ಸಂದಿಗ್ಧಗಳ ವಿವಿಧ ಮುಖ ಪರಿಚಯಿಸುವ ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’


ಗೊರವರ ಅವರ ಈವರೆಗಿನ ಕೃತಿಗಳಲ್ಲಿ ಸಮಾನವಾದ ಗುಣವೊಂದನ್ನು ಕಾಣಬಹುದು. ವ್ಯಕ್ತಿಯೋರ್ವನಿಗೆ ತನ್ನದೇ ಆದ ಒಂದು ಭಾವಪ್ರಪಂಚವಿದೆ. ಕೌಟುಂಬಿಕ ಸಂಬಂಧವೊಂದರ ನೆಲೆಯೊಂದಿದೆ. ಕುಟುಂಬದ ಹೊರಗೆ ಇತರರೊಂದಿಗಿನ ಹಲಬಗೆಯ ವ್ಯವಹಾರಗಳಲ್ಲಿ ಮೂಡಿಬಂದ ಸಂಬಂಧಗಳ ಮೂರನೆಯ ನೆಲೆಯೊಂದಿದೆ. ಈ ಮೂರರ ನಡುವೆ ಹೊಂದಾಣಿಕೆ ಇರದಿದ್ದಾಗ ಉಂಟಾಗುವ ಸಂದಿಗ್ಧತೆಗಳ ಚಿತ್ರವನ್ನು ಕಟ್ಟಿಕೊಡುವುದೇ ಅವರ ಕೃತಿಗಳನ್ನು ಏಕಸೂತ್ರದಲ್ಲಿ ನಿಲ್ಲಿಸುವ ಈ ಗುಣ. ಅಂಥ ಸಂದಿಗ್ಧತೆಗಳು ಅನೇಕ ರೀತಿಯಲ್ಲಿ ತಲೆಯೆತ್ತಬಹುದು. ‘ಕುದರಿ ಮಾಸ್ತರ’, ‘ಸೂಲಗಿತ್ತಿ’, ‘ಮನಸಿನ ವ್ಯಾಪಾರ’, ‘ಮಲ್ಲಿಗೆ ಹೂವಿನ ಸಖ’ ಮೊದಲಾದ ಕಥೆಗಳು ಮೇಲೆ ಹೇಳಿದಂತ ಮೂರು ನೆಲೆಗಳ ನಡುವಿನ ಹೊಂದಾಣಿಕೆ ಇಲ್ಲದ ಅವಸ್ಥೆಯಲ್ಲಿ ತೋರುವ ಸಂದಿಗ್ಧಗಳ ವಿವಿಧ ಮುಖಗಳಾಗಿವೆ. ಇಲ್ಲಿ ಸೂಚಿತವಾಗುವ ವೈವಿಧ್ಯತೆಯ ಕೆಲವೇ ಕೆಲವು ಮುಖಗಳನ್ನು ಮಾತ್ರ ಗೊರವರರು ಕಟ್ಟಿಕೊಂಡಿರುವ ಕಥನರೂಪದಲ್ಲಿ ಬಿಚ್ಚಿಡಲು ಸಾಧ್ಯ. ಉಳಿದವುಗಳಿಗೆ ಬೇರೆಯೇ ರೂಪ ಜರೂರಿಯಾಗಿದೆ. 

ಇಲ್ಲಿನ ಗದ್ಯಕವಿತೆಗಳು ಈ ಸಂದಿಗ್ಧದ ಆವಿಷ್ಕರಣೆಯನ್ನು ಅವರ ಕಾದಂಬರಿ, ಕಥೆಗಳಲ್ಲಿ ಕಾಣುವುದಕ್ಕಿಂತ ತೀವ್ರವಾಗಿ ನಡೆಸಿವೆ. ‘ಶೇಂಗಾ ಮತ್ತು ಕರುಳ ಬಳ್ಳಿ’ ಕವಿತೆಯ ಈ ಸಾಲುಗಳನ್ನು ನೋಡಿ: “ಶೇಂಗಾ ಬಳ್ಳಿಗಳು ಶವವಾಗಿ ಅಂಗಾತ ಬಿದ್ದಂತೆಲ್ಲ ಗಾಢ ಮಣ್ಣ ವಾಸನೆ ಪರಿಮಳಿಸುತ್ತಿದೆ. ತೊನೆದಾಡುವ ಬಳ್ಳಿಗಳೆಲ್ಲ ಹೊಲದ ದಳಗಳ ತುಂಬಾ ಬಾಡಿದ ಮುಖಹೊತ್ತು ಚಿರನಿದ್ರೆಗೆ ಜಾರಿದ್ದರೂ ಆ ಬಳ್ಳಿಗಳ ಹೆಂಗರುಳ ತುಂಬಾ ಶೇಂಗಾ ಕಾಯಿಗಳ ಫಲವಂತಿಕೆ.” ಹಾಗೆಯೇ ‘ಅವಳ ವಿಳಾಸ ಸಿಕ್ಕಿತು’ ಕವಿತೆಯ ಕೊನೆಯ ಸಾಲುಗಳನ್ನು ಗಮನಿಸಿ: “ನೀನೋ ಗಾಳಿಗೆ ಓಲಾಡುವ ಭತ್ತದ ಪೈರಿನಂತೆ ಅಲ್ಲೇ ಸೊಗಸುಗೊಂಡು ನಿಂತಿದ್ದೆ. ಕೊನೆಗೂ ನಿನ್ನ ವಿಳಾಸ ಸಿಕ್ಕಿತು ಬಿಸಿಲೊಳಗೆ ಮರದ ನೆರಳು ಸಿಕ್ಕಂತೆ”. ಈ ಎರಡೂ ಉದಾಹರಣೆಗಳು ‘ಸೂಲಗಿತ್ತಿ’ ಕಥೆಯಲ್ಲಿ ಶಾನುಭೋಗರ ಮನೆಯ ಕೂಸಿಗೆ ಬೂಬಮ್ಮ ಹಾಲು ಕುಡಿಸಲು ಮುಂದಾದ ಸಂದರ್ಭದಲ್ಲಿ ಅಲ್ಲಿದ್ದ ಯಾರಾದರೊಬ್ಬರ ಮನದಲ್ಲಿ ತೋರಿದ ರೂಪಕದಂತ ಮಾತುಗಳು ಎಂದರೆ ಆಶ್ಚರ್ಯವಿಲ್ಲ. ಆದರೆ ಕಥೆಯಲ್ಲಿ ಮೂಡಿದ ರೂಪಕ್ಕೆ ಇಂಥ ಸಾಲುಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವ ಶಕ್ತಿ ಇರಲಿಲ್ಲ. ಏಕೆಂದರೆ ಅದು ಬೇರೆಯೇ ಜಾಯಮಾನದ ರೂಪವಾಗಿತ್ತು. 

ಹೊಸ ಭಾವನಿರ್ಮಿತಿಗೆ ಹೊಸ ರೂಪನಿರ್ಮಿತೆ ಏಕೆ ಮುಖ್ಯ ಎಂಬುದು ಗೊರವರರ ಈವರೆಗಿನ ಕೃತಿಯನ್ನು ಈ ಹೊತ್ತಿಗೆಯ ಗದ್ಯಕವಿತೆಗಳೊಂದಿಗೆ ಹೋಲಿಸಿದಾಗ ಸ್ಪಷ್ಟವಾಗುತ್ತದೆ. ಬರಲಿರುವ ದಿನಗಳ ತಮ್ಮ ಸಾಹಿತ್ಯ ಸಪರ್ಯೆಯಲ್ಲಿ ಗೊರವರರು ಹೊಸ ರೂಪನಿರ್ಮಿತಿಯ ಈ ಕಾರ್ಯವನ್ನು ಮುಂದುವರೆಸಬೇಕೆಂಬುದು ನನ್ನ ಒತ್ತಾಯ. ಅವರು ತೆರೆದಿಡುವ ಲೋಕದ ವೈವಿಧ್ಯತೆ ಇಂಥ ಹೊಸ ರೂಪಗಳ ಮೂಲಕವೇ ಅರ್ಥವತ್ತಾದ ಅಭಿವ್ಯಕ್ತಿ ಪಡೆದುಕೊಳ್ಳತಕ್ಕದ್ದು.


ಮನು ವಿ. ದೇವದೇವನ್


 

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...