ತೆರೆದುಹೋದ ಅರಿಯದ ಸಮ್ಮೋಹಕ ಲೋಕ

Date: 14-03-2023

Location: ಬೆಂಗಳೂರು


''ಪ್ರೀತಿಯ ವ್ಯಾಖ್ಯೆ ಪದಗಳಲ್ಲಿಲ್ಲ ಹೃದಯದಲ್ಲಿದೆ ಎಂದು ಹೇಳುವಂತೆ ಗಿಡದಲ್ಲಿ ಆ ಹೂವು ಅರಳುತ್ತಿದೆ. ಆಗೆಲ್ಲಾ ನನಗಾಗೇ ಕಾಣದ ಮಡಿಲೊಂದು ತೆರೆದುಕೊಳ್ಳುತ್ತಿದ್ದೆ ಎನ್ನಿಸಿ ಅದರೆದುರು ಮಂಡಿಯೂರಿ ಕುಳಿತುಬಿಡಬೇಕೆನ್ನಿಸುತ್ತದೆ,” ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ‘ನಡೆಯದ ಬಟ್ಟೆ’ ಅಂಕಣದಲ್ಲಿ ‘ತೆರೆದುಹೋದ ಅರಿಯದ ಸಮ್ಮೋಹಕ ಲೋಕ’ದ ಕುರಿತ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ...

`ನಿಜ ಏಕಾಂಗಿತನ ಕೆಟ್ಟದ್ದು ಎಂದು ಲೋಕ ಪಕ್ಕಕ್ಕೆ ಸರಿಸುತ್ತದೆ. ಇಲ್ಲ ಅದೂ ಕೂಡಾ ಮನುಷ್ಯ ಆಗುವ ಪ್ರಕ್ರಿಯೆಯೇ ಅಲ್ಲವೇ?’ ಹೀಗೆ ಹೇಳುತ್ತಾ ನಿರ್ಭಾವುಕವಾಗಿದ್ದ ಶ್ಯಾಮುವಿನ ಕಣ್ಣುಗಳಲ್ಲಿ ನಾನು ನರಳಿಕೆಯನ್ನು ಹುಡುಕ ಹೊರಟಿದ್ದರ ಬಗ್ಗೆ ನಾಚಿಕೆ ಅನ್ನಿಸಿತು. ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಜನ್ಮಾಂತರಗಳನ್ನೂ ಕೂಡಾ ಬಯಸುತ್ತೇವೆ. ಇಷ್ಟು ಆಸೆಗಳನ್ನು ಹೊತ್ತು ಏನು ಮಾಡುತ್ತೇವೆ? ಬೆತ್ತಲ ಪಾದಗಳಿಗೆ ಮುಳ್ಳು ನಾಟಿ ರಕ್ತ ಸೋರುತ್ತಿದ್ದರೂ ಓಡುವ ಆತುರ ಕಡಿಮೆಯಾಗುವುದಿಲ್ಲ. ಉಸಿರಾಟದಂತೆ ಉದ್ವೇಗವು ಸದಾ ಹೆಚ್ಚಾಗುತ್ತಲೇ ಇರುತ್ತದೆ. ಗಾಳಿ ಕಣ್ಣುಗಳಿಗೆ ಅದೃಶ್ಯ. ಆದರೆ ಅನುಭವ ಕಣ್ಣುಗಳದ್ದೂ ಆಗುವಾಗ ಒಳಗೆ ತೂರುವ ಮಂಜಿನ ಚಿಕ್ಕ ಕಣಗಳು ಕಣ್ಣ ಒಳಗನ್ನೂ ತೇವಗೊಳಿಸುತ್ತದೆ. ಉಸಿರಿಗೆ ದಕ್ಕುವಾಗ ಮಾತ್ರ ಅದು ಇದೆ ಎಂದು ಅಲ್ಲ. ಗಿಡವೊಂದು ಬೀಸಿದ ಗಾಳಿಗೆ ಮೋಹಕವಾಗಿ ತಿರುಗಿ ನಿಂತಂತೆ ಕಂಡರೆ ಅದು ಭಾವದ ವಿಶ್ರಾಂತಿ. ಅಂತರಗಳನ್ನೇ ಅಳಿದು ಹಾಕುವ ಮಾಯಾಜಾಲವೊಂದನ್ನು ಮನಸ್ಸು ಬಯಸಿತ್ತಲ್ಲವೇ. ಹೌದು ಅದಕ್ಕೆ … ಅದಕ್ಕೆ ... ಪ್ರೀತಿಯ ವ್ಯಾಖ್ಯೆ ಪದಗಳಲ್ಲಿಲ್ಲ ಹೃದಯದಲ್ಲಿದೆ ಎಂದು ಹೇಳುವಂತೆ ಗಿಡದಲ್ಲಿ ಆ ಹೂವು ಅರಳುತ್ತಿದೆ. ಆಗೆಲ್ಲಾ ನನಗಾಗೇ ಕಾಣದ ಮಡಿಲೊಂದು ತೆರೆದುಕೊಳ್ಳುತ್ತಿದ್ದೆ ಎನ್ನಿಸಿ ಅದರೆದುರು ಮಂಡಿಯೂರಿ ಕುಳಿತುಬಿಡಬೇಕೆನ್ನಿಸುತ್ತದೆ.

`ಈಗಲೂ ಆ ಅನುಭವ ಅದ್ಭುತ ತೇಜೂ, ಹನಿ ನನ್ನ ಎದೆಗೆ ಬಾಯನ್ನು ಹಚ್ಚಿ ಚಿಮ್ಮುವ ಹಾಲನ್ನು ತುಟಿಯಲ್ಲಿ ಅಡ್ದಹಿಡಿದು ಹೀರುತ್ತಾ ಹೀರುತ್ತಾ ನಕ್ಕಾಗ ಯಾಕೆ ಎದೆ ಝಲ್ಲೆಂದಿತ್ತು. ಗೊತ್ತಿಲ್ಲ ನನಗೆ ಅವಳು ಹುಟ್ಟುವಾಗ ಆದ ನೋವು ಹೆಚ್ಚು ನೆನಪಿಲ್ಲ. ಡಾಕ್ಟರ್ ಕತ್ತಿಯಂಚಲ್ಲಿ ಯೋನಿಯ ಕೆಳಭಾಗವನ್ನು ಸೀಳಿ ಮಗು ಬರುವಿಕೆಗೆ ದಾರಿ ಸುಗಮ ಮಾಡುವಾಗ ಕರುಳ ಬಳ್ಳಿಯೊಡನೆ ಸೇರಿದ ಆ ರಕ್ತದ ಬಿಸುಪು ಕೂಡಾ ಪ್ರಸವ ವೇದನೆಯೊಂದಿಗೆ ಸೇರಿ ಹೋಗಿತ್ತು. ನನಗೆ ಅದು ಬೇರೆಯಾಗಿ ಉಳಿದರೆ ಆ ನೋವು ಹೇಗಿರುತ್ತದೆ ಎನ್ನುವ ಕುತೂಹಲ ಈಗಲೂ ಕಾಡಿಸುತ್ತೆ’ ಎಂದವಳ ಮಾತಿಗೆ, `ನೋವು ನೋವೇ ಅಲ್ಲವಾ ಶ್ಯಾಮು ಅದು ಬೇರೆ ಇದು ಬೇರೆ ಹೇಗೆ ಆಗುತ್ತೆ’ ಎನ್ನುವಾಗ ನಕ್ಕಿದ್ದಳು. `ಅಲ್ಲವಾ? ಅಲ್ಲವಾ?.. ಹಾಗೇ ಏಕಾಕಿತನ ಕೂಡಾ ಒಂಟಿಯಲ್ಲ ಕಣೆ. ಯಾರದ್ದೋ ಅನುಪಸ್ಥಿತಿ ನಮ್ಮೊಳಗೆ ಹುಟ್ಟುಹಾಕುವ ನರಳಿಕೆ ಅದು ಅನ್ನಿಸಿದರೆ ನನ್ನೊಳಗೇ ಮಾತಾಡಿಕೊಳ್ಳಬೇಕು.. ನನ್ನ ಒಂಟಿತನವನ್ನು ನೀನು ನೋಡಿದೆ ಎಂದಿಟ್ಟುಕೋ ಅಲ್ಲಿ ನೀನೂ ಸೇರಿಕೊಂಡು ಎರಡಾಗಿಬಿಡುತ್ತದಲ್ಲಾ... ಆಗೊಂದು ಜಂಟಿ ಪಯಣ ಶುರುವಾಗಿಬಿಡುತ್ತೆ’.

ಕಾಡಗಿಡ ತರಲಿಕ್ಕೆ ಹೋಗಿ ಹಾದಿ ತಪ್ಪಿ ಅತ್ತಿದ್ದಳಲ್ಲ! ಆ ದಿನ ಶ್ಯಾಮು, ಅವಳನ್ನು ಕಂಡಿದ್ದಳು-ದಯಾರ್ದ್ರವಾದ ಹೃದಯವೊಂದಕ್ಕೆ ಒರತೆಯಿಲ್ಲದ ತೊರೆ ಮೂಲವೊಂದು ಎದುರಾದಂತೆ. ಖಾಲಿತನವೊಂದು ಪರಾವಲಂಬಿಯಾಗಿ ತುಂಬಿದೆ ತುಂಬಿದೆ ಎನ್ನುವಂತೆ. ಅವಳೆಂದರೆ ಅವಳು ಹೆಣ್ಣಲ್ಲ ದಿವ್ಯ ಪ್ರಭೆಯೊಂದು ಮೂರ್ತವಾದಂತೆ, ನೀಲಾಕಾಶದ ಹಾಗೆ ದಿಗಂಬರೆ. ಅವಳು ತನ್ನ ಮೊಲೆಗಳನ್ನು ಮುಂದೆ ಒಡ್ಡುತ್ತಾ, `ನನ್ನೊಳಗಿನ ಚೈತನ್ಯವನ್ನು ನಿನಗೆ ದಾಟಿಸುವೆ ಕುಡಿಯ ಬಾ’ ಎಂದು ಕರೆದಿದ್ದಳಂತೆ. ಹೆದರಿದ ಶ್ಯಾಮು `ಇಲ್ಲ ನನಗೆ ಬೇಡ’ ಎಂದು ತಲೆ ಆಡಿಸುತ್ತಲೇ ಓಡಲು ಆರಂಭಿಸಿದಾಗ ತನ್ನ ನೀಳ ಬಾಹುಗಳಲ್ಲಿ ಶ್ಯಾಮುವನ್ನು ಬಂಧಿಸಿ, `ನಿನಗಾಗೇ ನಾನು ಕಾಯುತ್ತಿದ್ದುದು. ನಿನಗೆ ಈ ಹಾಲನ್ನು ಕುಡಿಸಿಬಿಟ್ಟರೆ ನನ್ನ ಉದ್ದೇಶ ಈಡೇರಿದಂತೆ’ ಎನ್ನುತ್ತಾ ಬಲವಂತದಿಂದ ಕುಡಿಸಿದಳಂತೆ. `ಆ ಹಾಲಿನ ರುಚಿ ಅದ್ಭುತವಾಗಿತ್ತು. ಅದನ್ನು ಕುಡಿಯುತ್ತಲೇ ಇರಬೇಕು ಅನ್ನಿಸಿತ್ತು. ನಾನು ಕುಡಿಯುತ್ತಾ... ಕುಡಿಯುತ್ತಾ ಮೈಮರೆತಾಗ ಇದ್ದಕ್ಕಿದ್ದ ಹಾಗೆ ಅವಳು ಮಾಯವೇ ಆಗಿಬಿಟ್ಟಿದ್ದಳು. ಅಚ್ಚರಿಯೆಂದರೆ ನನ್ನ ತುಟಿಗಳಲ್ಲಿ ಮೊಲೆಯ ಹಿತವಾದ ಮೃದುತ್ವ, ತೊಟ್ಟಿಂದ ಜಿನುಗುವ ಹಸಿ ಹಸಿ ಹಾಲಿನ ಅದ್ಭುತವಾದ ವಾಸನೆ, ಅತ್ಯಂತ ಮಧುರವಾದ ಅದರ ರುಚಿ ಉಳಿದೇ ಇತ್ತು. ನನ್ನ ಕಣ್ಣಾಲಿಗಳಲ್ಲಿ ಆ ಚಿತ್ರ ಮರೆಯಾಗಲೇ ಇಲ್ಲ. ಅದು ವಿಕ್ಷಿಪ್ತವಲ್ಲದ ಆದರೆ ಸಾಪೇಕ್ಷವಾಗಿ ನನ್ನೊಳಗೆ ಚಳಿ ನಡುಕಗಳನ್ನು ಹುಟ್ಟು ಹಾಕುತ್ತಲೇ ಇತ್ತು’.

ನಾನೆಂದುಕೊಂಡಿದ್ದೆ ಅವತ್ತು ಇಂಥಾ ಕನಸು ಶ್ಯಾಮೂಗೆೆ ಬಿದ್ದಿರಬೇಕೆಂದು. ಅದನ್ನವಳು ಎಂದೂ ಒಪ್ಪಲಿಲ್ಲ, `ಇಲ್ಲ ಕಣೆ ಅದು ಕನಸಲ್ಲ ನಾನು ನೋಡಿದೆ ಕಾಡು ಹೂಗಳ ಕಿತ್ತೂ ಕಿತ್ತೂ ಅವಳ ಕೈ ಆ ಹೂಗಿಂತಲೂ ಮೃದುವಾಗಿತ್ತು. ಅವಳ ಕಣ್ಣೊಳಗೆ ಅನನ್ಯವಾದ ಪರವಶಗೊಳ್ಳುವ ಎಂಥದ್ದೋ ಭಾವವಿತ್ತು. ಅವಳ ಎದೆಯ ಕೋಮಲತೆ ನನ್ನೊಳಗಿನ ಭಾವಲೋಕವನ್ನು ಇದ್ದಕ್ಕಿದ್ದಂತೆ ಬೆಳಗಾಗಿಸಿಬಿಟ್ಟಿತ್ತು. ಆಗ ಜಗತ್ತೇ ಅಲುಗುವಂತೆ ಒಳಗೆ ಒಂದು ನಡುಕ ಹುಟ್ಟಿಕೊಂಡಿತ್ತು. ಇಡೀ ಜಗತ್ತು, ಜಗತ್ತಿನಲ್ಲಿರುವ ಎಲ್ಲವೂ ನಡುತ್ತಿದೆಯೇನೋ ಅನ್ನಿಸಿಬಿಟ್ಟಿತ್ತು. ನನಗಿದ್ದ ಒಂದೇ ದಾರಿ ಎಂದರೆ ಅದು ಬಯಕೆಯೊಂದು ಹೆಚ್ಚಾಗುವಂತೆ ಒಳಹೊಕ್ಕು ಅಲುಗುತ್ತಿದ್ದ ಜಗತ್ತನ್ನು ದೃಢ ಮಾಡುವಂತೆ ಹಿಡಿದು ನಿಲ್ಲಿಸುವುದು. ಅದೊಂದು ಹೋರಾಟವಾಗಿತ್ತು. ನಕ್ಕ ಆ ಹೆಂಗಸು ನನ್ನ ಕಿವಿಯಲ್ಲಿ ಉಸುರಿದ್ದಳು, `ನಿನಗದು ಸಾಧ್ಯವಿದೆ ಪ್ರಯತ್ನಿಸು’.

ಪ್ರಯತ್ನ ಆ ಹಾದಿ ಸವೆಸುವಾಗ ಒಳಗೆ ನದಿಯೊಂದು ತೆಳ್ಳತೆಳ್ಳಗಿದ್ದದ್ದು ಉಕ್ಕಿ ಭೋರ್ಗರೆದು ಬಿಕ್ಕಿ ಬಿಟ್ಟಿದ್ದೆ. ಹೇಗೆ ನಿಲ್ಲಿಸಲಿ ಇದನ್ನು. ಬೀಸುವ ಗಾಳಿ ಕೇಳಿತ್ತು ನಿಲ್ಲಿಸು, ಭವಿಷ್ಯವೊಂದು ಸಾಗುವಂತೆ ಆಕಾಶದಲ್ಲಿ ಸಾಗಿದ್ದ ಆ ಹಕ್ಕಿ ಅಣಕಿಸಿತ್ತಾ? ಮೆಲ್ಲ ಮೆಲ್ಲನೆ ಆವರಿಸಿಕೊಳ್ಳುವ ಕತ್ತಲೆಯಲ್ಲಿ ಆ ನದಿಯನ್ನು ದಾಟಲೇ ಬೇಕಿತ್ತು. ಮೊಳಕಾಲ ಮಟ್ಟಕ್ಕೆ ಲಂಗವ ಎತ್ತಿ ಹಿಡಿದ ಮೀನ ಖಂಡಗಳಿಗೆ ಮೀನುಗಳು ಕಚಗುಳಿ ಇಡುವಾಗ ಪಿನ್ಹಾರ್ ಮೀನುಗಳು ನನ್ನ ಕಾಲುಗಳ ಮಾಂಸವನ್ನು ತಿಂದು ಬರಿಯ ಅಸ್ತಿಯನ್ನು ಕಾಣಿಸಿಬಿಟ್ಟರೆ ನನ್ನ ಗತಿ ಏನು ಎಂದು. ಭಯದಿಂದಲೇ ನದಿಯನ್ನು ದಾಟಿದೆ. ಮೀನ ಖಂಡಗಳು ಸುರಕ್ಷಿತವಾಗಿದ್ದವು. ನಿಟ್ಟುಸಿರಿಟ್ಟೆ. ನೋಡಿದೆ, ಅನುಭವಿಸಿದೆ ಬರೆದೆ ಏನು ಮಾಡಿದರೂ ಆ ನಡುಕ ನಿಲ್ಲಲಿಲ್ಲ. ನನಗೆ ಅವಳೇನು ಕೊಟ್ಟಳು? ಎದೆಯ ಊಡಿಸುತ ಕಿವಿಯಲ್ಲಿ ಏನು ಉಸುರಿದಳು? ನಿಶ್ಚಲವಾಗಿದ್ದ ಬರಿಯ ಗೆರೆಗೆ ಚಲಿಸುವ ಪ್ರಕೃತತ್ವ ಕೊಡುತ್ತಿದ್ದೇನೆಂದೆ?’

`ಮಯ್ಯೊಳಗಿನ ನಡುಕ ಯಾವಾಗ ಗೊತ್ತಾ ಇಲ್ಲವಾಗಿದ್ದು? ದೃಡವಾದ ಚಂದ್ರನ ಬಾಹುಗಳಲ್ಲಿ ನಾನೇ ನಾನಾಗಿ ಒಮ್ಮೆ ಕರಗಿ ಹೋದೆನಲ್ಲಾ ಆಗಲೇ. ಅಲ್ಲಿಯವರೆಗೂ ನನ್ನ ರೇಖೆಗೂ, ಮನಸ್ಸಿಗೂ, ದೇಹಕ್ಕೂ ನಿಯಂತ್ರಣ ಇರಲಿಲ್ಲ. ಬರೆಯುತ್ತಿದ್ದೆ ಆದರೆ ಬರೆದದ್ದು ದಕ್ಕುವ ಹಾಗಿರಲಿಲ್ಲ. ಧೂಪದ ಮರದಲ್ಲಿ ಉಜ್ಜಿದರೆ ಹೊತ್ತಿ ಉರಿಯುವ ಗುಣವನ್ನು ಪ್ರಕೃತಿ ಕೊಟ್ಟಿರುತ್ತದಲ್ಲ! ಪೊಳ್ಳುತನದಲ್ಲೂ ಬೆಂಕಿಯಾಡುವಂತೆ ಚಿತ್ತದ ಅಲುಗಾಟವಿರುತ್ತದಲ್ಲ? ಅದು ನನ್ನೊಳಗೂ ಇತ್ತು ಎನ್ನಿಸುತ್ತದೆ. ಬೆಂಕಿಯಾಗುವ ಆ ಮರ ಹಸಿರನ್ನು ತೂಗುವುದು ಎಂಥಾ ಸೋಜಿಗ ಅಲ್ವಾ! ಕೂಡಿದ ಮೇಲೆ ಪೂರ್ಣತೆಯೊಂದು ತುಂಬದಿದ್ದರೆ ಆ ಶಯ್ಯಾಗೃಹಕ್ಕೆ ಮೋಹಕತೆ ಬರುವುದಿಲ್ಲವಲ್ಲಾ? ತೃಪ್ತಿಯ ನಿಟ್ಟುಸುರು ಗೋಡೆಗಳಿಗೆ ಅಂಟಿ ಚಿತ್ತಾರವಾಗುವ ಆ ಕ್ಷಣ ಮಾತ್ರ ಒಂದು ಸಂಬಂಧ ಕೊಡುವ ಬಿಸುಪನ್ನು ಹೇಳಬಲ್ಲದು ಅಲ್ಲವಾ? ವಿಚಿತ್ರ ಎಂದರೆ ನಾವೆಲ್ಲಿ ಕರಗಬೇಕು ಅಂದುಕೊಳ್ಳುತ್ತೇವೆಯೋ ಅಲ್ಲಿ ನಿಖರವಾಗುತ್ತೇವೆ. ಎಲ್ಲಿ ನಿಖರವಾಗಿದ್ದೇವೆ ಎಂದುಕೊಳ್ಳುತ್ತೇವೆಯೋ ಅಲ್ಲಿ ಕರಗಿರುತ್ತೇವೆ. ದ್ರವಿಸುವ ಈ ಗುಣ ಇಲ್ಲದಿದ್ದರೆ ಪ್ರತಿಯೊಂದರ ಮುಂದೆ ನಿಂತು, `ಇದೇನು?’ ಎಂದು ಮುಗ್ಧವಾಗುತ್ತಾ ಕೇಳಲಾಗುವುದಿಲ್ಲ. ಎಲ್ಲಕ್ಕೂ ನಿಮಿತ್ತ ಎಂದು ಭಾಸವಾಗುವ ಆ ಅದೇ ಗುಣವೇ ನನ್ನ ಯೋಚನೆಗೆ ಮೂಲವಾಯಿತು’.

ಶ್ಯಾಮುವಿನ ಈ ಸ್ಥಿತಿಯಿಂದ ಕಳವಳಕ್ಕೀಡಾಗಿದ್ದು ಕಮಲತ್ತೆ. `ನನಗೆ ಕೋಣೆಯೆಲ್ಲವೂ ಅಲುಗುತ್ತಿದೆ ಅಮ್ಮಾ ನೀನೇಕೆ ಅಲುಗುತ್ತಿದ್ದೀ, ಸುಮ್ಮನೆ ನಿಂತುಕೋ ನನಗೆ ಭಯವಾಗುತ್ತಿದೆ’ ಎಂದು ಅವಳು ಹೇಳುತ್ತಿದ್ದರೆ. ಯಾವ ಗರ ಇದಕ್ಕೆ ಬಡೆಯಿತು ಎಂದು ಕಮಲತ್ತೆ ಗಾಬರಿಯಾಗಿದ್ದಳು. ಒಳಗಿನ ಅದಮ್ಯ ಶಕ್ತಿಗೆ ಶ್ಯಾಮು ಉತ್ತರ ಕಂಡುಕೊಳ್ಳಲು ಯತ್ನಿಸುತ್ತಿದ್ದರೆ ಅವಳ ಸುತ್ತಲಿರುವವರಿಗೆ ಅದೊಂದು ಹುಚ್ಚು ಎನ್ನಿಸತೊಡಗಿತ್ತು. `ನಾನವತ್ತೇ ಹೇಳಿದೆ ಇವಳಿಗೆ ಎಂಥದ್ದೋ ಆಗಿದೆಯೆಂದು. ನನ್ನ ಮಾತನ್ನು ನೀವೆಲ್ಲಿ ಕೇಳಿದಿರಿ. ಮಾತಾಡಬೇಡ ಸುಮ್ಮೆನೆ ಎಲ್ಲರಿಗೂ ಗೊತ್ತಾಗುತ್ತೆ ಎಂದಿರಿ. ಈಗ ಎಲ್ಲರಿಗೂ ಗೊತ್ತಾಗ್ತಾ ಇದೆ. ನಿಮ್ಮಕ್ಕ ಒಬ್ಬರೇ ಸಾಕು ಅವತ್ತೆ ಹೇಗೆಲ್ಲಾ ಆಡಿದ್ರು? ಈಗ ಇದೇನಾದ್ರೂ ಗೊತ್ತಾದ್ರೆ ಊರ ಮಧ್ಯ ನಿಂತು ಡಂಗೂರ ಸಾರಿಬಿಡ್ತಾರೆ’ ಎಂದು ಕಮಲತ್ತೆ ಶ್ಯಾಮುವಿನ ಅಪ್ಪನ ಜೊತೆ ಹೇಳುತ್ತಿದ್ದರೆ, ತನಗಿರುವುದು ಹುಚ್ಚಲ್ಲ ಎಂದು ವಾದಿಸಬೇಕೆಂದು ಅವಳಿಗೆ ಅನ್ನಿಸುತಿತ್ತೇನೋ. ಅವಳನ್ನು ಕೇಳುವವರು ಯಾರಿದ್ದರು? ಎಲ್ಲಾ ನಿರ್ಧಾರಗಳನ್ನೂ ದೊಡ್ಡವರೇ ತೆಗೆದುಕೊಳ್ಳುತ್ತಿದ್ದರು. ಶ್ಯಾಮುವೂ ಉದಾಸೀನದಿಂದ, `ನನಗೇನಾಗ್ತಾ ಇದೆ ಅಂತ ಇವರ್ಯಾರಿಗೂ ಅರ್ಥವಾಗುತ್ತಿಲ್ಲ ನಿನಗಾದರು ಅರ್ಥ ಆಗ್ತಾ ಇದ್ಯಾ ತೇಜೂ’ ಎಂದಾಗ. ಅರ್ಥವಾಗದಿದ್ದರೂ, ಅವಳಿಗೆ ಸಮಾಧಾನವಾಗಲೆಂದು `ಹು’ ಎನ್ನುವಂತೆ ತಲೆ ಆಡಿಸಿದ್ದೆ. ನನ್ನೆಡೆಗೆ ನೋಡಿದ ಅವಳ ನೋಟದಲ್ಲಿ ಕೃತಜ್ಞತೆ ಇತ್ತು.

ಊರ ಸುತ್ತ ಮುತ್ತ ಕಮಲತ್ತೆ ಅಲೆಯದ ಗುಡಿಗುಂಡಾಂತರಗಳಿಲ್ಲ. ಅಮ್ಮನೂ ಕಮಲತ್ತೆಗೆ ಸಾಥ್ ಕೊಟ್ಟಿದ್ದರು. ಇಬ್ಬರೂ ಸೇರಿ ಎಲ್ಲೆಲ್ಲೆ ಪವರ್‌ಫುಲ್ ದೇವರಿದ್ದಾರೆ ಎಂದು ಹುಡುಕಿ ಹೋಗತೊಡಗಿದರು. ಶ್ಯಾಮು ಜೊತೆ ನಾನೂ ಹೋಗುತ್ತಿದ್ದೆ. ಮಗಳ ಈ ಸ್ಥಿತಿಗೊಂದು ಪರಿಹಾರ ಸಿಕ್ಕರೆ ಸಾಕು ಎನ್ನುವಂತಾಗಿತ್ತು ಕಮಲತ್ತೆಯ ಸ್ಥಿತಿ. ಯಾರಾದರೂ ಮಹಾ ಶಕ್ತಿಶಾಲಿ ದೇವರು ಎಂದರೆ ಅವರು ಅದನ್ನು ನಂಬುತ್ತಿದ್ದರು. ಶ್ಯಾಮುವನ್ನೂ ಕರಕೊಂಡು ಓಡುತ್ತಿದ್ದರು. ದೇವಸ್ಥಾನದ ಒಳಗೆ ಗಂಭೀರವಾಗಿ ತನ್ನ ಮಗಳಿಗೆ ಬಂದೊದಗಿದ ಕಷ್ಟವನ್ನು ಕಳೆ ಎಂದು ಪ್ರಾರ್ಥಿಸುತ್ತಿದ್ದರು. ಶ್ಯಾಮುವಿಗೆ ದಿನ ಒಂದೊಂದು ದೇವಸ್ಥಾನ ಮತ್ತದೆ ಪೂಜೆ, ಪರಿಹಾರ ಎಲ್ಲಾ ಬೇಸರ ಬಂದಿತ್ತು. ಒಮ್ಮೆ ಹೀಗೆ ಪೂಜೆ ಪ್ರಾರ್ಥನೆ ನಡೆಯುವಾಗ, ನನ್ನ ಕೈಹಿಡಿದು `ಬಾರೆ’ ಎಂದು ಹೊರಗೆ ಕರೆದೊಯ್ದಿದ್ದಳು.

ದೇವಸ್ಥಾನಕ್ಕೆ ಬರುವಾಗ ಆವರಣದಲ್ಲಿ ಅವಳನ್ನು ಆಕರ್ಷಿಸಿದ್ದ ಹೂಗಳಿಂದ ತುಂಬಿದ್ದ ಕೊಳವೊಂದಿತ್ತು. ಅಲ್ಲೇ ನೋಡಲು ನಿಂತವಳನ್ನು ಆಮೇಲೆ ನೋಡುವಿಯಂತೆ ಎಂದು ಅಮ್ಮ ಕಮಲತ್ತೆ ಕರೆದೊಯ್ದಿದ್ದರು. ಶ್ಯಾಮೂಗೆ ಮನಸ್ಸು ತಡೆಯಲಿಲ್ಲ. ಅದಕ್ಕೆ ನನ್ನನ್ನು ದೇವಸ್ಥಾನದ ಒಳಗಿನಿಂದ ಹೊರಗೆ ಕರೆತಂದಿದ್ದಳು. ಕೊಳದ ಬಳಿ ನಿಂತು ಯೋಚಿಸುತ್ತಲೇ ಇದ್ದಳು. ನಾನೂ ಮಾತು ಸೇರಿಸುವಂತೆ, `ಹೂವು ಚೆನ್ನಗಿದೆ ಅಲ್ವಾ?’ ಎಂದಾಗ ದಿವ್ಯ ನಗೆ ಬೀರುತ್ತಾ, `ಅಲ್ವಾ’ ಎಂದಿದ್ದಳು. ಗಹನವಾಗಿ ಯೋಚಿಸುತ್ತಾ ನಿಂತ ಅವಳ ತಲೆಯಲ್ಲಿ ಏನು ಓಡುತ್ತಿರಬಹುದು ಎಂದು ಗಮನಿಸುತ್ತ ನಿಂತೆ

ಒಳಗೆ ಪೂಜೆ ಮುಗಿಸಿ ಹುಡುಗಿಗೆ ದೇವರ ತೀರ್ಥ ಹಾಕಿ, ಮೆಟ್ಟಿದ್ದ ಗರವನ್ನು ಬಿಡಿಸಲು ಬಂದ ಪೂಜಾರಪ್ಪನಿಗೆ ಹುಡುಗಿ ಕಾಣಲಿಲ್ಲ `ಎಲ್ಲಮ್ಮಾ ಮಗಳು? ಇಲ್ಲಿ ನಿಲ್ಲಲಿಕ್ಕೂ ಆಗಲ್ಲ ಅಂದ್ರೆ ಅದೆಂಥಾದ್ದು ಬರೀ ಗರ ಅಲ್ಲ ಅನ್ನಿಸುತ್ತೆ ಅವಳಿಗೆ ಗಾಳಿಯೂ ಮೆಟ್ಟುಕೊಂಡಿರಬೇಕು’ ಎಂದಾಗ ಕಮಲತ್ತೆ ಕನಲಿಹೋಗಿದ್ದರು. ಅವನ ಆ ಮಾತಿಗೇ ಶ್ಯಾಮುವನ್ನು ಹುಡುಕುತ್ತಾ ಹೊರಗೆ ಬಂದಿದ್ದರು.

ಅಂದು ಕಮಲತ್ತೆಯ ಕಣ್ಣುಗಳಲ್ಲಿ ಮಗಳಿಗಾಗಿ ಖೇದ ತುಂಬಿತ್ತು. ಎಲ್ಲಿ ಹೋದಳೋ ಎನ್ನುವ ಭಯ ಮನೆಮಾಡಿದ್ದು ಸ್ಪಷ್ಟವಾಗಿ ಕಂಡಿತ್ತು. ಕೊಳದಲ್ಲಿ ಅರಳಿದ್ದ ಕಮಲದ ಮುಂದೆ ನಿಂತು ಏನನ್ನೋ ನಿರುಕಿಸುತ್ತಿದ್ದ ಶ್ಯಾಮುವನ್ನು ನೋಡಿ ಕಮಲತ್ತೆ `ಏನೆ ಇದು ನಾನಲ್ಲಿ ನಿನ್ನ ಹುಡುಕುತ್ತಿದ್ದರೆ ನೀನಿಲ್ಲಿ ಹಾಯಾಗಿ ನಿಂತಿದ್ದೀಯ’ ಎಂದಿದ್ದರು. ತಿರುಗಿ ನೋಡಿದ ಶ್ಯಾಮುವಿನ ಮುಖದಲ್ಲಿ ದಿವ್ಯವಾದ ನಗುವಿತ್ತು. `ಅಮ್ಮಾ ಇದೇ ಕಮಲದ ಮೇಲೆ ಅಲ್ಲವಾ ಎಲ್ಲಾ ದೇವರುಗಳು ಕುಳಿತು ಕೊಳ್ಳುವುದು?’ ಎಂದಳು. ಈ ಹುಡುಗಿಗೆ ಹತ್ತಿದ ಹುಚ್ಚು ಹರಿಯಲ್ಲ ಎನ್ನುತ್ತಾ, `ಏನೇ ಗೋಳು’ ಎಂದರು. ವಿವರಣೆಗೆ ನಿಂತವಳಂತೆ `ಅಮ್ಮಾ ನಮ್ಮ ಮನೆಯ ದೇವರ ಫೋಟೋಗಳಲ್ಲಿರುವ ಎಲ್ಲ ದೇವರುಗಳೂ ಈ ಹೂವ ಮೇಲೆ ತಾನೆ ಕೂತಿರೋದು’ ಎಂದಳು ಪಟ್ಟು ಹಿಡಿದಂತೆ. ಕಮಲತ್ತೆ ಉಸಿರು ತೆಗೆದುಕೊಳ್ಳುತ್ತಾ `ಈಗ ಅದೆಲ್ಲಾ ಯಾಕೆ? ನಡಿ ಮೊದಲು ದೇವರ ಮುಂದೆ ತೀರ್ಥ ಹಾಕಿಸಿಕೊಂಡು ಗ್ರಹಾಚಾರ ಹರಿದುಕೊಳ್ಳೋಣ. ಆಮೇಲೆ ಮುಂದಿನ ಮಾತು’ ಎಂದಿದ್ದರು. ಶ್ಯಾಮು ಪಟ್ಟು ಬಿಡಲಿಲ್ಲ. ಹೇಳ್ತೀಯಾ ಇಲ್ವಾ ಎಂದು ಬಿಗಿ ಸಡಿಲಿಸದ ಅವಳ ನಿಲುವಿಗೆ ಮಣಿದ ಕಮಲತ್ತೆ `ಹೌದು’ ಎಂದಿದ್ದರು. `ಹೌದಾ! ಮತ್ತೆ ದೇವರು ಅಂದ್ರೆ ಅಷ್ಟು ದೊಡ್ಡವನು, ತುಂಬಾ ದೊಡ್ಡವನು ಎಂದೆಲ್ಲಾ ಹೇಳಿದ್ದೆ’ ಎಂದಳು. `ಹೌದು ಹೇಳಿದ್ದೆ ಈಗಲೂ ಹೇಳುವೆ ಅವನು ವಿಶ್ವವನ್ನೇ ಆವರಿಸಿಕೊಂಡವನು’ ಎಂದರು. `ಹಾಗಿದ್ದರೆ ಇಷ್ಟು ಸಣ್ಣ ಹೂವಿನ ಮೇಲೆ ಅವನು ಹೇಗೆ ಕುಳಿತುಕೊಳ್ಳುತ್ತಾನೆ?’ ಎಂದಳು ಶ್ಯಾಮು ಮತ್ತಷ್ಟು ಹಠದಿಂದ. `ಹೇಗೆಂದರೆ ಅವನಿಗೆ ಸಣ್ಣವನಾಗುವುದೂ ಗೊತ್ತು’ ಎಂದರು ಅತ್ತೆ. ಅಷ್ಟರವರೆಗೂ ಅಮ್ಮ ಅಜ್ಜಿ ಅಪ್ಪ ಎಲ್ಲರೂ ಹೇಳಿದ್ದ ತನ್ನ ಕಲ್ಪನೆಯಲ್ಲಿ ಬೃಹತ್ತಾಗಿದ್ದ ದೇವರು ಆ ಕ್ಷಣಕ್ಕೆ ಪುಟ್ಟವನಾಗಿಬಿಟ್ಟಿದ್ದ. ತಲೆ ಆಡಿಸಿದ ಶ್ಯಾಮು ನಗುತ್ತಾ, `ಅಮ್ಮಾ ಸುಳ್ಳು ಹೇಳಬೇಡ, ನಾನೀಗ ದೊಡ್ದವಳಾಗುತ್ತಿದ್ದೇನೆ. ನನ್ನ ನಂಬಿಸಬೇಡ. ದೇವರು ಇಷ್ಟು ಸಣ್ಣ ಹೂವಿನ ಮೇಲೆ ಕೂರುತ್ತಾನೆ ಎಂದರೆ ಅವನು ಇಷ್ಟೇ ಇಷ್ಟಿರುತ್ತಾನೆ. ಇಷ್ಟೇ ಇಷ್ಟು ಇರುವವನಿಗೆ ಹೇಗೆ ಅಷ್ಟು ಶಕ್ತಿ ಇರಲಿಕ್ಕೆ ಸಾಧ್ಯ’ ಎಂದಳು ಕೈ ಬಾಯಿ ತಿರುಗಿಸುತ್ತಾ.

ಕಮಲತ್ತೆ ಅವತ್ತು ಹಣೆ ಚೆಚ್ಚಿಕೊಂಡು ಅತ್ತಿದ್ದರು. `ಹಾಗೆಲ್ಲಾ ಮಾತಾಡಬಾರದು’ ಎಂದ ಅಮ್ಮನ ಮಾತನ್ನೂ ಅವಳು ಕೇಳಲಿಲ್ಲ. ಬಲವಂತವಾಗಿ ಅವಳನ್ನು ದೇವರ ಹತ್ತಿರಕ್ಕೆ ಕರೆದೊಯ್ದು ತೀರ್ಥ ಹಾಕಿಸಿದರು. ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಶ್ಯಾಮುವಿನ ವಿಲಕ್ಷಣ ಜಗತ್ತು ಮತ್ತೂ ವಿಸ್ತಾರವಾಗುತ್ತಲೇ ಹೋಯಿತು. ನಾನೂ ಕಂಗಾಲಾಗುವ ಹಾಗೆ ಹಲವಾರು ಸಲ ನಡೆದುಕೊಂಡಿದ್ದಳು. ಇತ್ತೀಚೆಗೆ ಅದನ್ನೆಲ್ಲಾ ತಮಾಷಿ ಎನ್ನುವ ಹಾಗೆ ಹೇಳಿಕೊಂಡು ಶ್ಯಾಮು ನಗುತ್ತಾಳೆ. ಆ ನಗುವಿನ ಹಿಂದೆ ನಿನ್ನನ್ನು ಹೇಗೆ ಫೂಲ್ ಮಾಡಿಬಿಟ್ಟೆ ನೋಡು ಎನ್ನುವ ಭಾವವಿತ್ತಾ? ಅದನ್ನ ನಾನ್ಯಾಕೆ ಹುಡುಕಲಿ ಎನ್ನಿಸುತ್ತದೆ. ಅಂದಿನಿAದ ಯಾವ ದೇವರಿಗೂ ಅವಳು ಕೈ ಮುಗಿದದ್ದನ್ನು ನೋಡಲಿಲ್ಲ. ಇಂಟರ್ವೂ್ಯ ಒಂದರÀಲ್ಲಿ ಹೇಳಿಕೊಂಡು, ತನ್ನನ್ನು ತಾನು ದೇವರ ಕಲ್ಪನೆ ಆಕಾರದಿಂದ ಹೀಗೆ ಬಿಡಿಸಿಕೊಂಡಿದ್ದನ್ನು ಹೇಳಿದ್ದು ನೆನಪಿದೆ.

ಶ್ಯಾಮು ಮಾತಾಡದೆ ಎಲ್ಲರನ್ನೂ ಮಾತಾಡಲಿಕ್ಕೆ ಒತ್ತಾಯಿಸುತ್ತಿದ್ದ ರೀತಿ ಈಗಲೂ ನನಗೆ ಸೋಜಿಗ ಅನ್ನಿಸುತ್ತದೆ. ಇಂದೂ ಅವಳನ್ನು ನೋಡುತ್ತಿದ್ದರೆ ಪದಗಳು ಮೌನವನ್ನು ಲಾಲಿಸುವ ಹಾಗೆ ಅನ್ನಿಸುತ್ತಿತ್ತು. ಅವಳ ಕಣ್ಣುಗಳಲ್ಲಿ ಮಡುಗಟ್ಟುತ್ತಿದ್ದ ಕುತೂಹಲ, ಯಾವುದೂ ಅಭ್ಯಾಸವಾಗದ ಹಾಗೆ ಕಾಪಾಡಿಕೊಳ್ಳುತ್ತಿದ್ದ ಎಚ್ಚರಕ್ಕೆ ಅವಳೇ ಸಾಟಿ ಎನ್ನಿಸುತ್ತಾಳೆ. `ಹೋಲ್’ ಎಂದರೆ ಪೂರ್ಣ ಅಂತ ಮಾತ್ರ ಯಾಕೆ ಅಂದುಕೊಳ್ಳುತ್ತೀಯ? ಅದು ರಂಧ್ರ ಯಾಕಲ್ಲ? ಎಂದು ಪ್ರಶ್ನಿಸುವಾಗೆಲ್ಲಾ ಅವಳು ಯಾವ ಅವಕಾಶವನ್ನು ಯಾವುದರ ಜೊತೆ ಜೋಡಿಸ ಬಯಸುತ್ತಾಳೆ ಎಂದು ಅರ್ಥವಾಗದೆ ಹೋಗುತ್ತದೆ. `ಹೌದಾ? ನಾನು ಹಾಗೆಂದುಕೊಂಡಿಲ್ಲ ನಮ್ಮ ಅರಿವಿನಾಳದಲ್ಲಿ ದಕ್ಕಿದ್ದನ್ನು ನಾವು ಇನ್ನೊಬ್ಬರಿಗೆ ದಾಟಿಸುತ್ತೇವೆ. ಇದೊಂದು ಮಹತ್ಕಾರ್ಯ ಎನ್ನುವ ಶ್ರದ್ಧೆಯಲ್ಲೇ ಮಾಡುತ್ತೇವೆ. ಅಪೂರ್ವ ಎನ್ನುವಂತೆ ಆಕಾಶ ಭೂಮಿಯ ಮಧ್ಯೆ ಇರುವ ಅಂತರ ಕಳೆದು ನಿರಾಳ ಎನ್ನುವ ಹೊಸ ಜಗತ್ತು ತಾನಾಗೇ ತೆರೆಯುತ್ತದೆ. ರಾತ್ರಿ ಜತನದಿಂದ ಮಾಡಿದ ಮಂಜುಹನಿ ಜಗತ್ತಿಗೆ ಶುಭ್ರತೆಯ ಪಾಠ ಹೇಳುತ್ತಿದೆ. ಬೆಳಗುಗಳಿಗೆ ಬಲಕೊಡುವಂತೆ ತಾನೇ ತಾನಾಗಿ ಅರಳುವ ಹೂಗಳಿಗೆ ಯಾರೂ ಬೇಲಿ ಹಾಕಲಾಗುವುದಿಲ್ಲ- ಜೇನ್ನೊಣಗಳು ಬರುವುದನ್ನು ತಡೆಯಲು’.

ಶ್ಯಾಮುವಿನ ಜಗತ್ತು ಯಾವ ಮಾತಿಗೋ ಅಳುವಿಗೋ ಹಾರಿ ತೂರಿ ಹೋಗುವಷ್ಟು ದುರ್ಬಲ ಅಂತ ಎಂದೂ ಅನ್ನಿಸಿಲ್ಲ. `ವಿನಮ್ರವಾಗುವ ಪ್ರೀತಿಗೆ ಅನುಭೂತಿಯ ನಿಗೂಢತೆಯಲ್ಲಿ ಹೊರಳುವಾಗ ಅರ್ಥವಾಯಿತೇ? ಎಂದು ಕೇಳುವ ಅನಿವಾರ್ಯತೆ ಬಂದರೆ ಅದು ದುರಂತ ತೇಜೂ. ಬದುಕು ಬಿಚ್ಚಿಟ್ಟ ಬುತ್ತಿಯಲ್ಲ. ಭೂಮಿಯ ಬಗೆದು ಬೀಜವೊಂದರ ಮೊಳಕೆ ಮೇಲೇಳುತ್ತದೆ. ಟೊಪ್ಪಿಯಂತೆ ಕಾಣುವ ಅದರಲ್ಲಿ ಅಸಂಖ್ಯ ಎಲೆಗಳ ಗುಚ್ಚವಿದೆ ಎಂದು ಎಂದಾದರೂ ಊಹೆ ಮಾಡುತ್ತೀವಾ? ಇಲ್ಲ. ಮರಳ ಮೇಲೆ ಹರಿವ ಹಾವಿನ ದಾರಿ ಹಿಡಿದು ಹೊರಡು, ಕಾಣದ ಬಿಲಗಳು ತೆರೆಯಬಹುದು. ತೆರೆಯಬಹುದು ಎನ್ನುವುದು ಪ್ರಮೇಯವಲ್ಲ. ಅದೊಂದು ಹುಡುಕಾಟದ ಹಾದಿ. ಇಂತಲ್ಲಿ ಜೀವನ ಸಂತೈಕೆಯಂತೆ ಕಂಡರೆ ಅಚ್ಚರಿಯಿಲ್ಲ. ಘನವಾಗಿಸು, ಗಹನವಾಗಿಸು ಹಲ್ಲ ತುದಿಯಲ್ಲಿ ಕಚ್ಚಿ ಎಳೆದು ಕಬ್ಬಿನ ತುಂಡಿನ ಮೇಲ್ಪದರ ತೆಗೆದರೆ ಒಳಮೈ ಪೂರಾ ಸಿಹಿಯಲ್ಲವೇ? ಇದನ್ನು ಅಮ್ಮನಿಗೆ ಹೇಗೆ ಹೇಳಲು ಸಾಧ್ಯವಿತ್ತು? ಅವಳ ಅವತ್ತಿನ ಚಿಂತೆಗೆ ಈಗ ಅರ್ಥವನ್ನು ಹುಡುಕಲೇ? ಪಾಪ ಎಷ್ಟು ನೊಂದಿದ್ದಿರಬಹುದು ಅವಳು?’ ಶ್ಯಾಮು ನಿಟ್ಟುಸಿರಾದಳು.

`ಅಸ್ತಮಿಸುವ ಸೂರ್ಯನ ಎದುರು ನಿಂತು ನಾವಿಬ್ಬರೂ ಆಡಿದ ಮಾತು ನೆನಪಿದೆಯಾ ನಿನಗೆ?’ ಎಂದು ಶ್ಯಾಮು ಕೇಳುತ್ತಿದ್ದರೆ ನನ್ನೊಳಗೆ ಹರಿದಾಡುತ್ತಿದ್ದ ಆಗಂತುಕವಾದ ಸಂಜೆಗಳು ತುಟಿಯರಳಿಸಿ ಮತ್ತಷ್ಟು ಸುಂದರ ಎನ್ನಿಸುತ್ತಿತ್ತು. `ಕೆರೆಯ ಏರಿಯ ಮೇಲೆ ಬರುವಾಗ ಸಂಜೆ ಸೂರ್ಯ ಅಸ್ತಮಿಸುತ್ತಿದ್ದ. ನಮ್ಮ ಹೆಗಲ ಚೀಲದಲ್ಲಿ ಜಗತ್ತಿನ ಸಮಸ್ತವನ್ನೂ ಅಡಗಿಸಿಟ್ಟುಕೊಂಡಂತೆ ಚಿಕ್ಕ ಕಲ್ಲುಗಳಿಂದ ಮುಳ್ಳು ಕಲ್ಲುನಾರಿನ ಹಣ್ಣಿನವರೆಗೂ ಎಲ್ಲವೂ ಇರುತ್ತಿತ್ತು. ಅದನ್ನು ಕೀಳಲು ಹೋಗಿ ಎಡತಾಕಿದ ಬೆರಳಿನ ರಕ್ತಕ್ಕೆ ಅಚಿತಿಸಿದ್ದ ಚಿಕ್ಕ ಪೇಪರಿನ ಚೂರು ರಕ್ತ ಹೆಪ್ಪುಗಟ್ಟಿದಂತೆಲ್ಲಾ ಬಿಗಿಯಾಗುತ್ತಾ... ಆಗುತ್ತಾ, ಸಣ್ಣದಾಗಿ ನೋವು ಕಾಗದದ ಚೂರನ್ನು ಕಿತ್ತೆಸೆಯಲು ಪ್ರೇರೇಪಣೆ ನೀಡುತ್ತಿತ್ತು. ಭಾರದ ಚೀಲಗಳು ಹಗುರಾಗುವ ಹಾಗೆ ಉತ್ಸಾಹದಿಂದ ನಡೆಯುತ್ತಾ ಬರುವಾಗ ತಾನೇ ನಾವು ಅದನ್ನು ನೋಡಿದ್ದು. ನೀನು ನಂಬುತ್ತೀಯಾ ತೇಜೂ ಅವತ್ತು ನಡೆದದ್ದು ಸತ್ಯವೆಂದು? ಇಲ್ಲ ಅದೊಂದು ಸ್ಥಿತಿಯೆಂದು. ಅದು ಸಿಗುವ ಮೊದಲು ನನ್ನೊಳಗೆ ಒಂದು ಸಮ್ಮೋಹಕ ಲೋಕವಿದೆಯೆಂದು ನಂಬಲಿಕ್ಕೆ ನಾನೇ ಸಿದ್ದಳಿರಲಿಲ್ಲ. ನಂತರ ನನ್ನ ಜೀವನದಲ್ಲಿ ಏನೆಲ್ಲಾ ಆಯಿತು ತೇಜೂ. ನೀನೂ ಕಂಡಿದ್ದೀ. ಅವತ್ತು ಬರೆದ ಹೂವಿನ ಚಿತ್ರಕ್ಕೆ ವಾಸನೆಗಾಗಿ ಹಂಬಲಿಸಿದ ನಾನೂ ಭ್ರಮಿತಳಾಗಿದ್ದೆನಾ? ಮಲಗಿದ್ದಲ್ಲಿಂದಲೇ ನಡುಗುತ್ತಾ ಅಮ್ಮಾ ನೀನು ಯಾಕೆ ಹೀಗೆ ಅಲುಗುತ್ತಿದ್ದೀಯಾ? ನೀನು ಮಾತ್ರ ಅಲ್ಲ ಇಡಿ ಜಗತ್ತೇ ಅಲುಗುತ್ತಿದೆ ಯಾಕೆ ಎಂದು ಪ್ರಶ್ನಿಸಿಬಿಟ್ಟೆನಲ್ಲಾ? ನನ್ನ ಬದುಕನ್ನು ಅದು ಬದಲಿಸಿಬಿಡುತ್ತದೆ ಎನ್ನುವ ಸಣ್ಣ ಸೂಚನೆ ಕೂಡಾ ಇರಲಿಲ್ಲವಲ್ಲಾ?’ ಎನ್ನುತ್ತಾ ಆಕಾಶ ನೋಡುತ್ತಿದ್ದ ಅವಳ ಕಣ್ಣುಗಳು ಅಸೀಮವಾದ ಯಾವುದೋ ತರಂಗಗಳು ಜಗತ್ತಿನ ಎದೆಯಿಂದ ಹೊರಟು ಬದಲು ಹಾದಿಯಲ್ಲಿ ಚಲಿಸುವಂತೆ, ತಾಕಬೇಕಿರುವ ಗುರಿಗಿಂತ ಬೇರೆಯದೇ ಗುರಿಯೆಡೆಗೆ ಚಲಿಸಿದಂತೆ ಅನ್ನಿಸುತ್ತಿತ್ತು.

ಈ ಅಂಕಣದ ಹಿಂದಿನ ಬರೆಹಗಳು:
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...