ಕತೆಗಳು ಆಸ್ಥೆಯಿಂದ ಕೇಳುವ ತಣ್ಣನೆಯ ಮನಸುಗಳಿಗೆ ಮಾತ್ರ ದಕ್ಕುತ್ತವೆ : ಶರಣಬಸವ ಕೆ.ಗುಡದಿನ್ನಿ


ಒಂದು ಪಾತ್ರವನ್ನು ಕಟ್ಟುವಾಗ ಯಾವದೇ ಬಿಢೆಗೆ ಬೀಳದೇ ನ್ಯಾಯ ಒದಗಿಸಬೇಕು ಎಂಬುದನ್ನ 'ಏಳು ಮಕ್ಕಳ ತಾಯಿ' ಕತೆಯಲ್ಲಿ ಅದ್ಭುತವಾಗಿ ನಿಭಾಯಿಸಿದ್ದಾರೆ ಎನ್ನುತ್ತಾರೆ ಕತೆಗಾರರಾದ ಶರಣಬಸವ ಕೆ ಗುಡದಿನ್ನಿ. ಅವರು ಕತೆಗಾರ್ತಿ ಶೋಭಾ ಗುನ್ನಾಪೂರ ಅವರ ಚೊಚ್ಚಲ ಕಥಾಸಂಕಲನ "ಭೂಮಿಯ ಋಣ" ಕುರಿತು ಬರೆದಿರುವ ಲೇಖನ ನಿಮ್ಮ ಓದಿಗಾಗಿ.. 

*ಶೋಭಾ ಗುನ್ನಾಪುರ ಬರೆದ 'ಭೂಮಿಯ ಋಣ'ದ ಎಂದೂ ಮುಗಿಯದ ಕತೆಗಳು..*

ಶೋಭಾ ಗುನ್ನಾಪುರ.. ಅವರಿಗೀಗ ಭರ್ತಿ 54 ವರ್ಷ! ನನ್ನವ್ವ ಬದುಕಿದ್ದರೆ ಆಕೆಗೂ ಇಷ್ಟೇ ವಯಸ್ಸು ಇರುತ್ತಿತ್ತೇನೊ?

ಈ ವಯಸ್ಸಲ್ಲಿ ಮೊದಲ ಕತಾ ಸಂಕಲನ ತರುವುದು ಹುಡುಗಾಟಿಕೆಯಲ್ಲ. ನಿಜ 'ಭೂಮಿಯ ಋಣ' ಅವರ ಮೊದಲ ಕತಾ ಸಂಕಲನ. ಇದು ಅವರ ಮಕ್ಕಳು ಮುತುವರ್ಜಿಯಿಂದ ಬಂದ ಪುಸ್ತಕ ಇರಬಹುದು ಅನ್ನೊ ಸಂಶಯವೂ ಬರಬಹುದು ಆದರೆ ಅವರ ಕತೆಗಳನ್ನ ಓದುತ್ತ ಹೋದಂತೆಲ್ಲ ಆ ಅನುಮಾನ ಹಿಮದಂತೆ ಕರಗಿ ನೀವು ಕತೆಗಳೊಳಗೆ ಇಳಿದು ಹೋಗುತ್ತೀರಿ.

ವೈಷ್ಣವಿ ಪ್ರಕಾಶನದ ಎಂಟನೆಯ ಪ್ರಕಟಣೆ ಇದು. ಮುದಿರಾಜ ಕೈ ಇಟ್ಟಿದ್ದಾನೆಂದರೆ ಅಲ್ಲಿ ಏನಾದರೂ ಸತ್ವ ಇದ್ದೇ ಇರುತ್ತದೆ. ಆತ ನಮ್ಮೊಳಗಿನ ಅಪ್ಪಟ "ಕ್ವಾಮಟಿಗ". ಶೋಭಾ ಗುನ್ನಾಪುರ ಅವರ ಕತೆಗಳನ್ನ ಓದಿ ಮರುಳಾಗಿಯೇ ಪುಸ್ತಕ ಮಾಡಿದ್ದಾನೆ ಅಂತ ನನಗೆ ಖಚಿತವಾಗಿ ಅನಿಸಿದೆ.

ಮುನ್ನುಡಿ ಬರೆದ ಹಿರಿಯರು ತುಂಬಾ ಧನಾತ್ಮಕವಾಗಿ ಬರೆದಿದ್ದರಾದರೂ ನಾನು ಓದಿದ ಮೇಲೆಯೇ ನಿರ್ದರಿಸಿದರಾಯಿತು ಎಂದುಕೊಂಡೆ. 

ಒಂದು ಗುಕ್ಕಿಗೆ ಒಂದೊಂದು ಕತೆ ಓದಿ ಸಾವರಿಸಿಕೊಂಡೆ. ಒಟ್ಟು ಒಂಭತ್ತು ಕತೆಗಳಿವೆ ಪುಸ್ತಕದಲ್ಲಿ. ಶೋಭಾ ಗುನ್ನಾಪುರ ಹಂಚಿಕೊಂಡ 'ಲೇಖಕರ ಬರಹವೂ' ಒಂದು ಕತೆಯೇ! ಇಡೀ ಪುಸ್ತಕದ ಎಲ್ಲಾ ಕತೆಗಳು ಉತ್ತಮವಾಗಿದ್ದರೂ ನನ್ನನ್ನು ಬಿಡದಂತೆ ಕಾಡಿದ್ದು ಮೂರು ಕತೆಗಳು. 

'ಏಳು ಮಕ್ಕಳ ತಾಯಿ' ಕತೆ ನಾನು ಬರೆದ 'ಉದುರಿದ ಹೂವೊಂದರ ಕತೆ'ಯ ಮತ್ತೊಂದು ಮಗ್ಗುಲು. ಈ ಕತೆಯನ್ನು ಓದಿದ ಮೇಲೆ ನಾನೆಷ್ಟು ಅನುಭವಗಳಿಂದ ವಂಚಿತನಾಗಿದ್ದೇನಲ್ಲ ಅಂತ ಹೊಟ್ಟೆ ಕಿಚ್ಚಾಯಿತು. 'ಏಳು ಮಕ್ಕಳ ತಾಯಿ' ಕತೆಯ ತಾಯವ್ವ,ನನ್ನ ಕತೆಯ ನೇತ್ರಾವತಿ ಬೇರೆ,ಬೇರೆ ಅಂತ ಅನಿಸಲಿಲ್ಲ ನನಗೆ. ವಯಸ್ಸು ಮೀರಿದರೂ ಋತುಮತಿಯರಾಗದ ಜೀವಗಳ ಕುರಿತು ಬರೆದ ಈ ಕತೆ ಗುಲಗುಂಜಿ ಹೆಚ್ಚೆ ಸಹಜ ಅನಿಸಿತು.

ಒಂದು ಪಾತ್ರವನ್ನು ಕಟ್ಟುವಾಗ ಯಾವದೇ ಬಿಢೆಗೆ ಬೀಳದೇ ನ್ಯಾಯ ಒದಗಿಸಬೇಕು ಎಂಬುದನ್ನ 'ಏಳು ಮಕ್ಕಳ ತಾಯಿ' ಕತೆಯಲ್ಲಿ ಅದ್ಭುತವಾಗಿ ನಿಭಾಯಿಸಿದ್ದಾರೆ. 

ಇನ್ನೊಂದು ಕಾಡುವ ಕತೆ 'ಎಕ್ಕಲಗಾ ಜೋಗಿ'. ನಮ್ಮ ಭಾಗದ ದೇವದಾಸಿಯರ ಕುರಿತಾಗಿ ನೂರಾರು ಕತೆ,ಸಿನೀಮಾ,ಸಾಕ್ಷ್ಯಚಿತ್ರಗಳು ಬಂದು ಹೋಗಿವೆ. ಆದರೆ ಅವೆಲ್ಲವುಗಳಲ್ಲಿ 'ಮಿಸ್' ಮಾಡಿಕೊಂಡ ಮಾನವೀಯ ಸೆಲೆ ನಮಗಿಲ್ಲಿ ಕಣ್ಣಿಗೆ ರಾಚುತ್ತದೆ. ಮುತ್ತು ಕಟ್ಟಿಸಿಕೊಂಡು ದೇವರಿಗೆ ಬಿಟ್ಟರೂ ಒಬ್ಬನ ಜೊತೆಯಷ್ಟೇ ಸಂಸಾರ ಮಾಡಿ ಅವನೂ ಸತ್ತಾಗ ಜೋಗತಿಯಾಗಿ ಬೇಡುವ ರೇಣವ್ವಳದು ಸ್ವಾಭಿಮಾನಿ ಜೀವ. ಆದರೆ 'ಇಟ್ಟುಕೊಂಡ' ಅವನು ಸತ್ತಾಗ ಬಗುಲು ಕುಂತು ಅಳುವ ಭಾಗ್ಯವೂ ಇಲ್ಲದ್ದು ಕಣ್ಣು ತೇವಗೊಳಿಸುತ್ತದೆ. ಆ ಕಠೋರ ಕ್ಷಣಗಳಲ್ಲಿ ಸ್ವತಃ ಅವನ ಹೆಂಡತಿಯೇ ಎದ್ದು ಬಂದು ಕೈ ಹಿಡಿದು ಕರೆದುಕೊಂಡು ಹೋಗಿ ಗಂಡನ ಕಳೇಬರದ ಬಾಜು ಕೂಡಿಸುವ ದೃಶ್ಯ ಇವತ್ತಿನ ಸದ್ಯದ ಜರೂರತ್ತು. ದೊಡ್ಡದೊಂದು ಬದಲಾವಣೆಯನ್ನ ಇಷ್ಟು ಸರಳವಾಗಿ ಹೇಳುವುದು ಕಷ್ಟ ಸಾದ್ಯ. 

ಇನ್ನೂ 'ನಮ್ಮೂರ ಗೊಲ್ಲಾಳ' ಕತೆ ಮುಗಿದರೂ ಕಾಡುವ ಅಂತಃಕರಣದ ಕತೆ.
ತೇರಿನ ಗಾಲಿಗೆ ಆಡುವ ಕಂದನು ಬಲಿಯಾಗುವ ಕರುಳಿನ ಕತೆ. ಬಲಿಯಾಗುವ ಮುನ್ನ ಮಗು ಬೇಡಿದ್ದ ಭಜ್ಜಿ ಸತ್ತ ಮಗುವಿನ ಕೈಯಲ್ಲೇ ಇರುವುದನ್ನ ಮನಸಿಗೆ ತಟ್ಟುವಂತೆ ಚಿತ್ರಿಸಿದ್ದಾರೆ. ಕತೆಗಾರ್ತಿಯ ವಿಶೇಷ ಶಕ್ತಿಯೆಂದರೆ ಎಂದೂ ಮುಗಿಯದ ಅವರ ಕತೆಗಳು. ಅವರು ಬರೆದ ಬಹುತೇಕ ಕತೆಗಳು ಮುಗಿಯುವದೇ ಇಲ್ಲ! ಮಟ್ಟಸವಾಗಿ ಕುಂತು ಬರೆದರೆ ಪ್ರತೀ ಕತೆಯೂ ಕಾದಂಬರಿ ಆಗುವ ಆಳ ಹೊಂದಿವೆ. ಕೆಲವೊಮ್ಮೆ ಎಲ್ಲೋ ಮುಗಿಯುವ ಕತೆಗಳನ್ನು ಮತ್ತೆಲ್ಲಿಗೋ ಎಳೆದುಕೊಂಡು ಹೋಗುತ್ತಾರೆ ಅನಿಸುತ್ತಾದರೂ ಆ ಎಳೆಯುವಿಕೆ ಸಹಜವಾಗಿಯೇ ಕತೆಯ ಮತ್ತೊಂದು ಮಗ್ಗುಲಿಗೆ ಕರೆದುಕೊಂಡು ಹೋಗಿ ನಮ್ಮನ್ನ ಮೈಮರೆಸಿ ಬಿಡುತ್ತದೆ.

ಬಳಸಿದ ಭಾಷೆಯೂ ಕೂಡ ಅವರ ಕತೆಗಳ ಮತ್ತೊಂದು ಶಕ್ತಿಯಾಗಿ 'ಕಥನವನ್ನು' ನಿರ್ವಹಿಸುತ್ತದೆ. ಯಾವ ಪದಗಳನ್ನು ಅವರು ತಂದು ತುರುಕುವುದಿಲ್ಲ!

ಪ್ರತೀ ಸಾಲುಗಳು,ಅದರೊಳಗಿನ ಪದಗಳು ಸಹ ಸಹಜವಾಗಿಯೇ ತೆನೆಯಲ್ಲಿ ಪಡೆಮೂಡಿದ ಜೋಳದ ಕಾಳಿನಂತಿವೆ.

ಅಪರಿಮಿತ ಓದು, ಬದುಕಿನ ದಟ್ಟ ಅನುಭವ, ಮಾನವೀಯತೆಗೆ ಮಿಡಿಯುವ ಮಾತೃ ಹೃದಯ ಮುಂತಾದ ಇವುಗಳೇ ಕತೆಗಳನ್ನ ಕೈಹಿಡಿದು ಬರೆಸಿದೆ. ಕತೆಗಳು ಯಾರ ಮಾತನ್ನೂ ಕೇಳುವುದಿಲ್ಲ ಆಸ್ಥೆಯಿಂದ ಕೇಳುವ ತಣ್ಣನೆಯ ಮನಸುಗಳಿಗೆ ಮಾತ್ರ ದಕ್ಕುತ್ತವೆ. ಚೂರು ಅವಸರ ಮಾಡಿದರೆ ಸಕ್ಕರೆ ಗೊಂಬೆಯಂತೆ ಕರಗಿ ಗೋಣು ಮುರಿದು ಬೀಳುತ್ತವೆ. ಆ ಸಂಯಮ,ತಾಳ್ಮೆ,ಕತೆ ಕಟ್ಟುವ ಕಸುಬುದಾರಿಕೆ ಅವರಿಗೆ ಒಲಿದಿದೆ..

ಒಳ್ಳೆಯದಾಗಲಿ..

-ಶರಣಬಸವ ಕೆ.ಗುಡದಿನ್ನಿ.
ಶರಣಬಸವ ಕೆ. ಗುಡದಿನ್ನಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಕೋಮುವಾದಿ ಚಕ್ರವ್ಯೂಹ ಭೇದಿಸುವವರ ಕೈಪಿಡಿ ‘ನಡು ಬಗ್ಗಿಸದ ಎದೆಯ ದನಿ’

29-03-2024 ಬೆಂಗಳೂರು

'ಕರೋನಾ ಸಂದರ್ಭದಲ್ಲಿ ಅಕಾಲಿಕ ಮರಣವನ್ನಪ್ಪಿದ ಮಹೇಂದ್ರ ಕುಮಾರ್ ರವರ ಜೀವನದ ಅನುಭವಗಳ ಬರವಣಿಗೆ ಪ್ರಾರಂಭವಾಗಿ ಅರ್ಧ...

ಸೈನ್ಸ್ ಫಿಕ್ಷನ್ ಸಿನಿಮಾ ನೋಡಿದ ಅನುಭವ ಈ ಕೃತಿ ನೀಡುತ್ತದೆ

29-03-2024 ಬೆಂಗಳೂರು

"ಕಾದಂಬರಿಯ ಒಂದಿಷ್ಟು ಭಾಗದಲ್ಲಿ ಹೇಳ ಹೊರಟಿರುವ ವಿಷಯವನ್ನು ಒಂದಿಷ್ಟು ಜಟಿಲವಾಗಿ ಹೇಳಿರುವುದು ಹಾಗೂ ಕಾದಂಬರಿಯ ಕ...

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...