ಶಿಸ್ತು ಬದ್ದ ಜೀವನದ ನಡುವೆ ಸಾಹಿತ್ಯ ಹುಟ್ಟಲು ಸಾಧ್ಯವಿಲ್ಲ

Date: 10-08-2025

Location: ಬೆಂಗಳೂರು


ಬೆಂಗಳೂರು: ಬುಕ್‌ ಬ್ರಹ್ಮ ವತಿಯಿಂದ ಕೋರಮಂಗಲದ ಸೇಂಟ್‌ ಜಾನ್ಸ್‌ ಆಡಿಟೋರಿಯಂನಲ್ಲಿ ಆ. 8 ರಿಂದ ಆ. 10ರ ತನಕ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ, ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್ ಪ್ರಸ್ತುತಪಡಿಸಿದ ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ 2025ʼರ ಕೊನೇಯ ದಿನದ ಕಾರ್ಯಕ್ರಮವು ಹಲವು ಗೋಷ್ಠಿಗಳ, ಸಾಹಿತ್ಯಿಕ ಕಾರ್ಯಕ್ರಮಗಳ ಕೂಡುವಿಕೆಯೊಂದಿಗೆ ಸಾಹಿತ್ಯ ದಿಗ್ಗಜರು, ಸಾಹಿತ್ಯ ಪ್ರಿಯರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ಜರುಗಿತು.

ಉತ್ಸವದ ಮೂರು ದಿನಗಳಲ್ಲಿಯೂ ಅಂಗಳ ವೇದಿಕೆಯು ಬಹಳಷ್ಟು ಲೇಖಕ-ಲೇಖಕಿಯರ ಮಾತುಕತೆಯ ಸುಂದರ ಕ್ಷಣಕ್ಕೆ ಸಾಕ್ಷಿಯಾಯಿತು. ಈ ವೇಳೆಯಲ್ಲಿ ಹಲವು ವಿಚಾರಗಳ ಸಂವಾದಗಳು ಓದುಗ ಮತ್ತು ಲೇಖಕರ ನಡುವಿನ ಕೊಂಡಿಯಾದವು. ಇದಕ್ಕೆ ಪೂರಕವೆಂಬಂತೆ ಮತ್ತಷ್ಟು ಈ ವೇದಿಕೆ ಪುಷ್ಠಿ ನೀಡಿದ್ದು ಕುಂ. ವೀರಭದ್ರಪ್ಪ ಅವರೊಂದಿಗೆ ಪ್ರವರ ಕೊಟ್ಟೂರು ನಡೆಸಿದ ʻಮನದ ಮಾತು: ತಂದೆ ಮಗನ ಜುಗಲ್‌ ಬಂದಿʼ ಗೋಷ್ಠಿ. ಸರ್ವೇಸಾಮಾನ್ಯವಾಗಿ ತಂದೆ ಮಕ್ಕಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ರಾಜಕಾರಣದಲ್ಲಿ ಮಾತ್ರ. ಆದರೆ ಅದನ್ನು ಹೊರತುಪಡಿಸಿ ತಂದೆ ಮತ್ತು ಮಕ್ಕಳ ಅನೋನ್ಯತೆಯ ಸನ್ನಿವೇಶವನ್ನ ನೋಡಲು ಸಾಧ್ಯವಾಗುವುದು ಸಾಹಿತ್ಯ ವಲಯದಲ್ಲಿ ಮಾತ್ರ. ಇಂತಹದ್ದೇ ಒಂದು ಸಂದರ್ಭಕ್ಕೆ ಕನ್ನಡದ ಪ್ರಸಿದ್ಧ ಲೇಖಕರಾದ ಕುಂ. ವೀರಭದ್ರಪ್ಪ ಮತ್ತು ಅವರ ಮಗ ಕವಿ ಪ್ರವರ ಕೊಟ್ಟೂರ್‌ ಅವರ ಸಂವಾದ ಸಾಕ್ಷಿಯಾಯಿತು.

ಹಿರಿಯ ಲೇಖಕ ಕುಂ. ವೀರಭದ್ರಪ್ಪ ಮಾತನಾಡುತ್ತಾ, "ಸಾಹಿತ್ಯ ಎನ್ನುವಂತಹದ್ದು ಶಿಸ್ತು ಬದ್ಧ, ಶ್ರೀಮಂತ ವ್ಯಕ್ತಿಗಳಿಗೆ ಹುಟ್ಟಲು ಸಾಧ್ಯವಿಲ್ಲ. ಬದಲಾಗಿ ಎಲ್ಲಿ ಬಡತನದ, ಹಸಿವಿನ ಅಸಹಾಯಕತೆಯ ಕ್ರೌರ್ಯವಿರುತ್ತದೋ ಅಲ್ಲಿ ಸಾಹಿತ್ಯ ಉದಯಿಸಲು ಸಾಧ್ಯ. ನನ್ನಲ್ಲಿ ಬರವಣಿಗೆ ಹುಟ್ಟಿಕೊಂಡಿದ್ದು ಕೂಡ ಹೀಗೆಯೇ. ನನ್ನ ಸಾಹಿತ್ಯ ಬೆಳವಣಿಗೆಗೆ ಪರಿಸರ, ಆ ಗ್ರಾಮೀಣ ಪ್ರದೇಶದ ನೋವು-ನಲಿವುಗಳು ಮುಖ್ಯ ಕಾರಣವಾಗಿದೆ. ಅದರೊಂದಿಗೆ ನಾನು ರಾಮಮನೋಹರ ಲೋಹಿಯ ಅವರಿಂದ ಪ್ರಭಾವಿತನಾಗಿದ್ದು, ಅದನ್ನು ಕೂಡ ನೀವು ನನ್ನ ಸಾಹಿತ್ಯದಲ್ಲಿ ಕಾಣಬಹುದು," ಎಂದು ಹೇಳಿದರು.

"ಹಿರಿಯ ಬರಹಗಾರರ ಬರಹಗಳೇ ಹೊಸ ಬರಹಗಾರರಿಗೆ ಮಾದರಿ. ಅವರ ಸಾಹಿತ್ಯವನ್ನು ಓದಿದಾಗಲೇ ನಮ್ಮಲ್ಲಿ ಆತ್ಮವಿಶ್ವಾಸ ಹುಟ್ಟುತ್ತದೆ. ಹೀಗಾಗಿ ಯಾವುದೇ ಒಬ್ಬ ಬರಹಗಾರ ಒಬ್ಬ ಉತ್ತಮ ಸಾಹಿತಿಯಾಗುವ ಮೊದಲು ಒಬ್ಬ ಅತ್ಯುತ್ತಮ ಓದುಗನಾಗಬೇಕು," ಎಂದರು.

"ನನ್ನ ಹಲವು ಬರವಣಿಗೆಯಲ್ಲಿ ಹೆಣ್ಣಿನ ನೋವು-ನಲಿವುಗಳನ್ನು ಚಿತ್ರಿಸಿದ್ದೇನೆ. ಕಾರಣ ಹೆಣ್ತನ ಗೊತ್ತಿರುವವರು ಮಾತ್ರ ಮಹಿಳಾ ಸಾಹಿತ್ಯ ರಚಿಸಲು ಸಾಧ್ಯ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಅಲ್ಲಿನ ಹೆಣ್ಣುಮಕ್ಕಳ ನೋವಿನ ಬಗ್ಗೆ ನನಗರಿವಿತ್ತು. ಸಾಹಿತ್ಯದ ಮುಖ್ಯ ಉದ್ದೇಶವೇ ದಮನಿತರ ಧ್ವನಿಯಾಗುವುದು. ಹಾಗಾಗಿ ಹೆಣ್ತನದ ಕುರಿತು ಒಂದಷ್ಟು ಬರವಣಿಗೆಯನ್ನು ನಾನು ಮಾಡಲು ಸಾಧ್ಯವಾಯಿತು," ಎಂದು ಹೇಳಿದರು.

"ಇವತ್ತಿನ ಪ್ರಜಾಪ್ರಭುತ್ವ ಸಮಾಜದ ಹಾದಿ ತಪ್ಪಿಸುತ್ತಿದೆ. ವಿದ್ಯಾರ್ಥಿಗಳ ಪಠ್ಯದಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ. ಶಿಕ್ಷಣ ನೀಡುವ ದಾವಂತದಲ್ಲಿ ವಿದ್ಯಾರ್ಥಿಗಳನ್ನು ರೋಬೋಟ್‌ ಮಾದರಿಯಲ್ಲಿ ರೂಪಿಸಿ, ಅಮೇರಿಕ ಅಥವಾ ಅನ್ಯ ದೇಶಗಳ ಪಾಲು ಮಾಡುವುದು ವಿಷಾದನೀಯ," ಎಂದು ಪ್ರಸ್ತುತ ಸಮಾಜದ ಕುರಿತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಯುವ ಕವಿ, ಪ್ರವರ ಕೊಟ್ಟೂರು ಅವರು ನಿರ್ವಹಿಸಿದರು.

- ಕೆ.ಎನ್ ರಂಗು ಚಿತ್ರದುರ್ಗ
ಎಸ್.ಡಿ.ಎಂ ಕಾಲೇಜು, ವಿದ್ಯಾರ್ಥಿ

 

MORE NEWS

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...

ಬೆಂಗಳೂರು ಸಾಹಿತ್ಯ ಉತ್ಸವ 2025: ಜ್ಞಾನದ ನಾಲ್ಕು ವೇದಿಕೆಗಳಲ್ಲಿ ಸಾಹಿತ್ಯದ ಹೊನಲು.

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BLR LitFest) 2025ರ 14ನೇ ಆವೃತ್ತಿಯ ಮೊದಲ ದಿನದ ಕಾರ್ಯಕ್ರಮಗಳು ಸಾಹಿತ್ಯಾಸ...