‘ಸ್ತ್ರೀಯರು ದೇವಾಲಯಕ್ಕೆ ಬದಲು ಸಂಸತ್ ಪ್ರವೇಶದತ್ತ ಗಮನ ಹರಿಸಬೇಕು’- ಡಾ.ಶಿವಗಂಗಾ ರುಮ್ಮಾ

Date: 06-02-2020

Location: ಕಲಬುರಗಿ, ಶ್ರೀವಿಜಯ ಪ್ರಧಾನ ವೇದಿಕೆ


ನಮ್ಮ ಹೆಣ್ಣು ಮಕ್ಕಳು ಇನ್ನು ಮುಂದೆ ದೇವಾಲಯ ಪ್ರವೇಶ ನಿಲ್ಲಿಸಬೇಕು. ಸಂಸತ್ತಿನ ಪ್ರವೇಶದತ್ತ ಗಮನ ಹರಿಸಬೇಕು. ಅದೇ ನೈಜ ಲೋಕ ಜ್ಞಾನ ಗ್ರಹಿಕೆ ಎಂದು ಸಾಹಿತಿ ಡಾ. ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು. ಸ್ತ್ರೀ ಲೋಕದ ತಲ್ಲಣಗಳ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿ, ಹೆಣ್ಣು ಅಬಲೆ, ಮರದ ನೆರಳಲ್ಲಿಯ ಬಳ್ಳಿ ಎಂದು ನಂಬಿಕೆ ಮೂಡಿಸುತ್ತಾ ವಂಚನೆ ಎಸಗಲಾಗಿದೆ. ಆಳುವ ವರ್ಗವು ತಮಗೆ ಬೇಕಾದಂತೆ ಸ್ತ್ರೀಯರನ್ನು ವಸ್ತು-ಸಾಮಗ್ರಿ ಎಂಬಂತೆ ಮಾರ್ಪಡಿಸಿಕೊಳ್ಳುತ್ತಾ ಬಂದಿದೆ. ತಮ್ಮ ಈ ಬಂಧನ ಮುಕ್ತ ಸ್ಥಿತಿಗೆ ಸ್ತ್ರೀಯರು ದೇವಾಲಯ ಮೊರೆ ಹೋಗಬೇಕಿಲ್ಲ. ಸಂಸತ್ ಪ್ರವೇಶದತ್ತ ಗಮನ ಹರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಿ.ಟಿ.ಲಲಿತಾ ನಾಯಕ್, ಅಕ್ಷರಗಳನ್ನು ಕಲಿತ ಮಾತ್ರಕ್ಕೆ ಶಿಕ್ಷಣ ಅಲ್ಲ, ವಿದ್ಯಾವಂತರು ಮರ್ಯಾದಾ ಹತ್ಯೆಯ ಪ್ರಮುಖ ಆರೋಪಿಗಳಾಗುತ್ತಿದ್ದಾರೆ. ತಂದೆ, ಮೇಷ್ಟ್ರುಗಳೊಂದಿಗೆ ತಮ್ಮ ಮಕ್ಕಳನ್ನು ಕಳುಹಿಸಲು ತಾಯಂದಿರು ಭಯ ಬೀಳುತ್ತಿದ್ದಾರೆ. ಆಧುನಿಕತೆಯ ನೆಪದಲ್ಲಿ ಕರಾಳ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಸಾಗುತ್ತಿರುವುದು ಮಾನವೀಯ ದುರಂತ ಎಂದು ವಿಷಾದಿಸಿದರು.

ನಾಮಕಾವಾಸ್ತೆ ಹೆಣ್ಣು: ಇಂದಿಗೂ ರಾಜಕೀಯದಲ್ಲಿ ನಾಮಾಕಾವಸ್ಥೆಯಲ್ಲಿ ಹೆಣ್ಣನ್ನು ಕೂರಿಸುವ ಪರಿಪಾಠ  ಮುಂದುವರಿದೆ. ಪುರುಷ ಪ್ರಧಾನ ಮನಸ್ಥಿತಿಯನ್ನು ಸ್ತ್ರೀಯರು ಅರ್ಥ ಮಾಡಿಕೊಳ್ಳಬೇಕು. ತಪ್ಪಿದರೆ, ಸ್ತ್ರೀ ಸಮಾನತೆ ಎಂಬುದು ಮರೀಚಿಕೆಯಾಗುತ್ತದೆ. ಮೇಲ್ನೋಟಕ್ಕೆ ಸಮಾಜದ ಸಂವೇದನೆ ಬದಲಾಗಿದೆ ಎಂದರೂ ಸ್ತ್ರೀಯರ ವೇದನೆ ಬದಲಾಗಿಲ್ಲ. ಹೆಣ್ಣಿಗೆ ಮೀಸಲಾತಿ ಕೊಡಿ ಎನ್ನುವ ಬದಲು ಸಂವಿಧಾನಾತ್ಮಕ ಹಕ್ಕು ಕೊಡಿ ಎನ್ನುವ ಧ್ವನಿ ಗಟ್ಟಿಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸ್ತ್ರೀ ಸಾಧನೆ ಕಡೆಗಣನೆ: ಸಾಹಿತಿ ಆರ್‌. ಪೂರ್ಣಿಮಾ  ಮಾತನಾಡಿ, History ಎಂದರೆ his story ಮಾತ್ರ. ಪುರಾಣ ಕತೆಗಳಲ್ಲೂ ಸ್ತ್ರೀ ಸಮಾನತೆ ಇಲ್ಲ. ರಾಜ ಪ್ರಭುತ್ವ ಸೇರಿದಂತೆ ಇಂದಿನ ಪ್ರಜಾಪ್ರಭುತ್ವದಲ್ಲೂ ಸ್ತ್ರೀಯರ ಸಾಧನೆಗಳನ್ನು ಕಡೆಗಣಿಸಲಾಗುತ್ತಿದೆ. ಈ ಕುರಿತು ಮಹಿಳೆಯರ ಚಿಂತನೆಗಳು ಮತ್ತಷ್ಟು ತೀಕ್ಷ್ಣವಾಗಬೇಕು ಎಂದು ಆಶಿಸಿದರು.

ಪುರುಷ ಪ್ರಧಾನ ಮನಸ್ಥಿತಿ: ಸ್ತ್ರೀ ಸಮಾನತೆಗಾಗಿ ಇಂದಿಗೂ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವ ಪ್ರಸಂಗಗಳು ಸಾಮಾನ್ಯವಾಗುತ್ತಿವೆ. ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಪುರುಷ ಪ್ರಧಾನ ಮನಸ್ಥಿತಿಗೆ ಸಾಕ್ಷಿ ನುಡಿಯುತ್ತಿದೆ. ಮಹಿಳೆಯರು ಸಬಲರಾದಾಗಲೇ ಪ್ರಜಾಪ್ರಭುತ್ವದ ಆಶಯಗಳು ಸಾಕಾರವಾದಂತೆ ಎಂದು ಉಪನ್ಯಾಸ ಮಂಡಿಸಿದ ತಾರಿಣಿ ಶುಭದಾಯಿನಿ ಅಭಿಪ್ರಾಯಪಟ್ಟರು.

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...