ಸ್ತ್ರೀಲೋಕ

Date: 06-04-2022

Location: ಬೆಂಗಳೂರು


'ಅಂತಃಶಕ್ತಿಯು ಎಚ್ಚೆತ್ತಾಗ ಬದುಕನ್ನು ಪರಿವರ್ತಿಸಿಕೊಳ್ಳುವ ಕಲೆ ತಂತಾನೇ ಅರಳುತ್ತದೆ. ಅಂಥ ಸಾಧ್ಯತೆಗಳನ್ನು ಸೂಕ್ಷ್ಮವಾಗಿ ಸೂಚಿಸುವುದು ‘ಸ್ತ್ರೀಲೋಕ’ದ ಹೆಗ್ಗಳಿಕೆ. ಸಹೋದರಿತ್ವದ ಸಂಘಟಿತ ನೆಲೆಯಲ್ಲಿ ಸಾಮೂಹಿಕ ಜಾಗೃತಿಗೆ ಒಳಗಾಗುವ ಸಾಮಾನ್ಯ ಸ್ತ್ರೀಯರು ಅಸಾಮಾನ್ಯ ಸಾಧನೆಯನ್ನು ತಣ್ಣಗೆ ಮಾಡುತ್ತಾರೆ' ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿ ಸವಿತಾ ನಾಗಭೂಷಣ ಅವರ ಸ್ತ್ರೀಲೋಕದ ಕುರಿತು ವಿಶ್ಲೇಷಿಸಿದ್ದಾರೆ.

ಹೆಣ್ಣಿನ ಭಾಷೆ ಯಾವುದು? ಅವಳ ಅಭಿವ್ಯಕ್ತಿಕ್ರಮ ಎಂಥದು? ಎಂಬ ಹುಡುಕಾಟ ತುಂಬ ಸೂಕ್ಷ್ಮವೂ ಸೃಜನಶೀಲವೂ ಆದುದು. ಗಂಡು ಜಗತ್ತಿನ ಅಭಿವ್ಯಕ್ತಿಯಲ್ಲಿ ನುಸುಳುವ ಸೈದ್ಧಾಂತಿಕ ಹಠಮಾರಿತನ, ತರ್ಕಬದ್ಧವಾಗಿ ಮಂಡಿಸಿ ಗೆಲುವು ಸ್ಥಾಪಿಸುವ ಹಪಾಹಪಿ, ಹಮ್ಮುಗಳು ಹೆಣ್ಣು ಲೋಕದಲ್ಲಿ ಅಪರೂಪ. ಅದು ಅಪ್ಪಟ ಅನುಭವಗಳ ಜಗತ್ತು. ಸಾಂದ್ರ ಅನುಭೂತಿಯ ಜಗತ್ತು. ಮರಮರಳಿ ತಿರುವುತ್ತಾ ಬೆಂದು ಹದಗೊಳ್ಳುವ ಕಜ್ಜಾಯದಂತೆ ಅದು ಎಂದೂ ಹದಗೆಡದಂತೆ ರೂಪಿಸುವ ಧ್ಯಾನ. ಸ್ತ್ರೀಯರು ಪರಮ ಲೌಕಿಕರು. ಅದಕ್ಕೇ ಅವರದು ಲೋಕವನ್ನು ಕಟ್ಟುವ ಧ್ಯಾನ. ಕಟ್ಟುವುದು ಕಟ್ಟಳೆಯಾಗದಂತೆ ನುಡಿಯುವದು, ನಡೆಯುವದು ಇವರಿಗೆ ಗೊತ್ತು. ಆದರೆ ರೂಢಿಗತವಾದ ಜ್ಞಾನದ ಭಾಷೆಗೆ ಹೆಣ್ಣಿನ ಅಭಿವ್ಯಕ್ತಿ ಏಕಸೂತ್ರವಿಲ್ಲದ ಹರಟೆಯಾಗಿ ತೋರುತ್ತದೆ. ಅಂಥ ಹರಟೆಯನ್ನೇ ಲೋಕದರ್ಶನವಾಗಿ ಸವಿತಾ ನಾಗಭೂಷಣರ ‘ಸ್ತ್ರೀಲೋಕ’ವು ಕಟ್ಟಿಕೊಟ್ಟಿದೆ.

ಸ್ತ್ರೀಲೋಕ ಕಾದಂಬರಿಯು ಬಹುಸ್ವರಗಳ ಮೇಳ. ಗಡಸು ಧ್ವನಿ, ಮೆಲು ಧ್ವನಿ, ಕೀರಲು ಧ್ವನಿ ಎಲ್ಲವೂ ಮೇಳದಲ್ಲಿರುವಂತೆ ಕಾದಂಬರಿಯ ಅನುಭವ ಲೋಕವು ವೈವಿಧ್ಯಮಯವಾಗಿದೆ. ಏಕಾಕೃತಿಯ ವೈಚಾರಿಕ ಸ್ವರೂಪವನ್ನು ಭಗ್ನಗೊಳಿಸಿ ವಿಚಾರಕ್ಕಿರಬಹುದಾದ ಹಲವು ಮಗ್ಗಲುಗಳ ಹುಡುಕಾಟಕ್ಕೆ ಭಿತ್ತಿಯಾಗಿದೆ. ಅಮುಖ್ಯವೆಂದಣಿಸಿದ್ದು ಹೇಗೆ ಮುಖ್ಯವಾಗಬಲ್ಲದು ಎಂಬುದನ್ನು ಕಾಣಿಸುವುದು ಕಾದಂಬರಿಯ ಒಟ್ಟೂ ವಿನ್ಯಾಸ. ಬೌದ್ಧಿಕ ಅಹಂಕಾರವನ್ನು ನಿರಸನಗೊಳಿಸುತ್ತ ಅನುಭವದ ಅಧಿಕೃತತೆಯನ್ನು ಸ್ಥಾಪಿಸಹೊರಡುವ ಈ ಕಾದಂಬರಿ ಹೆಣ್ಣಿನ ಲೋಕದೃಷ್ಟಿ ಹಾಗೂ ಅದರ ಅಭಿವ್ಯಕ್ತಿಯನ್ನು ಮರುರಚಿಸಿಕೊಳ್ಳುವ ದಾರಿಯಲ್ಲಿ ದೊರಕುವ ಭರವಸೆಯಾಗಿದೆ. ಅಕಾಡೆಮಿಕ್ ಚರ್ಚೆಗೆ ಸೀಮಿತವಾದ ಸ್ತ್ರೀವಾದಿ ಚಿಂತನೆಗಳನ್ನು ಒರೆಗೆ ಹಚ್ಚಿ ನೋಡುತ್ತ ನಮಗೆ ಬೇಕಾಗಿರುವ ಸ್ತ್ರೀ ಜಾಗೃತಿಯ ಸ್ವರೂಪ ಎಂಥದೆಂಬುದನ್ನು ಕೃತಿ ತನ್ನ ಒಡಲಲ್ಲಿ ಹೊಳೆಯುವಂತೆ ಮಾಡುತ್ತದೆ.

ಈಗ ಪ್ರಚಲಿತದಲ್ಲಿರುವ ಸಾಹಿತ್ಯ ರೂಪಗಳು ಹಾಗೂ ಸಾಹಿತ್ಯದ ಭಾಷೆ ಹೆಣ್ಣಿನ ಅನುಭವಗಳನ್ನು ನಿರ್ವಚಿಸಲು ಸೂಕ್ತವಾಗಿದೆಯೇ? ಎಂಬ ಜಿಜ್ಞಾಸೆ ಸ್ತ್ರೀವಾದಿ ವಿಮರ್ಶಾ ವಲಯದಲ್ಲಿದೆ. ಹೆಣ್ಣಿನ ಲೋಕಗ್ರಹಿಕೆ, ಅನುಭಗಳ ಸ್ವೀಕಾರದ ರೀತಿಯೇ ಭಿನ್ನವಾಗಿರುವುದರಿಂದ ಅವಳ ವಿಚಾರ ಹಾಗೂ ಅಭಿವ್ಯಕ್ತಿಗಳೂ ಭಿನ್ನವಾಗಿಯೇ ರೂಪುಗೊಂಡಿರುತ್ತವೆ. ಪುರುಷ ನಿರ್ಮಿತ ಭಾಷೆ ಹಾಗೂ ರೂಪದಲ್ಲಿ ಅನುಭವಗಳನ್ನು ದಾಖಲಿಸುವುದು ಕಷ್ಟವೆನಿಸುತ್ತದೆಯೆಂಬುದು ಅನೇಕ ಸೂಕ್ಷ್ಮಗ್ರಾಹಿ ಲೇಖಕಿಯರ ನಿಲುವು. ಅಂತೆಯೇ ‘ಹೆಣ್ಣಿನ ಅನುಭವ’ ಎಂಬುದೂ ಸಾರ್ವಕಾಲಿಕ ಸ್ಥಾಪಿತ ಸತ್ಯವಲ್ಲ. ಬೇರೆಬೇರೆ ಸಾಮಾಜಿಕ ಸಂದರ್ಭಗಳಲ್ಲಿ ರೂಪುಗೊಂಡ ಸ್ತ್ರೀಮನಸ್ಸುಗಳು ವೈವಿಧ್ಯಮಯವೇ ಆಗಿರುತ್ತವೆ. ಆರ್ಥಿಕ, ಶೈಕ್ಷಣಿಕ ಉದ್ಯೋಗದ ಹಿನ್ನೆಲೆಗಳೂ, ಸಾಂಸ್ಕೃತಿಕ ಪರಿಸರವೂ ಗ್ರಹಿಕೆಗಳನ್ನು ಭಿನ್ನವಾಗಿ ರೂಪಿಸುವುದು ಸಾಧ್ಯ. ಇಂಥ ಎಲ್ಲ ಸ್ತ್ರೀಯರನ್ನು ಸಮಾನವಾಗಿ ತಲುಪಬಲ್ಲ ಮಾಧ್ಯಮ ಇದೆಯೇ? ಎಂಬುದು ಮೂಲಭೂತ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವಾಗಿ ನಿಂತಿರುವುದು ಸವಿತಾ ನಾಗಭೂಷಣರ ‘ಸ್ತ್ರೀಲೋಕ’. ಹರಟೆಯೇ ಸ್ತ್ರೀಲೋಕದ ಸ್ವರೂಪ. ಹರಟೆಯಲ್ಲಿರುವ ಅನಿರ್ದಿಷ್ಟತೆಯೇ ಅದರ ಭಾಷಾಸ್ವರೂಪ. ಸವಿತಾ ಅವರೇ ಸ್ವತಃ ತಮ್ಮ ಕಾದಂಬರಿಯ ಕುರಿತು ಹೀಗೆ ಹೇಳಿಕೊಂಡಿದ್ದಾರೆ. “ಇದನ್ನು ಕಾದಂಬರಿ ಎಂದು ಕರೆದಿರುವುದು, ಈ ಬರಹ ಇತರ ಎಲ್ಲಾ ಸಾಹಿತ್ಯ ಪ್ರಕಾರಗಳಿಗಿಂತ ಈ ಪ್ರಕಾರಕ್ಕೆ ಹತ್ತಿರವಾಗಿರಬಹುದು ಎಂಬ ಗುಮಾನಿಯಿಂದ. ಇಲ್ಲಿ ಆರಂಭ, ಬೆಳವಣಿಗೆ, ಸ್ಫೋಟ, ಅಂತ್ಯ ಎಂಬ ಘಟ್ಟಗಳೇನೂ ಇಲ್ಲ. ಇಲ್ಲಿ ಪಾತ್ರಗಳು ಬರುತ್ತವೆ: ಪರಸ್ಪರ ತೋಡಿಕೊಳ್ಳತ್ತವೆ. ಹೋಗುತ್ತವೆ. ಹೋಗುವ ಮುನ್ನ ತಮ್ಮದೇ ಒಂದು ಜಗತ್ತು ಸೃಷ್ಟಿಸಿ ಹೋಗುತ್ತವೆ. ಹೀಗೆ ಸೃಷ್ಟಿಸಲ್ಪಟ್ಟ ಅನೇಕ ಜಗತ್ತುಗಳ ಸಂಕೀರ್ಣವೇ ಈ ಸ್ತ್ರೀಲೋಕ.

ಸ್ತ್ರೀಲೋಕದಲ್ಲಿ ಯಾವುದೆ ಕೇಂದ್ರ ಪಾತ್ರವಿಲ್ಲ. ನಿರೂಪಕರಿಲ್ಲ. ಯಾವ ಘಟನೆಗಳೂ ಏಕ ವಿನ್ಯಾಸದಲ್ಲಿ ಹೆಣೆಯಲ್ಪಟ್ಟಿಲ್ಲ. ಸ್ತ್ರೀಲೋಕದ ಸಮೂಹ ಧ್ವನಿ ಹರಟೆಯ ಮೂಲಕ ಓದುಗರನ್ನು ತಲುಪುತ್ತದೆ. ‘ಹೆಂಗಸರ ಒಣ ಹರಟೆ’ ಎಂದು ಮೂಗುಮುರಿಯುವ ಬೌದ್ಧಿಕ ಅಹಂಕಾರಕ್ಕೆ ಸೂಜಿಮೊನೆ ತಾಗಿಸುವಂತೆ ಈ ಹರಟೆಯೆ ಸ್ತ್ರೀಸಮುದಾಯದಲ್ಲಿ ಬದಲಾವಣೆಯ ಅಲೆ ಏಳಲು ಪ್ರೇರಕವಾಗಿ ಪರಿಣಮಿಸುತ್ತದೆ. ಈ ಇಡೀ ಕೃತಿ ಸಂಭಾಷಣೆಗಳಿಂದ ತುಂಬಿದೆ. ಆದರೆ ಇದು ನಾಟಕವಲ್ಲ. ಇಲ್ಲಿನ ಎಷ್ಟೋ ಮಾತುಗಳಿಗೆ ಕಾವ್ಯಾತ್ಮಕ ಸಾಧ್ಯತೆಯಿದೆ. ಬರೀ ಮಾತುಗಳಿಂದ ಕಟ್ಟಲ್ಪಟ್ಟ ಚಿಕ್ಕಚಿಕ್ಕ ಸ್ವತಂತ್ರ್ಯ ಅಧ್ಯಾಯಗಳಲ್ಲಿ ಒಂದೊಂದು ಕತೆಗಳು ಮೂಡುತ್ತಹೋಗುತ್ತವೆ. ಮೇಲ್ನೋಟಕ್ಕೆ ತುಂಬ ಸಾಮಾನ್ಯವೆನಿಸುವ ಇಲ್ಲಿನ ಮಾತುಕತೆಗಳು ಕೃತಿಯ ಒಡಲೊಳಗೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಹೋಗುತ್ತವೆ. ಉತ್ತರ ಹುಡುಕುತ್ತಾ ಸಾಗುತ್ತವೆ. ಇಲ್ಲಿ ಬರುವ ಹೆಂಗಸರು ತಮ್ಮತಮ್ಮ ವಯಸ್ಸು, ಬೆಳೆದುಬಂದ ಭೌತಿಕ ಹಾಗೂ ಬೌದ್ಧಿಕ ಪರಿಸರ, ವೈಯಕ್ತಿಕ ಸ್ವಭಾವಗಳ ಹಿನ್ನೆಲೆ ಹೊತ್ತೇ ರಂಗಕ್ಕೆ ಬರುತ್ತಾರೆ. ತಾವು ಗ್ರಹಿಸಿದ್ದನ್ನು ಯಾವ ತಾತ್ವಿಕ ಕಗ್ಗಂಟಿಲ್ಲದೇ ನೇರವಾಗಿ ಸರಳವಾಗಿ ಹರಟುತ್ತಾರೆ. ಆದ್ದರಿಂದಲೇ ಈ ಅಭಿವ್ಯಕ್ತಿ ಹಗುರವಾಗಿ ಹೃದ್ಯವೆನಿಸುತ್ತದೆ. ಪ್ರತಿ ವ್ಯಕ್ತಿಗಳನ್ನು ಅವರವರ ಪರಿಸರ, ಸಂದರ್ಭಗಳಿಂದಲೇ ಗ್ರಹಿಸುವ ನೋಟ ಕಾದಂಬರಿಯನ್ನು ಏಕಮುಖಿಯಾಗದಂತೆ ತಡೆದಿದೆ. ಬಹುಸ್ವರಗಳನ್ನು ತೆರೆದಿದೆ.

ಹೆಣ್ತನದ ಗುಣಗಳೆಂದು ಯಾವುದನ್ನು ಕರೆಯುತ್ತೇವೆಯೋ ಅಂಥ ಗುಣಗಳು ಇಲ್ಲಿ ತುಂಬಿತುಳುಕುತ್ತವೆ. ಅಡಿಗೆ, ಗಂಡ, ಮನೆ, ಮಕ್ಕಳು, ಸಿರೆ, ಒಡವೆ ಇವೆಲ್ಲವೂ ಇವರಿಗೆ ಮುಖ್ಯವೇ. ಇಲ್ಲಿನ ಬಹುಪಾಲು ಸ್ತ್ರೀಯರು ಸಮಸ್ಯೆಗಳಿಂದ ಬೇಸತ್ತು ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳವುದಿಲ್ಲ. ಸಮಸ್ಯೆಗಳ ಗರ್ಭದಿಂದಲೇ ಚಂಗನೆ ನೆಗೆದು ಎಂಥ ಗಟ್ಟಿನೆಲದಲ್ಲೂ ಬೇರುಬಿಡುವ, ಚಿಗುರುವ ಜೀವಂತಿಕೆಯಿವರದು. ‘ನಾವು ಹರಟೆಮಲ್ಲಿಯರು ಏನೀಗ?’ ಎಂಬ ಸ್ವಪ್ರಜ್ಞೆಯ ನವಿರು ಹೆಮ್ಮೆಯ ಧ್ವನಿಯೊಂದು ಕಾದಂಬರಿಯ ಬೆನ್ನಿಗಿದೆ. ಪುರುಷರಿಗೆ ಕ್ಷುದ್ರವಾಗಿ ಕಾಣುವ ನಮ್ಮ ಒಳಜಗತ್ತು ನಮಗೆ ಘನವಾದುದೇ ಎಂಬ ಹೆಮ್ಮೆಯದು. ಮುಖ್ಯ ಅಮುಖ್ಯವೆಂಬ ಶ್ರೇಷ್ಠತೆಯ ರಾಜಕಾರಣವನ್ನು ಹೀಗೆ ತಣ್ಣಗೆ ನಿರಚಿಸುವ ತಂತ್ರ ಕಾದಂಬರಿಯಲ್ಲಿದೆ.

ಸ್ತ್ರೀಲೋಕದಲ್ಲಿ ಬರುವ ಹೆಂಗಳೆಯರ ಆಲೋಚನೆಗಳು ಎಷ್ಟೋಸಲ ಪರಸ್ಪರ ವಿರುದ್ಧವಾಗಿರುತ್ತವೆ, ಅವರ ಸಮಸ್ಯೆಗಳ ಸ್ವರೂಪ ಭಿನ್ನವಾಗಿರುವಂತೆ ಅವರು ಹುಡುಕಿಕೊಳ್ಳುವ ಪರಿಹಾರಗಳ ಸ್ವರೂಪವೂ ಭಿನ್ನವೇ ಆಗಿರುತ್ತದೆ. ‘ಹೆಣ್ತನ’ವನ್ನು ಏಕಾಕೃತಿಯಲ್ಲಿ ಕಟ್ಟುವ ಚಿಂತನಕ್ರಮವನ್ನೂ ಕಾದಂಬರಿಯ ಈ ತಂತ್ರವು ನಿರಾಕರಿಸುತ್ತದೆ. ಸುಮಾ, ಸುನೀತಾ, ಶಾರದಮ್ಮ, ಶಾಂತರಂತಹ ಮನೆಯೊಳಗೆ ದುಡಿಯುವ ಗೃಹಿಣಿಯರಿರುವಂತೆ, ಪ್ರಜ್ಞಾ ಕಮಲರಂತಹ ಉದ್ಯೋಗಸ್ಥ ಮಹಿಳೆಯರೂ ಇದ್ದಾರೆ. ಹಪ್ಪಳದ ಸೀತಮ್ಮ, ಸೀರೆ ರಾಜಮ್ಮರಂತೆ ಸಣ್ಣಪುಟ್ಟ ಸ್ವಯಂ ಉದ್ಯೋಗಕ್ಕಿಳಿದವರಿದ್ದಾರೆ. ಆರ್ಥಿಕ ಸ್ವಾವಲಂಬನೆಯೇ ಸ್ತ್ರೀವಿಮೋಚನೆಯ ಮಹಾಮಾರ್ಗ ಎಂಬ ಚಿಂತನೆಯೂ ಇಲ್ಲಿ ಹಲವು ಮಗ್ಗಲುಗಳಿಂದ ಶೋಧಿತವಾಗಿದೆ. ಪ್ರಜ್ಞಾ ಹಾಗೂ ಕಮಲಾ ತಮ್ಮ ವೃತ್ತಿಪರತೆಯನ್ನು ಸ್ವೀಕರಿಸುವಲ್ಲಿ ಭಿನ್ನ ಮನಸ್ಥಿಯನ್ನು ಪ್ರಕಟಿಸುತ್ತಾರೆ. ಪ್ರಜ್ಞಾಳಿಗೆ ‘ಕೆಲಸ’ ತನ್ನ ಅಸ್ತಿತ್ವವನ್ನು ಭಿನ್ನವಾಗಿ ಮರುರಚಿಸಿಕೊಳ್ಳುವ ಮಾರ್ಗವೂ ಹೌದು. ಆಕೆ ತನ್ನ ಪ್ರಜ್ಞೆಯನ್ನು ಹಿಗ್ಗಿಸಿಕೊಳ್ಳುವಂಥ ಚಟುವಟಿಕೆಗಳಲ್ಲಿ ತೊಡಗಿದರೆ, ಕಮಲಾಳಿಗೆ ಅದೇ ಕೆಲಸವು ಹಲವು ಬಗೆಯ ಮಾನಸಿಕ ಒತ್ತಡಗಳನ್ನು ತಂದೊಡ್ಡುತ್ತದೆ. ಗಾಣದೆತ್ತಿನಂತೆ ಮನೆಯ ಒಳಹೊರಗೂ ದುಡಿಯುವ ಯಾಂತ್ರಿಕ ಬದುಕು ಅವಳ ತಳಮಳಗಳಿಗೆ ಕಾರಣವಾಗುತ್ತದೆ. ತನ್ನ ಮುಟ್ಟು ಬಸಿರು, ತಾಯ್ತನ, ಮುಂತಾದ ಜೈವಿಕ ಸಂಗತಿಗಳು ರೇಜಿಗೆಯ ವಿಷಯಗಳಾಗುತ್ತವೆ. ತನ್ನ ಒತ್ತಡದಿಂದಾಗಿ ಯಾವುದನ್ನೂ ಸಂತೋಷದಿಂದ ಅನುಭವಿಸಲಾಗುತ್ತಿಲ್ಲವೆಂಬ ತಳಮಳ ಅವಳಿಗೆ. “ಇದ್ಯಾಕೆ ಹೀಗೆ ಬಡಿದಾಡ್ತಾ ಇದೀನೋ, ಇದರಿಂದ ಅದೇನು ಸಾಧಿಸ್ತಾ ಇದೀನೋ ಒಂದೂ ಅರ್ಥ ಆಗಲ್ಲ” ಎಂದುಕೊಳ್ಳುವ ಆಕೆಗೆ ತಿಂಗಳ ಕೊನೆಯಲ್ಲಿ ಬರುವ ಸಂಬಳ ಕೊಡುವ ಸಮಾಧಾನವನ್ನೂ ಬಿಟ್ಟುಕೊಡಲು ಸಾಧ್ಯವಾಗದ ಇಬ್ಬಂದಿತನ. ಇನ್ನು ಗೃಹಿಣಿ ಸುಮಾಳ ಅಳಲೇ ಬೇರೆ.

ಸಣ್ಣಪುಟ್ಟ ಅಗತ್ಯಗಳಿಗೂ ಗಂಡನ ಮುಂದೆ ಕೈಚಾಚುವಾಗ ಮುಜುಗರ ಅನುಭವಿಸುವ ಸುಮಾಳಿಗೆ ಆರ್ಥಿಕ ಸ್ವಾವಲಂಬನೆ ಆಕರ್ಷಕವಾಗಿ ಕಾಣುತ್ತದೆ. ಕಮಲಾಳಿಗೆ ‘ಬಿಡುವು’ ಅಮೂಲ್ಯವಾಗಿ ಕಂಡರೆ, ಸುಮಾಳಿಗೆ ‘ಕೆಲಸ’ ಅಮೂಲ್ಯವಾಗಿ ಕಾಣಿಸುತ್ತದೆ, ಸ್ತ್ರೀಲೋಕದಲ್ಲಿ ಸುಮಾ ಬೆಳೆಯುವ ಬಗೆ ಆಸಕ್ತಿ ಹುಟ್ಟಿಸುವಂತಹುದು. ಆಕೆಯೊಬ್ಬ ಗೃಹಿಣಿ. ಪಿಯುಸಿ ಎರಡನೇ ವರ್ಷದಲ್ಲಿ ಫೇಲಾಗಿ ಸಂಸಾರ ರಥಕ್ಕೆ ಗಾಲಿಯಾದಾಕೆ. ಯಾವ ಪೂರ್ವಾಗ್ರಹಗಳಿಂದಲೂ ಪೀಡಿತವಾಗದ ಅವಳ ಹಸಿಮಣ್ಣಿನಂತಹ ಮನಸ್ಸಿನಲ್ಲಿ ಎಚ್ಚರದ ಮೊಳಕೆಗಳು ಸಸಿಯಾಗುವ ಪರಿ ಅತ್ಯಂತ ಸ್ವಾಭಾವಿಕವಾದುದು. ಆಕೆಯ ವ್ಯಕ್ತಿತ್ವದ ವಿಕಸನ ಅವಳಿಗರಿವಿಲ್ಲದಂತೆಯೇ ಸಹಜವಾಗಿ ಆಗುವ ಕ್ರಿಯೆ. ಸುತ್ತಲ ಬದುಕನ್ನು ಸೂಕ್ಷ್ಮಗ್ರಾಹಿಯಾಗಿ ಅರಿಯುವ ಆಕೆಗೆ ಹೆಣ್ಣಿನ ಸಮಸ್ಯೆಗಳ ಮೂಲ ಗೊತ್ತು. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಅವಳ ಮುಕ್ತಮನಸ್ಸು ಅವಳ ಅನುಭವಲೋಕವನ್ನು ವಿಸ್ತರಿಸುತ್ತಹೋಗುತ್ತದೆ. ಹರಟೆಗೆ ಪಕ್ಕಾಗುವ ಅವಳ ಸ್ವಭಾವ ಆ ಹರಟೆಯ ಮೂಲಕವೇ ಸ್ತ್ರೀಲೋಕದ ಸಂಘಟನೆಗೆ ಕಾರಣವಾಗುತ್ತದೆ. ಕೆಲಸದ ನಡುವೆ ದೊರೆಯುವ ಬಿಡುವು ಅವಳನ್ನು ಹೆಚ್ಚು ಸೃಜನಶೀಲವಾಗಿ ಉಳಿಸುತ್ತದೆ. ತನ್ನ ಅನುಭವಗಳನ್ನು ಕಾದಂಬರಿಯಾಗಿ ಕಟ್ಟಲು ಹೊರಡುವ ಸುಮಾ, ತಾನೇ ಅದರ ವಸ್ತುವೂ ಆಗಿದ್ದಾಳೆ. ಎಲ್ಲರನ್ನೂ ಅವರವರ ಸಂದರ್ಭಗಳಲ್ಲಿ ಅರ್ಥಮಾಡಿಕೊಳ್ಳಬಲ್ಲ ಸೂಕ್ಷ್ಮತೆಯಿರುವ ಅವಳಲ್ಲಿ ತಾನು ಎಲ್ಲರಿಗಿಂತ ಭಿನ್ನಳೆಂಬ ಒಣ ಅಹಂಕಾರವಿಲ್ಲ. ಓದಿನ ಭಾರವಿಲ್ಲ, ತರ್ಕದ ಕಗ್ಗಂಟಿಲ್ಲ. ಎಲ್ಲ ಸ್ತರದ ಮಹಿಳೆಯರೊಡನೆ ಅಂತಃಕರಣದಿಂದ ಒಡನಾಡುವ ಆಕೆಗೆ ಅವರನ್ನು ವಿಶ್ಲೇಷಿಸಬಲ್ಲ ಸಹಜ ಪ್ರತಿಭೆಯಿದೆ. ಆಕೆ ಬರಹಗಾರ್ತಿಯಾದ ಗೆಳತಿ ಪ್ರಜ್ಞಾಳಿಂದ ಪ್ರಭಾವಿತಳು. ಸ್ತ್ರೀವಾದಿಯಾದ ಸುಧಾಳ ವೈಚಾರಿಕತೆಯಿಂದ ಅವಳು ನಡೆಸುವ ಶಿಬಿರ ಹಾಗೂ ಪತ್ರಿಕೆಗಳ ಮುಕ್ತ ವಿಸ್ತ್ರತ ಅನುಭವಗಳಿಂದಲೂ ಪ್ರೇರಿತಳು. ಇವೆಲ್ಲವುಗಳಿಂದ ಆಕೆ ತನ್ನ ಭಾವಲೋಕವನ್ನು, ವಿಚಾರ ಜಗತ್ತನ್ನು ವಿಸ್ತರಿಸಿಕೊಳ್ಳುತ್ತಲೇ ಇರುತ್ತಾಳಾದರೂ, ಅದನ್ನು ಕಣ್ಣುಮುಚ್ಚಿ ಸ್ವೀಕರಿಸುವಂಥ ಮುಗ್ಧೆಯಲ್ಲ ಅವಳು. ಹೊರಗಿನಿಂದ ಒದಗುವ ಬೌದ್ಧಿಕ ಸಂಗತಿಗಳೆಲ್ಲ ಅವಳಿಗೆ ತನ್ನ ಗ್ರಹಿಕೆಯನ್ನು ಮೊನಚುಗೊಳಿಸುವ ಸಾಧನಗಳು ಅಷ್ಟೇ!. ಚಚ್ಚಿ-ಪಾರುವಿರಂತಹ ಅನಕ್ಷರಸ್ಥೆಯರಿಂದ ಹಿಡಿದು ಪ್ರಜ್ಞಾ-ಸುಧಾರಂತಹ ವಿಚಾರವಂತೆಯರೊಡನೆ ಏಕವಾಗಿ ಮಿಡಿಯಬಲ್ಲ ಶಕ್ತಿ ಆಕೆಯದು. ಆದ್ದರಿಂದಲೇ ಆಕೆಗೆ ಎಲ್ಲರನ್ನೂ ಒಗ್ಗೂಡಿಸಿ ಅಲ್ಲೊಂದು ಬದಲಾವಣೆಯ ಅಲೆಯನ್ನು ಎಬ್ಬಿಸಲು ಸಾಧ್ಯವಾಗುತ್ತದೆ.

ಸ್ತ್ರೀವಾದದ ತಾತ್ವಿಕತೆಯನ್ನು ಬದುಕಿನಿಂದ ಕಟ್ಟಿಕೊಳ್ಳುತ್ತಹೋಗಬೇಕೇ ವಿನಃ ಅದನ್ನು ಬದುಕಿನ ಮೇಲೆ ತಂದು ಹೇರುವುದು ಎಷ್ಟು ಸರಿ? ಎಂಬ ಆಲೋಚನೆಗಳನ್ನು ಸ್ತ್ರೀಲೋಕವು ಹಲವು ಸನ್ನಿವೇಶಗಳ ಮೂಲಕ ಮುಂದಿಡುತ್ತದೆ. ಸ್ತ್ರೀವಾದ ಬರಿಯ ತಾತ್ವಿಕ ಜಿಜ್ಞಾಸೆಯಾಗಿ ಬೆಳೆಯುತ್ತ ಸಮಸ್ಯೆಯ ಸಂಕೀರ್ಣತೆಗೆ ಸ್ಪಂದಿಸುತ್ತಿಲ್ಲವೆಂಬ ಅಂಶವನ್ನು ಸ್ತ್ರೀವಾದಿಯಾದ ಸುಧಾಳ ಅನುಭವಗಳ ಮೂಲಕ ಕಾಣಬಹುದು. ವಿಶ್ವಾತ್ಮಕ ಸಹೋದರಿತ್ವ ಸಾಧ್ಯವಾಗಬೇಕಾದರೆ ಸಮೂಹದಲ್ಲಿ ಒಂದಾಗಬೇಕು. ಇಲ್ಲಿ ಸರಿ-ತಪ್ಪು, ಜಾಣ-ದಡ್ಡ, ಶೋಷಕ-ಶೋಷಿತೆ ಎಂಬ ಕಪ್ಪುಬಿಳುಪಿನ ವಿಂಗಡಣೆ ಅಸಹಜವಾದುದು. ಸುಧಾರಕರ ಗತ್ತಿನಲ್ಲಿ ಹೊರಟರೆ ಪರಿವರ್ತನೆ ಅಸಾಧ್ಯ. ಶೋಷಣೆಯ ಪರಿಕಲ್ಪನೆ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವೇ.!. ಸುಧಾ ದೇವದಾಸಿಯೊಬ್ಬಳನ್ನು ಸಂದರ್ಶಿಸಿದ ಸಂದರ್ಭದಲ್ಲಿ ಇದನ್ನು ಕಾಣಬಹುದು. ಊರವರಿಂದ ದೇವತೆಯೆಂಬಂತೆ ಗೌರವಿಸಲ್ಪಡುವ ಆಕೆಗೆ ಸ್ವತಃ ತಾನು ಶೋಷಿತಳೆಂಬ ಭಾವನೆಯಿಲ್ಲ. ವಿವಾಹದ ಬಂಧನ, ಕಟ್ಟುಪಾಡುಗಳಿಲ್ಲದ ಆಕೆ ಒಂದರ್ಥದಲ್ಲಿ ಸ್ವತಂತ್ರಳೇ. ಪುನರ್ವಸತಿ ಎಂಬ ಸರ್ಕಾರದ ಕಣ್ಣೊರೆಸುವ ತಂತ್ರವನ್ನು ಆಕೆ ವಿರೋಧಿಸುವುದು ಈ ಹಿನ್ನೆಲೆಯಲ್ಲಿ. ಆದರೆ, ದೇವದಾಸಿಯ ಮಕ್ಕಳಿಗೆ ಈ ಪರಂಪರೆಯನ್ನು ಮುಂದುವರೆಸುವುದು ಬೇಕಾಗಿಲ್ಲ. ಹೊಸ ತಲೆಮಾರು ಬದುಕನ್ನು ಗ್ರಹಿಸುವ ರೀತಿ ಬೇರೆಯೇ ಇರುತ್ತದೆ. ಹಾಗಾಗಿ ಬದುಕು ಹಾಗೂ ಚಿಂತನೆಗಳನ್ನು ಸದಾ ನಿಶ್ಚಿತ ವಿನ್ಯಾಸಗಳಲ್ಲೇ ಹಿಡಿದಿಡುವುದು ಸಾಧುವೂ ಅಲ್ಲ. ಹಾಗೆಯೇ ಯಾವುದೇ ಸಿದ್ಧಾಂತವನ್ನು ಒಂದು ಸಮುದಾಯದ ಮೇಲೆ ಹೇರುವುದು ಸಾಧ್ಯವಿಲ್ಲ. ನಿಧಾನವಾಗಿ ಅರಿವುಂಟುಮಾಡಲು ಶ್ರಮಿಸಬಹುದು ಅಷ್ಟೇ.

ಕ್ರಾಂತಿಯೆಂಬುದು ತನಗೆ ತಾನೇ ಘಟಿಸುವಂತಹುದು. ಸ್ಥಿತ್ಯಂತರ ಸಾಧ್ಯವಾಗಬೇಕಾದರೆ ಜನರ ಮನಸ್ಥಿತಿ ಅದಕ್ಕೆ ಸಿದ್ದವಾಗಬೇಕು. ಮನಸ್ಸನ್ನು ಹದಗೊಳಿಸುವ ಕೆಲಸವನ್ನು ಅತ್ಯಂತ ಸಂಯಮದಿಂದ ಮಾಡಬೇಕು. ಇದೇ ಸ್ತ್ರೀಲೋಕದ ಚಿಂತನಾ ದ್ರವ್ಯ. ಇದಕ್ಕೆ ಮುದ್ದೆ ಎಸರು ಕುದಿಯುವ ರೂಪಕವನ್ನು ಕೊಡುತ್ತಾ, “ಮೊದಲು ಗುಳ್ಳೆ ತರಹ ಆಗಬೇಕು ಆಮೇಲೆ ಸಣ್ಣಗೆ ಕುದೀಬೇಕು. ಆಮೇಲೆ ಆವರಿಸಿಕೋತಾ ಸೆಂಟರಿಗೆ ಬರಬೇಕು. ಎಲ್ಲರೂ ಆ ಹಂತಗಳನ್ನು ದಾಟಿಯೇ ಬರಬೇಕು. ಒಂದೇಸಲ ಕೇಂದ್ರಕ್ಕೆ ಜಿಗಿಯೋದಲ್ಲ”(ಪು 344) ಈ ನಿಧಾನ ಗತಿಯ ಪ್ರಕ್ರಿಯೆ ‘ಆಗಬೇಕಾದದ್ದು’. ಅಡಿಗೆ ಮಾಡುವ ಕೈಗಳ ಹಿಂದೆ ತಾಳ್ಮೆ ತಲ್ಲೀನತೆ ಇದ್ದರಷ್ಟೇ ರುಚಿಕಟ್ಟಾದ ಅಡಿಗೆ ಸಿದ್ದವಾಗುವಂತೆ ಸ್ತ್ರೀಲೋಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪುನಾರಚನೆ ಕೂಡ ಹೀಗೆಯೇ ಸಿದ್ದಿಸಬೇಕು ಎಂಬ ಅರಿವು ಇಲ್ಲಿ ಹೊಳೆಯುತ್ತದೆ. ಸುಧಾ, ಪ್ರಜ್ಞಾ, ಸುಮಾರ ಮೂಲಕ ಹರಿದ ಅರಿವನ್ನು ಅಲ್ಲಿನ ಹೆಂಗಸರ ಒಳಲೋಕ ನಿಧಾನವಾಗಿ ಜೀರ್ಣಿಸಿಕೊಂಡು ತಮ್ಮದಾಗಿಸಿಕೊಳ್ಳುತ್ತದೆ. ಬೋಧನೆಗಿಂತ ಒಡನಾಟದ ದಾರಿ ಹೆಚ್ಚು ಹತ್ತಿರದ್ದಾಗುತ್ತದೆ. ಆಗ ನೂರಾರು ಕೈಗಳ ಬಲ ಒಂದಾಗುತ್ತದೆ. ‘ಎರಡು ಜಡೆ ಸೇರಲು ಸಾಧ್ಯವಿಲ್ಲ’ ಎಂಬ ಮಾತು ಸುಳ್ಳಾಗುತ್ತದೆ. ತಮ್ಮ ಶಕ್ತ್ಯಾನುಸಾರ ಈ ಅರಿವನ್ನು ಹೀರಿಕೊಳ್ಳುವ ಹೆಂಗಸರು ತಮ್ಮನ್ನು ರಚನಾತ್ಮಕವಾಗಿ ರೂಪಿಸಿಕೊಳ್ಳುವುದರೊಟ್ಟಿಗೆ ಸಮಾಜವನ್ನೂ ಪುನರ್ರಚಿಸುವ ಹೋರಾಟಕ್ಕೆ ಇಳಿಯುತ್ತಾರೆ. ಹೆಣ್ತನದ ಎಲ್ಲ ಭಾವನೆಗಳನ್ನು ಉಳಿಸಿಕೊಂಡೂ ತಮ್ಮ ಪಾರಂಪರಿಕ ಪಾತ್ರಗಳಿಂದ ಹೊರಬರಲು ಸಾಧ್ಯವೆಂಬುದು ಅವರಿಗೆ ಮನದಟ್ಟಾಗುತ್ತಹೋಗುತ್ತದೆ. ಹಳ್ಳಿಯಲ್ಲಿ ಹನುಮವ್ವ ಹಾಗೂ ಲಚುಮಿಯರು ಸರಾಯಿ ವಿರೋಧಿ ಆಂದೋಲನದಲ್ಲಿ ಪಾಲ್ಗೊಳ್ಳುವುದು, ಇತ್ತ ಪಟ್ಟಣದ ಮಹಿಳೆಯರು ಪಾರ್ಥೇನಿಯಂ ಕಿತ್ತುಹಾಕಿ ಪರಿಸರವನ್ನು ಸ್ವಚ್ಛಗೊಳಿಸಲು ನಿರ್ಧರಿಸುವುದು ಸಾಂಕೇತಿಕವಾಗಿ ಕಾಣಿಸುತ್ತದೆ. ತಮ್ಮ ಬದುಕನ್ನು ತಮ್ಮ ಸಂಕಲ್ಪ ಬಲದಿಂದಲೇ ಹಸನುಗೊಳಿಸಿಕೊಳ್ಳುವ ದಿಟ್ಟನಿಲುವಿದು. ಇಲ್ಲಿ ಸ್ತ್ರೀಲೋಕದ ಮರುಹುಟ್ಟಿನ ಬೀಜಾಂಕುರವೂ ಆಗಿದೆ.

ಭಿನ್ನ ಓದಿನ ಅನುಭವವನ್ನು ಕೊಡುವ ಸ್ತ್ರೀಲೋಕ ತನ್ನ ನಿರೂಪಣಾ ವಿಧಾನದ ನಾವೀನ್ಯತೆಯಿಂದ ಗಮನ ಸೆಳೆಯುತ್ತದೆ. ಕ್ರಮಬದ್ಧತೆಯನ್ನು ಮುರಿಯುವುದೇ ಕಾದಂಬರಿಯ ವಿಕ್ರಮ!. ಇದರಿಂದಲೇ ಸ್ತ್ರೀಮನದ ಸಹಜ ಲಯಗಳಿಗೆ ಸ್ಪಂದಿಸುವುದು ಸಾಧ್ಯವಾಗಿದೆ. ಆದಿ ಅಂತ್ಯವಿಲ್ಲದೇ ನಿರಂತರವಾಗಿ ಸಾಗುವ ಹರಟೆಯಿಂದಲೇ ಕಟ್ಟಲ್ಪಟ್ಟ ಕಾದಂಬರಿಯು ನಡುನಡುವೆ ವರದಿ, ಸಂದರ್ಶನ, ಪತ್ರ, ಭಾಷಣ, ಕವಿತೆ ಮುಂತಾದವನ್ನು ಳಗೊಳ್ಳುತ್ತ ಚಲಿಸುತ್ತದೆ. ಈ ತಂತ್ರದ ಮೂಲಕ ಹೆಣ್ಣಿನ ಕ್ರಿಯಾಶೀಲತೆಯ ವೈವಿಧ್ಯವನ್ನು, ಸಂವೇದನೆಯ ಆಳವನ್ನು ಅರಿಯುವ ಪ್ರಯತ್ನ ಕಾಣುತ್ತದೆ. ಚಿಂತನೆ ಹಾಗೂ ವಾಸ್ತವಗಳ ನಡುವಿನ ಅಂತರವನ್ನು ತುಂಬುವ ಹೊಸ ಹುಡುಕಾಟವೊಂದು ಇಲ್ಲಿ ಏರ್ಪಟ್ಟಿದೆ. ಮೌಖಿಕ ಜಗತ್ತೊಂದರ ಸಶಬ್ದ ಚೆಲುವನ್ನು, ಉಕ್ತಿಕ್ರಮವನ್ನು ಅಕ್ಷರಲೋಕಕ್ಕೆ ತರುವ ಸೃಜನಶೀಲತೆ ಗಮನಾರ್ಹ. ಸಾಹಿತ್ಯದ ರೂಪಿತ ಚೌಕಟ್ಟುಗಳನ್ನು ಹೀಗೆ ಸದಿಲ್ಲದೆ ಕದಲಿಸುವ ಕೆಲಸವನ್ನು ಸ್ತ್ರೀಲೋಕದಲ್ಲಿ ಸವಿತಾ ಅವರು ಮಾಡಿದ್ದಾರೆ. ಇದೂ ಸಹ ಲಿಂಗರಾಜಕಾರಣವನ್ನು ಬರಹದಲ್ಲಿ ಎದುರಿಸುವ ಒಂದು ಕ್ರಮ ಎಂದೆನಿಸುತ್ತದೆ. ಬದುಕಿನ ಬಹುಸ್ವರಗಳನ್ನು ಆಲಿಸುವ ಕಾವ್ಯಾತ್ಮಕ ಸಾಧ್ಯತೆಯೊಂದನ್ನು ಇಲ್ಲಿ ಕಾಣ ಸಲಾಗಿದೆ. ಪ್ರಜ್ಞಾ ಹಾಗೂ ಸುಮಾ ಕವಿತೆಯೊಂದನ್ನು ಭಿನ್ನವಾಗಿ ಅರ್ಥೈಸುತ್ತಾ ವಿಸ್ಮಯ ಪಡುವ ಸನ್ನಿವೇಶವೊಂದು ಕಾದಂಬರಿಯಲ್ಲಿದೆ. ಈ ಸಾಧ್ಯತೆ ಬದುಕಿನ ಎಲ್ಲ ಸಂಗತಿಗಳನ್ನು ಓದುವಲ್ಲೂ ಇದೆಯೆಂಬುದು ಇಲ್ಲಿನ ಧ್ವನಿ.

ಕಥೆಯ ಕೊನೆಯಲ್ಲಿ ಬರುವ ಫ್ಯಾಂಟಸಿ ಕೂಡ ಇದನ್ನೇ ಸೂಚಿಸುತ್ತದೆ. ಸುಮಾ ಕನಸಿನಲ್ಲಿ ತಾನು ದೇವಿಯಾದಂತೆ, ಮಧ್ಯರಾತ್ರಿಯಲ್ಲಿ ಸಂಚಾರ ಹೊರಟಂತೆ, ಹುಲಿಯೊಂದು ತಲೆಬಗ್ಗಿಸಿ ನಡೆದುಬಂದಂತೆ ಕಾಣುತ್ತಾಳೆ. ಹುಲಿಯೆಂದುಕೊಂಡದ್ದು ಹುಲಿಯಾಗಿರದೇ ನಾಯಿಯಾಗಿ ಹಿಂಬಾಲಿಸುತ್ತದೆ! ಸುತ್ತಲೂ ಹಸಿರು ಗದ್ದೆ ಮೇಲೆ ತುಂಬು ಚಂದಿರನಿರುವ ಆಹ್ಲಾದಕರ ವಾತಾವರಣ ಇವೆಲ್ಲ ಎಲ್ಲ ಭಯಗಳನ್ನು ಕಿತ್ತೊಗೆದ ಹೆಣ್ಣಿನ ಸ್ವತಂತ್ರ ಮನಸ್ಥಿತಿಯ ರೂಪಕ. ಹೆಣ್ಣೊಬ್ಬಳ ಸುಪ್ತಪ್ರಜ್ಞೆಯ ‘ಶಕ್ತಿ’ ಸ್ಥಿತಿಯ ದರ್ಶನವಿದು. ಇಲ್ಲಿ ಸಾಮಾಜಿಕ ಭಯಗಳಿಲ್ಲ. ವ್ಯವಸ್ಥೆಯನ್ನು ಹುಲಿಯೆಂದುಕೊಂಡು ಹೆದರದೇ ಅದನ್ನೇ ಪಳಗಿಸಿಕೊಂಡು ಸವಾರಿ ಮಾಡುವುದು ಹೆಣ್ತನದ ಅಸಲಿ ತಾಕತ್ತು. ಅದು ದೇವಿಯ ಚಿತ್ರಗಳಲ್ಲಿ ಪ್ರತಿಮಾತ್ಮಕವಾಗಿ ಇದೆ. ಅದನ್ನು ಎಚ್ಚರಿಸಿಕೊಂಡಾಗ ಅಧಿಕಾರ ತಂದೊಡ್ಡುವ ಭಯಗಳಳಿದು, ಸಲಹುವ ವಿರಾಟ್ ಶಕ್ತಿ ಮೇಲುಗೈ ಪಡೆಯುತ್ತದೆ.

ಅಂತಃಶಕ್ತಿಯು ಎಚ್ಚೆತ್ತಾಗ ಬದುಕನ್ನು ಪರಿವರ್ತಿಸಿಕೊಳ್ಳುವ ಕಲೆ ತಂತಾನೇ ಅರಳುತ್ತದೆ. ಅಂಥ ಸಾಧ್ಯತೆಗಳನ್ನು ಸೂಕ್ಷ್ಮವಾಗಿ ಸೂಚಿಸುವುದು ‘ಸ್ತ್ರೀಲೋಕ’ದ ಹೆಗ್ಗಳಿಕೆ. ಸಹೋದರಿತ್ವದ ಸಂಘಟಿತ ನೆಲೆಯಲ್ಲಿ ಸಾಮೂಹಿಕ ಜಾಗೃತಿಗೆ ಒಳಗಾಗುವ ಸಾಮಾನ್ಯ ಸ್ತ್ರೀಯರು ಅಸಾಮಾನ್ಯ ಸಾಧನೆಯನ್ನು ತಣ್ಣಗೆ ಮಾಡುತ್ತಾರೆ. ತಮ್ಮ ಮೇಲಿನ ನಿರ್ಬಂಧಗಳನ್ನು ಕಳಚಿಕೊಳ್ಳುತ್ತ ಸ್ವತಂತ್ರವಾಗಿ ಚಿಂತಿಸುವುದನ್ನು ತಮಗರಿವಿಲ್ಲದೆಯೇ ಸಾಧ್ಯವಾಗಿಸಿಕೊಳ್ಳುತ್ತಾರೆ. ಸಾಮರಸ್ಯಕ್ಕೆ ಧಕ್ಕೆ ತಾರದ ಸ್ವಾತಂತ್ರ್ಯವನ್ನು ಸ್ತ್ರೀಲೋಕ ಶೋಧಿಸಿಕೊಳ್ಳುವ ಬಗೆ ನಮ್ಮನ್ನು ಮರುಚಿಂತನೆಗೆಳಸುತ್ತದೆ. ಕಾದಂಬರಿಯ ಚಿಂತನೆ ಹಾಗೂ ಸ್ವರೂಪಗಳೆರಡರಲ್ಲೂ ಹೊಸ ಆಯಾಮವನ್ನು ನಿರ್ಮಿಸುವಲ್ಲಿ ಸವಿತಾ ನಾಗಭೂಷಣರು ಸಾರ್ಥಕ ಪ್ರಯತ್ನ ಮಾಡಿದ್ದಾರೆ. ಸಾಹಿತ್ಯ ವಲಯದಲ್ಲಿ ಕೇಂದ್ರಕ್ಕೆ ಬರದ ಈ ಕೃತಿಯನ್ನು ಮತ್ತೊಮ್ಮೆ ಓದಿಗೊಳಪಡಿಸಬೇಕಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಮಹಿಳಾ ಆತ್ಮಕಥೆಗಳೆಂಬ ಅಂತರಂಗದ ಪುಟಗಳು
ನಾದದ ನದಿಯೊಂದು ನಡೆದ್ಹಾಂಗ
ನದಿಗೆ ನೆನಪಿನ ಹಂಗಿಲ್ಲ
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...