ಸೋಂಕುಗಳ ಕಾಲ

Date: 25-09-2020

Location: ಬೆಂಗಳೂರು


ಕನ್ನಡ ಪ್ರಾಧ್ಯಾಪಕಿ ಹಾಗೂ ವಿಮರ್ಶಕರಾಗಿರುವ ಡಾ.ಎಂ.ಎಸ್‌. ಆಶಾದೇವಿ ಅವರು ಬರೆಯುವ ’ನೇಯ್ಗೆ’ ಅಂಕಣದಲ್ಲಿ ಮಹಿಳೆ- ಬದುಕು- ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳನ್ನು ಚರ್ಚಿಸಲಿದ್ದಾರೆ. ಈ ಬರೆಹದಲ್ಲಿ ಅವರು ಗಂಡು ಮತ್ತು ಹೆಣ್ಣಿನ ಸಂದರ್ಭದಲ್ಲಿ ಗಂಡಿಗೆ ಅರಿವು ಸೋಂಕಬೇಕಾದ್ದು ಈ ಹೊತ್ತಿನ ಅತ್ಯಗತ್ಯ ಸಂಗತಿಯಾಗಿದೆ. ಕೊರೊನಾ ಗೆಲ್ಲಬಹುದು ಆದರೆ ಅರಿವಿನ ಕೊರತೆಯನ್ನು ಗೆಲ್ಲುವುದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.

ನೀಲಮ್ಮನ ’ಅರಿವು ಸೋಕಿದ ಬಳಿಕ’ ಎನ್ನುವ ಮಾತು ನನಗೆ ಬಲು ಪ್ರಿಯವಾದುದು. ಹೆಣ್ಣಿನ ಮಟ್ಟಿಗಂತೂ; ’ಅರಿವು ಸೋಂಕುವುದು" ಎನ್ನುವುದಕ್ಕೆ ಅನೇಕ ಅರ್ಥಗಳು ಧ್ವನಿಗಳು ತಾವಾಗಿ ಹೊರಡುತ್ತವೆ. ಹೆಣ್ಣಿನ ಮಟ್ಟಿಗೆ ಅರಿವು ಎಂದರೆ ಏನೆಲ್ಲಾ.. ತನ್ನ ತಾನರಿವುದು, ಲೋಕವನರಿವುದು, ಲೋಕ ತನ್ನ ಅರಿಯುವ ಬಗೆಯನ್ನು ಅರಿಯುವುದು, ಯಾವ ಅರಿವು ಹೆಣ್ಣಿಗೆ ಬೇಕಿಲ್ಲ ಎಂದು ಲೋಕ ಪರಿಭಾವಿಸುತ್ತದೆಯೋ ಅದನ್ನು ಅರಿಯುವುದು, ಯಾವುದನ್ನು ತಾನು ಅರಿವು ಎಂದು ಈ ತನಕ ತಿಳಿದುಕೊಂಡಿದ್ದೇನೆಯೋ ಅದನ್ನು ಶೋಧಕ್ಕೆ ಒಡ್ಡಿದಾಗ ಹುಟ್ಟುವ ಹೊಸ ಅರಿವು..

ಸೋಂಕು ಎನ್ನುವ ಪದವೇ ಪದ ಪದಾರ್ಥಗಳ ನಡುವಿನ ಜೀವಂತ ಸಂಬಂಧದ ಕೊಂಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸೋಂಕಿದ ಬಳಿಕ ಎನ್ನುವ ಮಾತಿನಲ್ಲಿ ನೀಲಮ್ಮ , ಹೆಣ್ಣಿನಲ್ಲಾಗುವ ವ್ಯತ್ಯಾಸವನ್ನೆಲ್ಲ ತುಂಬಿ ಬಿಟ್ಟಿದ್ದಾಳೆ. ಬಳಿಕ, ಯಾವುದೂ ಮುಂಚಿನಂತಿರಲಾರದು , ಕೊನೆಯ ಪಕ್ಷ ತನ್ನಲ್ಲಿಯಂತೂ ಎಲ್ಲವೂ ಬದಲಾಗಿಯೇ ತೀರುತ್ತದೆ ಎನ್ನುವುದನ್ನು ಹೇಳುತ್ತಿದ್ದಾಳೆ. ಪಲ್ಲಟವೊಂದು ಅದೆಷ್ಟು ನಿಶಬ್ದವಾಗಿರುತ್ತದೆ ಎನ್ನುವುದನ್ನು ನೀಲಮ್ಮ ಹೇಳಲು ಹವಣಿಸುತ್ತಿದ್ದಾಳೆ ಅನ್ನಿಸುತ್ತದೆ. ಮತ್ತು ಅದು ಕೇವಲ ಬೌದ್ಧಿಕವಾದುದಲ್ಲ ಎನ್ನುವ ನಿರ್ಣಾಯಕ ಅಂಶವನ್ನೂ ಇಲ್ಲಿ ಆಕೆ ಮುನ್ನೆಲೆಗೆ ತರುತ್ತಿದ್ದಾಳೆ. ಯಾವುದನ್ನು ಮನಸ್ಸು ಒಪ್ಪದೋ, ಯಾವುದು ನನ್ನ ಆತ್ಮದೊಳಗಿನಿಂದ ಬರಲಾರದೋ. ಯಾವುದು ನನ್ನ ವ್ಯಕ್ತಿತ್ವವನ್ನು ಇಡಿಯಾಗಿ ಸ್ಪರ್ಶಿಸಿ, ನನ್ನ ಇರವು ಅರಿವುಗಳನ್ನೆಲ್ಲ ಮುಂಚಿನದರ ಕುರುಹೇ ಇಲ್ಲದಂತೆ ರೂಪಾಂತರಿಸಿ ಬಿಡುತ್ತದೋ ಅದು ಮಾತ್ರ , ಅದು ಮಾತ್ರವೇ ನಿಜವಾದ ಪಲ್ಲಟ. ಅದು ಕೇವಲ ನನ್ನ ಆಲೋಚನೆಯಾಗಿ, ವಿಚಾರವಾಗಿ, ತಾತ್ವಿಕ ನೆಲೆಯಾಗಿ ಮಾತ್ರ ಇರುವುದಾದರೆ, ಅದು ನನ್ನದಾಗಲಾರದು. ಅದು ನನ್ನಿಂದ ದೂರದಲ್ಲಿ ನಿಂತಿರುವ ವೈಚಾರಿಕ ಆಕೃತಿ ಮಾತ್ರ. ಅದು ನನ್ನ ಸಂವೇದನೆಯ, ಭಾವಕೋಶದ ಒಂದು ಅಂಶವಾದರೆ ಮಾತ್ರ ಅದು ನನ್ನದು. ಅದು ನನ್ನನ್ನು ತಾಕಬೇಕು, ತಾಕಿದ್ದು ಮಾತ್ರ ನನ್ನೊಳಗೆ ಇಳಿದು ನನ್ನ ರಸ ಗಂಧಗಳನ್ನು ಬದಲಿಸಿ, ಅಂತಿಮವಾಗಿ ನನ್ನನ್ನೇ ಬದಲಿಸಿಬಿಡುತ್ತದೆ.

ಇದನ್ನೇ ಹೆಣ್ಣಿನ ಸ್ಥಿತಿಗತಿಯ ಸಂದರ್ಭದಲ್ಲಿಟ್ಟು ಪರಿಶೀಲಿಸೋಣ. ಶಿಕ್ಷಣ, ಉದ್ಯೋಗ , ಆರ್ಥಿಕತೆ ಈ ಎಲ್ಲದರ ಮೂಲಕ ವ್ಯವಸ್ಥೆ ಮತ್ತು ಹೆಣ್ಣು ಇಬ್ಬರೂ ನಿರಂತರವಾಗಿ ಪ್ರಯತ್ನಿಸುತ್ತಿರುವಾಗಲೂ ಯಾಕೆ ನಿರೀಕ್ಷಿತ ಫಲಿತಗಳು ಬರುತ್ತಿಲ್ಲ? ಈ ಕಾಲಾತೀತವಾದ ಪ್ರಶ್ನೆಗೆ ಸರಳವಾದ ಆದರೆ ಕಟು ವಾಸ್ತವದ ಉತ್ತರ ನೀಲಮ್ಮನ ಈ ಮಾತಿನಲ್ಲಿದೆ. ಬಹುತೇಕ ಸಂದರ್ಭಗಳಲ್ಲಿ ಹೆಣ್ಣನ್ನು ಕುರಿತಂತೆ ಬದಲಾಗಬೇಕಾದ್ದು ಅಪೇಕ್ಷಣೀಯ ಸಂಗತಿ ಎಂದೋ, ರಾಜಕೀಯವಾಗಿ ಸರಿಯಾದ ಹೆಜ್ಜೆಯೆಂದೋ, ಪ್ರಗತಿ ಪರ ಸಮಾಜದ ಲಕ್ಷಣ ಎನ್ನುವ ಸಾಮಾಜಿಕ ಕಾರಣಕ್ಕಾಗಿಯೋ ನಾವು ಅದರ ಪರವಾಗಿರಬೇಕು ಎಂದು ಯೋಚಿಸುತ್ತೇವೆಯೇ ಹೊರತು ಅದರ ಬಗ್ಗೆ ನಮಗೆ ನಿತಾಂತವಾದ ಪ್ರೀತಿ ಇದೆಯೆಂದಲ್ಲ. ಎಂದರೆ , ಅದು ಅಂತರಂಗದ್ದಲ್ಲ ಕೇವಲ ಬಹಿರಂಗದ್ದು. ಕೇವಲ ಬಹಿರಂಗವಾಗಿ ಬದಲಾಗುವುದು ಕೃತಕ, ತಾತ್ಕಾಲಿಕ ಮತ್ತು ತೋರಿಕೆಯದ್ದು ಮಾತ್ರ. ಅದು ಪರಿಸ್ಥಿತಿಯನ್ನು ಇನ್ನೂ ಸಂಕೀರ್ಣಗೊಳಿಸುತ್ತದೆಯೇ ಹೊರತು ಉತ್ತಮ ಪಡಿಸಲಾರದು. ಹೆಣ್ಣಿನ ವಿಷಯದಲ್ಲಿ ಇದು ಇನ್ನೂ ಸಂಕಷ್ಟಗಳನ್ನು ತಂದೊಡ್ಡಿರುವಂತೆಯೂ ಭಾಸವಾಗುತ್ತಿದೆ.

ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನಂತರ ರೇಖೆಗಳಲ್ಲಿಯೇ ಸಾಗುತ್ತಿರುವಂತೆ ಕಾಣಿಸುತ್ತಿದೆಯಲ್ಲವೆ? ಬಹುತೇಕ ಹೆಣ್ಣು ಮಕ್ಕಳಿಗೆ ’ಅರಿವು ಸೋಂಕಿದೆ’. ಆದ್ದರಿಂದಲೇ ಆ ಅರಿವಿನ ಹೆಣ್ಣು ಗಂಡಿಗೆ ಇನ್ನೂ ದೊಡ್ಡ ಸವಾಲಾಗಿ ಕಾಣಿಸುತ್ತಿದ್ದಾಳೆ.ಬಹಿರಂಗವಾಗಿ ಬದಲಾದಂತೆ ನಟಿಸುತ್ತಿರುವ ಪುರುಷರು ಮತ್ತು ಪಿತೃಸಂಸ್ಕೃತಿಯ ಮನಸ್ಸುಗಳಿಗೆ ಅಂತರಂಗದಲ್ಲಿ ಹೆಣ್ಣನ್ನು ಹೇಗೆ ಅಧೀನ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕು ಎನ್ನುವುದೇ ಮೂಲ ಗುರಿಯಾಗಿರುತ್ತದೆ. ಆದ್ದರಿಂದಲೇ ಹೆಣ್ಣಿನ ದೇಹವನ್ನೇ ಆಕ್ರಮಣದ ಗುರಿಯಾಗಿಸಿಕೊಳ್ಳುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಹೆಣ್ಣಿನ ದೇಹದ ಮೇಲೆ ಆಕ್ರಮಣಗಳಾದಾಗ ಅವಳ ಬಗ್ಗೆ ಬಹಳವೆಂದರೆ ಅನುಕಂಪದ ಮಾತುಗಳು ಕೇಳಿ ಬರುತ್ತವೆಯೇ ಹೊರತು , ಅದರ ನೈತಿಕ ಹೊಣೆಯನ್ನು ತಾವು ಹೊರಬೇಕು ಎನ್ನುವ ಕರ್ತವ್ಯ ಪ್ರಜ್ಞೆ ಅಥವಾ ನೈತಿಕ ನೆಲೆಯಲ್ಲಿ ಅಲ್ಲವೇ ಅಲ್ಲ. ಅವರ ಮಾತು ನಡವಳಿಕೆ ಎಲ್ಲದರಲ್ಲೂ ಅವರಿಗೇ ಗೊತ್ತಿಲ್ಲದಂತೆ , ಹೆಣ್ಣನ್ನೇ ತಪ್ಪಿತಸ್ಥ ಜಾಗದಲ್ಲಿ ನಿಲ್ಲಿಸುವ ಪ್ರಯತ್ನಗಳೂ ನಡೆಯುತ್ತಿರುತ್ತವೆ. ಇಂಥ ಸನ್ನಿವೇಶಗಳಲ್ಲಿ ಅರಿವು ಸೋಂಕಿರುವ ಹೆಣ್ಣು ಮಕ್ಕಳಿಗೆ ಜಿಗುಪ್ಸೆ, ವ್ಯಗ್ರತೆ, ಸಿನಿಕತನಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಇದರರ್ಥ ಅವಳು ನಿರಾಶಾವಾದಿಯೋ ಅಸಹಾಯಕಳೋ ಆಗುತ್ತಾಳೆಂದಲ್ಲ. ಆದರೆ, ನಿಧಾನವಾಗಿ ಅವಳಿಗೆ ವ್ಯವಸ್ಥೆ ಬದಲಾಗಬಹುದು ಎನ್ನುವುದರ ಬಗ್ಗೆ ನಂಬಿಕೆ ಕುಸಿಯುತ್ತಾ ಹೋಗುತ್ತದೆ. ಇದು ಗಂಡು ಮತ್ತು ಹೆಣ್ಣಿನ ಸಂಘರ್ಷವನ್ನು ಇನ್ನೂ ಹೆಚ್ಚಿಸುತ್ತಾ ಹೋಗುತ್ತದೆ. ಇದರ ಮೂಲ ಹೆಣ್ಣಿನ ಬಗೆಗಿನ ’ಅರಿವು’ ಗಂಡಿಗೆ ಸೋಂಕಿಲ್ಲ ಎನ್ನುವುದು.

ಹೆಣ್ಣನ್ನು ಕುರಿತ ಅರಿವು ಗಂಡಿಗೆ ಯಾಕಾಗಿ ಸೋಂಕುತ್ತಿಲ್ಲ? ಇದರ ಮೂಲ ಕಾರಣ ಗಂಡಿಗೆ ಹೆಣ್ಣನ್ನು ಕುರಿತಂತೆ ಅರಿವಿನ ಅಗತ್ಯವಿದೆ ಎನ್ನುವ ನಂಬಿಕೆ ಇನ್ನೂ ಬೆಳೆದಿಲ್ಲ. ಸೋಂಕು ಎನ್ನುವ ಪದ ಕೊರೊನಾದ ಸಮಯದಲ್ಲಿ ಅತ್ಯಂತ ಭೀಕರವಾದ ಅರ್ಥವ್ಯಾಪ್ತಿಯನ್ನು ಪಡೆದಿದೆ. ಆದರೆ, ಗಂಡು ಮತ್ತು ಹೆಣ್ಣಿನ ಸಂದರ್ಭದಲ್ಲಿ ಗಂಡಿಗೆ ಅರಿವು ಸೋಂಕಬೇಕಾದ್ದು ಈ ಹೊತ್ತಿನ ಅತ್ಯಗತ್ಯ ಸಂಗತಿಯಾಗಿದೆ. ಕೊರೊನಾ ಗೆಲ್ಲಬಹುದು ಆದರೆ ಅರಿವಿನ ಕೊರತೆಯನ್ನು ಗೆಲ್ಲುವುದು ಹೇಗೆ? ಮನುಷ್ಯ ಲೋಕವನ್ನೇ ಹಿಂದೆಂದೂ ಇಲ್ಲದಂತೆ ತನ್ನನು ತಾನು ಆತ್ಮ ವಿಮರ್ಶೆಗೆ ಒಡ್ಡಿದೆ. ಈ ಆತ್ಮ ವಿಮರ್ಶೆಯ ಘಳಿಗೆಯಲ್ಲಿ ಇದೂ ಸಾಧ್ಯವಾಗಲಿ ಎನ್ನುವುದು ಹೆಣ್ಣಿನ ಎಂದಿನ ಬೇಡಿಕೆ.

ಈ ಅಂಕಣದ ಹಿಂದಿನ ಬರೆಹ

ಕೊಂಡ ಹಾಯುವವಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...