ಶುದ್ದ  ಸಂಗೀತದ ಪ್ರತಿಪಾದಕ:  ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

Date: 23-09-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ಜಗದೀಶ ಕೊಪ್ಪ ಅವರು 'ಗಾನಲೋಕದ ಗಂಧರ್ವರು' ಸರಣಿಯಲ್ಲಿ ಪಂಡಿತ್‌ ವಿಷ್ಣು ದಿಗಂಬರ್‌ ಪಲುಸ್ಕರ್ ಅವರನ್ನು ಕುರಿತು ಬರೆದಿದ್ದಾರೆ. ಖ್ಯಾತ ಗಾಯಕಿ ಕಿಶೋರಿ ಅಮೋನಕರ್‌ ಅವರ ತಾಯಿ-ಗುರುವಾಗಿದ್ದ ಮೊಗುಬಾಯಿ ಅವರು ಉಸ್ತಾದ್‌ ಅಲ್ಲಾದಿಯಾಖಾನ್‌ ಅವರಿಂದ ಆರಂಭವಾದ ಸಂಗೀತ ಪರಂಪರೆಗೆ ಸೇರಿದವರು. ಆಸ್ಥಾನದಲ್ಲಿದ್ದ ಸಂಗೀತವನ್ನು ಜನಸಾಮಾನ್ಯರ ಮಧ್ಯೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ವಿ.ಡಿ. ಪಲುಸ್ಕರ್‌ ಹೆಸರು ಮಹತ್ವದ್ದಾಗಿದೆ. ಶಾಸ್ತ್ರೀಯ ಗಾಯನದಲ್ಲಿ ಭಕ್ತಿ ಸಂಗೀತವನ್ನು ಸೇರಿಸಿದ ಪಲುಸ್ಕರ್‌ ಅವರ ವ್ಯಕ್ತಿತ್ವವನ್ನು ಈ ಬರೆಹ ಕಟ್ಟಿಕೊಡುತ್ತದೆ.

ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಭಾರತದ ಸಂಗೀತ ಕ್ಷೇತ್ರದಲ್ಲಿ ಉಂಟಾದ ಕೆಲವು ಸುಧಾರಣೆಗಳಿಗೆ ಮಹಾರಾಷ್ಟ್ರದ ಸಂಗೀತ ಕ್ಷೇತ್ರವೂ ಸಹ ಹೊರತಾಗಿರಲಿಲ್ಲ ಮಹಾರಾಷ್ಟ್ರದ ಹಿಂದೂಸ್ತಾನಿ ಸಂಗೀತದಲ್ಲಿ. ಇಂತಹ ಮಹತ್ವದ ಬದಲಾವಣೆಯನ್ನು ತಂದವರಲ್ಲಿ ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್ ಸಹ ಮುಖ್ಯರಾದವರು. ಅದಕ್ಕೆ ಮುನ್ನ ಪ್ರಸ್ತುತ ಪಡೆಸುತ್ತಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವು ಕಾಲದ ಯಾವ ಹೊಡೆತಕ್ಕೂ ಜಗ್ಗದೆ ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿದ್ದು ನಿಜವಾದರೂ, ಆಯಾ ಕಾಲಘಟ್ಟದ ಬದಲಾವಣೆಗೆ ತೆರೆದುಕೊಳ್ಳದೆ ಒಂದು ರೀತಿಯಲ್ಲಿ ಏಕತಾನತೆಯಿಂದ ಬಳಲುತ್ತಿತ್ತು. ಕೀರ್ತನೆ, ಭಜನೆ ಮತ್ತು ರಂಗಭೂಮಿಯ ನಾಟಕಗೀತೆಗಳ ಮೂಲಕ ಅಸ್ತಿತ್ವದಲ್ಲಿದ್ದ ಹಿಂದುಸ್ತಾನಿ ಸಂಗೀತಕ್ಕೆ ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಖ್ಯಾಲ್ ಗಾಯನವನನ್ನು ಪ್ರಮುಖವಾಗಿರಿಸಿಕೊಂಡ ಗ್ವಾಲಿಯರ್ ಘರಾಣೆ ಮಹಾರಾಷ್ಟ್ರಕ್ಕೆ ಕಾಲಿಟ್ಟ ನಂತರ ಹಿಂದೂಸ್ತಾನಿ ಸಂಗೀತದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು.

ಹಿಂದೂಸ್ತಾನಿ ಸಂಗೀತದ ಭೀಷ್ಮಾಚಾರ್ಯರು ಎಂದು ಕರೆಯಲಾಗುವ ಬಾಲಕೃಷ್ಣಬುವಾ ಈಚಲಕರಂಜಿಕರ್ ಮತ್ತು ಅವರ ಶಿಷ್ಯರಾದ ಅನಂತ್ ಮನೋಹರ ಜೋಷಿ, ಖುರಾಶಿ ಬುವಾ, ನೀಲಕಂಠ ಬುವಾ, ವಿಷ್ಣು ದಿಗಂಬರ್ ಪಲುಸ್ಕರ್ ಮುಂತಾದ ದಿಗ್ಗಜರಿಂದ ಹೊಸ ಚೈತನ್ಯ ಪಡೆಯಿತು. ಮಹಾರಾಷ್ಟ್ರದಲ್ಲಿ ಅಭಂಗ್ ಎಂದು ಕರೆಸಿಕೊಳ್ಳುವ ಭಜನೆಗಳು ಮತ್ತು ಕೀರ್ತನೆಯಿಂದ ಕೂಡಿದ್ದ ಸಂಗೀತಕ್ಕೆ ಹೊಸ ರೂಪ ದೊರೆಯುವುದರ ಜೊತೆಗೆ ರಾಜ ಮಹಾರಾಜರ ಆಸ್ಥಾನಗಳಲ್ಲಿ ಬಂಧಿಯಾಗಿದ್ದ ಸಂಗೀತವನ್ನು ಬಿಡುಗಡೆಗೊಳಿಸಿ, ಜನಸಾಮಾನ್ಯರತ್ತ ಕೊಂಡೊಯ್ಯುವಲ್ಲಿ ಈ ಮೇಲ್ಕಂಡ ಮಹನೀಯರ ಕೊಡುಗೆ ಅಪಾರವಾದುದು. ಇವರಲ್ಲಿ ವಿ.ಡಿ.ಪಲುಸ್ಕರ್ ಕೊಡುಗೆ ಬಹಳ ಮುಖ್ಯವಾದವರು.

ಶುದ್ಧ ಶಾಸ್ತ್ರೀಯ ಸಂಗೀತದ ಪ್ರತಿಪಾದಕರಾಗಿದ್ದ ಪಂಡಿತ್ ಪಲುಸ್ಕರ್ ಎಂದಿಗೂ ಸಂಗೀತದ ಪಠ್ಯಗಳನ್ನು ಹೊರತುಪಡಿಸಿ ಅದರಾಚೆ ಇಣುಕಿ ನೋಡಿದವರಲ್ಲ. ರಾಗಾಲಾಪನೆ, ಬಂದಿಷ್(ಸಂಗೀತದ ಸಾಹಿತ್ಯ ಅಥವಾ ಕೃತಿ) ಇವುಗಳ ಪ್ರಸ್ತುತ ಪಡಿಸುವಿಕೆಯಲ್ಲಿ ರಾಗಗಳ ಮತ್ತು ಸಾಹಿತ್ಯದ ಮೂಲಕ್ಕೆ ಧಕ್ಕೆ ಬಾರತದ ರೀತಿಯಲ್ಲಿ ಜನಪ್ರಿಯಗೊಳಿಸುವುದಕ್ಕೆ ಶ್ರಮಿಸಿದರು. ಸ್ವತಃ ಸಂಗೀತಗಾರರಾಗಿದ್ದುಕೊಂಡು, ಭಾರತ ಸ್ವಾತಂತ್ರಯ ಹೋರಾಟದ ಪ್ರತಿಪಾದಕರಾಗಿದ್ದ ಅವರು ರಘುಪತಿ ರಾಘವ ರಾಜಾರಾಂ ಭಜನೆಯ್ನು ಮೂಲ ಸ್ವರೂಪದಲ್ಲಿ ಹಾಡುವುದರ ಮೂಲಕ ಜನಪ್ರಿಯಗೊಳಿಸಿದರು. ಅದೇ ರೀತಿಯಲ್ಲಿ ಸ್ವಾತಂತ್ರ ಪೂರ್ವಕ್ಕೆ ಪಶ್ಚಿಮ ಬಂಗಾಳದ ಬಂಕಿಮ ಚಂದ್ರ ಚಟರ್ಜಿಯವರ ವಂದೇ ಮಾತರಂ ಗೀತೆಗೆ ರಾಗ ಸಂಯೋಜನೆ ಮಾಡಿ ಭಾರತದ ರಾಷ್ಟ್ರಗೀತೆ ಎಂಬಂತೆ ಪ್ರಚುರಗೊಳಿಸಿದರು. ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜನಸಾಮಾನ್ಯರನ್ನು ಪ್ರೇರೇಪಿಸಲು ಭಾರತೀಯ ಸಾಂಸ್ಕೃತಿಕ ಆಚರಣೆಗಳನ್ನು ಆಯುಧ ಮಾಡಿಕೊಂಡಿದ್ದ ಬಾಲಗಂಗಾಧರ ತಿಲಕ್‌ರವರು ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್ ರವರಿಗೆ ಮಾದರಿಯಾಗಿದ್ದರು. ತಿಲಕ್ ರವರು ಮಹಾರಾಷ್ಟ್ರದಲ್ಲಿ ಗಣೇಶನ ಉತ್ಸವಗಳನ್ನು ಆರಂಭಿಸುವುದರ ಮೂಲಕ ಶ್ರೀಸಾಮಾನ್ಯರಲ್ಲಿ ಸ್ವಾತಂತ್ರ್ಯದ ಕನಸಿನ ಬೀಜಗಳನ್ನು ಬಿತ್ತುತ್ತಿದ್ದರು. ಇದೇ ಮಾರ್ಗದಲ್ಲಿ ವಿಷ್ಣು ದಿಗಂಬರ್ ಪಲುಸ್ಕರ್ ರವರು ಸಹ ಸಂಗೀತವನ್ನು ಭಾರತ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಆಯ್ದುಕೊಂಡಿದ್ದರು.

ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್ ರವರದು ಒಂದು ರೀತಿಯಲ್ಲಿ ಆಧ್ಯಾತ್ಮಿಕವಾದ ಹೋರಾಟದ ಬದುಕು. ಇಡೀ ಬದುಕಿನುದ್ದಕ್ಕೂ ಸಂಗೀತದ ಔನ್ನತ್ಯಕ್ಕಾಗಿ ಹೋರಾಡಿದವರು. ಬಾಲ್ಯದಲ್ಲಿ ತನ್ನೂರಿನಲ್ಲಿ ನಡೆಯುತ್ತಿದ್ದ ದತ್ತ ಜಯಂತಿ ಉತ್ಸವ ಸಂದರ್ಭದಲ್ಲಿ ಪಟಾಕಿ ಸಿಡಿದು ತಮ್ಮ ಕಣ್ಣುಗಳ ದೃಷ್ಟಿಯನ್ನು ಅಲ್ಪ ಪ್ರಮಾಣದಲ್ಲಿ ಕಳೆದುಕೊಂಡರೂ ಸಹ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ, ಹಲವಾರು ಪ್ರಯೋಗ ಮಾಡಿ ಬದುಕಿನಲ್ಲಿ ಯಶಸ್ವಿಯಾದರು.

ಅಂದಿನ ಕಾಲಘಟ್ಟದಲ್ಲಿ ಮುಂಬೈ ಪ್ರೆಸಿಡೆನ್ಸಿ ಎಂದು ಕರೆಸಿಕೊಳ್ಳುತ್ತಿದ್ದ ಮಹಾರಾಷ್ಟ್ರದ ಪಟುವರ್ಧನ ಎಂಬ ಮರಾಠಿ ದೊರೆಯ ಪುಟ್ಟ ಸಂಸ್ಥಾನವಾದ ಹಾಗೂ ಸಾಂಗ್ಲಿ ಸಮೀಪದ ಕುಂದರ್‌ವಾಡ ದಲ್ಲಿ 1872ರಲ್ಲಿ ಜನಿಸಿದ ಪಂಡಿತ್ ಪಲುಸ್ಕರ್ ಬಾಲ್ಯದ ವಿದ್ಯಾಭ್ಯಾಸವನ್ನು ತಮ್ಮ ಊರಿನಲ್ಲಿ ಮುಗಿಸಿದರು. ಅವರ ತಂದೆಯವರಾದ ದಿಗಂಬರ್ ಪಂತ್ ಸಹ ಸಂಗೀತಗಾರರಾಗಿದ್ದರು. ಆ ಕಾಲದ ಮಹಾರಾಷ್ಟ್ರ ಬ್ರಾಹ್ಮಣರ ಪುಟ್ಟ ಸಂಸ್ಥಾನದಲ್ಲಿ ಅವರು ನಾರದೀಯ ಕೀರ್ತನ್ ಎಂದು ಕರೆಯಲಾಗುತ್ತಿದ್ದ ಸಂಗೀತದ ಪ್ರಕಾರದ ಕೀರ್ತನೆಗಾರರಾಗಿದ್ದರು. ಸಂಗೀತದ ಜೊತೆ ಧರ್ಮ ಮತ್ತು ಶಾಸ್ತ್ರಗಳು ಮಿಳಿತಗೊಂಡಿದ್ದ ಬಾಲ್ಯದಿಂದ ಶುದ್ಧ ಸಂಸ್ಕಾರದ ವಾತಾವರಣದಲ್ಲಿ ಬೆಳೆದ ಪಲುಸ್ಕರ್ ಸಂಗೀತವೆಂಬುದು ಭಾರತೀಯ ಸಂಸ್ಕೃತಿಯ ಪ್ರತೀಕವೆಂದು ನಂಬಿದ್ದರು. ಹಾಗಾಗಿ ಧರ್ಮ, ಶಾಸ್ತ್ರ, ಪುರಾಣಗಳ ಕುರಿತಂತೆ ಚರ್ಚೆಯಲ್ಲಿ ಬೌದ್ಧಿಕವಾಗಿ ಅರಳಿದ ಅವರು ಎಂದಿಗೂ ಅಂಧಶ್ರದ್ಧೆಯ ಮಾರ್ಗವನ್ನು ತುಳಿಯದೆ, ಮನುಷ್ಯನ ಸಂಸ್ಕಾರದ ವಿಕಸನಕ್ಕೆ ಭಾರತೀಯ ಸಂಗೀತ ಕೂಡ ಮಹತ್ತರ ಮಾರ್ಗ ಎಂದು ನಂಬಿ ಬದುಕಿದವರು. ತಮ್ಮ ಸಂಸ್ಥಾನದ ದೊರೆ ಪಟುವರ್ಧನರ ಸಹಾಯದಿಂದ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ವಿದ್ವಾಂಸರಾಗಿ, ಗಾಯಕರಾಗಿ, ಬೆಳೆದರಲ್ಲದೆ, ತಮ್ಮ ಸಂಗೀತ ಶಾಲೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಸಂಗೀತ ಲೋಕಕ್ಕೆ ಕೊಡುಗೆಯಾಗಿ ನೀಡಿದರು.

ಕುಂದರ್ವಾಡ ಸಂಸ್ಥಾನದ ದೊರೆಯಾದ ಪಟುವರ್ಧನ್ ರವರ ಆರ್ಥಿಕ ಸಹಾಯದಿಂದ ಆರಂಭದಲ್ಲಿ ಮೀರಜ್ ಪಟ್ಟಣದಲ್ಲಿದ್ದುಕೊಂಡು ತಮ್ಮ ಹದಿನೈದನೇ ವಯಸ್ಸಿನಲ್ಲಿ ಪಂಡಿತ್ ಮಹೇಶ್ವರ್ ಬುವಾ ಎಂಬುವರಲ್ಲಿ ಸಂಗೀತಾಭ್ಯಾಸ ಮಾಡಿದ ಪಲುಸ್ಕರ್ ಅವರು, ಆನಂತರ ಬಾಲಕೃಷ್ಣ ಬುವಾ ಈಚಲಕರಂಜಕರ್ ಎಂಬ ವಿದ್ವಾಂಸರ ಬಳಿ ಅಭ್ಯಾಸ ಮಾಡಿದರು. ಮಹಾರಾಷ್ಟ್ರದ ಸಂಗೀತ ಲೋಕಕ್ಕೆ ಗ್ವಾಲಿಯರ್ ಘರಾಣೆ ಸಂಗೀತವನ್ನು ಪರಿಚಯಿಸಿದ್ದ ಈಚಲಕರಂಜರ್ ಮೂಲಕ ಗಾಯನದ ಪಟ್ಟುಗಳನ್ನು ಕಲಿತ ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್ ಓರ್ವ ಪ್ರತಿಭಾವಂತ ಗಾಯಕರಾಗಿ ಹೊರಹೊಮ್ಮಿದರು.

ತಮ್ಮ ಇಪ್ಪತ್ತೈದನೆಯ ವಯಸ್ಸಿನಲ್ಲಿ ಸಂಗೀತವನ್ನು ತಮ್ಮ ಜೀವನ ವೃತ್ತಿಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಶ್ರೀಮಂತರ ನಿವಾಸಗಳು, ಅವರ ಕುಟುಂಬದ ವಿವಾಹ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಅವರು ಆನಂತರದ ದಿನಗಳಲ್ಲಿ ಮಧ್ಯಭಾರತ ಮತ್ತು ಉತ್ತರ ಭಾರತದ ಅನೇಕ ಸಂಸ್ಥಾನಗಳಲ್ಲಿ ಕಾರ್ಯಕ್ರಮ ನೀಡುತ್ತಾ ಪ್ರಸಿದ್ಧ ಕಲಾವಿದರಾಗಿ ಹೆಸರು ಮಾಡಿದರು. ಪಲುಸ್ಕರ್ ಸಂಗೀತ ಕಲಾವಿದರಾಗಿ ಸತಾರ, ಬರೋಡ, ಜೋಧಪುರ, ಗ್ವಾಲಿಯರ್, ಕಾಥೇವಾಡ, ದೆಹಲಿ, ಅಮೃತಸರ, ಮಥುರ, ಜೈಪುರ ಲಾಹೋರ್ ಹೀಗೆ ಹಲವೆಡೆ ಸುತ್ತಾಡಿದರು. ತಮ್ಮ ಸುತ್ತಾಟದ ನಡುವೆ ದೊರೆಗಳ ಆಸ್ಥಾನದಲ್ಲಿ ಹಾಡುವುದರ ಮೂಲಕ ಅವರ ಕೃಪಾಕಟಾಕ್ಷಕ್ಕೆ ಒಳಗಾಗುವುದು ಒಂದು ರೀತಿಯಲ್ಲಿ ಮಾನಸಿಕ ಕಿರಿ ಕಿರಿ ಎಂದು ಭಾವಿಸಿದ ಪಂಡಿತ್ ಪಲುಸ್ಕರ್ ಸಂಗೀತವನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವ ನಿಟ್ಟಿನಲ್ಲಿ ಗುಜರಾತಿನ ಸೌರಾಷ್ಟ್ರದಲ್ಲಿ ಪ್ರಥಮ ಬಾರಿಗೆ 1897ರಲ್ಲಿ ಸಾರ್ವಜನಿಕ ಸಂಗೀತ ಕಚೇರಿಯನ್ನು ಏರ್ಪಡಿಸಿ, ಜನಸಾಮಾನ್ಯರಿಗೆ ನಿಲುವಂತೆ ಕನಿಷ್ಠ ಪ್ರವೇಶ ದರವನ್ನು ನಿಗದಿ ಪಡಿಸಿದರು. ಇದರಲ್ಲಿ ಯಶಸ್ವಸಿಯಾದ ನಂತರ ಶ್ರೀಮಂತರ ನಿವಾಸಗಳು ಮತ್ತು ಆಸ್ಥಾನಗಳ ಆಹ್ವಾನಗಳನ್ನು ನಿರಾಕರಿಸಿದರು. ನಂತರದ ದಿನಗಳಲ್ಲಿ ಕೇವಲ ದೇಗುಲಗಳ ಆವರಣ ಹಾಗೂ ಸಾರ್ವಜನಿಕ ಸಾಂಸ್ಕೃತಿಕ ಉತ್ಸವಗಳಲ್ಲಿ ಮಾತ್ರ ಹಾಡುತ್ತಿದ್ದರು.

ಪಂಜಾಬ್ ನಲ್ಲಿ ನಡೆದ ಹರ್‌ಬಲ್ಲಬ್ ಮೇಳದಲ್ಲಿ ಅವರು ನೀಡಿದ ಸಂಗೀತ ಕಚೇರಿಯಿಂದಾಗಿ ಅಂದಿನ ಅವಿಭಜಿತ ಬಾರತದ ಅಂಗವಾದ ಲಾಹೋರ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಪಲುಸ್ಕರ್ ಹೆಸರುವಾಸಿಯಾದರು. ಇದರ ಪರಿಣಾಮವಾಗಿ 1901ರಲ್ಲಿ ಲಾಹೋರ್ ನಗರದಲ್ಲಿ ನೆಲೆ ನಿಂತು ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿ ಗಂಧರ್ವ ಮಹಾವಿದ್ಯಾಲಯ ಎಂಬ ಸಂಗೀತ ಶಾಲೆಯನ್ನು ಆರಂಭಿಸಿದರು. ತಮ್ಮ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆಯ ಜೊತೆಗೆ ಸಂಗೀತ ಶಿಕ್ಷಣ ನೀಡುತ್ತಿದ್ದ ಪಲುಸ್ಕರ್ ತಮ್ಮ ಸಂಪಾದನೆಯನ್ನು ಸಂಗೀತದ ಶಿಕ್ಷಣಕ್ಕಾಗಿ ಉಪಯೋಗಿಸುತ್ತಿದ್ದರು. ಲಾಹೋರ್ ನಗರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅವರು ಆನಂತರದ ದಿನಗಳಲಲ್ಲಿ ಗಾಂಧೀಜಿಯವರು ಸೌರಾಷ್ಟ್ರದಲ್ಲಿ 1921ರಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಗಾಂಧೀಜಿಯವರ ಆಹ್ವಾನದ ಮೇರೆಗೆ ಪಾಲ್ಗೊಂಡು ರಾಮ್‌ಧುನ್ ಎಂಬ ರಾಮಾಯಣದ ಶ್ಲೊಕಗಳನ್ನು ಪಠಿಸಿದ್ದರು. ಪುಣೆ, ನಾಗಪುರ, ಬಾಂಬೆ ನಗರಗಳಲ್ಲಿ ಸಂಗೀತದ ಶಾಲೆಗಳನ್ನು ತೆರೆದಿದ್ದ ಅವರು ಆನಂತರ ಎಲ್ಲಾ ಶಾಖೆಗಳನ್ನು ಮುಚ್ಚಿ ಹಾಕಿ ಕೇವಲ ಬಾಂಬೆ ನಗರದ ಶಾಲೆಯನ್ನು ಮಾತ್ರ ಉಳಿಸಿಕೊಂಡು, ಸಂಗೀತದಲ್ಲಿ ಡಿಪ್ಲೊಮೊ ಕೋರ್ಸ್‌ಗಳನ್ನು ನೀಡುತ್ತಿದ್ದರು. ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದ ಪಲುಸ್ಕರ್ ಆಯಾ ಪ್ರಾಂತೀಯ ಭಾಗಗಳಲ್ಲಿ ಅಸ್ತಿತ್ವದಲ್ಲಿರುವ ಸಂಗೀತ, ಜನಪ್ರಿಯ ದೇಸಿ ರಾಗ ಅಥವಾ ನಾಟಿ ರಾಗಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದರು.

1908ರ ವೇಳೆಗೆ ಆರ್ಥಿಕ ನಷ್ಟದಿಂದ ಮಹಾವಿದ್ಯಾಲಯಕ್ಕೆ ಮಾಡಿದ್ದ ಸಾಲವನ್ನು ತೀರಿಸಲಾಗದೆ, ಅವರ ಬಾಂಬೆ ನಗರದ ಶಾಲೆಯನ್ನು ಮುಟ್ಟುಗೋಲು ಹಾಕಿಕೊಂಡ ಬ್ಯಾಂಕ್ ಕಟ್ಟಡವನ್ನು ಹರಾಜಿಗೆ ಹಾಕಿತು. ನಂತರ ಪಂಡಿತ್ ಪಲುಸ್ಕರ್ ಮೀರಜ್ ಪಟ್ಟಣಕ್ಕೆ ಬಂದು ಶಾಶ್ವತವಾಗಿ ನೆಲೆ ನಿಂತರು. ವಿದ್ಯಾರ್ಥಿಗಳಿಗೆ ಗುರು ಕುಲ ಪದ್ಧತಿಯಲ್ಲಿ ಪಾಠ ಹೇಳುತ್ತಾ, ಸಂಗೀತ ಪಠ್ಯಗಳ ಅಧ್ಯಯನ ಮತ್ತು ರಚನೆಯಲ್ಲಿ ತೊಡಗಿಕೊಂಡರು. ವಿನಾಯಕ ರಾವ್ ಪಟುವರ್ಧನ್, ಓಂಕಾರ್ ನಾಥ್ ಠಾಕೂರ್, ನಾರಾಯಣರಾವ್ ವ್ಯಾಸ್, ಬಿ.ರ್. ದಾಮೋದರ್ ಎಂಬ ಹಿಂದೂಸ್ತಾನಿ ಸಂಗೀತದ ದಿಗ್ಗಜರನ್ನು ತಯಾರು ಮಾಡಿದ ಪಂಡಿತ್ ಪಲುಸ್ಕರ್ ತಮ್ಮಗಿದ್ದ ಏಕೈಕ ಪುತ್ರ ದತ್ತಾತ್ರೆಯ ವಿ.ಪಲುಸ್ಕರ್‌ರವರನ್ನು ಸಹ ಸಂಗೀತಗಾರನನ್ನಾಗಿ ತಯಾರು ಮಾಡಿದರು. ತಮ್ಮ ಬದುಕಿನ ಕಾಲು ಶತಮಾನವನ್ನು ಮೀರಜ್ ಪಟ್ಟಣದಲ್ಲಿ ಕಳೆದ ಅವರು ಈ ಅವಧಿಯಲ್ಲಿ ಸಂಗೀತಕ್ಕೆ ಸಂಬಂಧ ಪಟ್ಟಂತೆ ಅರವತ್ತು ಕೃತಿಗಳನ್ನು ರಚಿಸಿದ್ದಾರೆ. ಮೂರು ಭಾಗಗಳಲ್ಲಿ ಇರುವ ಬಾಲೋದಯ ಸಂಗೀತ ಮತ್ತು ಸಂಗೀತ ಬಾಲ ಪ್ರಕಾಶ ಹಾಗೂ ಹತ್ತೊಂಬತ್ತು ಭಾಗಗಳಲ್ಲಿರುವ ರಾಗ ಪ್ರವೇಶ ಮಾಲಿಕಾ ಎಂಬ ಕೃತಿಗಳು ಇಂದಿಗೂ ಸಹ ಹಿಂದುಸ್ತಾನಿ ಸಂಗೀತದ ವಿದ್ಯಾರ್ಥಿಗಳಿಗೆ ಆಕರ ಗ್ರಂಥಗಳಾಗಿವೆ. ಖ್ಯಾಲ್, ಟುಮ್ರಿ, ಟಪ್ಪಾ ದಂತಹ ಲಘು ಸಂಗೀತ ಪ್ರಕಾರಗಳ ಕುರಿತಾಗಿಯೂ ವಿದ್ವತ್ ಕೃತಿಗಳನ್ನು ರಚಿಸಿರುವ ಪಂಡಿತ್ ವಿಷ್ಣುದಿಗಂಬರ್ ಪಲುಸ್ಕರ್ ಭಾರತದ ನೂರು ಮಂದಿ ಶ್ರೇಷ್ಟ ಸಂಗೀತ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಯಾವುದೇ ಕೀರ್ತಿ, ಪ್ರಚಾರಕ್ಕೆ ಹಂಬಲಿಸದೆ, ಎಲೆ ಮರೆಯ ಕಾಯಿಯಂತೆ ಶುದ್ಧ ಸಂಗೀತಕ್ಕಾಗಿ ಬದುಕನ್ನು ಮುಡಿಪಾಗಿಟ್ಟಿದ್ದ ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್ ತಮ್ಮ ಐವತ್ತೊಂಬತ್ತನೆಯ ವಯಸ್ಸಿನಲ್ಲಿ ಅಂದರೆ 1931ರ ಆಗಸ್ಟ್ ತಿಂಗಳಲ್ಲಿ ಮೀರಜ್ ಪಟ್ಟಣದಲ್ಲಿ ನಿಧನ ಹೊಂದಿದರು. ಅವರ ಸಂಗೀತದ ಮೇಲಿನ ಪ್ರೀತಿ ಮತ್ತು ಆಸಕ್ತಿಯನ್ನು ಗಮನಿಸಿದ ಕೇಂದ್ರ ಸರ್ಕಾರವು 1973ರಲ್ಲಿ ಅವರ ನೆನಪಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.

ಈ ಅಂಕಣದ ಹಿಂದಿನ ಬರೆಹಗಳು

ಗಾನ ತಪಸ್ವಿನಿ ಮೊಗುಬಾಯಿ ಕುರ್ಡಿಕರ್

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

 

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...