುಕೊಡದೆ, ಆ ಮೂಲಕ ಜಾತಿನಿರಸನ ಸಿದ್ಧಾಂತವನ್ನು ಜಾರಿಗೆ ತರಲಾಯಿತು. ಜಾತಿನಿರಸನ ಸಿದ್ಧಾಂತವೆಂದರೆ, ಇದ್ದ ಜಾತಿಗಳನ್ನು ನಾಶಗೊಳಿಸುವುದಲ್ಲ, ಬದಲಾಗಿ ಜಾತ್ಯಾತೀತ ಪರಿಕಲ್ಪನೆಯನ್ನು ಕಟ್ಟಿಕೊಡುವುದೇ ಆಗಿದೆ.

ಬಸವಧರ್ಮದ ಬಹುದೊಡ್ಡ ಸಾಧ್ಯತೆಯ ಕೇಂದ್ರವೆಂದರೆ ಅನುಭವ ಮಂಟಪ. ಅನುಭವ ಮಂಟಪದ ಬಗೆಗೆ ಈಗಾಗಲೇ ಅನೇಕ ಲೇಖನಗಳು, ಕೃತಿಗಳು ಪ್ರಕಟವಾಗಿವೆ, ಸಾಕಷ್ಟು ಚರ್ಚೆಯೂ ನಡೆದಿದೆ. ಬಸವಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ಶರಣರು ಕಟ್ಟಿದ ಅನುಭವ ಮಂಟಪದ ಪರಿಕಲ್ಪನೆ, ನಂತರದ ಕಾಲಘಟ್ಟದಲ್ಲಿ ಅನೇಕ ಅನುಭವ ಮಂಟಪಗಳು ಹುಟ್ಟಿಕೊಳ್ಳಲು ಪ್ರೇರಣೆ ನೀಡಿತು. ವಚನ ಚಳವಳಿಯ ನಂತರ ಸೊಲ್ಲಾಪುರಕ್ಕೆ ಹಿಂದಿರುಗಿದ ಸಿದ್ಧರಾಮಯ್ಯ ಅಲ್ಲಿಯೇ ಒಂದು ಅನುಭವ ಮಂಟಪ ಕಟ್ಟುತ್ತಾನೆ. ಅದೇ ರೀತಿ ವಚನ ಚಳವಳಿಯ ನಂತರವೂ ಬದುಕಿದ್ದ ಅಂಬಿಗರ ಚೌಡಯ್ಯನು ದುಡಿವವರ್ಗದ ಜನರನ್ನು ಕೂಡಿಸಿಕೊಂಡು ತಮ್ಮ ಊರಿನಲ್ಲಿಯೇ ಅನುಭವ ಮಂಟಪವನ್ನು ಕಟ್ಟುತ್ತಾನೆ. ಇತ್ತೀಚಿನ ವರ್ಷಗಳಲ್ಲಿ ಬಸವಧರ್ಮದ ಅನುಯಾಯಿಗಳು ಜಾಗೃತರಾಗಿದ್ದಾರೆ. ಒಂದೊಂದು ಊರಿನಲ್ಲಿಯೂ ಅನುಭವ ಮಂಟಪಗಳಿವೆ. ಮನೆಮನೆಗಳೆಲ್ಲ ಮಹಾಮನೆಗಳಾಗಲು ಪ್ರಯತ್ನಿಸುತ್ತಲಿವೆ. ಸ್ಥಾವರ ಅನುಭವ ಮಂಟಪಕ್ಕಿಂತ ಚಲನಶೀಲ ಅನುಭವ ಮಂಟಪಗಳು ಹೆಚ್ಚು ಜನರನ್ನು ತಲುಪುತ್ತವೆ. ವಿಶ್ವವಿದ್ಯಾಲಯಗಳಿದ್ದಲ್ಲಿಗೆ ವಿದ್ಯಾರ್ಥಿಗಳು ಹೋಗುತ್ತಾರೆ, ಆದರೆ ವಿದ್ಯಾರ್ಥಿಗಳಿದ್ದಲ್ಲಿಯೇ ಮುಕ್ತ ವಿಶ್ವವಿದ್ಯಾಲಯಗಳು ಬರುತ್ತವೆ. ಅದೇ ರೀತಿ ಇಂದು ಅನುಭವ ಮಂಟಪ ಊರೂರಿಗೆ ಬಂದಿವೆ. ಅನುಭವ ಗೋಷ್ಠಿ, ವಚನಗೋಷ್ಠಿ, ಶರಣರ ಕುರಿತ ಚರ್ಚೆ ನಿತ್ಯನಿರಂತರವಾಗಿವೆ. ಈ ಕಾರಣದಿಂದಲೇ ಇಂದಿನ ಬಸವಧರ್ಮದ ಸಂಘಟನೆಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

ಲಿಂಗಾಯತ ಧರ್ಮದ ಎರಡು ಧಾರ್ಮಿಕ ಕೇಂದ್ರಗಳೆಂದರೆ ಒಂದು ಬಸವ ಕಲ್ಯಾಣ ಮತ್ತೊಂದು ಕೂಡಲಸಂಗಮ. ಇಂದಿಗೂ ಲಕ್ಷಗಟ್ಟಲೆ ಭಕ್ತರು ಈ ಸ್ಥಳಗಳಿಗೆ ಹೋಗಿ ಬರುತ್ತಾರೆ. ಶರಣರ ಅನೇಕ ಸ್ಮಾರಕಗಳಿವೆ. ಈ ಸ್ಮಾರಕಗಳನ್ನು ಕುರಿತು ಈಗಾಗಲೆ ಕೆಲವು ಕೃತಿಗಳು ಪ್ರಕಟವಾಗಿವೆ. ಈ ಶರಣರ ಸ್ಮಾರಕಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿಯ ಆಕರಗಳ ಮೂಲಕವೂ ಬಸವಧರ್ಮಕ್ಕೆ ಸಂಬಂಧಿಸಿದಂತೆ ಮತ್ತೊಂದು ಧಾರ್ಮಿಕ ಕೃತಿಯನ್ನು ರಚಿಸಬಹುದಾಗಿದೆ.

ಬಸವಕಲ್ಯಾಣ ಮತ್ತು ಕೂಡಲಸಂಗಮ ಎರಡು ಊರುಗಳಾಗಿರುವಂತೆ, ಎರಡು ತತ್ವಗಳೂ ಆಗಿವೆ. ಕೂಡಲ ಸಂಗಮವೆಂದರೆ ಕೂಡುವ ಸಂಗಮ. ಇಲ್ಲಿಗೆ ಭಕ್ತಿಯಿಂದ ಶರಣರ ಅನುಯಾಯಿಗಳು ಪ್ರತಿವರ್ಷ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಬಂದು ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ. ಜಾತಿ-ವರ್ಣ-ವರ್ಗ-ಪ್ರದೇಶ-ಲಿಂಗಭೇದವಿಲ್ಲದೆ, ಎಲ್ಲರನ್ನು ಸಮಾನತೆಯಿಂದ ಇಲ್ಲಿ ಕಾಣಲಾಗುತ್ತದೆ. ಕೂಡಲಸಂಗಮವೆಂದರೆ ಅದು ಶರಣರ ಸಂಗಮವಾಗಿದೆ, ಸದ್ಭಾವ - ಸದಾಚಾರಗಳ ಸಂಗಮವಾಗಿದೆ. ಹೀಗೆ ಕೂಡಲ ಸಂಗಮವನ್ನು ಒಂದು ತತ್ವವಾಗಿ ಪರಿಗಣಿಸಿದಾಗ, ಅದು ಕೇವಲ ಬಾಗಲಕೋಟೆ ಜಿಲ್ಲೆಯ ಒಂದು ಊರಾಗದೆ, ತತ್ವಗಳ ಸಂಗಮವಾಗುತ್ತದೆ, ಶಿವಶರಣರ ಸ್ಮರಣೆಯ ಸಂಕೇತವಾಗುತ್ತದೆ.

ಇದೇ ರೀತಿ ಬಸವಕಲ್ಯಾಣ ಕೂಡಾ ಕೇವಲ ಬೀದರ ಜಿಲ್ಲೆಯ ಒಂದು ಊರಾಗದೆ ಒಂದು ತತ್ವವಾಗಿ ಬೆಳೆದದ್ದನ್ನು ಗಮನಿಸಬಹುದಾಗಿದೆ. ಬಸವಕಲ್ಯಾಣದ ನಂತರ ಅನೇಕ ಕಲ್ಯಾಣಗಳು ಹುಟ್ಟಿಕೊಂಡಿವೆ. 15-16ನೇ ಶತಮಾನದ ಪ್ರೌಢದೇವರಾಯನ ಕಾಲದಲ್ಲಿ, ನೂರೊಂದು ವಿರಕ್ತರು “ವಿಜಯ ಕಲ್ಯಾಣವನ್ನು” ಕಟ್ಟಿದ್ದಾರೆ. ಇದೂ ಕೂಡ ಬಸವಕಲ್ಯಾಣದ  ಮುಂದುವರೆದ ಭಾಗವಾಗಿದೆ. 17ನೇ ಶತಮಾನದಲ್ಲಿ ಸಗರ ನಾಡಿನ (ಇಂದಿನ ಯಾದಗಿರಿ ಜಿಲ್ಲೆ) ಕೊಡೇಕಲ್‍ದಲ್ಲಿ ಕೊಡೇಕಲ್ ಬಸವಣ್ಣನಿಂದ “ಅಮರ ಕಲ್ಯಾಣ” ಸ್ಥಾಪನೆಯಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಅಮರಕಲ್ಯಾಣ ಹೆಸರಾಗಿದೆ. ಕೊಡೇಕಲ್‍ದಲ್ಲಿ ದೇವಸ್ಥಾನ - ದರಗಾಗಳ ಸಂಗಮವಾಗಿದೆ. ಕೂಡಲಸಂಗಮದಲ್ಲಿ 18 ವರ್ಷಗಳಿಂದ ನಡೆಯುತ್ತಲಿರುವ ಮಾತೆ ಮಹಾದೇವಿಯವರ “ಕಲ್ಯಾಣ ಪರ್ವ” ಕಾರ್ಯಕ್ರಮ ಮತ್ತು ಇತ್ತೀಚೆಗೆ ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಸ್ವಾಮಿಗಳಿಂದ “ಮತ್ತೆ ಕಲ್ಯಾಣ” ಪ್ರಾರಂಭವಾಗಿ ಊರೂರಿಗೆ, ಮನೆಮನೆಗೆ ಶರಣರ ವಿಚಾರಗಳನ್ನು ಮುಟ್ಟಿಸುವ ಕೆಲಸ ನಡೆದಿದೆ. ಅಂದು ಒಂದೇ ಇದ್ದ ಅನುಭವ ಮಂಟಪವು, ಇಂದು ಅನೇಕ ಅನುಭವ ಮಂಟಪಗಳಾಗಿ ಬೆಳೆದರೆ, ಅಂದು ಒಂದಿದ್ದ ಕಲ್ಯಾಣವು, ಇಂದು ಹಲವು ಕಲ್ಯಾಣಗಳಾಗಿ ಬೆಳೆದಿವೆ. ಹೀಗೆ ಕಲ್ಯಾಣಗಳು, ಸಂಗಮಗಳು, ಅನುಭವ ಮಂಟಪಗಳು ಸ್ಥಾವರದದಿಂದ ಜಂಗಮತ್ವದಕಡೆ ಸಾಗಿರುವುದನ್ನು ಕಾಣಬಹುದಾಗಿದೆ. ಆದರೆ ಕೆಲವು ಮೂಡಭಕ್ತರ, ರಾಜಕಾರಣಿಗಳ, ಸ್ವಾಮೀಜಿಗಳ ನಡೆ-ನುಡಿಗಳನ್ನು ಗಮನಿಸಿದರೆ ಜಂಗಮತ್ವದಿಂದ ಸ್ಥಾವರಕಡೆ ಹೋಗುತ್ತಿದ್ದೇವೇನೊ ಎಂಬ ಸಂಶಯ ಕಾಡತೊಡಗುತ್ತದೆ.

ಬಸವಕಲ್ಯಾಣಕ್ಕೆ ಹಲವು ದಾರಿಗಳಿರುವಂತೆ, ತತ್ವಕಲ್ಯಾಣಕ್ಕೆ ಅನೇಕ ಬಾಗಿಲುಗಳಿವೆ. ಬಸವಣ್ಣನವರದು ಒಂದು ರೂಪವಾಗಿ ಕಾಣಿಸಿದರೆ, ಶರಣರು ಬಹುರೂಪಿಗಳಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಒಂದು ಹಲವಾಗುವ, ಹಲವು ಸಮುದಾಯವಾಗುವ, ಸಮುದಾಯವು ಜಂಗಮವಾಗುವ ಅದ್ಭುತ ಬೆಳವಣಿಗೆಯನ್ನು ಬಸವಧರ್ಮದಲ್ಲಿ ಕಾಣಬಹುದಾಗಿದೆ. ಉಳಿದ ಧರ್ಮಗಳಲ್ಲಿ ಭಕ್ತಿ ಮಾರ್ಗ, ಯೋಗಮಾರ್ಗ, ಮೋಕ್ಷ ಮಾರ್ಗಗಳು ಬಹುಮುಖ್ಯವಾದರೆ ಬಸವಧರ್ಮದಲ್ಲಿ ಕಾಯಕಮಾರ್ಗ, ದಾಸೋಹಮಾರ್ಗ, ಸಾಮಾಜಿಕ ನ್ಯಾಯದ ಮಾರ್ಗ ಅತಿ ಮುಖ್ಯವಾಗಿವೆ. ಹೀಗಾಗಿ ಬಸವಧರ್ಮವು ಉಳಿದ ಧರ್ಮಗಳಿಗಿಂತ ತುಂಬ ವಿಶಿಷ್ಟವಾದುದಾಗಿದೆ. ಈ ಧರ್ಮದಲ್ಲಿ ಜ್ಞಾನ-ಕ್ರಿಯೆಗಳು ಸಂಗಮವಾದಂತೆ, ಇಹ-ಪರ ಒಂದಾಗಿವೆ. ಇಹದ ಮೂಲಕ ಪರವನ್ನು ಕಾಣುವ, ಜ್ಞಾನವನ್ನು ಕ್ರಿಯಾತ್ಮಕಗೊಳಿಸಿದ ಬಹುದೊಡ್ಡ ಸಾಧನೆ ಇಲ್ಲಿ ನಡೆದಿದೆ.

12ನೇ ಶತಮಾನದಿಂದ ಇಂದಿನವರೆಗೆ ಅನೇಕ ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡೇ ಬಸವಧರ್ಮ ಬೆಳೆದುಕೊಂಡು ಬಂದಿದೆ. 13ನೇ ಶತಮಾನದ ಹರಿಹರ ಕವಿಯಿಂದ ಹಿಡಿದು, ಇತ್ತೀಚಿನ ಆಧುನಿಕ ಕವಿಗಳವರೆಗೂ ಬಸವಣ್ಣ ಕಾಡುತ್ತಲೇ ಬಂದಿದ್ದಾನೆ. ಈ ಕಾಡುವಿಕೆ, ಹುಡುಕುವಿಕೆ ಇಲ್ಲಿ ನಿರಂತರವಾಗಿವೆ. ಈ ಕಾರಣದಿಂದಲೇ ಇಲ್ಲಿಯ ದಾರಿ ಸ್ಥಾವರದಿಂದ ಜಂಗಮದ ಕಡೆ ಚಲಿಸುತ್ತಲೇ ಇದೆ. ಆಧುನಿಕ ಕಾಲಘಟ್ಟದಲ್ಲಿ ಅನೇಕರು ಬಸವಧರ್ಮವನ್ನು ಕಟ್ಟುವಲ್ಲಿ, ಬೆಳೆಸುವಲ್ಲಿ, ಉಳಿಸುವಲ್ಲಿ ಪ್ರಯತ್ನಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದಿಂದ ಪ್ರಾರಂಭವಾದ, ಆಧುನಿಕ ಧಾರ್ಮಿಕ ಸಂಘಟನೆಯು, ಇಂದಿನ ಜಾಗತಿಕ ಲಿಂಗಾಯತ ಮಹಾಸಭಾದವರೆಗೂ ಬೆಳೆದು ನಿಂತಿದೆ. ಅನೇಕ ಮಠಗಳ ಸ್ವಾಮೀಜಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರಗತಿಪರ ಸಂಘಟನೆಗಳು ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಯುವ ಸಂಘಟನೆಗಳು, ಸಾಹಿತ್ಯ-ಸಾಂಸ್ಕೃತಿಕ ಸಂಘಟನೆಗಳು, ವಿಶ್ವವಿದ್ಯಾಲಯಗಳು ವಚನಸಾಹಿತ್ಯ ಹಾಗೂ ಬಸವ ಧರ್ಮದ ಬೆಳವಣಿಗೆಗೆ ಕಾರಣವಾಗಿವೆ. ಈ ಕುರಿತೇ ಒಂದು ಕೃತಿ ರಚಿಸುವಷ್ಟು ಸಾಮಗ್ರಿಯಿದೆ.

ಬೇರೆ ಬೇರೆ ಧರ್ಮಗಳಿಗೆ ಅವುಗಳಿಗೆ ಸಂಬಂಧಿಸಿದ ಧರ್ಮಗ್ರಂಥಗಳಿವೆ. ಲಿಂಗಾಯತ ಧರ್ಮಕ್ಕೆ ಯಾವುದೇ ಒಂದು ನಿರ್ದಿಷ್ಟವಾದ ಧರ್ಮಗ್ರಂಥವಿರದೆ, ವಚನ ಭಂಡಾರವೇ ಲಿಂಗಾಯತ ಧರ್ಮದ ಧರ್ಮ ಗ್ರಂಥವಾಗಿದೆ. ಹೀಗಾಗಿ ವಚನಸಾಹಿತ್ಯಕ್ಕೂ - ಲಿಂಗಾಯತ ಧರ್ಮಕ್ಕೂ ನೇರವಾದ ಸಂಬಂಧವಿದೆ. ಸಾಹಿತ್ಯ ಪಠ್ಯಗಳೇ ಇಲ್ಲಿ ಧಾರ್ಮಿಕ ಪಠ್ಯಗಳಾಗಿವೆ. ಇದು ಭಾರತೀಯ ಧರ್ಮ ಪರಂಪರೆಗೆ ಮತ್ತು ಸಾಹಿತ್ಯ ಪರಂಪರೆಗೆ ಆಶ್ಚರ್ಯಕರವಾಗಿ ಕಾಣಿಸುತ್ತದೆ. ಹೀಗೆ ಈ ಧರ್ಮವು ಎಲ್ಲ ರೀತಿಯಿಂದಲೂ ವಿಶಿಷ್ಟವಾಗಿ ಕಾಣಿಸುತ್ತದೆ. ಹೀಗಾಗಿ ಇಲ್ಲಿ ಧರ್ಮ-ಸಂಸ್ಕೃತಿ-ಸಾಹಿತ್ಯ-ಆರ್ಥಿಕ-ಸಾಮಾಜಿಕ-ರಾಜಕೀಯ ಎಲ್ಲವೂ ಒಂದೇ ಕಡೆ ಕೂಡಿಕೊಂಡಿವೆ. ಈ ಯಾವುದೇ ವಿಷಯ ಕುರಿತು ಮಾತನಾಡಬೇಕಾದರೆ ಶರಣರ ವಚನಗಳೇ ಆಕರಗಳಾಗಿವೆ.

ಬಸವಧರ್ಮದ ತಾತ್ವಿಕತೆ ಹಾಗೂ ಶರಣರ ಸಾಧನೆಗಳು ಇಂದು ರಂಗಭೂಮಿಯ ಮೂಲಕವೂ ಕಾಣಿಸಿಕೊಂಡಿವೆ. ಏಣಗಿ ಬಾಳಪ್ಪನಂತಹ ದೊಡ್ಡ ರಂಗಕಲಾವಿದರು ಮಾಡಿದ್ದ ಬಸವಣ್ಣನವರ ಪಾತ್ರ ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಅನೇಕ ನಾಟಕ ಕಂಪನಿಗಳು ಶರಣರನ್ನು ಕುರಿತು ನಾಟಕಗಳನ್ನು ಪ್ರಯೋಗಿಸಿವೆ. ಬಯಲಾಟಗಳಲ್ಲಿ, ಸಣ್ಣಾಟಗಳಲ್ಲಿ ಶರಣರನ್ನು ಕುರಿತಾದ ಅನೇಕ ನಾಟಕಗಳು ಬಂದಿವೆ. ಇತ್ತೀಚಿನ ದಶಕಗಳಲ್ಲಿ ಸಾಣೇಹಳ್ಳಿಯ ಪೂಜ್ಯಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರಾರಂಭವಾದ “ಶಿಸಂಚಾರ” ಹಾಗೂ ಚಿತ್ರದುರ್ಗದ ಪೂಜ್ಯ ಶ್ರೀ ಮುರುಘಾ ಶರಣರ ನೇತೃತ್ವದಲ್ಲಿ ಹುಟ್ಟಿಕೊಂಡ “ಮುಜರಾ” ಕಲಾವಿದರ ಸಂಘ ನಾಡಿನಾದ್ಯಂತ, ದೇಶದಾದ್ಯಂತ ಶರಣರ ನಾಟಕಗಳನ್ನು ಪ್ರಸಾರ ಮಾಡಿವೆ. ಚಲನಚಿತ್ರ ರಂಗದಲ್ಲಿ ಬಸವಾದಿ ಶರಣರನ್ನು ಕುರಿತಂತೆ ಕೆಲವು ಚಿತ್ರಗಳು ಪ್ರದರ್ಶನ ಕಂಡಿವೆ. ಇಂದು ಇಲೆಕ್ಟ್ರಾನಿಕ್ ಮಾದ್ಯಮಗಳ ಮುಖಾಂತರವೂ ಶರಣರ ಸಂದೇಶಗಳು ಪ್ರಸಾರವಾಗುತ್ತಲಿವೆ. ಆಕಾಶವಾಣಿ-ದೂರದರ್ಶನದಂತಹ ಮಾಧ್ಯಮಗಳು ಶರಣರ ತತ್ವ ಪ್ರಸಾರ ಮಾಡುವಲ್ಲಿ ಯಶಸ್ವಿಯಾಗಿವೆ.

ಹೀಗೆ ರಂಗಭೂಮಿ, ಚಲನಚಿತ್ರ, ಈ ಮೊದಲಾದ ಪ್ರಭಾವಶಾಲಿ ಮಾಧ್ಯಮಗಳ ಮೂಲಕ ಜೀವಂತವಾಗಿರುವ ಬಸವಧರ್ಮದ ಸಾದ್ಯತೆಗಳ ಕುರಿತು ಪ್ರತ್ಯೇಕ ಪುಸ್ತಕವನ್ನೇ ಬರೆಯಬಹುದಾಗಿದೆ. ವಚನಸಾಹಿತ್ಯವನ್ನು ಶಾಸ್ತ್ರವೆಂದು ಕೆಲವರು, ಸಾಹಿತ್ಯವೆಂದು ಕೆಲವರು ಕರೆದಿದ್ದಾರೆ. ಆಧುನಿಕ ಸಂದರ್ಭದ ನವೋದಯ ಘಟ್ಟದಲ್ಲಿ ವಚನಗಳನ್ನು ಧರ್ಮಶಾಸ್ತ್ರಗಳೆಂದೇ ನಂಬಲಾಗಿತ್ತು. ಆ ಸಂದರ್ಭದಲ್ಲಿ ಪ್ರಕಟವಾದ “ವಚನಧರ್ಮ ಸಾರ” “ವಚನಶಾಸ್ತ್ರ ರಹಸ್ಯ”ದಂತಹ ಕೃತಿಗಳ ಶಿರೋನಾಮೆಗಳನ್ನು ಗುರುತಿಸಿದರೆ ಇದು ಸ್ಪಷ್ಟವಾಗುತ್ತದೆ. “ವಚನಗಳು ಧರ್ಮವನ್ನು ಬೋಧಿಸುವುದರಿಂದ ಧರ್ಮಗ್ರಂಥಗಳಾಗಿವೆ. ತತ್ವವನ್ನು ಬೋಧಿಸುವುದರಿಂದ ಸಿದ್ಧಾಂತ ಗ್ರಂಥಗಳಾಗಿವೆ. ಕಾವ್ಯ ಲಕ್ಷಣಗಳನ್ನು ಒಳಗೊಂಡಿರುವುದರಿಂದ ಉತ್ತಮ ಸಾಹಿತ್ಯ ಗ್ರಂಥಗಳೂ ಆಗಿವೆ” (ನೋಡಿ - “ಬಸವ ಧರ್ಮಸಾರ” - ಎಂ. ಆರ್. ಶ್ರೀ ಮೈಸೂರು ವಿಶ್ವವಿದ್ಯಾಲಯ  (ಪ್ರ.ಮು. 144) 1968) ಎಂದು ಎಂ.ಆರ್. ಶ್ರೀನಿವಾಸಮೂರ್ತಿಯವರು 1944ರಲ್ಲಿಯೇ ವಚನಸಾಹಿತ್ಯದ ಬಹುಮುಖಿ ನೆಲೆಗಳನ್ನು ಗುರುತಿಸಿದ್ದಾರೆ. ಆರ್. ನರಸಿಂಹಾಚಾರ್ಯರು ತಮ್ಮ “ಕವಿ ಚರಿತೆ”ಯು ಮೊದಲ ಸಂಪುಟದಲ್ಲಿ (1907) ವಚನಗಳನ್ನು ಸಾಹಿತ್ಯವೆಂದು ಪರಿಗಣಿಸಿ, ವಚನಕಾರರನ್ನು ಕವಿಗಳೆಂದು ಗುರುತಿಸಿದ್ದಾರೆ. ಪ್ರಥಮ ಕನ್ನಡ ಸಾಹಿತ್ಯಚರಿತ್ರೆಯನ್ನು“History of Kannarese Literature” ಎಂಬ ಹೆಸರಿನಲ್ಲಿ 1915ರಲ್ಲಿ ಪ್ರಕಟಿಸಿದ ಇ.ಪಿ. ರೈಸ್ ಅವರು The Vachana Literature ಎಂಬ ಶಿರೋನಾಮೆಯಲ್ಲಿ ವಚನಗಳನ್ನು ಪರಿಚಯಿಸಿದ್ದಾರೆ. ವಚನ ಪಿತಾಮಹ ಫ.ಗು. ಹಳಕಟ್ಟಿಯವರು ವಚನಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸಿರುವುದಲ್ಲದೆ ವಚನ ಲಕ್ಷಣಗಳನ್ನೂ ಹೇಳಿದ್ದಾರೆ. ಆರ್. ಆರ್. ದಿವಾಕರ ಅವರು 1926ರಲ್ಲಿ “ವಚನಶಾಸ್ತ್ರ ರಹಸ್ಯ” ಕೃತಿಯ ಮೂಲಕ ವಚನಗಳನ್ನು “ವಚನ ವಾಙ್ಮಯ” ಎಂದು ಕರೆದಿದ್ದಾರೆ. 1951 ರಲ್ಲಿ ಶಿ.ಶಿ. ಬಸವನಾಳ ಅವರು ಷಟ್‍ಸ್ಥಲಗಳ ಮುಖಾಂತರ ಬಸವಣ್ಣನವರ ವಚನಗಳನ್ನು ಸ್ಥಲಗಳ ಹಿನ್ನಲೆಯಲ್ಲಿ ವಿಂಗಡಿಸಿ “ಬಸವಣ್ಣನವರ ಷಟ್‍ಸ್ಥಲದ ವಚನಗಳು” ಎಂಬ ಹೆಸರಿನಲ್ಲಿ ಕೃತಿ ಪ್ರಕಟಿಸಿದ್ದಾರೆ. ಎಲ್.ಬಸವರಾಜು ಅವರು ಶರಣರ ಸ್ವರವಚನಗಳನ್ನು ಮೊದಲ ಬಾರಿಗೆ “ಶಿವದಾಸ ಗೀತಾಂಜಲಿ” ಕೃತಿಯ ಮೂಲಕ ಪರಿಚಯಿಸಿದ್ದಾರೆ.

ನವ್ಯ ಸಂದರ್ಭದಲ್ಲಿ ವಚನವು, ಮಹತ್ವದ ಸಾಹಿತ್ಯವಾಗಿ ಅನೇಕ ಅನ್ವಯಿಕ ಅಧ್ಯಯನಕ್ಕೊಳಪಟ್ಟಿದೆ. ದಲಿತ-ಬಂಡಾಯ ಸಂದರ್ಭದಲ್ಲಿ ವಚನವು ಚಳವಳಿಯಾಗಿ ಬೆಳೆದುನಿಂತಿದೆ. ಇತ್ತೀಚೆಗೆ ವಚನಗಳಲ್ಲಿ ವಿಜ್ಞಾನದ ಅಂಶಗಳನ್ನು ಹುಡುಕುವ ಪ್ರಯತ್ನ ನಡೆದಿದೆ (ನೋಡಿ “ವಚನಗಳಲ್ಲಿ ವೈದ್ಯಕೀಯ” ಮತ್ತು ವಚನಗಳಲ್ಲಿ ವಿಜ್ಞಾನ; ಸಂಪಾದಕರು, ಡಾ. ವಿಜಯಶ್ರೀ ಸಬರದ, ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು, 2014) ವಚನಗಳಲ್ಲಿ ಸಂಸ್ಕೃತಿ ಅಧ್ಯಯನಗಳೂ ನಡೆದಿವೆ. ಹೀಗೆ ವಚನಗಳೇ ಬಸವಧರ್ಮದ ಧಾರ್ಮಿಕ ಪಠ್ಯಗಳಾಗಿದ್ದು. ವಚನಗಳ ಮೂಲಕವೇ ಧರ್ಮಸಂದೇಶ ಪ್ರಕಟವಾಗಿದೆ. ಬಸವಧರ್ಮದ ಮುಖ್ಯಾಂಶಗಳನ್ನು ಹೀಗೆ ಗುರುತಿಸಬಹುದಾಗಿದೆ.

ಬಸವ ಧರ್ಮದ ಮುಖ್ಯಾಂಶಗಳು
1.ಧರ್ಮದ ಹೆಸರು - ಬಸವ ಧರ್ಮ ಅಥವಾ ಲಿಂಗಾಯತ ಧರ್ಮ.
2.ಧರ್ಮದ ಸಂಸ್ಥಾಪಕರು - ಮಹಾ ಮಾನವತಾವಾದಿ ಬಸವಣ್ಣನವರು.
3.ಧರ್ಮ ಗ್ರಂಥ - ವಚನ ಭಂಡಾರ.
4.ಧರ್ಮ ಹುಟ್ಟಿದ ಸ್ಥಳ - ಬಸವಕಲ್ಯಾಣ.
5.ಧರ್ಮ ಹುಟ್ಟಿದ ಕಾಲ - 12ನೇ ಶತಮಾನ.
6.ಗೋತ್ರ ಪುರುಷ - ಮಾದಾರ ಚೆನ್ನಯ್ಯ.
7.ಕಲ್ಯಾಣವೆಂಬುದು ನಿತ್ಯದ ಕನಸು ಸಂಗಮವೆಂಬುದು ನಿರಂತರ ಹಂಬಲ.
8.ದಯೆಯೇ ಧರ್ಮ, ಕ್ರಿಯೆಯೇ ಕ್ರರ್ಮ, ದೇಹವೇ ದೇಗುಲ, ಆತ್ಮನೇ ಪರಮಾತ್ಮ.
9.ಇಲ್ಲಿ ಜೀವನೇ ದೇವನಾಗುತ್ತಾನೆ, ನರನೇ ಹರನಾಗುತ್ತಾನೆ.
10.ಶಿವನಿಗಿಂತ ಶಿವಶರಣನಧಿಕ.
11.ಕಾಯಕವೇ ಕೈಲಾಸ, ದಾಸೋಹವೇ ಸಾಮರಸ್ಯ, ಸಾಮಾಜಿಕ ನ್ಯಾಯವೇ ಸಮಾನತೆ.
12.ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟ್‍ಸ್ಥಲವೇ ಆತ್ಮ.
13.ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ.
14.ಇದೇ ಜನ್ಮ ಕಡೆ, ಮರಣವೇ ಮಹಾನವಮಿ.
15.ಹೆಣ್ಣು-ಹೊನ್ನು-ಮಣ್ಣು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ.
16.ಅರಿದೊಡೆ ಶರಣ, ಮರೆದೊಡೆ ಮಾನವ.
17.ನಡೆ-ನುಡಿ ಒಂದಾದಡೆ ಇದೇ ಜನ್ಮ ಕಡೆ.
18.ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ.
19.ಮಾನವಿಯತೆಯೇ ಮಹತ್ವದ್ದು, ಅಂತಃಕರಣವೇ ದೊಡ್ಡದು.
20.ಶರಣ ಸತಿ - ಲಿಂಗಪತಿ.
21.ಭವಿಯೆಂದರೆ ಪ್ರಭುತ್ವ, ಭಕ್ತನೆಂದರೆ ಜನಸಾಮಾನ್ಯ.
22.ಹಾಸಿಗೆಯಿದ್ದಷ್ಟು ಕಾಲುಚಾಚು, ಅತಿಯಾಸೆ ಸಲ್ಲದು.
23.ವರ್ಗ-ವರ್ಣ-ಪ್ರದೇಶ-ಲಿಂಗಬೇದಗಳನ್ನು ತೊರೆದು ಎಲ್ಲರೂ ಕೊಡುವುದೇ ಕೂಡಲಸಂಗಮ.
24.ಆದಿ ಕಲ್ಯಾಣಕ್ಕೆ ಒಂದು ಬಾಗಿಲು, ಬಸವಕಲ್ಯಾಣಕ್ಕೆ ಹಲವು ಬಾಗಿಲು.
25.ಮತ್ತೆ ಕಲ್ಯಾಣ, ನಿತ್ಯ ಕಲ್ಯಾಣ!
26.ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ ಜಲವೊಂದೇ ಶೌಚ ಮಜ್ಜನಕ್ಕೆ.
27.ಊರ ಹೊರಗಿನ ಬಯಲು, ಊರ ಒಳಗಿನ ಬಯಲು ಎಂಬ ಭೇದವಿಲ್ಲ.
28.ತಳ ಸಂಸ್ಕೃತಿಯೇ ವಚನ ಸಂಸ್ಕೃತಿ, ತಳವರ್ಗದ ಭಕ್ತರೇ ಬಸವಧರ್ಮದ ವಾರಸುದಾರರು.
29.ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
30.ಸಕಲ ಜೀವಿಗಳಿಗೆ ಲೇಸನೇ ಬಯಸುವುದೇ ಬಸವಧರ್ಮ.

ಹೀಗೆ ವಚನಗಳ ಅಧ್ಯಯನದ ಮೂಲಕ, ಈ ಧರ್ಮ ಸಂದೇಶಗಳನ್ನು ಆಯ್ದುಕೊಡಲಾಗಿದೆ. ಲಿಂಗಾಯತ ಧರ್ಮದ ನೀತಿ ಸಂಹಿತೆಗಳನ್ನು ಧಾರ್ಮಿಕ ಸಂದೇಶಗಳನ್ನು ಶರಣರ ವಚನಗಳಲ್ಲಿಯೇ ಕಾಣಬಹುದಾಗಿದೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...