ಸ್ಕಂದಗಿರಿಯ ಚಾರಣದ ಸುತ್ತ

Date: 08-11-2022

Location: ಬೆಂಗಳೂರು


ಕುರುಚಲು ಕಾಡಿನಂತೆ ಹರಿದು ಬಿದ್ದ ಹಸಿರು ಹಾಸಿಗೆಯಂತೆ ಅಲ್ಲಲ್ಲಿ ಹಸಿರು ಕಲ್ಲು ಇಕ್ಕೆಲಗಳ ನಡುವೆ ಗೋಚರಿಸುತ್ತಿತ್ತು‌. ನಡೆವ ದಾರಿ ಮೊದಲು ಮಟ್ಟಸವಾಗಿತ್ತಾದರು ಹೋಗುತ್ತಾ ಹೋಗುತ್ತಾ ಅದು ಏರಿಗೆ ಬಿದ್ದ ಕಾಲು ದಾರಿ ನಮಗೆಂದೆ ಹಾಸಿತ್ತು. ಕಾಲುದಾರಿ ಎನ್ನುವುದಕ್ಕಿಂತ ಅಪ್ಪಟ ಕಲ್ಲು ದಾರಿ ಎನ್ನುತ್ತಾರೆ ಲೇಖಕ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ ಸ್ಕಂದಗಿರಿಯ ಚಾರಣ ಕುರಿತು ಹಂಚಿಕೊಂಡಿದ್ದಾರೆ.

ನಮ್ಮ ಚಾರಣ ತಂಡ ರಾತ್ರಿ ಹನ್ನೊಂದು ಗಂಟೆಗಾಗಲೆ ಬೆಂಗಳೂರಿನ ಸರಹದ್ದು ದಾಟುವುದರಲ್ಲಿತ್ತು. ಸಣ್ಣ ಚಳಿ ಮೈಯೆಲ್ಲಾ ಹೊಕ್ಕು ತನ್ನ ಅಗಾಧ ಸೇವೆಯನ್ನು ಸುರಿಯುತ್ತಿತ್ತು. ನಮ್ಮ ಗಾಡಿ ಕಲ್ವಾರಬೆಟ್ಟದಡಿಯ ಪಾಪಾಗ್ನಿ ಮಠ ತಲುಪಿದಾಗ ರಾತ್ರಿ 2 ಗಂಟೆ. ನಮ್ಮಂತೆಯೇ ನೂರಾರು ಚಾರಣಿಗರು ಅಲ್ಲಿ ಗುಂಪುಗೂಡುತ್ತಲೇ ಇದ್ದರು. ರಾತ್ರಿ ಮೂರು ಗಂಟೆಗೆ ಅರಣ್ಯ ಇಲಾಖೆ ಪೋಲಿಸ್ ಸಿಬ್ಬಂದಿ ನಮ್ಮೆಲ್ಲರನ್ನೂ ಸಾಲಾಗಿ ನಿಲ್ಲಿಸಿ ನಮ್ಮ ನಮ್ಮ ತಂಡದ ನಾಯಕರನ್ನು ಕರೆದು ಪರ್ಮಿಷನ್ ಗೆ ಬೇಕಾದ ಎಲ್ಲಾ ಷರತ್ತುಗಳನ್ನು ಹೊರಡಿಸಿ ಮಾತುಕತೆ ನಡೆಸಿ ನಮಗೆ ಒಪ್ಪಿಗೆ ಸೂಚಿಸಿದರು.

ಐತಿಹಾಸಿಕವಾಗಿ ಕಲರವ ದುರ್ಗಾ ಎಂದು ಕರೆಯಲ್ಪಡುವ ಸ್ಕಂದಗಿರಿಯ ಚಾರಣ ಸರೊ ರಾತ್ರಿ ಮೂರು ಗಂಟೆಗೆ ಶುರುವಾಯ್ತು. ಮೊದಲು ಎಲ್ಲರೂ ನಮ್ಮ ನಮ್ಮ ಬ್ಯಾಗಿಗೆ ಎರಡೆರಡು ನೀರಿನ ಬಾಟಲ್ ಮತ್ತು ಹಣ್ಣು ಹಾಗೂ ಒಂದಷ್ಟು ತಿಂಡಿತಿನಿಸುಗಳನ್ನು ತುಂಬಿಕೊಂಡೆವು. ಕೈಯಲ್ಲೊಂದು ಟಾರ್ಚ್. ಹೆಗಲಿಗೊಂದು ಬ್ಯಾಗ್. ಕೊರಳಿಗೊಂದು ಕ್ಯಾಮೆರಾ ಹೊತ್ತು ನಾನೂ ಸಹ ಸಜ್ಜಾದೆ. ಮೊದಲು ನಾವು ಚೆಕ್ ಪೋಸ್ಟ್ ಒಂದನ್ನು ಕ್ರಾಸ್ ಮಾಡಬೇಕಿತ್ತು. ನಮ್ಮ ಟೀಮ್ ಲೀಡರ್ ಅಲ್ಲಿ ಹೋಗ ಮಾತಾಡಿ ಒಪ್ಪಿಗೆ ಸೂಚಿಸಿದ. ನಮ್ಮ ಇಡೀ ಟೀಮ್ ನಾಲ್ಕೈದು ಜನರಂತೆ ಈಗ ಒಬ್ಬರ ಹಿಂದೆ ಒಬ್ಬರು ಹೊರಟೆವು.

ಕುರುಚಲು ಕಾಡಿನಂತೆ ಹರಿದು ಬಿದ್ದ ಹಸಿರು ಹಾಸಿಗೆಯಂತೆ ಅಲ್ಲಲ್ಲಿ ಹಸಿರು ಕಲ್ಲು ಇಕ್ಕೆಲಗಳ ನಡುವೆ ಗೋಚರಿಸುತ್ತಿತ್ತು‌. ನಡೆವ ದಾರಿ ಮೊದಲು ಮಟ್ಟಸವಾಗಿತ್ತಾದರು ಹೋಗುತ್ತಾ ಹೋಗುತ್ತಾ ಅದು ಏರಿಗೆ ಬಿದ್ದ ಕಾಲು ದಾರಿ ನಮಗೆಂದೆ ಹಾಸಿತ್ತು. ಕಾಲುದಾರಿ ಎನ್ನುವುದಕ್ಕಿಂತ ಅಪ್ಪಟ ಕಲ್ಲು ದಾರಿ. ಹೆಜ್ಜೆ ಹೆಜ್ಜೆಗೂ ಕಲ್ಲು ಇಕ್ಕೆಲಗಳಲ್ಲಿ ಹೆಜ್ಜೆ ಕಿತ್ತಿಡಬೇಕಿತ್ತು. ಒಂದು ಕಡೆ ಚಳಿ ನಮ್ಮ ಮೈಮುಟ್ಟಲು ಸಹ ಹೆದರಿ ನಡುಗಬೇಕು ಅಷ್ಟೊಂದು ಕಾವು ಈ ಏರುವ ಚಾರಣ ದಯಪಾಲಿಸುತ್ತಿತ್ತು. ಕತ್ತು ಎತ್ತಿ ಮೇಲೆ ನೋಡಿದರೆ ಬೆಳಕಿನ ದೀಪಗಳ ಸ್ಥಾನಪಲ್ಲಟದ ಅದ್ಭುತ ದೃಶ್ಯ ನಮ್ಮನ್ನು ಇನ್ನೂ ಬೇಗ ಮೇಲೆರಲು ಪ್ರೋತ್ಸಾಹಿಸುತ್ತಿತ್ತು.

ಇಲ್ಲಿಂದ ಅರಣ್ಯ ವಲಯ ಶುರುವಾಯಿತು. ಕಲ್ಲಿನೆದೆಗೆ ಕಾಲುಕೊಟ್ಟು ಬೆಟ್ಟವೇರಬೇಕು. ದಣಿವಿಗೆ ಹಣ್ಣು-ನೀರು, ಬೆವರಿಗೆ ಚಳಿಯ ವಿಶ್ರಾಂತಿ ಪಡೆಯುತ್ತಾ ಏರುತ್ತಲಿದ್ದೆವು. ಒಂದು ಮಟ್ಟದ ಎತ್ತರವನ್ನು ಏರಿದಾಗ ವಿಶ್ರಾಂತಿಗೆಂದೆ ಏರಿಲ್ಲದ ತುಸು ದಾರಿ ಎದುರಾಯಿತು. ಕೊರಳಿಗಿದ್ದ ಕ್ಯಾಮೆರಾ ಬ್ಯಾಗೊಳಗೆ ತುರುಕಿ ಸುಮ್ಮನೆ ಹೆಜ್ಜೆ ಕಿತ್ತಿಡುತ್ತ ಎದೆ ಎತ್ತರದ ಹಸಿರು ಹುಲ್ಲಿನ ನಡುವಿನ ಕಾಲುದಾರಿ ಸಾಗುಹಾಕುತ್ತಿದ್ದೆ. ಸ್ವಲ್ಪ ಮಟ್ಟಿಗೆ ಇರುವ ಹಸಿರ ಹಾದಿಯನ್ನು ತುಳಿದು ಹೊರಬಿದ್ದಾಗ ಮತ್ತದೆ ಏರು ಅದೆ ಕಲ್ಲು ಬೆಟ್ಟ ಅದೇ ಕಲ್ಲು ದಾರಿ. ಈಗ ಮೊದಲಿಗಿಂತಲು ಚಳಿ ಹೆಚ್ಚಾಯಿತು. ಸಮಯ ಬೆಳಿಗ್ಗೆ ನಾಲ್ಕರ ಸಂಖ್ಯೆ ಎಡವಿಬಿದ್ದಿತ್ತು‌. ಸಮುದ್ರ ಮಟ್ಟದಿಂದ ನಾಲ್ಕುವರೆ ಸಾವಿರ ಮೀಟರ್ ಎತ್ತರವಿರುವ ಈ ಪರ್ವತವನ್ನು ನಸುಕಿನ ಚಳಿಯನ್ನು ಛೇದಿಸುತ್ತಾ ಏರುವುದೆ ರೋಮಾಂಚನ. ಬ್ರಿಟಿಷ್ ರ ವಿರುದ್ಧ ಹೋರಾಡಲು ಟಿಪ್ಪು ಸುಲ್ತಾನ್ ಕೋಟೆಯೊಂದನ್ನು ಇಲ್ಲಿ ನಿರ್ಮಿಸಿದ್ದನಂತೆ. ಬ್ರಿಟಿಷ್ ರ ವಿರುದ್ಧ ಟಿಪ್ಪು ಸುಲ್ತಾನ್ ಸೋತ ನಂತರ ಕೋಟೆ ನಾಶ ಮಾಡಲಾಯಿತು. ಈಗ ಕೋಟೆಯ ಅವಶೇಷಗಳನ್ನು ಮಾತ್ರ ಕಾಣಬಹುದು. ಕಲರವ ದುರ್ಗದ ಕೋಟೆಗೆ ಸಂಬಂಧಿಸಿದಂತೆ ತುಂಡು ತುಂಡಾದ ಕಿಲದ ಗೋಡೆಗಳು ಅಲ್ಲಲ್ಲಿ ಹಾಸಿಬಿದ್ದ ಆನೆಗಾತ್ರದ ಬಂಡೆಕಲ್ಲುಗಳನ್ನೂ ಸಹ ನಾವು ಚಾರಣದ ಬೆಳದಿಂಗಳಿನಲ್ಲಿ ಕಾಣಬಹುದು.

ನಸುಕು ಹೆಚ್ಚಾದಂತೆ ಮಂಜು, ಕಣಿವೆ ಮೈಯೆಲ್ಲಾ ಆವರಿಸಲಾರಂಭಿಸಿತು. ಚಳಿ ಇಮ್ಮಡಿಗೊಳ್ಳತ್ತಲೆ ತಿವಿಯುತಲಿತ್ತು. ಈಗ ಬೆಟ್ಟದ ತುತ್ತ ತುದಿಯಲ್ಲಿರುವ ಪಾಳುಬಿದ್ದ ಶಿವ ದೇವಾಲಯದ ಪ್ರಾಂಗಣದಲ್ಲಿ ಅನಂತ ಕಾಲದವರೆಗೆ ಮೌನವಾಗಿ ಕುಳಿತುಕೊಳ್ಳಲು ಶಪಥ ಮಾಡಿದಂತೆ ಮೌನವಾಗಿರುವ ನಂದಿ ವಿಗ್ರಹದ ಪಕ್ಕದಲ್ಲಿ ನಿಂತಿದ್ದೆವು. ಹಸಿ ಗಾಳಿ ಹೇಗೆಂದರೆ ಹಾಗೆ ಸುಂಯ್ಯಗುಡತ್ತಲೆ ಮೈಮೇಲೆ ಎರಗಿ ಆಕ್ರಮಣ ಮಾಡುತಲಿತ್ತು. ಬೆಚ್ಚಗೆ ಅಂತ ಹೊಕ್ಕು ಕುಳಿತಿದ್ದು ಶಿವದೇವಾಲಯದ ಗರ್ಭ ಗುಡಿಯ ಒಳಗೆ. ಅಲ್ಲೆ ನಾಯಿಯೊಂದು ಗರ್ಭಗುಡಿಯ ಬೆಚ್ಚನೆ ಸುಖವನ್ನು ಇಂಥ ಚಳಿಯಲ್ಲಿ ಅನುಭವಿಸುತ್ತಿರುವುದು ಕಂಡು ಮನಸಿನಲ್ಲಿ ಸಮಾಧಾನದ ಒಂದು ಗೆರೆ ಇಣುಕುತ್ತಿತ್ತು‌. ಜಗತ್ತು ಎಷ್ಟೊಂದು ವಿಪರ್ಯಾಸಗಳ ನಡುವೆ ಹೆಜ್ಜೆ ಹಾಕುತ್ತಿದೆ ಅಂತ ಅನ್ನಿಸಿತು. ಇಲ್ಲಿ ಪ್ರಕೃತಿ ಇದೆ. ಪ್ರೇಮವಿದೆ. ಸಮಾಧಾನವಿದೆ. ಎಲ್ಲೆಗಳನ್ನು ಮೀರಿದ ಒಂದು ಅಗಾಧ ಸುಖವಿದೆ. ಒಂದೆ ಒಂದು ನಿರ್ಬಂಧದ ನೆರಳೂ ಸಹ ಇಲ್ಲದ ಬಂಧವಿದೆ. ಎಲ್ಲರನ್ನೂ ಸಮನಾಗಿ ಕಾಣುವ ಚಳಿ ಇದೆ. ಬೆಚ್ಚನೆ ಗರ್ಭಗುಡಿಯೂ ಇದೆ. ಆಹಾ! ಏನೆಲ್ಲವನ್ನು ಬದುಕಿನ ಸರಳತೆಗೆ ಒದಗಿಸಬೇಕೊ ಅದಲ್ಲೆವನ್ನು ಈ ಪ್ರಕೃತಿ ಕೊಡುತ್ತಲೆ ಇರುತ್ತದೆ. ಅದನ್ನು ಅನುಭವಿಸುವುದೆ ಸುಖ... ಹೀಗೆ ಯೋಚಿಸುತ್ತಿರುವಾಗಲೆ ನಸುಕು ಪೂರಾ ಸೀಳಿಕೊಂಡು ಚೂಪು ಚಳಿಯು ಹೊರಗೆ ರುದ್ರತಾಂಡವ ನಡೆಸಿತ್ತು. ಒಳಗೆ ಸಿಕ್ಕ ಬೆಚ್ಚನೆ ಸುಖಕ್ಕೆ ಕಣ್ಣು ತೂಕಡಿಸುತ್ತಿದ್ದವು. ಜಾಗೆ ಸಿಗದ ಕೆಲವರು ಹೊರಗೆ ಒಬ್ಬರಿಗೊಬ್ಬರು ಅಂಟಿ ಕೂತಿದ್ದು ಸಹ ಸಮಾಧಾನ ಅನ್ನಿಸಿತು.

ಬೆಳಕು ಹರಿಯುವ ಹೊತ್ತಿಗೆ ಬೆಳಗಿನ ಆರು ಗಂಟೆ. ಮೋಡಗಳೆಲ್ಲಾ ನಮ್ಮ ಕಣ್ಣೆದುರಿಗೆ, ಕಾಲ ಕೆಳಗೆ, ಎದೆಯ ನೇರಕ್ಕೆ ಆಹಾ ನೋಡಲೆರಡು ಕಣ್ಣು ಸಾಲದು. ಮೋಡಗಳ ನರ್ತನ, ಪಲ್ಲಟ, ರೂಪಾಂತರಗಳು ನಮ್ಮನ್ನು ನಾವು ಕಳೆದುಹೋಗಲು ನೀಡುವ ಅದ್ಭುತ ಅವಕಾಶದ ಅದಮ್ಯ ಕ್ಷಣವದು. ಏಳುವರೆಗೆ ಸೂರ್ಯ ಮೋಡಗಳ ನಡುವಿನಿಂದ ಶುಭ್ರ ಶ್ವೇತ ಬಣ್ಣದ ಹಾಸಿಗೆ ಸರಿಸಿ ಎದುರಾದಾಗ ಆ ಕ್ಷಣ ಎಂದಿಗೂ ಮರೆಯಲಾರದಂತ ನೆನಪೊಂದನ್ನು ಈ ಬದುಕಿಗೆ ನೀಡಿದ ಬಳುವಳಿ. ತುಂಬಾ ಹೊತ್ತು ಅದೇ ಚಳಿಯಲ್ಲಿ ಮೋಡಗಳನ್ನು ಸುತ್ತಲಿನ ಪ್ರಕೃತಿಯನ್ನು ದೂರದೂರದ ಬೆಟ್ಟ ಗುಡ್ಡಗಳನ್ನು ನೋಡುತ್ತಲೆ ಕಳೆದೆವು. ಹೊಟ್ಟೆ ಚುರುಗುಟ್ಟುತ್ತಿತ್ತು. ಇನ್ನು ಬಂದ ದಾರಿಯ ಎದೆಯ ಮೇಲೆ ಜಾರಿ ಕೆಳಗಿಳಿಯುವುದು ಬಾಕಿ ಇತ್ತು. ಮಂಜು ಮುಸುಕಿದ ಕಣಿವೆಯನ್ನು ತಣ್ಣಗೆ ನೋಡುತ್ತಾ ಸಣ್ಣಗೆ ಹೆಜ್ಜೆ ಕೆಳಮುಖ ಮಾಡಿ ಹೊರಟೆವು. ಈಗ ಪ್ರಕೃತಿ ಸ್ಪಷ್ಟವಾಗಿ ಕಾಣುತ್ತಿತ್ತು. ನಾವೆ ತಿಂದು ಎಸೆದ ಮೊಸಂಬಿ ಸಿಪ್ಪೆಗಳು ಈಗ ಎದುರಾಗುತ್ತಿದ್ದವು. ಮತ್ತದೆ ಇಕ್ಕೆಲಗಳಲ್ಲಿ ಇಳಿದು ಪಾಪಾಗ್ನಿ ಮಠದ ಪಾರ್ವತಿ ದೇವಾಲಯ ತಲುಪಿದಾಗ ಬೆಳಗಿನ ೧೦ ಗಂಟೆಯ ಆಸುಪಾಸು. ಅಲ್ಲಿಂದ ತಿಂಡಿ ತಿಂದು ಬೆಂಗಳೂರಿನ ಕದ ತಟ್ಟಿ ಒಳಗಾದಾಗ ಜೋರು ಮಳೆ ಬರಮಾಡಿಕೊಂಡಿತು.

ಮೌನೇಶ ಕನಸುಗಾರ
mouneshkanasugara01@gmail.com

ಈ ಅಂಕಣದ ಹಿಂದಿನ ಬರೆಹಗಳು:
ರಾಷ್ಟ್ರಕೂಟರ ರಾಜಧಾನಿಯಲ್ಲಿ ಇತಿಹಾಸವನ್ನು ನೆನೆಯುತ್ತ…
ಜಟಿಲ ಕಾನನದ ಕುಟಿಲ ಪಥಗಳಲಿ…
ಕಡಲ ಕಿನಾರೆಯ ಸಡಗರದ ಚಿತ್ರಗಳು
ಮೌನಕಣಿವೆಯ ದಟ್ಟ ಕಾನನದೊಳಗೆ...
ಸಾವನದುರ್ಗದ ನೆತ್ತಿಯ ಮೇಲೆ…
ಕುಮಾರಪರ್ವತದ ಚಾರಣ
ವಿಭೂತಿ ಜಲಪಾತದ ವೈಭವ
ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದು…
ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...