’ದಿ ಪರ್‌ಸ್ಯೂಟ್ ಆಫ್ ಹ್ಯಾಪಿನೆಸ್: ಕಂಗೆಟ್ಟ ಬದುಕಿನಲ್ಲಿ ಮಗನಿಗೆ ಆಪ್ತಮಿತ್ರನಾಗುವ ಅಪ್ಪ’

Date: 13-11-2020

Location: .


ಗ್ಯಾಬ್ರಿಯಲ್ ಮುಖಿನೋ ನಿರ್ದೇಶನದ ‘ದಿ ಪರ್‌ಸ್ಯೂಟ್ ಆಫ್ ಹ್ಯಾಪಿನೆಸ್’ ಚಲನಚಿತ್ರವು ಬದುಕಿನ ದುರ್ಬರ ಕ್ಷಣದಲ್ಲಿಯ ಆಶಾದಾಯಕ ಪ್ರಜ್ಞೆಯನ್ನು ಅರಳಿಸುತ್ತದೆ. ಈ ಚಿತ್ರವು ಹಾಲಿವುಡ್‌ನ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿ ಖ್ಯಾತಿ ಗಳಿಸಿತ್ತು. ಪ್ರಾಧ್ಯಾಪಕ - ಲೇಖಕ ಡಾ. ಸುಭಾಷ್ ರಾಜಮಾನೆ ಅವರು ತಮ್ಮ ನವಿಲ ನೋಟ ಅಂಕಣದಲ್ಲಿ ‘ದಿ ಪರ್‌ಸ್ಯೂಟ್ ಆಫ್ ಹ್ಯಾಪಿನೆಸ್’, ‘ಲೈಫ್‌ ಇಸ್ ಬ್ಯೂಟಿಫುಲ್‌’ ಹಾಗೂ ‘ಪೋಸ್ಟ್‌ಮೆನ್ ಇನ್ ದಿ ಮೌಂಟೇನ್ಸ್’ ಚಿತ್ರಗಳನ್ನು ಮನುಷ್ಯನ ನಂಬಿಕೆಯೊಂದಿಗೆ ಸಮೀಕರಿಸಿ ಹೀಗೆ ವಿಶ್ಲೇಷಿಸಿದ್ದಾರೆ.

ಯಶಸ್ಸಿನ ದಾರಿ ಅಂದುಕೊಂಡಷ್ಟು ಸರಳವಾಗಿರುವುದಿಲ್ಲ. ಸಾಧಿಸುವ ಮನಸ್ಸಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು; ಮನಸ್ಸಿದ್ದರೆ ಮಾರ್ಗವಿದೆ ಎಂಬ ಉಪದೇಶದ ಮಾತುಗಳನ್ನು ನಾವು ಸಾಕಷ್ಟು ಬಾರಿ ಕೇಳುತ್ತಿರುತ್ತೇವೆ. ಆದರೆ ದೊಡ್ಡದೊಂದು ಗುರಿಯ ಕಡೆ ಇಡುವ ಮೊದಲ ಹೆಜ್ಜೆಗಳು ಸೋಲಿನಿಂದಲೇ ಕೂಡಿರುತ್ತವೆ. ಪ್ರತಿ ಬಾರಿ ಸೋತಾಗಲೆಲ್ಲ ಮತ್ತೆ ಮತ್ತೆ ಎದ್ದು ಹೆಜ್ಜೆ ಇಡುವವರು ಮಾತ್ರವೇ ಯಶಸ್ಸಿನ ಗುರಿಯನ್ನು ತಲುಪುತ್ತಾರೆ. ಇಂತಹ ಹಲವು ಏಳುಬೀಳುಗಳೊಂದಿಗೆ ಸಾಧನೆಯ ಗುರಿಯನ್ನು ತಲುಪಿದವನ ಕತೆಯೊಂದು ಚಲನಚಿತ್ರವಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆಯಿತು. ನೈಜ ಜೀವನದಿಂದ ಪ್ರೇರಿತವಾಗಿ ತಯಾರಾದ ಆ ಚಲನಚಿತ್ರವೇ ’ದಿ ಪರ್‌ಸ್ಯೂಟ್ ಆಫ್ ಹ್ಯಾಪಿನೆಸ್’. ಗ್ಯಾಬ್ರಿಯಲ್ ಮುಖಿನೋ ನಿರ್ದೇಶನಲ್ಲಿ 2006ರಲ್ಲಿ ತೆರೆಕಂಡ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೂಡ ಯಶಸ್ವಿಯಾಗಿ ಸಾಕಷ್ಟು ಖ್ಯಾತಿಯನ್ನು ಪಡೆಯಿತು.
1980ರ ದಶಕದಲ್ಲಿ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿ ಚಿತ್ರಕತೆ ಶುರುವಾಗುತ್ತದೆ. ಕ್ರಿಸ್ ಗಾರ್ಡನರ್ (ವಿಲ್ ಸ್ಮಿಥ್) ಸಂತೋಷವೇ ತನ್ನ ಸಂಪತ್ತು ಎಂದು ಭಾವಿಸಿದಾತ; ಅದನ್ನು ಸಂಪಾದಿಸಲು ದಣಿವಿಲ್ಲದೆ ಅಲೆಯುತ್ತಾನೆ. ತನ್ನ ಸುತ್ತಮುತ್ತಲಿನ ಜನರು ಯಾವುದನ್ನು ’ಅಸಾಧ್ಯ’ ಎಂದು ನಂಬಿರುತ್ತಾರೋ ಅದನ್ನು ಗಾರ್ಡನರ್ ’ಸಾಧ್ಯ’ವಾಗಿಸುವ ಸಲುವಾಗಿಯೇ ಹಗಲಿರುಳು ದುಡಿಯುತ್ತಾನೆ. ಆದರೆ ಗಾರ್ಡನರ್ ಹಲವು ಬಗೆಯ ತೊಂದರೆಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಾನೆ. ತನ್ನ ದಾರಿಗೆ ಅಡ್ಡಿಯಾಗುವ ಎಡರು ತೊಡರುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸುತ್ತಾನೆ. ಉದ್ಯೋಗ ಅರಸುವುದಕ್ಕಾಗಿಯೇ ಹಲವು ವರ್ಷಗಳಿಂದ ಮನೆಯನ್ನು ತೊರೆಯಬೇಕಾಗುತ್ತದೆ. ವಾಸವಾಗಿದ್ದ ಮನೆಗೆ ಬಾಡಿಗೆ ಕಟ್ಟಲಾಗದೆ ಬೀದಿಗೆ ಬೀಳುತ್ತಾನೆ. ಇಂತಹ ಯಾವುದೇ ವಿಷಮ ಸಂದರ್ಭದಲ್ಲಿಯೂ ಗಾರ್ಡನರ್ ಆಶಾಭಾವನೆಯನ್ನು ಕಳೆದುಕೊಳ್ಳುವುದಿಲ್ಲ. ಬದುಕೆಂಬ ಸಾಗರವು ಪ್ರತಿಕ್ಷಣ ಒಡ್ಡುವ ಅಲೆಗಳ ವಿರುದ್ಧವಾಗಿಯೇ ಈಜಿದವನು. ಗಾರ್ಡನರ್‌ನ ಸಂತೋಷದ ಹುಡುಕಾಟದಲ್ಲಿ ಎದುರಾದ ಪ್ರತಿಯೊಬ್ಬರು ಸಹ ‘ನಿನ್ನಂಥವನಿಂದ ಈ ಕೆಲಸ ಸಾಧ್ಯವಿಲ್ಲ’ ಎಂದೇ ಅಣಕಿಸುತ್ತಾರೆ. ಹೆಂಡತಿಯಿಂದಲೂ ಅವಮಾನದ ಮಾತುಗಳನ್ನು ಕೇಳಬೇಕಾಗುತ್ತದೆ. ಗಾರ್ಡನರ್‌ನ ಹುಚ್ಚು ಕನಸುಗಳಿಂದ ರೋಸಿ ಹೋಗುವ ಹೆಂಡತಿ ಆತನಿಂದ ದೂರವಾಗುತ್ತಾಳೆ. ದುಡ್ಡಿನ ಕೊರತೆಯ ದುರ್ಬರ ದಿನಗಳಲ್ಲಿಯೂ ಗಾರ್ಡನರ್ ಮನುಷ್ಯ ಸಂಬಂಧಗಳಲ್ಲಿನ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ. ಐದು ವರ್ಷದ ಮಗ ಕ್ರಿಸ್ಟೋಫರ್‌ನನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಾನೆ.
ಈ ಸಿನಿಮಾ ತನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ಸದಾ ಹಾತೊರೆಯುವ ಒಬ್ಬ ಗೌರವಾನ್ವಿತ ತಂದೆಯ ಕತೆಯಾಗಿದೆ. ಗಾರ್ಡನರ್ ತನ್ನ ವೃತ್ತಿ ಜೀವನವನ್ನು ರೂಪಿಸಿಕೊಳ್ಳುವ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದರೂ ತಂದೆಯಾಗಿ ತನ್ನ ಮಗನ ಅಗತ್ಯಗಳನ್ನು ಪೂರೈಸಲು ಮರೆಯಲಾರ. ಆತನ ಸ್ವಾತಂತ್ರ್ಯಕ್ಕೆ ಯಾವತ್ತು ಅಡ್ಡಿಯಾದವನಲ್ಲ. ಮಗನ ಬಗೆಗಿನ ಆತನ ಕಾಳಜಿ, ಕನಿಕರ, ಪ್ರೀತಿಗಳೆಲ್ಲ ಪ್ರಶ್ನಾತೀತವಾಗಿವೆ. ಗಾರ್ಡನರ್ ತನ್ನ ಸೋಲಿನ ಕಹಿ ದಿನಗಳಲ್ಲಿಯೂ ಮಗನ ಮನಸ್ಸಿನಲ್ಲಿ ಕನಸು ಮತ್ತು ಆಶಾಭಾವನೆಗಳನ್ನೇ ಬಿತ್ತುತ್ತಾನೆ. ವಾರದಲ್ಲಿ ಒಂದು ದಿನ ಮಗನನ್ನು ಬಾಸ್ಕೆಟ್ ಬಾಲ್ ಆಡಲು ಕರೆದೊಯ್ಯುತ್ತಾನೆ. ಆ ಸಂದರ್ಭದಲ್ಲಿ, ಗಾರ್ಡನರ್‌ನ ಮನದಾಳದ ಮಾತುಗಳು ಎಂತಹವರಿಗೂ ಸ್ಪೂರ್ತಿಯನ್ನು ನೀಡುತ್ತವೆ. ನಿನ್ನಿಂದ ಏನನ್ನು ಮಾಡಲಾಗದೆಂದು ಹೇಳುವ ಅವಕಾಶವನ್ನು ಯಾರಿಗೂ ಎಂತಹದೇ ಸಂದರ್ಭದಲ್ಲೂ ಎಂದಿಗೂ ಕೊಡಬಾರದು; ನನಗೂ ಕೊಡಬಾರದು. ಒಂದು ದೊಡ್ಡ ಕನಸನ್ನು ಹೊಂದಿದ್ದರೆ ಅದು ನಿನ್ನನ್ನು ಕಾಪಾಡುತ್ತದೆ. ಯಾವಾಗ ಜನರು ತಾವು ಅಂದುಕೊಂಡದ್ದನ್ನು ಸಾಧಿಸುವುದಿಲ್ಲವೋ ಆಗ ಅವರು ನಿನ್ನಿಂದ ಕೂಡ ಏನೂ ಸಾಧಿಸಲಾಗದೆಂದು ಹೇಳುತ್ತಾರೆ. ನಿನಗೆ ಏನನ್ನಾದರೂ ಮಾಡಬೇಕೆಂದು ಅನ್ನಿಸಿದರೆ ಆ ದಾರಿಯಲ್ಲೇ ಹೋಗು; ನಿನಗೆ ಬೇಕಾದುದನ್ನು ಪಡೆಯಬೇಕು ಎಂದು ಗಾರ್ಡನರ್ ತನ್ನ ಮಗನಿಗೆ ಉಪದೇಶಿಸುತ್ತಾನೆ. ಎಷ್ಟು ಮಕ್ಕಳಿಗೆ ಇಂತಹ ಅಪ್ಪಂದಿರಿದ್ದಾರೆ? ವಾಸ್ತವವಾಗಿ ಒಬ್ಬ ಒಳ್ಳೆಯ ತಂದೆ ಮಾಡಬೇಕಾದ ಕೆಲಸವಿದು. ಬಾಲ್ಯದಿಂದಲೇ ಮಕ್ಕಳಲ್ಲಿ ಧನಾತ್ಮಕ ಮನೋಧರ್ಮವನ್ನು ಬೆಳೆಸಬೇಕು. ಈ ನಿಟ್ಟಿನಿಂದ ನೋಡಿದರೆ ’ದಿ ಪರ್ ಸ್ಯೂಟ್ ಆಫ್ ಹ್ಯಾಪಿನೆಸ್’ ಚಿತ್ರದಿಂದ ಮಕ್ಕಳಿಗಿಂತ ಅಪ್ಪಂದಿರೇ ಒಳ್ಳೆಯ ಪಾಠಗಳನ್ನು ಕಲಿಯಬಹುದು.
ಪೂರ್ಣ ಪ್ರಮಾಣದಲ್ಲಿ ಮಕ್ಕಳ ಚಿತ್ರವಲ್ಲದ, ಆದರೆ ಮಕ್ಕಳ ಹಿತದೃಷ್ಟಿಯಿಂದ ನೋಡಲೇಬೇಕಾದ ಕೆಲವು ಸಿನಿಮಾಗಳು ಇಲ್ಲಿ ನೆನಪಾಗುತ್ತವೆ. 1979ರಲ್ಲಿ ತೆರೆಕಂಡ ರಾಬರ್ಟ ಬೆಂಟೋನ್ ಅವರ ’ಕ್ರಮೆರ್ ವರ್ಸೆಸ್ ಕ್ರಮೆರ್’ನಲ್ಲಿ ವಿಚ್ಛೇದಿತರಾಗುವ ಗಂಡ ಹೆಂಡಿರ ಕತೆಯನ್ನು ಹೊಂದಿದೆ. ಗಂಡ ಹೆಂಡಿರು ವೈವಾಹಿಕ ಸಂಬಂಧದಿಂದ ದೂರವಾದಾಗ ಅದರ ಪರಿಣಾಮವನ್ನು ಚಿತ್ರದುದ್ದಕ್ಕೂ ಅವರ ಪುಟ್ಟ ಮಗುವಿನಲ್ಲಿ ಕಾಣುತ್ತೇವೆ. ಸಿನಿಮಾದ ಆರಂಭಿಕ ದೃಶ್ಯದಲ್ಲೇ ಹೆಂಡತಿ ತನ್ನ ಗಂಡನಿಂದ ಬೇರ್ಪಡುತ್ತಾಳೆ. ಏನು ಮಾಡಿದರೂ ಅಪ್ಪ ತನ್ನ ಮಗನಿಗೆ ತಾಯಿ ನೀಡುವಂತಹ ಬೆಚ್ಚನೆಯ ಪ್ರೀತಿಯನ್ನು ಕೊಡಲಾಗದೆ ಒದ್ದಾಡುತ್ತಾನೆ. ಅಪ್ಪನ ಆಶ್ರಯದಲ್ಲಿದ್ದರು ಕೂಡ ಮಗು ಅನಾಥ ಭಾವನೆಯಿಂದ ನರಳುತ್ತದೆ. ಸದಾ ತನ್ನ ಕೆಲಸ ಕಾರ್ಯಗಳಲ್ಲೇ ಮುಳುಗಿರುವ ಅಪ್ಪನಿಗೆ ತನ್ನ ಮಗನಿಗೆ ನೀಡಲು ಸಮಯವೇ ಇರುವುದಿಲ್ಲ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತೆಂಬಂತೆ ಈ ಚಲನಚಿತ್ರವು ಮಗುವಿನ ಒಂಟಿತನ, ಮಾನಸಿಕ ಖಿನ್ನತೆ ಹಾಗೂ ಅನಾಥ ಪ್ರಜ್ಞೆಯನ್ನು ಸಮರ್ಥವಾಗಿ ನಿರೂಪಿಸಿದೆ. ಐದು ವಿಭಾಗಗಳಲ್ಲಿ ಆಸ್ಕರ್ ಪುರಸ್ಕಾರಗಳನ್ನು ಪಡೆದು ಜನಪ್ರಿಯವಾಗಿರುವ ಈ ಚಲನಚಿತ್ರವು ಪುಟ್ಟ ಹುಡುಗನ ಕಣ್ಣೋಟದಲ್ಲಿ ದೊಡ್ಡವರ ಸಣ್ಣತನಗಳನ್ನು ತೋರಿಸಿದ್ದರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಇಟಲಿಯ ರಾಬರ್ಟೋ ಬೆನಿಗ್ನಿ ನಾಯಕ ನಟನಾಗಿ ಅಭಿನಯಿಸಿ ನಿರ್ದೇಶಿಸಿದ ’ಲೈಫ್ ಈಸ್ ಬ್ಯೂಟಿಫುಲ್’ (1997) ಎನ್ನುವ ಸಿನಿಮಾಗೆ ಹಾಸ್ಯದ ಲೇಪನವಿದ್ದರೂ ಬದುಕಿನ ಗಂಭೀರತೆಯ ತಿರುಳನ್ನು ಹೊಂದಿದೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ನಡೆಯುವ ಚಿತ್ರಕತೆಯಲ್ಲಿ ಇದರ ಕಥಾನಾಯಕ ಗಿಡೋ, ಆತನ ಹೆಂಡತಿ ಡೋರಾ ಮತ್ತು ಪುಟ್ಟ ಮಗ ಜೋಶು ಕಾನ್ಸಂಟ್ರೇಶನ್ ಕ್ಯಾಂಪ್‌ಗೆ ದೂಡಲ್ಪಟ್ಟು ಬೇರೆ ಬೇರೆಯಾಗುತ್ತಾರೆ. ಪುಟ್ಟ ಮಗ ಜೋಶು ಅಲ್ಲಿಯ ಉಸಿರುಗಟ್ಟಿಸುವ ಜಾಗ ಮತ್ತು ಪರಿಸರದ ಬಗ್ಗೆ ಕುತೂಹಲದಿಂದ ತನ್ನ ತಂದೆಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾನೆ. ಅಪಾಯಕಾರಿ ಕೆಲಸಗಳನ್ನು ಮಾಡುತ್ತ ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ ಒದ್ದಾಡುವ ಗಿಡೋ ತನ್ನ ಮಗನ ಪ್ರಶ್ನೆಗಳಿಗೆ ನೀಡುವ ಮಾರ್ಮಿಕ ಉತ್ತರಗಳೇ ಆತನ ಧನಾತ್ಮಕ ಮನೋಧರ್ಮಕ್ಕೆ ಕನ್ನಡಿ ಹಿಡಿಯುತ್ತವೆ. ಎಂತಹ ಪ್ರಾಣಾಪಾಯದ ಗಳಿಗೆಯಲ್ಲೂ ಗಿಡೋ ತನ್ನ ಮಗನಿಗೆ ಅಲ್ಲಿಯ ವಾಸ್ತವ ಸ್ಥಿತಿಯನ್ನು ತಿಳಿಯಗೊಡುವುದಿಲ್ಲ. ಗಿಡೋನ ಹಾಸ್ಯ ಪ್ರಜ್ಞೆ ಮತ್ತು ತನ್ನ ಮಗನ ಬಗೆಗಿನ ಅದಮ್ಯವಾದ ಪ್ರೀತಿಯೇ ಈ ಸಿನಿಮಾದ ಆತ್ಮವಾಗಿದೆ.
ಹ್ಯೂ ಜಿಯಾಂಖಿ ನಿರ್ದೇಶನದ ‘ಪೋಸ್ಟ್‌ಮೆನ್ ಇನ್ ದಿ ಮೌಂಟೇನ್ಸ್’ (1998) ಎನ್ನುವ ಚೀನಿ ಚಲನಚಿತ್ರವು ತಂದೆ ಮತ್ತು ಮಗನ ಸಂಬಂಧವನ್ನು ತುಂಬ ಭಾವನಾತ್ಮಕವಾಗಿ ನಿರೂಪಿಸಿದೆ. ಬೆಟ್ಟ ಪರ್ವತ ಪ್ರದೇಶಗಳಲ್ಲಿ ನಡೆದುಕೊಂಡು ಹೋಗಿ ಪತ್ರಗಳನ್ನು ಹಂಚುವ ಪೋಸ್ಟ್‌ಮನ್ ಕೆಲಸದಿಂದ ನಿವೃತ್ತನಾಗಲಿರುವ ತಂದೆ ತನ್ನ ಕೆಲಸದ ಹೊಣೆಗಾರಿಕೆಯನ್ನು ತನ್ನ ಹರೆಯದ ಮಗನಿಗೆ ವರ್ಗಾಯಿಸುವ ಪ್ರಧಾನ ಆಶಯವಿರುವ ಈ ಚಲನಚಿತ್ರವು ನೋಡುಗರ ಸುಪ್ತ ಭಾವನೆಗಳನ್ನು ನವಿರಾಗಿ ಕೆದಕುತ್ತದೆ. ಅಪ್ಪನಿಗೆ ಕೆಲಸದ ಕೊನೆಯ ದಿನ ಮತ್ತು ಮಗನಿಗೆ ವೃತ್ತಿ ಜೀವನದ ಮೊದಲ ದಿನದ ಈ ಪಯಣದಲ್ಲಿ ಹೊಸ ಅನುಭವ ಜಗತ್ತೊಂದು ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೆ ಅಪ್ಪನೆಂದರೆ ಒಂದು ಬಗೆಯ ನಿರ್ಲಕ್ಷ್ಯ ಮತ್ತು ಅಸಹನೆಯಿಂದ ಕುದಿಯುತ್ತಿದ್ದ ಮಗನಿಗೆ ಈ ಪೋಸ್ಟ್‌ಮನ್ ಕೆಲಸದ ಪ್ರಯಾಣವು ಅಪ್ಪನನ್ನು ಹೊಸ ರೀತಿಯಲ್ಲಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ. ಅಪ್ಪ ತನ್ನ ಮಗನಿಗೆ ಮನೆಯಿಂದ ವಿಸ್ತಾರವಾದ ಲೋಕಕ್ಕೆ ನಂಟನ್ನು ಬೆಸೆಯುವಂತೆ ಮಾಡುವ ಕೊಂಡಿಯಾಗುತ್ತಾನೆ. ಅತ್ಯಂತ ಸರಳವಾದ ಈ ಸಿನಿಮಾ ತನ್ನ ಸರಳತೆಯಿಂದಲೇ ಪ್ರೇಕ್ಷಕರ ಮನಸ್ಸನ್ನು ಇನ್ನಿಲ್ಲದಂತೆ ಆವರಿಸಿಕೊಳ್ಳುತ್ತದೆ.
ಇಟಲಿಯ ಗ್ಯಾಬ್ರಿಯಲ್ ಮುಖಿನೋ ಹಾಲಿವುಡ್‌ಗೆ ಬಂದು ಆಫ್ರಿಕನ್ ಮೂಲದ ಅಮೆರಿಕನ್ ನಟನಾದ ವಿಲ್ ಸ್ಮಿಥ್‌ನನ್ನು ಹಾಕಿಕೊಂಡು ’ದಿ ಪರ್ ಸ್ಯೂಟ್ ಆಫ್ ಹ್ಯಾಪಿನೆಸ್’ ಚಿತ್ರವನ್ನು ಮಾಡುತ್ತಾನೆ. ವಿಲ್ ಸ್ಮಿಥ್‌ನ ಭಾವಪೂರ್ಣವಾದ ಅಭಿನಯವೇ ಚಿತ್ರದ ಹೆಗ್ಗುರುತಾಗಿದೆ. ಜಗತ್ತಿನಲ್ಲೇ ಹಾಲಿವುಡ್ ಬೃಹತ್ ಸಿನಿಮಾ ಮಾರುಕಟ್ಟೆಯನ್ನು ಹೊಂದಿದೆ. ಆದ್ದರಿಂದ ಬೇರೆ ಬೇರೆ ದೇಶಗಳಿಂದ ಪ್ರತಿಭಾವಂತ ನಿರ್ದೇಶಕರು ಹಾಲಿವುಡ್‌ಗೆ ವಲಸೆ ಬಂದು ಸಿನಿಮಾಗಳನ್ನು ಮಾಡಿದ್ದಾರೆ. ಹೀಗೆ ನಿರ್ಮಾಣವಾಗುವ ಚಿತ್ರಗಳಲ್ಲಿ ನಿರ್ದೇಶಕರ ದೇಶದ ಪ್ರಾದೇಶಿಕವಾದ ಮತ್ತು ಸಾಂಸ್ಕೃತಿಕ ಅನನ್ಯತೆ ಸಂಪೂರ್ಣವಾಗಿ ಮಾಯವಾಗಿರುತ್ತದೆ. ಈ ಹಿನ್ನೆಲೆಯಿಂದ ಗಮನಿಸಿದರೆ ’ದಿ ಪರ್‌ಸ್ಯೂಟ್ ಆಫ್ ಹ್ಯಾಪಿನೆಸ್’ ಪೂರ್ಣ ಪ್ರಮಾಣದ ಹಾಲಿವುಡ್ ಚಿತ್ರವಾಗಿದೆ. ಇದರಲ್ಲಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರೆಲ್ಲ ಸಂತೋಷದಿಂದ ಇರುವವರೆಂದು ತೋರಿಸಲಾಗಿದೆ. ಒಬ್ಬ ಇನ್ನೊಬ್ಬನಿಗಿಂತ ಮೇಲೆ ಹೋಗಬೇಕೆಂಬ ಪೈಪೋಟಿಯ ಜಗತ್ತಿನಲ್ಲಿ ಸಂತೋಷಕ್ಕೆ ಜಾಗವೆಲ್ಲಿದೆ? ಗಾರ್ಡನರ್ ಕಂಪನಿಯೊಂದರಲ್ಲಿ ತರಬೇತಿ ಪಡೆಯಲು ಹೋದಾಗ ಅಲ್ಲಿಯ ಕೆಲಸಗಾರರು ಫೋನ್‌ಗಳಲ್ಲಿ ಆವೇಶದಿಂದ ಕಿರುಚುವುದನ್ನು ನೋಡಿದರೆ ಸಂತೋಷದ ಬಗ್ಗೆ ಹಲವು ಪ್ರಶ್ನೆಗಳು ಕಾಡುತ್ತವೆ. ಯಾವ ಸಮಾಜದಲ್ಲಿ ದುಡ್ಡು ಸಂಪಾದನೆಯೇ ಮೊದಲ ಆದ್ಯತೆಯಾಗಿರುತ್ತದೆಯೋ ಅಲ್ಲಿ ಸಂತೋಷ, ಪ್ರೀತಿ, ಮಮತೆ, ಅನುಕಂಪದಂತಹ ಮಾನವೀಯ ಮೌಲ್ಯಗಳು ಎಷ್ಟರಮಟ್ಟಿಗೆ ಜೀವಂತವಾಗಿರುತ್ತವೆ? ಹಾಗಂತ ದುಡ್ಡನ್ನು ಸಂಪೂರ್ಣವಾಗಿ ನಿರಾಕರಿಸಲಾಗದು. ಜೀವನದ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ದುಡ್ಡು ಬೇಕಾಗುತ್ತದೆ; ಆದರೆ ಒಬ್ಬನೇ ವ್ಯಕ್ತಿಯಲ್ಲಿ ಅಗತ್ಯಗಿಂತ ಹೆಚ್ಚಿನ ದುಡ್ಡು ಸಂಗ್ರಹವಾಗುತ್ತಿದ್ದಂತೆಯೇ ಆ ಸಮಾಜದಲ್ಲಿ ಅಸಮಾನತೆಯ ಕಂದಕವೇ ನಿರ್ಮಾಣವಾಗುತ್ತದೆ. ಅಮೆರಿಕದಂತಹ ಶ್ರೀಮಂತ ರಾಷ್ಟ್ರದಲ್ಲಿಯು ಸಾಕಷ್ಟು ನಿರುದ್ಯೋಗಿಗಳಿದ್ದಾರೆ. ಸ್ವಂತ ಮನೆಯಿಲ್ಲದೆ ಬೀದಿಪಾಲಾಗಿರುವ ಬಡವರಿದ್ದಾರೆ. ಇವುಗಳನ್ನು ಸಿನಿಮಾ ಮರೆಮಾಚಿಲ್ಲ ಎಂಬ ಕಾರಣಕ್ಕೂ ಈ ಚಿತ್ರ ಮಹತ್ವದ್ದಾಗಿದೆ.
ಮೂಲತಃ ಈ ಚಿತ್ರವು ನೈಜ ವ್ಯಕ್ತಿಯ ಜೀವನದಿಂದ ಪ್ರೇರಿತವಾಗಿರುವುದರಿಂದ ಪ್ರೇಕ್ಷಕರಲ್ಲಿ ಹೊಸ ಹುಮ್ಮಸ್ಸು ಮತ್ತು ಸ್ಪೂರ್ತಿಯನ್ನು ತುಂಬುತ್ತದೆ. ತಮ್ಮ ಬದುಕಿನಲ್ಲಿ ಸೋಲುಗಳ ಸರಮಾಲೆಯನ್ನೇ ಕಂಡವರಿಗೆ ಈ ಸಿನಿಮಾ ಖಂಡಿತವಾಗಿಯು ಹೊಸ ಚೈತನ್ಯವನ್ನು ನೀಡುತ್ತದೆ. ನಿರಾಶೆಯ ಮನಸ್ಸುಗಳಿಗೆ ಆಶಾಭಾವನೆಯನ್ನು ನೀಡುತ್ತದೆ. ಕ್ರಿಸ್ ಗಾರ್ಡನರ್‌ನ ಅವಿರತ ಹೋರಾಟವು ಎಂಥವರಿಗೂ ಮಾದರಿಯಾಗಬಲ್ಲದು. ಇಡೀ ಸಿನಿಮಾದಲ್ಲಿ ಗಾರ್ಡನರ್‌ನ ಸೋಲುಗಳೇ ಮತ್ತೆ ಮತ್ತೆ ಕಣ್ಣಿಗೆ ರಾಚುತ್ತವೆ. ಅಂದುಕೊಂಡಿದ್ದನ್ನು ಸಾಧಿಸಲಾಗದಿದ್ದಾಗಲೆಲ್ಲ ಆತನ ಆಕ್ರೋಶ, ಸಿಟ್ಟು, ಅಸಹನೆಗಳನ್ನೇ ತೋರಿಸಲಾಗಿದೆ. ದೊಡ್ಡ ಕಂಪನಿಯೊಂದರಲ್ಲಿ ಆರು ತಿಂಗಳ ಕಠಿಣ ತರಬೇತಿಯ ನಂತರದಲ್ಲಿ ಗಾರ್ಡನರ್‌ನ ಕೆಲಸ ಅಲ್ಲಿ ಖಾಯಂ ಆಯಿತೆಂದು ಹೇಳುವುದರೊಂದಿಗೆ ಸಿನಿಮಾ ಮುಗಿಯುತ್ತದೆ. ಅಂತಹದೊಂದು ಸಂತಸದ ಕ್ಷಣಕ್ಕಾಗಿ ಕಾಯುತ್ತಿದ್ದ ಗಾರ್ಡನರ್‌ನ ಕಣ್ಣುಗಳು ಒದ್ದೆಯಾಗುತ್ತವೆ. ಬದುಕಿನಲ್ಲಿ ಸಂತೋಷ ಎನ್ನುವುದು ತನ್ನಷ್ಟಕ್ಕೆ ತಾನೇ ಬರುವಂತಹದ್ದಲ್ಲ; ಅದನ್ನು ಹಠ, ಛಲ, ಧೈರ್ಯ, ಆತ್ಮವಿಶ್ವಾಸ, ಹಾಗೂ ಅವಿರತ ಪರಿಶ್ರಮದಿಂದ ಸಂಪಾದಿಸುವಂತಹದ್ದು ಎನ್ನುವ ಸಂದೇಶವೊಂದು ಚಿತ್ರದುದ್ದಕ್ಕೂ ಕಾಣುತ್ತೇವೆ. ಕಡೆಯಲ್ಲಿ ಅಂತಹದೊಂದು ಅಪೂರ್ವವಾದ ಧನ್ಯತಾ ಭಾವನೆಯು ಗಾರ್ಡನರ್‌ನ ಮುಖದಲ್ಲಿ ಅರಳಿದ್ದನ್ನು ನೋಡುತ್ತೇವೆ.

 

 

ಈ ಅಂಕಣದ ಹಿಂದಿನ ಬರೆಹಗಳು

ಮರಾಠಿ ಸಿನಿಮಾ ‘ನಟ ಸಮ್ರಾಟ್: ಮನುಷ್ಯ ಸಂಬಂಧದ ಬಿಕ್ಕಟ್ಟುಗಳ ಕತೆ’

ಜೆನ್ ದಾರ್ಶನಿಕತೆಯ ಸಿನಿಮಾ: ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’

ಡ್ರೀಮ್ಸ್: ಅಕಿರ ಕುರೋಸಾವನ ಭಗ್ನ ಹಾಗೂ ಸುಂದರ ಕನಸುಗಳ ಜಗತ್ತು

ಮಸಾನ್: ’ಸ್ಥಾಪಿತ ಮೌಲ್ಯಗಳ ದಾಟುವಿಕೆ’

ಟೇಸ್ಟ್ ಆಫ್ ಚೆರಿ: ‘ಮನುಷ್ಯನ ಒಂಟಿತನ ಮತ್ತು ದ್ವಂದ್ವಗಳ ತಾಕಲಾಟ’

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...