‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳುನುಡಿ’ಯಾದಾಗ…!

Date: 15-04-2021

Location: ಬೆಂಗಳೂರು


ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ್ತಿದ್ದಾರೆ ಎನ್ನುತ್ತಾರೆ ಲೇಖಕ ರಂಗನಾಥ ಕಂಟನಕುಂಟೆ. ತಮ್ಮ ‘ಮಾತಿನ ಮರೆ’ ಅಂಕಣದಲ್ಲಿ ವಚನಗಳನ್ನು ಉಲ್ಲೇಖಿಸುತ್ತಾ, ಧರ್ಮ ರಾಜಕಾರಣ ಮತ್ತು ಸ್ವಾಮೀಜಿಗಳ ಜಾತಿ ಪ್ರೀತಿಯ ಕುರಿತು ವಿಶ್ಲೇಷಿಸಿದ್ದಾರೆ.

ಸ್ವಾಮೀಜಿಗಳ ಲಯಗೆಟ್ಟ ನಡೆನುಡಿ ಮತ್ತು ಅರಿವಿನ ಅವಸಾನ
ಹೊರವೇಶದ ವಿಭೂತಿ ರುದ್ರಾಕ್ಶಿನಳವಡಿಸಿಕೊಂಡು
ವೇದಶಾಸ್ತ್ರ ಪುರಾಣ ಪುರಾತನರ ವಚನದ ಬಹುಪಾಠಕರು
ಅನ್ನದಾನ ಹೊನ್ನದಾನ ವಸ್ತ್ರದಾನವನೀವನ ಬಾಗಿಲ ಮುಂದೆ

ಮಣ್ಣಪುತ್ತಳಿಯಂತಹವರು ನಿತ್ಯನೇಮದ ಹಿರಿಯರು
ಆ ಎಲ್ಲಾ ಅರಿವುಳ್ಳವರು ಲಕ್ಶ್ಮಿಯ ದ್ವಾರಪಾಲಕರು
ಅರಿವಿಂಗೆ ಇದು ವಿಧಿಯೇ?

- ಚನ್ನಬಸವಣ್ಣ

ಕಳೆದ ಕೆಲವು ತಿಂಗಳುಗಳ ಹಿಂದೆ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ‘ರಾಶ್ಟ್ರಧ್ವಜ ಸುಟ್ಟವರನ್ನು ರೈತರು ಎನ್ನಬೇಕೆ? ರೈತರು ಹೊಲಗಳಲ್ಲಿ ದುಡಿಯುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿಲ್ಲ. ಖಲಿಸ್ತಾನ್ ಪರ ಮತ್ತು ವಿದೇಶದ ಪರವಾಗಿ ಘೋಶಣೆ ಕೂಗುವವರು ರೈತರಲ್ಲ’ ಎಂದಿದ್ದರು. (ಪ್ರಜಾವಾಣಿ ವರದಿ, ಫೆಬ್ರವರಿ 6, 2021) ಹಾಗೆಯೇ ಮತ್ತೊಂದು ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗೆಗೆ ಮಾತನಾಡುತ್ತ ಅವರ ‘ದೇಶಭಕ್ತಿ ಬಗೆಗೆ ಅನುಮಾನವಿದೆ’ ಎಂದಿದ್ದರು. ಅವರ ಈ ಮಾತುಗಳು ಧಾರ್ಮಿಕ ವಿಚಾರಗಳೋ? ಇಲ್ಲವೇ ರಾಜಕೀಯ ವಿಚಾರಗಳೋ? ಎಂಬ ಪ್ರಶ್ನೆ ಹುಟ್ಟಿಸುತ್ತವೆ. ಹಾಗೆಯೇ ಇದೇ ‘ಸ್ವಾಮೀಜಿ’ ತೀರ ಇತ್ತೀಚೆಗೆ ಬ್ರಾಹ್ಮಣ ಹೆಣ್ಣು ಮಕ್ಕಳು ಬೇರೆ ಜಾತಿಯ ಮತ್ತು ಧರ್ಮಗಳ ಹುಡುಗರನ್ನು ಮದುವೆಯಾಗದಂತೆ ತಡೆಯಲು ಮಾತೃಮಂಡಳಿಗಳನ್ನು ಸ್ಥಾಪಿಸುವ ಮಾತಾಡಿದ್ದಾರೆ. ಈ ಮಾತಂತೂ ದೇಶದ ಪ್ರತಿಯೊಬ್ಬ ಪ್ರೌಢ ಪ್ರಜೆಗೆ ಸಂವಿಧಾನ ನೀಡಿರುವ ‘ವ್ಯಕ್ತಿ ಸ್ವಾತಂತ್ರ್ಯ’ವನ್ನೇ ಪ್ರಶ್ನೆ ಮಾಡುತ್ತದೆ. ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇಂತಹ ಎಷ್ಟೋ ಮಾತುಗಳನ್ನು ಈ ಸ್ವಾಮೀಜಿ ಆಡುತ್ತಲೇ ಬರುತ್ತಿದ್ದಾರೆ. ಅವರು ‘ಸ್ವಾಮೀಜಿ’ಯಾಗಿ ರಾಜಕಾರಣಿಯಂತೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿರುತ್ತಾರೆ. ಇವರ ಗುರು ವಿಶ್ವೇಶ್ವರ ತೀರ್ಥರೂ ಕೂಡ ಹೀಗೆಯೇ ಮಾತನಾಡುತ್ತಲೇ ಇದ್ದರು. ಅನೇಕ ವಿಚಾರಗಳಿಗೆ ರಾಜಕಾರಣಿಗಳಿಗೆ ಮೊದಲು ಸ್ವಾಮೀಜಿಗಳು ಪ್ರಕಿಕ್ರಿಯಿಸುತ್ತಾರೆ. ಅಲ್ಲದೆ ರಾಜಕೀಯ ಪಕ್ಷದ ಅಜೆಂಡಾಗಳನ್ನು ಮೈಮೇಲೆಳೆದುಕೊಂಡು ಅದರ ವಕ್ತಾರರಂತೆ ಮಾತನಾಡುವುದು ಅಚ್ಚರಿಯ ಸಂಗತಿ.

ಇವರ ನಂತರದಲ್ಲಿ ಕುರುಬ, ಪಂಚಮಸಾಲಿ ಮುಂತಾದ ಜಾತಿಗಳ ಸ್ವಾಮೀಜಿಗಳು ತಮ್ಮ ತಮ್ಮ ಜಾತಿಗಳ ಜನರನ್ನು ಸಂಘಟಿಸಿಕೊಂಡು ಬೆಂಗಳೂರು ನಗರದಲ್ಲಿ ಬಲಪ್ರದರ್ಶನ ನೀಡಿದರು. ಹಾಗೆ ಬಲಪ್ರದರ್ಶನ ಮಾಡಿದವರ ನಾಲಿಗೆಗಳೂ ಕೂಡ ಯಾವುದೇ ನಿಯಂತ್ರಣವಿಲ್ಲದೆ ನುಲಿದವು. ಯಾವುದೇ ಉದಾತ್ತ ತತ್ವಗಳ ಪರವಾಗಿ ದನಿಯೆತ್ತದೆ ತಮ್ಮ ತಮ್ಮ ಜಾತಿಗಳ ಸ್ವಾರ್ಥಿ ಜನರ ಹಿತಕ್ಕಾಗಿ ಬೀದಿಗಿಳಿದರು. ಸದ್ಯದ ಮೀಸಲಾತಿ ಪದ್ದತಿಯನ್ನು ಪರಿಶ್ಕರಿಸಲು ಇರುವ ಸಾಂವಿಧಾನಿಕ ತೊಡಕುಗಳನ್ನು ಮರೆಮಾಚಿದರು. ತಮ್ಮ ಬಲಪ್ರದರ್ಶನ ಮಾಡಿ ಇರುವ ಮೀಸಲಾತಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೆಲಸ ಮಾಡಿದರು. ಮೀಸಲಾತಿ ಬದಲಾವಣೆಗೆ ಪಾದಯಾತ್ರೆ ಮಾಡಿದ ಸ್ವಾಮೀಜಿಗಳು ಸಮಾಜದಲ್ಲಿರುವ ಜಾತೀಯತೆ, ಧಾರ್ಮಿಕ ಸಂಘರ್ಶ, ಕೋಮುವಾದ ಹಾಗೂ ಭ್ರಶ್ಟಾಚಾರ ವಿರೋಧಿ ಆಂದೋಲನ ನಡೆಸಿದ್ದರೆ ಅವರ ಸ್ವಾಮೀಜಿತನಕ್ಕೆ ಗೌರವ ದೊರೆಯುತ್ತಿತ್ತು. ‘ಧರ್ಮ’ದ ಘನತೆ ಮತ್ತು ಅರ್ಥವೂ ಹೆಚ್ಚುತ್ತಿತ್ತು. ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ ಹೆಗ್ಗಳಿಕೆ ಚರಿತ್ರೆಯಲ್ಲಿ ದಾಖಲಾಗುತ್ತಿತ್ತು. ಅದನ್ನು ಬಿಟ್ಟು ರಾಜಕಾರಣಿಗಳನ್ನು ಮುಂದಿಟ್ಟುಕೊಂಡು ‘ಹಿಂದುಳಿದ’ ಜನರ ಹೆಸರಿನಲ್ಲಿ ಪಾದಯಾತ್ರೆಗಳನ್ನು ಮಾಡುತ್ತ ಟಿಪಿಕಲ್ ರಾಜಕಾರಣಿಗಳಂತೆ ಮಾತನಾಡುವುದು; ಬೆದರಿಕೆ ಒಡ್ಡುವುದು, ಸ್ವಾಮೀಜಿಗಳ ಇಲ್ಲವೇ ಮಠಾಧಿಪತಿಗಳ ಘನತೆಯನ್ನು ಪಾತಾಳಕ್ಕೆ ತುಳಿದಿದೆ. ಇವರ ಹದ್ದುಮೀರಿದ ನಡತೆಗಳಿಂದ ಇಲ್ಲಿ ಮಾತು ಮಲಿನಗೊಂಡಿದೆ. ‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳುನುಡಿ’ಯಾಗಿ ಬದಲಾಗಿದೆ. ಸ್ವಾಮೀಜಿಗಳು ನಿಜವಾದ ವೈರಾಗಿಗಳಾಗಿ ವಿಶ್ವಮಾನವರಾಗಿ ಜೀವಿಸಿ ಸಂದೇಶ ನೀಡುವ ಬದಲು, ಅವರು ‘ಜಾತಿಶ್ರೀ’ಗಳಾಗಿ ಕುಬ್ಜರಾಗಿದ್ದಾರೆ. ತಮ್ಮ ಜಾತಿಮಠದ ಆಚೆಗೆ ಯೋಚನೆ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ‘ಜ್ಞಾನಯೋಗಿ’ಗಳಾಗುವ ಬದಲು ‘ಜಾತ್ಯಂಧ ಮಂಡೂಕ’ಗಳಾಗಿಯೇ ಉಳಿದಿದ್ದಾರೆ.

ಅಲ್ಲದೆ, ಈಚೆಗೆ ರಾಜಕೀಯ ನಾಯಕರಿಗಿಂತ ಹೆಚ್ಚು ಚರ್ಚೆಯಲ್ಲಿರುವವರು ಇದೇ ಸ್ವಾಮೀಜಿಗಳು. ಹೀಗೆ ಚರ್ಚೆಯಲ್ಲಿರುವ ಸ್ವಾಮೀಜಿಗಳು ಯಾವ ಮೌಲ್ಯಗಳ ಪರವಾಗಿ ಸುದ್ದಿಯಲ್ಲಿದ್ದಾರೆ? ತಮ್ಮ ಜಾತಿಗಳಿಗೆ ಮೀಸಲಾತಿ ಕೊಡಿಸುವುದು, ತಮ್ಮ ಜಾತಿಯ ರಾಜಕಾರಣಿಗೆ ಎಂಎಲ್‍ಎ ಸೀಟು ಕೊಡಿಸುವುದು, ಮಂತ್ರಿ ಮಾಡಿಸುವುದು, ಮುಖ್ಯಮಂತ್ರಿ ಮಾಡಿಸುವುದು, ತಮ್ಮ ಜಾತಿಗಳ ಭ್ರಶ್ಟ ರಾಜಕಾರಣಿ ಮತ್ತು ಅಧಿಕಾರಿಗಳನ್ನು ಕಾಪಾಡುವುದು, ಚುನಾವಣೆಯಲ್ಲಿ ಯಾವ ಪಕ್ಶಕ್ಕೆ ಮತ್ತು ನಾಯಕನಿಗೆ ಮತಹಾಕಿಸಬೇಕೆಂದು ನಿರ್ಧರಿಸುವ ವಿಚಾರಗಳಿಗೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಸ್ವಾಮೀಜಿಗಳು ‘ರಾಜಕಾರಣ’ದ ವಿಶಯಗಳನ್ನು ಕುರಿತು ಮಾತನಾಡಬಾರದು ಎಂದಲ್ಲ. ಆದರೆ ಒಟ್ಟು ಸಮಾಜದ ಎಲ್ಲ ಜನರನ್ನೂ ಒಳಗೊಂಡಂತೆ ನಿಶ್ಪಕ್ಶಪಾತತನದಿಂದ ಮತ್ತು ಉದಾತ್ತ ಭಾವನೆಯಿಂದ ಮಾತನಾಡುವ ಎಲ್ಲರನ್ನೂ ಒಳಗೊಳ್ಳುವ ಮಾತನಾಡುವ ಅಗತ್ಯವಿರುತ್ತದೆ. ಅದಿಲ್ಲದೆ ಯಾವುದೋ ಒಂದು ನಿರ್ದಿಶ್ಟ ರಾಜಕೀಯ ಪಕ್ಶದ, ಧರ್ಮದ, ಸಿದ್ಧಾಂತದ ವಕ್ತಾರರಂತೆ ಮಾತನಾಡುವುದು ‘ಸ್ವಾಮೀಜಿ’ತನಕ್ಕೆ ಕಳಂಕ ತರುತ್ತದೆ. ಅದರ ಉದಾತ್ತ ಸ್ವರೂಪವನ್ನು ನಾಶಮಾಡಿಬಿಡುತ್ತದೆ. ವಿವೇಕಾನಂದರಂತಹವರು ಸ್ವಾಮೀಜಿ ಪದಕ್ಕೆ ಅರ್ಥವನ್ನೂ ಗೌರವವನ್ನು ತಂದಿತ್ತವರು. ಆದರೆ ಇಂದಿನ ‘ಜಾತಿಶ್ರೀ’ ಸ್ವಜನ-ಸ್ವಜಾತಿ ಪಕ್ಶಪಾತಿ ಸ್ವಾಮೀಜಿಗಳು ಆ ತತ್ವದ ಅರ್ಥವನ್ನೇ ನಾಶ ಮಾಡುತ್ತಿದ್ದಾರೆ. ಅಲ್ಲದೆ ಸ್ವಾಮೀಜಿಗಳು ತಮ್ಮ ಸ್ವಾರ್ಥಕ್ಕೆ ಸಮಾಜದ ವಿಭಜನೆಯ ಕೆಲಸದಲ್ಲಿ ತೊಡಗಿದ್ದಾರೆ. ಇದು ಅಪಾಯಕಾರಿ ವಿದ್ಯಮಾನ.

ಮತ್ತೊಬ್ಬ ಸ್ವಾಮೀಜಿ ತಮ್ಮ ಜಾತಿಯ ಜನರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಇಂದು ಸಂಖ್ಯೆಯ ದೃಶ್ಟಿಯಿಂದಲೇ ಎಲ್ಲವನ್ನೂ ಲೆಕ್ಕ ಹಾಕುವ ಕಾರಣ ತಮ್ಮ ಜಾತಿ ಜನರ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ಹಾಗಾಗಿ ತಮ್ಮ ಜಾತಿಯ ಹೆಣ್ಣು ಮಕ್ಕಳು ಐದು ಮಕ್ಕಳನ್ನು ಹೆರುವಂತೆ ಕರೆ ನೀಡಿದ್ದಾರೆ. ಅಶ್ಟು ಮಕ್ಕಳನ್ನು ಸಾಕಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಮಕ್ಕಳನ್ನು ತಮ್ಮ ಮಠಕ್ಕೆ ನೀಡುವಂತೆಯೂ ಹೇಳಿದ್ದಾರೆ. ಇವರು ಹೆಣ್ಣನ್ನು ಮಕ್ಕಳು ಹೆರುವ ಯಂತ್ರವೆಂದೇ ಭಾವಿಸಿರುವುದು ತಿಳಿಯುತ್ತದೆ. ಅಲ್ಲದೆ ‘ಹೆಚ್ಚುವರಿ’ ಮಕ್ಕಳನ್ನು ತಮ್ಮ ಮಠದಲ್ಲಿ ಬಿಡಿ ಎನ್ನುವ ಮೂಲಕ ತಾಯಿಮಕ್ಕಳನ್ನು ವಿಭಜಿಸುವ ಮಾತನಾಡಿದ್ದಾರೆ. ಅವರಿಗೆ ತಾಯ್ತನದ ಪ್ರೀತಿ ಬಾಂಧವ್ಯಗಳ ಕನಿಶ್ಟ ಅರಿವೂ ಇಲ್ಲವೆನ್ನಿಸುತ್ತದೆ. ಮತ್ತೆ ಆ ಸ್ವಾಮೀಜಿ ತಾಯ್ತನವಿಲ್ಲದ ಅದೆಂತಹ ‘ಜ್ಞಾನ’ವನ್ನು ಜನರಿಗೆ ಬೋಧಿಸುತ್ತಿದ್ದಾರೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಸ್ವಾಮೀಜಿಯ ಈ ಹೇಳಿಕೆ ‘ಸ್ವಾಮೀಜಿ’ ಎಂಬ ಕಲ್ಪನೆಯನ್ನೇ ಅವಹೇಳನ ಮಾಡುತ್ತದೆ. ಇನ್ನು ಕೆಲವರು ಹೊಡಿ ಬಡಿ ಕಡಿವ ಮಾತುಗಳನ್ನೂ ಆಡಿದ್ದಾರೆ. ಅವರು ಅಶ್ಟರ ಮಟ್ಟಿಗೆ ಲಜ್ಜೆಗೇಡಿತನವನ್ನು ಅಜ್ಞಾನವನ್ನೂ ಪ್ರದರ್ಶಿಸಿದ್ದಾರೆ. ಸ್ವಾಮೀಜಿಗಳ ಇಂತಹ ಲಜ್ಜೆಗೇಡಿತನದ ವರ್ತನೆಗಳು ಕಳೆದ ಕೆಲವು ವರ್ಶಗಳಲ್ಲಿ ವಿಪರೀತ ಹೆಚ್ಚಿದೆ. ದುರಂತವೆಂದರೆ ಮಾಧ್ಯಮಗಳು ಇಂತಹ ಸುದ್ದಿಗಳಿಗೆ ಹೆಚ್ಚು ಆದ್ಯತೆ ನೀಡಿ ಪ್ರಕಟಿಸುತ್ತಿವೆ. ಮಾಧ್ಯಮಗಳ ತುಂಬ ಇವರ ನುಡಿಯೇ ತುಂಬಿಹೋಗಿ ಅವು ಜನರ ಮನಸ್ಸನ್ನು ಮಲಿನಗೊಳಿಸಿ ಚಿಂತನೆಯ ಕ್ರಮವನ್ನೇ ದಿಕ್ಕೆಡಿಸುತ್ತಿವೆ. ಸ್ವಾಮೀಜಿಗಳ ಮತ್ತು ರಾಜಕಾರಣಿಗಳಿಬ್ಬರು ಅಜ್ಞಾನದ ಮತ್ತು ಸುಳ್ಳುಗಳ ಭಾಶೆ ಇಡೀ ಸಮಾಜವನ್ನು ಮೌಢ್ಯದ ಕೂಪಕ್ಕೆ ತಳ್ಳುತ್ತಿವೆ. ಸ್ವಾಮೀಜಿಗಳು ಸ್ವತಃ ಜ್ಞಾನಿಗಳಾಗಿ ಜನರನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯಬೇಕು. ಆದರೆ ಈಗಿನ ಬಹುತೇಕ ಸ್ವಾಮೀಜಿಗಳು ತಾವೇ ಅಜ್ಞಾನಿಗಳಾಗಿ ಇಡೀ ಸಮಾಜವನ್ನು ಅಜ್ಞಾನದ ಕೂಪಕ್ಕೆ ತಳ್ಳುತ್ತಿದ್ದಾರೆ. ದುರಂತವೆಂದರೆ, ಸಾರ್ವಜನಿಕ ಜೀವನದಲ್ಲಿ ಎಂದಿಗಿಂತಲೂ ಇಂದು ಹೆಚ್ಚು ಕಿಮ್ಮತ್ತು ಸ್ವಾಮೀಜಿಗಳಿಗೆ ಬಂದುಬಿಟ್ಟಿದೆ. ಅವರೇ ಇಡೀ ಸಮಾಜವನ್ನು ಸರ್ಕಾರಗಳನ್ನು ನಿಯಂತ್ರಿಸುವ ಬಲಾಢ್ಯ ಶಕ್ತಿಗಳಾಗಿ ಬೆಳೆದುಬಿಟ್ಟಿದ್ದಾರೆ. ಆ ಮೂಲಕ ಧರ್ಮ ಮತ್ತು ಪ್ರಭುತ್ವಗಳು ಅಪವಿತ್ರ ಮೈತ್ರಿಮಾಡಿಕೊಂಡಿದ್ದು ಸಮಾಜವನ್ನು ವಿನಾಶದ ಹಾದಿಯಲ್ಲಿ ನಿಚ್ಚಳವಾಗಿ ಮುನ್ನಡೆಸುತ್ತಿವೆ.

ಆದರೆ ನಿಜವಾದ ಸ್ವಾಮೀಜಿಗಳು ಲೋಕದ ಎಲ್ಲ ಜೀವಿಗಳ, ಜನರ ಒಳಿತನ್ನು ಸಾರುವ ನಿಜವಾದ ಧರ್ಮದ ಪ್ರತಿನಿಧಿಗಳಾಗಿರಬೇಕಿತ್ತು. ಸರ್ವಧಮಗಳ ಸಮನ್ವಯ ಸಾರುವ ಸಂತರಾಗಬೇಕಿತ್ತು. ಬದಲಿಗೆ ಮೇಲೆ ಹೇಳಿದಂತೆ ಇಂದಿನ ಬಹುತೇಕ ಸ್ವಾಮೀಜಿಗಳು ಸಂಕುಚಿತವಾದ ವಿಭಜಕಗುಣವುಳ್ಳ ಪಕ್ಶಪಾತಿತನದ ವಿಚಾರಗಳ ಪ್ರತಿಪಾದಕರಾಗಿದ್ದಾರೆ. ಅವರು ಹೇಳುವುದೊಂದು ಮಾಡುವುದೊಂದು. ಉದಾಹರಣೆಗೆ ಉಡುಪಿ ಮಠಗಳ ಸ್ವಾಮೀಜಿಗಳು ದಲಿತಕೇರಿ ಪ್ರವೇಶ ಮಾಡಿ ಊಟ ಮಾಡುತ್ತಾರೆ. ಆದರೆ ತಮ್ಮ ಮಠಗಳಲ್ಲಿರುವ ಪಂಕ್ತಿಭೇದವನ್ನು ನಿಶೇಧಿಸುವುದಿಲ್ಲ. ಜಾತಿವ್ಯವಸ್ಥೆಯ ವಿರುದ್ಧ ನಿರಂತರವಾಗಿ ಕೆಲಸ ಮಾಡುವುದಿಲ್ಲ. ಕೇವಲ ತೋರಿಕೆಯ ಮಾತನಾಡುತ್ತ ಎಲ್ಲ ಬಗೆಯ ಅಸಮಾನತೆಯನ್ನು ಆಚರಿಸಲಾಗುತ್ತದೆ. ಅಂದರೆ ಯಾವುದೇ ಸ್ವಾಮೀಜಿಗಳ ನಡೆನುಡಿಗಳು ಒಂದಾಗಿರದೆ ಅವುಗಳ ನಡುವೆ ಬಿರುಕಿರುವುದು ಎದ್ದು ಕಾಣಿಸುವ ಅಂಶ. ಅವರು ಧರಿಸಿರುವ ಕಾವಿಬಟ್ಟೆ ಅವರನ್ನು ಸ್ವಾಮೀಜಿಯಂತೆ ತೋರಿಸುತ್ತವೆಯೇ ಹೊರತು ಅವರ ನಡೆನುಡಿಗಳಲ್ಲಿ ಸ್ವಾಮೀಜಿತನ ಕಾಣಿಸುವುದಿಲ್ಲ. ಅವರ ‘ಸ್ವಾಮೀಜಿತನ’ ಎನ್ನುವುದು ತೋರಿಕೆಯ ಸಂಗತಿಯಾಗಿದೆಯೇ ಹೊರತು ಅದು ಆಧ್ಯಾತ್ಮದ ಸಾಧನೆಯಾಗಿಲ್ಲ. ಆಧ್ಯಾತ್ಮ ಸಾಧಕರ ಮಾತು ಸದಾ ಪಾರದರ್ಶಕವಾಗಿರಲು ಬಯಸುತ್ತದೆ. ಆದರೆ ಇಂದಿನ ವೇಶಧಾರಿ ಸ್ವಾಮೀಜಿಗಳ ಮಾತು ಪಾರದರ್ಶಕವಾಗಿಲ್ಲ. ಬದಲಿಗೆ ಅದು ಮುಖವಾಡವಾಗಿದ್ದು ವಾಸ್ತವದಲ್ಲಿರುವ ಎಲ್ಲ ಅಸಮಾನತೆಯ ಸಿದ್ಧಾಂತಗಳನ್ನೇ ಮತ್ತಶ್ಟು ದೃಢಪಡಿಸುವ ಕೆಲಸ ಮಾಡುತ್ತಾರೆ. ಇದು ಈಚಿನ ಕೆಲವು ಉದಾಹರಣೆಗಳಶ್ಟೆ. ಇಂದಿನ ಎಲ್ಲ ಸ್ವಾಮೀಜಿಗಳ ನಡಾವಳಿಗಳನ್ನು ಪರಿಶೀಲಿಸಿದರೆ ಅವರ ಸ್ವಾಮೀಜಿತನ ‘ಲೊಳಲೊಟ್ಟೆ’ ಎಂಬುದು ಖಚಿತವಾಗುತ್ತದೆ.

ಹಾಗಾಗಿಯೇ ‘ಸ್ವಾಮೀಜಿ’ಗಳು ನಮ್ಮ ಪರಂಪರೆಯಲ್ಲಿ ನಿರಂತರವಾಗಿ ಟೀಕೆಗೆ ಗುರಿಯಾಗಿದ್ದಾರೆ. ಆದ್ಯ ವಚನಕಾರ ಜೇಡರ ದಾಸಿಮಯ್ಯ ತನ್ನ ವಚನದಲ್ಲಿ ನಕಲಿ ಭಕ್ತರನ್ನು ‘ಮಠದೊಳಗಣ ಬೆಕ್ಕುಗಳು’ ಎಂದು ಚೇಡಿಸಿದ್ದ. ಹಾಗೆಯೇ ‘ಹೊರವೇಶದ ವಿಭೂತಿ ರುದ್ರಾಕ್ಶಿಯ ಪೂಸಿದಡೇನು? ತೆರನರಿದು ಮರವೆಯ ಕಳೆದು ಮಾತಿನಂತೆ ನೀತಿಯುಳ್ಳಡೆ ಅವರನಜಾತರೆಂಬೆ’ ಎನ್ನುತ್ತಾನೆ. ಇಲ್ಲಿನ ಮಾತಿನಂತೆ ನೀತಿ ನಡತೆ ಇರಬೇಕಾದ ಅಗತ್ಯದ ಬಗೆಗೆ ಒತ್ತಿ ಹೇಳಿದ್ದಾನೆ. ಅಂದರೆ ನಡೆನುಡಿಗಳ ಒಂದಾಗಿರಬೇಕಾದುದು ಅತ್ಯಗತ್ಯ. ಮತ್ತೊಬ್ಬ ವಚನಕಾರ ಚನ್ನಬಸವಣ್ಣ ಕೂಡ ವೇಶಧಾರಿ ಭಕ್ತರನ್ನು, ಸ್ವಾಮೀಜಿಗಳನ್ನು ವಿಡಂಬಿಸಿದ್ದಾನೆ.

ಮಾತು ಕಲಿತು ಮಂಡೆಯ ಬೋಳಿಸಿಕೊಂಡಡೇನು?
ವೇಶಲಾಂಛನಧಾರಿ, ಉದರಪೋಶಕರಪ್ಪಲ್ಲದೆ
ಆಗಮಾಚಾರಿಯರಾಗಲಾರರು ಕಾಣಿರೇ
ಅನ್ಯರ ಬೋಸರಿಸಿ ತನ್ನ ಉದರ ಹೊರೆವ ವೇಶಡಂಭಕರ ಮೆಚ್ಚ
ನಮ್ಮ ಕೂಡಲಚೆನ್ನಸಂಗಮದೇವ

ಎನ್ನುತ್ತಾನೆ. ಚನ್ನಬಸವಣ್ಣನ ಈ ವಚನವು ನಕಲಿ ಶರಣರು, ಭಕ್ತರು, ಜಂಗಮರು, ಸ್ವಾಮೀಜಿಗಳು ಎಲ್ಲರನ್ನೂ ಛೇಡಿಸಿದ್ದಾನೆ. ನಡತೆಗೆಟ್ಟವರ ಪಥ ಉದರಪೋಶಣೆಯ ಮಾರ್ಗ ಮಾತ್ರ. ಇಂದಿನ ಸ್ವಾಮೀಜಿಗಳು ಕೂಡ ಉದರ ಪೋಶಣೆಯ ವೇಶಧಾರಿಗಳೇ ಆಗಿದ್ದಾರೆ. ಅವರು ಸಂಕೇತಗಳ ರೂಪದಲ್ಲಿ ಕಾಣಿಸುತ್ತಾರೆಯೇ ಹೊರತು ಅವರು ನಿಜವಾದ ಜ್ಞಾನಿಗಳಾಗಿ ಸಾಧಕರಾಗಿ ಕಾಣಿಸುವುದಿಲ್ಲ. ಕೆಲವರಂತು ಕಾವಿಧಾರಿ ಉದ್ಯಮಗಳಂತೆ, ರಾಜಕಾರಣಿಗಳಂತೆಯೇ ವರ್ತಿಸುತ್ತಿದ್ದಾರೆ. ಅವರಂತೂ ವೇಶಡಂಭಕರೇ ಆಗಿದ್ದಾರೆ.

ನಂತರದಲ್ಲಿ ಪುರಂದರ ದಾಸರು ತಮ್ಮ ‘ಉದರ ವೈರಾಗ್ಯವಿದು’ ಕೀರ್ತನೆಯಲ್ಲಿ ಈ ಕೆಳಗಿನಂತೆ ಟೀಕಿಸಿದ್ದಾರೆ.

ಕರದಲಿ ಜಪಮಣಿ ಬಾಯಲಿ ಮಂತ್ರವು
ಅರಿವೆಯ ಮುಸುಕನು ಮೋರೆಗೆ ಹಾಕಿ
ಪರಸತಿಯರ ಗುಣ ಮನದಲಿ ಸ್ಮರಿಸುತ
ಪರಮ ವೈರಾಗ್ಯಶಾಲಿ ಎಂದೆನಿಸುವುದು

ಎಂದು ಟೀಕಿಸಿದ್ದಾರೆ. ಇದೆಲ್ಲವೂ ನಕಲಿ ಭಕ್ತರನ್ನು ಸ್ವಾಮೀಜಿಗಳನ್ನು ಟೀಕಿಸಿರುವುದು ಎದ್ದು ಕಾಣಿಸುತ್ತದೆ. ಇವರಂತೆಯೇ ಸಂತಕವಿ ಕಬೀರ ಕೂಡ ಟೀಕಿಸಿದ್ದಾನೆ. ಕಬೀರ ‘ಅಸದ್ಗುರುವು ದೊಡ್ಡ ದೊಡ್ಡ ಮಾತುಗಳನ್ನು ಉಪದೇಶಿಸಿ ಜಗತ್ತನ್ನು ಮೋಸಗೊಳಿಸಿದನು. ಆದರೆ ತನ್ನ ಮನಸ್ಸಿಗೆ ತಿಳಿ ಹೇಳಲಿಲ್ಲ’ ಎನ್ನುತ್ತಾನೆ. ಹಾಗೆಯೇ ಮುಂದುವರಿದು ‘ಅಜ್ಞಾನಿ ಶಿಶ್ಯನಿಗೆ ಅಜ್ಞಾನಿ ಗುರು ದೊರೆತನು’ ಎಂದೂ ಕೂಡ ಕಬೀರ ಹೇಳುತ್ತಾನೆ. ಕಬೀರನ ಈ ಮಾತೂ ಕೂಡ ಸ್ವಾಮೀಜಿಗಳ ಮಾತು ಮೋಸದ ಮಾತಾಗಿರುವುದನ್ನು ಸೂಚಿಸುತ್ತದೆ.

ಇನ್ನೂ ಆಧುನಿಕ ಸಂದರ್ಭದಲ್ಲಿ ಅಂಬೇಡ್ಕರ್, ಪೆರಿಯಾರ್, ಕುವೆಂಪು ಮುಂತಾದವರು ಪ್ರಶ್ನಿಸುತ್ತಲೇ ಬಂದಿದ್ದಾರೆ. ಅಂದರೆ ನಕಲಿ ಸ್ವಾಮೀಜಿಗಳ ಇಲ್ಲವೇ ಪುರೋಹಿತಶಾಹಿಗಳ ವಿರುದ್ಧ ನಿರಂತರವಾಗಿ ವೈಚಾರಿಕ ಸಂಘರ್ಶವನ್ನು ಮುಂದುವರಿಸಿಕೊಂಡೇ ಬರಲಾಗುತ್ತಿದೆ. ಆ ಸಂಘರ್ಶವನ್ನು ಇಂದೂ ಕೂಡ ಮುಂದುವರಿಸಲಾಗಿದೆ.

ಇಂತಹ ಟೀಕೆಗೆ, ವಿಡಂಬನೆಗೆ ಪ್ರಮುಖ ಕಾರಣ ಮೇಲೆ ಹೇಳಿದಂತೆ ಸ್ವಾಮೀಜಿಗಳ ನಡೆ ಮತ್ತು ನುಡಿಯಲ್ಲಿ ಹೊಂದಾಣಿಕೆಯಿಲ್ಲ. ಅವರ ನಡತೆ ಕೆಟ್ಟಿರುವುದರಿಂದ ಅವರ ನುಡಿಗೆ ಬೆಲೆಯಿಲ್ಲವಾಗಿದೆ. ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎನ್ನುವಂತಾಗಿದೆ. ಸ್ವಾಮೀಜಿಗಳ ಬಗೆಗೆ ಜನರಿಗೆ ಭಯ, ಉನ್ನತ ಭಾವನೆಗಳು ಮತ್ತು ನಿರೀಕ್ಶೆಗಳು ಇರುತ್ತವೆ. ಆದರೆ ಅಂತಹ ನಿರೀಕ್ಶೆಗಳಿಗೆ ತಕ್ಕಂತೆ ಅವರು ವರ್ತಿಸುತ್ತಿಲ್ಲ. ತಮ್ಮ ತಮ್ಮ ಜಾತಿಯ ಹೆಸರನ್ನು ಬಳಸಿಕೊಂಡು ತಮ್ಮ ಮಠಗಳನ್ನು ಖಾಸಗಿ ಆಸ್ತಿಯಾಗಿಸಿ ಅದನ್ನು ನಿರ್ವಹಿಸುವ ಮ್ಯಾನೇಜರ್ ಗಳ ಹಂತಕ್ಕಿಂತ ಹೆಚ್ಚಿಗೆ ಯೋಚಿಸುವುದನ್ನೇ ಕೈಬಿಟ್ಟಿದ್ದಾರೆ. ಈಚೆಗಂತೂ ಇನ್ನೂ ಕೆಲವು ಸ್ವಾಮಿಗಳು ರಾಶ್ಟ್ರ ಮತ್ತು ಅಂತಾರಾಶ್ಟ್ರೀಯ ಮಟ್ಟದಲ್ಲಿ ತಮ್ಮ ವ್ಯಾಪಾರೀ ಯೋಜನೆಗಳಿಗಾಗಿ ಪ್ರಸಿದ್ದರಾಗಿದ್ದಾರೆ. ಇಲ್ಲವೇ ತಮ್ಮ ಮಠ ಆಶ್ರಮಗಳಿಗೆ ಉದ್ಯಮದ ರೂಪ ನೀಡಿದ್ದಾರೆ. ಅಲ್ಲಿ ‘ಪಾವತಿ ಮಾಡಿ ಬಳಸಿ’ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅವರು ಸಾಮರಸ್ಯದ ಧಾರ್ಮಿಕ ಭಾವನೆಗಳು, ಧರ್ಮನಿರಪೇಕ್ಶತೆಗಳನ್ನು ತ್ಯಜಿಸಿ ಪಕ್ಶಪಾತಿಗಳಾಗಿ ಮತೀಯವಾದಿಗಳಾಗಿ, ಜಾತಿವಾದಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಚ್ಚಾಡುವ ಜನರನ್ನು ಒಂದುಗೂಡಿಸುವ ಬದಲು ಮತ್ತಶ್ಟು ಕಚ್ಚಾಡುವಂತೆ ಪ್ರಚೋದನೆ ನೀಡುತ್ತಿದ್ದಾರೆ. ಹಾಗಾಗಿ ಸ್ವಾಮೀಜಿಗಳ ಮಹತ್ವ ಮಣ್ಣು ಪಾಲಾಗಿದೆ. ಇದು ಸಾಲದೆಂಬಂತೆ ಇಂದು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಅವರೇ ಅಧಿಕಾರದ ಗದ್ದುಗೆಯನ್ನೂ ಏರಿ ಆಡಳಿತ ನಡೆಸುತ್ತಿದ್ದಾರೆ. ಆ ಮೂಲಕ ದೇಶದ ಪ್ರಭುತ್ವ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಬದಲು, ಮತಾಂಧ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಅವರ ನಡೆನುಡಿಯಲ್ಲಿ ದಯೆ ಕರುಣೆ ಮಮತೆ ಮಾನವತೆಯ ಮಾತುಗಳು ವ್ಯಕ್ತಗೊಳ್ಳಲು ಹೇಗೆ ಸಾಧ್ಯ?

ನೈಜವಾದ ಧಾರ್ಮಿಕ ಮೌಲ್ಯಗಳಿಗೆ ಸ್ವಾಮೀಜಿಗಳು/ಮಠಾಧೀಶರು ಎಳ್ಳುನೀರು ಬಿಟ್ಟ ಪರಿಣಾಮವಾಗಿಯೇ ಮಠಗಳು ಜಾತಿಯ, ಸ್ವಾರ್ಥದ ಕೇಂದ್ರಗಳಾಗಿ ಬೆಳೆದಿವೆ. ಅವು ಮತ್ತೂ ಮುಂದುವರೆದು ಉದ್ಯಮ-ವ್ಯಾಪಾರಿ ಕೇಂದ್ರಗಳಾಗಿ ಬೆಳೆದು ಸಾರ್ವಜನಿಕ ಸಂಪತ್ತನ್ನು ದೋಚುವ ಕೆಲಸವನ್ನೂ ಮಾಡುತ್ತಿವೆ. ಹೀಗೆ ದೋಚುವುದಕ್ಕೆ ವಿವಿಧ ಮಠಗಳು ಮತ್ತು ಸ್ವಾಮೀಜಿಗಳ ನಡುವೆ ಸ್ಪಧೆಯೂ ಏರ್ಪಟ್ಟು ರಾಜಕೀಯವಾಗಿ ಪೈಪೋಟಿ ನಡೆಸುತ್ತಿವೆ. ಹಾಗಾಗಿಯೇ ಈಚಿನ ದಿನಗಳಲ್ಲಿ ಹಾದಿಬೀದಿಗಳಲ್ಲಿ ಸ್ವಾಮೀಜಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಕಾಣಿಸಿಕೊಳ್ಳುವ ಸ್ವಾಮೀಜಿಗಳು-ಮಠಾಧೀಶರು ಬಲಿಶ್ಟರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಇದರ ಪರಿಣಾಮವೆಂದರೆ, ತಮ್ಮ ಜಾತಿಕೂಪಗಳ ಬೇಲಿಯಾಚೆಗೆ ಯೋಚಿಸುವ ಆ ಮೂಲಕ ಇಡೀ ಸಮಾಜದ ಜೊತೆಗೆ ನಂಟು ಸಾಧಿಸಲು ಪ್ರಯತ್ನಿಸುತ್ತಿಲ್ಲ. ಇವರಿಗಿಂತ ರಾಜಕಾರಣಿಗಳೇ ತೋರಿಕೆಗಾದರೂ ಎಲ್ಲರನ್ನೂ ಒಳಗೊಳ್ಳುವ ನಾಟಕವಾಡುತ್ತಾರೆ. ಸ್ವಾಮೀಜಿಗಳಲ್ಲಿ ಅಂತಹ ನಾಟಕವೂ ಇಲ್ಲದೆ ತಮ್ಮ ಜಾತಿನಿಶ್ಟೆಯ ಮುಕ್ತಪ್ರದರ್ಶನ ಮಾಡುತ್ತಿದ್ದಾರೆ. ಸ್ವಾಮೀಜಿಗಳ ಇಂತಹ ವರ್ತನೆಯಿಂದ ಎಲ್ಲ ಧಾರ್ಮಿಕ ಸಂಸ್ಥೆಗಳು, ಮಠಗಳು, ಅವುಗಳ ಸಿದ್ಧಾಂತಗಳೇ ಪ್ರಶ್ನಾರ್ಹವಾಗಿಬಿಟ್ಟಿವೆ. ವಿವೇಕಾನಂದರಂತಹ ಕೆಲವು ಸನ್ಯಾಸಿಗಳು ಮಾತ್ರ ಅಪವಾದವಾಗಿ ಭಿನ್ನರಾಗಿ ಉಳಿಯುತ್ತಾರೆ. ಅವರು ಸ್ವಾಮೀಜಿಯಾಗಿಯೂ ತತ್ವಜ್ಞಾನಿಯಾಗಿಯೂ ಎಲ್ಲರನ್ನೂ ಒಳಗೊಳ್ಳುವವರಾಗಿದ್ದರು. ಹಾಗಾಗಿಯೇ ಅವರ ವಿಚಾರಗಳತ್ತ ಇಡೀ ಜಗತ್ತು ತಿರುಗಿ ನೋಡುವಂತಾಯಿತು. ಇಂದಿನ ಸ್ವಾಮೀಜಿಗಳ ನಡೆಯಿಂದ ಇಡೀ ಜಗತ್ತು ದೇಶದ ಬಗೆಗೆ ಅಸಹ್ಯಪಡುವಂತಾಗಿದೆ. ದುರಂತವೆಂದರೆ ವಿವೇಕಾನಂದ ಮತ್ತು ರಾಮಕೃಶ್ಣ ಪರಮಹಂಸರ ಪರಂಪರೆಯಲ್ಲಿ ಬಂದ ಹಲವು ಸ್ವಾಮೀಜಿಗಳು ಕೂಡ ಕೂಪಮಂಡೂಕಗಳಾಗಿಬಿಟ್ಟಿದ್ದಾರೆ. ಇವರು ವಿವೇಕಾನಂದರಂತಹ ಜ್ಞಾನಿಗಳಿಂದ ಏನನ್ನೂ ಕಲಿಯುವುದಿಲ್ಲ. ಬದಲಿಗೆ ಅವರಿಗೂ ಕಳಂಕ ತರುವ ಕೆಲಸ ಮಾಡುತ್ತಾರೆ. ಇದೇ ಇಂದಿನ ದೇಶದ ಒಟ್ಟು ಧಾರ್ಮಿಕ ಸಂಸ್ಥೆಗಳ, ಅದರ ಪ್ರತಿನಿಧಿಗಳ ಅವಸಾನದ ಸ್ಥಿತಿ.

ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕಿದೆ. ಅದೇನೆಂದರೆ, ಈ ‘ಜಾತಿಶ್ರೀಗಳು’ ತಮ್ಮ ತಮ್ಮ ಜಾತಿಯ ಬಡವರ ಏಳ್ಗೆಗಾದರೂ ಶ್ರಮಿಸುತ್ತಾರೆಯೇ? ಎಂದರೆ ಅದು ಇಲ್ಲ. ಆಯಾ ಜಾತಿಯ ಉಳ್ಳವರ ಮೇಲ್ವರ್ಗದ ಮತ್ತು ರಾಜಕೀಯ ನಾಯಕರ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಕಳೆದ ಶತಮಾನದಲ್ಲಿ ತಮ್ಮ ತಮ್ಮ ಸಮುದಾಯಗಳ ಮತ್ತು ಜನರ ಹಿತಕ್ಕೆ ನೆರವಾಗಲೆಂದು ಸಾರ್ವಜನಿಕರಿಂದ ದೇಣಿಗೆ ಪಡೆದು ಶಿಕ್ಶಣ ಸಂಸ್ಥೆಗಳನ್ನು ಆರಂಭಿಸಿದರು. ಇಂದು ಆ ಸಂಸ್ಥೆಗಳು ಸಮುದಾಯ ಮತ್ತು ಸಮಾಜದ ಸೇವೆಯನ್ನು ಮರೆತು ಶಿಕ್ಶಣವನ್ನು ಸರಕಾಗಿಸಿ ಉಳ್ಳವರಿಗೆ ಮಾರಾಟ ಮಾಡುತ್ತಿವೆ. ಬಹುತೇಕ ಮಠಗಳು ಈ ಕೆಲಸ ಮಾಡುತ್ತಿವೆ. ಅಂದರೆ ಸ್ವಾಮೀಜಿಗಳು ತಮ್ಮದೇ ಜಾತಿಯ ಬಡವರ ಪರವಾಗಿ ಕೆಲಸ ಮಾಡುವುದಕ್ಕೆ ಬದಲು ಆಯಾ ಜಾತಿಯ ಬಲಿಶ್ಟರ ಸೇವೆಯಲ್ಲಿ ನಿರತವಾಗಿವೆ. ಬಹುತೇಕ ಮಠಗಳು ಕನಿಶ್ಟ ತಮ್ಮ ಸಮುದಾಯಗಳ ಬಡವರ ಸೇವೆಯನ್ನು ಮರೆತಿವೆ. ಅಲ್ಲದೆ ನಿಸ್ವಾರ್ಥತೆ, ಕರುಣೆ, ದಯೆ ಅಹಿಂಸೆಯ ವಿಚಾರಗಳನ್ನೆಲ್ಲ ಪುಸ್ತಕಗಳಲ್ಲಿ ಬಂಧಿಸಿವೆ. ಇಂತಹ ನಡವಳಿಕೆಗಳ ವಿರುದ್ಧ ಒಳಬಂಡಾಯ ಮಾಡುವ ಸ್ವಾಮೀಜಿಗಳು ಮತ್ತು ಮಠಾಧೀಶರನ್ನೂ ಮೌನವಾಗಿಸಿ ನಾಶ ಮಾಡುವ ಕೆಲಸವನ್ನೂ ಇದೇ ಸಂದರ್ಭದಲ್ಲಿ ಮಾಡಲಾಗುತ್ತದೆ.

ಅಂದರೆ ಮಠಗಳ, ಪೀಠಗಳ ಮೂಲ ಚಹರೆಗಳೇ ಬದಲಾವಣೆಯಾಗಿರುವುದರಿಂದ ಅದರ ನೇತಾರರಾದ ಸ್ವಾಮೀಜಿಗಳು ಎಲ್ಲ ತೊರೆದ ‘ಸನ್ಯಾಸಿ’ಗಳು, ‘ವಿರಾಗಿ’ಗಳು’ ಆಗಿ ಉಳಿದಿಲ್ಲ. ಎಲ್ಲ ಬಗೆಯ ಲಾಲಸೆಗಳಿಂದ ಕೂಡಿರುವುದರಿಂದ ದೇಹದ ಭಾಶೆ ಮತ್ತು ಮೌಖಿಕ ಭಾಶೆಗಳು ಪಾರದರ್ಶಕವಾಗಿ ಉಳಿದಿಲ್ಲ. ಅಲ್ಲಿ ಎಲ್ಲವೂ ಮರೆಮಾತುಗಳೇ. ಜನಪರವಾದ ಚಿಂತನೆ ಮತ್ತು ನೈತಿಕತೆಗಳಿಂದ ಪ್ರಾಮಾಣಿಕವಾಗಿ ನಿಸ್ವಾರ್ಥವಾಗಿ ಕೆಲಸ ಮಾಡದಿದ್ದರೆ ಮಾತಿಗೆ ಬೆಲೆ ಬರುವುದಿಲ್ಲ. ಹಾಗಾಗಿಯೇ ಇಂದಿನ ಧಾರ್ಮಿಕ ಪ್ರತಿನಿಧಿಗಳ ಭಾಶೆ ‘ಮಾತಿನ ಮರೆ’ಯಾಗಿದ್ದು ಅದು ಪ್ರಶ್ನಾತೀತವಾಗಿ ಉಳಿದಿಲ್ಲ. ಇಂದು ಧಾರ್ಮಿಕ ಭಾಶೆ ಮಲಿನಗೊಂಡಿರುವುದರಿಂದ ಅದರಿಂದ ಪೋಶಣೆಗೊಳ್ಳುವ ‘ಭಕ್ತರು’ ಕೂಡ ಮಲಿನಗೊಂಡ ಚಿಂತನೆಗಳಿಂದಲೇ ಬೆಳೆದಿರುತ್ತಾರೆ. ಮತ್ತೆ ಅದಕ್ಕೆ ಧರ್ಮದ ಕವಚ ತೊಡಿಸಿರುವುದರಿಂದ ಅದನ್ನು ಪ್ರಶ್ನಾತೀತವೆಂದೂ ಭಾವಿಸುತ್ತಾರೆ. ಅಂದರೆ ವಂಚನೆ, ಅಜ್ಞಾನ ಮತ್ತು ಮೌಢ್ಯವನ್ನೇ ಧರ್ಮದ ಮೌಲ್ಯಗಳೆಂದು ಮಾನ್ಯಗೊಳಿಸಿರುವುದರಿಂದ ಅದನ್ನು ಯಾರೂ ಪ್ರಶ್ನಿಸಬಾರದೆಂಬ ವಾದವನ್ನೂ ಮುಂದಿಡಲಾಗುತ್ತಿದೆ. ಯಾರಾದರೂ ಅದನ್ನು ಪ್ರಶ್ನೆ ಮಾಡಿದರೆ ಅದನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವೆಂದೂ ಭಾವಿಸಿ ಶಿಕ್ಶಿಸಲು ಮುಂದಾಗುತ್ತಾರೆ. ಇದೇ ಇಂದಿನ ವಿದ್ಯಮಾನವಾಗಿದೆ.

ಹಾಗಾಗಿಯೇ ಬುದ್ಧ, ಶರಣರು, ತತ್ವಪದಕಾರರು ಶುದ್ಧಭಾಶೆಯ ಸಾಧನೆಯ ಬಗೆಗೆ ನಿರಂತರವಾಗಿ ಶ್ರಮಿಸಿದರು. ಅವರಿಗೆ ಒಂದು ಸಮಾಜವನ್ನು ಸುಧಾರಣೆ ಮಾಡುವ ಪ್ರಯತ್ನದಲ್ಲಿ ನುಡಿ ವಹಿಸುವ ಪಾತ್ರವನ್ನು ಚನ್ನಾಗಿ ಬಲ್ಲವರಾಗಿದ್ದರು. ಭಾಶೆ ಶುದ್ಧಗೊಳ್ಳುವುದೆಂದರೆ ಆ ಭಾಶೆಯನ್ನು ಬಳಸುವ ವ್ಯಕ್ತಿಗಳು ಅಂತರಂಗ ಬಹಿರಂಗಗಳಲ್ಲಿ ಶುದ್ಧಗೊಳ್ಳಬೇಕಿರುತ್ತದೆ. ಹಾಗಾಗಿಯೇ , ಅವರ ಭಾಶೆ ಇಂದಿಗೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅಲ್ಲಮನಂತಹ ಅನುಭಾವಿಗಳ ಕಬೀರನಂತಹ ಸಂತರ ನುಡಿಗಳು ಮನಸ್ಸನ್ನು ಅರಳಿಸುತ್ತವೆ. ಕಪಟವಿಲ್ಲದ ಭಾಶೆಗೆ ಮಾತ್ರ ಮನಸ್ಸನ್ನು ಅರಳಿಸುವ ಶಕ್ತಿಯಿರುತ್ತದೆ. ಯಾವುದೇ ವ್ಯಕ್ತಿಗಳು ಬಳಸುವ ಭಾಶೆಯಲ್ಲಿ ಕಪಟವಿದ್ದರೆ ಅದು ಯಾರನ್ನೂ ಸೆಳೆಯುವುದಿಲ್ಲ. ಅದು ಅರಿವು ವೈಚಾರಿಕತೆಯನ್ನೂ ಬೆಳೆಸುವುದಿಲ್ಲ. ಸಮಾಜವನ್ನು ಬೆಳಕಿನ ಕಡೆಗೆ ಕರೆದೊಯ್ಯುವುದಿಲ್ಲ. ಆದರೆ ಇಂದಿನ ಸ್ವಾಮೀಜಿಗಳ ನಡತೆ ಭಾಶೆಯೆಂಬ ಹೊಳೆಯಲ್ಲಿ ಇನ್ನಶ್ಟು ಕೊಳಕು ಹರಿಯುವಂತೆ ಮಾಡುತ್ತಿದೆ. ಇದು ಸಮಾಜವನ್ನು ನಿರಂತರವಾಗಿ ‘ಬುದ್ಧಿಮಾಲಿನ್ಯ’ದಲ್ಲಿ ನರಳುವಂತೆ ಮಾಡುತ್ತಿದೆ. ಇದು ನಮ್ಮ ಸಮಾಜವನ್ನು ಬಹಳ ದೀರ್ಘಕಾಲ ಅಜ್ಞಾನದಲ್ಲಿಡುತ್ತದೆ. ಇಂತಹ ಅಜ್ಞಾನದಿಂದ ಹೊರಬರದ ಹೊರತು ನಮ್ಮ ಸಮಾಜ, ದೇಶ ಉದ್ದಾರವಾಗುವುದಿಲ್ಲ. ಆದರೆ ಈ ಇಂದಿನ ಬೆಳವಣಿಗೆಗಳನ್ನು ಗಮನಿಸಿದರೆ ನಮ್ಮ ದೇಶ ಏಳ್ಗೆಯಾಗದಂತೆ ಸ್ವಾಮೀಜಿಗಳು-ರಾಜಕಾರಣಿಗಳು ಕೂಡಿ ದುಡಿಯುತ್ತಿದ್ದಾರೆ ಎನ್ನಿಸುತ್ತದೆ. ಅವರ ವಿಚಾರಗಳು ಮತ್ತು ನಡಾವಳಿಗಳು ಸಮಾಜ ಸಮಗ್ರ ಮುನ್ನಡೆಯ ಕಡೆಗಿಲ್ಲದೆ ಭೂತದ ಕಡೆಗೆ ಚಲಿಸುವಂತೆ ಮಾಡುತ್ತಿವೆ. ಇದರಿಂದ ಬಿಡುಗಡೆ ಪಡೆದು ದೇಶ ಭವಿಶ್ಯದ ಕಡೆಗೆ ಸಾಗಬೇಕಾದರೆ ಮಾಲಿನ್ಯವಿಲ್ಲದ ಭಾಶೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅದೇ ಇಂದಿನ ಅತ್ಯಂತ ಜರೂರಾದ ಕೆಲಸ. ಇದಕ್ಕೆ ಬುದ್ಧ ಮತ್ತು ಶರಣರು ದಾರಿದೀಪಗಳು.

ಈ ಅಂಕಣದ ಹಿಂದಿನ ಬರೆಹಗಳು:
ಭಾಶಾಹೀನರ ಸಂಗ ಅಭಿಮಾನ ಭಂಗ

ಮುಸುಕು ನುಡಿ ಮತ್ತು ಆಹಾರದಲ್ಲಿ ಹಾಲಾಹಲ

ಸುಳ್ಳಿನ ಕೈಗಾರಿಕೆಗಳಲ್ಲಿ ಅರಿವಿನ ಹತ್ಯೆ

ಟ್ರಂಪಣ್ಣನ ಅಮೆರಿಕದಲ್ಲಿ ಸುಳ್ಳುಗಳ ಸುನಾಮಿ!

ಕೇಳ್ವಿಯೆಂಬ ಕೂರಲಗು ಮತ್ತು ಪ್ರಭುತ್ವ

ಹೊಸ ಶಿಕ್ಶಣ ನೀತಿ ಮತ್ತು ತಾಯ್ನುಡಿ ಕಲಿಕೆ

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...