ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದು…

Date: 30-06-2022

Location: ಬೆಂಗಳೂರು


“ಹಸಿ ಮೈ ಹೊತ್ತ, ಅಲ್ಲಲ್ಲಿ ಪಾಚಿಗಟ್ಟಿದ, ಜಾರಿದರೆ ಸರಕ್ಕೆಂದು ನೆಲಕಚ್ಚಿಸುವ ಮೆಟ್ಟಿಲುಗಳನ್ನು ನಾಜೂಕಾಗಿಯೆ ಇಳಿಯುತ್ತಲೆ ಭೋರ್ಗರೆದುಕ್ಕುವ ಹಾಲ್ನೊರೆಯನ್ನು ಕಣ್ತುಂಬಿಕೊಂಡೆವು. ಪೂರಾ ಕೆಳಗಿಳಿದಾಗ ನೀರಿನ ಸದ್ದು ಬಿಟ್ಟು ಬೇರೇನೂ ಕೇಳುತ್ತಿರಲಿಲ್ಲ” ಎನ್ನುತ್ತಾರೆ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ, ಸಿರಿಮನೆ ಜಲಪಾತದ ಸನಿಹದ ಸುಂದರ ಅನುಭವವನ್ನು ಬಣ್ಣಿಸಿದ್ದಾರೆ.

ತುಂಗಾ ನದಿಯ ಮೈಮೇಲೆ ರಾತ್ರಿ ಪೂರಾ ರಪರಪ ಸುರಿದ ಶರಂಪರ ಮಳೆಯು ಪರಿಶುದ್ಧ ನಸುಕಿಗೆಲ್ಲಾ ತುಂಗೆಯೊಳಗೆ ಮಿಂದು ತಣ್ಣಗೆ ಭೋರ್ಗರೆದು ಹರಿಯುತ್ತಿತ್ತು! ಬೀದಿ ದೀಪದ ಕೆಳಗೆ ಹಳದಿ ಬೆಳಕು ಎಲ್ಲೆಡೆ ಚೆಲ್ಲಿ ಬಂಗಾರ ಬೀದಿಯ ಕಳೆಯೊಂದು ಮೈದಳೆದು ಹೊಳೆಯುತ್ತಿತ್ತು. ನಸುಕಿನ ಜಾವಕ್ಕೆ ಬೈಕ್‌ನ ಕಿವಿ ತಿರುವಿ ಶುರು ಮಾಡಿದಾಗ ಶೃಂಗೇರಿ ಇನ್ನೂ ನಿದ್ದೆ ಮಂಪರಿನಲ್ಲಿ ಆಕಳಿಸುತ್ತಿತ್ತು. ಪಶ್ಚಿಮಘಟ್ಟದ ಇಂಥ ನಸುಕುಗಳನ್ನು ಮಂದ ಬೆಳಕಿನಲ್ಲಿ ನೋಡುವುದೆ ಚೆಂದ. ನಿರ್ಜನ ರಸ್ತೆಯಲ್ಲಿ ಉದ್ದಕ್ಕೂ ಹಾಸಿದ ಹಳದಿ ಬೆಳಕು. ಕಣ್ಣು ಹಾಯಿಸಿದಷ್ಟೂ ದಟ್ಟ ಮುಸುಕಿನ ಮಂಜು. ಬೆಟ್ಟದಂಚಿನ ಊರೆಂದರೆ ಇಷ್ಟೂ ಇಲ್ಲದಿದ್ದರೆ ಹೇಗೆ? ಅಪರೂಪದ ಅಪೂರ್ವ ಪಶ್ಚಿಮ ಘಟ್ಟದ ನಸುಕದು. ಬೈಕ್ ಶುರು ಮಾಡಿ ಕಿಗ್ಗಾ ಕಡೆ ತಿರುಗಿಸಿ ಹೊರಟೆವು.

ಶೃಂಗೇರಿಯ ಆ ಕಾಡುಬೆಟ್ಟದಿಂದ, ಅತಿ ನಾಜೂಕು ತಿರುವುಗಳನ್ನೆಲ್ಲಾ ಕಬಳಿಸುತ್ತಲೆ ದಟ್ಟ ಕಾಡಿನ ಆಳಕ್ಕಿಳಿದಂತೆ ಎಡಬಲಕ್ಕೆ ಆವರಿಸಿದ ಹಸಿರ ಸಿರಿ ಪೂರಾ ನಮ್ಮನ್ನು ಹಸಿಹಸಿ ನೆನಪುಗಳನ್ನು ಪೇರಿಸಿಟ್ಟುಕೊಳ್ಳುವಲ್ಲಿ ಪ್ರತಿ ಕ್ಷಣ ಸಾಕ್ಷಿಯಾಗುತ್ತಿತ್ತು! ಬೈಕಿನ ಬೆಳಕು ನಸುಕನ್ನು ಸೀಳುತ್ತಲೆ ಪಶ್ಚಿಮ ಘಟ್ಟದ ದಟ್ಟ ಕಾನನದ ಮೇಲೆ ಸಣ್ಣ ಬೆಳಕನ್ನು ಚೆಲ್ಲುತ್ತಿತ್ತು. ನಡುಗುವ ಮೈಯನ್ನು ಒಂದರೆಕ್ಷಣ ಸಡಿಲಿಸಿ ತಣ್ಣನೆಯ ಗಾಳಿಯೊಟ್ಟಿಗೆ ಕದನಕ್ಕೆ ಬಿಟ್ಟು ಇಡೀ ಕಾಡ ನಸುಕನ್ನು ತೆಕ್ಕೆಗೆ ತೆಗೆದುಕೊಳ್ಳುವ ಹಪಾಹಪಿಗೆ ಬಿದ್ದಿದ್ದೆವು! ಯುಗಸಹಸ್ರ ಯೋಜನ ದೂರದ ಬೆಳಕು ಈ ದಟ್ಟ ಕಾನನವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಹೊತ್ತಿಗೆ ಬೈಕಿನ ಬೆಳಕು ಕಿಗ್ಗಾ ಎಂಬ ರಸ್ತೆ ಫಲಕದ ಮೇಲೆ ಬಿದ್ದು ಹಸಿರು ಬೋರ್ಡಿನ ಮೇಲಿನ ಬಿಳಿ ರೇಡಿಯಂ ಅಕ್ಷರಗಳು ಹೊಳೆಯುತ್ತಿದ್ದವು! ಕಿಗ್ಗಾ ಊರಿನ ದಾರಿಗೆ ಬೈಕ್ ತಿರುವಿಕೊಂಡು ಹೊರಟೆವು. ಈಗ ದೊಡ್ಡ ರಸ್ತೆ ಸಣ್ಣದಾಯ್ತು. ಮೊದಲಿನ ವೇಗ ಪೂರಾ ತಗ್ಗಿತು. ಹರುಕು ರಸ್ತೆಯುದ್ದಕ್ಕೂ ಹಸಿಹಸಿ ನೀರ ಗುಂಡಿಗಳು. ಆಗಷ್ಟೆ ಮಳೆ ನಿಂತ ಮಾರನೇ ದಿನದ ಪರಿಶುದ್ಧ ಬೆಳಗು. ಎಡಬಲಕ್ಕೆ, ದೂರದ ನೇರಕ್ಕೆ, ತಲೆ ಎತ್ತಿದರೆ ಕಂಗಳ ಕೊನೆ ದೃಷ್ಟಿವರೆಗೆ ಈ ಸೃಷ್ಟಿಯ ಬರಿ ಹಸಿರೊಂದೆ ಗೋಚರಿಸುತ್ತಿತ್ತು. ಬೆಳ್ಳ ಬೆಳಗೊಂದು ಕಣ್ಣು ತೆರೆಯುವ ಹೊತ್ತಿಗೆ ಇಡೀ ಜಟಿಲ ಕಾಡ ಗಿಡಗಂಟೆಗಳ ಕೊರಳೊಳಗಿಂದ ಇಂಪಾದ ಧ್ವನಿಗಳು ಹಾಜರಿ ಹಾಕುತ್ತಿದ್ದವು. ಆವರಿಸಿದ ಕಾರ್ಮೋಡ ಗಾಳಿಗೆ ಇನ್ನೆಲ್ಲೊ ತಳ್ಳಿಕೊಂಡು ಹೋಗಿ ಅಕಾಶ ಬಯಲುಗೊಂಡಿತ್ತು. ಮಂಜಿನ ಬಿಳಿಶಾಲು ಹೊದ್ದ ಘಟ್ಟದ ಹಸಿರು ಪೂರಾ ಶ್ವೇತಘಟ್ಟವಾಗಿ ಇಡೀ ಸ್ವರ್ಗ ಸೌಂದರ್ಯದ ಎಲ್ಲೆಯನ್ನೂ ಮೀರಿಸುವಂತೆ ಜುಗಲ್ ಬಂಧಿ ಬಿಗಿದಂತಿತ್ತು. ಕಿಗ್ಗಾ ಒಳಹೊಕ್ಕು ಮೂರ್ನಾಲ್ಕು ಕಿಲೋಮೀಟರ್ ಕ್ರಮಿಸಿದ್ದಾಯ್ತು. ನಿರ್ಜನ ಬೆಳಗಿನ ನಾಭಿಯಿಂದ ನಿರಂತರ ಸುರಿವ ನೀರಿನ ಶಬ್ಧ ಸಣ್ಣಗೆ ತೊಟಗುಟ್ಟುತ್ತಿತ್ತು. ರಸ್ತೆಯ ಎಲ್ಲಾ ತಿರುವುಗಳನ್ನು ತಿರುವಿಕೊಳ್ಳುತ್ತಲೆ ಆಳ ಘಟ್ಟದ ನಟ್ಟ ನಡುವಿಗೆ ಬಂದು ನಿಂತಾಗ ಸಿರಿಮನೆ ಜಲಪಾತ!

ನಾವು ಹೋಗಿದ್ದು, ಆಗಷ್ಟೆ ತಮ ಒಣಗಿ ನಸುಕು ಕಳೆದು ಹಗಲು ಹಡೆದು ಬಂದ ಹೊತ್ತಲ್ಲಿ! ಅಲ್ಲಿಯ ಯಾವ ಸಂರಕ್ಷಣಾ ಅಧಿಕಾರಿಗಳು ಸಹ ಇನ್ನೂ ಎದ್ದು ಡ್ಯೂಟಿಗೆ ಬಂದಿರಲಿಲ್ಲ. ಪೂರಾ ನಿರ್ಜನ ಕಾಡು. ಪ್ರವೇಶ ಶುಲ್ಕ ಇತ್ತಾದರೂ ಎಲ್ಲವೂ ಕ್ಲೋಸ್ ಆಗಿದ್ದರಿಂದ ನಾವು ಮೊದಲು ಜಲಪಾತ ನೋಡಿ ಬಂದರಾಯ್ತು ಅಷ್ಟೊತ್ತಿಗೆ ಇವರು ಯಾರಾದರೂ ಬಂದರೆ ದುಡ್ಡು ಕೊಟ್ಟರಾಯಿತು ಅಂತ ಅಲ್ಲೆ ಇದ್ದ ಒಂದು ಸಣ್ಣ ಗೂಡಂಗಡಿಯಂತಹ ತಂಗುದಾಣದಲ್ಲಿಯೆ ಜಳಕಕ್ಕೆ ಹೊಂದುವಂತಹ ಬಟ್ಟೆ ತೊಟ್ಟು ನಮ್ಮ ಎಲ್ಲಾ ಟೆಂಟು ಬ್ಯಾಗು ಎಲ್ಲವನ್ನೂ ಬೈಕಿನ ಹತ್ತಿರವೆ ಬಿಟ್ಟು ಕ್ಯಾಮೆರಾ ಒಂದನ್ನು ತೆಗೆದುಕೊಂಡು ಕೆಳಗಿಳಿಯಲು ಅಣಿಯಾದೆವು. ಕೋತಿಗಳೊಂದಿಷ್ಟು ಚೇಷ್ಟೆ ಮಾಡಿಕೊಂಡು ನಾವು ಲಗೇಜು ಹೊಂದಿಸಿಟ್ಟ ಬೈಕಿನ ಹತ್ತಿರ ಬಂದವು. ಸಮಯ ಒಂದನ್ನು ಬಿಟ್ಟರೆ ಹೇಳಿಕೊಳ್ಳುವಂತಹ ಮತ್ತು ಕಳೆದುಕೊಂಡು ವ್ಯಥೆ ಪಡುವಂತಹ ಯಾವ ವಸ್ತುವೂ ಜಗತ್ತಿನಲ್ಲಿ ಇಲ್ಲ ಅಂತ ಅನಂತ ಕಾಲದಿಂದ ತಳ್ಳಿಕೊಂಡು ಬಂದ ಸತ್ಯ ಒಂದು ಭಾಸವಾಗಿ ಎಲ್ಲವನ್ನೂ ಅಲ್ಲೆ ಬಿಟ್ಟು ಕೆಳಗಿಳಿಯಲು ಅಣಿಯಾದೆವು.

ಹಸಿ ಮೈ ಹೊತ್ತ, ಅಲ್ಲಲ್ಲಿ ಪಾಚಿಗಟ್ಟಿದ, ಜಾರಿದರೆ ಸರಕ್ಕೆಂದು ನೆಲಕಚ್ಚಿಸುವ ಮೆಟ್ಟಿಲುಗಳನ್ನು ನಾಜೂಕಾಗಿಯೆ ಇಳಿಯುತ್ತಲೆ ಭೋರ್ಗರೆದುಕ್ಕುವ ಹಾಲ್ನೊರೆ ಸಿರಿಮನೆ ಜಲಪಾತವನ್ನು ಕಣ್ತುಂಬಿಕೊಂಡೆವು. ಪೂರಾ ಕೆಳಗಿಳಿದಾಗ ನೀರಿನ ಸದ್ದು ಬಿಟ್ಟು ಬೇರೇನೂ ಕೇಳುತ್ತಿರಲಿಲ್ಲ! ಯಾರೂ ಇಲ್ಲದ ತಿಳಿ ಮುಂಜಾವಿನಲಿ ಇಂತಹದೊಂದು ನಿರ್ಜನ ಘಳಿಗೆಯನ್ನು ನನ್ನ ಕ್ಯಾಮೆರಾ ಕಣ್ಣಿನಲ್ಲಿ ಒಂದಷ್ಟು ಹೊತ್ತು ಸೆರೆ ಹಿಡಿದೆವು. ಕೆಳಗಿಳಿದ ನಂತರ ಅಲ್ಲಿಂದ ಇನ್ನೊಂದು ಕಡೆಗೆ ಮೇಲೆ ಹತ್ತಿ ಜಲಪಾತ ವೀಕ್ಷಿಸಲು ವೀಕ್ಷಣಾಲಯ ಒಂದನ್ನು ಎತ್ತರಕ್ಕೆ ಕಟ್ಟಿದ್ದರು. ಕೌತುಕದಿಂದ ಒಂದೆ ಉಸಿರಿನಲ್ಲಿ ಅಲ್ಲಿಯವರೆಗೆ ಏರಿ ಇಡೀ ಜಲಪಾತದ ಬಳಕುವ ಮೈಯನ್ನು ಕಣ್ತುಂಬಿಕೊಂಡೆವು. ಮುರಿದು ಬಿದ್ದ ಮರದ ಇಕ್ಕೆಲಗಳಲ್ಲಿ ಹರಿದು ಬರುವ ನೀರಿನ ತೊರೆಯು ಸಾವಿರ ಸಾವಿರ ಬೇರುಗಳನ್ನು ತೊಳೆದು ತನ್ನ ಮೈಯನ್ನು ಒಂದೆ ಬಾರಿಗೆ ೪೦ ಅಡಿ ಕೆಳಗೆ ನೂಕುವಾಗ ನುಣುಪಾದ ಕಲ್ಲುಗಳನ್ನು ಸವರಿಕೊಳ್ಳುತ್ತ ಭೋರ್ಗರೆದು ಪ್ರಪಾತಕ್ಕೆ ಬೀಳುತ್ತಲೆ ಇಡೀ ಕಾಡಿನಲ್ಲಿ ತನ್ನ ಮೈವೀಣೆಯಿಂದ ಬಿಟ್ಟ ಸದ್ದೊಂದನು ಪಲ್ಲಟಗೊಳಿಸುತ್ತ ತರಂಗಗಳಲ್ಲಿ ಹಸಿಯನ್ನು ಹರಿಬಿಟ್ಟು ಹಾಜರಾತಿಯನ್ನು ಹಾಕಿ ತಮ್ಮ ಗೈರನ್ನು ಮೊಟಕುಗೊಳಿಸಿ ಮೆರೆಯುತ್ತ ತನ್ನ ಜೀವಪೋಷಕ ದ್ರವ್ಯವನ್ನು ಮತ್ತದೆ ಘಟ್ಟದ ಕಂದರ ಹೊಕ್ಕು ಅಲ್ಲಿಂದ ಕೆಳಗಿಳಿಯುತ್ತ ಕಾಫಿ ಎಸ್ಟೇಟುಗಳತ್ತ ಮೈತಿರುವುತ್ತದೆ!

ನೀರಿನ ರಭಸ, ಮೇಲಿಂದ ಕೆಳಗಿಳಿಯುತ್ತಲೆ ಸಣ್ಣಗೆ ಸಮಾಧಾನಗೊಂಡು ಮೆಲ್ಲಗೆ ತನ್ನ ಮೈಯನ್ನು ಇಡೀ ಘಟ್ಟದ ಕಲ್ಲು ಇಕ್ಕೆಲಗಳಲ್ಲಿ ಹೊಕ್ಕಿಸಿಕೊಂಡು ತನ್ನ ಮೈ ಚಾಚಿ ಹರಡಿ ಇಡಿ ಕಾಡನ್ನೆ ತಬ್ಬುವ ತವಕದಲ್ಲಿ ಹರಿದು ಒಂದಷ್ಟು ಮಟ್ಟಸ ನೆಲವುಂಡು ಮುಂದೆ ಸಾಗುತ್ತದೆ. ಆ ತೊರೆಯ ಅಷ್ಟೂ ಅಗಲವನ್ನು ಜಾರುವ ಕಲ್ಲುಗಳ ಬೋಳು ತಲೆಯ ಮೇಲೆ ಕಾಲಿಟ್ಟು ಮತ್ತೆ ಒಮ್ಮೊಮ್ಮೆ ನೆಲದಾಳಕ್ಕೆ ಅಂಗಾಲೂರಿ ಮೊಳಕಾಲು ಮಟ್ಟದ ನೀರನ್ನು ಸಣ್ಣಗೆ ದಾಟುತ್ತಲೆ ಕ್ಯಾಮೆರಾ ಒಳಗೆ ಒಂದಷ್ಟು ಪೋಟೊ ಸೆರೆ ಹಿಡಿದೆ. ಈ ಕಡೆಯಿಂದ ಆ ಕಡೆಗೆ ಇಬ್ಬರೂ ದಾಟಿದೆವು. ಅಲ್ಲಿ ಮತ್ತೆ ಇಂಥದೆ ಮತ್ತೊಂದು ಸಣ್ಣ ಜಲಪಾತ, ಹೆಸರಿಲ್ಲ. ಜುಳುಜುಳು ನಿನಾದ ಮಾಡುತ್ತಲೆ ಮೇಲಿಂದ ಕೆಳಗೆ ಸರೀಸೃಪದ ಗುಣ ಪಾಲಿಸುತ್ತಾ ಜಾರುತ್ತಿತ್ತು. ಅಲ್ಲಿಯೂ ಒಂದಷ್ಟು ಪೋಟೊ ಕ್ಲಿಕ್ಕಿಸಿಕೊಂಡೆವು. ಇಡೀ ನೀರು ಮೈ ಬಿಚ್ಚಿಕೊಂಡು ಹರಿಯುವ ಪರಿಗೆ ಮನಸ್ಸು ಪ್ರಫುಲ್ಲಗೊಂಡು ಸಮಾಧಾನದ ತೆಕ್ಕೆಗೆ ಆಗಲೆ ಸಿಕ್ಕಿಬಿದ್ದಿತ್ತು.

ಗುರುತಿಗಿರಲೆಂದು, ಗೆಳೆಯ ನನ್ನವು ಒಂದಷ್ಟು ಪೋಟೊ ಕ್ಲಿಕ್ಕಿಸಿ ಕೊಟ್ಟು ಆ ಅಗಲ ತೊರೆಯನ್ನು ದಾಟಲು ಆ ಕಡೆ ತಿರುವಿ ಹೆಜ್ಜೆ ಕಿತ್ತಿಟ್ಟ. ಅಷ್ಟೆ. ಬೋಳು ತಲೆಯ ನುಣುಪು ಕಲ್ಲಿನ ಎದೆಯ ಮೇಲೆ, ಜಾರದೆ ಇರುತ್ತಾ? ಕೈಯಲ್ಲಿ ಕ್ಯಾಮೆರಾ ಇದ್ದ ಕಾರಣ ಅದನ್ನು ಉಳಿಸುವ ಒದ್ದಾಟದಲ್ಲಿ ಇನ್ನ್ಯಾವುದೊ ಕಲ್ಲಿನ ಇಕ್ಕೆಲಗಳಲ್ಲಿ ಮತ್ತೊಂದು ಕಾಲು ಸಿಕ್ಕಿಸಿಕೊಂಡು ದಡಕ್ಕನೆ ಬಿದ್ದು ಅತೀವ ಪೆಟ್ಟು ಮಾಡಿಕೊಂಡ. ಅವನ ದೊಡ್ಡ ಸಮಾಧಾನ ಕ್ಯಾಮೆರಾಗೆ ಏನೂ ಆಗಲಿಲ್ಲ ಅಂತ‌. ನನ್ನ ಸಂಕಟ ಅವನ ಕಾಲಿಗೆ ಪೆಟ್ಟಾಗಿದೆ ಇನ್ನು ಬೈಕ್ ಓಡಿಸುವುದಾದರೂ ಹೇಗೆ ಅಂತ! ಪೆಟ್ಟಾಗಿದ್ದ ಕಾಲನ್ನೆ ತೆವಳಿಕೊಂಡು ಅಲ್ಲಿಯದೆ ತೀರಕ್ಕೆ ಬಂದು ಒಂದಷ್ಟು ಹೊತ್ತು ಸುಮ್ಮನೆ ಕೂತು ಇಡೀ ಜಲಪಾತದ ಎಲ್ಲಾ ನಮೂನೆಯ ಅವತಾರಗಳನ್ನು ಕಣ್ತುಂಬಿಕೊಂಡೆವು. ಸ್ವಲ್ಪ ಹೊತ್ತಿನ ನಂತರ ಮನಸ್ಸಿಗೆ ಸಮಾಧಾನ ಆಗುವಷ್ಟು ಹೊತ್ತು ಜಲಪಾತದ ಮೈಗೆ ಮೈ ಕೊಟ್ಟು ಮಿಂದು ಒಂದು ಗಡತ್ತಾದ ಸ್ನಾನ ಮುಗಿಸಿದೆವು. ದಟ್ಟ ಕಾನನದ ಕಂದರ ಒಳಹೊಕ್ಕು ಮುನ್ನುಗ್ಗಿ ಮುಂದೆ ಇಳಿಯುತ್ತಾ ಎಲ್ಲೊ ಹೋಗಿ ಮತ್ತೆಲ್ಲೊ ತೇಲಿ ಇನ್ನೆಲ್ಲೊ ಏನೇನಕ್ಕೊ ಉಪಯೋಗಗೊಳ್ಳುವ ಜಲಪಾತದ ಬಗ್ಗೆಯೆ ಧೇನಿಸುತ್ತ ಒಂದೊಂದೆ ಮೆಟ್ಟಿಲುಗಳನ್ನೇರಿ ಮೇಲೆ ಬಂದೆವು.

ಜಲಪಾತದಿಂದ ಬರುವ ನೀರು, ಕಾಫಿ ಎಸ್ಟೇಟ್‌ಗಳು ಮತ್ತು ಭತ್ತದ ಜಾಗವನ್ನು ಕೆಳಮುಖವಾಗಿ ಹರಿದು ಉಣಿಸುತ್ತದೆ. ಕಾಲುದಾರಿಗಳು ನಿರ್ವಹಿಸಲು ಮಧ್ಯಮ ಪ್ರವೇಶ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಹಣವು ಕಿಗ್ಗಾ ಮನೆಗಳನ್ನು ಬೆಳಗಿಸುವ ಪಕ್ಕದಲ್ಲಿ ನಿರ್ಮಿಸಿದ ಸಣ್ಣ ಹೈಡ್ರಾಲಿಕ್ ವಿದ್ಯುತ್ ಸ್ಥಾವರವನ್ನು ಸಹ ಬೆಂಬಲಿಸುತ್ತದೆ. ಇಡೀ ಚಟುವಟಿಕೆಯನ್ನು ಸ್ಥಳೀಯ ಸಂಸ್ಥೆಗಳಿಂದ ನಿಯಂತ್ರಿಸಲಾಗುತ್ತದೆ ಮತ್ತು ನಿರ್ವಹಿಸುತ್ತದೆ. ಎಂದು ಅಲ್ಲಿಯ ಸ್ಥಳೀಯೊರೊಬ್ಬರು ವರದಿ ಒಪ್ಪಿಸಿ ತಮ್ಮ ಮನೆಯತ್ತ ಸಾಗಿದರು. ಮಳೆ ಮತ್ತೆ ಸಣ್ಣಗೆ ತೊಟಗುಟ್ಟಲು ಶುರುವಾಯಿತು. ಸಣ್ಣ ಮಳೆಯಲ್ಲೆ ಮತ್ತದೆ ಹಸಿ ನೆನಪುಗಳನ್ನು ಹೆಕ್ಕುತ್ತಾ ಒಂದೊಂದೆ ಪೇರಿಸಿಟ್ಟುಕೊಳ್ಳುತ್ತಲೆ ಕಿಗ್ಗಾ ಒಳದಾರಿಯಿಂದ ಹೊರಬಿದ್ದೆವು. ಪಯಣ ಮತ್ತೆ ಗಾಳಿ ತಳ್ಳುವ ಮೋಡದಂತೆ ಮುಂದುವರೆಯುತ್ತಾ ಸಾಗಿತು!

ಮೌನೇಶ ಕನಸುಗಾರ
mouneshkanasugara01@gmail.com

ಈ ಅಂಕಣದ ಹಿಂದಿನ ಬರೆಹಗಳು:
ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...