ತತ್ವದ ಪದಕಟ್ಟಿ ಹಾಡಿದ ಕಡಕೋಳದ ಮಡಿವಾಳಪ್ಪ

Date: 05-02-2020

Location: ಕಲಬುರಗಿ


ಕನ್ನಡದ ತತ್ವಪದಕಾರರಲ್ಲಿ ಪ್ರಮುಖ ಹೆಸರು ಕಡಕೋಳ ಮಡಿವಾಳಪ್ಪ ಅವರದು. ತನ್ನ ಪ್ರಖರ ವೈಚಾರಿಕ ನಿಲುವನ್ನು ಪದಗಳಲ್ಲಿ ಕಟ್ಟಿ ಹಾಡಿದ ಮಡಿವಾಳಪ್ಪ ಅವರನ್ನು ಕುರಿತು ಹಿರಿಯ ಪತ್ರಕರ್ತ ವೆಂಕಟೇಶ್‌ ಮಾನು ಅವರು ಇಲ್ಲಿ ವಿವರಿಸಿದ್ದಾರೆ.

ಕರ್ನಾಟಕದ ಅಧ್ಯಾತ್ಮಿಕ ವಲಯದಲ್ಲಿ ಕಡಕೋಳ ಮಡಿವಾಳಪ್ಪನವರದು ಚಿರಸ್ಥಾಯಿ ಹೆಸರು. ಕಲಬುರಗಿ ಜಿಲ್ಲೆಯ ಕಡಕೋಳದವರು.ನಿಜಗುಣ ಶಿವಯೋಗಿಯ ನಂತರ ತತ್ವಪದಗಳ ಆಶಯ ಮತ್ತು ನೂತನ ಆವಿಷ್ಕಾರ ನೀಡಿದ ಕೀರ್ತಿ ಇವರದು.  12ನೇ ಶತಮಾನದ ವಚನ ಶಾಹಿತ್ಯ ಹಾಗೂ ಸ್ವರ ವಚನ ಸಾಹಿತ್ಯದ ಸಂಗಮ ಇವರ ತತ್ವಪದಗಳು. ಶಿವಾನುಭವ ಗೋಷ್ಠಿ ಭಜನೆಗಳಲ್ಲಿ ಇವರದು ಗಮನಾರ್ಹ ವ್ಯಕ್ತಿತ್ವ. 1780 ರಿಂದ 1855 ಅವಧಿಯಲ್ಲಿ ಜೀವಿಸಿದ್ದರೆಂಬುದು ಇತಿಹಾಸ. 

ಗೊಬ್ಬೂರಿನ ಸದಾಶಿವ ಸ್ವಾಮೀಜಿಗಳಲ್ಲಿ ಇವರ ವಿದ್ಯಾಭ್ಯಾಸ. ಶ್ರೀ ಮಠವೇ ಇವರ ಇವರ ಅಧ್ಯಾತ್ಮ ಕೇಂದ್ರವಾಗಿತ್ತು. ಬಿದನೂರಿನ ಮಠಕ್ಕೆ ಇವರನ್ನುಸ್ವಾಮೀಜಿಯನ್ನಾಗಿ ಮಾಡುವಂತೆ ನಡೆದ ಪ್ರಯತ್ನದಲ್ಲಿ ಮಡಿವಾಳಪ್ಪನವರಿಗೆ ಕೆಲ ಅವಮಾನಕರ ಪ್ರಸಂಗಗಳು ಎದುರಾದವು. ಏಕೆಂದರೆ, ಇವರಿಗೆ ಲಿಂಗದೀಕ್ಷೆಗೆ ಜಾತಿ ಅಡ್ಡವಾಗಿತ್ತು. ತಿಪ್ಪೆಯಲ್ಲಿ ಹುಟ್ಟಿದ ಬಿಲ್ವಪತ್ರೆ ದೇವರಿಗೆ ಅರ್ಪಿತವೆ? ಎಂಬುದು. ಆದರೆ, ಇವರ ಅಭಿಮಾನಿ ಗುರುಗಳಾದ ಗುರುಬಸವದೇವರು ಬಿಲ್ವಪತ್ರೆ ಎಲ್ಲಿ ಬೆಳೆದರೇನು, ಅದು ದೇವರಿಗೆ ಅರ್ಪಿತವೇ ಎಂದು ವಾದಿಸಿ, ಜಂಗಮ ದೀಕ್ಷೆ ನೀಡಲು ಮುಂದಾದರೂ ಬಹುಜನರು ಸಮ್ಮತಿಸಲಿಲ್ಲ. ಇವರಿಂದ ಬೇಸತ್ತ ಮಡಿವಾಳಪ್ಪನವರು ದೇಶಾಂತರ ಹೊರಟು ಹೋಗುವ ನಿರ್ಧಾರವೇ ಇವರನ್ನು ತತ್ವಪದಕಾರರನ್ನಾಗಿ ಮಾಡಿತ್ತು. ಹೀಗೇ ಅವರ ಬದುಕಿನ ಮಹತ್ವದ ತಿರುವು ನಾಡಿಗೆ ಉತ್ತಮ ಪದಕಾರರನ್ನು ಕೊಟ್ಟಿತು.

ನಂತರ ವಿಜಾಪುರ ಜಲ್ಲೆಯ ಕೋರವಾರದ ಮುರುಘೇಂದ್ರ ಸ್ವಾಮೀಜಿ ಅವರ ಮಠಕ್ಕೆ ಹೋಗಿ ತತ್ವಪದದ ಚಿಂತನೆ ನಡೆಸಿದರು, ನಂತರ ಅವರು ಜೇವರ್ಗಿ ತಾಲೂಕಿನ ಅರಳಗುಂಡಗಿಗೆ ಬಂದರು. ಅಲ್ಲಿಯ ಹಿರಿಯ ಮಲ್ಲಿಕಾರ್ಜುನ ಎಂಬುವರಿಗೆ ಒಬ್ಬ ಸಹೋದರಿ (ಭಾಗಮ್ಮ) ಇದ್ದು, ಆಕೆಗೆ ಕುಷ್ಠ ರೋಗವಿತ್ತು. ಊರ ಹೊರಗಿನ ಗುಡಿಸಲಲಿಲ್ಲ ವಾಸಿಸುತ್ತಿದ್ದ ಅವರನ್ನು ಮಡಿವಾಳಪ್ಪನವರು ಗುಣಪಡಿಸಿದರು ಎಂಬ ಸುದ್ದಿ ಹಬ್ಬುತ್ತಿದ್ದಂತೆ ಇವರ ವ್ಯಕ್ತಿತ್ವ ತೇಜೋವಲಯ ಹಿರಿದಾಗುತ್ತಾ ಹೋಯಿತು. ಎಷ್ಟರಮಟ್ಟಿಗೆ ಎಂದರೆ, ಆಕೆ ಮಾಡಿದ ಅಡುಗೆಯನ್ನೂ ಸಹ ಊರ ಜನರು ಉಣಲಾರಂಭಿಸಿದರು. ನಂತರ ಜೇವರ್ಗಿ ತಾಲೂಕಿನ ಕಡಕೋಳಕ್ಕೆ ಬಂದು ನೆಲೆಸುತ್ತಿದ್ದಂತೆ ಬೇಡರು, ಕಬ್ಬಲಿಗರು, ದಲಿತರು ಇವರು ಶಿಷ್ಯರಾದರು. 

ತತ್ವಪದಗಳು:

ಮಡಿವಾಳಪ್ಪನವರ ತತ್ವಪದಗಳು ಕೇವಲ ಅಧ್ಯಾತ್ಮಕ ನೆಲೆ ಮಾತ್ರ ಇಲ್ಲ. ಅವು ಅನ್ವೇಷಕ ಪ್ರವೃತ್ತಿಯನ್ನು ಒಳಗೊಂಡಿವೆ.’ ದಾವದೊ ಕುಲದಾವದೊ ಕುಲದ ವಿವರವ ತಿಳಿದು ಹೇಳಲೊ ಮೂಢ!, ‘ಮಾನಗೇಡಿ ಮಂದಿಹಟ್ಟಿ ಮತ್ಯಾಕೆಡಿಸ್ಯಾರು| ಉಡಾಳ ಮಂದಿ ಊರೊಳಗಾ ಹಿಡಿಯಲ್ದಹೋದರೊ ….ಪುಢಾರಿ ಮಂದಿ ಹೋಗಿ ದರೂಡೀ ಮಾಡ್ಯಾರೋ’ ಹೀಗೆ ಸಾಮಾಜಿಕ ಅನಿಷ್ಠ ಆಚಾರಗಳ ಜೊತೆಗೆ ಇದಕ್ಕೆ ಕುಮ್ಮಕ್ಕು ನೀಡುವ ವ್ಯಕ್ತಿಗಳ ವಿಚಾರಗಳಿಗೆ ಕಪಾಳಮೋಕ್ಷ ಮಾಡಿದರು. ನಿರ್ಮಲವಾದ ಮನವೇ ಕರ್ಪೂರದಾರುತಿ... ಎನ್ನುವ ಮೂಲಕ ಭಕ್ತಿಯ ಪಾರದರ್ಶಕತೆಯ ದರ್ಶನ ಮಾಡಿಸಿದರು. ನಿರುಪಮನಿರಾಳ ಮಹಾಂತಯೋಗಿ ಎಂಬುದು ಇವರ ವಚನಗಳ ಅಂಕಿತನಾಮವಾದರೆ, ಮಹಾಂತ ಎಂಬುದು ಇವರ ತತ್ವಪದಗಳ ಗುರುನಾಮವಾಗಿದೆ. 

ಇವರ ಶಿಷ್ಯನಾಗುವುದಕ್ಕಿಂತ ಮುಂಚೆ ಜಲಾಲಸಾಹೇಬನು ’ಇವರ ಮಲಿನ ಬಟ್ಟೆಗಳನ್ನು ಕಂಡು ಮೂದಲಿಸಿದ್ದ. ಆದರೆ, ಮಡಿವಾಳಪ್ಪನವರು ’ಜಂಗಮನಾಗಬೇಕಾದರೆ ಮೊದಲು ಮನ ಲಿಂಗ ಮಾಡಿಕೋ’ ಎಂದು ಎಚ್ಚರಿಸಿದ್ದರು. ಹೀಗೆ,  ನೂರಾರು ಶಿಷ್ಯರ ಮನ ಗೆದ್ದ ಮಡಿವಾಳಪ್ಪ, ಶಿಷ್ಯರಿಗೆ ಪಾರಮಾರ್ಥಿಕ ಹಾಗೂ ಲೌಕಿಕ ಮಾರ್ಗ ತೋರಿದವರು. ವ್ಯಕ್ತಿ-ಸಮಷ್ಠಿ ಚಿಂತನೆಯ ನಿತ್ಯ ಬೆಳಗು-ಕಡಕೋಳ ಮಡಿವಾಳಪ್ಪ.ಈಗ ಇವರ ಕಾರ್ಯಕ್ಷೇತ್ರ ಕಡಕೋಳದ ಮಠ, ಊರು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ತತ್ವಪದಕಾರರೊಬ್ಬರಿಗೆ ನಾವು ನೀಡಿದ ಗೌರವವಿದು. ಅದೊಂದು ಜಾತಿಯ ಮಠ ಎಂಬಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಅಧ್ಯಾತ್ಮ ಕೇಂದ್ರವಾಗಿ  ಕಂಗೊಳಿಸಲಿಲ್ಲ. ಇತಿಹಾಸದ ಬಗ್ಗೆ ನಮಗೆ ಅಭಿಮಾನವಿದ್ದರೆ ಇಂತಹ ಸಾಂಸ್ಕೃತಿಕ ಘನತೆಯನ್ನು ಹೀಗೆ ಮಣ್ಣು ಪಾಲಾಗಿಸುತ್ತಿರಲಿಲ್ಲ. 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...