ಶಿವಮೊಗ್ಗ ಸುಬ್ಬಣ್ಣ "ರಜತಕಮಲ" ಪುರಸ್ಕೃತರಾದ ಕತೆ


ವೃತ್ತಿಯಲ್ಲಿ ವಕೀಲರು, ನೋಟರಿಯೂ ಆಗಿ, ನಾಡಿನ ಖ್ಯಾತ ಗಾಯಕರಾಗಿ ಮನೆ ಮಾತಾಗಿದ್ದ ಶಿವಮೊಗ್ಗ ಸುಬ್ಬಣ್ಣ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ವಯೋ ಸಹಜ ಮರೆವಿಗೆ ಜಾರಿದ್ದ ಅವರು ಹಲವು ಕಾಲ ಅನಾರೋಗ್ಯಕ್ಕೆ ತುತ್ತಾಗಿದ್ದರು. 11.08.2022 ಗುರುವಾರ ಅವರು ನಮ್ಮನ್ನಗಲಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ, ಸಚಿವರು, ಗಾಯಕರು, ಕಲಾವಿದರು, ಸಾಹಿತಿಗಳು, ಪತ್ರಕರ್ತರು, ಸಾರ್ವಜನಿಕರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸುಬ್ಬಣ್ಣ ಅವರನ್ನು ಬಹುಹಿಂದೆ ಸಂದರ್ಶಿಸಿದ್ದ ಆರ್.ಜಿ. ಹಳ್ಳಿ ನಾಗರಾಜರು ಅವರ ಬದುಕಿನ ಅನುಭವದ ಹೆಜ್ಜೆಯನ್ನು ದಾಖಲಿಸಿದ್ದ ಬರಹ  ಮತ್ತೆ ಓದುಗರಿಗೆ... 

ಕಲಾ ವಲಯದಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧಿಸುವ ಛಲವಿದ್ದು ಪ್ರತಿಭೆ ಇದ್ದವರಿಗೆಲ್ಲ ಈಗೀಗ ಅವಕಾಶಗಳು ದಂಡಿಯಾಗಿವೆ. ಅವಕಾಶ ಸಿಕ್ಕವರೆಲ್ಲ ತಮ್ಮ ಸಾಧನೆಗೆ ಮೆಚ್ಚುಗೆ, ಶಹಬ್ಬಾಶ್‌ಗಿರಿ ಪಡೆಯುತ್ತಾರೆ. ಮಾಧ್ಯಮಗಳ ಭರಾಟೆಯ ಈ ದಿನಗಳಲ್ಲಿ ಒಂದಲ್ಲ ಒಂದು ಮಾಧ್ಯಮದಲ್ಲಿ ಪ್ರಚಾರವೂ ಸಿಕ್ಕುತ್ತಿದೆ. ಈ ಪ್ರಚಾರದ ಹುಚ್ಚಿಗೆ ಬಿದ್ದ ಪೋಷಕರು ತಮ್ಮ ಮಗು ಸಂಬಂಧಿಸಿದ ಕ್ಷೇತ್ರದಲ್ಲಿ ನಿಜಕ್ಕೂ ಉತ್ಕೃಷ್ಟವಾದದ್ದನ್ನು ಸಾಧಿಸಿದೆಯೇ ಎಂಬ ಯೋಚನೆಯನ್ನೂ ಮಾಡದೆ "ವೇದಿಕೆ" ಹತ್ತಿಸಲು ಯತ್ನಿಸುತ್ತಾರೆ. ಜತೆಗೆ  ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಹಾತೊರೆಯುತ್ತಾರೆ. ಇಂಥವರನ್ನು ಕಂಡ ಹಿರಿಯ ಸಾಧಕರನೇಕರು 'ಮಗುವಿನ ಭವಿಷ್ಯವನ್ನು ತಂದೆ - ತಾಯಿಗಳೇ ಹಾಳು ಮಾಡುತ್ತಿದ್ದಾರೆ' ಎಂದು ಪ್ರತಿಕ್ರಿಯಿಸಿದ್ದನ್ನೂ ಕೇಳಿದ್ದೇವೆ.

ಕೆಲವರಿಗಂತೂ  ಶ್ರೀರಕ್ಷೆಯಾಗಿರುವ 'ಗಾಡ್‌ಫಾದರ್'ಗಳೂ ಇರುತ್ತಾರೆ. ಏನಾದರೂ ಆಗಬೇಕು ಎಂದು ಕನಸು ಕಾಣುತ್ತ ಸಾಧನೆಯ ಹಾದಿಯನ್ನು ಗುರ್ತಿಸಿಕೊಂಡು ಹೊರಟವರು ಯಶಸ್ವಿ ಆಗಲು ಇಂಥವರು ಸಿದ್ಧವಾಗಿರುತ್ತಾರೆ. ತಾವು ಹೊರಟ ಹಾದಿ ಯಾವುದು ಎಂಬುದು ಮೊದಲು ನಿರ್ಧಾರವಾಗಬೇಕು. ಹಾಗೆ ನಿರ್ಧರಿಸಿಕೊಂಡು ಮುನ್ನಡೆದವರು ತಮ್ಮ ಕನಸಿನ ಹಾದಿಯನ್ನು ಸುಗಮ ಮಾಡಿಕೊಂಡು ದೊಡ್ಡ ಕಲಾವಿದರಾಗಿ ಬೆಳೆದು ನಿಂತಿದ್ದಾರೆ. ಇದು ಇಂದಿನ ದಿನಮಾನದ ಕತೆಯಾದರೆ, ಐವತ್ತು, ಅರವತ್ತರ ದಶಕದಲ್ಲಿ ಗಾಡ್‌ಫಾದರೂ ಇಲ್ಲ, ಮಾಧ್ಯಮಗಳ ಭರಾಟೆಯೂ ಇಲ್ಲದ ಕಾಲದಲ್ಲಿ ಸಾಧಿಸಿದ್ದನ್ನು ಸಾರ್ವಜನಿಕವಾಗಿ ತೋರಿಸುವುದೇ ಕಷ್ಟವಾಗಿತ್ತು. ಆ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ಇರುತ್ತಿದ್ದವು. 

ಹೀಗೆ ಕನಸು ಕಾಣುತ್ತ ಹೊರಟ ಗ್ರಾಮೀಣ ಪ್ರದೇಶದ ಹುಡುಗನೊಬ್ಬ ಯುವಚೇತನದಲ್ಲಿ ಸಾಧಿಸಿದ್ದು, ಸಿರಿಕಂಠದ ಹಾಡಿಗೆ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪುರಸ್ಕಾರ ಪಡೆದದ್ದು ಇತಿಹಾಸ. ಅವರೇ ಶಿವಮೊಗ್ಗ ಸುಬ್ಬಣ್ಣ. ಅವರ ಮೂಲ ಹೆಸರು ಜಿ. ಸುಬ್ರಹ್ಮಣ್ಯ ಹೆಸರಿನ ಬದಲಾವಣೆಯ ಹಿಂದೆಯೂ ಕುತೂಹಲಕರ ಕಥೆ ಇದೆ. ಇಂಥ ಸಾಧನೆಯ ಹಾದಿಯಲ್ಲಿ ಸಾಗಿ ಬಂದ ಸಾಧಕನ ಯಶೋಗಾಥೆಯ ಹೆಜ್ಜೆ ಗುರುತು ಇಲ್ಲಿದೆ.

ಸಂಗೀತಾಸಕ್ತಿಯ ವಾತಾವರಣದ ಮನೆಯ ಬಾಲಕನಿಗೆ 'ಸ ರಿ ಗ ಮ ಪ ದ ನಿ ಸ'ವನ್ನು ಲಯಬದ್ಧವಾಗಿ ಶ್ರುತಿಗೆ ತಕ್ಕಂತೆ ಗುನುಗುವುದು ಅಷ್ಟೇನೂ ಕಷ್ಟವಾಗಲಿಲ್ಲ. ಮಲೆನಾಡಿನ ಸಿರಿಜಗತ್ತಿನಲ್ಲಿ ಹೆಜ್ಜೆ ಊರುವಾಗಲೇ ಶಾಸ್ತ್ರೀಯ ಸಂಗೀತದ ಕಲಿಕೆಯ ಪಾಠ ಆರಂಭ, ಭಜನೆಯ ಹಾಡು, ಭಕ್ತಿಗೀತೆ, ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಚಲನಚಿತ್ರಗೀತೆಗಳನ್ನು ಹುಡುಗ ಮೆಲುಕು ಹಾಕುತ್ತಿದ್ದ. ಪ್ರೌಢನಾಗುತ್ತಿದ್ದಂತೆ ಹಿಂದಿ ಗೀತೆಗಳತ್ತ ಒಲವು ಹೆಚ್ಚಿತು. ಹೆಚ್ಚಿನ ಓದಿಗೆ ಮಲೆನಾಡಿನಿಂದ ಹೊರಟಿದ್ದು ಮೈಸೂರಿಗೆ. ಅಲ್ಲಿ ಕಾಲೇಜಿನಲ್ಲಿ ಓದುವಾಗ ಸಂಗೀತ ಸ್ಪರ್ಧೆಯೊಂದರಲ್ಲಿ ಮುಖೇಶ್, ಮಹಮದ್ ರಫಿಯ ಹಿಂದಿ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಇಡೀ ಸಭೆಯಲ್ಲಿದ್ದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಜಿ. ಸುಬ್ರಹ್ಮಣ್ಯ ಎಂಬ ಆ ಯುವಕ ವೇದಿಕೆಯಲ್ಲಿ ಬೆಳ್ಳಿಕಪ್ಪು ಬಹುಮಾನವಾಗಿ ಸ್ವೀಕರಿಸಿದಾಗ ಭಾರೀ ಕರತಾಡನ.

ಬೆಳ್ಳಿ ಕಪ್‌ನೊಂದಿಗೆ ತಾವಿದ್ದ ರೂಂಗೆ ಹಿಂತಿರುಗಿದಾಗ ಗೆಳೆಯರ ಸಂಭ್ರಮ, ಮನೆ ಮಾಲೀಕರಿಗೂ ಸಂತೋಷ. ಬಹುಮಾನ ಬಂದ ಅದೇ ಬೆಳ್ಳಿಕಪ್ ತುಂಬಿ ಹಾಲು ಕೊಟ್ಟು ಹುಡುಗನಿಗೆ ಪ್ರೀತಿಯ ಹಾರೈಕೆ. ಹಿರಿಯರಿಂದ ಆಶೀರ್ವಾದ.

ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಓದುವಾಗ ನಡೆದ ಘಟನೆಯಿದು. ಮೈಸೂರು ವಿವಿಯಲ್ಲಿ ಅದೇ ಕಾಲಕ್ಕೆ ಪಿಎಚ್.ಡಿ., ಮಾಡುತ್ತಿದ್ದ ಕವಿ ಎನ್. ಎಸ್. ಲಕ್ಷ್ಮೀನಾರಾಯಣಭಟ್ಟರು ಇವರ ಹಿಂದಿ ಹಾಡುಗಾರಿಕೆ ಗುರ್ತಿಸಿ, ಕನ್ನಡ ಭಾವಗೀತೆಗಳನ್ನೇಕೆ ಹಾಡಬಾರದು? ಎಂದು ಆ ಕ್ಷೇತ್ರದತ್ತ ಒಲವು ಮೂಡಿಸುವಲ್ಲಿ ಯಶಸ್ವಿ ಆದರು. ಮುಂದೆ ಆಕಾಶವಾಣಿಯಲ್ಲಿ ಗಾಯಕಿ, ಸಂಗೀತ ಸಂಯೋಜಕಿ  ಎಚ್.ಆರ್. ಲೀಲಾವತಿ ಅವರ ಸಹಕಾರದಿಂದ ಹಾಡಲು ಶುರು ಮಾಡಿದರು. ಐದು ದಶಕಗಳ ಕಾಲ ಆಕಾಶವಾಣಿಯಲ್ಲಿ ಭಾವಗೀತೆ ಹಾಡುತ್ತ ಬಂದ ಅವರು ಹಿಂದೆ ಸರಿಯದೆ ಮುನ್ನಡೆಯುತ್ತಲೇ ಬಂದರು. ಅವರ ಪ್ರಕಾರ 'ಆಕಾಶವಾಣಿ ನಿಲಯದ ಪ್ರವೇಶ - ಪವಿತ್ರ ದೇವಾಲಯದ ಪ್ರವೇಶ'.

ಮುಂದೆ ಮತ್ತೊಮ್ಮೆ ಕವಿ ಎನ್‌ಎಸ್‌ಎಲ್ ಭಟ್ಟರು ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾದದ್ದು ಅಷ್ಟೇ ಅಲ್ಲ, ಶಿವಮೊಗ್ಗ ಸೇರಿದ್ದ ಗಾಯಕ ಸುಬ್ರಹ್ಮಣ್ಯಗೆ ಚಲನಚಿತ್ರದಲ್ಲಿ ಹಾಡುವ ದೊಡ್ಡ ಅವಕಾಶ ಕಲ್ಪಿಸಿದರು. ಅದು ತೀರ ಅನೀರೀಕ್ಷಿತ. ಚಂದ್ರಶೇಖರ ಕಂಬಾರ - ಎನ್‌ಎಸ್‌ಎಲ್ ಬೆಂಗಳೂರು ವಿವಿ ಕನ್ನಡ ವಿಭಾಗದ ಸಹದ್ಯೋಗಿಗಳು. ಕಂಬಾರರಿಗೆ ಜಾನಪದ, ನಾಟಕ, ಕಾವ್ಯಾಸಕ್ತ ಕ್ಷೇತ್ರ. ಎನ್‌ಎಸ್‌ಎಲ್‌ಗೆ ಕಾವ್ಯ, ಭಾವಗೀತೆ ಬಗ್ಗೆ ಆಸಕ್ತಿ. ಕಂಬಾರರಿಗೆ ನಾಟಕ ಕೈ ಹಿಡಿದಿದ್ದ ಕಾಲದಲ್ಲಿ ಸಿನಿಮಾ, ನಿರ್ದೇಶಿಸುವ ಕನಸು. ಅದಕ್ಕಾಗಿ ಕೆಲಕಾಲ ತಯಾರಿಯಲ್ಲಿದ್ದಾಗ ಕವಿ ಎನ್‌ಎಸ್‌ಎಲ್ ಬಳಿ ಸಿನಿಮಾ ಕತೆ ಚರ್ಚಿಸಿದ್ದರು. ಅದು ಕಂಬಾರರ ಕಾದಂಬರಿ 'ಕರಿಮಾಯಿ'. ಅದರ ಹಾಡುಗಳ ರಚನೆ, ಸಂಯೋಜನೆ, ನಿರ್ದೇಶನದ ಬಹುಮುಖ ಆಯಾಮ ಕಂಬಾರ ಅವರದ್ದಾಗಿತ್ತು. ಕಂಬಾರರ ಮನಸಿನಲ್ಲಿ ತಮ್ಮ ಸಿನಿಮಾಗೆ ಎಸ್. ಪಿ. ಬಾಲಸುಬ್ರಹ್ಮಣ್ಯಂ,  ಎಸ್. ಜಾನಕಿ ಗೀತೆಗಳನ್ನು ಹಾಡಬೇಕು ಎಂದಿತ್ತು. ಮಿತ್ರರಾದ ಎನ್‌ಎಸ್‌ಎಲ್ ಒಂದು ಸಲಹೆ ನೀಡಿ, 'ಹೇಗೂ ಹೊಸ ಆಲೋಚನೆಯ ಪ್ರಯೋಗಾತ್ಮಕ ಸಿನಿಮಾ. ಹೊಸಬರೇ ಇರುವುದರಿಂದ ಕನ್ನಡದ ಯುವ ಗಾಯಕರನ್ನು ನಿಮ್ಮ ಸಿನಿಮಾ ಹಾಡಿಗೆ ಪರಿಚಯಿಸಿ, ನನಗೆ ಪರಿಚಯದ ಒಬ್ಬ ಉತ್ತಮ ಕಂಠದ ಪ್ರತಿಭಾವಂತ ಗಾಯಕ ಶಿವಮೊಗ್ಗದಲ್ಲಿದ್ದಾನೆ. ಅವನನ್ನು ಕರೆಯಿಸಿ ಒಮ್ಮೆ ಧ್ವನಿ, ಹಾಡಿನ ಧಾಟಿ ಪರೀಕ್ಷಿಸಿ, ಒಪ್ಪಿಗೆಯಾದರೆ ಅವನಿಂದ ಹಾಡಿಸಿ, ಎಸ್.ಪಿ.ನೇ ಏಕೆ ಆಗಬೇಕು?' ಎಂದರು. ಮನಸ್ಸಿಲ್ಲದೆ ಈ ಸಲಹೆಯನ್ನು ಕಂಬಾರರು ಸ್ವೀಕರಿಸಿ ಹೇಳಿದರು. 'ನನಗೆ ಆ ಸುಬ್ರಹ್ಮಣ್ಯ ಯಾರೋ ಏನೋ ಪರಿಚಯ ಇಲ್ಲ, ನೀನು ಹೇಳಿದ್ದಕ್ಕೆ ಆಯ್ತು ಅಂದಿರುವೆ. ನಾಳೆಯೇ ಮದ್ರಾಸ್‌ಗೆ ಹೊರಟಿರುವೆ. ಆ ಹುಡುಗನನ್ನು ಮದ್ರಾಸ್‌ಗೆ ಕಳುಹಿಸಿಕೊಡುವ ಜವಾಬ್ದಾರಿ ನಿಂದೇ' ಎಂದು ಮದ್ರಾಸ್‌ಗೆ ಟಿಕೆಟ್ ತೆಗೆದುಕೊಟ್ಟು ಹೊರಟು ಹೋದರು. 

ತತ್‌ಕ್ಷಣ ಶಿವಮೊಗ್ಗಕ್ಕೆ ಟೆಲಿಗ್ರಾಂ ಹೊರಟಿತು. ಟೆಲಿಗ್ರಾಂ ಕಂಡ ಸುಬ್ರಹ್ಮಣ್ಯ ಆತಂಕದಿಂದಲೇ ಶಿವಮೊಗ್ಗದಿಂದ ಬೆಂಗಳೂರಿಗೆ ಓಡಿಬಂದರು. ಎನ್‌ಎಸ್‌ಎಲ್ ಧೈರ್ಯತುಂಬಿ, ಸಂಗೀತವೂ ಗೊತ್ತಿರುವ ಕಂಬಾರ, ಜಾನಪದ ಸತ್ವದ ಕವಿ, ಚೆನ್ನಾಗಿ ಹಾಡಿ ಬಾ ಎಂದು ಆಶಿಸಿ ಸ್ನೇಹಿತನನ್ನು ಬೀಳ್ಕೊಟ್ಟರು. 

ಸುಬ್ರಹ್ಮಣ್ಯ ಮದ್ರಾಸ್ ತಲುಪಿ, ಕಂಬಾರರನ್ನು ಹೋಟೆಲ್‌ವೊಂದರಲ್ಲಿ ಪ್ರಥಮ ಭೇಟಿಯಾದರು. ಒಂದಷ್ಟು ಮಾತು, ಸಂಗೀತಜ್ಞಾನದ ಬಗ್ಗೆ ವಿವರದ ನಂತರ ಸ್ಟುಡಿಯೋಗೆ ಹೊರಟರು. ಅವರ 'ಕರಿಮಾಯಿ' ಚಿತ್ರದ ಹಾಡಿನ ಪಲ್ಲವಿ ಹೇಳಿ, ತಾವೇ ಹಾಕಿದ್ದ ಟ್ಯೂನ್ ಕೊಟ್ಟು ಪರೀಕ್ಷಿಸಿದರು. ಛಾಲೆಂಜಾಗಿ  ತೆಗೆದುಕೊಂಡ ಸುಬ್ರಹ್ಮಣ್ಯ ಪರೀಕ್ಷೆಯಲ್ಲಿ ಗೆದ್ದರು. ಕಂಬಾರರಿಗೂ ಇಷ್ಟವಾಯಿತು. ಈ ಹುಡುಗನಿಂದ ಹಾಡಿಸಬಹುದು ಎಂಬ ಭರವಸೆ ಮೂಡಿತು. ಹಾಡಿನ ಧ್ವನಿ ಮುದ್ರಣ ಕೆಲಸ ಮುಗಿಯಿತು. ಧ್ವನಿ ಮುದ್ರಣ ಮುಗಿಸಿಕೊಂಡು ಬೆಂಗಳೂರಿಗೆ ಬಂದು ಗೆಳೆಯ ಭಟ್ಟರನ್ನು ನೋಡಿ ಶಿವಮೊಗ್ಗ ಹಾದಿ ಹಿಡಿದರು. ಅಲ್ಲಿಗಾಗಲೇ ಸುಬ್ರಹ್ಮಣ್ಯ ಹೊಟ್ಟೆಪಾಡಿಗಾಗಿ ವಕೀಲ ವೃತ್ತಿ ಹಿಡಿದಿದ್ದರು.

"ಕರಿಮಾಯಿ" ಎಪ್ಪತ್ತರ ದಶಕದಲ್ಲಿನ ಹೊಸ ಅಲೆಯ ಚಿತ್ರವೆಂದೂ, ವಿಶ್ವವಿದ್ಯಾಲಯದ ಮೇಸ್ಟ್ರು ಒಬ್ಬರ ಪ್ರಯೋಗದ ಸಿನಿಮಾ, ಜಾನಪದ ಸತ್ವ ಹಾಗೂ ಉತ್ತರ ಕರ್ನಾಟಕ ಸೊಗಡನ್ನೂ ಅಲ್ಲಿನ ಕಥಾಹಂದರ ಹೊಂದಿದೆಯೆಂದು ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಸಿನಿಮಾ ಧ್ವನಿಮುದ್ರಿಕೆಯ ತಟ್ಟೆ (ಪ್ಲೇಟು) ಬಿಡುಗಡೆಯಾಗಿತ್ತು.

ಇಲ್ಲಿ ಒಂದು ಯಡವಟ್ಟಾಗಿತ್ತು. ಧ್ವನಿ ಮುದ್ರಿಕೆಯಲ್ಲಿ ಹಾಡಿದವರು ಜಿ. ಸುಬ್ರಹ್ಮಣ್ಯ ಎಂಬ ಹೆಸರಿನ ಬದಲು ಎಸ್. ಪಿ. ಬಾಲಸುಬ್ರಹ್ಮಣ್ಯಂ ಎಂದು ಅಚ್ಚಾಗಿತ್ತು! ಈ ಪ್ರಮಾದ ಸಂಗೀತದ ಧ್ವನಿ ಮುದ್ರಿಕೆಗಳ ಮಾರಾಟ ಮಾಡುವ ಸಂಸ್ಥೆಯ ಕೈವಾಡವೋ, ಅಚಾತುರ್ಯವೋ, ವ್ಯಾಪಾರಿ ಮನೋಭಾವವೋ ಅಂತೂ ಪ್ರಥಮ ಚುಂಬನಂ ದಂತ ಭಗ್ನಂ ಆದಂತಾಯಿತು. ಆಗ ಸಿಲೋನ್ ರೇಡಿಯೋ ಜನಪ್ರಿಯವಾಗಿತ್ತು. ಅಲ್ಲಿಂದ ಈ ಸಿನಿಮಾದ ಹಾಡು ಪ್ರಸಾರವಾಗುವಾಗ “ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಡಿದ್ದು" ಎಂದೇ ಉದ್ಘೋಷಕರು ಹೇಳುತ್ತಿದ್ದರು. ಶಿವಮೊಗ್ಗ ಹಾಗೂ ಸುತ್ತಮುತ್ತ ಆಗಲೇ ಹಾಡಿನ ಸುಬ್ಬಣ್ಣ ಆಗಿದ್ದ ಇವರಿಗೆ ಇದರಿಂದ ಮುಜುಗರ ಆಯಿತು.

ಅತ್ತ, ಶಿವಮೊಗ್ಗ ಯುವಕನಿಗೆ ನಿರಾಶೆಯ ಛಾಯೆ, ಮುಂದೆ ಸಿನಿಮಾಗೆ ಏನೇನೋ ತೊಡಕುಗಳು ಅಡ್ಡಿಯಾದ್ದರಿಂದ 'ಕರಿಮಾಯಿ' ಬಿಡುಗಡೆಯ ಭಾಗ್ಯ ಕಾಣಲೇ ಇಲ್ಲ. ಕಂಬಾರರ ಪ್ರಥಮ ಸಿನಿಮಾ ಯತ್ನವೂ ಯಶಸ್ವಿ ಆಗಲಿಲ್ಲ. ಕೆಲವು ವರ್ಷ ಚೇತರಿಕೆ ಆದ ನಂತರ ಕಂಬಾರರು ಮತ್ತೆ ತಮ್ಮದೇ ಆದ ಕಥೆ “ಕಾಡುಕುದುರೆ”ಯನ್ನು ಸಿನಿಮಾ ಮಾಡಲು ಕೈಗೆತ್ತಿಕೊಂಡರು. ಗಂಡು-ಹೆಣ್ಣಿನ ಕಾಮದ ವಸ್ತುವಿನ ಕಥೆ ಅದು. ಅದಕ್ಕೆ ತಕ್ಕದಾದ ಜಾನಪದ ಶೈಲಿಯ ಹಾಡು, ಹಾಡಿನ ಗಮ್ಮತ್ತನ್ನು ತಾವೇ ಹಾಡುವ ಮೂಲಕ ಕಂಬಾರರು ಉತ್ತಮ ಹಾಡುಗಾರರು ಎಂಬುದನ್ನು ಸಾದರ ಪಡಿಸಿದ್ದರು.

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ಕಂಬಾರ ಸೇರಿ ಹಾಡಿನ ಸುಬ್ರಹ್ಮಣ್ಯನಿಗೆ ಮತ್ತೆ ಹಾಡಲು ಅವಕಾಶ ಕಲ್ಪಿಸಿದರು. ಹಿಂದಿನ ಸಿನಿಮಾದಲ್ಲಿ ಆದ ಅನ್ಯಾಯ ಸರಿಪಡಿಸಲು ಇಬ್ಬರೂ ಬದ್ಧರಾದರು. ಮತ್ತೆ ಹಾಡಿನ ಧ್ವನಿ ಮುದ್ರಿಕೆಗೆ ಮದ್ರಾಸ್‌ಗೆ ಪಯಣ ಬೆಳೆಸಿದರು. ಮೊದಲಿಗಿಂತ ಈ ಸಾರಿ ಆತ್ಮವಿಶ್ವಾಸ ಹೆಚ್ಚಿತ್ತು. ಭಯ ಆತಂಕ ದೂರವಾಗಿತ್ತು. ಗೀತರಚನೆ, ರಾಗ ಸಂಯೋಜನೆಯ ಅನ್ನೋನ್ಯ ಸಂಗಮವಾಗಿತ್ತು. ಸಾಹಿತ್ಯ ಸತ್ವದ ಜತೆ, ಸುಬ್ರಹ್ಮಣ್ಯ ಸೊಗಸಾಗಿ ಹಾಡಿದ್ದರು. ಚಂದ್ರಶೇಖರ ಕಂಬಾರರೇ ಈ ಗಾಯಕನಿಗೆ ಜಿ. ಸುಬ್ರಹ್ಮಣ್ಯ ಎಂಬ ಹೆಸರು ಬೇಡ, ಬೇರೆ ಹೆಸರು ನಾಮಕರಣ ಮಾಡಬೇಕು ಎಂದು ನಿರ್ಧರಿಸಿದರು. ಭಟ್ಟರು, ಕಂಬಾರರು ಸೇರಿ 'ಶಿವಮೊಗ್ಗ ಸುಬ್ಬಣ್ಣ' ಎಂದು ಮರುನಾಮಕರಣ ಮಾಡಿದರು. ಸುಬ್ರಹ್ಮಣ್ಯ ಹೋಗಿ ಹಾಡಿನ ಸುಬ್ಬಣ್ಣನಾಗಿ ಕೊನೆಗೆ ಶಿವಮೊಗ್ಗ ಸುಬ್ಬಣ್ಣ ಆದ ತೀರ್ಮಾನ ಕೈಗೊಂಡಿದ್ದು ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ. ಇದು ಆದದ್ದು 1979ರ ಕಾಲ.

ಈ ಸಾರಿ ಕಾಡುಕುದುರೆಯ ಧ್ವನಿ ಮುದ್ರಿಕೆ ತಟ್ಟೆಯಲ್ಲಿ ಹಾಡಿದವರು ಶಿವಮೊಗ್ಗ ಸುಬ್ಬಣ್ಣ ಎಂದೇ ಮುದ್ರಣವಾಗಿ ಮಾರುಕಟ್ಟೆಗೆ ಬಂತು. ಅಧಿಕೃತವಾಗಿ ಠಸ್ಸೆ ಒತ್ತಿಕೊಂಡ 'ಕಾಡುಕುದುರೆ ಓಡಿ ಬಂದಿತ್ತಾ... ಊರಿನಾಚೆ ದೂರದಾರಿ..' ಎಂಬ ಹಾಡಿಗೆ ರಾಷ್ಟ್ರ ಮಟ್ಟದ 'ರಜತಕಮಲ' ಪ್ರಶಸ್ತಿ ದಕ್ಕಿತು. ಆಗ ರೇಡಿಯೋ, ಪತ್ರಿಕೆ ಬಿಟ್ಟರೆ ಮಾಧ್ಯಮಗಳೇ ಇರಲಿಲ್ಲ. ಹಳ್ಳಿ, ಮುಖ್ಯ ಪಟ್ಟಣಗಳಿಗೂ ಪತ್ರಿಕೆ ತಲುಪುವುದು ತಡವಾಗುತ್ತಿತ್ತು. ರಾಷ್ಟ್ರೀಯಮಟ್ಟದ ದೊಡ್ಡ ಪ್ರಶಸ್ತಿ ಬಂದದ್ದು ಸುಬ್ಬಣ್ಣನಿಗೆ ಗೊತ್ತೇ ಆಗಿರಲಿಲ್ಲ! ಪ್ರಶಸ್ತಿ ಪ್ರಕಟವಾದ ಮಾರನೆ ಬೆಳಿಗ್ಗೆ ಬಸ್ ಪ್ರಯಾಣಿಕರೊಬ್ಬರು ಅಂದಿನ ಪ್ರಜಾವಾಣಿಯ ಮುಖಪುಟದಲ್ಲಿ ಬಂದ ರಾಷ್ಟ್ರಪ್ರಶಸ್ತಿ ಸುದ್ದಿ ತೋರಿಸಿದರು. ಸುಬ್ಬಣ್ಣನಿಗೆ ನಂಬಲಾಗಲೇ ಇಲ್ಲ. ಅಷ್ಟು ಹೊತ್ತಿಗೆ ಸುದ್ದಿ ಜನರ ಬಾಯಿಂದ ಬಾಯಿಗೆ ತಲುಪಿತ್ತು. 

ಆಶ್ಚರ್ಯವೆಂದರೆ "ಭುಟ್ಟೋಗೆ ಗಲ್ಲು. ಶಿವಮೊಗ್ಗ ಸುಬ್ಬಣ್ಣನಿಗೆ ರಾಷ್ಟ್ರೀಯ ಗಾಯಕ ಪ್ರಶಸ್ತಿ"' ಎಂದು ಮುಖಪುಟದಲ್ಲಿ ಸುದ್ದಿ ಅಚ್ಚಾಗಿತ್ತು. ನಿಜ, ಸುಬ್ಬಣ್ಣ ಕನ್ನಡ ಚಿತ್ರ ಜಗತ್ತಿನ ಹಾಡಿನಲ್ಲಿ ತಮ್ಮ ಧ್ವನಿ ದಾಖಲೆ ಮಾಡಿದ್ದರು.

"ಕಾಡುಕುದುರೆ" ಚಿತ್ರದಿಂದ ಹಾಡಿನ ಸುಬ್ಬಣ್ಣ ಹೋಗಿ ಮುಂದೆ ಶಿವಮೊಗ್ಗ ಸುಬ್ಬಣ್ಣ ಎಂದೇ ಖ್ಯಾತರಾದರು. ಮನೆಮನೆಗಳಲ್ಲಿ ಈ ಹೆಸರು ಅನುರಣಿಸಿತು. 'ಕರಿಮಾಯಿ'ಯಲ್ಲಿ ಆದ ಪ್ರಮಾದ ದೂರವಾಗಿ ಎಲ್ಲರಲ್ಲೂ ಖುಷಿ ತಂದಿತ್ತು. ಕಂಬಾರ ಅವರ ಕಾಡುಕುದುರೆ ಸಿನಿಮಾ ಬಿಡುಗಡೆಯಾಗಿ ಸುದ್ದಿ ಮಾಡಿತು. ರಾಷ್ಟ್ರಪ್ರಶಸ್ತಿ ಪಡೆದ ಹಾಡಿನ ಸಿನಿಮಾವನ್ನ ಎಲ್ಲ ವರ್ಗದ ಜನ ನೋಡಿ ಆನಂದಿಸಿದರು. ಕನ್ನಡಕ್ಕೊಂದು ಭಿನ್ನ ಕಥಾವಸ್ತು,  ಲೈಂಗಿಕ ಪ್ರತಿಮೆ, ಕಾಮಪ್ರಚೋದಕ ಸನ್ನಿವೇಶ, ಜಾನಪದೀಯ ಹಾಗೂ ಪ್ರಾದೇಶಿಕ ಸೊಗಡಿನ "ಕಾಡುಕುದುರೆ ಓಡಿ ಬಂದಿತ್ತಾ... " ಹಾಡನ್ನು ಜನ ಮೆಚ್ಚಿದರು. ಕಂಬಾರ - ಶಿವಮೊಗ್ಗ ಸುಬ್ಬಣ್ಣ ಇಬ್ಬರೂ ಈ ಮೂಲಕ ಹೆಸರಾಗಿ, ಮನೆ ಮಾತಾದರು.

ದೆಹಲಿ ರಾಷ್ಟ್ರಪತಿ ಭವನದಲ್ಲಿ ಸುಬ್ಬಣ್ಣ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ "The Best Male Play back Singer award is given to Subbanna for having sung theme song 'Kadukudure', which is at once vigorous and lyrical" ಕಾಡುಕುದುರೆ ಚಿತ್ರದ ಹಾಡನ್ನು ಅತ್ಯಂತ ತೇಜಃಪೂರ್ಣವಾಗಿ, ಕಾವ್ಯಮಯವಾಗಿ ಹಾಡಿದ್ದಕ್ಕಾಗಿ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಬರೆಯಲಾಗಿತ್ತು.

ಅಂದಿನ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಎದುರು ಸಾಲಿನಲ್ಲಿ ನಟ ರಾಜಕಪೂರ್ ಅವರ ಸಿನಿಮಾಗಳಿಗೆಲ್ಲ ಸ್ಕ್ರಿಪ್ಟ್ ಮಾಡುತ್ತಿದ್ದ ಖ್ಯಾತ ಲೇಖಕ ಕೆ.ಎ. ಅಬ್ಬಾಸ್ ಕುಳಿತಿದ್ದರು. ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದಿದ್ದರೂ, ಸುಬ್ಬಣ್ಣನ ಕಾಡುಕುದುರೆ ಹಾಡನ್ನು ಕೇಳಿ, ಹಾಡಿನ ನಂತರ ವೇದಿಕೆಗೆ ಬಂದು “Subbanna, does this song signify dance of a wild Horse” ಎಂದು ಕೇಳಿದರು. ಕಾಡುಕುದುರೆ ನೃತ್ಯವನ್ನು ಪರಿಭಾವಿಸಿದ ಅಬ್ಬಾಸ್ ಅವರ ಸಾಮರ್ಥ್ಯ ದೊಡ್ಡದು ಎಂದು ಸ್ಮರಿಸುವ ಸುಬ್ಬಣ್ಣ, ಕಂಬಾರರ ರಚನೆಯಲ್ಲಿ ಆ ಶಕ್ತಿ ಇದೆ ಎಂಬುದು ಅವರ ಅನಿಸಿಕೆ. ಸ್ವತಃ ಹಾಡುಗಾರರು, ರಾಗಸಂಯೋಜಕರಾದ ಕಂಬಾರರು ಜಾನಪದ ಬನಿಯನ್ನು ತಮ್ಮ ಅಂತಃಸತ್ವದಲ್ಲಿ ತುಂಬಿಕೊಂಡಿದ್ದಾರೆ.

18 ಜುಲೈ 2015‌, "ಟೈಮ್ಸ್ ಆಫ್ ಕರ್ನಾಟಕ" ಪತ್ರಿಕೆಯ ಅಂಕಣ.
("ಹೆದ್ದಾರಿ ಕವಲು" (2016) ಅಂಕಣ ಬರಹದ ಸಂಕಲನದಲ್ಲಿ ಸೇರಿದೆ.)

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...