ಸ್ತ್ರೀ ಮಲಯಾಳ ಹಾಗೂ ಸ್ತ್ರೀ ವಿವೇಕದ ಕಥನಗಳು

Date: 09-08-2021

Location: ಬೆಂಗಳೂರು


ವೀರೇಶಲಿಂಗಂ ಅವರು ತೆಲುಗಿನ ಪ್ರಮುಖ ಬರಹಗಾರರು. ತೆಲುಗಿನಲ್ಲಿ ಹೊಸ ಜಾನರ್ ಒಂದನ್ನು ಸೃಷ್ಟಿಸಿಕೊಂಡು ಕಥೆಗಳನ್ನು ಬರೆಯಲಾರಂಭಿಸಿದರು. ಅವನ್ನು ಕಲ್ಪನಾ ಕಥೆಗಳೆಂದು ಕರೆದರು ಎನ್ನುತ್ತಾರೆ ಲೇಖಕಿ ತಾರಿಣಿ ಶುಭದಾಯಿನಿ. ಅವರು ತಮ್ಮ 'ಅಕ್ಷರ ಸಖ್ಯ' ಅಂಕಣದಲ್ಲಿ ವೀರೇಶಲಿಂಗಂ ಪಂತುಲು ಅವರ ಬರೆಹಗಳ ಕುರಿತು ವಿಶ್ಲೇಷಿಸಿದ್ದಾರೆ.

ವೀರೇಶಲಿಂಗಂ ಪಂತುಲು ಹತ್ತೊಂಬತ್ತನೇ ಶತಮಾನದ ಸುಧಾರಕ ಹಾಗೂ ಬರಹಗಾರ. ಭಾರತೀಯ ರಾಷ್ಟ್ರೀಯತೆ ತಲೆ ಎತ್ತುತ್ತಿದ್ದ ವೇಳೆಯಲ್ಲಿ ತೆಲುಗುನಾಡಿನಿಂದ ಎದ್ದ ಪ್ರಬಲವಾದ ದನಿ ಎಂದರೆ ವೀರೇಶಲಿಂಗಂ ಅವರದು. ಬಂಗಾಳದ ಕೇಶವಚಂದ್ರ ಸೆನ್ ಅವರ ಧೋರಣೆಗಳ ನಿಷ್ಠಾವಂತ ಅನುಯಾಯಿಯಾಗಿದ್ದ ವೀರೇಶಲಿಂಗಂ ಅವರು ‘ಬ್ರಹ್ಮೊ ಸಮಾಜ’ದ ವಿಚಾರಗಳಿಂದ ಪ್ರಭಾವಿತರಾಗಿದ್ದವರು. ಬಂಗಾಳದ ಗಾಳಿ ಬೀಸಿದಂತೆ ಸಾಮಾಜಿಕ ಸುಧಾರಣೆಯ ಅಲೆಯೂ ಏಳುವುದು ಹತ್ತೊಂಬತ್ತನೆಯ ಶತಮಾನದ ಭಾರತದ ಒಂದು ಚಹರೆಯಾಗಿದ್ದಂತೆ ತೆಲುಗುನಾಡಿನ ವೀರೇಶಲಿಂಗಂ ಅವರ ಮೇಲೆ ಸಾಮಾಜಿಕ ಸುಧಾರಣೆಯ ಪ್ರಭಾವ ಉಂಟಾಗಿದ್ದ ಆನುಷಂಗಿಕವೇನೂ ಆಗಿರಲಿಲ್ಲವೆಂದು ಊಹಿಸಬಹುದು. ವೀರೇಶಲಿಂಗಂ ಅವರು ಹೆಸರಾಗಿದ್ದುದು ಬಾಲಿಕಾ ವಿವಾಹದ ವಿರುದ್ಧ, ವಿಧವಾ ಆಚರಣೆಗಳ ವಿರುದ್ಧ ಅವರು ಸಂಘಟಿಸಿದ ಹೋರಾಟಗಳ ಕಾರಣದಿಂದ. ಹಾಗೆಯೇ ವಿಧವಾ ವಿವಾಹ ಹಾಗೂ ಸ್ತ್ರೀಶಿಕ್ಷಣದ ಬಗ್ಗೆ ಕಾಳಜಿ ವಹಿಸಿ ಅವುಗಳು ಘಟಿಸುವಂತೆ ಪ್ರಯತ್ನಗಳನ್ನು ಮಾಡಿದ್ದು ಅವರ ಕ್ರಿಯಾಶೀಲ ಹೋರಾಟಗಳು. ವಿಧವೆಯರಿಗೆಂದು ಶಾಲೆಗಳನ್ನು ತೆರೆದಿದ್ದು, ಅವರಿಗಾಗಿ ಸಂತ್ರಸ್ತರ ಮನೆಗಳನ್ನು ಮಾಡಿಕೊಟ್ಟಿದ್ದಲ್ಲದೆ, ತಮ್ಮ ಸ್ವಂತ ಮನೆ, ಆಸ್ತಿಗಳನ್ನು ವಿಧವಾ ನೆಲೆಗಳಿಗೆ ಹಾಗೂ ಶಾಲೆಗಳಿಗೆ ಬಿಟ್ಟುಕೊಟ್ಟಿದ್ದರು ಎಂಬ ದಾಖಲೆ ಇದೆ. ರಾಜಮಂಡ್ರಿಯಿಂದ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದ ವೀರೇಶಲಿಂಗಂ ಅವರು ಆಗತಾನೇ ತಲೆಯೆತ್ತುತ್ತಿದ್ದ ಮುದ್ರಣಾಲಯಗಳನ್ನು ಉಪಯೋಗಿಸಿಕೊಂಡು ಸಾಹಿತ್ಯ ಮತ್ತು ಲೇಖನಗಳಿಂದ ಜನರನ್ನು ತಲುಪುವ ಯತ್ನ ಮಾಡಿದ್ದರು. ಇವಿಷ್ಟು ಹೊರವಿವರಗಳು.

ವೀರೇಶಲಿಂಗಂ ಅವರು ತೆಲುಗಿನ ಪ್ರಮುಖ ಬರಹಗಾರರಾಗಿದ್ದರು. ತೆಲುಗಿನಲ್ಲಿ ಹೊಸ ಜಾನರ್ ಒಂದನ್ನು ಸೃಷ್ಟಿಸಿಕೊಂಡು ಕಥೆಗಳನ್ನು ಬರೆಯಲಾರಂಭಿಸಿದರು. ಅವನ್ನು ಕಲ್ಪನಾ ಕಥೆಗಳೆಂದು ಕರೆದರು. ಅವುಗಳನ್ನು ‘ಚರಿತ್ರೆ’ ಎಂದು ಕರೆದರು. ಪ್ರಾಚೀನ ಸಾಹಿತ್ಯ ಸಂದರ್ಭದಲ್ಲಿ ಚರಿತ್ರೆ ಎನ್ನುವುದು ಕಥೆ ಮತ್ತು ಕಲ್ಪನೆಗಳೆರಡೂ ಸೇರಿದ ವಿಶಿಷ್ಟ ಪ್ರಕಾರ. ಈ ಬಗೆಯನ್ನು ಕಲ್ಪಿಸಿಕೊಂಡು ತೆಲುಗಿನಲ್ಲಿ ವೀರೇಶಲಿಂಗಂ ಅವರು ಅನೇಕ ಚರಿತ್ರೆಗಳನ್ನು ಬರೆದರು (ರಾಜಶೇಖರ ಚರಿತ್ರೆ, ಸತ್ಯವತೀ ಚರಿತ್ರೆ, ಚಂದ್ರಮತಿ ಇನ್ನೂ ಮುಂತಾದವು). ವೀರೇಶಲಿಂಗಂ ಅವರ ಪುಸ್ತಕಗಳು ಸ್ತ್ರೀ ಉದ್ಧಾರವನ್ನು ಮುನ್ನಿರೀಕ್ಷಿಸಿದವು. ಅದರಲ್ಲಿಯೂ ಸ್ತ್ರೀವಿದ್ಯಾಭ್ಯಾಸವು ವೀರೇಶಲಿಂಗಂ ಅವರಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿತು. ವೀರೇಶಲಿಂಗಂ ಅವರ ಧೋರಣೆ ಮತ್ತು ಕ್ರಿಯಾವಾದಗಳು ನವಭಾರತದ ಅಭ್ಯುದಯದ ದೃಷ್ಟಿಯಿಂದ ಜನಮನ್ನಣೆಯನ್ನು ಪಡೆದಿದ್ದವು. ರಾಷ್ಟ್ರೀಯವಾದಿ ಬರಹಗಾರರಾದ ವೀರೇಶಲಿಂಗಂ ಅವರು ತನ್ನ ಸೈದ್ಧಾಂತಿಕ ಉದ್ದೇಶಗಳನ್ನು ಅಡಕಗೊಳಿಸಿ ಕೃತಿಗಳನ್ನು ರಚಿಸಿದ್ದಾರೆ.

ಹತ್ತೊಂಬತ್ತನೇ ಶತಮಾನದ ದೇಶಕಟ್ಟುವ ಉತ್ಸಾಹ ಅವರಲ್ಲಿ ಪ್ರಖರವಾಗಿದೆ. ಕನ್ನಡದಲ್ಲಿ ರಾಷ್ಟ್ರೀಯತಾವಾದ ಆರಂಭವಾಗುವಾಗ ವೀರೇಶಲಿಂಗಂ ಅವರಂತಹ ಲೇಖಕ-ಕ್ರಿಯಾವಾದಿಗಳು ಮುಂಚೂಣಿಯಲ್ಲಿ ಇರುವುದು ಕಾಣುವುದಿಲ್ಲ. ಆದರೆ ಕನ್ನಡದ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳವಳಿ ಹಾಗೂ ರಾಷ್ಟ್ರೀಯವಾದಿ ವಿಚಾರಗಳ ಪ್ರಭಾವಗಳು ಅದರ ಸಹ ಭಾರತೀಯ ಭಾಷೆಗಳಿಂದ ಆಗಿವೆ. ಅದರಲ್ಲಿಯೂ ಮುಖ್ಯವಾಗಿ ಹತ್ತೊಂಬತ್ತನೇ ಶತಮಾನದಲ್ಲಿ ಉತ್ಕರ್ಷದಲ್ಲಿದ್ದ ಬಂಗಾಳಿಯಿಂದ ಭಾರತದ ಬಹುಪಾಲು ಭಾಷೆಗಳು ಪ್ರಭಾವಿತರಾಗಿದ್ದು ತಂತಮ್ಮ ಪ್ರಾದೇಶಿಕ ಚೌಕಟ್ಟಿನಲ್ಲಿ ಭಾರತೀಯ ಚಿಂತನಾಕ್ರಮವನ್ನು ರೂಢಿಸಿಕೊಳ್ಳಲು ಯತ್ನಿಸುತ್ತಿದ್ದವು. ಈ ಪ್ರಕ್ರಿಯೆಯಲ್ಲಿ ಮೊದಲ ಪ್ರಯೋಗಗಳಾಗಿ ಬಂದಿದ್ದೆಂದರೆ ಭಾಷಾಂತರಗಳು. ಹೀಗೆ ಕನ್ನಡದಲ್ಲಿಯೂ ಬಂಗಾಳಿ ಪ್ರಭಾವದಿಂದ ರಾಷ್ಟ್ರೀಯತಾವಾದಿ ಧೋರಣೆಗಳು ಒಂದು ಚಿಂತನಾಕ್ರಮವಾಗಿ ಹೊರಳುತ್ತಿದ್ದುದನ್ನು ಕಾಣಬಹುದು. ಈ ಪ್ರಕ್ರಿಯೆಯ ಛಾಯೆಯಂತೆ ತೆಲುಗಿನ ವೀರೇಶಲಿಂಗಂ ಅವರ ಕೃತಿಗಳು ಕನ್ನಡಕ್ಕೆ ಭಾಷಾಂತರಗೊಂಡಿರುವುದು ಗಮನಿಸಬೇಕಾದ ಸಂಗತಿ. ವೀರೇಶಲಿಂಗಂ ಅವರ ಧೋರಣೆಗಳು ಆಗತಾನೇ ಮೊಳಕೆಯೊಡೆಯುತ್ತಿದ್ದ ಸ್ತ್ರೀ ಉದ್ಧಾರದ ಸಾಮಾಜಿಕ ಸುಧಾರಣೆಗಳಿಗೆ ಪ್ರೇರಣೆ ನೀಡುವಂತೆ ಇದ್ದುದರಿಂದ ಭಾಷಾಂತರಕಾರರು ಅವರ ಕೃತಿಗಳಿಗೆ ಉತ್ಸಾಹದಿಂದ ಸ್ಪಂದಿಸಿದರು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ವಿದ್ಯಾವಂತ ವರ್ಗವೊಂದು ಹುಟ್ಟಿಕೊಳ್ಳುತ್ತಿತ್ತು. ಆ ವರ್ಗವು ದೇಶೀಯವಾಗಿ ಶಿಕ್ಷಣದ ಅರಿವನ್ನು ಅನುಷ್ಠಾನಕ್ಕೆ ತರುವತ್ತ ಉತ್ಸಾಹಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ತ್ರೀ ವಿಷಯಗಳು ಮುನ್ನೆಲೆಗೆ ಬಂದವು. ಹತ್ತೊಂಬತ್ತನೇ ಶತಮಾನದ ಹೊತ್ತಿಗೆ ಶಾಲೆಗಳು ಸ್ಥಳೀಯ ಹಂತದಲ್ಲಿ ಆರಂಭಗೊಳ್ಳುತ್ತಿದ್ದವು. ಮೊದಲು ಮಿಷನರಿ ಜನ ನಡೆಸುತ್ತಿದ್ದ ಶಾಲೆಗಳ ಜೊತೆ ದೇಶೀಯರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದರು. ಅವುಗಳಲ್ಲಿ ಸುಧಾರಣಾ ಧೋರಣೆಗೆ ಪೂರಕವಾದ ಶಾಲೆಗಳೇ ಹೆಚ್ಚು ಹೆಸರಾಗಿದ್ದವು. ಮೈಸೂರು ಪ್ರಾಂತ್ಯದಲ್ಲಿ ಮೈಸೂರಿನ ಅರಸರು ತಮ್ಮ ಪೋಷಕತ್ವವನ್ನು ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದಕ್ಕೆ ವಿನಿಯೋಗಿಸಿದರು. ಅದರಂತೆ ಕುದ್ಮುಲ್ ರಂಗರಾಯರು, ಅಂಬಿಲ್ ನರಸಿಂಹಯ್ಯ ಅಯ್ಯಂಗಾರ್ ಮುಂತಾದ ಪ್ರಗತಿಪರ ಸಮಾಜ ಸುಧಾರಣೆಯಲ್ಲಿ ಆಸಕ್ತರು ಶಾಲೆಗಳನ್ನು ಕಟ್ಟಿ ಬೆಳೆಸುವ ಆಸಕ್ತಿಯನ್ನು ತೋರಿದ್ದರು. ಸ್ವತಃ ವೀರೇಶಲಿಂಗಂ ಅವರು ರಾಜಮಂಡ್ರಿಯಲ್ಲಿ ಬಾಲಿಕೆಯರಿಗಾಗಿ ಶಾಲೆಗಳನ್ನು ತೆರೆದಿದ್ದರು. ಈ ಎಲ್ಲಾ ಚಟುವಟಿಕೆಗಳು ಹತ್ತೊಂಬತ್ತನೇ ಶತಮಾನದ ಶಿಕ್ಷಣದ ಕ್ರೈಸಿಸ್ ಅನ್ನು ತೋರುವುದರೊಂದಿಗೆ ಸ್ತ್ರೀಶಿಕ್ಷಣದ ಬಗ್ಗೆ ಇದ್ದ ರಾಷ್ಟ್ರೀಯ ಆಸಕ್ತಿಯನ್ನು ಎತ್ತಿ ತೋರುತ್ತವೆ.

ಮೇಲ್ಕಾಣಿಸಿದ ಹಿನ್ನೆಲೆಯಲ್ಲಿ, ಸ್ತ್ರೀಶಿಕ್ಷಣ ಅಥವಾ ಸ್ತ್ರೀಯರ ಅರಿವು, ತಿಳಿವಳಿಕೆಯ ಬಗ್ಗೆ ವೀರೇಶಲಿಂಗಂ ಅವರ ಧೋರಣೆಗಳನ್ನು ಕನ್ನಡದಲ್ಲಿ ಭಾಷಾಂತರಗೊಂಡ ಅವರ ಕೃತಿಗಳ ಹಿನ್ನೆಲೆಯಲ್ಲಿ ಪರಿಶೀಲಿಸುವುದು ಈ ಲೇಖನದ ಉದ್ದೇಶ. ಆ ಮೂರು ಕೃತಿಗಳೆಂದರೆ: ನಂಜನಗೂಡು ಅನಂತನಾರಾಯಣಶಾಸ್ತ್ರಿ ಭಾಷಾಂತರ ಮಾಡಿರುವ ‘ಸತ್ಯವತೀ ಚರಿತ್ರೆ’(1897), ನಂಜನಗೂಡು ಶ್ರೀಕಂಠಶಾಸ್ತ್ರಿ ಭಾಷಾಂತರಿಸಿರುವ ‘ಚಂದ್ರಮತಿ’(1897) ಹಾಗು ಬಿ.ರಾಮರಾವ್ ಅವರು ಭಾಷಾಂತರಿಸಿರುವ ‘ಸತ್ಯರಾಜಾ ಪೂರ್ವದೇಶಯಾತ್ರೆಗಳು’(1899)- ಈ ಕೃತಿಗಳು ಭಾಷಾಂತರಗೊಂಡಿರುವುದು ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ.

ತೆಲುಗಿನ ವೀರೇಶಲಿಂಗಂ ಅವರ ‘ಸತ್ಯರಾಜಾ ಪೂರ್ವದೇಶ ಯಾತ್ರೆಗಳು’(1899) ಕೃತಿಯನ್ನು ಬಿ.ರಾಮರಾಯರು ಕನ್ನಡಕ್ಕೆ ತಂದಿದ್ದಾರೆ. ಸರಿಸುಮಾರು ಶ್ರೀಕಂಠೇಶಗೌಡರು ಮಾಡಿದ ಷೇಕ್ಸ್ ಸ್ಪಿಯರಿನ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಕೃತಿಯ ಭಾಷಾಂತರವಾದ ‘ಪ್ರಮೀಳಾರ್ಜುನೀಯಂ’ ಬಂದ ವೇಳೆಯಲ್ಲಿಯೇ ಈ ಕೃತಿ ಬಂದಿದ್ದು ಎರಡರಲ್ಲಿಯೂ ಸ್ತ್ರೀದೇಶ ಎಂಬ ಕಲ್ಪಿತ ಮಾತೃಮೂಲೀಯ ಸಮಾಜವನ್ನು ಕೇಂದ್ರದಲ್ಲಿ ಇರಿಸಿಕೊಳ್ಳಲಾಗಿದೆ. ಈ ಸಾಮ್ಯತೆಯನ್ನು ಆ ಕಾಲದ ಯುಗಧರ್ಮವೆಂದೇ ಹೇಳಬಹುದು. ಮಲಯಾಳ ರಾಜ್ಯವೆನ್ನುವುದು ಮಾತೃಪ್ರಧಾನ ಸಮಾಜವಾದ ಕಾರಣ ಅದನ್ನು ಕಲ್ಪಿತ ಸ್ತ್ರೀಲೋಕವಾಗಿ ಭಾವಿಸಿ ಅದನ್ನೊಂದು ಪುರುಷ ಪರ್ಯಾಯ ಸಮಾಜವನ್ನಾಗಿ ನೋಡಲಾಗಿದೆ. ಆದರೆ ಸ್ತ್ರೀಮಲಯಾಳ ಎನ್ನುವುದು ಯಾವತ್ತಿಗೂ ಗೌರವದ ಮಾತಾಗಿರಲಿಲ್ಲ. ಹೆಣ್ಣುಗಳು ನಡೆಸುವ ಸಮಾಜವು ಅವರಷ್ಟೆ ಮೊಣಕಾಲ ಕೆಳಗೆ ಎನ್ನುವ ಛೇಡನೆಯ ದೃಷ್ಟಿಯಿಂದಲೇ ಈ ಕೃತಿಗಳು ಕಟ್ಟಲ್ಪಟ್ಟಿವೆ. ‘ಸತ್ಯರಾಜಾ ಪೂರ್ವದೇಶ ಯಾತ್ರೆಗಳು’ ಕೃತಿ ಸ್ತ್ರೀಮಲಯಾಳಕ್ಕೆ ಹೋಗುವ ಪುರುಷ ಸತ್ಯರಾಜನ ಅನುಭವಗಳನ್ನು ಹೇಳುತ್ತದೆ. ಇದೊಂದು ರೀತಿ ಫ್ಯಾಂಟಸಿ ಕಥನ. ಹಡಗಿನಲ್ಲಿ ಸಾಗಿ ಹೋಗುತ್ತಿದ್ದವನಿಗೆ ಅಚಾನಕ್ ಆಗಿ ಸ್ತ್ರೀಮಲಯಾಳ ದೇಶ ಕಂಡು ಬರುತ್ತದೆ. ಇಲ್ಲಿ ಇಳಿದ ನಂತರ ಲಿಲಿಪುಟ್ ಜಗತ್ತಿನಲ್ಲಿ ಇಳಿದ ಗಲಿವರನಂತೆ ಆಗಿಬಿಡುವ ಸತ್ಯರಾಜ ಅಲ್ಲಿನ ಪ್ರತಿಯೊಂದು ನಡೆ-ನುಡಿಯನ್ನೂ ತನ್ನ ಸಮಾಜದ ನಡೆನುಡಿಯೊಂದಿಗೆ ಹೋಲಿಸಿಕೊಳ್ಳುತ್ತಾ ಸಾಗುತ್ತಾನೆ. ಸ್ತ್ರೀಪ್ರಧಾನ ಸಮಾಜವು ಗಂಡಸರನ್ನು ಹೇಗೆ ಚುಟುಕುಮುಳ್ಳಿನ ಮೇಲೆ ಕುಣಿಸುತ್ತದೆ ಎನ್ನುವುದನ್ನು ಸ್ವಾರಸ್ಯಕರವಾಗಿ ಸತ್ಯರಾಜ ವಿವರಿಸುತ್ತಾನೆ. ಅವನೇ ಖೈದಿಯಾಗಿರುವ ಪ್ರಸಂಗದಲ್ಲಿಯೂ ಸ್ತ್ರೀಮಲಯಾಳದ ಬಗ್ಗೆ ಉಡಾಫೆಯ, ತುಸು ಗೇಲಿಯ ದೃಷ್ಟಿಯಲ್ಲಿ ನೋಡುವುದೇ ಸತ್ಯರಾಜನ ಹವ್ಯಾಸವಾಗಿಬಿಡುತ್ತದೆ. ಅವನ ಪ್ರಕಾರ, ಮನುಸ್ಮೃತಿಯು ಸ್ತ್ರೀನಡತೆಯ ಸಂಹಿತೆಯಾಗಿದ್ದರೆ ಇಲ್ಲಿ ‘ಪತ್ನೀವ್ರತಧರ್ಮಬೋಧಿನಿ’ ಅಂತಹ ಪ್ರಮಾಣಗ್ರಂಥ. ಕಾಮಪ್ರವೃತ್ತಿ, ಅಂತಃಪುರ, ಘೋಷಾ ಪದ್ಧತಿ ಇತ್ಯಾದಿ ವಿವರ ನೀಡಲಾಗಿದೆ. ಅಲ್ಲಿನ ಪ್ರಪಂಚವನ್ನೂ ತನ್ನ ಪ್ರಪಂಚವನ್ನೂ ತುಲನಾತ್ಮಕವಾಗಿ ಒಂದರ ಪಕ್ಕ ಒಂದನ್ನು ಇಟ್ಟು ನೋಡತೊಡಗುತ್ತಾನೆ ಈ ಯಾತ್ರಿಕ. ಈ ಸ್ತ್ರೀ ಮಲಯಾಳವನ್ನು ಕಲ್ಪಿಸಿಕೊಳ್ಳುವುದು ಹಿಂದೂ ಪುರಾಣದಲ್ಲಿ ಉಲ್ಲೇಖವಾಗುವ ಅಂಶಗಳಿಂದ. ಈ ದೇಶದಲ್ಲಿ ಪುರುಷರು ಇಲ್ಲವೆಂದೂ, ಗಾಳಿಗೆಯೇ ಮಕ್ಕಳು ಹುಟ್ಟುತ್ತಾರೆಂದೂ, ಸ್ತ್ರೀಮಲಯಾಳವನ್ನು ಕುರಿತು ನಮ್ಮವರು ಹೇಳಿದುದೆಲ್ಲವೂ ಸತ್ಯವೇ ಎಂದೂ ನಾನು ನಿಶ್ಚಯಿಸಿಕೊಂಡೆನು”(ಪು. 24). ಗಂಡಸಿನ ಅಗತ್ಯವೇ ಇಲ್ಲದ ಒಂದು ಪ್ರದೇಶ ಇದು ಎನ್ನುವಂತೆ ಅತಿರೇಕದ ಲೋಕವಾಗಿರುವ ಈ ಸ್ತ್ರೀ ಲೋಕದಲ್ಲಿ ಎಲ್ಲವು ಸ್ತ್ರೀಯರ ಅಧೀನದಲ್ಲಿಯೇ ನಡೆಯುತ್ತದೆ ಎನ್ನುವುದನ್ನು ಈ ಯಾತ್ರಿಕ ಕಂಡುಕೊಳ್ಳುತ್ತಾನೆ. ಆದರೆ ಅದು ಕಲ್ಪಿತವಾದ ವಿಚಿತ್ರ. ಅವನು ಕಲ್ಪಿಸುವ ಎಷ್ಟೊ ಸಂಗತಿಗಳು ಭಾರತೀಯ ಸಮಾಜದ ಪುರುಷರು ನಡೆದುಕೊಳ್ಳುವ ರೀತಿಗೆ ಪ್ರತಿಯಾಗಿ ಸ್ತ್ರೀಯರು ನಡೆದುಕೊಳ್ಳುವರು ಎನ್ನುವುದನ್ನು ದೃಷ್ಟಾಂತ ಮಾಡಿ ಹೇಳಲಾಗಿವೆ. ನಮ್ಮ ದೇಶದಲ್ಲಿ ಪುರುಷರೇ ಸ್ವತಂತ್ರರೆಂದೂ ಅವರೇ ಸ್ತ್ರೀಯರಿಗೆ ಹೊಡೆಯುವರೆಂದೂ ಹೇಳಿದರೆ ಅಲ್ಲಿನ ಸ್ತ್ರೀಯರು ನಂಬಲಿಲ್ಲವಂತೆ. ಇನ್ನೊಂದು ತಮಾಷೆಯ ಸಂಗತಿಯೆಂದರೆ, ಅಲ್ಲಿನ ವಿಧುರರಿಗೆ ತಲೆ ಬೋಳಿಸದೆ ಗಡ್ಡಮೀಸೆ ಬೋಳಿಸಿಬಿಡುವರಂತೆ; ಏಕೆಂದರೆ ಗಂಡಸರ ಜುಟ್ಟು ಹೆಂಗಸರ ಕೈಗೆ ಸಿಗಬೇಕೆನ್ನುವ ಉದ್ದೇಶದಿಂದಲಂತೆ!

ಪತ್ನೀವಿಯೋಗದಿಂದ ಗಂಡದಿರ ಮೂಗಿನ ತುದಿಯನ್ನು ದೊಡ್ಡ ಕತ್ತರಿಯಿಂದ ಕತ್ತರಿಸಿ ಬಿಡುವರು,. ಇಲ್ಲಿ ಪುರುಷರನ್ನು ಕೂಡಿಹಾಕಲು ದೊಡ್ಡಪೆಟ್ಟಿಗೆಗಳನ್ನು ಖರೀದಿಸಿ ಅದರೊಳಗೆ ಕೂಡಿಹಾಕುವರು.(ಪು.43).
ನಮ್ಮ ದೇಶದಲ್ಲಿ ಸ್ತ್ರೀಯರಿಗೆ ಎಷ್ಟು ನೋಂಪುಗಳಿವೆಯೊ ಆ ದೇಶದಲ್ಲಿ ಪುರುಷರಿಗೆ ಅದರ ಎರಡರಷ್ಟಿದೆ.. ದಿನಕ್ಕೆ ಎರಡರಂತೆ ಪುರುಷರು ಸಂವತ್ಸರಕ್ಕೆ ಇನ್ನೂರ ಮೂವತ್ತು ನೋಂಪುಗಳನ್ನಾಚರಿಸುವರು(ಪು.48).
ನಮ್ಮಲ್ಲಿಯ ಹಾಗೆ ವಿಧುರರಿಗೆ ತಲೆ ಬೋಳಿಸದೆ ಗಡ್ಡಮೀಸೆ ಮಾತ್ರ ಬೋಳಿಸಿ ಕೈಬಿಡುವರು. ಇದು ಏಕೆಂದು ಕೇಳಿದಾಗ ಪುರುಷರ ಜುಟ್ಟು ಸದಾ ಸ್ತ್ರೀಯರ ಕೈಯಲ್ಲಿ ಸಿಗಬೇಕೆಂಬ ಕಾರಣ(ಪು.43).
ಸ್ತ್ರೀಸಹಗಮನ ಇದ್ದಂತೆ ಪುರುಷ ಸಹಗಮನ ಇದೆ(ಪು.53).
ನಮ್ಮ ದೇಶದ ಸ್ತ್ರೀಯರ ಹಾಗೆಯೇ ಆ ದೇಶದಲ್ಲಿ ಗಂಡಸರಿಗೆ ಬರಹ ಕಲಿಸರು(ಪು.42).
ವಿದ್ಯೆ ಇಲ್ಲುದರಿಂದ ಆಭರಣದ ಕಡೆಗೆ ಇಲ್ಲಿನ ಪುರುಷರಿಗೆ ಒಲವು. ಪುರುಷರು ತಲೆಗೆ ಮಾತ್ರವೇ ಅಲ್ಲದೆ ಚೆಲುವಾಗಿ ತಲೆ ಬಾಚಿಕೊಂಡು ಮೀಸೆಗಳಿಗೂ ಗಡ್ಡಗಳಿಗೂ ಆಭರಣಗಳನ್ನು ಇಡುವರು(ಪು.43).

‘ಸತ್ಯರಾಜಾ ಪೂರ್ವದೇಶ ಯಾತ್ರೆಗಳು’ ಕೃತಿಗೆ ವ್ಯತಿರಿಕ್ತವಾಗಿ ಸತ್ಯವತೀ ಚರಿತ್ರೆ ಹಾಗೂ ಚಂದ್ರಮತಿ ಪಠ್ಯಗಳು ಸ್ತ್ರೀ ತಿಳಿವಳಿಕೆಯನ್ನು ನೇರವಾಗಿ ಪ್ರತಿಪಾದಿಸುವ ಕೃತಿಗಳಾಗಿವೆ. ಹತ್ತೊಂಬತ್ತನೆಯ ಶತಮಾನದ ಆಶೋತ್ತರಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಪ್ರಚಾರ ಪಠ್ಯಗಳನ್ನು ಬರೆದರೊ ಎಂಬಂತೆ ಇವು ಕಾಣುತ್ತವೆ.

ವೀರೇಶಲಿಂಗಂ ಅವರು ಸ್ತ್ರೀ ವಿದ್ಯಾಭ್ಯಾಸದ ಬಗೆಗೆ ಅತೀವವಾದ ಕಾಳಜಿ ಹೊಂದಿದ ಸುಧಾರಕರಾಗಿದ್ದರು. ಅವರ ಕಾದಂಬರಿಗಳಲ್ಲಿ ಪರೋಕ್ಷವಾಗಿವಾದರೂ ಸ್ತ್ರೀವಿದ್ಯಾಭ್ಯಾಸದ ಬಗೆಗೆ ತಿಳಿವಳಿಕೆ ನೀಡುವ ಪ್ರಸಂಗಗಳಿರುತ್ತವೆ. ಹೆಣ್ಣಿನ ಕಲ್ಪನೆಯು ಅವರ ಪ್ರಕಾರ ಶುಚಿತ್ವವನ್ನು ಕಾಪಾಡಿಕೊಂಡು ತನ್ನ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಿ, ಓದುಬರಹಗಳನ್ನು ಮಾಡಿದರೂ ಅವುಗಳ ವಿಪರೀತಾರ್ಥಕ್ಕೆ ಹೋಗದೆ ಸಂಸಾರಕ್ಕೆ ತಕ್ಕನಾಗಿ ಅವನ್ನು ಬಳಸುವ ಕಲೆಯನ್ನು ಅರಿತವಳು. ಶುಚಿತ್ವ ಆರೋಗ್ಯದ ಬಗೆಗೆ ಪಂತುಲು ಅವರು ತಪ್ಪದೇ ತಮ್ಮ ಕಾದಂಬರಿಗಳಲ್ಲಿ ತಿಳಿವಳಿಕೆಯನ್ನು ಹೆಣ್ಣಿನ ಮೂಲಕ ನೀಡುತ್ತಾರೆ. ಇದರಲ್ಲಿ ಸತ್ಯವತೀ ಚರಿತ್ರೆಯ ಕತೆಯನ್ನೇ ನೋಡುವುದಾದರೆ ಸತ್ಯವತಿ ಎನ್ನುವ ಹೆಣ್ಣು ವಿದ್ಯಾಭ್ಯಾಸ ಪಡೆದು ಆಧುನಿಕವಾಗಿ ಯೋಚಿಸಬಲ್ಲ ಹೆಣ್ಣು. ಆದರೆ ಅವಳ ಪ್ರಗತಿಪರತೆಯು ಹಳೆಯ ಸಮಾಜದ ಮೌಢ್ಯಗಳನ್ನು ತೊಡೆದುಕೊಂಡು ಇರುವ ವ್ಯವಸ್ಥೆಗೆ ಕಾಯಕಲ್ಪ ಕೊಡುವುದಕ್ಕೆ ಬದ್ಧವಾಗಿರುವಂತದ್ದು. ಹೆಣ್ಣಿನ ವಿವೇಕವು ಅವಳ ಸಾಂಸಾರಿಕ ಜೀವನವನ್ನು ಸರಿಪಡಿಸಿಕೊಳ್ಳುವುದಕ್ಕೆ, ಅದನ್ನು ಉದ್ಧಾರ ಮಾಡುವುದಕ್ಕೆ ಮೀಸಲಾಗಿರಬೇಕೆನ್ನುವ ಉದ್ದೇಶವನ್ನು ರಾಷ್ಟ್ರೀಯತೆಯ ಅಜೆಂಡಾ ಹೊಂದಿತ್ತು. ಇದಕ್ಕೆ ಪೂರಕವಾಗಿ ವೀರೇಶಲಿಂಗಂ ಅವರ ಸತ್ಯವತೀ ಚರಿತ್ರೆಯು ರಚಿಸಲ್ಪಟ್ಟಿದೆ. ಇದೂ ಸಹ ಒಂದು ಅಲಿಗರಿಯಂತೆಯೇ ಇದ್ದು ಉದ್ದೇಶವನ್ನು ನಿರೂಪಿಸಲು ಕತೆಯನ್ನು ಆಶ್ರಯಿಸಲಾಗಿದೆ. ಇದೊಂದು ಹೊಸಬಗೆಯ ಕಥನದ ಬರವಣಿಗೆಯಾಗಿದ್ದು ಇದರೊಳಗೆ ಮೌಲ್ಯಗಳನ್ನು ಅಡಕಗೊಳಿಸುವ ಪ್ರಚಾರ ಸಾಹಿತ್ಯದ ಲಕ್ಷಣಗಳಿವೆ. ಇದರ ಉದ್ದೇಶವೆಂದರೆ ಭಾರತೀಯ ಸ್ತ್ರೀ ಮೌಲ್ಯಗಳನ್ನು ಪ್ರಚುರ ಪಡಿಸುವುದು. ಈ ಕಥನದ ಆರಂಭದಲ್ಲಿಯೇ ಸ್ಪಷ್ಟವಾಗಿ ಹೇಳಲಾಗಿದೆ. “ಸುಲಭವಾದ ಹೊಸಗನ್ನಡದಿಂದ ಬರೆಯಲ್ಪಟ್ಟಿರುವ ಈ ಚರಿತ್ರೆಯಲ್ಲಿ ಪ್ರತಿದಿನವೂ ನೀವು ಎಲ್ಲಾ ಕುಟುಂಬಗಳೊಳಗೆ ಸರ್ವೇಸಾಧಾರಣವಾಗಿ ನೋಡುತ್ತಲೂ, ಅನುಭವಿಸುತ್ತಲೂ ಇರುವ ಸಾಮಾನ್ಯ ವಿಷಯಗಳೇ ಕಾಣಬರುವುದೇ ಹೊರತು ಯಾವ ಇಂದ್ರಜಾಲವೂ ಕಾಣದು. .. ..ಎಲೌ ಸ್ತ್ರೀಯರೇ! ನೀವು ಈ ಚರಿತ್ರೆಯನ್ನು ಓದಿದರೆ ಆ ಸತ್ಯವತಿಯ ಗುಣಾತಿಶಯಗಳು ತಿಳಿದು ನಿಮಗೆ ಆಕೆಯಲ್ಲಿ ಅನುರಾಗ ಹೆಚ್ಚಿ ಸಂಸಾರದಲ್ಲಿ ಎಲ್ಲರೊಳಗೂ ಇರುವ ಸ್ವಭಾವ ಲಕ್ಷಣಾದಿಗಳು ವ್ಯಕ್ತವಾಗಿ ಯಾರನ್ನು ಹೇಗೆ ಕಾಣಬೇಕು ಅದನ್ನು ನೀವೇ ಆಲೋಚಿಸಿಕೊಳ್ಳುವಿರಿ”(ಸತ್ಯವತೀ ಚರಿತ್ರೆ, ಪು.2 & 4). ಎಷ್ಟೊಂದು ಸೂಕ್ಷ್ಮವಾಗಿ ಹೆಣ್ಣಿನ ವಿದ್ಯಾಭ್ಯಾಸದ ಮಿತಿಗಳನ್ನು ಪಂತುಲು ಇಲ್ಲಿ ವಿವರಿಸುತ್ತಾರೆ ನೋಡಿ:

ಸ್ವಲ್ಪ ಓದು ಕಲಿತಿರುವ ಕೆಲ ಹುಡುಗಿಯರಂತೆ ಅವಳು ‘ತಾರಾಶಾಂತ ವಿಜಯ’ ಮುಂತಾದ ದುಷ್ಕಾವ್ಯಗಳನ್ನು ಓದಳು. ಶೃಂಗಾರ ಕಾವ್ಯಗಳ ಹೆಸರನ್ನು ಕೇಳಲೊಲ್ಲಳು. ತನಗೆ ಅವಕಾಶವಾದಾಗ ಪತಿವ್ರತೆಯರ ಚರಿತ್ರೆಗಳನ್ನೂ, ನೀತಿಗಳನ್ನೂ ಒಳ್ಳೆಯ ನಡವಳಿಕೆಗಳನ್ನೂ ಬೋಧಿಸುವ ಪುಸ್ತಕಗಳನ್ನು ಓದುವಳು(ಸತ್ಯವತೀ ಚರಿತ್ರೆ, ಪು.10)

ಪ್ರಸವದ ನಂತರ ಹೆಂಗಸು ಹೇಗೆ ಬಾಣಂತನ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಸತ್ಯವತಿ ವಿವರಿಸುತ್ತಾಳೆ. ಅವಳು ಯಾವುದೇ ವ್ರತಗಳನ್ನು ಮಾಡುವುದಿಲ್ಲ; ಶುಚಿಯಾಗಿರುತ್ತಾಳೆ. ಚಿಕ್ಕಂದಿನಲ್ಲಿಯೇ ಸುಖಾಧಾರ ಪ್ರಕಾಶಕ, ಆರೋಗ್ಯಮಾರ್ಗದರ್ಶಿ ಎಂಬ ಪುಸ್ತಕಗಳನ್ನು ಓದಿ ಗಾಳಿ ಮುಂತಾದವುಗಗಳ ಉಪಯೋಗ ತಿಳಿದಿದ್ದಳು(ಸತ್ಯವತೀ ಚರಿತ್ರೆ ಪು.11).

ಸ್ತ್ರೀಯರಿಗೆ ವಿದ್ಯಾಭ್ಯಾಸ ಮಾಡಿಸಿ ಐಕ್ಯಮತದಿಂದ ಲಾಭವುಂಟೆಂದು ಅವರು ತಿಳಿದುಕೊಳ್ಳುವಂತೆ ಮಾಡಿದರೆ ಅವರು ವಿವೇಕಿನಿಯರಾಗಿ ಜಗಳವಾಡದೆ ಒಟ್ಟಾಗಿಯೇ ವಾಸ ಮಾಡುತ್ತಾರೆ(ಸತ್ಯವತೀ ಚರಿತ್ರೆ, ಪು.31)

ಇನ್ನು ಹರಿಶ್ಚಂದ್ರರಾಜನ ಹೆಂಡತಿಯಾದ ಚಂದ್ರಮತಿಯ ಹೆಸರಿನಲ್ಲಿ ಕಾದಂಬರಿ ಬರೆದಿರುವ ವೀರೇಶಲಿಂಗಂ ಅವರ ಉದ್ದೇಶವು ಸ್ತ್ರೀ ವಿವೇಕವನ್ನು ಸ್ಥಾಪಿಸುವುದೇ ಆಗಿದೆ. ಚಂದ್ರಮತಿಯ ಮತಿ ಇಲ್ಲಿ ಪ್ರಮುಖವಾದ ಆಸಕ್ತಿ. ಚಂದ್ರಮತಿಯ ಕತೆಯನ್ನು ಆಧುನಿಕ ಕಾಲಕ್ಕೆ ಹೊಂದಿಸಿ ಹೇಳಲಾಗಿದೆ.

ಚಂದ್ರಮತಿಯು ವಿದ್ಯಾವಂತೆಯಾಗಿದ್ದುದರಿಂದ ವಿದ್ಯೆಯ ಪ್ರಯೋಜನವನ್ನು ಚೆನ್ನಾಗಿ ಅರಿತವಳಾಗಿ ತನ್ನ ಸಹಚಾರಿಣಿಯರಾದ ಸ್ತ್ರೀಯರಿಗೆಲ್ಲ ವಿದ್ಯೋಪದೇಶವನ್ನು ಮಾಡಿ ಹಿತಧರ್ಮ ಬೋಧನೆಯನ್ನು ಮಾಡುತ್ತಿದ್ದುದಲ್ಲದೆ, ಆ ರಾಜ್ಯದಲ್ಲೆಲ್ಲ ಬಾಲಿಕ ಪಾಠಶಾಲೆಗಳನ್ನು ಸ್ಥಾಪಿಸಿ, ಸ್ತ್ರೀಯರನ್ನೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ವಿದ್ಯಾವತಿಯನ್ನಾಗಿ ಮಾಡಿದಳು. ಆದಕಾರಣ ಆ ಕಾಲದಲ್ಲಿದ್ದ ಸ್ತ್ರೀಯರೂ ವಿದ್ಯಾವತಿಯರಾಗಿ, ತಂತಮ್ಮ ಪತಿಗಳು ಮಾಡುವ ಸತ್ಕಾರ್ಯಗಳಿಗೆ ಅಡ್ಡಿ ಮಾಡದರೆ ಮೌಢ್ಯವನ್ನು ತ್ಯಜಿಸಿ, ಸಮಸ್ತ ವಿಷಯಗಳಲ್ಲಿಯೂ ಅವರಿಗೆ ಅನುಕೂಲವಾಗಿರುತ್ತೆ, ಒಡವೆ ಮುಂತಾದವೆಲ್ಲ ವ್ಯರ್ಥಡಂಭಗಳೆಂದೂ ವಿಫಲಕಾರಿಗಳೆಂದೂ ವಿದ್ಯಾಮಹಿಮೆಯಿಂದ ತಿಳಿದುಕೊಂಡು, ಅವುಗಳಿಗೋಸುಗ ಗಂಡಂದಿರನ್ನು ಬಾಧಿಸದೆ ಪತಿವ್ರತೆಯರಾಗಿ ಲೋಕವೆಲ್ಲ ಮೆಚ್ಚುವಂತೆ ನಡೆದುಕೊಳ್ಳುತ್ತಿದ್ದರು”(ಚಂದ್ರಮತಿ, ಪು. 78).

ಜ್ಞಾನನೇತ್ರಕ್ಕೆ ಸಹಕಾರಿಯಾದ ವಿದ್ಯೆಯಿಂದ ಪುರುಷರಿಗೆ ಶುಭವೂ ಸ್ತ್ರೀಯರಿಗೆ ಅಶುಭವೂ ಉಂಟಾಗುವುದೆಂದು ವಾದಿಸುವುದು, ಬಾಹ್ಯನೇತ್ರಕ್ಕೆ ಸಹಕಾರಿಯಾದ ಬೆಳಕನ್ನು ಪುರುಷರಿಗೆ ಪ್ರಯೋಜನಕಾರಿಯಾಗಿಯೂ ಸ್ತ್ರೀಯರಿಗೆ ಅನರ್ಥಕಾರಿಯಾದುದನ್ನಾಗಿಯೂ ಭಾವಿಸಿ ವಾದಿಸುವುದು ಹಾಸ್ಯಾಸ್ಪದವಲ್ಲವೆ?(ಚಂದ್ರಮತಿ, ಪು.4)

ಹೆಣ್ಣುಮಕ್ಕಳು ಅತ್ತೆಯ ಮನೆಗೆ ಹೋಗುವ ಕಾಲವು ಸಮೀಪಿಸುವುದಕ್ಕೆ ಮೊದಲೇ ಅವರನ್ನು ಉತ್ತಮ ಗುಣವುಳ್ಳವರನ್ನಾಗಿಯೂ ಮಾಡಿರಬೇಕು(ಚಂದ್ರಮತಿ ಪು.5)- ಇದು ಪಂತುಲು ಅವರ ಆದರ್ಶ ಸತಿಯ ಕಲ್ಪನೆ. ಈ ಕಾದಂಬರಿಯಲ್ಲಿ ವೀರೇಶಲಿಂಗಂ ಅವರು ಕಥಾನಾಯಕಿಯಾದ ಚಂದ್ರಮತಿಗೆ ಉಪನಿಷತ್ತಿನ ಮಾದರಿಯ ಗಾರ್ಗಿ, ಮೈತ್ರೇಯಿಯಂತೆ ಗುರುವಿನ ಜೊತೆ ಸಂವಾದ ಏರ್ಪಡಿಸುವರು. ಗುರುಶಿಷ್ಯೆಯರ ಮಾತುಕತೆಯಲ್ಲಿ ಸತ್ಯ, ಲೋಕಸ್ವರೂಪ ಇತ್ಯಾದಿಗಳನ್ನು ಕುರಿತ ಚರ್ಚೆ ಇದೆ. ಹೀಗೆ ಸುಧಾರಣೆಯ ಅಂಶಗಳು ರಾಷ್ಟ್ರೀಯತೆಯ ಪ್ರಭಾವದ ಹಿನ್ನೆಲೆಯಲ್ಲಿ ರೂಪಿಸಿದ ಹೆಣ್ಣಿನ ಶೋಧನೆಯನ್ನು ಮಾಡಿಕೊಟ್ಟವು ಎನ್ನುವುದನ್ನು ಪಂತುಲು ಕಾದಂಬರಿಗಳು ನಿರೂಪಿಸುತ್ತವೆ. ಇದನ್ನು ಕನ್ನಡದಲ್ಲಿ ಉತ್ಸಾಹದಿಂದ ಭಾಷಾಂತರ ಮಾಡಿದವರು ಪುರುಷ ಭಾಷಾಂತರಕಾರರೇ ಎನ್ನುವುದನ್ನು ಗಮನಿಸಬೇಕು.

ತೆಲುಗಿನಲ್ಲಿ ನೂತನರೀತಿಯ ಕಲ್ಪನಾ ಕಥೆಗಳನ್ನು ಬರೆಯಲು ಆರಂಭಿಸಿದ್ದ ಪಂತುಲು ಅವರು ಸ್ತ್ರೀ ಸುಧಾರಣೆಯ ಕಾದಂಬರಿಗಳನ್ನು ಪ್ರಧಾನವಾಗಿ ಬರೆದಿರುವರು. ಆದರೆ ‘ಸತ್ಯರಾಜಾ ಪೂರ್ವದೇಶ ಯಾತ್ರೆಗಳು’ ಕೃತಿ ಪರ್ಯಾಯ ಸ್ತ್ರೀದೇಶವನ್ನು ತಮಾಷೆಯಾಗಿ ಗ್ರಹಿಸುವುದನ್ನು ನೋಡಿದರೆ ಪಂತುಲು ಅವರಂತಹ ಸಮಾಜ ಸುಧಾರಕರು ಕಲ್ಪಿಸುತ್ತಿದ್ದ ಸ್ತ್ರೀ ಅಸ್ತಿತ್ವ ಪುನಾ ಪಿತೃಪ್ರಧಾನ ಮೌಲ್ಯಗಳನ್ನು ಹೊಂದಿರುವಂತದ್ದು ಎಂದು ಅರಿವಾಗುತ್ತದೆ. ಈ ಕಲ್ಪನೆಯ ಸ್ತ್ರೀಲೋಕದಲ್ಲಿ ಸ್ತ್ರೀಯರ ಬುದ್ಧಿ ಮೇಲು ಎಂದು ತೋರಿಸಿರುವುದು ಒಂದು ವ್ಯಂಗ್ಯವೇ ಸರಿ. ಹೆಣ್ಣು ಬುದ್ಧಿವಂತಳಾಗುವುದು ಎಂದರೆ ಹೇಗೆ ಎನ್ನುವುದನ್ನು ರಾಷ್ಟ್ರೀಯವಾದಿಯಾದ ವೀರೇಶಲಿಂಗಂ ಅವರ ಇನ್ನೆರಡು ಕಾದಂಬರಿಗಳು ವಿವರಿಸುತ್ತವೆ. ಹೆಣ್ಣು ಬುದ್ಧಿವಂತಳಾದರೆ ಏನಾಗುತ್ತದೆ ಎನ್ನುವುದನ್ನು ದೃಷ್ಟಾಂತದ ಮೂಲಕ ತೋರಿಸುವಂತೆ ಷೇಕ್ಸ್ ಸ್ಪಿಯರ್ ನ ‘ಟೇಮಿಂಗ್ ಆಫ್ ದ ಶ್ರೂ’ದ ಹೆಣ್ಣು ದೇಶೀಯ ರೂಪಾಂತರಗಳಲ್ಲಿ ತಾಟಕಿಯಾಗಿ, ಚಂಡಿಯಾಗಿ ಕಾಣಿಸಿದ್ದು ಈ ಸಂದರ್ಭದಲ್ಲಿ ನೆನೆಯಬೇಕು. ಭಾರತೀಯ ನಾರಿ ಶಿಕ್ಷಣ ಪಡೆದೂ ಗಂಡುಬೀರಿಯಾಗಿರದೆ ಇರುವುದಾದರೆ ಹೇಗಿರಬೇಕು ಎನ್ನುವ ವಿನ್ಯಾಸವನ್ನು ವೀರೇಶಲಿಂಗಂ ಅವರು ಮಾಡಿದ್ದಾರೆ.

ಹತ್ತೊಂಬತ್ತನೇ ಶತಮಾನದಲ್ಲಿ ಪ್ರಚಲಿತವಾಗಿದ್ದ ಮಹರ್ಷಿ ಕರ್ವೆಯವರ ಮಾದರಿ ಹೆಣ್ಣು ಗೃಹಸ್ವಾಮಿನಿಯಾಗಿದ್ದುಕೊಂಡು ಮಾಡಬೇಕಾದ ಕರ್ತವ್ಯಗಳನ್ನು ಮಾಡುತ್ತಿದ್ದವಳು. ಹೆಣ್ಣು ಸುಶೀಲೆಯಾಗಿದ್ದುಕೊಂಡು ತನ್ನ ಶಿಶುಪಾಲನೆ ಮಾಡುತ್ತಾ ತನ್ನ ಮನೆ, ಮನೆತನಗಳನ್ನು ಕಾಪಾಡುವ ಜಪಾನಿ ಮಾದರಿಯು ರಾಷ್ಟ್ರೀಯತಾವಾದಿಗಳಿಗೆ ಪ್ರೀತಿಯಾದ ಮಾದರಿಯಾಗಿತ್ತು. ಆದುದರಿಂದ ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಭಾರತೀಯ ನಾರಿ ಎನ್ನುವ ಪರಿಕಲ್ಪನೆಯು ಹಳೆಯ ಬಟ್ಟೆಗಳಿಂದಲೇ ನೇಯ್ದ ಹೊಸ ಕೌದಿಯಾಗಿತ್ತು. ಅದನ್ನು ಅಭಿವೃದ್ಧಿ ಪಡಿಸುವ ಹೊಣೆಯನ್ನು ಆ ಕಾಲದ ಪುರುಷ ರಾಷ್ಟ್ರೀಯತಾವಾದಿಗಳು ನಿಭಾಯಿಸಲೆತ್ನಿಸುತ್ತಿದ್ದರು.

ವೀರೇಶಲಿಂಗಂ ಅವರ ಸ್ತ್ರೀಸುಧಾರಣೆಯು ಅದು ನಿರೂಪಿಸಿದ ಹಾಗೆ ಏಕಮುಖಿಯಾಗಿರಲು ಸಾಧ್ಯವೇ? ಎಂದು ಪ್ರಶ್ನಿಸಿಕೊಳ್ಳಬೇಕು. ಸರ್ವತೋಮುಖವಾಗಿ ಸ್ತ್ರೀಯರ ಅಭಿವೃದ್ಧಿಯನ್ನು ಮಾಡಬಲ್ಲ ಶಿಕ್ಷಣವು ಸ್ತ್ರೀಯರಿಗೆ ದೊರೆಯುತ್ತಿತ್ತೇ? ಎಂದು ಕೇಳಿದರೆ ಪ್ರಾಯಶಃ ಇಲ್ಲವೆಂದೇ ಹೇಳಬೇಕಾಗುತ್ತದೆ. ಪಶ್ಚಿಮದ ಮೂಲಕ ವ್ಯಾಪಿಸುತ್ತಿದ್ದ ಆಧುನಿಕತೆ ಸಾಂಪ್ರದಾಯಿಕ ಸಮಾಜಕ್ಕೆ ಸದಾ ಕಿರಿಕಿರಿಯನ್ನುಂಟು ಮಾಡುವ ಸಂಗತಿಯಾಗಿತ್ತು. ಮಿಷನರಿ ಶಿಕ್ಷಣದಿಂದ ಕೆಲವು ಪ್ರಾಥಮಿಕ ವಿಜ್ಞಾನದ ಅಂಶಗಳನ್ನು ಅಳವಡಿಸಿಕೊಂಡ ಗೃಹವಿಜ್ಞಾನ ಹಾಗೂ ಗೃಹಕೈಗಾರಿಕೆಗಳನ್ನು ಹೆಣ್ಣುಮಕ್ಕಳ ಶಿಕ್ಷಣದ ಆದ್ಯತೆಯಾಗಿಸಲಾಯಿತು. ಈ ಹಿನ್ನೆಲೆಯಲ್ಲಿ, ವೀರೇಶಲಿಂಗಂ ಅವರ ಸುಧಾರಣೆಯ ಆಶಯಗಳು ಅವರ ಕಾದಂಬರಿಗಳಾದ ಸತ್ಯವತೀ ಚರಿತ್ರೆ ಹಾಗೂ ಚಂದ್ರಮತಿಯಲ್ಲಿ ಹೇಗೆ ಸ್ತ್ರೀ ವ್ಯಕ್ತಿತ್ವವೊಂದನ್ನು ನಿರೂಪಿಸಲೆತ್ನಿಸಿದವು ಎನ್ನುವುದು ಮಹತ್ವದ ಸಂಗತಿಯಾಗಿದೆ. ಪಂತುಲು ಅವರ ‘ಸತ್ಯರಾಜನ ಪೂರ್ವದೇಶ ಯಾತ್ರೆಗಳು’ ಕೃತಿಯು ಸ್ತ್ರೀಲೋಕವನ್ನು ಪರಿಹಾಸ ಮಾಡುವಂತೆ ನಿರೂಪಿತವಾದ ಕಥನವಾಗಿದ್ದು ಅವರ ದ್ವಂದ್ವವನ್ನು ಬಿಚ್ಚಿಡುವಂತಿದೆ. ಬೆಂಗಳೂರು ನಾಗರತ್ನಮ್ಮ ಅವರು ಪ್ರಕಟಿಸಿದ ಮುದ್ದುಪಲಾನಿಯ ಕಾವ್ಯವನ್ನು ಅತಿಶೃಂಗಾರದಿಂದ ಕೂಡಿರುವ ಆ ಕೃತಿಯು ಅಶ್ಲೀಲವಾಗಿದ್ದು ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದವರು ವೀರೇಶಲಿಂಗಂ ಅವರು ಎನ್ನುವುದನ್ನು ಇಲ್ಲಿ ನೆನಪು ಮಾಡಿಕೊಳ್ಳುವುದಾದರೆ ರಾಷ್ಟ್ರೀಯವಾದಿ ಸ್ತ್ರೀ ತಿಳಿವಳಿಕೆಯನ್ನು ನಿಯಂತ್ರಿಸುತ್ತಿದ್ದುದು ಹಳೆಯ ಪಿತೃಪ್ರಧಾನ ವ್ಯವಸ್ಥೆಯೇ ಎನ್ನುವುದು ವಿದಿತವಾಗುತ್ತದೆ.

ಕನ್ನಡದಲ್ಲಿ ವೀರೇಶಲಿಂಗಂ ಅವರ ಈ ಕೃತಿಗಳನ್ನು ಭಾಷಾಂತರಿಸಿದ ಭಾಷಾಂತರಕಾರರು ಪಂಡಿತ/ವಿದ್ಯಾವಂತ ವರ್ಗಕ್ಕೆ ಸೇರಿದವರು ಎನ್ನುವುದನ್ನು ಗಮನಿಸಬೇಕು. ‘ಸತ್ಯವತೀ ಚರಿತ್ರೆ’ ಹಾಗೂ ‘ಚಂದ್ರಮತಿ’ ಕೃತಿಗಳನ್ನು ಕ್ರಮವಾಗಿ ನಂಜನಗೂಡು ಅನಂತನಾರಾಯಣಶಾಸ್ತ್ರಿ ಹಾಗೂ ಶ್ರೀಕಂಠಶಾಸ್ತ್ರಿ ಇವರು ಅನುವಾದಿಸಿದ್ದಾರೆ. ಇವರು ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ವಿದ್ವಾಂಸರು. ಇವರ ಭಾಷಾಂತರವು ಒಂದು ಸಾಮಾಜಿಕ ಪ್ರತಿಷ್ಠೆಗನುಸಾರಿಯಾಗಿ ನಿರೂಪಿಸಲ್ಪಟ್ಟಿರುವುದಷ್ಟೆ. ಇನ್ನು ಬಿ.ರಾಮರಾಯರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕರ್ಣಾಟಾಧ್ಯಪಕರಾಗಿದ್ದವರು. ಇವರು ನಿರೂಪಿಸಿದ ಕೃತಿಯ ಪರಿಣಾಮವು ಒಂದು ಯುರೋಪಿಯನ್ ರೊಮಾನ್ಸ್ ನಂತೆ ಇರಬಹುದು ಎನ್ನುವುದನ್ನು ಬಲ್ಲವರಾಗಿದ್ದರು. ಕನ್ನಡ ವಾಚಕರಿಗೆ ವೀರೇಶಲಿಂಗಂ ಅವರ ಕೃತಿಗಳು ಹಿಡಿಸಬಹುದು ಎನ್ನುವ ನಂಬಿಕೆಯಿಂದ ಭಾಷಾಂತರಗೊಂಡ ಕೃತಿಗಳು ಇವು. ಹೀಗಿರುವುದರಿಂದ ವಾಚಕ ವರ್ಗವು, ರಾಷ್ಟ್ರೀಯತೆಯ ಸಂದರ್ಭದಲ್ಲಿ ಅಣಿಗೊಳಿಸಿಕೊಳ್ಳಬೇಕಾದ ಹಲವಾರು ಪಾತ್ರಗಳನ್ನು ಅವು ಅವರ ಮುಂದೆ ಇಟ್ಟಿತು ಎಂದು ಊಹಿಸಬಹುದು.

ಆಕರ ಪುಸ್ತಕಗಳು
ಅನಂತನಾರಾಯಣಶಾಸ್ತ್ರಿ, ನಂಜನಗೂಡು. ಸತ್ಯವತೀ ಚರಿತ್ರೆ. ಮೈಸೂರು: ಶ್ರೀನಿವಾಸ ಮುದ್ರಾಕ್ಷರ ಶಾಲೆ, ಮೊದಲ ಮುದ್ರಣ, 1916
ರಾಮರಾವ್, ಬಿ. ಸತ್ಯರಾಜಾ ಪೂರ್ವದೇಶಯಾತ್ರೆಗಳು.ಪ್ರಥಮ ಭಾಗ. ಸ್ತ್ರೀಮಲಯಾಳ. ಮದ್ರಾಸ್: ಮೆಸರ್ಸ್‍ಗೇವ್ಸ್ ಕುಕ್ಸನ್ & ಕಂಪೆನಿ, 1899
ಶ್ರೀಕಂಠಶಾಸ್ತ್ರಿ, ನಂಜನಗೂಡು. ಚಂದ್ರಮತಿ. ಬೆಂಗಳೂರು: ಎಂ.ಎಸ್.ರಾವ್ ಕಂಪೆನಿ, 1910

ಈ ಅಂಕಣದ ಹಿಂದಿನ ಬರೆಹಗಳು:
ಟಾಲ್‍ಸ್ಟಾಯ್ ಎಂಬ ಬೂರ್ಜ್ವಾ ವೃಕ್ಷದ ನೆರಳು- (ಟಾಲ್‍ಸ್ಟಾಯ್ ಕನ್ನಡಾನುವಾದಗಳು)
ಕನ್ನಡ ಬೌದ್ಧಸಾಹಿತ್ಯದ ಭಾಷಾಂತರಗಳ ಸ್ವರೂಪ ಹಾಗೂ ರಾಜರತ್ನಂ ಭಾಷಾಂತರಗಳು
ಶ್ರದ್ಧೆಯ ಬೆಸೆವ ಭಾಷಾಂತರ

ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ

ಬೇಂದ್ರೆ ಅನುವಾದಗಳ ಅನುಸಂಧಾನ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ

ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ

ಇಂಗ್ಲಿಷ್ ಗೀತಗಳ ಪಯಣ

ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು













MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...