ಶಿವಶರಣೆ ಅಕ್ಕಮ್ಮ

Date: 28-02-2022

Location: ಬೆಂಗಳೂರು


'ಅಕ್ಕಮ್ಮನ ವಚನಗಳನ್ನು ಅಧ್ಯಯನ ಮಾಡಿದಾಗ ಆಕೆ ವ್ರತಕ್ಕೆ ಮಹತ್ವದ ಸ್ಥಾನ ಕೊಟ್ಟಿದ್ದಾಳೆ. 64 ವ್ರತಗಳನ್ನು, 56 ಶೀಲಗಳನ್ನು, 32 ನೇಮಗಳನ್ನು ಹೇಳಿದ್ದಾಳೆ. ಈ ವ್ರತ ನೇಮಗಳು ಇತರ ಮಹಿಳೆಯರು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ವ್ರತ - ನೇಮಗಳಂತಿರದೆ, ಇವೆಲ್ಲ ಶರಣಸಿದ್ದಾಂತಕ್ಕೆ ಬದ್ಧವಾದ ವ್ರತ - ನೇಮಗಳಾಗಿದ್ದುವೆಂಬುದು ಬಹುಮುಖ್ಯವಾಗುತ್ತದೆ' ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’ ಅಂಕಣದಲ್ಲಿ ಶಿವಶರಣೆ ಅಕ್ಕಮ್ಮನ ಕುರಿತು ಚರ್ಚಿಸಿದ್ದಾರೆ.

ಅಕ್ಕಮ್ಮನ ಕಾಲ ಕ್ರಿ.ಶ. 1160 ಆಗಿದೆ. ಈಕೆಯ ಮೊದಲಿನ ಹೆಸರು ರೆಮ್ಮವ್ವೆಯಾಗಿತ್ತು. ಈಕೆ ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದಲ್ಲಿ ಜನಿಸಿರಬಹುದಾಗಿದೆ. ಇದೇ ಊರಿನಲ್ಲಿದ್ದ ಏಲೇರಿ ಕೇತಯ್ಯನವರ ಪ್ರಭಾವ ಇವಳ ಮೇಲಾಗಿರಬಹುದು. ಈಕೆಯದು ಕೃಷಿಕಾಯಕವಾಗಿತ್ತು. ಫ.ಗು. ಹಳಕಟ್ಟಿಯವರ ಶಿವಾನುಭವ ಗ್ರಂಥಮಾಲೆಯಲ್ಲಿ "ಏಲೇಶ್ವರಲಿಂಗ" ಅಂಕಿತದಲ್ಲಿ 23 ವಚನಗಳು ಪ್ರಕಟವಾಗಿವೆ. "ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ" ಅಂಕಿತದ ವಚನಗಳು ಏಲೇಶ್ವರ ಕೇತಯ್ಯನ ಹೆಸರಿನಲ್ಲಿ ಸೇರಿಕೊಂಡಿರಲು ಕಾರಣವೇನೆಂಬುದು ಇನ್ನೂ ಸಂಶೋಧನೆಯಾಗಿಲ್ಲ. ಇವುಗಳನ್ನೆಲ್ಲ ಪ್ರತ್ಯೇಕಿಸಿ ಡಾ. ಆರ್.ಸಿ. ಹಿರೇಮಠರು "ಅಕ್ಕಮ್ಮನ ವಚನಗಳು" ಎಂಬ ಶೀರ್ಷಿಕೆಯಲ್ಲಿ ಅಕ್ಕಮ್ಮನ ವಚನಗಳನ್ನು ಪ್ರಕಟಿಸಿದ್ದಾರೆ. ರೆಮ್ಮವ್ವೆಯೇ ಅಕ್ಕಮ್ಮ ಎಂಬುದು ಈಗಾಗಲೇ ನಡೆದ ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ಈಕೆಯ ಒಂದು ವಚನದಲ್ಲಿ "ಏಲೇಶ್ವರದ ಗೊತ್ತು ಕೆಟ್ಟಿತ್ತು" ಎಂಬ ಮಾತು ಬರುತ್ತದೆ. ಏಲೇಶ್ವರದ ಕೇತಯ್ಯ ಮತ್ತು ಏಲೇಶ್ವರದ ಅಕ್ಕಮ್ಮ ದಂಪತಿಗಳಾಗಿದ್ದರೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಆದರೆ ಇಬ್ಬರ ವಚನಗಳಲ್ಲಿಯೂ ಶೀಲ-ವ್ರತ-ಆಚಾರ ಕುರಿತ ವಿಷಯಗಳು ಇವೆ.

ಅಕ್ಕಮ್ಮನ 154 ವಚನಗಳು ಪ್ರಕಟವಾಗಿವೆ. "ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ" ಅಂಕಿತದಲ್ಲಿ ಈಕೆ ವಚನಗಳನ್ನು ರಚಿಸಿದ್ದಾಳೆ. ಈಕೆಯ ಬಗೆಗೆ ನಡುಗನ್ನಡ ಕವಿಗಳು ಪ್ರಸ್ತಾಪಿಸಿಲ್ಲ. ಈಕೆ ಬಸವಾದಿ ಶರಣರನ್ನು ತನ್ನ ವಚನಗಳಲ್ಲಿ ಸ್ಮರಿಸಿರುವಂತೆ, ನಿಜಗುಣ ಶಿವಯೋಗಿಯನ್ನೂ ಸ್ಮರಿಸಿದ್ದಾಳೆ. ನಿಜಗುಣ ಶಿವಯೋಗಿಯ ಕಾಲ 15ನೇ ಶತಮಾನ. ಹಾಗಾದರೆ ಈಕೆ 15ನೇ ಶತಮಾನದ ನಂತರದ ವಚನಕಾರ್ತಿಯೇ ಎಂಬ ಸಂದೇಹ ಕಾಣಿಸಿಕೊಳ್ಳುತ್ತದೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ. ಕವಿಚರಿತೆಕಾರರು ಈಕೆಯನ್ನು ಬಸವಾದಿ ಶರಣರ ಮೂಲಕವೇ ಗುರುತಿಸಿದ್ದಾರೆ. 12ನೇ ಶತಮಾನದಲ್ಲಿ ನಿಜಗುಣನೆಂಬ ಶರಣನಿರಬೇಕು. ಆ ಶರಣನನ್ನೇ ಈಕೆ ತನ್ನ ವಚನಗಳಲ್ಲಿ ಸ್ಮರಿಸಿಕೊಂಡಿರಬಹುದಾಗಿದೆ. ಅಕ್ಕಮ್ಮನ ಬಗೆಗೆ, ಆಕೆಯ ಜೀವನ ಚರಿತ್ರೆಯ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆಕೆ ಒಬ್ಬ ಕೃಷಿಕಾಯಕದ ಮಹಿಳೆಯಾಗಿರಬಹುದೆಂದು ತಿಳಿದುಬರುತ್ತದೆ. ಮದುವೆಯಾಗದೆ, ಸ್ವತಂತ್ರ ಜೀವನ ನಡೆಸಿರಬೇಕೆಂದು ಊಹಿಸಬಹುದಾಗಿದೆ.

ಅಕ್ಕಮ್ಮನ ವಚನಗಳನ್ನು ಅಧ್ಯಯನ ಮಾಡಿದಾಗ ಆಕೆ ವ್ರತಕ್ಕೆ ಮಹತ್ವದ ಸ್ಥಾನ ಕೊಟ್ಟಿದ್ದಾಳೆ. 64 ವ್ರತಗಳನ್ನು, 56 ಶೀಲಗಳನ್ನು, 32 ನೇಮಗಳನ್ನು ಹೇಳಿದ್ದಾಳೆ. ಈ ವ್ರತ ನೇಮಗಳು ಇತರ ಮಹಿಳೆಯರು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ವ್ರತ - ನೇಮಗಳಂತಿರದೆ, ಇವೆಲ್ಲ ಶರಣಸಿದ್ದಾಂತಕ್ಕೆ ಬದ್ಧವಾದ ವ್ರತ - ನೇಮಗಳಾಗಿದ್ದುವೆಂಬುದು ಬಹುಮುಖ್ಯವಾಗುತ್ತದೆ. ಈಕೆ ಆಹಾರಪದ್ಧತಿಯ ಬಗೆಗೆ ಪ್ರಸ್ತಾಪಿಸುತ್ತಾ ಬೆಳ್ಳುಳ್ಳಿ, ಉಳ್ಳಾಗಡ್ಡೆ ಯಂತಹ ಪದಾರ್ಥಗಳನ್ನು ಅತಿಯಾಗಿ ಸೇವಿಸಬಾರದೆಂದು ಹೇಳಿದ್ದಾಳೆ.

ಅಕ್ಕಮ್ಮನ ವಚನಗಳಲ್ಲಿ ಮಾಹೇಶ್ವರ ಸ್ಥಲದ ನಿಷ್ಠೆಗೆ ಮಹತ್ವದ ಸ್ಥಾನ ನೀಡಲಾಗಿದೆ. ವಯಸ್ಸಿನಿಂದ ಹಿರಿಯರಾದವರು ಹಿರಿಯರಲ್ಲ, ಆಚರಣೆ - ನಿಷ್ಠೆಗಳಿಂದ ಇರುವವರು ನಿಜವಾದ ಹಿರಿಯರೆಂದು ಹೇಳಿದ್ದಾಳೆ. ವಯಸ್ಸಿನಿಂದ ಹಿರಯರಾದವರನ್ನು "ಹೋತಿನ ಗಡ್ಡದ ಹಿರಿಯರು ನೋಡಾ" ಎಂದು ವಿಡಂಬಿಸಿದ್ದಾಳೆ. ಅಕ್ಕಿ, ಬೇಳೆ, ಬೆಲ್ಲ ಮುಂತಾದ ಪದಾರ್ಥಗಳನ್ನು ದೇವರ ಪೂಜಾರಿಗೆ ಕೊಟ್ಟು ವ್ರತ ಮಾಡುವವರನ್ನು ಕಂಡು ಅಕ್ಕಮ್ಮ ಕಟುವಾಗಿ ಟೀಕಿಸಿದ್ದಾಳೆ. ಮಾಂಸ ತಿನ್ನುವವರನ್ನು, ಸುರೆ ಕುಡಿಯುವವರನ್ನು ಅಕ್ಕಮ್ಮ ವಿರೋಧಿಸಿದ್ದಾಳೆ. ಇಂತಹವರೆಲ್ಲ ವ್ರತಭ್ರಷ್ಟರೆಂದು ಟೀಕಿಸಿದ್ದಾಳೆ. ಅರಿವು, ಆಚಾರಗಳಿಗೆ ಅತ್ಯಂತ ಮಹತ್ವ ಕೊಟ್ಟ ಅಕ್ಕಮ್ಮ, ಯಾವುದೇ ವಿಚಾರವು ಆಚರಣೆಗೆ ಬಂದಾಗಲೇ ಪೂರ್ಣವಾಗುತ್ತದೆಂದು ಹೇಳಿದ್ದಾಳೆ. ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ, ಅನಾಚಾರಿಗಳ ಮುಖವ ನೋಡಬಹುದೆ? ಎಂದು ಪ್ರಶ್ನಿಸಿದ್ದಾಳೆ.

ಎಲ್ಲ ವ್ರತಗಳಿಗೂ ಜಂಗಮ ಪ್ರಸಾದವೇ ಪ್ರಾಣ. ಎಲ್ಲಾ ನೇಮಕ್ಕೂ ಜಂಗಮ ದರ್ಶನವೇ ನೇಮವೆಂದು ಹೇಳಿರುವ ಅಕ್ಕಮ್ಮನು ಗುರು-ಲಿಂಗ-ಜಂಗಮರಿಗೆ ಪ್ರಾಮುಖ್ಯತೆ ನೀಡಿದ್ದಾಳೆ. ಸ್ವಾರ್ಥಿಗಳು, ಕ್ರೋಧಿಗಳು, ಲೋಭಿಗಳು ಯಾವುದೇ ವ್ರತ ಮಾಡಿದರೂ ಅದು ನಿರರ್ಥಕವೆಂದು ಹೇಳಿರುವ ಅಕ್ಕಮ್ಮನು, ಮನುಷ್ಯನಾದವನು ಷಡ್‍ವೈರಿಗಳನ್ನು ಗೆಲ್ಲಬೇಕೆಂದು ಹೇಳಿದ್ದಾಳೆ. ಗುರು, ಲಿಂಗ, ಜಂಗಮ ಯಾರೇ ಆದರೂ, ಆಚಾರಭ್ರಷ್ಟರಾದವರನ್ನು ನಂಬಲಾಗದೆಂದು ಸ್ಪಷ್ಟಪಡಿಸಿದ್ದಾಳೆ. ಜನ ಮೆಚ್ಚಬೇಕೆಂದು ಮಾಡುವ ವ್ರತವು, ವ್ರತವಲ್ಲ. ಜಗಮೆಚ್ಚಬೇಕೆಂದು ಮಾಡುವ ಶೀಲವು ಶೀಲವಲ್ಲವೆಂದು ಹೇಳಿರುವ ಅಕ್ಕಮ್ಮನು ಡಾಂಭಿಕ ಭಕ್ತಿಯನ್ನು ಅಲ್ಲಗಳೆದಿದ್ದಾಳೆ.

"ಆಚೆಯ ನೀರ ಈಚೆಯಲ್ಲಿ ತೆಗೆವುದು ಚಿಲುಮೆಯಲ್ಲ ಆಚೆಯಲ್ಲಿ ಕೇಳಿದ ಮಾತ ಈಚೆಯಲ್ಲಿ ನುಡಿದು ಮತ್ತಾಚೆಯಲ್ಲಿ ಬೆರೆಸುವನು ಭಕ್ತನಲ್ಲ...." (ವ-15)

ಕಂಗಳ ಮುಂದೆ ಕಂಡಂತೆ ಕಾಣಬಹುದೆ?
ಮನ ನೆನೆದಂತೆ ಆಡಬಹುದೆ?
ಕಂಡಕಂಡವರಲ್ಲಿ ಸಂಗವ ಮಾಡಬಹುದೆ?". (ವ-32)
ಅಕ್ಕಮ್ಮನ ವಚನಗಳಲ್ಲಿ ಅನೇಕ ಪ್ರಶ್ನೆಗಳಿವೆ. ಮತ್ತೆ ಅವುಗಳಿಗೆ ಉತ್ತರಗಳೂ ಇವೆ. ನಿಜವಾದ ಭಕ್ತನಾರು? ನಿಜವಾದ ವ್ರತ ಯಾವುದು? ಆಚಾರ ನೇಮಗಳೆಂದರೇನುಂಬುದನ್ನು ಅಕ್ಕಮ್ಮ ತನ್ನ ವಚನಗಳಲ್ಲಿ ವಿವರಿಸಿ ಹೇಳಿದ್ದಾಳೆ. ಮನಸ್ಸೆಂಬುದು ಮಂಗನ ಹಾಗೆ ಅದು ಹೇಳಿದಂತೆ ಕೇಳುವುದು ಸರಿಯಿಲ್ಲವೆಂಬ ಸರಳ ಸತ್ಯವನ್ನು ತನ್ನ ಸರಳ ಮತುಗಳಲ್ಲಿಯೇ ಹೇಳಿದ್ದಾಳೆ. ಪರಸ್ತ್ರೀ-ಪರಧನಗಳನ್ನು ಮುಟ್ಟದಿರುವುದೇ ವ್ರತ, ಸಕಲರನ್ನೂ ದಯೆಯಿಂದ ಕಾಣುವುದೇ ಆಚಾರವೆಂದು ಹೇಳಿರುವ ಅಕ್ಕಮ್ಮ ವ್ರತ-ಆಚಾರಗಳ ಬಗೆಗೆ ಮಹತ್ವದ ವಿಚಾರಗಳನ್ನು ತಿಳಿಸಿದ್ದಾಳೆ. ಅಂಗ-ಲಿಂಗ, ಮನಸ್ಸು-ದೇಹ, ಆತ್ಮ- ಪರಮಾತ್ಮ ಇವುಗಳ ಅಂತರ್‍ಸಂಬಂಧವನ್ನು ಬಿಡಿಸಿ ಹೇಳಿದ್ದಾಳೆ.

"ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು
ತಲೆಬೋಳಾದವರೆಲ್ಲ ಮುಂಡೆಯ ಮಕ್ಕಳು
ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ...." (ವ-92)

ಈ ವಚನದಲ್ಲಿ ಅಕ್ಕಮ್ಮ ಮೌಢ್ಯಾಚಾರಣೆಗೊಳಗಾದ ಮೂಢಭಕ್ತರನ್ನು ವಿಡಂಬನೆ ಮಾಡಿದ್ದಾಳೆ. ದೇವರು ಧರ್ಮದ ಹೆಸರಿನಲ್ಲಿ ಬೆತ್ತಲೆ ತಿರುಗುವುದು, ತಲೆಬೋಳಿಸಿಕೊಳ್ಳುವುದು, ಜಡೆಯನ್ನು ಬೆಳೆಸಿಕೊಂಡು ಗಬ್ಬು ನಾರುತ್ತಿರುವುದು ಭಕ್ತಿಯಲ್ಲವೆಂದು ಸ್ಪಷ್ಟಪಡಿಸಿರುವ ಅಕ್ಕಮ್ಮ, ಅರಿವು ಮುಖ್ಯವೆಂದು ಹೇಳಿದ್ದಾಳೆ. ಈ ಎಲ್ಲ ಆಚರಣೆಗಳನ್ನು ಕೆಲವು ಧರ್ಮೀಯರು ಆಚರಿಸುತ್ತಾರೆ. ಜನರಿಗೆ ದಾರಿ ತೋರಿಸಬೇಕಾಗಿದ್ದ ದೊಡ್ಡ ದೊಡ್ಡ ಧರ್ಮಗಳೇ ದಾರಿತಪ್ಪಿದರೆ ಹೇಗೆಂಬುದು ಅಕ್ಕಮ್ಮನ ಆತಂಕವಾಗಿದೆ. ಜಿನನ ಹೆಸರಿನಲ್ಲಿ ಬತ್ತಲೆ ತಿರುಗುವ ಜೈನರು, ವಿಷ್ಣುವಿನ ಹೆಸರಿನಲ್ಲಿ ತಲೆಬೋಳಿಸಿಕೊಳ್ಳುವ ವೈದಿಕರು, ಎಲ್ಲಮ್ಮ-ಹುಲಿಗೆಮ್ಮನ ಹೆಸರಿನಲ್ಲಿ ತಲೆಜಡೆಬಿಡುವ ಶೂದ್ರರನ್ನು ಅಕ್ಕಮ್ಮ ಇಲ್ಲಿ ನೇರವಾಗಿಯೇ ವಿಡಂಬಿಸಿದ್ದಾಳೆ. "ಚಿನ್ನ ಒಡೆದರೆ ಕರಗಿದರೆ ರೂಪಪ್ಪುದಲ್ಲದೆ, ಮುತ್ತು ಒಡೆದು ಕರಗಿದಡೆ ರೂಪಪ್ಪುದೆ? ಮರ್ತ್ಯದ ಮನುಜ ತಪ್ಪಿದರೊಪ್ಪಬೇಕಲ್ಲದೆ
ಸದ್ಭಕ್ತ ಸದೈವ ತಪ್ಪಿದಡೆ ಒಪ್ಪಬಹುದೇ?". (ವ-51)

ಅಕ್ಕಮ್ಮನ ಈ ತರ್ಕಬದ್ಧವಾದ ಪ್ರಶ್ನೆಗಳು ಅರ್ಥಪೂರ್ಣವಾಗಿವೆ. ಚಿನ್ನವನ್ನು ಒಡೆದು, ಕರಗಿಸಿ ಅದಕ್ಕೆ ಮತ್ತೊಂದು ರೂಪಕೊಡಬಹುದು. ಆದರೆ ಮುತ್ತನ್ನು ಒಡೆದು ಕರಗಿಸಿದರೆ ಅದು ಹಾಳಾಗುತ್ತದೆ. ಅದೇ ರೀತಿ ಸಾಮಾನ್ಯ ಮನುಷ್ಯರು ತಪ್ಪು ಮಾಡಿದಡೆ ಸಹಿಸಬಹುದಲ್ಲದೆ, ಸದ್ಭಕ್ತರೆಂದು ಕರೆಸಿಕೊಳ್ಳುವವರು, ಸದೈವವೆಂದು ಹೊಗಳಿಸಿಕೊಳ್ಳುವವರು ತಪ್ಪು ಮಾಡಿದರೆ ಸಹಿಸಲಾಗದೆಂದು ಸ್ಪಷ್ಟಪಡಿಸಿದ್ದಾಳೆ.

"ವೇಷ ಎಲ್ಲಿರದು?
ಸೂಳೆಯಲ್ಲಿ, ಡೊಂಬನಲ್ಲಿ, ಭೈರೂಪನಲ್ಲಿರದೆ? ವೇಷವ ತೋರಿ ಒಡಲಹೊರೆವ ದಾಸಿವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದೊ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ?" (ವ-123)

ಈ ವಚನದಲ್ಲಿ ವೇಷ ಹಾಕುವವರನ್ನು, ಹೊಟ್ಟೆಹೊರೆಯವುದಕ್ಕಾಗಿ ದೇವರ ಹೆಸರಿನಲ್ಲಿ ನಟನೆ ಮಾಡುವವರನ್ನು ಕಂಡು ವಿಡಂಬಿಸಿದ್ದಾಳೆ. ವೇಷ ಹಾಕುವದೆಂದರೆ ಇಲ್ಲಿ ಸತ್ಯವನ್ನು ಮರೆಯಾಚುವುದೇ ಆಗಿದೆ. ಹೀಗೆ ವೇಷಹಾಕಿ ಹೊಟ್ಟೆ ತುಂಬಿಸಿಕೊಳ್ಳುವವರಲ್ಲಿ ನಿಜಭಕ್ತಿ ಇರುವುದಿಲ್ಲವೆಂದು ಸ್ಪಷ್ಟಪಡಿಸುತ್ತಾ, ಮೌಢ್ಯಭಕ್ತಿ ಮತ್ತು ಡಾಂಭಿಕ ಭಕ್ತಿಗಳನ್ನು ಅಕ್ಕಮ್ಮ ಅಲ್ಲಗಳೆದಿದ್ದಾಳೆ.

"ಹೋತಿನ ಗಡ್ಡದಂತೆ ಗಡ್ಡದ ಹಿರಿಯರು ನೋಡಾ
ಬಿಡಾರ ಬಿಡಾರವೆಂದು ಹಿರಿಯತನಕ್ಕೆ ಅಹಂಕರಿಸಿ ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ
ಭಕ್ತರೊಳು ಕ್ರೋಧ, ಭ್ರಷ್ಟರೊಳು ಮೇಳ ಇವರು ನರಕಕ್ಕೆ ಯೋಗ್ಯರು..." (ವ. 154)
ಇಂತಹ ಅನೇಕ ವಚನಗಳಲ್ಲಿ ಅಕ್ಕಮ್ಮ ವಿಡಂಬನೆ ಮಾಡಿದ್ದಾಳೆ. ಕೆಲವರು ಸಾಧನೆ ಮಾಡಿ ಹಿರಿಯರಾಗಿರುತ್ತಾರೆ, ಇನ್ನೂ ಕೆಲವರು ವಯಸ್ಸಿನಿಂದ ಗಡ್ಡಬಿಟ್ಟು ಹಿರಿಯರಾಗಿರುತ್ತಾರೆ, ಗಡ್ಡದ ಹಿರಿಯರನ್ನು ಅಕ್ಕಮ್ಮ ಹೋತಿನ ಗಡ್ಡಕ್ಕೆ ಹೋಲಿಸುತ್ತಾಳೆ. ಆಚಾರವನ್ನು ಬಿಟ್ಟು ಅನಾಚಾರ ಮಾಡುವವರು ಅವರೆಂತಹ ಹಿರಿಯರೆಂದು ಪ್ರಶ್ನಿಸುತ್ತಾಳೆ. ಅಕ್ಕಮ್ಮನ ವಚನಗಳಲ್ಲಿ ಕಾವ್ಯಾಂಶವಿರದಿದ್ದರೂ, ಶರಣರ ಸಿದ್ಧಾಂತಗಳಿಗೆ ಬದ್ಧವಾದ ನಡೆ ಎದ್ದುಕಾಣುತ್ತದೆ. ಯಾರಿಗೂ ಅಂಜದೆ ಕಟುಸತ್ಯ ಸಂಗತಿಗಳನ್ನು ತನ್ನ ವಚನಗಳಲ್ಲಿ ಹೇಳಿದ್ದಾಳೆ.

ವಿಜಯಶ್ರೀ ಸಬರದ
9845824834

ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:
ನೀಲಾಂಬಿಕೆ
ಅಕ್ಕಮಹಾದೇವಿ

ಚರಿತ್ರೆ ಅಂದು-ಇಂದು

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...