ಶ್ರದ್ಧೆಯ ಬೆಸೆವ ಭಾಷಾಂತರ

Date: 09-04-2021

Location: ಬೆಂಗಳೂರು


ಭಾರತೀಯ ಭಾಷೆಗಳ ಪೈಕಿ ಅಪಾರ ಪ್ರಮಾಣದಲ್ಲಿ ಕನ್ನಡಕ್ಕೆ ಬಂದ ಸಾಹಿತ್ಯವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪಠ್ಯಗಳಾಗಿರುವುದು ಕುತೂಹಲದ ಸಂಗತಿ ಎನ್ನುತ್ತಾರೆ ಲೇಖಕಿ ತಾರಿಣಿ ಶುಭದಾಯಿನಿ. ಭಾಷಾಂತರಗಳ ಮೂಲ ಕಾರಣಗಳನ್ನು ಶೋಧಿಸುತ್ತಾ ಅದು ಪಡೆದುಕೊಂಡ ಧಾರ್ಮಿಕ ರೂಪವನ್ನು ತಮ್ಮ ‘ಅಕ್ಷರಸಖ್ಯ’ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

ಭಾಷಾಂತರಗಳಲ್ಲಿ ವಿಫುಲವಾಗಿ ಕಾಣಿಸಿಕೊಳ್ಳುವ ಪಠ್ಯಗಳೆಂದರೆ ಧಾರ್ಮಿಕ ಪಠ್ಯಗಳು. ಧರ್ಮಶ್ರದ್ಧೆಯು ಭಾಷಾಂತರಕ್ಕೆ ಮೂಲಪ್ರೇರಣೆಯಾಗಿ ಒದಗಿ ಬರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ. ಭಾಷಾಂತರದ ಹಲವು ಉದ್ದೇಶಗಳಲ್ಲಿ ಧರ್ಮ ಪ್ರಚಾರವೂ ಒಂದು. ಒಂದು ಧರ್ಮದ ಅನುಯಾಯಿಗಳು ತಮ್ಮ ಮತ ಪ್ರಚಾರಕ್ಕೆ ಭಾಷಾಂತರವನ್ನು ಅನಿವಾರ್ಯವಾಗಿ ಬಳಸಬೇಕಾಗುತ್ತದೆ. ತಮ್ಮ ಮತದ ಹೆಗ್ಗಳಿಕೆಯನ್ನು ಜಗತ್ತಿಗೆ ತಿಳಿಸಲು, ಇನ್ನೊಂದು ಸಮುದಾಯವನ್ನು ಆಕರ್ಷಿಸಲು ಭಾಷಾಂತರದ ಊರುಗೋಲು ಧರ್ಮಶ್ರದ್ಧೆಯ ಅನುಯಾಯಿಗಳಿಗೆ ಅನಿವಾರ್ಯ. ಕ್ರಿಶ್ಚಿಯನ್ ಧರ್ಮವು ಜಗತ್ತಿನಾದ್ಯಂತ ಹರಡಿದ್ದು ಮೂಲತಃ ಅದರ ಭಾಷಾಂತರ ಪಠ್ಯಗಳಿಂದಲೇ. ದೇವಪಠ್ಯದ ದೇವಭಾಷೆಯ ಪಾವಿತ್ರ್ಯವನ್ನು ಕಾಪಿಟ್ಟುಕೊಳ್ಳುವ ಒಂದು ಶಿಷ್ಟವರ್ಗ ಪ್ರಯತ್ನ ಪಡುತ್ತಿದ್ದರೆ, ಬಹುಜನದ ಹಿತದೃಷ್ಟಿಯಿಂದ ಪ್ರಗತಿಶೀಲ ಮನಸ್ಸುಗಳು ದೇವಪಠ್ಯಗಳನ್ನು ಎಲ್ಲರಿಗೂ ತೆರೆದಿಡುವ ಪ್ರಯತ್ನ ಮಾಡುತ್ತಿರುತ್ತವೆ. ಹಾಗೆಂದೇ ನಮ್ಮ ನಮ್ಮ ಭಾಷೆಗಳಲ್ಲಿ ಬೈಬಲ್ ಓದಬೇಕೆಂಬ ಒಂದು ಆಂದೋಲನವೇ ಯುರೋಪಿನ ಪುನರುಜ್ಜೀವನ ಕಾಲದಲ್ಲಿ ನಡೆದುಹೋಯಿತು. ಕ್ರಿಶ್ಚಿಯನ್ ಸಮುದಾಯದವರಿಗೆ ಪಾರಾಯಣ ಗ್ರಂಥವಾಗಿರುವ ಬೈಬಲ್ ಎಲ್ಲರಿಗೂ ಲಭ್ಯವಾಗಿದ್ದು ಯುರೋಪಿನ ಭಾಷಿಕ ಮತ್ತು ಸಾಂಸ್ಕೃತಿಕ ಇತಿಹಾಸಗಳಲ್ಲಿ ಒಂದು ಮಹತ್ವದ ಪಲ್ಲಟವನ್ನು ಉಂಟು ಮಾಡಿತು. ಸಾಮಾನ್ಯರಿಗೆ ತಮ್ಮ ದೇವರು ತಮಗೆ ಇಷ್ಟು ಹತ್ತಿರ ಬರುತ್ತಾನೆ ಎನ್ನುವ ರೋಮಾಂಚನವನ್ನು ಉಂಟು ಮಾಡಿದ್ದು ಭಾಷಾಂತರಗಳು!

ಕ್ರೈಸ್ತಧರ್ಮ ತನ್ನನ್ನು ತಾನು ವಿಸ್ತರಿಸಿಕೊಳ್ಳಬೇಕೆಂಬ ದೈವದಾದೇಶವನ್ನು ಪರಿಭಾವಿಸಿ ಇತರೆ ಪ್ಯಾಗನ್ ಸಮುದಾಯಗಳ ಹತ್ತಿರ ಹೋಗಬೇಕೆಂದು ನಿರ್ಧರಿಸಿ ಮತಪ್ರಚಾರದ ಯೋಜನೆಗಳೊಂದಿಗೆ ಜಗತ್ತಿನಾದ್ಯಂತ ಸಂಚಾರ ಮಾಡಲಾರಂಭಿಸಿದರು. ಇದಕ್ಕಾಗಿ ತಮ್ಮ ಕೈಯಲ್ಲಿ ಬೈಬಲ್ ಹಿಡಿದುಕೊಂಡು ಹಡಗನ್ನೇರಿ ಅನ್ಯಸಮುದಾಯಗಳು ವಾಸಿಸುವೆಡೆಗೆ ಬಂದಿದ್ದು, ಜಲಸಂಚಾರದ ಆವಿಷ್ಕಾರ ಆರಂಭವಾಗಿದ್ದ ಮಧ್ಯಯುಗದ ಉತ್ಕರ್ಷ ಕಾಲದಲ್ಲಿ. ಸ್ಥಳೀಯರೊಡನೆ ಬೆರೆತು ಅವರೊಡನೆ ಜೀವಿಸಿ ಅವರ ಭಾಷೆ ಕಲಿತು ಆನಂತರ ತಮ್ಮ ಮತದ ಪ್ರಚಾರ ಮಾಡುವ ಯೋಜನೆಯನ್ನು ರೂಪಿಸಿಕೊಂಡ ಕ್ರೈಸ್ತ ಮಿಷನರಿ ಸಮುದಾಯಗಳು, ಭಾಷಾಂತರವನ್ನು ತಮ್ಮ ಸಾಧನವನ್ನಾಗಿ ಬಳಸಿಕೊಂಡರು. ಸ್ಥಳೀಯ ನಂಬಿಕೆಗಳು, ದೇವರುಗಳಿಗಾಗಿ ಕಟ್ಟಿದ ಸಾಂಸ್ಕೃತಿಕ ಪಠ್ಯಗಳನ್ನು ಭಾಷಾಂತರಗಳಲ್ಲಿ ರೂಪಾಂತರಗೊಳಿಸಿ ,ಅದರೊಳಗೆ ತಮ್ಮ ದೇವರುಗಳ ಹಿರಿಮೆಯನ್ನು ಇರಿಸುವ ಮೂಲಕ ಮೂಲಪಠ್ಯಗಳನ್ನು ತಿರುಚುವ, ರೂಪಾಂತರಿಸುವ ಕೆಲಸಗಳು ನಡೆದವು. ಇದನ್ನು ದ್ರೋಹದ ಸಂಗತಿಯಾಗಿ ಭಾವಿಸಬೇಕಿಲ್ಲ. ಭಾಷಾಂತರಿಸುವ ಮೂಲ ಉದ್ದೇಶಗಳಲ್ಲಿಯೇ ಇವು ಅಡಕಗೊಂಡಿದ್ದು ಇದೊಂದು ಸಾಮಾನ್ಯವಾದ ಪ್ರಕ್ರಿಯೆಯಾಗಿರುತ್ತದೆ.

ಕನ್ನಡದ ಸಂದರ್ಭದಲ್ಲಿ ಮಿಷನರಿ ಆರಂಭಿಸಿದ ಭಾಷಾಂತರಗಳು ಕನ್ನಡದ ಭಾಷಾಂತರ ಇತಿಹಾಸದಲ್ಲಿ ಹೊಸ ಭಾಷ್ಯವನ್ನೇ ಬರೆದವು. ಆಧುನಿಕ ಕನ್ನಡದ ಉಗಮಕ್ಕೆ ಒಂದು ನಾಂದಿಯನ್ನು ಹಾಕಿದವು. ಕನ್ನಡದಲ್ಲಿ ಮಿಷನರಿ ಭಾಷಾಂತರವನ್ನೇ ಪ್ರತ್ಯೇಕವಾಗಿ ಅಭ್ಯಾಸ ಮಾಡುವುದಕ್ಕೆ ಬೇಕಾದ ಸಂಪನ್ಮೂಲ ಅಲ್ಲಿದೆ (ಪ್ರಸ್ತುತ ಲೇಖನದ ಆಸಕ್ತಿಯು ಕಳೆದೆರಡು ಶತಮಾನಗಳಲ್ಲಿ ನಡೆದ ಭಾಷಾಂತರಗಳು ಯಾವ ಯಾವ ಪ್ರೇರಣೆಗಳಿಂದ ನಡೆಯಿತು ಎನ್ನುವುದನ್ನು ಹಿಂದೂ ಧಾರ್ಮಿಕ/ಅನುಭಾವಿಕ ಶ್ರದ್ಧೆಯ ಪಠ್ಯಗಳ ಕಡೆಗಿದೆಯಾದ್ದರಿಂದ ಇಲ್ಲಿ ಮಿಷನರಿ ಭಾಷಾಂತರಗಳನ್ನು ಕುರಿತು ಚರ್ಚಿಸಿಲ್ಲ). ಮಿಷನರಿ ಭಾಷಾಂತರಗಳು ಆಧುನಿಕ ಕಾಲದ ಆರಂಭಿಕ ಹಂತದವು. ಹಾಗೆ ನೋಡಿದರೆ, ಧಾರ್ಮಿಕ ಶ್ರದ್ಧೆಯ ಸಾಹಿತ್ಯವು ಭಾಷಾಂತರವಾಗುವುದು ಕನ್ನಡಕ್ಕೆ ಹೊಸದಾದ ಪ್ರಕ್ರಿಯೆಯೇನೂ ಅಲ್ಲ. ಕನ್ನಡದ ಧಾರ್ಮಿಕ ಪಠ್ಯಗಳ ಭಾಷಾಂತರಗಳು ಹಾಗೆ ನೋಡಿದರೆ ಪಂಪಯುಗದ ಹೊತ್ತಿಗೇ ಆರಂಭವಾಗಿತ್ತು. ಪಂಪ, ರನ್ನ, ಪೊನ್ನ, ಜನ್ನ ಮುಂತಾದ ಕನ್ನಡದ ಜೈನಕವಿಗಳು ಲೌಕಿಕ ಮತ್ತು ಆಗಮಿಕ ಕಾವ್ಯಗಳೆಂಬ ಭಿನ್ನನಿರೂಪಣೆಗಳನ್ನು ಆರಿಸಿಕೊಳ್ಳುವ ಸಂಪ್ರದಾಯವನ್ನು ಅನುಸರಿಸಿದರು. ಹೀಗಾಗಿ ಅವರ ಲೌಕಿಕ ಕಾವ್ಯಗಳು ಮತ್ತು ಆಗಮಿಕ ಕಾವ್ಯಗಳು(ಮುಖ್ಯವಾಗಿ ಜೈನ ತೀರ್ಥಂಕರರ ಜೀವನಚರಿತ್ರೆಗಳನ್ನು ಜೈನಸಂಪ್ರದಾಯದ ರೀತಿ ನಿರೂಪಿಸುವುದು) ಎಂಬ ಎರಡು ವಿಭಿನ್ನ ಭಿತ್ತಿಗಳು ಕಾಣುತ್ತವೆ. ಆಗಮಿಕ ಕಾವ್ಯ ಪರಂಪರೆಗೆ ನಾಂದಿ ಹಾಡಿದ ಕವಿ ಪಂಪನಿಂದ ಹಿಡಿದು ಈ ಮಾರ್ಗದಲ್ಲಿ ಬರೆದ ಕವಿಗಳು ತಮ್ಮ ಆಕರಗಳನ್ನು ಸಂಸ್ಕೃತ ಮತ್ತು ಪ್ರಾಕೃತ ಪಠ್ಯಗಳಿಂದ ದತ್ತವಾಗಿ ಪಡೆದವರು. ಲೌಕಿಕ ಮಾರ್ಗಕ್ಕಿಂತ ಆಗಮಿಕ ಮಾರ್ಗದಲ್ಲಿ ಕನ್ನಡದ ಕವಿಗಳಿಗೆ ಹೆಚ್ಚಿನ ಸ್ವಾತಂತ್ರ್ಯವೇನೂ ಇರಲಿಲ್ಲವಾಗಿ, ತಂತಮ್ಮ ಧರ್ಮನಿಷ್ಠೆಯನ್ನು ಪ್ರಮಾಣೀಕರಿಸಲು ಕಾವ್ಯಗಳನ್ನು ಬರೆಯುತ್ತಿದ್ದೇವೆಂಬ ನಂಬಿಕೆಯ ಮೇಲೆ ಈ ಕಾವ್ಯಗಳು ಕಟ್ಟಿದಂತಿವೆ. ಈ ಬಗೆಯ ಧಾರ್ಮಿಕ ಕಾವ್ಯಗಳನ್ನು ಬರೆಯುತ್ತಿರುವುದು ತಮ್ಮ ಧರ್ಮದ ಹಿರಿಮೆಯನ್ನು ಎತ್ತಿ ನಿಲ್ಲಿಸುವುದಕ್ಕಾಗಿಯೇ ಎಂದು ಹೇಳಬೇಕಿಲ್ಲ. ಸಂಸ್ಕೃತ ಮತ್ತು ಪ್ರಾಕೃತಗಳಲ್ಲಿ ಪ್ರಚಲಿತವಾಗಿದ್ದ ಜೈನಧರ್ಮದ ಪಠ್ಯಗಳು ಜೈನಧರ್ಮದ ಸತ್ವ, ಅನುಸರಣೆಗಳನ್ನು ವಿವರಿಸುವ ಶಾಸ್ತ್ರಗ್ರಂಥಗಳು ಅಥವಾ ಪುರಾಣಗಳು. ಇವುಗಳನ್ನು ಕನ್ನಡದಲ್ಲಿ ರಚಿಸುವುದರೊಂದಿಗೆ ಜೈನಧರ್ಮದ ಪರಂಪರೆಯನ್ನು ದೇಶಭಾಷೆಯಲ್ಲಿಯೂ ಕಟ್ಟಿದಂತಾಯಿತು. ಲೌಕಿಕ ಕಾವ್ಯಗಳು ಕಟ್ಟುವ ಮೌಲ್ಯಗಳ ಜೊತೆಗೆ ಈ ಆಗಮಿಕ ಕಾವ್ಯ ಮೌಲ್ಯಗಳನ್ನು ನೋಡಿದರೆ ಅವು ಎತ್ತಿ ಹಿಡಿಯುವುದು ಮಾನವ ಮೌಲ್ಯಗಳಿಗಿಂತ ಹೆಚ್ಚಾಗಿದ್ದ ದೈವೀಮೌಲ್ಯಗಳನ್ನು. ಇನ್ನೂ ಮಿಗಿಲಾಗಿ ಹೇಳುವುದಾದರೆ, ತಾತ್ವಿಕತೆ, ಪರಂಪರೆಗಳ ಮುಂದುವರಿಕೆಯ ಶ್ರದ್ಧೆಯೇ ಈ ಆಧುನಿಕಪೂರ್ವ ಭಾಷಾಂತರಗಳ ನಿರೂಪಣೆಗಳ ಹಿಂದಿತ್ತು ಎನ್ನಬಹುದು. ಮತದ ಆಧಾರದ ಮೇಲೆ ಸಾಹಿತ್ಯರಚನೆ ಮಾಡಬೇಕಾದ ವಿನ್ಯಾಸದಲ್ಲಿ ಸಾಗಿಬಂದ ಕನ್ನಡ ಕಾವ್ಯಗಳಲ್ಲಿ ಬಹುತೇಕವು ತಂತಮ್ಮ ಧರ್ಮದ ಕಾವ್ಯಗಳನ್ನು ಬರೆಯುವಾಗ ಯಾವ್ಯಾವ ಭಾಷೆಯಲ್ಲಿ ತಮ್ಮ ಧರ್ಮದ ಮೂಲಪಠ್ಯಗಳು ಪ್ರಚಲಿತವಿರುತ್ತವೆಯೋ ಅವನ್ನು ಆಧರಿಸಿ ಅವುಗಳನ್ನು ಆಕರಗಳನ್ನಾಗಿಸಿಕೊಂಡು ಕಟ್ಟಿದಂತವು. ಇವು ಭಾಷಾಂತರದ ಇನ್ನೊಂದು ವೈಖರಿಯಷ್ಟೆ. ಹರಿಹರ ಕವಿ, ತಮಿಳಿನ ಶೈವ ಪುರಾಣಗಳನ್ನೂ ಮಧ್ಯಕಾಲೀನ ವೀರಶೈವ ಕವಿಗಳು ತೆಲುಗು ಕಾವ್ಯ/ಪುರಾಣ ಪಠ್ಯಗಳನ್ನೂ ಆಕರಗಳನ್ನಾಗಿಸಿಕೊಂಡು ಕಾವ್ಯ ಕಟ್ಟಿದ ಮಾದರಿಗಳು ಭಾಷಾಂತರದ ಒಂದು ಆಯಾಮವನ್ನು ಹೇಳುತ್ತವೆ.

ಕನ್ನಡದ ಸಂದರ್ಭದಲ್ಲಿ ಹೀಗೆ ಧಾರ್ಮಿಕ ಪಠ್ಯಗಳನ್ನು ಆಕರಗಳನ್ನಾಗಿಸಿಕೊಂಡು ಸಾಹಿತ್ಯ ಕೃತಿಗಳನ್ನು ಕಟ್ಟುವುದು ಸಹಜವಾಗಿತ್ತು. ಇದರಲ್ಲಿದ್ದ ಆಕರಗಳು ಬಹುಪಾಲು ಸಂಸ್ಕೃತ ಪಠ್ಯಗಳು. ಹಿಂದೂ ಮತ್ತು ಜೈನಮತೀಯರಿಗೆ ಬೇಕಾದ ಧಾರ್ಮಿಕಶ್ರದ್ಧೆಯ ಆಕರಗಳು ಸಂಸ್ಕೃತದಲ್ಲಿ ಹೇರಳವಾಗಿ ದೊರೆಯುತ್ತಿದ್ದವು. ಅಲ್ಲದೆ, ಕನ್ನಡದ ಸಂದರ್ಭದಲ್ಲಿ ಸಂಸ್ಕೃತವು ಕನ್ನಡದ ಪ್ರಧಾನ ಆಕರ ಭಾಷೆಯಾಗಿತ್ತಾದ ಕಾರಣ ಆ ಭಾಷೆಯಿಂದ ಅಪಾರವಾದ ಸಂಖ್ಯೆಯಲ್ಲಿ ಭಾಷಾಂತರಗಳು ಬಂದವು. ಅಲ್ಲದೆ ಸಂಸ್ಕೃತ ಬಲ್ಲ ಬ್ರಾಹ್ಮಣ ಪಂಡಿತವರ್ಗವು ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದುದರಿಂದ ಕನ್ನಡಕ್ಕೆ ಸಂಸ್ಕೃತದಿಂದ ಭಾಷಾಂತರಿಸುವ ಹೊಣೆಗಾರಿಕೆಯನ್ನು ಅದೇ ವರ್ಗ ನಿರ್ವಹಿಸುತ್ತಿತ್ತು. ಆದಕಾರಣ, ಧಾರ್ಮಿಕ ಪಠ್ಯಗಳಲ್ಲಿ ಬಹುಪಾಲು ಉಪನಿಷತ್ತು, ವೇದಗಳು, ಪುರಾಣಗಳು, ಸೂಕ್ತಗಳು, ಸ್ಮೃತಿಗಳು, ನೀತಿಶತಕಗಳು ಮುಂತಾದ ಧಾರ್ಮಿಕ ಸಾಹಿತ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರಿಸುವ ಪ್ರಕ್ರಿಯೆ ಚಾಲನೆಯಲ್ಲಿತ್ತು. ಆದರೆ ಈ ಭಾಷಾಂತರಗಳು ಜನಸಾಮಾನ್ಯರಿಗಿಂತ ಪಂಡಿತವರ್ಗಕ್ಕೇ ಹೆಚ್ಚು ಉಪಯುಕ್ತವೆನ್ನುವ ಹಾಗಿದ್ದವು. ಮೂಲದಲ್ಲಿ ಓದುವವರೂ ಭಾಷಾಂತರದಲ್ಲಿ ಓದುವವರೂ ಇಬ್ಬರೂ ಒಂದೇ ವರ್ಗಕ್ಕೆ ಸೇರಿದವರಾಗಿದ್ದರು! ಸಂಸ್ಕೃತ ಪಠ್ಯಗಳು ಧಾರ್ಮಿಕ ಜಿಗುಟತನವನ್ನು ಕಾಪಾಡಿಕೊಳ್ಳುವುದಕ್ಕೆ ಇಲ್ಲಿನ ವರ್ಣಾಶ್ರಮ ಧರ್ಮ, ಜಾತಿಪದ್ಧತಿಗಳು ಮೂಲಕಾರಣಗಳಾಗಿದ್ದವು. ಬ್ರಾಹ್ಮಣವರ್ಗವು ತನ್ನ ಹೊರತು ಇತರ ಜಾತಿ/ವರ್ಣಗಳಿಗೆ ಧಾರ್ಮಿಕ ಪಠ್ಯಗಳು ತೆರೆದಿಲ್ಲವೆಂದೇ ನಂಬಿಕೊಂಡಿತ್ತು. ಹಾಗಾಗಿ, ಸಂಸ್ಕೃತದ ಧಾರ್ಮಿಕ ಪಠ್ಯಗಳು/ಟೀಕುಗಳನ್ನು ಭಾಷಾಂತರಗಳ ಮೂಲಕ ತಲುಪುವುದಾದರೂ ಅದು ಶಿಕ್ಷಿತ ಹಾಗೂ ವ್ಯವಸ್ಥಿತವಾಗಿ ಸಂಸ್ಕೃತ ಕಲಿಯದ ವಿಪ್ರಸಮುದಾಯ ಹಾಗೂ ಶಿಷ್ಟವರ್ಗಕ್ಕೆ ಎನ್ನುವ ಭಾವನೆ ಇದ್ದಂತೆ ತೋರುತ್ತದೆ. ಕನ್ನಡ-ಸಂಸ್ಕೃತ ಕೊಡುಕೊಳುವಿಕೆಯಲ್ಲಿ ಒಂದು ಯಜಮಾನಿಕೆಯ ಭಾವ ಹುದುಗಿರುವಂತೆ ಕಾಣುವುದರಿಂದ ಧಾರ್ಮಿಕ ಶ್ರದ್ಧೆಯ ಭಾಷಾಂತರಗಳು ಶಿಷ್ಟತೆಯ ನೆಲೆಯಲ್ಲಿಯೇ ನಿಂತತೆ ಕಾಣುತ್ತದೆ.

ಸಂಸ್ಕೃತವನ್ನು ಹೊರತುಪಡಿಸಿ ಕನ್ನಡಕ್ಕೆ ಬಂದ ಇತರೆ ಭಾರತೀಯ ಭಾಷೆಗಳ ಧಾರ್ಮಿಕ ಪಠ್ಯಗಳ ಭಾಷಾಂತರದ ಹಿಂದಿನ ಆಸಕ್ತಿಯ ಬಗ್ಗೆ ನೋಡಿದರೆ ಕುತೂಹಲಕಾರಿಯಾದ ವಿನ್ಯಾಸಗಳು ಕಾಣುತ್ತವೆ. ಕನ್ನಡಕ್ಕೆ ಬಂದ ಭಾರತೀಯ ಭಾಷೆಗಳ ಪಠ್ಯಗಳಲ್ಲಿ ಅಪಾರ ಪ್ರಮಾಣದ ಸಾಹಿತ್ಯವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಪಠ್ಯಗಳಾಗಿರುವುದು ಕುತೂಹಲದ ಸಂಗತಿ. ಮರಾಠಿ, ತಮಿಳು, ತೆಲುಗು, ಹಿಂದಿ(ಸ್ವಲ್ಪಮಟ್ಟಿಗೆ ಬಂಗಾಳಿ) ಭಾಷೆಗಳಿಂದ ಸೃಜನಶೀಲ ಭಾಷಾಂತರಗಳಷ್ಟೇ ಪ್ರಮಾಣದಲ್ಲಿ ಹೆಚ್ಚುಕಡಿಮೆ ಧಾರ್ಮಿಕ/ಆಧ್ಯಾತ್ಮಿಕ/ಅನುಭಾವಿಕ ಪಠ್ಯಗಳು ಭಾಷಾಂತರಗೊಂಡಿರುವುದನ್ನು ಕಾಣಬಹುದು. ಈ ಆಸಕ್ತಿಯು ಸಂಸ್ಕೃತ ಪಠ್ಯಗಳ ಭಾಷಾಂತರಗಳಿಗಿಂತ ವಿಭಿನ್ನವಾದ ಧೋರಣೆಯನ್ನು ಹೊಂದಿದಂತಿದ್ದು ಪರ್ಯಾಯ ನೆಲೆಗಳ ಹುಡುಕಾಟವನ್ನೂ ಆಸಕ್ತಿಯನ್ನೂ ತೋರುವಂತಿದೆ. ಕನ್ನಡಕ್ಕೆ ಬಂದ ಭಾಷಾಂತರದ ಮೂಲಕ ಬಂದ ಭಾಷೆಗಳಲ್ಲಿ ಮರಾಠಿ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳು ಮುಂಚೂಣಿಯಲ್ಲಿವೆ.

ಕನ್ನಡಕ್ಕೆ ಭಾಷಾಂತರಗೊಂಡು ಬಂದ ಭಾರತೀಯ ಭಾಷೆಗಳ ಧಾರ್ಮಿಕ ಶ್ರದ್ಧೆಯ ಪಠ್ಯಗಳಲ್ಲಿ ಪಾರಾಯಣ ಗ್ರಂಥಗಳು, ಪುಣ್ಯಪ್ರಾಪ್ತಿ, ಮೋಕ್ಷಪ್ರಾಪ್ತಿಗೆಂದು ಮಾಡುವ ವ್ರತ/ನೋಂಪಿ ಗ್ರಂಥಗಳು, ಪ್ರಾಸಾದಿಕ ಗ್ರಂಥಗಳು, ಆಧ್ಯಾತ್ಮಿಕ/ಅನುಭಾವಿಕ ಪಂಥಗಳನ್ನು ವಿವರಿಸುವ ಗ್ರಂಥಗಳು ಹಾಗೂ ಆಧ್ಯಾತ್ಮಿಕ ಮಾರ್ಗಗಳನ್ನು ತೋರುವ ಗುರುಗಳ ಜೀವನ ಚರಿತ್ರೆಗಳು ಹಾಗೂ ಮಹಿಮೆಗಳನ್ನು ಬಣ್ಣಿಸುವ ಕೃತಿಗಳು ಇವೇ ಮುಂತಾಗಿ ಪ್ರಾಶಸ್ತ್ಯವನ್ನು ಪಡೆದಿರುತ್ತವೆ. ಈ ಬಗೆಯ ಕೃತಿಗಳು ನಿರ್ದಿಷ್ಟ ಓದುಗ ವರ್ಗವನ್ನು ಲಕ್ಷ್ಯದಲ್ಲಿರಿಸಿ ಭಾಷಾಂತರ ಮಾಡಲ್ಪಟ್ಟವು. ಹೀಗಾಗಿ, ಇವುಗಳಿಗೆ ತಮ್ಮದೇ ಆದ ಮಿತಿಯಿದೆ. ಆದರೆ ಇವನ್ನು ಆನಿಸಿಕೊಂಡು ಓದುವ ಓದುವ ವರ್ಗವು ಆಸ್ತಿಕ ಅಥವಾ ಸಾಧಕ ವರ್ಗಗಳಾಗಿರುವುದರಿಂದ ಈ ಭಾಷಾಂತರದ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಾ ಬಂದವು. ಭಾಷಾಂತರವು ಒಂದು ವಸಾಹತು ಚಟುವಟಿಕೆಯಾಗಿ ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ ಬೆಳೆಯುತ್ತಾ ಬಂದಂತೆ, ಧಾರ್ಮಿಕವಾದ ಎಚ್ಚರವು ಹುಟ್ಟಿಕೊಂಡಿತು. ವಸಾಹತುಶಾಹಿಗೆ ಪ್ರತಿಕ್ರಿಯಿಸುವುದಕ್ಕೆ ತಂತಮ್ಮ ಪರಂಪರೆಗಳಲ್ಲಿ ಇರುವ ತತ್ವಾನುಚರಣೆಗಳ ಸಾರಸತ್ವಗಳನ್ನು ಶೋಧಿಸಿಕೊಳ್ಳುವ ಪರಿಯೂ ಭಾಷಾಂತರಗಳಿಗೆ ಪ್ರೇರಣೆಯಾಗಿರಬಹುದು. ಹಿಂದೂ ಧರ್ಮದ ಆಚರಣೆಗಳು ವಾಸ್ತವವಾಗಿ ಒಂದೊಂದು ಸಮುದಾಯಕ್ಕೆ ಒಂದೊಂದು ರೀತಿ ಇರುವುದಾದರೂ ಅವುಗಳಿಗೆ ಭಾರತೀಯ ಎನ್ನುವ ಮಾನ್ಯತೆಯನ್ನು ಒದಗಿಸುವ ಕೆಲಸವನ್ನು ಈ ಭಾಷಾಂತರಗಳು ಮಾಡತೊಡಗಿದವು.

ಭಕ್ತಿ ಮತ್ತು ಅನುಭಾವಿಕ ಚಟುವಟಿಕೆಗಳು ಅಖಿಲ ಭಾರತೀಯವಾದ ಸಂಗತಿಗಳು. ಸುಮಾರು ಸಾವಿರ ವರ್ಷಗಳ ಕಾಲದಿಂದ ವಿವಿಧ ಭಕ್ತಿಪಂಥಗಳು ಭಾರತದ ವಿವಿಧ ಪ್ರದೇಶಗಳಲ್ಲಿ ಹುಟ್ಟಿಕೊಂಡಿವೆ. ಇವುಗಳ ಜೊತೆಗೆ, ಸಾಧಕವರ್ಗವೆನಿಸಿದ ಯೋಗಿ/ಅನುಭಾವಿಗಳ ಪಂಥಗಳು ಭಾರತದಾದ್ಯಂತ ಜಾಲವನ್ನು ಹೊಂದಿ ಸಕ್ರಿಯವಾಗಿವೆ. ಈ ಎಲ್ಲ ಪಂಥಗಳು ಹಾಗೂ ಸಾಧಕ ಮಾರ್ಗಗಳು ತಂತಮ್ಮ ಸ್ವರೂಪಗಳೇನೇ ಇರಲಿ ಆತ್ಯಂತಿಕವಾಗಿ ಅದ್ವೈತ ಮಾರ್ಗಕ್ಕೆ ಬಂದು ನಿಲ್ಲುವಂತವು. ಸಾಧನಗಳೇನೇ ಇರಲಿ, ಗುರಿ ಮಾತ್ರ ನಾಮಭೇದಗಳನ್ನು ಮೀರಿದ ಶುದ್ಧ ಜೀವಾತ್ಮ ಸ್ವರೂಪದ ಅನಾವರಣ ಮಾಡಿಕೊಳ್ಳುವುದು ಇಲ್ಲಿ ಮುಖ್ಯ. ಜೀವಾತ್ಮವನ್ನು ಆವರಿಸಿಕೊಂಡಿರುವ ಉಪಾಧಿಗಳನ್ನು ವಿವರಿಸುವ ಬಗೆ ಬೇರೆ ಬೇರೆ ಇದ್ದರೂ ಅಂತಿಮವಾಗಿ ಅವುಗಳಿಂದ ವಿಮೋಚನೆಗೊಳ್ಳುವುದನ್ನು ಚಿಂತಿಸುವುದೇ ಮುಖ್ಯವೆಂದು ಭಾವಿಸುತ್ತವೆ. ಇದನ್ನು ಗಣಕದ ಭಾಷೆಯಲ್ಲಿ ಹೇಳಬೇಕೆಂದರೆ ಗಣಕದ ಎಲ್ಲ ಸೂತ್ರಗಳೂ ಹೇಗೆ ಸೊನ್ನೆ ಮತ್ತು ಒಂದು ಎನ್ನುವ ನಿಯಮಗಳಲ್ಲಿ ಅಡಕಗೊಳ್ಳುತ್ತವೆಯೊ ಹಾಗೆ ಜೀವಾತ್ಮ ಮತ್ತು ಪರಮಾತ್ಮ ಎಂಬ ಎರಡು ಸತ್ವಗಳ ಮೇಲೆ ತತ್ವಸಿದ್ಧಾಂತಗಳೆಲ್ಲವು ನಿಂತಿದೆ ಎನ್ನುವುದನ್ನು ನಿರೂಪಿಸುತ್ತವೆ. ಕನ್ನಡಕ್ಕೆ ಭಾಷಾಂತರಗೊಂಡು ಬಂದ ಆಧ್ಯಾತ್ಮಿಕ/ಅನುಭಾವಿಕ ಪಠ್ಯಗಳಲ್ಲಿ ಇಂತಹ ತತ್ವಗಳನ್ನು ನಿರೂಪಿಸುವ ಕೃತಿಗಳಲ್ಲಿ ಪ್ರಮುಖವಾದವು ದತ್ತ ಹಾಗು ನಾಥಪರಂಪರೆಗಳನ್ನು ಹೇಳುವ ಪಠ್ಯಗಳು ಮುಖ್ಯವಾಗಿ ದೊರೆಯುತ್ತವೆ. ಈ ಕೃತಿಗಳ ಸ್ವರೂಪ ಮುಮುಕ್ಷುವಾದವನಿಗೆ ನೆರವಾಗುವುದಕ್ಕೆ ಬೇಕಾದ ತತ್ವ ಹಾಗು ಆಚರಣೆಗಳನ್ನು ಒದಗಿಸುವಂತೆ ಇರುತ್ತವೆ ಎನ್ನುವುದು ಗಮನಿಸಬೇಕಾದ ಸಂಗತಿ.

ದತ್ತ ಪರಂಪರೆಯು ಮೋಕ್ಷಮಾರ್ಗಿಗಳಾದ ಜನರಿಗೆ ಸೇರಿದುದು. ಇದು ಜ್ಞಾನಮಾರ್ಗವಾಗಿರುವಂತೆ ಕ್ರಿಯಾಮಾರ್ಗವೂ ಆಗಿದ್ದು ಆಕಾಂಕ್ಷಿ ಜನರಿಗೆ ಉಪದೇಶಗಳನ್ನು ಗುರುಮುಖೇನ ಮಾಡುವುದಕ್ಕೆ ಪ್ರಾಶಸ್ತ್ಯ ನೀಡುತ್ತದೆ. ಕನ್ನಡದಲ್ಲಿ ದತ್ತಮಾರ್ಗದ ಅನುಸರಣೆ ಮಾಡುವ ಆಸ್ತಿಕರು ಹಾಗೂ ಸಾಧಕರಿಗಾಗಿ ಗುರುಚರಿತ್ರೆಗಳನ್ನು ಭಾಷಾಂತರಿಸಲಾಗಿದೆ. ಗುರುವಿಗೆ ಭಕ್ತಿಯಿಂದ ಸೇವೆ ಮಾಡಬೇಕು. ಹೀಗೆ ಗುರುವನ್ನು ಭಜಿಸಿದರೆ ಸಕಲೇಷ್ಟಗಳು ಪೂರೈಸುವುವು ಎಂಬ ಶ್ರದ್ಧೆಯನ್ನು ಆರಂಭದಲ್ಲಿ ಹೇಳುತ್ತಲೇ ಗುರುಮಹಿಮೆಯನ್ನು ಹೇಳಲು ಉಪಕ್ರಮಿಸುತ್ತವೆ. ಇಂತಹ ಗ್ರಂಥಗಳಲ್ಲಿ ಮುಖ್ಯವಾಗಿ ದತ್ತಗುರುವಿನ ಮಹಿಮೆಯನ್ನು ಹಾಡುವ ಭಜನೆಗಳು, ಗುರುಕಾರುಣ್ಯವನ್ನು ಬಣ್ಣಿಸುವ ಗ್ರಂಥಗಳು, ಸಾಧನಾಸೂತ್ರಗಳನ್ನು ಒಳಗೊಂಡ ಕೃತಿಗಳು ಹೆಚ್ಚಾಗಿ ಜನರ ಮಧ್ಯೆ ಹಂಚಿಕೊಳ್ಳಲ್ಪಟ್ಟಿವೆ. 1924ರಲ್ಲಿ ಭಾಷಾಂತರಗೊಂಡ ‘ಕರ್ನಾಟಕ ಗುರುಕಥಾಕಲ್ಪತರು’ ಕೃತಿಯನ್ನು ಭಾಷಾಂತರಿಸಿದ ಭಾಷಾಂತರಕಾರರು ‘ಈ ದತ್ತಾತ್ರೇಯ ಚರಿತ್ರೆಯನ್ನು ಕನ್ನಡದಲ್ಲಿ ಯಾರೂ ಬರೆದಿರುವುದಿಲ್ಲ. ಈ ಚರಿತ್ರೆಯು ಮರಾಠಿಯಲ್ಲಿಯೂ ಗೀರ್ವಾಣ ಭಾಷೆಯಲ್ಲಿಯೂ ರಚಿಸಲ್ಪಟ್ಟಿದೆ. ಇದು ಉತ್ತರದೇಶದಲ್ಲಿ ಅತ್ಯಂತ ಪ್ರಾಸಾದಿಕ ಗ್ರಂಥವಾಗಿ ಪ್ರಸಿದ್ಧವಾಗಿರವುದು. ಅನೇಕ ಭಕ್ತರು ಇದನ್ನು ನಿತ್ಯವೂ ಪಠಿಸಿ ಜ್ಞಾನಿಗಳಾಗಿ ಇಷ್ಟಾರ್ಥವನ್ನು ಹೊಂದಿಯೂ ಹೊಂದುತ್ತಲೂ ಇರುವರು. ಈ ಚರಿತ್ರೆಯನ್ನು ಕನ್ನಡ ಭಾಷಾಂತರಿಸಿರುವೆನು. ಇದನ್ನು ಅನೇಕ ಮಠಾಧಿಪತಿಗಳಾದ ಯತಿವರ್ಯರೂ ಆಸ್ತಿಕ ಮಹಾಶಯರೂ ನನ್ನನ್ನು ಪ್ರೇರಿಸಿದರು’. ಈ ಪೀಠಿಕೆಯಲ್ಲಿ ಭಾಷಾಂತರದ ಉದ್ದೇಶ ಹಾಗೂ ದತ್ತಚರಿತ್ರೆಯ ಮಹತ್ವವನ್ನು ಕನ್ನಡದಲ್ಲಿ ತಿಳಿಸಬೇಕೆಂಬುದು ವಿದಿತವಾಗಿದೆ.

ದತ್ತ ಪಂಥದ ಪಠ್ಯಗಳಲ್ಲಿ ಗುರು ದತ್ತಾತ್ರೇಯನ ಚರಿತ್ರೆ, ಗುರುಪರಂಪರೆಗಳ ಮಾಹಿತಿ ಪ್ರಧಾನ ಕೃತಿಗಳಿವೆ. ಅದರಲ್ಲಿ ಕರ್ನಾಟಕದ ಗಾಣಗಾಪುರದಲ್ಲಿ ನೆಲೆಸಿದ ನೃಸಿಂಹ ಸರಸ್ವತೀ ಗುರುವಿನ ಮಹಿಮೆಯನ್ನು ಬಣ್ಣಿಸುವ ಕೃತಿಯಿಂದ ಹಿಡಿದು ಸಾಧಕರು ಹಾಗೂ ಸದಸ್ಯರು ಆಚರಣಾತ್ಮಕವಾಗಿ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ವಿವರಿಸುವ ಕೃತಿಗಳ ತನಕ ಇವುಗಳ ವ್ಯಾಪ್ತಿ ಹರಡಿಕೊಂಡಿದೆ. ‘ಶ್ರೀಗುರು ಕಥಾಕಲ್ಪತರುವೆಂಬ ಚರಿತ್ರೆ’(ಪೂರ್ವಾರ್ಧ ಮತ್ತು ಉತ್ತರಾರ್ಧ) ಅಂತಹದೊಂದು ಪುಸ್ತಕ. ಇದು ಕ್ಷೇತ್ರಮಹಿಮೆಯನ್ನೂ ಗುರುಮಹಿಮೆಯನ್ನೂ ಒಟ್ಟಿಗೆ ಹೇಳುವ ಕೃತಿ. ಇದು ಮೂಲಮರಾಠಿ ಕೃತಿಯಾಗಿದ್ದು ಇದನ್ನು ಕನ್ನಡದಲ್ಲಿ ಭಾಷಾಂತರಿಸಲಾಗಿದೆ. ಆಗಲೇ ಹೇಳಿದಂತೆ ಇದು ಪಾರಾಯಣ ಗ್ರಂಥವೂ ಹೌದು ತತ್ವಾಚರಣೆಗಳ ಸೂತ್ರಗಳ ಪಠ್ಯವೂ ಹೌದು. ಇದು ವೈದಿಕವಾದ ನೆಲೆಗಟ್ಟಿನಲ್ಲಿರುವ ಪಠ್ಯ. ಸಂಹಿತೆಗಳಲ್ಲಿರುವಂತೆ ಬ್ರಾಹ್ಮಣಾಚರಣೆಗಳಿಗೆ ಇಲ್ಲಿ ಪ್ರಾಮುಖ್ಯತೆ. ಇಲ್ಲಿ ರುದ್ರಧ್ಯಾಯಕ್ಕೆ ಪ್ರಾಶಸ್ತ್ಯ (‘ಶ್ರೀಗುರುಗಳಿಗೆ ರುದ್ರಾಧ್ಯಾಯದಲ್ಲಿ ಪ್ರೀತಿಯು ಹೆಚ್ಚು ಇದರಿಂದ ಭಕ್ತಿಯಿಂದ ಅದನ್ನು ಪೂಜಿಸಬೇಕೆಂದು ಸರಸ್ವತೀ ಗಂಗಾಧರನು ಗುರುಚರಿತ್ರೆಯನ್ನು ವಿಸ್ತಾರವಾಗಿ ಹೇಳಿದನು).ಆದುದರಿಂದ ರುದ್ರಮಹಿಮೆಯನ್ನು ಹೇಳುವ ಕಥೆಗಳು ಇವೆ. ಮುಖ್ಯವಾಗಿ ಇವುಗಳನ್ನು ಶ್ರವಣ ಮಾಡುವವರಿಗೆ ಪುರುಷಾರ್ಥಗಳು ಲಭಿಸುವುವು ಎಂಬ ಶ್ರದ್ಧೆಯೇ ಇಲ್ಲಿ ಮೂಲ. ಪ್ರತಿ ಅಧ್ಯಾಯದಲ್ಲಿಯೂ ಫಲಗಳನ್ನು ಹೇಳುವುದು ಪಾರಾಯಣ ಗ್ರಂಥಗಳ ವಿನ್ಯಾಸವೇ ಹೌದು. ಅದರಂತೆ ದತ್ತಚರಿತ್ರೆಯನ್ನು ಕೇಳುವ ಶ್ರಾವಕವರ್ಗಕ್ಕೆ ಸಿಗುವ ಲೌಕಿಕ ಹಾಗು ಪಾರಮಾರ್ಥಿಕ ಲಾಭಗಳನ್ನು ಇಲ್ಲಿ ಹೇಳಲಾಗಿದೆ. ಈ ಗ್ರಂಥದ ಬಹುಮುಖ್ಯ ಭಾಗವೆಂದರೆ ಆಚರಣಾಧರ್ಮಗಳನ್ನು ಹೇಳುವ ಭಾಗ. ಸಂಧ್ಯಾವಂದನೆ, ದೇವಪೂಜಾ, ಭೋಜನಕ್ರಮ, ಶಯನಕ್ರಮ ಮುಂತಾದ ಕ್ರಮಗಳನ್ನು ಸಾದ್ಯಂತವಾಗಿ ವಿವರಿಸಲಾಗಿದೆ. ಸ್ತ್ರೀಯರು ಯಾವ ಅನುಸರಣೆಗಳನ್ನು ಮಾಡಬೇಕು? ಎಂಬುದರ ಬಗ್ಗೆಯು ಇಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಬ್ರಹ್ಮಜ್ಞಾನಕ್ಕಾಗಲೀ ಮೋಕ್ಷಕ್ಕಾಗಲೀ ಅರ್ಹರಲ್ಲದ ಸ್ತ್ರೀವರ್ಗವು ಪತಿಭಕ್ತಿಯ ಹೊರತಾಗಿ ಇನ್ನಾವ ಮಂತ್ರವನ್ನೂ ಉಪದೇಶ ತೆಗೆದುಕೊಳ್ಳುವುದಕ್ಕೆ ಅರ್ಹರಲ್ಲವೆಂದೂ ಅಕಸ್ಮಾತ್ತಾಗಿ ಉಲ್ಲಂಘಿಸಿ ಮಂತ್ರದೀಕ್ಷೆಗಳನ್ನು ತೆಗೆದುಕೊಂಡರೆ ದಾನವಗುರು ಶುಕ್ರಾಚಾರ್ಯನಿಗೆ ಒದಗಿದ ಗತಿಯನ್ನು ನೆನೆಯಬೇಕೆಂದು ಕಚ-ದೇವಯಾನಿಯರ ಕಥೆಯನ್ನು ಇಲ್ಲಿ ಹೇಳಲಾಗಿದೆ. ಸ್ತ್ರೀಯರ ಆಚಾರವಿಚಾರಗಳಿಗೆ ಮೀಸಲಾದ ಭಾಗದಲ್ಲಿ ಪತಿವ್ರತಾಸ್ತ್ರೀಯರು ಹೇಗೆ ನಡೆದುಕೊಳ್ಳಬೇಕೆಂದು ಹೇಳಲಾಗಿದೆ. ನಂತರ ವಿಧವೆಯರಿಗೆ ಕೆಲವು ನಿಯಮಾಚಾರಣೆಗಳನ್ನು ಹೇಳಲಾಗಿದೆ.

ಭಾಷಾಂತರಗಳು ಆಸಕ್ತಿಯಿಂದ ಹೊರಳುವ ಗುರುಪರಂಪರೆಯ ದೃಷ್ಟಿಯಿಂದ ಗಮನಿಸಬೇಕಾದುದು ನಾಥಪಂಥದ ಪಠ್ಯಗಳು. ಇದರಲ್ಲಿ ಪ್ರಮುಖವಾದುದು ಎಂದು ಎನ್ನಿಸುವ ಗಳಗನಾಥರ ಆನಂದವನ ಗ್ರಂಥಮಾಲೆಯಿಂದ ಪ್ರಕಟವಾದ ಅನುವಾದಿತ ಗ್ರಂಥ ‘ನವನಾಥ ಭಕ್ತಿಸಾರ’(1925) ಕೃತಿಯು ಗುರುಪರಂಪರೆಯನ್ನೂ ಗುರುಮಹಿಮೆಯನ್ನೂ ಪರಿಚಯಿಸುವ ಕೃತಿ. ಇದನ್ನು ಭಾಷಾಂತರಿಸಿದ ಶ್ರೀನಿವಾಸ ನರಸಿಂಹ ಆಲಗೂರ ಅವರು ಇದೊಂದು ಪ್ರಾಸಾದಿಕ ಗ್ರಂಥವೆಂದೂ ಇದನ್ನು ಕನ್ನಡ ವಾಚಕರು ಆಸ್ವಾದಿಸಬೇಕೆಂಬ ಆಶೆಯಿಂದ ಭಾಷಾಂತರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ರಹಮತರು ನಾಥಪಂಥದ ಬಗ್ಗೆ ಅಭ್ಯಾಸಪೂರ್ಣವಾದ ಕೃತಿಯನ್ನು ಕೊಟ್ಟಿದ್ದು ಶತಮಾದ ಕೊನೆಯ ದಶಕದಲ್ಲಿ(2007). ಅದಕ್ಕೂ ಪೂರ್ವದಲ್ಲಿಯೇ ಇಪ್ಪತ್ತನೇ ಶತಮಾನದ ಆರಂಭದ ದಶಕಗಳಲ್ಲಿಯೇ ಕನ್ನಡದಲ್ಲಿ ನಾಥಪಂಥ, ಸಿದ್ಧರ ಬಗ್ಗೆ ಇರುವ ಪುಸ್ತಕಗಳು ಅನುವಾದಗೊಂಡಿರುವುದು ವಿಶೇಷ. ಈ ಗ್ರಂಥದ ಭಾಷಾಂತರಕ್ಕೆ ಕಾರಣವೆಂದರೆ, ಭಾಷಾಂತರಕಾರರು ಅರಿಕೆ ಮಾಡಿಕೊಂಡಿರುವಂತೆ ‘ಈ ಪಂಥದ ಜನರು ಈಗ ಉತ್ತರ ಹಿಂದೂಸ್ಥಾನದಲ್ಲಿ ಸಿಕ್ಕುವರು. ನಮ್ಮ ದೇಶದಲ್ಲಿ ಈ ಪಂಥದ ಪ್ರಸಾರವಿಲ್ಲ’. ಅಂದರೆ ಗುರುಪಂಥಗಳನ್ನು ಅನುಸರಿಸುವ ಜನರು ನಮ್ಮ ಕರ್ನಾಟಕ ದೇಶದಲ್ಲಿ ಇರುವವರಾದರೂ ಅವರಿಗೆ ಇಂತಹ ಪ್ರಾಸಾದಿಕ ಗ್ರಂಥಗಳು ದುರ್ಲಭವೆನಿಸಿದ್ದರಿಂದಲೇ ಈ ಭಾಷಾಂತರಕ್ಕೆ ಕಾರಣವಾಗಿದೆ ಎಂದು ಊಹಿಸಬಹುದು. ಮೂಲತಃ ನಾಥಪಂಥವು ಭಕ್ತಿಕೇಂದ್ರಿತವಾದುದು (ಶ್ರೀ ನಾಥಪಂಥವು ಕರ್ಮಪ್ರಧಾನವಾದುದಲ್ಲ; ಭಕ್ತಿಪ್ರಧಾನವಾದುದು. ಗುರುನಿಷ್ಠೆಯೇ ಇಲ್ಲಿ ಮುಖ್ಯವಾದುದು ಎಂದು ಅರಿಕೆಯಲ್ಲಿ ಹೇಳಲಾಗಿದೆ). ಅದರ ಶ್ರವಣ ಹಾಗೂ ವಾಚನದಿಂದ ಜನರಿಗೆ ಮೋಕ್ಷಮಾರ್ಗವು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆ ಇದರ ಹಿಂದಿದೆ. ಈ ಬಗೆಯ ಸಾಧನಾ ಗ್ರಂಥಗಳಲ್ಲಿ ಒಂದು ಪರಂಪರೆಯ ಚರಿತ್ರೆ ನಿರೂಪಿತವಾಗಿರುತ್ತದೆ ಮತ್ತು ಇದನ್ನು ನಿರೂಪಿಸಲು ಒಂದು ಪಾರಿಭಾಷಿಕ ಪದಗಳನ್ನು ಬಳಸಲಾಗುತ್ತದೆ. ಇದು ಆ ಪರಂಪರೆಯಲ್ಲಿ ಯಾರು ಶ್ರದ್ಧೆಯನ್ನಿಟ್ಟು ಅನುಸರಿಸುತ್ತಾರೆಯೋ ಅವರಿಗೆ ಇದು ವೇದ್ಯವಾಗುವಂತದ್ದು. ಗುರುಪರಂಪರೆಯಲ್ಲಿ ನಂಬಿಕೆ ಇಡುವ ಸಾಧಕರಿಗೆ ಗುರುವಿನ ಸಂಜ್ಞೆಗಳು, ಸಂಕೇತಗಳು ಅರ್ಥವಾಗುವಂತವು. ನಾಥಪಂಥದ ಆಕರವೆನಿಸಿದ ‘ನವನಾಥ ಭಕ್ತಿಸಾರ’ ಗ್ರಂಥದಲ್ಲಿ ಮತ್ಸ್ಯೇಂದ್ರನಾಥ, ಗೋರಕ್ಷ, ಜಾಲಂಧರ, ಮೀನನಾಥ, ಚರ್ಪಟಿನಾಥ ಮುಂತಾದವರ ಜನನ ಚರಿತ್ರೆಯಿಂದ ಹಿಡಿದು ಅವರ ಆತ್ಮಸಾಧನೆಗಳನ್ನು ವಿವರಿಸಲಾಗಿದೆ. ಗುರುಪರಂಪರೆಯ ಹಿರಿಮೆಯನ್ನು ಎತ್ತಿಹಿಡಿಯುವ ಕೃತಿ ಇದಾಗಿದ್ದು ಸಾಧಕರಿಗೆ ಆಕರಗ್ರಂಥವಾಗಿ ನಿಲ್ಲುತ್ತದೆ.

ಧಾರ್ಮಿಕ ಶ್ರದ್ಧೆಯ ಭಾಷಾಂತರಗಳಲ್ಲಿ ಹೆಚ್ಚಿನ ಸ್ಥಾನ ಪಡೆಯುವುದು ಪಾರಾಯಣ ಗ್ರಂಥಗಳು. ಇದರಲ್ಲಿ ಗಮನಾರ್ಹವಾದ ಕೃತಿ ಎಂದರೆ ಹಿಂದಿಯ ತುಳಸೀ ರಾಮಾಯಣ ಮತ್ತು ಮರಾಠಿಯ ಜ್ಞಾನೇಶ್ವರಿ. ಹಿಂದೀಭಾಷಿಕ ಹಿಂದೂಜನರಿಗೆ ಪಾರಾಯಣ ಗ್ರಂಥವೆನಿಸಿರುವ ತುಳಸೀದಾಸರ ‘ರಾಮಚರಿತ ಮಾನಸ’(ತುಳಸೀರಾಮಾಯಣವೆಂತಲೇ ಜನಪ್ರಿಯವಾಗಿರುವ ಕೃತಿ)ಯು ಕನ್ನಡದಲ್ಲಿ ಹಲವಾರು ಬಾರಿ ಭಾಷಾಂತರವಾಗಿರುವ ಕೃತಿ. ಈ ಕೃತಿಯು ಉತ್ತರಭಾರತದಲ್ಲಿ ನಿತ್ಯಪಾರಾಯಣ ಮಾಡುವ ಗ್ರಂಥವಾಗಿದೆ. ದಿನನಿತ್ಯದ ಸೇವೆಗೆಂದು ಭಕ್ತರು ಇದನ್ನು ಕೊಳ್ಳುತ್ತಲೇ ಇರುವರು. ಇದನ್ನು ಮುದ್ರಣ ಮಾಡದೇ ಇರುವ ಮುದ್ರಣಾಲಯಗಳೇ ಇಲ್ಲವೆನ್ನುವಷ್ಟು ಪ್ರಭಾವಶಾಲಿ ಗ್ರಂಥವಿದು. ಇದನ್ನು ಕನ್ನಡಿಗರಿಗೆ ಪರಿಚಯಿಸುವ ಮೂಲಕ ರಾಮಾಯಣವನ್ನು ಪಾರಾಯಣ ಮಾಡುವ ಆಸ್ತಿಕರಿಗೆ ಹಾಗೂ ಶ್ರದ್ಧಾಳುಗಳಿಗೆ ಭಾಷಾಂತರದ ಮೂಲಕ ನೆರವು ನೀಡಬೇಕೆನ್ನುವುದು ಭಾಷಾಂತರಕಾರರ ಉದ್ದೇಶ. ಎಲ್ಲ ಪಾರಾಯಣ ಗ್ರಂಥದಂತೆ ಈ ಕೃತಿಯನ್ನು ಯಾರೆಲ್ಲ ಓದುತ್ತಾರೋ ಅವರಿಗೆ ಫಲಗಳಿವೆ ಎನ್ನುವುದನ್ನು ಹೇಳಿದೆ. ರಾಜಹಂಸ ಎಂಬ ಪತ್ರಿಕೆಯು ದ.ಕೃ.ಭಾರದ್ವಾಜರ ಭಾಷಾಂತರವಾದ ‘ತುಳಸೀ ರಾಮಾಯಣ’(1928)ದ ಪುಸ್ತಕವಿಮರ್ಶೆಯನ್ನು ಮಾಡುತ್ತಾ, ‘(ರಾಮಚರಿತಮಾನಸ) ನಿತ್ಯಪಾರಾಯಣದಿಂದ ಇಷ್ಟಫಲಗಳು ಸಿದ್ಧವಾಗುವುದೆಂದು ಭಾವಿಕ ಜನರ ತಿಳಿವಳಿಕೆಯುಂಟು. ಇಂಥ ಮಹತ್ತರ ಗ್ರಂಥವನ್ನು ಕನ್ನಡದಲ್ಲಿ ಭಾಷಾಂತರಿಸುವುದು ಅವಶ್ಯಕವಾಗಿದ್ದಿತು.. ಕನ್ನಡ ಭಾಷಾಭಿಮಾನಿಗಳಿಗೂ ಪಾರಾಯಣ ಮಾಡುವ ಭಾವಿಕರಿಗೂ ಈ ಗ್ರಂಥವೂ ಆದರಣೀಯವಾಗುತಿದೆ’ ಎಂದು ಬರೆದಿದೆ. ಈ ಕೃತಿಯ ಭಾಷಾಂತರದ ಉದ್ದೇಶವು ಕನ್ನಡಿಗರಿಗೆ ಭಕ್ತಿಯಿಂದ ಪಾರಾಯಣ ಮಾಡುವ ರಾಮಾಯಣವನ್ನು ನೀಡುವುದೇ ಆಗಿದ್ದರೂ ವಾಲ್ಮೀಕಿ ರಾಮಾಯಣದ ಪರ್ಯಾಯವಾಗಿ ಇದನ್ನು ನೀಡುವ ಉದ್ದೇಶ ಹೊಂದಿದೆ. ಮೂಲರಾಮಾಯಣವು ಪಠಣಕ್ಕೆ ಅರ್ಹವಾದ ಗ್ರಂಥವಾದರೂ ಅದು ಪಂಡಿತರಿಗೆ ದಕ್ಕುವಂತದ್ದು. ತುಳಸೀರಾಮಾಯಣವಾದರೋ ಜನಸಾಮಾನ್ಯರಿಗೆ ಭಕ್ತಿ, ಪವಾಡಮಹಿಮೆಗಳ ಮೂಲಕ ರಾಮಾಯಣದ ತತ್ವವನ್ನು ಅರ್ಥಮಾಡಿಸುವಂತದ್ದು. ಕುಮಾರವ್ಯಾಸನ ‘ ವೇದ ಪಾರಾಯಣದ ಫಲಗಂ/ಗಾದಿ ತೀರ್ಥಸ್ನಾನ ಫಲ ಕೃ/ಚ್ಛಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ’ ಎಂದು ಕುಮಾರವ್ಯಾಸ ತನ್ನ ಭಾರತದಲ್ಲಿ ಹೇಳುವುದು ಅವನು ಬರೆಯುತ್ತಿರುವುದು ಮಹಾಭಾರತ ಎನ್ನುವುದಕ್ಕಿಂತ ‘ಕೃಷ್ಣಕತೆ’ಯನ್ನು. ದೇವಮಹಿಮೆಯ ಕತೆಯನ್ನು ಪಾರಾಯಣ ಮಾಡುವುದರಿಂದ ಸಿಗುವ ಫಲಗಳನ್ನು ಹೀಗೆ ಕನ್ನಡದಲ್ಲಿ ಭಾಷಾಂತರವಾಗುವ ರಾಮಾಯಣವೂ ಹೇಳುತ್ತದೆ ಎನ್ನುವುದು ವಿಶೇಷ.

ಕನ್ನಡದಲ್ಲಿ ತುಳಸೀರಾಮಾಯಣಗಳು ಮತ್ತೆ ಮತ್ತೆ ಭಾಷಾಂತರಗೊಂಡಿವೆ. ಗದ್ಯ, ಪದ್ಯ, ತಾತ್ಪರ್ಯ, ಸಂಗ್ರಹ ರೂಪಗಳಲ್ಲಿ ಈ ಭಾಷಾಂತರಗಳು ಬಂದಿವೆ. ಗಳಗನಾಥರು ಭಾಷಾಂತರಿಸಿದ ‘ಸಚಿತ್ರ ರಾಮಚರಿತ ಮಾನಸ ಅಥವಾ ತುಲಸೀ ರಾಮಾಯಣ’(1926), ದ.ಕೃ.ಭಾರದ್ವಾಜರ ‘ತುಳಸೀ ರಾಮಾಯಣ’(1928), ಮೂಲ್ಕಿ ನರಸಿಂಗರಾವ್ ಅವರು ಅನುವಾದಿಸಿದ ‘ಕನ್ನಡ ಸುಲಭ ಗದ್ಯ ತುಲಸೀ ರಾಮಾಯಣ’(1935), ಮದ್ಗುಣಿ ಶಂಭುಭಟ್ಟ ಭಾಷಾಂತರಿಸಿದ ‘ಶ್ರಿರಾಮಚರಿತ ಮಾನಸ(1957), ಮೈ.ಶೇ.ಅನಂತಪದ್ಮನಾಭರಾವ್ ಅವರು ಭಾಷಾಂತರಿಸಿದ ‘ಶ್ರೀ ತುಲಸೀದಾಸ ರಾಮಾಯಣಂ ಅಥವಾ ಶ್ರೀ ರಾಮಚರಿತ ಮಾನಸ’(ಭಾಗ 1&2)(1958), ಗುರುನಾಥ ಜೋಶಿಯವರು ಗದ್ಯದಲ್ಲಿ ಭಾಷಾಂತರಿಸಿದ ‘ತುಲಸೀದಾಸ ಗೋಸ್ವಾಮಿ-ಶ್ರೀರಾಮಚರಿತ ಮಾನಸ’(1968) ಇಂತಹ ಪ್ರಯತ್ನಗಳು.

ತುಳಸೀದಾಸರನ್ನು ಬಿಟ್ಟರೆ ಭಾಷಾಂತರಕಾರರನ್ನು ಆಕರ್ಷಿಸಿದ್ದು ಕಬೀರದಾಸರು. ಭಕ್ತಿ ಪರಂಪರೆಗೆ ಸೇರಿದ ಕಬೀರದಾಸರ ದೋಹಗಳು, ಕೀರ್ತನೆಗಳು ಕನ್ನಡಕ್ಕೆ ಹಿಂದಿಯಿಂದ ಭಾಷಾಂತರಗೊಂಡಿವೆ. ಕಬೀರ ಭಜನಾವಲಿ(1955), ಕಬೀರ ವಚನ ಸಂಗ್ರಹ(1958),ಕಬೀರ ವಚನಾವಲಿ(1963?), ದೀನಬಂಧು ಕಬೀರ್(ವರ್ಷ?), ನುಡಿಮಲ್ಲಿಗೆ.

ಕಬೀರೋಪನಿಷತ್(1963)-ಹೀಗೆ ಸಾಲುಸಾಲಾಗಿ ಕಬೀರರ ಕೃತಿಗಳು ಕನ್ನಡದಲ್ಲಿ ಭಾಷಾಂತರಗೊಂಡಿವೆ. ಇವು ಸಾಹಿತ್ಯದ ಕಾರಣದಿಂದಲೂ ಆಧ್ಯಾತ್ಮಿಕ ಮೌಲ್ಯಗಳ ಕಾರಣದಿಂದಲೂ ಭಾಷಾಂತರಗೊಂಡಿವೆ ಎಂದು ಊಹಿಸಬಹುದು. ಇನ್ನೂ, ಕನ್ನಡಕ್ಕೆ ಬಂದ ನಿತ್ಯಾನುಸಂಧಾನದ ಪಾರಾಯಣ ಗ್ರಂಥಗಳಲ್ಲಿ ತಮಿಳಿನ ಭಾಷಾಂತರಗಳ ಕಾಣಿಕೆ ಬಹಳವಾಗಿದೆ. ಕನ್ನಡನಾಡಿಗೆ ವಲಸೆ ಬಂದ ಅಯ್ಯಂಗಾರ್ ಬ್ರಾಹ್ಮಣರು ದೇಶೀಯ ಸಮಾಜದಲ್ಲಿ ತಮ್ಮ ಧಾರ್ಮಿಕ ಶ್ರದ್ಧೆಯ ಪಠ್ಯಗಳನ್ನು ಪರಿಚಯಿಸುವ ಸಲುವಾಗಿ ಮಾಡಿದ ಭಾಷಾಂತರಗಳೇ ಮೇಲುಗೈಯಾಗಿವೆ. ತಮಿಳಿನ ಭಾಷಾಂತರ ಪಠ್ಯಗಳಲ್ಲಿ ಅತಿ ಹೆಚ್ಚು ಭಾಷಾಂತರವಾಗಿರುವುದು ಗೋದಾದೇವಿ(ಆಂಡಾಳ್) ರಚಿಸಿರುವ ‘ತಿರುಪ್ಪಾವೈ’ ಪಾರಾಯಣ ಗ್ರಂಥವಾಗಿದೆ. ಮಾರ್ಗಶಿರ ಮಾಸದಲ್ಲಿ ಪ್ರಾತಃಕಾಲದಲ್ಲಿ ದೇವರನ್ನು ಆರಾಧಿಸುವ ನುತಿಸುವ ತಮಿಳು ಪಾಠಗಳು ಅಲ್ಲಿವೆ. ತಮಿಳಿನಲ್ಲಿ ಆಂಡಾಳ್ ಎನ್ನುವುದು ಭಕ್ತ ಎನ್ನುವುದರ ಸ್ತ್ರೀಲಿಂಗರೂಪ. ಗೋದಾ ಎಂಬ ಭಕ್ತೆ ಕೃಷ್ಣನನ್ನು ಪತಿಯಾಗಿ ಭಾವಿಸಿ ಬರೆದ ಪ್ರೇಮಗೀತೆಗಳು ಅತ್ಯುತ್ತಮ ಆರಾಧನಾಗೀತೆಗಳಾಗಿವೆ. ಭಕ್ತ ಪರಂಪರೆಯಲ್ಲಿ ಪ್ರಚಲಿತವಿರುವಂತೆ ಕೀರ್ತನೆ, ನಾಮಸ್ಮರಣೆ, ಭಗವದಾರಾಧನೆಗಳು ವೈಷ್ಣವ ಸಂಪ್ರದಾಯದಲ್ಲಿ ಸಹಜವಾಗಿರುವಂತವು. ಅದರಂತೆ ಈ ದೇವನಾಮಕೀರ್ತನೆಯು ವೈಷ್ಣವರಲ್ಲಿ ಪಾರಾಯಣಕ್ಕೆ ಅನುಕೂಲವಾಗಿದೆ.

ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಶ್ರೀನಿವಾಸಯ್ಯಂಗಾರ್ಯರು ತಿರುಪ್ಪಾವೈ ಅನ್ನು ‘ನಿತ್ಯಾನುಸಂಧಾನ’ಮಾಲೆಯಲ್ಲಿ ಪ್ರಕಟಿಸಿದರು. ಜಿ.ಪಿ.ರಾಜರತ್ನಂ ಅವರ ತಿರುಪ್ಪಾವೈ(1961), ಸಂಪತ್ತೈಯ್ಯಂಗಾರ್‍ರ ತಿರುಪ್ಪಾವೈ(1967), ಟಿ.ಶೇಷಾದ್ರಿ ಭಾಷಾಂತರಿಸಿದ ಗೋದಾದೇವಿ ತಿರುಪಲ್ಲಾಂಡು, ತಿರುಪ್ಪಾವೈ(1966), ಕೌಶಿಕ.ವಿ.ಎಸ್.ಎಸ್ ಭಾಷಾಂತರಿತ ‘ಶ್ರೀಮದಾಂಡಾಳ್ ವೈಭವ ತಿರುಪ್ಪಾವೈ’(1968) ಹೀಗೆ ಅರವತ್ತರ ದಶಕದಲ್ಲಿ ಮೇಲಿಂದ ಮೇಲೆ ತಿರುಪ್ಪಾವೈ ಕೃತಿ ಭಾಷಾಂತರಗೊಂಡಿದೆ. ಇದು ಕುತೂಹಲಕಾರಿ ಎನ್ನಿಸುತ್ತದೆ. ಇದರ ಜೊತೆಗೆ, ಕನ್ನಡ ನಾಲಡಿಗಳು(ತಾತಾ ಅವರ ಅನುವಾದ),ತಿರುಮಾಳಿ ನಾಯಚ್ಚಿಯಾರ್ ಅವರ ನಾಯಕಿಗೀತೆ, ನಮ್ಮಾಳ್ವಾರ್ರ ‘ಶ್ರೀಮದ್ ದ್ರಾವಿಡೋಪನಿಷತ್ ಸಾರಸಂಗ್ರಹ’, ಅಡೈಕಲಪತ್ತು ಮತ್ತು ತಿರುಚ್ಛಿನ್ನಮಾಲೆ, ಪೆರಿಯಾಳ್ವಾರ್ ವಿರಚಿತ ಶ್ರೀವಿಷ್ಣುಚಿತ್ತ ಎಂಬ ತಿರುಪಲ್ಲಾಂಡು(ಜಿ.ಪಿ.ರಾಜರತ್ನಂ ಅನುವಾದ), ಶಡಗೋಪರ್ ಅವರ ಸಿರಿಬಾಯಿನುಡಿ(ಪುತಿನ ಅನುವಾದ), ಆಳ್ವಾರರ ಸಿರಿನುಡಿಗಳು ನಿತ್ಯಾನುಶಾಸನಂ, ತಿರುಚ್ಚಿನ್ನಮಾಲೆ ಮತ್ತು ಅರ್ಥಪಂಚಕಂ ಹೀಗೆ ಆಳ್ವಾರರ(ಭಕ್ತರ) ತತ್ವವಿಚಾರಗಳನ್ನೊಳಗೊಂಡ ಪಾಠಗಳ ಭಾಷಾಂತರಗಳು ತಮಿಳಿನಿಂದ ಬಂದಿವೆ. ಇವನ್ನು ಮಾಡಿರುವ ಭಾಷಾಂತರಕಾರರು ಶ್ರೀವೈಷ್ಣವ ಪಂಥಕ್ಕೆ ಸೇರಿದವರಾಗಿದ್ದು ವೈಷ್ಣವಧರ್ಮದ ಹಿರಿಮೆಯನ್ನು ಎತ್ತಿಹಿಡಿಯಲೆಂದೇ ಈ ಭಾಷಾಂತರಗಳನ್ನು ಮಾಡಿದ್ದಾರೆ ಎಂದು ಊಹಿಸಬಹುದು. ಈ ಭಾಷಾಂತರಗಳ ಜೊತೆಗೆ ನಿತ್ಯಾನುಸಂಧಾನಕ್ಕೆ ಅನುಕೂಲವಾಗುವ ಸ್ತ್ರೋತ್ರಪಾಠಗಳನ್ನು ಸಹ ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಅವುಗಳೆಂದರೆ ಮುಕುಂದಮಾಲಾ ಸ್ತ್ರೋತ್ರ, ಲಘುನಿತ್ಯಾನುಸಂಧಾನ(ತಿರುಪಲ್ಲಾಂಡು, ತಿರುಪಟ್ಟಿಯುಳಚ್ಚಿ ಎಂಬ ವಿಷ್ಣುಸ್ತುತಿರೂಪದ ಕೃತಿಗಳು), ಶ್ರೀಕೃಷ್ಣ ಸೇವಾವ್ರತಂ ಇನ್ನು ಮುಂತಾದವು. ವೈಷ್ಣವ ಸ್ತುತಿಗೀತೆಗಳು, ಆಳ್ವಾರರ ಪ್ರಬಂಧಗಳ ರಾಶಿಯಲ್ಲಿ ಕಂಬ ರಾಮಾಯಣ, ನೀತಿಮಂಜರಿಯಂತಹ ಕೃತಿಗಳು ಹಿನ್ನೆಲೆಗೆ ಸರಿದಂತಾಗಿವೆ. ಧಾರ್ಮಿಕ ಶ್ರದ್ಧೆಯನ್ನು ಹುಟ್ಟುಹಾಕುವ ಪಠ್ಯಗಳ ಆದ್ಯತೆಯನ್ನು ಗಮನಿಸುವುದಾದರೆ ಶ್ರೀವೈಷ್ಣವ ಸಾಹಿತ್ಯವೇ ಕಳೆದ ಶತಮಾನದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಭಾರತೀಯ ಭಾಷೆಗಳ ಧಾರ್ಮಿಕ ಶ್ರದ್ಧೆಯ ಪಠ್ಯಗಳು ವಿಫುಲವಾಗಿ ಬಂದಿದ್ದು ಮರಾಠಿಯಿಂದ. ಭಕ್ತಿಪರಂಪರೆ ಉಜ್ವಲವಾಗಿರುವ ಮರಾಠಿಯಲ್ಲಿ ಭಜನೆಗಳು, ಅಭಂಗಗಳು, ಗುರುಚರಿತ್ರೆ, ಗುರುಮಹಿಮಾಗ್ರಂಥಗಳು ವಿಫುಲವಾಗಿವೆ. ವಾರಕರಿ ಸಂಪ್ರದಾಯದಲ್ಲಿ ಹಾಡುವ ಕೀರ್ತನೆಗಳು ಸಹ ಈ ಗುಂಪಿಗೆ ಸೇರುತ್ತವೆ. ಮರಾಠಿ ಸಂಪ್ರದಾಯದಲ್ಲಿ ನಿತ್ಯಭಜಿಸುವ ಭಜನೆಗಳ ಜೊತೆಗೆ ಜ್ಞಾನದೇವ ಭಗವದ್ಗೀತೆಗೆ ಬರೆದ ‘ಜ್ಞಾನೇಶ್ಚರೀ’ ನಿತ್ಯಪಾರಾಯಣ ಗ್ರಂಥವಾಗಿದೆ. ಇದನ್ನು ಸಂಪ್ರದಾಯಸ್ಥ ಮರಾಠಿ ಹಿಂದೂಗಳು ಪಾರಾಯಣ ಮಾಡುವ ಗ್ರಂಥವೆಂದೇ ಹೇಳಲಾಗುತ್ತದೆ. ಮುಂಬಯಿ ಕರ್ನಾಟಕ ಭಾಗದ ಜನರಿಗೆ ಸುಪರಿಚಿತವಾಗಿರುವ ಜ್ಞಾನೇಶ್ವರಿಯನ್ನು ಕನ್ನಡಕ್ಕೆ ಭಾಷಾಂತರಿಸುವ ಯತ್ನಗಳು ಸದಾ ಚಲನಶೀಲವಾಗಿವೆ. ಪಂಢರಾಪುರದ ಕ್ಷೇತ್ರದಲ್ಲಿ ನಿತ್ಯಾನುಸಂಧಾನ ಮಾಡುವ ಗ್ರಂಥವಾಗಿ ಜ್ಞಾನೇಶ್ವರಿ ಪ್ರಸಿದ್ಧವಾಗಿದೆ. ಇದರ ವಿಶೇಷತೆ ಏನೆಂದರೆ, ವೈದಿಕಮಾರ್ಗಿಗಳಿಂದ ಹಿಡಿದು ಶೂದ್ರಸಂಪ್ರದಾಯಗಳವರಿಗೂ ಏಕಕಾಲದಲ್ಲಿ ಪ್ರಸ್ತುತವಾಗಿರುವುದು. ಕನ್ನಡ ಸಾರ್ಥ ಜ್ಞಾನೇಶ್ವರಿಯನ್ನು ಭಾಷಾಂತರಿಸಿದ ಸುನಗ ಶ್ರೀನಿವಾಸರಾಯರು ತಮ್ಮ ಭಾಷಾಂತರ ಪೂರ್ವಪೀಠಿಕೆಯಲ್ಲಿ ಜ್ಞಾನೇಶ್ವರಿಯು ಎಲ್ಲ ವರ್ಣದವರಿಗೆ ಅನುಕೂಲವಾದ ಗ್ರಂಥ ಎಂದು ಹೀಗೆ ಹೇಳುತ್ತಾರೆ;” ನಮ್ಮ ಕರ್ನಾಟಕದಲ್ಲಿ ಗೀತೆಯ ಪಠಣ, ಪಾರಾಯಣ ಬ್ರಾಹ್ಮಣರ ಹೊರತು ಇನ್ನಿತರ ವರ್ಣದವರು ಮಾಡಬಾರದೆಂದೂ ತಿಳಿವಳಿಕೆಯು ನೆಲೆಗೊಂಡಿರುವುದು...ಗೀತೆಯು ಮಹಾಭಾರತವೆಂಬ ಪುರಾಣದ ಭಾಗವು ಶ್ರುತಿಬಾಹ್ಯವಿದ್ದ ವರ್ಣದವರ ಸಲುವಾಗಿಯೇ ಅವರ ಉದ್ಧಾರಾರ್ಥವಾಗಿಯೇ ಮಹಾಭಾರತವೆಂಬ ‘ಪಂಚಮವೇದ’ ಅವತಾರವಾಗಿರುವುದು. ಅದರ ಅಭ್ಯಾಸ ಮಾಡಲಿಕ್ಕೂ ತದಂತರ್ಗತವಾದ ಗೀತೆಯ ಅಭ್ಯಾಸ ಮಾಡಲಿಕ್ಕೂ ಸ್ತ್ರೀಶೂದ್ರ ಮುಂತಾದವರಿಗೆ ಯಾವ ನಿರ್ಬಂಧವೂ ಇಲ್ಲ. ಈ ರೀತಿ ಗೀತೆಯು ಸಾಮಾನ್ಯಜನರ ಉದ್ಧಾರಕ್ಕಾಗಿ ಬರೆಯಲ್ಪಟ್ಟ ಗ್ರಂಥವು. ಎಲ್ಲರಿಗೂ ತಿಳಿಯಬೇಕು. ಎಲ್ಲರೂ ಅಧ್ಯಾತ್ಮ ವಿದ್ಯೆಯ ಅಭ್ಯಾಸ ಮಾಡಬೇಕು. ಎಲ್ಲರಿಗೂ ಅತುಚ್ಛಧ್ಯೇಯ ಪರಬ್ರಹ್ಮ ಪರಮಾತ್ಮನ ದರ್ಶನವಾಗಬೇಕು’ ಎಂದು. ವರ್ಣಾಶ್ರಮ ಧರ್ಮದ ಕರ್ಮಠ ಆಚರಣೆಗಳನ್ನೂ ತಾತ್ವಿಕತೆಗಳನ್ನೂ ಪರ್ಯಾಯವಾಗಿ ಕಟ್ಟಿಕೊಟ್ಟ ದೇಸೀಭಾಷೆಗಳ ಕೃತಿಗಳನ್ನು ಭಾಷಾಂತರ ಮಾಡುವುದರ ಮೂಲಕ ಭಕ್ತಿ ಪರಂಪರೆಗಳು ಬಿಚ್ಚಿಟ್ಟ ಅಧ್ಯಾತ್ಮ ರಹಸ್ಯವನ್ನು ಎಲ್ಲರಿಗೂ ಸಲ್ಲುವಂತೆ ಮಾಡುವುದಾಗಿದೆ.

ಕನ್ನಡ-ಮರಾಠಿ ಕೊಡುಕೊಳುವಿಕೆಯಲ್ಲಿ ಮಹಾರಾಷ್ಟ್ರದ ಸಂತರ ರಚನೆಗಳು ಹೆಚ್ಚಿನ ಪಾಲು ಪಡೆದಿವೆ. ಮರಾಠಿ ಸಂತ ತುಕಾರಾಮ ಹಾಗೂ ಇತರೆ ಸಂತರ ಅಭಂಗಗಳು ಜ್ಞಾನೇಶ್ವರಿಯ ಸಮಸಮನಾಗಿ ಭಾಷಾಂತರಗೊಂಡ ಪಠ್ಯಗಳು. 1891ರಲ್ಲಿ ಮಂಗಳೂರಿನಿಂದ ‘ತುಕಾರಾಮ. ಕೀರ್ತನ ಸುಧಾದಾಯಿನಿ’ ಎಂಬ ಭಾಷಾಂತರ ಕೃತಿ ಪ್ರಕಟಗೊಂಡಿದೆ. ‘ಶ್ರೀ ತುಕಾರಾಮ ಮಹಾರಾಜ ಕೃತ ನಿತ್ಯ ಪಾಠಾಚೆ ಅಭಂಗ’(1952), ‘ಸಂತರ ಅಭಂಗಗಳು’(ವರ್ಷ?) ಇಂತಹ ಕೃತಿಗಳನ್ನು ಗಮನಿಸಬಹುದು. ಪಂಢರಪುರದ ಭಕ್ತಿಸಂಪ್ರದಾಯವು ರೂಢಿಸಿದ್ದ ಭಜನೆಗಳು ಕನ್ನಡದಲ್ಲಿ ಭಾಷಾಂತರಗೊಂಡು ಹಾಡುವವರಿಗೆ ಅನುಕೂಲವಾಗಿವೆ. ‘ನಿತ್ಯಾನಂದ ಭಜನೆ’(ಸುಶೀಲಬಾಯಿ ಅಪ್ಪಯ್ಯ ಕಾಕಡಿ), ಭಜನಮಾಲಿಕಾ(ಪಂಢರಪುರ ಸಂತ ವಾಗ್ಮಯ ಸೇವಾಸಂಘ), ಬ್ರಹ್ಮಜನಾರ್ದನ ಮುನಿ.ನಿತ್ಯ ಪಾಠ ಭಜನಂ(ದತ್ತಪಂಚಪದಿ, ಗೋಕರ್ಣ), ತ್ರಿಕಾಲ ಭಜನ ಮಾಲಿಕ(ಉಡುಪಿ, ಪ್ರಭಾವ ಮುದ್ರಯಂತ್ರ), ಬ್ರಹ್ಮಾನಂದ ಭಜನೆ(ಹುಬ್ಬಳ್ಳಿ)-ಹೀಗೆ ಹಲವಾರು ಭಜನೆಗಳ ಭಾಷಾಂತರಗಳು ಉಪಲಬ್ಧವಿವೆ. ಇವುಗಳನ್ನು ಅನುಸರಿಸುವ ಶ್ರದ್ಧಾಳುಗಳು ಮರಾಠ ಸಂಪ್ರದಾಯದ ಮೂಲವುಳ್ಳ ಸಮುದಾಯದವರು ಮೊದಲ ಸಾಲಿನಲ್ಲಿದ್ದರೆ, ಉಳಿದ ಆಸಕ್ತರು ಅವರನ್ನು ಅನುಸರಿಸಿ ಬರುತ್ತಾರೆ. ಗುರುಪರಂಪರೆಯನ್ನು ಸಾರುವ ಚರಿತ್ರೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಭಾಷಾಂತರಗೊಂಡಿದ್ದು ಸಮರ್ಥ ರಾಮದಾಸರು, ಗೊಂದಾವಲಿ ಬ್ರಹ್ಮಚೈತನ್ಯರು, ಅಕ್ಕಲಕೋಟೆ ಮಹಾರಾಜರು, ನಿಂಬರಗಿ ಮಹಾರಾಜರು, ಸಾಯಿನಾಥರು ಇವರ ಜೀವನ ಚರಿತ್ರೆಗಳು, ಮಹಿಮೆಗಳನ್ನು ಹಾಡುವ ಭಜನೆಗಳು, ಅವರ ಮಾರ್ಗಗಳನ್ನು ಸಾಧಕರಿಗೆ ತಿಳಿಯಪಡಿಸುವ ಪಠ್ಯಗಳು ಮರಾಠಿಯಿಂದ ಕನ್ನಡಕ್ಕೆ ಭಾಷಾಂತರಗೊಂಡು ಬಂದಿರುವ ಪಠ್ಯಗಳು.

ತೆಲುಗಿನಿಂದ ಅನುಭಾವಿಗಳೆನಿಸಿದ ವೇಮನನ ವಚನಗಳು ಮತ್ತು ಕೈವಾರ ತಾತಯ್ಯನ ಕಾಲಜ್ಞಾನ ಹಾಗೂ ಬ್ರಹ್ಮಜ್ಞಾನದ ಸಾಹಿತ್ಯವು ಕನ್ನಡಕ್ಕೆ ಭಾಷಾಂತರಗೊಂಡಿವೆ. ಈ ಹಿಂದೆ ಶೈವ ಸಾಹಿತ್ಯ ಹಾಗೂ ವೈಷ್ಣವ ಸಾಹಿತ್ಯಗಳು ಸಹ ಕನ್ನಡಕ್ಕೆ ಭಾಷಾಂತರಗೊಂಡಿವೆ. ಕನ್ನಡದ ಸೋದರಭಾಷೆಗಳನ್ನು ಬಿಟ್ಟರೆ ಕನ್ನಡವು ಬಂಗಾಳಿಯಿಂದ ಆಧ್ಯಾತ್ಮಿಕ ಪ್ರೇರಣೆಗಳನ್ನು ಪಡೆದುಕೊಂಡಿತು. ಅರವಿಂದ, ರಾಮಕೃಷ್ಣ, ವಿವೇಕಾನಂದ ಮುಂತಾದವರ ಆಧ್ಯಾತ್ಮಿಕ ದರ್ಶನಗಳುಳ್ಳ ಗ್ರಂಥಗಳು, ಕೀರ್ತನೆಗಳು ಕನ್ನಡಕ್ಕೆ ಭಾಷಾಂತರಗೊಂಡವು. ಹೊಸಯುಗದಲ್ಲಿ ಮಾದರಿಗಾಗಿ ಭಾರತದ ನಾಡುಗಳು ಬಂಗಾಳದತ್ತ ನೋಡುತ್ತಿದ್ದಂತೆ ಕನ್ನಡವೂ ನೋಡುತ್ತಿತ್ತು. ಬಂಗಾಳಿ ಸಾಹಿತ್ಯವನ್ನು ಅನುಸಂಧಾನವನ್ನು ಕನ್ನಡ ಭಾಷಾಂತರಗಳು ಮಾಡಿದವು. ಅದರಲ್ಲಿ ಒಂದು ಪ್ರಬಲವಾದ ಧಾರೆ ಎಂದರೆ ಬಂಗಾಳಿ ಆಧ್ಯಾತ್ಮಿಕ ದರ್ಶನಗಳದ್ದು. ಕನ್ನಡದಲ್ಲಿ ನೆನಪಿಡಬಹುದಾದ ಭಾಷಾಂತರಗಳೆಂದರೆ ಅರವಿಂದರ ‘ದುರ್ಗಾಸ್ತೋತ್ರ’(1956) ಹಾಗೂ ಜಿ.ಎಸ್.ಶಿವರುದ್ರಪ್ಪ ‘ತೀರ್ಥವಾಣಿ’(1960). ವಿವೇಕಾನಂದರ ಬರಹಗಳು, ರಾಮಕೃಷ್ಣ ವಚನವೇದ, ರಾಮಕೃಷ್ಣಾಶ್ರಮದ ಭಾಷಾಂತರಗಳು ಇವು ಪುನಃ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಕನ್ನಡದ ಮಟ್ಟಿಗೆ ಪಾರಾಯಣ ಗ್ರಂಥಗಳಾಗಿ ಉಳಿದಿದ್ದು ರಾಮಕೃಷ್ಣರ ಭಜನೆಗಳು, ನವೀನಚಂದ್ರ ಸೇನ ಅವರು ಬರೆದ ‘ಶ್ರೀಕೃಷ್ಣ ಚರಿತ್ರೆ’(ಅನುವಾದ: ಗೋವಿಂದ ಪೈ)(1909 ?) ಇಂತವು. ಕನ್ನಡದ ಸಂವೇದನೆಗೆ ಆಧ್ಯಾತ್ಮಿಕ ಬಲವನ್ನು ತಂದುಕೊಟ್ಟ ಬಂಗಾಳಿಯು ನಿತ್ಯಾನುಸಂಧಾನದ ಪಠ್ಯಗಳನ್ನು ಮರಾಠಿ, ತಮಿಳು ಭಾಷೆಗಳಂತೆ ನೀಡದೇ ಹೋಯಿತೆಂದೇ ಹೇಳಬಹುದು.

ಸಂಸ್ಕೃತ ಹೊರತು ಪಡಿಸಿ ಇತರೆ ಭಾರತೀಯ ಭಾಷೆಗಳು ಭಾಷಾಂತರದ ಈ ಬಿಂದುವಿನಲ್ಲಿ ಇನ್ನೊಂದು ಸೋದರ ಭಾಷೆಯಲ್ಲಿ ಬರುವುದರ ಹಿಂದಿನ ಕಾರಣಗಳನ್ನು ನೋಡಿದರೆ ಈಗಾಗಲೇ ಹೇಳಿದಂತೆ ಭಕ್ತಿ ಮತ್ತು ಅನುಭಾವದ ದೃಷ್ಟಿಯಿಂದ; ಇನ್ನೊಂದು ಜನಸಾಮಾನ್ಯರ ಆಚರಣಾತ್ಮಕ ಕ್ರಿಯೆಗಳಿಗಾಗಿ ಇರುವ ವ್ರತ, ದೇವತಾರಾಧನೆಯ ಕ್ರಮಗಳ ಕಾರಣದಿಂದ. ಈ ಭಾಷಾಂತರಗಳು ಬೆಸೆಯುವ ಶ್ರದ್ಧೆಯು ಪಾಂಥಿಕ ಹಾಗೂ ಪರಂಪರೆಯ ನೂಲುಗಳಿಂದ ಉಂಟಾಗಿರುವಂತದ್ದು. ಈ ದೃಷ್ಟಿಯಿಂದ ಕನ್ನಡಕ್ಕೆ ಬಂದ ಧಾರ್ಮಿಕ ಶ್ರದ್ಧೆಯ/ಭಕ್ತಿ, ಅನುಭಾವಗಳ ಪಠ್ಯಗಳು ಕುತೂಹಲ ಹುಟ್ಟಿಸುತ್ತವೆ.

ಈ ಅಂಕಣದ ಹಿಂದಿನ ಬರೆಹಗಳು:

ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ

ಬೇಂದ್ರೆ ಅನುವಾದಗಳ ಅನುಸಂಧಾನ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ

ಇಂಗ್ಲಿಷ್ ಗೀತಗಳ ಪಯಣ

ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...