ಸ್ವರಸಾಮ್ರಾಟ್ ಪಂಡಿತ್ ಬಸವರಾಜ ರಾಜಗುರು

Date: 21-02-2021

Location: .


ತಮ್ಮ ಸ್ವರಮಾಧುರ್ಯದಿಂದ ಸಂಗೀತ ಲೋಕದ ಉದಾತ್ತ ಧ್ಯೇಯಗಳನ್ನು ಎತ್ತಿ ಹಿಡಿದ, ‘ಸ್ವರ ಸಾಮ್ರಾಟ್‌’' ಬಿರುದಾಂಕಿತ ಬಸವರಾಜ ರಾಜಗುರು ಅವರ ಸಂಗೀತ ಪ್ರೇಮ ಹಾಗೂ ಬದುಕನ್ನು ಸಾಹಿತಿ ಜಗದೀಶ ಕೊಪ್ಪ ಅವರು ತಮ್ಮ ‘ಗಾನಲೋಕದ ಗಂಧರ್ವರು’ ಅಂಕಣದಲ್ಲಿ ಪರಿಚಯಿಸಿದ್ದಾರೆ.

ಗದಗ ಪಟ್ಟಣದ ಸಂತ ಗಾನಯೋಗಿ ಪಂಚಾಕ್ಷರಿಯವರ ಸಂಗೀತ ಪರಂಪರೆಯಲ್ಲಿ ಅರಳಿದ ನೂರಾರು ಪ್ರತಿಭಾವಂತರು ಸಂಗೀತದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಜೊತೆಗೆ ತಮ್ಮ ಪ್ರತಿಭೆಯ ಜೊತೆ ಜೊತೆಗೆ ಪಂಚಾಕ್ಷರಿ ಗವಾಯಿಗಳ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಸಿದ್ದಾರೆ. ಇವರ ನಡುವೆ ಸ್ವರ ಸಾಮ್ರಾಟ್ ಎಂದು ಪ್ರಸಿದ್ಧಿಯಾಗಿದ್ದ ಪಂಡಿತ್ ಬಸವರಾಜ ರಾಜಗುರು ತಮ್ಮ ಧೈತ್ಯ ಪ್ರತಿಭೆಯಿಂದಾಗಿ ಇಡೀ ರಾಷ್ಟ್ರಮಟ್ಟದಲ್ಲಿ ಕೀರ್ತಿ ಗಳಿಸುವುದರ ಜೊತೆಗೆ ತಮ್ಮ ಗುರುವಿಗೂ ಮಾನ್ಯತೆ ತಂದುಕೊಟ್ಟವರಲ್ಲಿ ಮೊದಲಿಗರು. ಇದೀಗ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಮತ್ತು ವಾ ಕ್ಲಾರಿಯೊನೆಟ್ ವಾದಕ ನರಸಿಂಹ ವಡಿವಾಟಲು ಇಬ್ಬರೂ ಕಲಾವಿದರು ಪಂಚಾಕ್ಷರಿ ಗವಾಯಿಗಳ ಶಿಷ್ಯರಾದ ಪುಟ್ಟರಾಜ ಗವಾಯಿಗಳ ಮೂಲಕ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾಗಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ.
ಕನ್ನಡದ ನೆಲದಲ್ಲಿ ಹಿಂದೂಸ್ತಾನಿ ಸಂಗೀತವೆಂದರೆ, ಮೊದಲು ನೆನಪಾಗುವುದು ಧಾರವಾಡ ಮತ್ತು ಅಲ್ಲಿನ ಪರಿಸರ. ಜೊತೆಗೆ ನಮ್ಮ ಕನ್ನಡದ ದೈತ್ಯ ಪ್ರತಿಭೆಗಳಾದ ಹಾಗೂ ಪಂಚರತ್ನಗಳೆಂದು ಹೆಸರುವಾಸಿಯಾದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಭೀಮಸೇನ ಜೋಷಿ ಮತ್ತು ಗಂಗೂಬಾಯಿ ಹಾನಗಲ್ ಹಾಗೂ ಕುಮಾರ ಗಂಧರ್ವ ಎಂಬ ಸ್ವರ ಸಾಧಕರು. ಧಾರವಾಡದ ನೆಲಕ್ಕೂ ಮತ್ತು ಹಿಂದೂಸ್ತಾನಿ ಸಂಗೀತಕ್ಕೂ ಅವಿನಾಭಾವ ಸಂಬಂಧ. ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಹುಬ್ಬಳ್ಳಿ ನಗರದ ಸಿದ್ಧಾರೂಢರ ಪರಮ ಶಿಷ್ಯರಲ್ಲಿ ಒಬ್ಬರಾಗಿದ್ದ ಕಬೀರ್ ದಾಸ್ ಎಂಬ ಪ್ರಖ್ಯಾತ ಹಿಂದೂಸ್ತಾನಿ ಕಲಾವಿದರ ಮೂಲಕ ಇಲ್ಲಿ ಸಂಗೀತದ ಕಂಪು ಹರಡಲು ಕಾರಣವಾಯಿತು. ಹುಬ್ಬಳ್ಳಿ-ಧಾರವಾಡ ಪ್ರದೇಶಕ್ಕೆ ಯಾವುದೇ ಕಲಾವಿದರು ಆಗಮಿಸಿದರೆ, ಮೊದಲು ಸಿದ್ಧಾರೂಢ ಮಠದಲ್ಲಿ ಕಾರ್ಯಕ್ರಮ ನೀಡಿ, ಅಲ್ಲಿದ್ದ ಕಬೀರ್ ದಾಸ್ ಮತ್ತು ಅವರ ಸ್ನಹೀತರಾದ ರಹಿಮತ್ ಖಾನರಿಂದ ಆಶಿರ್ವಾದ ಪಡೆದು ನಂತರ ಇತರೆಡೆಗೆ ಕಾರ್ಯಕ್ರಮ ನೀಡಲು ತೆರಳುತ್ತಿದ್ದರು. ಉಸ್ತಾದ್ ಅಬ್ದುಲ್ ಕರಿಂ ಖಾನರು ಇಂತಹ ಅಗ್ನಿ ಪರೀಕ್ಷೆಯನ್ನು ಗೆದ್ದು ಧಾರವಾಡ, ಹುಬ್ಬಳ್ಳಿ ಮತ್ತು ಕುಂದಗೋಳ ಮುಂತಾದ ಸ್ಥಳಗಳಲ್ಲಿ ಹಾಡುತ್ತಾ ತಮ್ಮದೇ ಆದ ದೊಡ್ಡ ಶಿಷ್ಯ ಪರಂಪರೆಯನ್ನು ಹುಟ್ಟುಹಾಕಿದರು. ಸವಾಯಿ ಗಂಧರ್ವರು, ಭೀಮಸೇನಜೋಷಿ, ಗಂಗೂಬಾಯಿ ಹಾನಗಲ್ ಮತ್ತು ಬಸವರಾಜ ರಾಜಗುರು ಮೂಲಕ ಹಿಂದೂಸ್ತಾನಿ ಸಂಗೀತದಲ್ಲಿ ಸಾಹಿತ್ಯಕ್ಕಿಂತ ಹೆಚ್ಚಾಗಿ ಸ್ವರ ಮತ್ತು ರಾಗಗಳ ವಿಸ್ತಾರಕ್ಕೆ ಹೆಚ್ಚಿನ ಆದ್ಯತೆ ಇರುವ ಕಿರಾನಾ ಘರಾಣಾ ಶೈಲಿಯನ್ನು ಚಾಲ್ತಿಗೆ ತಂದರು.
ಪಂಡಿತ್ ಬಸವರಾಜ ರಾಜಗುರುಗಳು ಗ್ವಾಲಿಯರ್ ಘರಾಣ ಸಂಗೀತದ ಅಭ್ಯಾಸ ಮಾಡಿದ್ದರೂ ಸಹ, ಕಿರಾನಾ ಘರಾಣಾ ಪರಂಪರೆಗೆ ಸೇರಿದವರಾಗಿದ್ದಾರೆ. ಧಾರವಾಡ ಜಿಲ್ಲೆ ಕುಂದಗೊಳ ತಾಲ್ಲೂಕಿನ ಯಲಿವಾಳ ಗ್ರಾಮದಲ್ಲಿ 1920 ರ ಆಗಸ್ಟ್ ತಿಂಗಳಲ್ಲಿ ಶ್ರೀಮತಿ ರಾಚಮ್ಮ ಮತ್ತು ಮಹಾಂತೇಶಯ್ಯಸ್ವಾಮಿ ದಂಪತಿಗಳ ಐವರು ಮಕ್ಕಳಲ್ಲಿ ಕೊನೆಯವರಾಗಿ ಬಸವರಾಜ ರಾಜಗುರು ಜನಿಸಿದರು. ಇವರ ಪೂರ್ವಿಕರು ಕೆಳದಿ ಸಂಸ್ಥಾನದಲ್ಲಿ ರಾಜಗುರುಗಳಾಗಿ ಕಾರ್ಯನಿರ್ವಹಿಸಿದ ಕಾರಣಕ್ಕಾಗಿ ಇವರ ಕುಟುಂಬದ ಸದಸ್ಯರನ್ನು ರಾಜಗುರುಗಳೆಂದು ಕರೆಯುವುದು ವಾಡಿಕೆ. ಇವರ ತಂದೆ ಮಹಾಂತೇಶಸ್ವಾಮಿ ಸಂಗೀತದಲ್ಲಿ ಆಸಕ್ತಿಯುಳ್ಳವರಾಗಿದ್ದು ಆ ಕಾಲದಲ್ಲಿ ತಂಜಾವೂರಿಗೆ ಹೋಗಿ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಜೊತೆಗೆ ಪಿಟೀಲು ವಾದ್ಯದಲ್ಲಿ ಪರಿಣತಿ ಸಾಧಿಸಿದ್ದರು. ಸಹಜವಾಗಿ ತಂದೆಯಿಂದ ಪ್ರಭಾವಿತರಾದ ಬಸವರಾಜರು ಬಾಲ್ಯದಲ್ಲಿ ಸಂಗೀತ ಕುರಿತಂತೆ ಆಸಕ್ತಿ ತೋರಿದರು. ಜೊತೆಗೆ ಊರಿನಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಭಾಗವಹಿಸಿ, ತಮ್ಮ ಎಂಟನೆಯ ವಯಸ್ಸಿಗೆ ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಿದ್ದರು.
ಆ ಕಾಲದಲ್ಲಿ ನಾಟಕ ಕಂಪನಿಗಳಲ್ಲಿ ಮಾತ್ರ ಪ್ರಾಥಮಿಕ ಸಂಗೀತ ಕಲಿಸುವ ಗುರುಗಳು ಇದ್ದ ಕಾರಣ ಬಾಲಕ ಬಸವರಾಜರನ್ನು ಅವರ ತಂದೆಯವರು ಹುಬ್ಬಳ್ಳಿಯ ವಾಮನ ಮಾಸ್ತರ ವಿಶ್ವ ಗುಣಧರ್ಮವೆಂಬ ನಾಟಕ ಕಂಪನಿಗೆ ಸೇರಿಸಿದರು. ಬಾಲ ಕಲಾವಿದನಾಗಿ ಪಾತ್ರಗಳನ್ನು ಮಾಡುತ್ತಾ, ರಂಗ ಸಂಗೀತ ಮತ್ತು ಕರ್ನಾಟಕ ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಕಲಿಯುತ್ತಿದ್ದ ಬಸವರಾಜ ರಾಜಗುರು ಹದಿಮೂರು ವರ್ಷ ತಲುಪುವುದರೊಳಗೆ ಅವರ ತಂದೆ ಮಹಾಂತೇಶಯ್ಯಸ್ವಾಮಿ ಅಕಾಲಿಕ ಮರಣಕ್ಕೆ ತುತ್ತಾದರು. ನಾಟಕ ಕಂಪನಿಯನ್ನು ತ್ಯಜಿಸಿ ಬಸವರಾಜರು ಯಲಿವಾಳ ಗ್ರಾಮಕ್ಕೆ ಆಗಮಿಸಿದರು. ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅವರ ದೊಡ್ಡಪ್ಪ ರೇವಣ್ಣಸಿದ್ದಯ್ಯನವರು ಬಸವರಾಜರನ್ನು ತಮ್ಮ ಕುಟುಂಬದ ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ನಿರ್ಧರಿಸಿ ಹುಬ್ಬಳ್ಳಿ ನಗರದ ಮೂರು ಸಾವಿರ ಮಠದಲ್ಲಿ ಸಂಸ್ಕೃತ ಅಧ್ಯಯನಕ್ಕೆ ತಂದು ಸೇರಿಸಿದರು.
ಮೂರು ಸಾವಿರ ಮಠಕ್ಕೆ ಬಂದ ಬಸವರಾಜರ ಬದುಕು ಅನಿರೀಕ್ಷಿತವಾಗಿ ಮತ್ತೊಂದು ಮಜಲಿನತ್ತ ಹೊರಳಿತು. ಗದುಗಿನಲ್ಲಿ ಆಶ್ರಮ ಆರಂಭಿಸುವ ಮುನ್ನ ನವಲಗುಂದದಲ್ಲಿ ವಾಸವಿದ್ದ ಪಂಚಾಕ್ಷರಿ ಗವಾಯಿಗಳು ಒಮ್ಮೆ ಹುಬ್ಬಳ್ಳಿ ನಗರಕ್ಕೆ ಬಂದಾಗ ಮೂರು ಸಾವಿರ ಮಠದಲ್ಲಿ ಉಳಿದುಕೊಂಡಿದ್ದರು. ಅಲ್ಲಿನ ಬಾಲಕ ಬಸವರಾಜು ರಾಜಗುರುವಿನ ಕಂಠಸಿರಿಗೆ ಮನಸೋತ ಗವಾಯಿಗಳು ಬಸವರಾಜ ರಾಜಗುರುವನ್ನು ಶಿಷ್ಯನನ್ನಾಗಿ ಸ್ವೀಕರಿಸಿ ತಮ್ಮ ಜೊತೆ ಕರೆದೊಯ್ದರು. ಸತತ ಹನ್ನೆರೆಡು ವರ್ಷಗಳ ಕಾಲ ಶಿಷ್ಯವೃತ್ತಿ ಮಾಡಿದ ರಾಜಗುರುಗಳು ತಮ್ಮ ಸ್ವರ ಮಾಧುರ್ಯದಿಂದ ವಚನಗಾಯನ, ನಿಜಗುಣ ಶಿವಯೋಗಿಗಳ ಹಾಡುಗಳು ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ನಿಷ್ಣಾತ ಕಲಾವಿದರಾಗಿ ಪಳಗಿದರು. ರಾಗ ವಿಸ್ತರಣಗೆ ವಿಶೇಷ ಅವಕಾಶ ಒದಗಿಸುವ ಗ್ವಾಲಿಯರ್ ಘರಾಣೆಯ ಸಂಗೀತದಲ್ಲಿಯೂ ಸಹ ನಿಪುಣರಾದರು. ಆ ಕಾಲದ ಪ್ರಸಿದ್ಧ ಹಿಂದೂಸ್ತಾನಿ ಕಲಾವಿದರ ಧ್ವನಿ ಮುದ್ರಿಕೆಗಳನ್ನು ಸಂಗ್ರಹಿಸಿ ಅವುಗಳನ್ನು ಕೇಳುವ ಹವ್ಯಾಸ ಪಂಚಾಕ್ಷರಿ ಗವಾಯಿಗಳಿಗಿತ್ತು. ಧ್ವನಿ ಮುದ್ರಿಕೆಗಳ ಹೊಣೆಗಾರಿಕೆ ಮತ್ತು ನಿರ್ವಹಣೆಯನ್ನು ಶಿಷ್ಯ ಬಸವರಾಜ ರಾಜಗುರುಗಳಿಗೆ ವಹಿಸಿದ್ದರು. ಹಾಗಾಗಿ ಅಬ್ದುಲ್ ಕರೀಂ ಖಾನರಿಂದ ಹಿಡಿದು, ಉಸ್ತಾದ್ ನಿಸ್ಸಾರ್ ಖಾನ್ , ಉಸ್ತಾದ್ ಫಯಾಜ್ ಖಾನ್ ಸೇರಿದಂತೆ ಹೆಸರಾಂತ ಗಾಯಕಿ, ಗಾಯಕರ ಸಂಗೀತವನ್ನು ಕೇಳುತ್ತಾ ಅವರದೇ ಶೈಲಿಯಲ್ಲಿ ಬಸವರಾಜರು ಹಾಡುತ್ತಿದ್ದರು.
1936 ರಲ್ಲಿ ಹಂಪಿಯಲ್ಲಿ ನಡೆದ ವಿಜಯನಗರ ಉತ್ಸವದ ಅಂಗವಾಗಿ ನಡೆದ ಸಂಗೀತೋತ್ಸವದಲ್ಲಿ ಬಸವರಾಜ ರಾಜಗುರು ಪ್ರಥಮವಾಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಂದಿನ ಕಾರ್ಯಕ್ರಮದಲ್ಲಿ ಗುರುಗಳಾದ ಪಂಚಾಕ್ಷರಿ ಗವಾಯಿಗಳು ಸ್ವತಃ ಶಿಷ್ಯನಿಗೆ ತಬಲ ನುಡಿಸಿದ್ದು ವಿಶೇಷವಾಗಿತ್ತು. ಪ್ರಥಮ ಸಂಗೀತ ಕಾರ್ಯಕ್ರಮದಲ್ಲಿ ಬಂಗಾರದ ಸ್ವರ್ಣ ಪದಕ ಗೆದ್ದ ಬಸವರಾಜರು ನಂತರ ಉತ್ತರ ಕರ್ನಾಟಕದಲ್ಲಿ ಹೆಸರಾಂತ ಕಲಾವಿದರಾಗಿ ಹೆಸರು ಗಳಿಸಿದರು. ಜೊತೆಗೆ, ಆ ಕಾಲದ ಬಾಂಬೆ ಆಕಾಶವಾಣಿ ಕೇಂದ್ರವು ರಾಜಗುರುಗಳು ಬಿಲಾವಲ್ ಮತ್ತು ಗೌಡಮಲಾರ ರಾಗಗಳಲ್ಲಿ ಹಾಡಿದ ಸಂಗೀತವನ್ನು ನೇರಪ್ರಸಾರ ಮಾಡಿತ್ತು. 1941 ರಲ್ಲಿ ತಮ್ಮ ಗುರುಗಳಾದ ಪಂಚಾಕ್ಷರಿ ಗವಾಯಿಗಳ ಬಳಿಯ ಹನ್ನೆರೆಡು ವರ್ಷಗಳ ಶಿಷ್ಯವೃತ್ತಿಯನ್ನು ಮುಗಿಸಿಕೊಂಡು, ಹೆಚ್ಚಿನ ಶಿಕ್ಷಣಕ್ಕಾಗಿ ಮುಂಬೈ ನಗರಕ್ಕೆ ತೆರಳಿ ಕನ್ನಡಿಗರಾದ ಹಾಗೂ ಕುಂದಗೋಳ ಪಟ್ಟಣದವರಾದ ಸವಾಯಿ ಗಂಧರ್ವರ ಶಿಷ್ಯತ್ವದಲ್ಲಿ ಸಂಗೀತ ಮುಂದುವರಿಸಿದರು. ಧ್ವನಿಮುದ್ರಿಕೆಯ ಕಂಪನಿಗಳಿಗೆ ಮತ್ತು ಬಾಂಬೆ ಆಕಾಶವಾಣಿಯಲ್ಲಿ ಹಾಡುತ್ತಾ ಶಿಕ್ಷಣ ಮುಂದುವರಿಸಿದ್ದ ಬಸವರಾಜ ರಾಜಗುರುಗಳ ದುರಾದೃಷ್ಟವೆಂಬಂತೆ 1994 ರಲ್ಲಿ ಗದಗಿನ ಗುರುವಾದ ಪಂಚಾಕ್ಷರಿ ಗವಾಯಿಗಳು ಮೃತಪಟ್ಟರು. ಜೊತೆಗೆ ಇದೇ ವೇಳೆಗೆ ಕಿರಾನಾ ಘರಾಣಾ ಸಂಗೀತ ಕಲಿಸುತ್ತಿದ್ದ ಸವಾಯಿ ಗಂಧರ್ವರು ಪಾರ್ಶ್ವವಾಯು ಕಾಯಿಲೆಗೆ ತುತ್ತಾದರು. ನಂತರ ಸವಾಯಿ ಗಂಧರ್ವರ ಸಲಹೆಯಂತೆ ಅಬ್ದುಲ್ ಕರೀಂ ಖಾನರ ಪುತ್ರ ಸುರೇಶ್ ಬಾಬು ಬಳಿ ತೆರಳಿ ಅಭ್ಯಾಸ ಮಾಡಿದರು.
ಬಸವರಾಜಗುರುಗಳಿಗೆ ಗದುಗಿನ ಆಶ್ರಮದಲ್ಲಿ ಇರುವಾಗಲೇ ವಹಿದ್‌ಖಾನ್ ಬಳಿ ಸಂಗೀತ ಕಲಿಯುವ ಆಸಕ್ತಿ ಇತ್ತು. ಆದರೆ ಅವರು ಸ್ವಾತಂತ್ರ್ಯ ಬರುವ ಮುನ್ನವೇ ಅನಾರೋಗ್ಯದ ನಿಮಿತ್ತ ಲಾಹೋರ್ ನಗರಕ್ಕೆ ತೆರಳಿದ್ದರು. ಪಂಚಾಕ್ಷರಿ ಗವಾಯಿಗಳು ಅಬ್ದುಲ್ ಕರೀಮ ಖಾನ್ ರ ಶಿಷ್ಯರಲ್ಲಿ ಒಬ್ಬರಾಗಿದ್ದ ನೀಲಕಂಠ ಬುವಾ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದ ಕಾರಣ ಶಿಷ್ಯ ಬಸವರಾಜ ರಾಜಗುರುವಿಗೆ ಸ್ವರ ವಿನ್ಯಾಸಕ್ಕೆ ಒತ್ತು ನೀಡುವ ಹಾಗೂ ಹೇರಳ ಅವಕಾಶ ಒದಗಿಸುವ ಕಿರಾನ ಘರಾಣಾ ಸಂಗೀತಕ್ಕೆ ಮನಸೋತು ನೂರಾರು ಚೀಜ್ ಗಳನ್ನು ಅಭ್ಯಾಸ ಮಾಡಿಸಿದ್ದರು. ಈ ಹಿನ್ನಲೆಯಲ್ಲಿ ಬಸವರಾಜ ರಾಜಗುರು 1946 ರಲ್ಲಿ ಲಾಹೋರ್ ನಗರಕ್ಕೆ ತೆರಳಿ ವಹಿದ್ ಖಾನರ ಬಳಿ ಸಂಗೀತಾಭ್ಯಾಸವನ್ನು ಮುಂದುವರಿಸಿದರು ಜೊತೆಗೆ ಲಾಹೋರ್ ನಗರದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಪ್ರಸಿದ್ಧಿಯಾದರು. ವಜೀದ್ ಖಾನ ದ ಸಹೋದರ ಮುಬಾರಕ್ ಆಲಿ ಎಂಬುವರು ಕರಾಚಿ ನಗರದಲ್ಲಿ ಸಂಗೀತಗಾರರಾಗಿ ವಾಸವಾಗಿದ್ದರು. 1947ರಲ್ಲಿ ಕರಾಚಿ ನಗರಕ್ಕೆ ತೆರಳಿ ಮೊದಲ ಆರು ತಿಂಗಳು ಕಾಲ ಅವರ ಬಳಿ ಶಿಷ್ಯವೃತ್ತಿ ಸ್ವೀಕರಿಸಿದ್ದರು. ಆದರೆ, ಸ್ವಾತಂತ್ರ್ಯದ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಗೊಂಡಾಗ ಗುರುವಿನ ಅಣತಿಯಂತೆ ಭಾರತಕ್ಕೆ ಹೊರಟ್ಟಿದ್ದ ಕೊನೆಯ ರೈಲನ್ನು ಹತ್ತಿ ತಾಯ್ನಾಡಿಗೆ ಹಿಂತಿರುಗಿದ ಅದೃಷ್ಟಶಾಲಿಯಾದರು.
1947 ರಲ್ಲಿ ಭಾರತಕ್ಕೆ ಬಂದ ನಂತರ ಹುಬ್ಬಳ್ಳಿ ನಗರದಲ್ಲಿ ಅವರು ನೀಡಿದ ಸಂಗೀತ ಕಾರ್ಯಕ್ರಮದಿಂದ ಸಂತೋಷಗೊಂಡ ಕುಂದಗೋಳದ ನಾನಾಸಾಹೇಬರು ಬಸವರಾಜರಿಗೆ ಕುಂದಗೋಳ ಪಟ್ಟಣದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಸುತ್ತ ಮುತ್ತಲಿನ ಊರುಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, ತಮ್ಮ ಗುರುಗಳಿಗೆ ನೀಡಿದ್ದ ವಚನದಂತೆ ( ಪಂಚಾಕ್ಷರಿ ಗವಾಯಿ) ಅನೇಕ ಶಿಷ್ಯರನ್ನು ತಯಾರು ಮಾಡಿದರು. 1950 ರಲ್ಲಿ ಧಾರವಾಡದಲ್ಲಿ ಅಕಾಶವಾಣಿ ಕೇಂದ್ರ ಆರಂಭವಾದ ನಂತರ ಧಾರವಾಡಕ್ಕೆ ಬಂದು ನೆಲೆಸಿದರು. ಆಕಾಶವಾಣಿಯಲ್ಲಿ ಬಸವರಾಜ ರಾಜಗುರು ನೀಡಿದ ಕಾರ್ಯಕ್ರಮಗಳು ಅವರ ಹೆಸರನ್ನು ಚಿರಸ್ಥಾಯಿಗೊಳಿಸಿದವು. ಬಸವರಾಜ ರಾಜಗುರುಗಳು ಹಾಡಿರುವ ಕೋಮಲ ರಿಷಭ, ಅಸಾವರಿ, ಭೂಪಾಲಿ, ತೋಡಿ, ಚಾಂದನಿ, ಕೇದಾರ. ಮಾಲಕಹಂ, ಬೈರವಿ ದರ್ಬಾರಿ ಕಾನಡ ರಾಗಗಳಧ್ವನಿ ಮುದ್ರಿಕೆಗಳು ಇಂದಿಗೂ ಸಹ ಧಾರವಾಡ ಆಕಾಶವಾಣಿಯ ಸಂಗ್ರಹದಲ್ಲಿವೆ. ಧಾರವಾಡದಲ್ಲಿ ಅವರು ಶಾಶ್ವತವಾಗಿ ನೆಲೆ ನಿಂತ ನಂತರ ಅವರು ಅನೇಕ ಶಿಷ್ಯರನ್ನು ಸೃಷ್ಟಿಸಲು ಸಾಧ್ಯವಾಯಿತು .ಗಣಪತಿ ಭಟ್ ಹಾಸಣಗಿ, ಪರಮೇಶ್ವರಹೆಗ್ಡೆ, ಸೋಮನಾಥ ಮರಡೂರು, ಮುಂತಾದ ಪ್ರತಿಭಾವಂತ ಸಂಗೀತಗಾರರು ಬಸವರಾಜ ರಾಜಗುರುಗಳ ಸಂಗೀತ ಪರಂಪರೆಯನ್ನು ಮುಂದುವರಿಸಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಪ್ರಚಾರ ಮತ್ತು ಹಣಕ್ಕಾಗಿ ಹಂಬಲಿಸದ ರಾಜಗುರುಗಳು ಸದಾ ಎಲೆಮರೆಯ ಕಾಯಿಯಂತೆ ಬದುಕಿದವರು. ಅವರ ಅದ್ಭುತವಾದ ಕಂಠಸಿರಿ, ವಿವಿಧ ಘರಾಣೆಗಳ ಮೂಲಕ ಹಿಂದೂಸ್ತಾನಿ ಸಂಗೀತವನ್ನು ಕರಗತಮಾಡಿಕೊಂಡಿದ್ದ ಅವರ ಗಾಯನವನ್ನು ಕೇಳುವುದು ರಸಿಕರ ಪಾಲಿಗೆ ರೋಮಾಂಚಕ ಅನುಭವವಾಗಿತ್ತು.
ಭಾರತೀಯ ಸಂಗೀತ ಲೋಕಕ್ಕೆ ಬಸವರಾಜ ರಾಜಗುರುಗಳ ಮಹತ್ವದ ಕೊಡುಗೆಯೆಂದರೆ. ಕನ್ನಡದ ಶರಣರ ಅನೇಕ ವಚನಗಳನ್ನು, ಶಿವಯೋಗಿಗಳ ವಚನಗಳನ್ನು ಹಿಂದುಸ್ತಾನಿ ರಾಗಗಳಿಗೆ ಅಳವಡಿಸಿ ಅವುಗಳನ್ನು ಪ್ರಸಿದ್ಧಿಗೊಳಿಸಿದರು. ಈ ಕಾರಣಕ್ಕಾಗಿ ಇಂದಿಗೂ ಸಹ ಬಸವರಾಜು ರಾಜಗುರು, ಮಲ್ಲಿಕಾರ್ಜುನ ಮನ್ಸೂರ್ ಮತ್ತು ಭೀಮಸೇನ ಜೋಷಿಯವರ ಮೂಲಕ ಕನ್ನಡದ ವಚನಗಳು ಮತ್ತು ಪುರಂದರ ಹಾಗೂ ಕನಕದಾಸರ ಹಾಡುಗಳು ಎಲ್ಲಾ ಭಾಷೆಯ ಸಂಗೀತಗಾರರ ನಾಲಿಗೆಯ ಮೇಲೆ ಹಿಮದೂಸ್ತಾನಿ ಸಂಗೀತ ಕೃತಿಗಳಂತೆ ಜೀವಂತವಾಗಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ವಿ.ವಿ.ಯ ಗೌರವ ಡಾಕ್ಟರೇಟ್ ಪದವಿ, ಕೇಂದ್ರ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಬಸವರಾಜ ರಾಜಗುರುಗಳು 1991 ರಲ್ಲಿ ಅಮೇರಿಕಾ ಪ್ರವಾಸ ಕೈಗೊಳ್ಳುವ ಉದ್ದೇಶದಿಂದ ವೀಸಾ ಪಡೆಯಲು ಚೆನ್ನೈ ನಗರಕ್ಕೆ ತೆರಳಿದ್ದರು. ವಾಪಸ್ ಧಾರವಾಡಕ್ಕೆ ಬರುವ ಮಾರ್ಗದಲ್ಲಿ ಬೆಂಗಳೂರು ಶಿಷ್ಯನ ನಿವಾಸದಲ್ಲಿ ಜುಲೈ 21 ರಂದು ಹೃದಯಾಘಾತದಿಂದ ನಿಧನರಾದರು.
ಕರ್ನಾಟಕ ರಾಜ್ಯ ಸರ್ಕಾರವು ಧಾರವಾಡ ನಗರದಲ್ಲಿ ಅವರ ಹೆಸರಿನಲ್ಲಿ ಟ್ರಸ್ಟ್ ಆರಂಭಿಸಿದ್ದು, ಪ್ರತಿ ವರ್ಷ ಅವರ ಪುಣ್ಯತಿಥಿಯಂದು ಪಂಡಿತ್ ಬಸವರಾಜ ರಾಜಗುರು ಸಂಗೀತ ಪ್ರಶಸ್ತಿಯನ್ನು ಸಂಗೀತ ಕಲಾವಿದರಿಗೆ ನೀಡಲಾಗುತ್ತಿದೆ. ಜೊತೆಗೆ ಸಂಗೀತ ಕಾರ್ಯಕ್ರಮದ ಮೂಲಕ ಸ್ವರ ಸಾಮ್ರಾಟ್ ಬಸವರಾಜ ರಾಜಗುರುಗಳ ಸೇವೆಯನ್ನು ಸ್ಮರಿಸಲಾಗುತ್ತಿದೆ.

ಈ ಅಂಕಣದ ಹಿಂದಿನ ಬರಹಗಳು:

ಹಿಂದೂಸ್ತಾನಿ ಸಂಗೀತಕ್ಕೆ ಕನ್ನಡದ ಘಮಲು ಹರಡಿದ ಸವಾಯಿ ಗಂಧರ್ವರು

ಸಂಗೀತ ಲೋಕದ ತಾನ್ ಸೇನ್ ಬಡೇ ಗುಲಾಂ ಆಲಿಖಾನ್

ಅಪ್ರತಿಮ ಗುರು ಅಲ್ಲಾದಿಯಾಖಾನ್

ಕೇಳದೇ ಉಳಿದ ಸ್ವರ ಮಾಧುರ್ಯ

ಶುದ್ದ ಸಂಗೀತದ ಪ್ರತಿಪಾದಕ: ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...