ಸ್ವರ ಮಾಧುರ್ಯದ ರಾಣಿ: ಕೇಸರಿಬಾಯಿ ಕೇರ್‍ಕರ್

Date: 07-03-2021

Location: .


ತಮ್ಮ ಸ್ವರಮಾಧುರ್ಯದಿಂದ ಸಂಗೀತ ಲೋಕದ ಅನಭಿಷಕ್ತ ರಾಣಿಯಂತೆ ಮೆರೆದವರು ಕೇಸರಿಬಾಯಿ ಕೇರ್‍ಕರ್‌. ಅವರ ಸಂಗೀತ ಪ್ರೇಮ ಹಾಗೂ ಬದುಕನ್ನು ಸಾಹಿತಿ ಜಗದೀಶ ಕೊಪ್ಪ ಅವರು ತಮ್ಮ ‘ಗಾನಲೋಕದ ಗಂಧರ್ವರು’ ಅಂಕಣದಲ್ಲಿ ಪರಿಚಯಿಸಿದ್ದಾರೆ.

ಭಾರತೀಯ ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮ ಅಮೋಘ ಕಂಠಸಿರಿಯ ಮೂಲಕ ಅನಭಿಷಕ್ತ ರಾಣಿಯಂತೆ ಬದುಕಿದವರಲ್ಲಿ ಕೇಸರಿಬಾಯಿ ಕೇರ್‍ಕರ್ ಮುಖ್ಯರು. ಜೊತೆಗೆ ತಮ್ಮ ಘನತೆವೆತ್ತ ಬದುಕು, ಸಂಗೀತ ಕುರಿತಂತೆ ಇದ್ದ ಬದ್ಧತೆಯ ಮೂಲಕ ತಾವು ಬದುಕಿದ ಕಾಲಘಟ್ಟದಲ್ಲಿ ಪುರುಷರ ಸಾಮ್ರಾಜ್ಯವಾಗಿದ್ದ ಹಿಂದೂಸ್ತಾನಿ ಗಾಯನ ಕ್ಷೇತ್ರದಲ್ಲಿ ಮಹಿಳಾ ಗಾಯಕಿಯರತ್ತ ಕಣ್ತೆರೆದು ನೋಡುವಂತೆ ಮಾಡಿದ ಈ ಮಹಾನ್ ಗಾಯಕಿ, ತಮ್ಮ ಸಮಕಾಲೀನ ಹಾಗೂ ನಂತರದ ವಿದೂಷಿಯರಾದ ಮೊಗುಬಾಯಿ ಕುರ್ಡಿಕರ್, ರಸೂಲನ್ ಬಾಯಿ, ಗೋಹರ್‌ಜಾನ್, ಬೇಗಂ ಅಕ್ತರ್, ಗಂಗೂಬಾಯಿ ಹಾನಗಲ್, ಹೀರಾಬಾಯಿ ಬರೋಡೆಕರ್ ರಂತಹ ಮಹಾನ್ ಗಾಯಕಿಯರನ್ನೂ ಸಹ ಸಂಗೀತ ಕ್ಷೇತ್ರ ಗೌರವದಿಂದ ನೋಡುವ ಹಾಗೆ ಮಾಡಿದವರಲ್ಲಿ ಪ್ರಮುಖರು.
ಅಂದಿನ ಪೋರ್ಚುಗೀಸರ ವಶದಲ್ಲಿದ್ದ ಗೋವಾದ ಪೊಂಡ ತಾಲ್ಲೂಕಿನ ಕೇರಿ ಎಂಬ ಕುಗ್ರಾಮವೊಂದರಲ್ಲಿ ಕಲಾವಂತಲು ಎಂದು ಕರೆಯಲಾಗುತ್ತಿದ್ದ ದೇವದಾಸಿ ಸಮುದಾಯದಲ್ಲಿ ಜನಿಸಿ, ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಹಾಗೂ ಸಂಗೀತವನ್ನು ಆಲಿಸುವಂತೆ ಮಾಡಿದ ಅಪ್ರತಿಮ ಸಾಧಕಿ ಶ್ರೀಮತಿ ಕೇರ್‍ಕರ್. 1977ರಲ್ಲಿ ಅಮೇರಿಕಾದ ನಾಸಾ ಸಂಸ್ಥೆ ವೊಯಜರ್-1 ಎಂಬ ಬಾಹ್ಯಾಕಾಶ ನೌಕೆಯ ಮೂಲಕ ಆಕಾಶ ಮಂಡಲದಲ್ಲಿ ಇರಬಹುದಾದ ಅನ್ಯಗ್ರಹಗಳ ಜೀವಿಗಳಿಗೆ ಭೂಮಿಯ ಸಂದೇಶ ತಲುಪಲಿ ಎಂಬ ಆಶಯದಿಂದ ಜಗತ್ತಿನ ಮೂವರು ಸಂಗೀತಗಾರರ ಚಿನ್ನದಿಂದ ಲೇಪಿತವಾದ ಧ್ವನಿ ಮುದ್ರಿಕೆಯ ತಟ್ಟೆಗಳನ್ನು ಕಳುಹಿಸಲಾಯಿತು. ಆ ಮೂವರು ಸಂಗೀತಗಾರರಲ್ಲಿ ಕೇಸರಿಬಾಯಿ ಕೇರ್‍ಕರ್ ಅವರು, ಭೈರವಿ ರಾಗದಲ್ಲಿ ಹಾಡಿದ ‘ಜಾತ್ ಕಹಾ ಹೋ’ ಮೂರು ನಿಮಿಷದ ಧ್ವನಿ ಮುದ್ರಿಕೆಯೂ ಸಹ ಒಂದು. (ಮತ್ತಿಬ್ಬರ ಧ್ವನಿ ಮುದ್ರಿಕೆಗಳೆಂದರೆ, ಮೊಜಾರ್ಟ್‌ ಮತ್ತು ಚೆಕ್ ಬೆರ್ರಿ ಎಂಬುವರದು.) ಇಂತಹ ಅದ್ಭುತ ಕಂಠಸಿರಿಯನ್ನು ಹೊಂದಿದ್ದ ಕೇಸರಿ ಬಾಯಿಯವರ ಸಂಗೀತವನ್ನು ಆಲಿಸಿದ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ್ ಅವರು ಕೊಲ್ಕತ್ತ ನಗರದಲ್ಲಿ 1938ರಲ್ಲಿ ಅವರನ್ನು ‘ಸುರಶ್ರೀ’ ಎಂದು ಕರೆದು ಗೌರವ ಸಲ್ಲಿಸಿದರು. (ಸುರ್ ಎಂದರೆ ಸಂಗೀತ ಅಥವಾ ಸ್ವರ, ಶ್ರೀ ಎಂದರೆ ಶ್ರೇಷ್ಠವಾದುದು.) ರಾಷ್ಟ್ರಕವಿಯಿಂದ ಸ್ವರ ಮಾಧುರ್ಯದ ರಾಣಿ ಎನಿಸಿಕೊಂಡ ಕೇಸರಿಬಾಯಿ ಕೇರ್‍ಕರ್ ಸಂಗೀತ ಕ್ಷೇತ್ರ ಇತಿಹಾಸಲ್ಲಿ ಪ್ರಪಥಮಬಾರಿಗೆ ತಮಗೆ ವಯಸ್ಸಾಗುತ್ತಿದ್ದಂತೆ 1964ರಲ್ಲಿ ಸಾರ್ವಜನಿಕವಾಗಿ ನಿವೃತ್ತಿ ಘೋಷಿಸಿಕೊಂಡ ಗಾಯಕಿಯಾದರು. ವಯಸ್ಸಿನ ಕಾರಣದಿಂದ ಕಂಪಿಸುವ ಧ್ವನಿಯಲ್ಲಿ ಹಾಡುವಾಗ ರಾಗಗಳಿಗೆ ಅಪಚಾರ ಎಸಗಬಾರದು ಎನ್ನುವ ಅವರ ನಿಲುವು ಇಡೀ ಗಾಯನ ಕ್ಷೇತ್ರಕ್ಕೆ ಮಾದರಿಯಾಯಿತು. ಅಷ್ಟೇ ಅಲ್ಲದೆ, ಎಂದಿಗೂ ಪ್ರಚಾರ ಮತ್ತು ಪ್ರಸಿದ್ಧಿಗೆ ಹಾತೊರೆಯದೆ, ಶುದ್ಧ ಸಂಗೀತದ ಪ್ರತಿಪಾದಕರಾಗಿದ್ದ ಕೇಸರಿಬಾಯಿ ಕೇರ್‍ಕರ್ ಎಂದಿಗೂ ಆಕಾಶವಾಣಿ ಕೇಂದ್ರ ಅಥವಾ ಜನ ಸಾಮಾನ್ಯರ ಸಂಗೀತ ಕಚೇರಿಯತ್ತ ಸುಳಿಯಲಿಲ್ಲ. ಸಂಗೀತ ಕೇಳಬೇಕು ಎನ್ನುವವರು ಕಚೇರಿಗೆ ಬರಬೇಕು ಎನ್ನುವುದು ಅವರ ದೃಢ ನಿಲುವಾಗಿತ್ತು.
1892ರಲ್ಲಿ, ಗೋವಾದ ರಾಜಧಾನಿ ಪಣಜಿ ಮತ್ತು ಪೋಂಡ ನಗರಗಳ ನಡುವೆ ಇರುವ ಕೇರಿ ಎಂಬ ಗ್ರಾಮದಲ್ಲಿ ಜನಿಸಿದ ಕೇಸರಿಬಾಯಿ, ಸ್ಥಳಿಯ ಮಂಗೇಶ್ ದೇವಾಲಯದಲ್ಲಿ ನಡೆಯುತ್ತಿದ್ದ ಪೂಜಾ ಸಮಯದ ಭಜನೆ ಮತ್ತು ಕೀರ್ತನೆಗಳಿಂದ ಪ್ರಭಾವಿತರಾಗಿ ಬೆಳೆದರು. ಸಂಗೀತ ಮತ್ತು ನೃತ್ಯವನ್ನು ನಂಬಿಕೊಂಡು ಬದುಕುತ್ತಿದ್ದ ಕಲಾವಂತಲು ಸಮುದಾಯದ ಕೇಸರಿಬಾಯಿಯವರಿಗೆ ಅವರ ಸೋದರ ಮಾವ ಆರಂಭದಲ್ಲಿ ದೇಗುಲದ ಪೂಜಾರಿಗಳ ಮೂಲಕ ಭಜನೆ ಮತ್ತು ಕೀರ್ತನೆಗಳನ್ನು ಹಾಡುವುದನ್ನು ಕಲಿಸಿದರು. (ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೂಡ ಗೋವಾದ ಇದೇ ಸಮುದಾಯ ಮತ್ತು ಪರಿಸರದಿಂದ ಬಂದವರು) ನಂತರ ಅವರಿಗೆ ಎಂಟು ವರ್ಷವಾಗಿರುವಾಗ ಕೊಲ್ಲಾಪುರ ಪಟ್ಟಣಕ್ಕೆ ಕರೆದುಕೊಂಡು ಹೋಗಿ ಸಮೀಪದ ಮೀರಜ್ ನ ಉಸ್ತಾದ್ ಅಬ್ದುಲ್ ಕರೀಂ ಖಾನರ ಬಳಿ ಒಂದು ವರ್ಷ ಕಾಲ ಪ್ರಾಥಮಿಕ ಶಿಕ್ಷಣ ಕೊಡಿಸಿದರು. ಬಡತನದಿಂದಾಗಿ ಶಿಕ್ಷಣ ಮುಂದುವರಿಸಲಾಗದೆ ಬಾಲಕಿ ಕೇಸರಿಬಾಯಿ ತನ್ನ ತಾಯಿ ಹಾಗೂ ಸೋದರ ಮಾವನೊಡನೆ ಗೋವಾಕ್ಕೆ ಹಿಂತಿರುಗಿದರು.
ಇಪ್ಪತ್ತನೆಯ ಶತಮಾನದ ಆರಂಭ ಒಂದು ರೀತಿಯಲ್ಲಿ ಭಾರತದಲ್ಲಿ ಸಾಂಸ್ಕೃತಿಕ ಲೋಕದ ಪಲ್ಲಟಗಳ ದಿನಗಳು ಎಂದು ಬಣ್ಣಿಸಬಹುದು. ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯು ಪ್ರವರ್ಧಮಾನಕ್ಕೆ ಬಂದು ಭಾರತದ ಬಹುತೇಕ ಸಂಸ್ಥಾನಗಳ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ, ಸಂಸ್ಥಾನಗಳ ಮಹಾರಾಜರುಗಳ ಪೋಷಣೆಯಲ್ಲಿ ಜೀವನ ನಿರ್ವಹಿಸುತ್ತಿದ್ದ ಕಲಾವಿದರು, ಸಂಗೀತ ವಿದ್ವಾಂಸರು ಆಸ್ಥಾನಗಳಲ್ಲಿ ನೆಲೆ ಕಳೆದುಕೊಂಡು ನಗರಗಳತ್ತ ಮುಖ ಮಾಡಿದರು. ಉತ್ತರ- ದಕ್ಷಿಣ ಅಥವಾ ಪೂರ್ವ-ಪಶ್ಚಿಮ ಎಂಬ ಭೇದ-ಭಾವವಿಲ್ಲದೆ ಸಂಗೀತಗಾರರು, ಗಾಯಕ/ಗಾಯಕಿಯರು ಮತ್ತು ನೃತ್ಯಗಾತಿಯರು ಮತ್ತು ವಿದ್ವಾಂಸರು ಆ ಕಾಲದ ಪ್ರೆಸಿಡೆನ್ಸಿ ರಾಜಧಾನಿಗಳಾದ ಕೊಲ್ಕತ್ತ, ಮದ್ರಾಸ್, ಬಾಂಬೆ ಮತ್ತು ದೆಹಲಿ ನಗರಗಳತ್ತ ವಲಸೆ ಹೋಗಿ ಹೊಸ ಹೊಸ ಆಶ್ರಯದಾತರನ್ನು ಹುಡುಕಿಕೊಂಡರು. 1908ರಲ್ಲಿ ಕೇಸರಿಬಾಯಿ ತನ್ನ ತಾಯಿ ಹಾಗೂ ಸೋದರ ಮಾವನೊಡನೆ ಅಂದಿನ ಬಾಂಬೆ ನಗರಕ್ಕೆ ಬಂದಾದ ಪ್ರಖ್ಯಾತ ಶ್ರೀಮಂತ ವರ್ತಕ ಸೇಠ್ ವಲ್ಲಭದಾಸ್ ದ್ವಾರಕದಾಸ್ ಎಂಬುವರು ಆಕೆಗೆ ಆಶ್ರಯ ನೀಡಿ ಪೋಷಕರಾದರು.
ಮುಂಬೈ ನಗರ ಬಾಂಬೆ ಪ್ರೆಸಿಡೆನ್ಸಿ ನಗರವಾಗಿ ಹಾಗೂ ದೇಶದ ಪ್ರಮುಖ ಬಂದರು ನಗರವಾಗಿದ್ದ ಕಾರಣ ಕೊಲ್ಕತ್ತ ನಗರವನ್ನು ಹೊರತು ಪಡಿಸಿದರೆ ಬ್ರಿಟೀಷರ ಪಾಲಿಗೆ ಅತಿ ಮುಖ್ಯ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿತ್ತು. ಹಾಗಾಗಿ, ನೆರೆಯ ಗುಜರಾತ್ ಮತ್ತು ರಾಜಸ್ತಾನಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ವರ್ತಕರು ಆಗಮಿಸಿ, ವ್ಯಾಪಾರ ಮತ್ತು ಉದ್ದಿಮೆಗಳ ಮೂಲಕ ಯಶಸ್ಸು ಕಂಡರು. ಇದೇ ವೇಳೆಗೆ ಹೈದರಾಬಾದ್ ನಗರದ ನಿಜಾಮ ಮತ್ತು ಕೊಲ್ಕತ್ತ ನಗರದ ದಾಸ್ ಎಂಬ ಶ್ರೀಮಂತ ವ್ಯಾಪಾರಿ ಈ ಇಬ್ಬರೂ ವ್ಯವಹಾರದ ನಿಮಿತ್ತ ಮುಂಬೈ ನಗರಕ್ಕೆ ಆಗಮಿಸುವಾಗ, ತಮ್ಮ ಜೊತೆಯಲ್ಲಿ ಸಂಗೀತಗಾರರು, ಗಾಯಕರು, ನೃತ್ಯಗಾತಿಯರನ್ನು ಕರೆತಂದು ಪ್ರತಿ ರಾತ್ರಿ ಮೆಹಫಿಲ್ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. ಈ ಮನರಂಜನೆಗೆ ಸ್ಥಳಿಯ ಶ್ರೀಮಂತರು ಮತ್ತು ವರ್ತಕರನ್ನು ಆಮಂತ್ರಿಸಿ ಅವರಲ್ಲಿ ಸಂಗೀತ ಮತ್ತು ನೃತ್ಯದ ಅಭಿರುಚಿ ಹುಟ್ಟಿ ಹಾಕಿದರು. ಇದೇ ವೇಳೆಗೆ, ಉತ್ತರ ಪ್ರದೇಶದಿಂದ ಮುಂಬೈ ನಗರಕ್ಕೆ ಆಗಮಿಸಿದ ಉಸ್ತಾದ್ ದಿಲ್ವಾರ್ ಖಾನ್ ಪುತ್ರರಾದ ಚಜ್ಜುಖಾನ್ ಮತು ಖಾದಿಂ ಹುಸೈನ್ ಖಾನ್ ಎಂಬ ಸಹೋದರರು ಮುಂಬೈ ನಗರಕ್ಕೆ ಬಂದು ಬೆಂಡಿ ಬಝಾರ್ ಪ್ರದೇಶದಲ್ಲಿ ನೆಲೆ ನಿಂತು ಹಿಂದುಸ್ತಾನಿ ಸಂಗೀತದ ಅಲೆ ಹರಡುವಲ್ಲಿ ಯಶಸ್ವಿಯಾದರು. ನಂತರ ಬೆಂಡಿ ಬಝಾರ್ ಘರಾಣೆ ಹೆಸರಿನಲ್ಲಿ ಇವರ ಸಂಗೀತವು ಮುನ್ನೆಲೆಗೆ ಬಂತು. ಇವರ ಜೊತೆಗೆ ಕೊಲ್ಲಾಪುರದ ಸಾಹು ಮಹಾರಾಜರ ಸಂಸ್ಥಾನದಲ್ಲಿ ಆಸ್ಥಾನ ಗಾಯಕರಾಗಿದ್ದ ಜೈಪುರ್ ಅತ್ರವಾಳಿ ಘರಾಣೆಯ ಸಂಸ್ಥಾಪಕರೆಂದು ಪ್ರಸಿದ್ಧಿಯಾದ ಅಲ್ಲಾದಿಯಾ ಖಾನರು, ತಮ್ಮ ಸಹೋದರ ಹಾಗೂ ತಮ್ಮ ಇಬ್ಬರು ಪುತ್ರರಾದ ಬುರ್ಜಿಖಾನ್ ಮತ್ತು ಮಂಜಿಖಾನ್ ( ಮಲ್ಲಿಕಾರ್ಜುನ ಮನ್ಸೂರ್ ಅವರ ಸಂಗೀತದ ಗುರು) ಇವರೊಡನೆ ಮುಂಬೈ ನಗರಕ್ಕೆ ಆಗಮಿಸಿದರು. ಉಸ್ತಾದ್ ಅಬ್ದುಲ್ ಕರೀಂ ಖಾನರ ಪುತ್ರಿ ಹೀರಾಬಾಯಿ ಬರೋಡೆಕರ್ ಮುಂತಾದವರ ಆಗಮನದಿಂದ ಮುಂಬೈ ನಗರ ಪ್ರಮುಖ ಹಿಂದೂಸ್ತಾನಿ ಸಂಗೀತದ ಕೇಂದ್ರವಾಗಿ ಬೆಳೆಯಿತು.
ಕೇಸರಿಬಾಯಿ, ಮುಂಬೈ ನಗರಕ್ಕೆ ‌ಬಂದ ನಂತರ, ಬರ್ಖಾತ್ ಖಾನ್ ಎಂಬ ಸಿತಾರ್ ವಾದಕ ಹಾಗೂ ಮೈಸೂರು ಮತ್ತು ಪಟಿಯಾಲಾ ಸಂಸ್ಥಾನದ ಆಸ್ಥಾನ ವಿದ್ವಾಂಸ ಬರ್ಖಾತ್ ಉಲ್ಲಾಖಾನ ಬಳಿ ಕಲಿತರು. ನಂತರ ಅಲ್ಲಾದಿಯಾಖಾನರ ಶಿಷ್ಯರಲ್ಲಿ ಮುಖ್ಯರಾದ ಪಂಡಿತ್ ಬಾಸ್ಕರ್ ಬುವಾ ಬಾಕಲೆ ಬಳಿ ಎರಡು ವರ್ಷ ಅಭ್ಯಾಸ ಮಾಡಿದರು. ಅವರು ಪೂನಾ ನಗರಕ್ಕೆ ಹೋದ ಕಾರಣ ಪಂಡಿತ್ ರಾಮಕೃಷ್ಣ ಬುವಾ ಅವರ ಬಳಿ ಅಭ್ಯಾಸ ಮಾಡಿದರು. ತಮ್ಮ ಹಾಡುವ ವೃತ್ತಿಯ ಜೊತೆಗೆ ಸಂಗೀತದಲ್ಲಿ ಸಾಧನೆ ಮಾಡಬೇಕೆಂದು ಕನಸು ಕಾಣುತ್ತಿದ್ದ ಕೇಸರಿಬಾಯಿಯವರು ಜೈಪುರ್ ಅತ್ರಾವಳಿ ಘರಾಣೆಯ ಅಲ್ಲಾದಿಯಾ ಖಾನರ ಬಳಿ ಕಲಿಯಬೇಕೆಂದು ಕನಸು ಕಾಣುತ್ತಿದ್ದರು. ಅಲ್ಲಾದಿಯಾ ಖಾನರು ಸಂಗೀತ ಶಿಕ್ಷಣದಲ್ಲಿ ತೀವ್ರತರ ಶಿಸ್ತು ಮತ್ತು ನಿಯಮಗಳನ್ನು ಪಾಲಿಸುತ್ತಿದ್ದರು. ಪ್ರತಿ ದಿನ ಕನಿಷ್ಟ ಹತ್ತರಿಂದ ಹನ್ನೆರೆಡು ಗಂಟೆಗಳ ಕಾಲ ಶಿಷ್ಯರು ಸಂಗೀತ ಅಭ್ಯಾಸ ಮಾಡಬೇಕಿತ್ತು. ಹಾಗಾಗಿ, ತಮ್ಮ ಇಬ್ಬರು ಪುತ್ರರನ್ನು ಹೊರತು ಪಡಿಸಿದರೆ, ಮೊಗುಬಾಯಿ ಕುರ್ಡಿಕರ್ ( ಖ್ಯಾತ ಗಾಯಕಿ ಕಿಶೋರಿ ಅಮುನ್ಕರ್ ರವರ ತಾಯಿ) ಮತ್ತು ಭಾಸ್ಕರ್ ಬುವಾ ಎಂಬುವರಿಗೆ ಮಾತ್ರ ಸಂಗೀತ ಕಲಿಸಿದ್ದರು.
ಕೇಸರಿಬಾಯಿ ಅವರ ಕೋರಿಕೆ ಮೇರೆಗೆ ಶಿಕ್ಷಣಕ್ಕೆ ಒಪ್ಪಿದ ಅಲ್ಲಾದಿಯಾಖಾನರಿಗೆ ಆ ಕಾಲದಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಅಪಾರ ಪ್ರಮಾಣದ ಗುರುದಕ್ಷಿಣೆ ನೀಡಿದ ಕೇಸರಿಬಾಯಿ ಸತತ ಹನ್ನೊಂದು ವರ್ಷಗಳ ಕಾಲ ಅಭ್ಯಾಸ ಮಾಡಿ, ಸ್ವತಃ ಗುರುವಿನಿಂದ ಹೊಗಳಿಕೆ ಪಾತ್ರರಾದರು. ಜೈಪುರ್ ಅತ್ರಾವಳಿ ಘರಾಣೆಯ ಶೈಲಿಯಲ್ಲಿ ಖ್ಯಾಲ್ ಅಥವಾ ಖಯಾಲ್ ಪ್ರಕಾರವನ್ನು ಸಾಮಾನ್ಯವಾಗಿ ವಿಳಂಬಿತ್ತಗತಿ ಅಥವಾ ವೇಗದಲ್ಲಿ ಮತ್ತು ಮಧ್ಯಮ ವೇಗದಲ್ಲಿ ಹಾಡುವ ಪದ್ದತಿ ಇದ್ದ ಕಾರಣ ಗಾಯಕ ಅಥವಾ ಗಾಯಕಿಗೆ ತನ್ನ ಮನೊಧರ್ಮಕ್ಕೆ ಅನುಗುಣವಾಗಿ ರಾಗಗಳನ್ನು ವಿಸ್ತರಿಸುವುದಕ್ಕೆ ಹೇರಳವಾದ ಅವಕಾಶ ಇರುತ್ತಿತ್ತು. ಹಾಗಾಗಿ, ಕೇಸರಿಬಾಯಿಯವರು ರಾಗ, ಭಾವ ಮತ್ತು ಸಾಹಿತ್ಯಕ್ಕೆ ಚ್ಯುತಿ ಬಾರದಂತೆ ಗಾಯನ ಪ್ರಸ್ತುತ ಪಡಿಸುವಲ್ಲಿ ಹೆಸರಾಗಿದ್ದರು. ಅವರು ಸತತ ತಾಲೀಮು ಮತ್ತು ಕಠಿಣ ಶ್ರಮದ ಮೂಲಕ ತನ್ನ ಕಂಠಸಿರಿಯ ಮೇಲೆ ನಿಯಂತ್ರಣ ಹೊಂದಿದ್ದರು. ವಿಳಂಬಿತ್ ಮಧ್ಯಮ ಅಥವಾ ದ್ರುತ ವೇಗದಲ್ಲಿ ಹಾಡುವಾಗಲೂ ಅವರು ಧ್ವನಿಯ ಮೇಲೆ ಅಪರಿಮಿತ ನಿಯಂತ್ರಣ ಹೊಂದಿರುತ್ತಿದ್ದರು. ಅವರ ಕಂಠ ಎಲ್ಲದಕ್ಕೂ ಹೊಂದಿಕೊಳ್ಳುತ್ತಿತ್ತು. ಕರ್ನಾಟಕ ಸಂಗೀತದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿಯವರಿಗೆ ಇಂತಹ ಪ್ರತಿಭೆ ಇತ್ತು. ಕೇಸರಿಬಾಯಿ ಸಮಕಾಲೀನ ಸಂಗೀತಗಾರರಲ್ಲಿ ಪಂಡಿತ್ ಅಮೀರ್ ಖಾನ್ ಹೊರತು ಪಡಿಸಿದರೆ, ಹಿರಿಯವರಾದ ಅಬ್ದುಲ್ ಕರೀಂ ಖಾನ್, ಅಲ್ಲಾದಿಯಾ ಖಾನ್ ಮತ್ತು ಬಡೇ ಗುಲಾಂ ಆಲಿಖಾನ್ ಇಂತಹ ಸಾಧನೆ ಮಾಡಿದ ಕಲಾವಿದರಾಗಿದ್ದರು.
ರಾಗ ಎನ್ನುವುದು ಕೆಲವು ನಿರ್ದಿಷ್ಟ ಸ್ವರಗಳ ಸಂಯೋಜನೆ. ಕೇವಲ ಸ್ವರಗಳ ಆರೋಹಣ ಅಥವಾ ಅವರೋಹಣಗಳಿಂದ ರಾಗ ಸೃಷ್ಟಿಯಾಗಲಾರದು. ರಾಗದ ಲಕ್ಷಣವನ್ನು ಗ್ರಹಿಸಿ, ಅದಕ್ಕೆ ಭಾವ ತುಂಬುವುದರ ಜೊತೆಗೆ ತನ್ನ ಸ್ವಂತ ಕಲ್ಪನೆಯನ್ನು ಮಿಳಿತಗೊಳಿಸಿ, ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಹಾಡಿದಾಗ ಮಾತ್ರ ನಿಜವಾದ ಸಂಗೀತಕ್ಕೆ ಅರ್ಥ ದೊರಕುತ್ತದೆ. ಖಯಾಲ್ ಎಂದರೆ, ಒಂದರ್ಥದಲ್ಲಿ ದೇವರೊಡನೆ ಸಂಗೀತಗಾರ ನಡೆಸುವ ಸಂವಾದ ಅಥವಾ ದೇವರ ಸ್ತುತಿ ಎನ್ನಬಹುದು. ಅಮೀರ್ ಖುಸ್ರೋ ತನ್ನ ಗುರು ಹಾಗೂ ಸೂಫಿ ಸಂತ ಹಜರತ್ ಮಹಮ್ಮದ್ ಔಲಿಯಾ ಅವರನ್ನು ಸ್ತುತಿಸಲು ಖಯಾಲ್ ಪ್ರಕಾರವನ್ನು ಪರಿಣಾಮಕಾರಿಯಾಗಿ ಬಳಸಿರುವುದನ್ನು ನಾವು ಇತಿಹಾಸದಲ್ಲಿ ಕಾಣಬಹುದು. ಹಾಗಾಗಿ, ಖಯಾಲ್ ಪ್ರಕಾರದ ಹಾಡುಗಾರಿಕೆಯಲ್ಲಿ ಕೇಸರಿಬಾಯಿ ಅನಭಿಷಕ್ತ ರಾಣಿಯಂತೆ ಇದ್ದರು.
ತಮ್ಮ ಗುರು ಅಲ್ಲಾದಿಯಾ ಖಾನ್ ರ ಬಳಿ ಸಂಗೀತ ಅಭ್ಯಾಸ ಮಾಡುತ್ತಾ, ಸ್ವತಂತ್ರವಾಗಿ ಹಾಡುತ್ತಿದ್ದ ಕೇಸರಿಬಾಯಿ ಕೇರ್‍ಕರ್ ಅವರು 1944ರಲ್ಲಿ ಮುಂಬೈ ನಗರದಲ್ಲಿ ನಡೆದ ವಿಕ್ರಮಾದಿತ್ಯ ಸಂಗೀತ ಸಮ್ಮೇಳನದಲ್ಲಿ ತಮ್ಮ ಗುರುವಿನ ಜೊತೆ ಹಾಡಿ ರಾಷ್ಟ್ರದ ಗಮನ ಸೆಳೆದರು. ಗುರುವಿನ ನಿಧನಾನಂತರ, ದೆಹಲಿ, ಮುಂಬೈ, ಕೊಲ್ಕತ್ತ ನಗರಗಳಲ್ಲಿನ ಸಂಗೀತೋತ್ಸವ ಮತ್ತು ಕೆಲವು ಸಂಸ್ಥಾನಗಳ ಆಮತ್ರಣದ ಮೇರೆಗೆ ಬರೋಡ, ಮೈಸೂರು ನಗರಗಳಿಗೆ ಹೋಗಿ ಹಾಡಿ ಬರುತ್ತಿದ್ದರು. ತಮ್ಮ ಜೀವಮಾನವಿಡಿ ಶುದ್ಧ ಸಂಗೀತಕ್ಕೆ ಹಬಲಿಸಿದ ಅವರು ಶೋತ್ರುಗಳಿಗೆ ಶ್ರೇಷ್ಟ ಮಟ್ಟದ ಗಾಯನವನ್ನು ನೀಡಿ ಗೌರವಗಳಿಗೆ ಪಾತ್ರರಾದರು. ಆ ಕಾಲದ ಹೆಚ್.ಎಂ.ವಿ. ಕಂಪನಿಗೆ ಮಾತ್ರ ಮೂರು ಧ್ವನಿಮುದ್ರಿಕೆ ಅವಕಾಶ ಮಾಡಿಕೊಟ್ಟಿದ್ದ ಅವರು ಮುದ್ರಿತ ಧ್ವನಿ ಮುದ್ರಿಕೆಯನ್ನು ಕೇಳಿ ಅವರಿಗೆ ಒಪ್ಪಿಗೆಯಾದರೆ ಮಾತ್ರ ಬಿಡುಗಡೆ ಮಾಡಲು ಅವಕಾಶ ನೀಡುತ್ತಿದ್ದರು. ಅವರು ಧ್ವನಿ ಮುದ್ರಣಕ್ಕಾಗಿ ಸ್ಟುಡಿಯೋಗೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕಂಪನಿಯವರು ಇಡೀ ಸ್ಟುಡಿಯೋ ಅನ್ನು ಗುಲಾಬಿ ಹೂಗಳಿಂದ ಶೃಂಗರಿಸಿ, ಪನ್ನೀರನ್ನು ಸಿಂಪಡಿಸಿ, ಶ್ರೀಗಂಧದ ಅಗರಬತ್ತಿಯನ್ನು ಹಚ್ಚಿಟ್ಟು ಕಾಯುತ್ತಿದ್ದ ಸಂಗತಿಯನ್ನು ಕಂಪನಿಯ ಮಾಜಿ ನೌಕರರು ದಾಖಲಿಸಿದ್ದಾರೆ.
1953ರಲ್ಲಿ ಅವರಿಗೆ ಕೇಂದ್ರ ಸರ್ಕಾರದ ನೃತ್ಯ ಮತ್ತು ಸಂಗೀತ ಅಕಾಡೆಮಿಯಿಂದ ಪ್ರಶಸ್ತಿ ದೊರೆತಾಗ, ರಾಷ್ಟ್ರಪತಿ ರಾಜೇಂದ್ರಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಿದರು. 1969ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತಾಗ, ಅವರ ಗಾಯನವನ್ನು ಕೇಳಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಮುಕ್ತಕಂಠದಿಂದ ಕೇಸರಿಬಾಯಿರವನ್ನು ಪ್ರಶಂಸಿಸಿದರು. ಸಾರ್ವಜನಿಕ ಬದುಕಿಗೆ ನಿವೃತ್ತಿ ಘೋಷಿಸಿ, ತಾನು ‘ಅಂತಿಮ ಯಾತ್ರೆಗೆ ಸಿದ್ಧವಾಗಿರುವ ಯಾತ್ರಿಕಳು’ ಎಂದು ಅವರು ಘೋಷಿಸಿಕೊಂಡಿದ್ದರೂ ಸಹ ಮಹಾರಾಷ್ಟ್ರ ಸರ್ಕಾರವು ಸಹ ಅವರಿಗೆ ಅದೇ ವರ್ಷ ರಾಜ್ಯ ಗಾಯಕಿ ಎಂಬ ಘೋಷಿಸಿ ಸನ್ಮಾನಿಸಿತು. ಕೊಲ್ಕತ್ತ ನಗರದ ಮೂಲಕ ಖ್ಯಾತ ಸಂಗೀತ ವಿದ್ವಾಂಸ ಕೃಷ್ಣಪ್ರಸಾದ್ ಬ್ಯಾನರ್ಜಿ ಎಂಬುವರು ತಮ್ಮ ‘ದ ಲಾಸ್ಟ್ ವಲ್ಡ್ ಆಫ್ ಹಿಂದೂಸ್ತಾನಿ ಮ್ಯೂಸಿಕ್’ ಎಂಬ ಕೃತಿಯಲ್ಲಿ ಆ ಕಾಲದ ಖ್ಯಾತ ಕಲಾವಿದರು ಹಾಗೂ ಸಂಗೀತ ಶಾಲೆಗಳ ಕುರಿತಾಗಿ(ಘರಾಣೆ) ವಿವರವಾಗಿ ಬರೆದಿದ್ದಾರೆ. ತಾವು ಯುವಕನಾಗಿದ್ದಾಗ, ಕೊಲ್ಕತ್ತ ನಗರದಲ್ಲಿ ಕೇಳಿದ ಕೇಸರಿಬಾಯಿಯವರ ಸಂಗೀತ ಕುರಿತಂತೆ ಮೂರು ಪುಟಗಳಲ್ಲಿ ಆಕೆಯ ಪ್ರತಿಭೆಯನ್ನು ದಾಖಲಿಸಿರುವ ಪರಿ ನಿಜಕ್ಕೂ ಅನನ್ಯವಾದುದು. 1977ರಲ್ಲಿ ತಮ್ಮ 85ನೆಯ ತುಂಬು ವಯಸ್ಸಿನಲ್ಲಿ ಕೇಸರಿಬಾಯಿ ಕೇರ್‍ಕರ್ ನಿಧನ ಹೊಂದಿದರು. ತಮ್ಮ ಅವಧಿಯಲ್ಲಿ ಕೊಲ್ಲಾಪುರ ಮೂಲದ ದೊಂಡುತಾಯಿ ಕುಲಕರ್ಣಿ ಎಂಬ ಶಿಷ್ಯೆಯನ್ನು ತಯಾರು ಮಾಡಿ ತಾವು ಗುರುನಿಂದ ಪಡೆದಿದ್ದ ಎಲ್ಲಾ ಕಲೆಯನ್ನು ಶಿಷ್ಯೆಗೆ ಧಾರೆಯೆರೆದರು. ದೊಂಡುಬಾಯಿ ಕುಲಕರ್ಣಿಯವರು ಜೀವನಪೂರ್ತಿ ಬ್ರಹ್ಮಚಾರಿಣಿಯಾಗಿ ಉಳಿದುಕೊಂಡು ಗುರುವಿನ ಸಂಗೀತದ ಔನ್ನತ್ಯವನ್ನು ಎತ್ತಿ ಹಿಡಿದರು. ಕುಲಕರ್ಣಿಯವರ ಶಿಷ್ಯೆ ನಮಿತಾ ದೇವಿದಯಾಳ್ ಎಂಬಾಕೆ ಬರೆದಿರುವ ‘ದ ಮ್ಯೂಸಿಕ್ ರೂಂ’ ಎಂಬ ಕೃತಿ, ಏಕ ಕಾಲಕ್ಕೆ ಕೇಸರಿಬಾಯಿ ಕೇರ್‍ಕರ್ ಹಾಗೂ ದೊಂಡುತಾಯಿ ಕುಲಕರ್ಣಿ ಇವರ ವ್ಯಕ್ತಿತ್ವವನ್ನು ದಾಖಲಿಸಿರುವ ಅಪರೂಪದ ಅಮೂಲ್ಯ ಕೃತಿಯಾಗಿದೆ.
ಗೋವಾದ ಜನತೆ ಕೂಡ ತಮ್ಮ ನೆಲದ ಹೆಣ್ಣು ಮಗಳ ಸಾಧನೆಯನ್ನು ಮರೆತಿಲ್ಲ. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಪೊಂಡಾ ತಾಲ್ಲೂಕಿನ ಕೇರಿ ಗ್ರಾಮದಲ್ಲಿ ಕೇಸರಿಬಾಯಿ ಸ್ಮಾರಕ ಮೂರು ದಿನಗಳ ಸಂಗೀತೋತ್ಸವ ನಡೆಸುತ್ತಿದೆ. ಜೊತೆಗೆ, ಇದೇ ಸಂದರ್ಭದಲ್ಲಿ, ಕೇಸರಿಬಾಯಿ ಹೆಸರಿನಲ್ಲಿ ಬಾಂಬೆ ವಿಶ್ವವಿದ್ಯಾಲಯ ನೀಡುವ ಪ್ರಶಸ್ತಿಯನ್ನು ಖ್ಯಾತ ಕಲಾವಿದರಿಗೆ ನೀಡಲಾಗುತ್ತಿದೆ.

ಈ ಅಂಕಣದ ಹಿಂದಿನ ಬರಹಗಳು:

ಸ್ವರಸಾಮ್ರಾಟ್ ಪಂಡಿತ್ ಬಸವರಾಜ ರಾಜಗುರು

ಹಿಂದೂಸ್ತಾನಿ ಸಂಗೀತಕ್ಕೆ ಕನ್ನಡದ ಘಮಲು ಹರಡಿದ ಸವಾಯಿ ಗಂಧರ್ವರು

ಸಂಗೀತ ಲೋಕದ ತಾನ್ ಸೇನ್ ಬಡೇ ಗುಲಾಂ ಆಲಿಖಾನ್

ಅಪ್ರತಿಮ ಗುರು ಅಲ್ಲಾದಿಯಾಖಾನ್

ಕೇಳದೇ ಉಳಿದ ಸ್ವರ ಮಾಧುರ್ಯ

ಶುದ್ದ ಸಂಗೀತದ ಪ್ರತಿಪಾದಕ: ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...