ಸ್ವಾರ್ಥ ರಾಜಕೀಯಕ್ಕೆ ಸಾವರ್ಕರ್ ದೇಶಪ್ರೇಮ ಕಡೆಗಣನೆ: ಬಾಬು ಕೃಷ್ಣ ಮೂರ್ತಿ ವಿಷಾದ

Date: 28-11-2020

Location: ಬೆಂಗಳೂರು


ವೀರ ಸಾರ್ವರ್ಕರ್ ಅವರು ನೈಜ ಅರ್ಥದಲ್ಲಿ ಒಬ್ಬ ದೇಶಪ್ರೇಮಿ. ಆದರೆ, ಅಂದಿನ ರಾಜಕೀಯ ಸ್ವಾರ್ಥಕ್ಕಾಗಿ ಅವರ ದೇಶಪ್ರೇಮವನ್ನು ಕಡೆಗಣಿಸುತ್ತಾ ಬಂದಿದ್ದು, ಈಗಲೂ ಮುಂದುವರಿದಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಾಬು ಕೃಷ್ಣಮೂರ್ತಿ ಅವರು ವಿಷಾದಿಸಿದರು.

ವೈಭವ ಪುರಂದರೆ ಅವರ ‘ಸಾವರ್ಕರ್ -ಹಿಂದುತ್ವ ಜನಕನ ನಿಜ ಕಥೆ’ ಇಂಗ್ಲಿಷ್ ಕೃತಿಯನ್ನು ಲೇಖಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದು, ಬುಕ್ ಬ್ರಹ್ಮ ಸಂಸ್ಥೆಯು ಆಯೋಜಿಸಿದ್ದ ಫೇಸ್ ಬುಕ್ ಲೈವ್ ನಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ವೀರ ಸಾವರ್ಕರ್ ಅವರು ಅಪ್ರತಿಮ ದೇಶಭಕ್ತ. ದೇಶಕ್ಕಾಗಿ ಹೋರಾಡಿದ ಸೇನಾನಿಗಳನ್ನು ಕಡೆಗಣಿಸುವ ಪ್ರವೃತ್ತಿ ಸರ್ವಥಾ ಸರಿಯಲ್ಲ. ‘ಗಾಂಧಿಯೂ ಇರಲಿ; ಸಾವರ್ಕರ್ ಸಹ ಇರಲಿ’ ಎಂಬ ರಾಮಪ್ರಸಾದ್ ಬಿಸ್ಮಿಲ್ಲಾ ಅವರ ಹಿಂದಿ ಭಾಷೆಯಲ್ಲಿಯ ಒಂದು ಕವಿತೆ ಸಾಲುಗಳು ನಮ್ಮ ಧೋರಣೆಯಾಗಬೇಕು ಎಂದರು.

ವೀರ ಸಾವರ್ಕರ್ ಕುರಿತು ಈವರೆಗೆ ಬಂದ ಸಾಹಿತ್ಯದ ಪೈಕಿ ಸದ್ಯ ಅನುವಾದಗೊಂಡ ‘ಸಾವರ್ಕರ್’ ಕೃತಿಯು ಪಠ್ಯದ ದೃಷ್ಟಿಯಿಂದ ಹೆಚ್ಚು ಸಮೃದ್ಧವಾಗಿದೆ. ಈ ಹಿಂದೆ ಮತ್ತೂರು ಕೃಷ್ಣಮೂರ್ತಿ ಎಸ್.ಎಲ್. ಕಾರಂದಿಕರ್, ಧನಂಜಯ ಕೀರ್ ಮುಂತಾದವರು ಸಾವರ್ಕರ್ ಕುರಿತು ಬರೆದಿದ್ದರೂ, ಸಾವರ್ಕರ್ ವ್ಯಕ್ತಿತ್ವದ ಪ್ರಶಂಸೆ-ದೋಷ ಎರಡರ ಕುರಿತು ಈ ಕೃತಿಯು ಹೆಚ್ಚು ಚರ್ಚಿಸಿದೆ. ಸಾವರ್ಕರ್ ಅವರ ಸಂಪೂರ್ಣ ಹೋರಾಟದ ಮನೋಭಾವ ಮಾತ್ರವಲ್ಲ; ಅವರ ದೇಶಪ್ರೇಮದ ಎತ್ತರ-ಆಳ-ವಿಸ್ತಾರದ ಅನುಭವ ನೀಡುತ್ತದೆ. ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ನಿರ್ಭೀತ ದೇಶಪ್ರೇಮಿ. ಹಿಂದುತ್ವದ ಕಟ್ಟಾ ಅಭಿಮಾನಿ. ತಮಗನ್ನಿಸಿದ್ದನ್ನು ನೇರವಾಗಿ ಹೇಳುವ ಅವರ ಮನೋಸ್ಥೈರ್ಯ ಮೆಚ್ಚಬೇಕು. ಅದನ್ನೇ ಇಟ್ಟುಕೊಂಡು ಒಬ್ಬ ದೇಶಪ್ರೇಮಿಯನ್ನು ತಿರಸ್ಕರಿಸುವುದು ಸರಿಯಲ್ಲ ಎಂದರು.

ಕುವೆಂಪು ಭಾಷಾ ಭಾರತಿ ಸಂಸ್ಥೆಯ ಅಧ್ಯಕ್ಷ ಡಾ. ಗಿರೀಶ ಭಟ್ ಅಜಕ್ಕಳ ಮಾತನಾಡಿ ‘ ಸಾವರ್ಕರ್ ಅವರ ದೇಶಪ್ರೇಮಕ್ಕೆ ಈವರೆಗೆ ಆದ ಅನ್ಯಾಯಕ್ಕೆ ಈ ಕೃತಿಯ ಮೂಲ ಲೇಖಕರು ಹಾಗೂ ಕನ್ನಡಾನವಾದಕರು ಉತ್ತಮ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.

ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ, ವಸಂತ ಪ್ರಕಾಶನದ ಮುರುಳಿ ಶ್ರೀನಿವಾಸನ್ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

 

MORE NEWS

ಫೆ.19 ರಿಂದ ಜೈಪುರ ಸಾಹಿತ್ಯ ಸಮ್ಮೇ...

20-01-2021 ಬೆಂಗಳೂರು

ಬಹು ನಿರೀಕ್ಷಿತ ಹಾಗೂ ವಿಶ್ವ ಖ್ಯಾತಿಯ ಜೈಪುರ ಸಾಹಿತ್ಯ ಸಮ್ಮೇಳನವು 2021 ರ ಫೆಬ್ರವರಿಯಲ್ಲಿ ಜರುಗಲಿದೆ. ಆದರೆ, ವಿಶೇಷವ...

ಗುವಾಹತಿ ಸಾಹಿತ್ಯ ಮೇಳದಲ್ಲಿ  ಲಾರಿ...

20-01-2021 ಬೆಂಗಳೂರು

ಲಾರಿ ಚಾಲಕರೊಬ್ಬರು ತಮ್ಮ ವೃತ್ತಿ ಜೀವನದಲ್ಲಿಯ ಕೆಲ ಕುತೂಹಲಕಾರಿ ಪ್ರಸಂಗಗಳ ಕುರಿತು ಬರೆದ ಆತ್ಮಕಥನ ಮಾದರಿಯ ಕೃತಿಯು ಇತ...

ಸಿಂಗಾಪುರದ ಲೇಖಕರಾದ ಸಿಮ್, ಮೀಹಾನ್...

20-01-2021 ಬೆಂಗಳೂರು

ಪ್ರಕಟಣಾಪೂರ್ವ ಆಂಗ್ಲ ಭಾಷೆಯ ಕಾಲ್ಪನಿಕ ಕಾದಂಬರಿಗಳಿಗೆ ನೀಡಲಾಗುವ ‘ಎಪಿಗ್ರಾಮ್ ಬುಕ್ಸ್ ಪ್ರಶಸ್ತಿ’ಯನ್ನು...

Comments