ಸಿದ್ಧಲಿಂಗಯ್ಯನವರ ಮೂರು ಕವಿತೆಗಳು: ಡಾ. ಬೈರಮಂಗಲ ರಾಮೇಗೌಡ


ಸಿದ್ಧಲಿಂಗಯ್ಯನವರು ತಮ್ಮ ಜೀವಿತಾವಧಿಯಲ್ಲಿ ಬರೆದ 171 ಕವಿತೆಗಳಲ್ಲಿ ಸಾಮಾಜಿಕ ಮಹತ್ವದ ಬಹಳಷ್ಟು ಕವಿತೆಗಳು ಇವೆಯಾದರೂ, ಆ ಎಲ್ಲವುಗಳಿಗೆ ಕೆನೆಯ ರೂಪದಲ್ಲಿರುವ ಮೂರು ಕವಿತೆಗಳನ್ನು ಮಾತ್ರ ಇಲ್ಲಿ ಚರ್ಚೆಗೊಳಪಡಿಸಲಾಗಿದೆ ಎನ್ನುತ್ತಾರೆ ಲೇಖಕ ಬೈರಮಂಗಲ ರಾಮೇಗೌಡ. ಅವರು ವಸು ವತ್ಸಲೆ ಸಂಪಾದಕತ್ವದ ‘ಕವಿ ನೆನಪು’ ಕೃತಿಯ ಕುರಿತು ಬರೆದಿರುವ ಲೇಖನ ನಿಮ್ಮ ಓದಿಗಾಗಿ...

ಸಿದ್ಧಲಿಂಗಯ್ಯನವರು ಕನ್ನಡ ಕಾವ್ಯ ಜಗತ್ತಿಗೆ ಪರಿಚಯವಾದದ್ದು 1975ರಲ್ಲಿ ಪ್ರಕಟವಾದ ‘ಹೊಲೆಮಾದಿಗರ ಹಾಡು’ ಕವನ ಸಂಕಲನದಿಂದ. ಆ ಸಂದರ್ಭಕ್ಕೆ ವಿಲಕ್ಷಣ ಎನಿಸುವಂತಿದ್ದ ಕವಿತೆಗಳನ್ನು ಕುರಿತು ಕಿ.ರಂ.ನಾಗರಾಜ ಅವರು “ರೋಗಗ್ರಸ್ತ ಸಾಹಿತ್ಯಿಕ ವಾತಾವರಣವನ್ನು ಇಲಾಜು ಮಾಡುವ, ಹೊಸ ಆಲೋಚನೆ-ಆಶಯಗಳಿಗೆ ಕಾರಣವಾದ ಹಾಡುಗಳು” ಎಂದರೆ, ನವ್ಯಕಾವ್ಯ ಕೊನೆಯುಸಿರು ಬಿಡುವ ಕಾಲದಲ್ಲಿ ಹುಟ್ಟಿಬಂದ ಹೊಲೆಮಾದಿಗರ ಹಾಡುಗಳನ್ನು ದೇವನೂರು ಮಹಾದೇವ “ಹೊಸ ಜಗತ್ತಿನ ದನಿ, ಇಪ್ಪತ್ತನೇ ಶತಮಾನದ ಜನಪದ ಕಾವ್ಯ, ಕಡೆಗಣಿಸಲ್ಪಟ್ಟ ಜಗತ್ತಿನ ಸಾಂಕೇತಿಕ ದನಿ” ಎಂದು ಗುರುತಿಸಿದರು. ಸಂಕಲನದಲ್ಲಿ ಇದ್ದವು ಗಟ್ಟಿಯಾಗಿ ಹಾಡಿಕೊಳ್ಳಬಹುದಾದ ಇಪ್ಪತ್ತೇ ಕವಿತೆಗಳಾದರೂ “ಇವು ಕವಿತೆಗಳೇ ಅಲ್ಲ” ಎನ್ನುವುದರಿಂದ ಹಿಡಿದು “ಇವತ್ತಿನ ಸಂದರ್ಭಕ್ಕೆ ಇವೇ ನಿಜವಾದ ಕವಿತೆಗಳು” ಎನ್ನುವವರೆಗೆ ವಾದ ವಿವಾದ ವಾಗ್ವಾದಗಳಿಗೆ ಕಾರಣವಾಗುವ ಸಂಚಲನವನ್ನು ಉಂಟುಮಾಡಿದ್ದಂತೂ ನಿಜ. ಹೊಲೆಮಾದಿಗರ ಹಾಡಿನ ನಂತರ ಸಿದ್ಧಲಿಂಗಯ್ಯನವರು ಸಾವಿರಾರು ನದಿಗಳು, ಕಪ್ಪುಕಾಡಿನ ಹಾಡು, ಕುದಿವ ನೀಲಿಯ ಕಡಲು, ಊರು ಸಾಗರವಾಗಿ ಕವನ ಸಂಕಲನಗಳನ್ನು ಪ್ರಕಟಿಸಿದರಾದರೂ ಸ್ವಲ್ಪಮಟ್ಟಿಗೆ ‘ಸಾವಿರಾರು ನದಿಗಳು’ ಸಂಕಲನದ ಕೆಲವು ಕವಿತೆಗಳನ್ನು ಹೊರತುಪಡಿಸಿ ಆಕ್ರೋಶ, ಆವೇಶ, ಸಿಟ್ಟು, ರೊಚ್ಚು ಎಲ್ಲ ಒಟ್ಟಗೂಡಿದ ಕಾವ್ಯಮಯ ಬಂಡಾಯ ನಂತರದಲ್ಲಿ ಕಾಣಲಿಲ್ಲ. ಕನ್ನಡ ಕಾವ್ಯಕ್ಕೆ ಅರ್ಥಪೂರ್ಣವಾದ ಹೊಸ ದಿಕ್ಕನ್ನು ತೋರಿಸಿಕೊಟ್ಟು, ಹೊಸ ತಲೆಮಾರಿನ ಕವಿಗಳ ಕಣ್ಣು ತೆರೆಸುವಂತೆ, ಹಳೆ ತಲೆಮಾರಿನ ಕವಿಗಳ ತಲೆ ತುರಿಸುವಂತೆ ಮಾಡಿದ ಸಾಂಸ್ಕೃತಿಕ ಮಹತ್ವದ ಕಾರಣದಿಂದಾಗಿಯೇ ‘ಹೊಲೆಮಾದಿಗರ ಹಾಡು’ ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ.

‘ಹೊಲೆಮಾದಿಗರ ಹಾಡು’ ಸಂಕಲನದ 20 ಕವಿತೆಗಳಲ್ಲಿ ಯಾವುದೊಂದಕ್ಕೂ ಆ ಹೆಸರು ಇಲ್ಲ. ಅಲ್ಲಿರುವ ಎಲ್ಲ ಹಾಡುಗಳೂ ಸಾವಿರಾರು ವರ್ಷಗಳ ಅಸ್ಪೃಶ್ಯರ ಮೂಕ ಸಂಕಟಗಳಿಗೆ ದನಿ ಕೊಡುವಂಥವೇ ಆಗಿವೆ. ದಲಿತರ ಪಾಡನ್ನು ಅತ್ಯಂತ ಸಮರ್ಥವಾಗಿ ಹಾಡಾಗಿಸಿರುವ ಕವಿತೆ `ನನ್ನ ಜನಗಳು’. ಹೊಲೆಮಾದಿಗರು ಅನ್ನಿಸಿಕೊಂಡ ತನ್ನ ಜನಗಳ ನಡುವೆ ಗುರುತಿಸಿಕೊಂಡೇ, ಸಮುದಾಯದ ಭಾಗವಾಗಿಯೇ, ಅವರೆಲ್ಲ ಅನುಭವಿಸಿದ್ದನ್ನು ತಾನೂ ಅನುಭವಿಸಿಯೇ ಕವಿ ಇಲ್ಲಿ ಮಾತಾಡುತ್ತಿದ್ದಾರೆ. ಕವಿ ಯಾರನ್ನು ‘ನನ್ನ ಜನಗಳು’ ಎಂದು ಕರೆಯುತ್ತಿದ್ದಾರೆಯೋ ಅವರು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ತಾರತಮ್ಯದ ಅಮಾನುಷ ದುಷ್ಟ ನೀತಿಯ ಫಲವಾಗಿ `ಹೊಲೆಮಾದಿಗರು’ ಎಂದು ಗುರುತಿಸಲ್ಪಟ್ಟವರು. ಊರಿಗೆ, ಊರಿನ ಜನಗಳಿಗೆ ಉಪಕಾರ ಮಾಡುವ ಶ್ರಮಜೀವಿಗಳಾದರೂ ಊರಾಚೆಯ ಕೇರಿಗಳಲ್ಲಿ ಪ್ರಾಣಿಗಳಿಗಿಂತ ಹೀನಾಯಕರವಾಗಿ ಬದುಕುತ್ತಿರುವವರು. ಅವರು ದುಡಿಯದೆ, ಬೆವರು ಸುರಿಸದೆ ಊರಿನ ಅಭಿವೃದ್ಧಿ ಸಾಧ್ಯವೇ ಇಲ್ಲ. ಆದರೆ ಅದರ ಫಲ ಮಾತ್ರ ಅವರಿಗೆ ದಕ್ಕುವುದಿಲ್ಲ. ಅಸ್ಪೃಶ್ಯತೆಯ ಶಾಪ ಅವರನ್ನು ದಬ್ಬಾಳಿಕೆ, ದೌರ್ಜನ್ಯ, ಶೋಷಣೆ, ಅಸಮಾನತೆ, ಅವಮಾನ, ಕ್ರೌರ್ಯ, ಹಿಂಸಾಚಾರ, ಅಮಾನವೀಯತೆಯಾಗಿ ಬಹು ವಿಧದಲ್ಲಿ ಕಾಡುತ್ತದೆ. ಹಸಿವು, ಅರೆಹೊಟ್ಟೆ, ಉಪವಾಸಗಳೇ ಅವರ ಸಂಗಾತಿಗಳಾಗಿ ನೆಮ್ಮದಿ ಮರೀಚಿಕೆಯಾಗಿದೆ. ಇದು ನೂರಿನ್ನೂರು ವರ್ಷಗಳಿಗೂ ಹಿಂದಿನ ಅಸ್ಪೃಶ್ಯರ ನೋವಿನ ಕಥೆಯಲ್ಲ, ದೇಶಕ್ಕೆ ಸ್ವಾತಂತ್ಯ್ರ ಬಂದು ಎಪ್ಪತ್ತೈದು ವರ್ಷಗಳಾಗಿ ಸಂಭ್ರಮದ ಅಮೃತ ಮಹೋತ್ಸವವನ್ನು ಆಚರಿಸುವ ಈ ಹೊತ್ತಿನಲ್ಲೂ ಜೀವಂತವಾಗಿರುವ ಕರಾಳ ವ್ಯಥೆ. ಶಿಕ್ಷಣ ಕಲಿತು ಎಂಥದ್ದೋ ಒಂದು ನೌಕರಿ ಹಿಡಿದು ಪಟ್ಟಣಗಳನ್ನು ಸೇರಿದವರು ಮತ್ತು ರಾಜಕಾರಣದ ಯಾವುದೇ ಮೆಟ್ಟಿಲಿನ ಮೇಲಾದರೂ ನಿಂತಿರುವವರು ಇಂಥ ದಲಿತರನ್ನು ಹೊರತುಪಡಿಸಿದರೆ ಉಳಿದವರು ಶತಶತಮಾನಗಳ ನೋವನ್ನು ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ ಉಣ್ಣುತ್ತಿರುವವರೇ. ಅಸ್ಪೃಶ್ಯ ಸಮುದಾಯಕ್ಕೆ ಸೇರಿದ ಕವಿಯೊಬ್ಬ ಕಂಡುಂಡ ಅನುಭವಗಳ ಪ್ರಾಮಾಣಿಕ, ಆದರೆ ಭಯಾನಕ ಎನಿಸುವಂಥ ಚಿತ್ರಣವೇ ‘ನನ್ನ ಜನಗಳು’. ಈ ಕವಿತೆಯಲ್ಲಿ ತಲಾ ನಾಲ್ಕು ಸಾಲುಗಳ ಐದು ಪದ್ಯಗಳಿವೆ. ಪ್ರತಿ ಎರಡೆರಡು ಸಾಲುಗಳ ಕೊನೆಯಲ್ಲಿ ‘ನನ್ನ ಜನಗಳು’ ಪ್ರಯೋಗ ಸ್ಥಾಯಿಯಾಗಿ ಬರುತ್ತದೆ. ಇಡೀ ಕವಿತೆಯಲ್ಲಿ ಬರುವ ಅಸ್ಪೃಶ್ಯರ ಬದುಕು ಬವಣೆಗಳ ವರ್ಣನೆ ಕರುಣಾಜನಕವಾಗಿದೆ. ಇಲ್ಲಿ ಪ್ರೀತಿಯಿಂದ, ಸಂತೋಷದಿಂದ, ಉತ್ಸಾಹದಿಂದ ಹೇಳಿಕೊಳ್ಳುವಂಥದ್ದು ಏನೂ ಇಲ್ಲ. ಹುಟ್ಟಿದಾಗಿನಿಂದ ಸಾಯುವವರೆಗೆ ಮನುಷ್ಯಜೀವ ಅಪೇಕ್ಷಿಸುವ ಯಾವ ಸುಖ ಶಾಂತಿ ನೆಮ್ಮದಿಯೂ ಇಲ್ಲ. ಸದಾ ಪರದಾಟದಲ್ಲೇ ಇರುವ ಬದುಕು ಎಲ್ಲೋ ಒಗೆಯಲ್ಪಡುತ್ತದೆ. ಮೇಲ್ಜಾತಿಯವರು ಇವರನ್ನು ತಮ್ಮಂತೆಯೇ ಮನಸ್ಸು, ದೇಹ, ಭಾವನೆ, ಆಸೆ, ಆಕಾಂಕ್ಷೆ, ನಿರೀಕ್ಷೆಗಳನ್ನು ಹೊಂದಿರುವ ಸಹಜೀವಿಗಳು ಎಂದು ಪರಿಗಣಿಸುವುದೇ ಇಲ್ಲ.

‘ಹಸಿವಿನಿಂದ ಸತ್ತೋರು ನನ್ನ ಜನಗಳು’ ಎಂದು ಕವಿತೆ ಪ್ರಾರಂಭವಾಗುತ್ತದೆ. ಆದರೆ ಅವರು ತಮ್ಮ ತ್ರಾಣಕ್ಕಿಂತ ಭಾರವಾದ, ತನ್ನ ಮತ್ತು ಕುಟುಂಬದ ಸದಸ್ಯರ ಅಂದಿನ ಹಸಿವನ್ನು ನೀಗುವುದಕ್ಕಾಗಿ ಸೈಜುಗಲ್ಲುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ, ನೆಲಮಟ್ಟದಿಂದ ಎತ್ತರದ ಅಂತಸ್ತುಗಳಿಗೆ ಕಷ್ಟಪಟ್ಟು ಹೊರುತ್ತಿದ್ದಾರೆ. ಅಂದಿನ ಕೂಲಿ ಹಣ ಕೈಗೆ ಬೀಳದ ಹೊರತು ಅವರ ಹಸಿವು ನೀಗುವುದಿಲ್ಲ. ಕೂಲಿಯಿಂದ ಬಂದ ಹಣ ಹಸಿವನ್ನು ಎಂದೂ ಪೂರ್ಣವಾಗಿ ನೀಗಿಸದು. ಆದ್ದರಿಂದ ಅವರು ಹಸಿವಿನಿಂದ ಸತ್ತು ಸತ್ತು ಮತ್ತೆ ಹುಟ್ಟುತ್ತಿದ್ದಾರೆ. ಸದಾ ಹಸಿದುಕೊಂಡಿರುವ ಅವರಲ್ಲಿ ಜೀವಂತಿಕೆಯ ಲಕ್ಷಣಗಳೇ ಇಲ್ಲ; ಅವರು ಜೀವಂತ ಶವಗಳೇ ಆಗಿದ್ದಾರೆ. ಅಲ್ಪ ಕೂಲಿ ಕೊಟ್ಟು ಇವರನ್ನು ದುಡಿಸಿಕೊಳ್ಳುವವರಿಗೆ ಯಾವ ಕರುಣೆಯೂ ಇಲ್ಲ, ಸಣ್ಣ ಪುಟ್ಟ ತಪ್ಪುಗಳಿಗೂ ಸಾಯುವಂತೆ ಒದೆಯುತ್ತಾರೆ ಮತ್ತು ಹೊಡೆಯುತ್ತಾರೆ, ನೋವುಂಡವರು ಒದೆಯಬೇಡಿರೆಂದು ಕೈಕಾಲು ಹಿಡಿದು ಬೇಡಿದರೂ ದಯೆ ತೋರುವುದಿಲ್ಲ. ಉಳ್ಳವರು ದರ್ಪಿಷ್ಟರಾಗಿ ಅಮಾನುಷವಾಗಿ ಒದೆಯುವುದಿರಲಿ, ಮೋಸ ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಅಂಥ ಮೋಸಕ್ಕೊಳಗಾಗಿಯೂ ಏನೂ ತಿಳಿಯದಂಥ, ದೇವರು ಧರ್ಮದ ಹೆಸರು ಹೇಳಿ ವಂಚಿಸಿದರೂ ಗೊತ್ತಾಗದಂಥ ಮುಗ್ಧರು, ಧಣಿಗಳನ್ನೇ ದೇವರು ಎಂದು ನಂಬಿ ಮೋಸ ಹೋಗುವವರು ಈ ಜನಗಳು. ಧಣಿಗಳ ಹೊಲ ಗದ್ದೆ ತೋಟಗಳಲ್ಲಿ ಬಿಸಿಲು ಮಳೆ ಚಳಿ ಗಾಳಿ ಎನ್ನದೆ ದುಡಿದು ಅವರನ್ನು ಮತ್ತೂ ದೊಡ್ಡವರನ್ನಾಗಿ ಮಾಡಿ ತಮಗೆ ಮಾತ್ರ ಹೊಟ್ಟೆಗೂ ಬಟ್ಟೆಗೂ ಇಲ್ಲದೆ ಸದಾ ನಿಟ್ಟುಸಿರು ಬಿಡುವವರು, ಬಂಗಲೆಗಳನ್ನು ಕಟ್ಟಿದರೂ ಸಂಸಾರದ ಜೊತೆಗೆ ಬದುಕಲು ಮುರುಕು ಗುಡಿಸಲೂ ಇಲ್ಲದೆ ಬೀದಿಗೆ ಬಿದ್ದವರು, ನಾಳೆ ಹೇಗೆ ಎನ್ನುವ ಚಿಂತೆಯಲ್ಲೇ ಅಸಹಾಯಕತೆಯಿಂದ ಕಣ್ಣೀರಿಡುವವರು, ದೊಡ್ಡವರ ಪಾದಗಳಿಗೆ ನಾಜೂಕಾದ ಕೆರಗಳನ್ನು ಭಕ್ತಿಯಿಂದ ಹೊಲೆದುಕೊಟ್ಟರೂ ಅವರ ಕರುಣೆಗೆ ಪಾತ್ರರಾಗದವರು, ಮಾಡಿದ ಸಾಲಕ್ಕೆ ಬಡ್ಡಿಯನ್ನು ಕಟ್ಟಲಾಗದೆ ಪರದಾಡುವವರು, ಗಣಿಗಳ ಅಪಾಯಕಾರಿಯಾದ ಆಳಗಳಿಗೆ ಇಳಿದು ಚಿನ್ನವನ್ನು ತೆಗೆದರೂ ತುತ್ತು ಅನ್ನಕ್ಕಾಗಿ ಒದ್ದಾಡುವವರು, ಕುಶಲತೆಯಿಂದ ಚಂದದ ಬಟ್ಟೆಗಳನ್ನು ನೆಯ್ದರೂ ಉಡಲಿಲ್ಲದೆ ಅರೆಬೆತ್ತಲಾಗಿರುವವರು, ತಿನ್ನಲೂ ಕುಡಿಯಲೂ ಸಿಗದಿದ್ದಾಗ ಗಾಳಿಯನ್ನೇ ಸೇವಿಸುತ್ತ ಜೀವ ಉಳಿಸಿಕೊಳ್ಳುವವರು, ಧರ್ಮಗುರುಗಳು ಮತ್ತು ರಾಜಕೀಯ ಧುರೀಣರು ಮಾಡುತ್ತ ಬಂದಿರುವ ಪ್ರಚಂಡವಾದ ಉದ್ಧಾರದ ಭಾಷಣಗಳನ್ನು ಕೇಳಿಸಿಕೊಂಡೇ ಬೆಂದುಹೋದವರು-ಇವರನ್ನೆಲ್ಲ ಕವಿ ‘ನನ್ನ ಜನಗಳು’ ಎಂದು ಸಂಕಟದಿಂದಲೇ ಗುರುತಿಸುತ್ತಾರೆ. ಇಲ್ಲೆಲ್ಲ ವಾಸ್ತವ ಸ್ಥಿತಿಯನ್ನೇ ಹೇಳುತ್ತಿದ್ದರೂ ಅಸ್ಪೃಶ್ಯತೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ‘ನನ್ನ ಜನಗಳು’ ಅನುಭವಿಸುತ್ತಿರುವ ಘೋರ ಸಂಕಟ ಕಂಡೂ ಕಾಣದಂತಿರುವ ನವಿರಾದ ವ್ಯಂಗ್ಯದಿಂದಾಗಿ ಸಹೃದಯರ ಎದೆಗೆ ತಟ್ಟುವಂತಿದೆ. ಅವರದಲ್ಲದ ತಪ್ಪಿಗೆ, ಮಾಡದಿರುವ ಅಪರಾಧಕ್ಕೆ ಈ ಜನಗಳನ್ನು ನಡೆಸಿಕೊಳ್ಳುವ ರೀತಿ ಮಾನವತೆಗೆ ಹತ್ತಿದ ಕಳಂಕವಾಗಿದೆ. ಅಂಬೇಡ್ಕರ್ ಅವರ ಹೋರಾಟವನ್ನು ಅರ್ಥಮಾಡಿಕೊಂಡಾದರೂ, ನಮ್ಮನ್ನು ನಾವೇ ಆಳಿಕೊಳ್ಳುವ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದ ಮೇಲಾದರೂ ಈ ಕಳಂಕವನ್ನು ತೊಡೆದುಹಾಕುವ ಪ್ರಾಮಾಣಿಕ ಪ್ರಯತ್ನ ಮಾಡದೇ ತಮ್ಮಷ್ಟಕ್ಕೆ ತಾವು ಭಾಷಣ ಮಾಡುತ್ತ, ಪ್ರವಚನ ಮಾಡುತ್ತ ಸುಖಲೋಲುಪತರಾಗಿರುವ ರಾಜಕಾರಣಿಗಳನ್ನೂ ಧರ್ಮಗುರುಗಳನ್ನೂ ಧಿಕ್ಕರಿಸಿದಾಗ, ಪೀಠಸ್ಥರಾಗದಂತೆ ಎಚ್ಚರ ವಹಿಸಿದಾಗ ಮಾತ್ರ ನನ್ನ ಜನಗಳ ಬಾಳಿನಲ್ಲಿ ಬದಲಾವಣೆಯ ಬೆಳಕು ಗೋಚರಿಸಬಹುದೆನ್ನುವ ಆಶಯವನ್ನೂ ಈ ಕವಿತೆ ಒಳಗೊಂಡಿದೆ.

‘ಸಾವಿರಾರು ನದಿಗಳು’ 1979ರಲ್ಲಿ ಪ್ರಕಟವಾದ ಅದೇ ಹೆಸರಿನ ಸಂಕಲನದ ಮೊದಲ ಕವಿತೆ. ಹಿಂದೆ ವಿಶ್ಲೇಷಿಸಿದ ಕವಿತೆಯಲ್ಲಿ ಸಿದ್ಧಲಿಂಗಯ್ಯನವರು ‘ನನ್ನ ಜನಗಳು’ ಎಂದು ಯಾರನ್ನು ಕರೆದಿದ್ದಾರೋ ಅವರು ಶೋಷಣೆ, ದಬ್ಬಾಳಿಕೆ, ದೌರ್ಜನ್ಯ, ಅವಮಾನಗಳನ್ನು ಇನ್ನು ಸಹಿಸುವುದು ಸಾಧ್ಯವೇ ಇಲ್ಲವೆಂದು ಶೋಷಕರ ವಿರುದ್ಧ ಸಿಡಿದೆದ್ದಿದ್ದಾರೆ. ಸಂಘಟಿತರಾಗಿರುವ ಅವರು ಅಂತಿಮ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅದನ್ನು ಕವಿ ಅದ್ಭುತವಾದ ರೂಪಕಗಳಲ್ಲಿ ಚಿತ್ರಿಸಿದ್ದಾರೆ. ಒಟ್ಟಾಗಿ ಬಂದ ಜನ ಬೆಟ್ಟದಂತೆ ಗಟ್ಟಿಯಾಗಿದ್ದಾರೆ, ಅಚಲವಾಗಿದ್ದಾರೆ. ಸಿಟ್ಟಿನಿಂದ ಕೆಂಡ ಉಗುಳುವಂತಿರುವ ಕಣ್ಣುಗಳಿಂದ, ಹಗಲು ರಾತ್ರಿಗಳ ಪರಿವೆ ಇಲ್ಲದವರಂತೆ ನಿದ್ದೆಯನ್ನು ಒದ್ದು ಆಕ್ರೋಶದಿಂದ ಆರ್ಭಟಿಸುತ್ತಿದ್ದಾರೆ. ಅವರ ಆವೇಶಭರಿತ ಕೂಗು ಹುಲಿ ಸಿಂಹಗಳ ಗರ್ಜನೆಯಂತಿದೆ. ಪಾತಾಳಕ್ಕೆ ಇಳಿಯುವ, ಆಕಾಶಕ್ಕೆ ನೆಗೆಯುವ ಹುಮ್ಮಸ್ಸನ್ನು ತುಂಬಿಕೊಂಡಿರುವ ಅವರು ಲಕ್ಷಾಂತರ ನಾಗರಹಾವುಗಳಂತೆ ಊರ ತುಂಬಾ ತುಂಬಿಕೊಂಡು ಅಸಮಾನತೆಯ ವಿರುದ್ಧ, ಶ್ರೀಮಂತರ ಸೊಕ್ಕಿನ ವಿರುದ್ಧ ಧಿಕ್ಕಾರ ಹಾಕುತ್ತಿದ್ದಾರೆ. ಈವರೆಗೆ ಅವರಿಗೆ ಎಲ್ಲೆಲ್ಲಿ ಪ್ರವೇಶ ಇರಲಿಲ್ಲವೋ ಅಲ್ಲೆಲ್ಲ ತುಂಬಿಕೊಂಡು ಸೊಕ್ಕಿನ ಧಣಿ ಕೂರುತ್ತಿದ್ದ ಪೀಠವನ್ನು ಆಕ್ರಮಿಸಿಕೊಂಡಿದ್ದಾರೆ. ಹೆದರಿಕೆಯಿಂದ ಬಾಯಿ ಕಟ್ಟಿಕೊಂಡಿದ್ದವರು, ಮಾತು ಬಾರದ ಮೂಕರಂತೆ ಇದ್ದವರು ರೊಚ್ಚಿನಿಂದ ಕೂಗಾಡುತ್ತಿರುವುದನ್ನು ಕೇಳಿ ಶೋಷಕರ ದನಿ ಇಂಗಿಹೋಗಿದೆ. ಸಣ್ಣಪುಟ್ಟ ತಪ್ಪುಗಳಿಗೂ ಚಾಟಿಯಿಂದ ನಿರ್ದಯವಾಗಿ ಹೊಡೆಸಿಕೊಳ್ಳುತ್ತಿದ್ದವರು ಹೊಡೆಯುತ್ತಿದ್ದವರ ಮೇಲೆ ಸೇಡು ತೀರಿಸಿಕೊಳ್ಳುವವರಂತೆ ಕೊರಳನ್ನು ಹಿಡಿದುಕೊಂಡಿದ್ದಾರೆ. ದಮನಕಾರಿ ಶಕ್ತಿಗಳಿಂದ ಅಸ್ಪೃಶ್ಯರ ಬಗೆಗೆ ಕಿಂಚಿತ್ ಕರುಣೆಯನ್ನೂ ತೋರದ ಪೊಲೀಸರು ಪುರೋಹಿತಶಾಹಿಗಳು ಮಧ್ಯವರ್ತಿಗಳು ಈ ಕ್ರಾಂತಿಯ ಬಿರುಗಾಳಿಯ ರಭಸಕ್ಕೆ ಕೊಚ್ಚಿಹೋಗುತ್ತಿದ್ದಾರೆ. ಅಸಮಾನತೆಯ ವಿರುದ್ಧ ಕಾಣಿಸಿಕೊಂಡ ಬಂಡಾಯಕ್ಕೆ ಗೆಲುವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇದಕ್ಕೆ ಪೂರಕವಾಗಿ ದೇವನೂರು ಮಹಾದೇವರ `ಮಾನವೀಯತೆ ಅಂತಾರಲ್ಲ ಅದರ ಬಗ್ಯೆ’ ಎನ್ನುವ ಲೇಖನದಲ್ಲಿರುವ ಕೆಲವು ಮಾತುಗಳನ್ನು ಗಮನಿಸಬೇಕು: “ಈಗ ನನ್ನ ಎದೆಗೆ ಅಕ್ಷರ ಬಿದ್ದಿದೆ. ತಿಳಿದವರ ಒಡನಾಟದಿಂದ ಒಂದಷ್ಟು ತಿಳಿದಿದೆ. ಈ ತಿಳುವಳಿಕೆಯಿಂದ ಅಷ್ಟಿಷ್ಟು ನನಗೂ ಕಾಣ್ತಿದೆ. ಇದ ಕಂಡಾಗ ಒಂದೊಂದು ಸಲ ಅನ್ಸುತ್ತೆ-ಇಂದು ಒಬ್ಬ ಆದಿಜನಾಂಗದವನು ಸಂವೇದನಾಶೀಲನಾದರೆ ಅದೊಂದು ರೌರವ ನರಕ. ಅವನಿಗೆ ಕಾಣುತ್ತೆ-ತನ್ನ ಸಂಬಂಧಿಗಳು ಹಸಿವಿನಿಂದ ಸಾಯ್ತ ಇರೋದು, ಬೀದೀಲಿ ಭಿಕ್ಷೆ ಬೇಡೋದು, ಜೀವಂತ ಸುಡಿಸಿಕೊಳ್ಳೋದು, ಪಶು ಥರ ದುಡಿಯೋದು, ಅವ ದುಡಿಯೋದು ಅವಗೆ ದಕ್ಕದೆ ಇರೋದು, ಇದರ ಜೊತೆಗೇನೆ ಹುಟ್ಟಿದ ತಪ್ಪಿಗೆ ಥೂ ಛೀ ಅನ್ನಿಸಿಕೊಳ್ಳೋದು ಕೂಡ.” ಈ ಮಾತುಗಳು ಐವತ್ತು ವರ್ಷಗಳ ಹಿಂದೆ, ಅಂದರೆ 1973ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡಿದ ಭಾಷಣದಿಂದ ಹೊರಹೊಮ್ಮಿದವು. ಐವತ್ತು ವರ್ಷಗಳು ಕಳೆದ ಮೇಲಾದರೂ, ದಲಿತರಲ್ಲಿ ವಿದ್ಯೆ ಕಲಿತವರ ಸಂಖ್ಯೆ ಜಾಸ್ತಿಯಾಗಿದ್ದರೂ ಅಸ್ಪೃಶ್ಯರ ಪರಿಸ್ಥಿತಿಯಲ್ಲಿ ಏನಾದರೂ ಸುಧಾರಣೆ ಆಗಿದೆಯಾ ಎಂದರೆ, ಖಂಡಿತ ಆಗಿಲ್ಲ; ಮತ್ತಷ್ಟು ಶೋಚನೀಯ ಸ್ಥಿತಿಗೆ ಅವರನ್ನು ತಳ್ಳಲಾಗಿದೆ. ಪುರೋಹಿತಶಾಹಿಗಳು ಪ್ರಭುತ್ವದ ಜುಟ್ಟು ಹಿಡಿಯುವ ಅವಕಾಶ ಸಿಕ್ಕಮೇಲಂತೂ ಅವರ ಪಾದಪೂಜೆ ಮಾಡಿ ಮಲಿನ ನೀರನ್ನು ತಲೆಯ ಮೇಲೆ ಪ್ರೋಕ್ಷಿಸಿಕೊಂಡು ಪುನೀತರಾದೆವೆಂದು ಭಾವಿಸುವ ಮಂತ್ರಿಗಳಿಂದ ಕೂಡಿರುವ ಸರ್ಕಾರಗಳು ದಲಿತರನ್ನೂ ಮಹಿಳೆಯರನ್ನೂ ವೇದಕಾಲೀನ ಸಮಾಜವೆನ್ನುವ ನರಕಕ್ಕೆ ತಳ್ಳಲು ತಮ್ಮ ಶಕ್ತಿ, ತಂತ್ರಗಾರಿಕೆ ಎಲ್ಲವನ್ನೂ ಪ್ರಯೋಗಿಸುತ್ತಿದ್ದಾರೆ. ತಲೆ ಎತ್ತಿದರೆ ಸಾಕು ಸರ್ಕಾರದಿಂದಲೇ ಮೊಟಕಿಸುವ ಪುರೋಹಿತಶಾಹಿಗಳು ದೌರ್ಬಲ್ಯದಿಂದಲೋ ಅಸಹಾಯಕತೆಯಿಂದಲೋ ಬೇಸರದಿಂದಲೋ ದಲಿತರು ತಲೆ ತಗ್ಗಿಸಿದರೆ ಸಾಕು, ಪಾತಾಳಕ್ಕೆ ಹೂತುಬಿಡುತ್ತಾರೆ. ಅಂಥ ಮುನ್ನೆಚ್ಚರಿಕೆಯಿಂದಲಾದರೂ ವ್ಯಕ್ತಿ ಸ್ವಾತಂತ್ರö್ಯ ಮತ್ತು ಸಮಾನತೆಯನ್ನು ದಮನ ಮಾಡಲು ಹೊರಟಿರುವ ಶೋಷಕ ಶಕ್ತಿಗಳ ವಿರುದ್ಧ, ಅಸ್ಪೃಶ್ಯತೆಯ ನರಕದಲ್ಲಿ ಬೇಯುತ್ತಿರುವ ಎಲ್ಲರೂ ಸಿಟ್ಟು ಮತ್ತು ಛಲದಿಂದ, ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸದಿಂದ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿಯಬೇಕಾಗಿದೆ. ಈ ಅಂತಿಮ ಹೋರಾಟಕ್ಕೆ ಎಲ್ಲ ಅಣ್ಣ ತಮ್ಮ ಅಕ್ಕ ತಂಗಿಯರೂ ನಾಡಿನ ಮೂಲೆ ಮೂಲೆಗಳಿಂದ ನದಿಗಳೋಪಾದಿಯಲ್ಲಿ ಹರಿದು ಬರಬೇಕಾಗಿದೆ. ಒಡೆದು ಆಳುವ ತಂತ್ರಗಾರಿಕೆಯಿAದ ಸದಾ ಅಧಿಕಾರದ ಗದ್ದುಗೆಯಲ್ಲಿ ವಿರಾಜಮಾನರಾಗುತ್ತಿರುವವರನ್ನು ಕತ್ತು ಹಿಡಿದು ಹೊರಗೆ ನೂಕಬೇಕಾಗಿದೆ. ಕವಿ `ದಲಿತರು ಬರುವರು’ ಕವಿತೆಯಲ್ಲಿ ಆಶಿಸಿರುವಂತೆ “ಕಂದಾಚಾರವ ತಿಪ್ಪೆಗೆ ತಳ್ಳಿ, ಮಾತಿನ ಮಳ್ಳರ ಮೋರಿಗೆ ನೂಕಿ, ತಾವೇ ಕಂಡ ಹೊಸ ದಾರಿಯಲಿ” ದಲಿತರು ಮೆರವಣಿಗೆ ಹೊರಡಬೇಕಾಗಿದೆ, ಕಣ್ಣುಗಳಿಂದ ಕ್ರಾಂತಿಯ ಕಿಡಿಗಳು ಸಿಡಿಯಬೇಕಾಗಿದೆ, ಗುಂಡಿಗೆ ಗುಂಡು ರಕ್ತಕೆ ರಕ್ತ ಹೆಗಲಿಗೆ ಹೆಗಲು ಪ್ರಾಣಕೆ ಪ್ರಾಣ ಎನ್ನುವ ಹೋರಾಟದ ಚಂಡಮಾರುತವೊಂದು ಅಪ್ಪಳಿಸಬೇಕು. ಅಸ್ಪೃಶ್ಯತೆ ಎನ್ನುವುದು ಆ ಹೆಸರಿನಿಂದ ಗುರುತಿಸಿದ ಮತ್ತು ಕರೆದ ಪುರೋಹಿತಶಾಹಿ ಧೂರ್ತರ ಸಮಸ್ಯೆಯೇ ಹೊರತು ಅಸ್ಪೃಶ್ಯರ ಸಮಸ್ಯೆಯಲ್ಲ. ಆದ್ದರಿಂದ ನೀಚ ಮೇಲರಿಮೆ, ಜಾತಿ ಶ್ರೇಷ್ಠತೆಯ ಮನೋರೋಗ ಇವುಗಳ ಪಾಪದ ಕೂಸಾದ ಅಸ್ಪೃಶ್ಯತೆಯನ್ನು ತೊಡೆದುಹಾಕಲು ನಡೆಸುವ ದಲಿತರ ಹೋರಾಟಕ್ಕೆ ಭಾರತದ ಎಲ್ಲ ವಿಚಾರವಂತ, ಪ್ರಗತಿಪರ, ಪ್ರಜ್ಞಾವಂತ ಮನಸ್ಸುಗಳು ಪೂರ್ಣ ಬೆಂಬಲ ನೀಡಬೇಕಾಗಿದೆ. ಹಾಗಾದಾಗ ಮಾತ್ರ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಸೇರಿ, ಕ್ರಾಂತಿಯ ಬಿರುಗಾಳಿ ಬೀಸಿ, ನಿರೀಕ್ಷಿತ ಬದಲಾವಣೆ ತರುವುದು ಸಾಧ್ಯವಾಗುತ್ತದೆ.

1983ರಲ್ಲಿ ಪ್ರಕಟವಾದ ‘ಕಪ್ಪು ಕಾಡಿನ ಹಾಡು’ ಸಂಕಲನದಲ್ಲಿರುವ ‘ನಲವತ್ತೇಳರ ಸ್ವಾತಂತ್ಯ್ರ’ ಒಂದು ಅದ್ಭುತವಾದ ಕವಿತೆ. ಅದನ್ನು ಬರೆದಾಗ ಭಾರತ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದು, ರಾಜಕೀಯ ಸ್ವಾತಂತ್ಯ್ರ ಪಡೆದು, ನಮ್ಮನ್ನು ನಾವೇ ಆಳಿಕೊಳ್ಳಲು ಪ್ರಾರಂಭಿಸಿ 36 ವರ್ಷಗಳಷ್ಟೇ ಆಗಿದ್ದವು. ಬಹಳಷ್ಟು ಕವಿಗಳು ಕನ್ನಡವೂ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳಲ್ಲಿಸ್ವಾತಂತ್ಯ್ರವನ್ನು ಸಂಭ್ರಮಿಸುವ ಪದ್ಯಗಳನ್ನು ಬರೆಯುತ್ತಿದ್ದಾಗ, ಮೂವತ್ತರ ಹರೆಯದಲ್ಲಿದ್ದ ಕವಿ ಸಿದ್ಧಲಿಂಗಯ್ಯ ಸ್ವಾತಂತ್ಯ್ರದ ಅರ್ಥವನ್ನು ಬಗೆದು, ನಾವು ಬಯಸಿದ ಸ್ವಾತಂತ್ಯ್ರ ನಮಗಿನ್ನೂ ಬಂದಿಲ್ಲವೆನ್ನುವುದನ್ನು ದಿಟ್ಟ ಮಾತುಗಳಲ್ಲಿ, ಹಾಡಿನ ರೂಪದಲ್ಲಿ ಹೊರಹಾಕಿದರು. ಈಗ ಸ್ವತಂತ್ರ ಭಾರತಕ್ಕೆ 75 ವರ್ಷಗಳು ತುಂಬಿ ಅಮೃತ ಸ್ವಾತಂತ್ಯ್ರ ಮಹೋತ್ಸವದ ರಾಜಕೀಯ ಸಂಭ್ರಮ, ರಂಗಿನ ರಾಜಕಾರಣಿಗಳ ಭಾವಾವೇಶ ಪ್ರಹಸನದ ಉದ್ದುದ್ದ ಭಾಷಣಗಳಲ್ಲಿ ಜನಸಾಮಾನ್ಯರು ಬದುಕುವುದಕ್ಕೇ ಪರದಾಡಬೇಕಾದ ಕ್ರೂರ ವಾಸ್ತವದ ಮರೆಮಾಚುವಿಕೆ ನಡೆಯುತ್ತಿರುವ ಸಂದರ್ಭದಲ್ಲಿ ವರ್ಷ ವರ್ಷದಿಂದ ಈ ಕವಿತೆ ಹೆಚ್ಚು ಶಕ್ತಿಶಾಲಿಯಾಗುತ್ತಲೇ ನಡೆದಿರುವುದು ಅದರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. “ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ಯ್ರ” ಎಂದು ಪ್ರಶ್ನಿಸುವುದರೊಂದಿಗೆ ಪ್ರಾರಂಭವಾಗುವ ಕವಿತೆ ಬದುಕಿನ ಕನಿಷ್ಟ ಅಗತ್ಯಗಳಿಂದ ವಂಚಿತರಾಗಿರುವ ಸಾಮಾನ್ಯ ಜನರಿಗೆ ಆಹಾರ, ಬಟ್ಟೆ, ಆಶ್ರಯ, ಆರೋಗ್ಯವನ್ನು ಕಲ್ಪಿಸಿ ನೆಮ್ಮದಿಯ ನೆಲೆಗೆ ಒಯ್ಯಬೇಕಾಗಿದ್ದ ಸ್ವಾತಂತ್ಯ್ರ ಎಲ್ಲೋ ದಿಕ್ಕುತಪ್ಪಿ, ಆಳುವವರ ದೂರದೃಷ್ಟಿಯ ಕೊರತೆ ಮತ್ತು ಸ್ವಾರ್ಥ, ದುರಾಸೆ, ಸ್ವಜನ-ಸ್ವಜಾತಿ ಪಕ್ಷಪಾತಗಳಲ್ಲಿ ಮುಳುಗಿ ಸ್ವಾತಂತ್ಯ್ರ ಗಳಿಕೆಯ ಮೂಲಭೂತ ಉದ್ದೇಶವನ್ನೇ ನಾಶಮಾಡಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಜೀವಂತವಾಗಿರಬೇಕಾದರೆ ಪ್ರಭುತ್ವವನ್ನು ಸಕಾರಣವಾಗಿ ಪ್ರಶ್ನಿಸುವ, ವಿಮರ್ಶಿಸುವ, ಟೀಕಿಸುವ ಕೆಲಸವನ್ನು ಜನರು ಮಾತ್ರವೇ ಅಲ್ಲದೇ ಪತ್ರಿಕೆಗಳು, ಮಾಧ್ಯಮಗಳು ಸಮಯೋಚಿತವಾಗಿ ಪೂರ್ವಾಗ್ರಹಗಳಿಲ್ಲದೆ ಮಾಡುತ್ತಲೇ ಇರಬೇಕಾಗುತ್ತದೆ; ಕೇಡಿನ ರಾಜಕಾರಣದ ವಿರುದ್ಧ ಅಸಹನೆಯನ್ನು ದಿಟ್ಟವಾಗಿ ವ್ಯಕ್ತಪಡಿಸಲೇಬೇಕಾಗುತ್ತದೆ. 39 ವರ್ಷಗಳ ಹಿಂದೆ ಸಿದ್ಧಲಿಂಗಯ್ಯನವರು ಮಾಡಿದ್ದು ಅದೇ ಕೆಲಸವನ್ನು. ಆದರೆ ವರ್ತಮಾನದ ಬದಲಾದ ಪರಿಸ್ಥಿತಿಯಲ್ಲಿ ಪ್ರಭುತ್ವದ ವಿರುದ್ಧ ಮಾಡಿದ ವಿವೇಚನಾಯುತ ಮತ್ತು ಆರೋಗ್ಯಕರ ಟೀಕೆಗಳೂ ಅಧಿನಾಯಕರ ಮತ್ತವರ ಬಾಲಂಗೋಚಿಗಳ ಕೆಂಗಣ್ಣಿಗೆ ಗುರಿಯಾಗಿ, ಟೀಕಿಸುವುದೇ ಅಪರಾಧ ಎಂಬಂತಾಗಿ, ವಿಚಾರವಂತಿಕೆ ಪ್ರಜ್ಞಾವಂತಿಕೆ ಪ್ರಗತಿಪರ ಮನೋಧರ್ಮಗಳೆಲ್ಲ ದೇಶದ್ರೋಹದ ಲಕ್ಷಣಗಳು ಎಂದು ಪರಿಗಣಿಸಲ್ಪಟ್ಟು, ಅಂಥವರನ್ನು ನಿಷ್ಕರುಣವಾಗಿಯೂ ಸೇಡಿನ ಮನೋಭಾವದಿಂದಲೂ ಸೆರೆಮನೆಗೆ ದೂಡಿದ ದಾರುಣ ಪ್ರಸಂಗಗಳು ನಮ್ಮೆದುರಿಗಿವೆ. ಹೀಗೆ ರೋಗಗ್ರಸ್ತವಾಗಿರುವ ಮನಸ್ಸುಗಳ ಕೈಗೆ ಸಿಕ್ಕಿದ ಅಧಿಕಾರ ಪ್ರತಿಗಾಮಿ ಶಕ್ತಿಯಾಗಿ ಅಟ್ಟಹಾಸ ಮಾಡುವ ಸಂದರ್ಭದಲ್ಲೇನಾದರೂ ಸಿದ್ಧಲಿಂಗಯ್ಯನವರು ಈ ಕವಿತೆ ಬರೆದಿದ್ದರೆ ಅವರನ್ನೂ ಜೈಲಿಗೆ ತಳ್ಳಲಾಗುತ್ತಿತ್ತು ಮಾತ್ರವಲ್ಲ, ಯಾವ ಮುಲಾಜೂ ಇಲ್ಲದೆ ಕವಿತೆಯನ್ನು ನಿಷೇಧಿಸಲಾಗುತ್ತಿತ್ತು. ಕವಿ ಆಗ “ಟಾಟಾ ಬರ‍್ಲಾ ಜೋಬಿಗೆ ಸ್ವಾತಂತ್ಯ್ರ ಬಂತು” ಎಂದು ಹೇಳಿದ್ದಾರೆ. ಈಗ ಅವರ ಜಾಗದಲ್ಲಿ ಸರ್ಕಾರದ ಕೃಪಾಶ್ರಯದಲ್ಲೇ ಬೇರೆ ಶ್ರೀಮಂತ ಕುಳಗಳು ನಮ್ಮ ದುಡಿಮೆಯ ಫಲವಾದ ತೆರಿಗೆಯನ್ನು ಬಾಚಿಕೊಂಡು ಕುಬೇರರಾಗಿ ಕಣ್ಣು ಕುಕ್ಕುತ್ತಿರುವುದು ಸುಳ್ಳೇನೂ ಅಲ್ಲ! ಅವತ್ತಿಗಿಂತ ಇವತ್ತು ಜನಗಳನ್ನು ತಿನ್ನುವ ಬಾಯಿಗಳು ಹೆಚ್ಚಾಗಿವೆ. ಜನರು ಮಾತಾಡುವ ಸ್ವಾತಂತ್ಯ್ರವನ್ನು ಕಸಿದುಕೊಂಡು ಆ ದರಿದ್ರ ಬಾಯಿಗಳೇ ಮಾತಾಡುತ್ತಿವೆ. ಕೋಟ್ಯಾಧೀಶರ ಆಸೆ ಬಯಕೆಗಳು ಹುಟ್ಟುತ್ತಿದ್ದಂತೆಯೇ ಈಡೇರಿಕೆಯಾದರೆ, ಬಡವರ ಆಸೆ ನಿರಾಶೆಗೂ ಹತಾಶೆಗೂ ಕಾರಣವಾಗುತ್ತಿದೆ. ನಲವತ್ತೇಳರ ಸ್ವಾತಂತ್ರ್ಯ ಬಡವರ ಗೋಳನ್ನು ನಿವಾರಿಸಲಿಲ್ಲ, ಸಮಾನತೆಯ ಹೂವನ್ನು ಅರಳಿಸಲೂ ಇಲ್ಲ. ಹಣವಂತರು ಕೈಸನ್ನೆ, ಕಣ್ಸನ್ನೆ ಮಾಡಿದರೂ ಅವರೆದುರು ಬೆತ್ತಲೆಯಾಗಿ ಮಂಡಿಯೂರುವುದಕ್ಕೂ ಸ್ವಾತಂತ್ಯ್ರ ಸಿದ್ಧವಾಗಿದೆಯೆಂದರೆ ಅದು ದೇಶಕ್ಕೆ ಎದುರಾಗಿರುವ ದೊಡ್ಡ ಆಪತ್ತಲ್ಲದೆ ಬೇರೇನೂ ಅಲ್ಲ!

ಸಂಪತ್ತಿನ ಗಳಿಕೆ, ಸಂವರ್ಧನೆ, ಸಂರಕ್ಷಣೆಗಳೇ ಬಂಡವಾಳಶಾಹಿಗಳ, ಶ್ರೀಮಂತರ ಉದ್ದೇಶವಾಗಿರುವುದರಿಂದ ಆಳುವವರನ್ನು ಓಲೈಸಿಕೊಂಡೇ ಒಳ ಒಪ್ಪಂದಗಳಂತೆ ನಡೆದುಕೊಂಡೇ ಇರಬೇಕಾಗುತ್ತದೆ. ಆದ್ದರಿಂದ ಪ್ರಭುತ್ವಕ್ಕೆ ವಿರೋಧಿಯಾದ ಯಾವುದೇ ಹೋರಾಟಗಳಲ್ಲೂ ಅವರು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಜನಸಾಮಾನ್ಯರು ಅಂದರೆ ನೊಂದವರು, ಬೆಂದವರು, ಶೋಷಿತರು ಪ್ರಾಣ ತೆತ್ತು ಗುರಿ ಮುಟ್ಟುವ ಹೋರಾಟಗಳ ಲಾಭ ಪಡೆದುಕೊಳ್ಳಲು ಸದಾ ಹೊಂಚು ಹಾಕುತ್ತ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ದೇಶದ ಸ್ವಾತಂತ್ಯ್ರ ಹೋರಾಟದ ಸಂದರ್ಭದಲ್ಲಿ ಆಗಿದ್ದೂ ಅದೇನೆ. ಅದು ಗಾಂಧೀಜಿ ಕರೆ ಕೊಟ್ಟಿದ್ದಂತೆ ಅಹಿಂಸಾ ಮಾದರಿಯ ಹೋರಾಟವಾಗಿದ್ದರೂ ಕ್ರೂರಿಗಳು ಮತ್ತು ಖೂಳರಾಗಿದ್ದ ಬ್ರಿಟಿಷರ ಬಂದೂಕಿನಿಂದ ಅಮಾನುಷ ಎಂಬಂತೆ ಗುಂಡುಗಳು ಸಿಡಿಯುತ್ತಲೇ ಹೋದುದರಿಂದ ರೈತರು, ಕಾರ್ಮಿಕರೇ ಮುಖ್ಯವಾಗಿ ಸಾವಿರಾರು ಜನ ಗೋರಿಯಾದರು, ಲಕ್ಷ ಲಕ್ಷ ಜನ ಗಲ್ಲಿಗೇರಿದರು. ಶ್ರೀಮಂತರು ಮಾತ್ರ ಸುರಕ್ಷಿತ ವಲಯದಲ್ಲೇ ಉಳಿದು ನೋವಿನಿಂದಲೂ ಸಾವಿನಿಂದಲೂ ಪಾರಾದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲಾದರೂ ಪ್ರಾಣ ತೆತ್ತವರ ಮುಂದಿನ ಸಂತತಿಯನ್ನು ಉದ್ಧರಿಸುವ ಸಂಕಲ್ಪವನ್ನು ಪ್ರಭುತ್ವ ಮಾಡಬೇಕಿತ್ತು. ಆಳುವವರು ನಮ್ಮವರೇ ಆದರೂ ಅವರ ದರ್ಪ, ಠೇಂಕಾರ, ದುರಹಂಕಾರ, ಕ್ರೌರ್ಯ, ಹಿಂಸಾಚಾರಗಳ ತುಡಿತ ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯಕ್ಕಿಂತ ಹೆಚ್ಚೇ ಆಯಿತು. ಅದರಿಂದಾಗಿ ಆಳುವವರ ಕುಮ್ಮಕ್ಕಿನಿಂದಲೇ ಶ್ರೀಮಂತ ವರ್ಗ ಮತ್ತು ಪೊಲೀಸರು ಜನರನ್ನು ಚಾಟಿಯಿಂದ ಬಾರಿಸುವುದಕ್ಕೂ ಗುಂಡು ಹಾರಿಸಿ
ಕೊಲ್ಲುವುದಕ್ಕೂ ಹಿಂದೆ ಮುಂದೆ ನೋಡಲಿಲ್ಲ. ಪಾರ್ಲಿಮೆಂಟಿನ ಕುರ್ಚಿಯಲ್ಲಿ ಕುಳಿತು, ವರ್ಷಗಟ್ಟಲೆ ನಿರರ್ಥಕ ಚರ್ಚೆಯಲ್ಲಿ ತೊಡಗಿರುವವರು ಬಡವರ ಬೆವರು ಮತ್ತು ರಕ್ತವನ್ನೇ ಕುಡಿಕುಡಿದು ಕೊಬ್ಬುತ್ತಿರಬೇಕಾದರೆ, ಕುವೆಂಪು ಅವರ ‘ಕಲ್ಕಿ’ಯಂತೆ ‘ಮತ್ತೂ ದಾಹ ಮತ್ತೂ ದಾಹ’ ಎನ್ನುತ್ತಿರಬೇಕಾದರೆ ಬಡವರ ಉದ್ಧಾರ ಹೇಗೆ ಸಾಧ್ಯ ಎನ್ನುವ ವ್ಯಥೆ ಮತ್ತು ವಿಷಾದದೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.

ಸಿದ್ಧಲಿಂಗಯ್ಯನವರು ತಮ್ಮ ಜೀವಿತಾವಧಿಯಲ್ಲಿ ಬರೆದ 171 ಕವಿತೆಗಳಲ್ಲಿ ಸಾಮಾಜಿಕ ಮಹತ್ವದ ಬಹಳಷ್ಟು ಕವಿತೆಗಳು ಇವೆಯಾದರೂ, ಆ ಎಲ್ಲವುಗಳಿಗೆ ಕೆನೆಯ ರೂಪದಲ್ಲಿರುವ ಮೂರು ಕವಿತೆಗಳನ್ನು ಮಾತ್ರ ಇಲ್ಲಿ ಚರ್ಚೆಗೊಳಪಡಿಸಲಾಗಿದೆ.

 

MORE FEATURES

ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕು: ಮಮತಾ ಜಿ. ಸಾಗರ್

16-04-2024 ಬೆಂಗಳೂರು

‘ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕೆ ಹೊರತು, ವೈವಿಧ್ಯತೆಯನ್ನ ಅಳಿಸಿ ಏಕತೆಯನ್ನ ಕಟ್ಟಲಾಗಲ್ಲ’ ಎನ್ನುತ್ತ...

ಎಲ್ಲ ಕಾಲಕ್ಕೂ ಸಲ್ಲುವ ಮಕ್ಕಳ ಕವನ ಸಂಕಲನ ‘ಏನು ಚಂದವೋ…’‌

15-04-2024 ಬೆಂಗಳೂರು

"ಮಕ್ಕಳಿಗಾಗಿ ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಎಸ್. ಎಸ್. ಸಾತಿಹಾಳ ಅವರು ಈಗ ‘ಏನು ಚಂದವೋ&h...

ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ

16-04-2024 ಬೆಂಗಳೂರು

"ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒ...