ತಿರುಗುತ್ತಲೇ ಒಳ-ಹೊರಗಣ್ಣಿನಿಂದ ಗ್ರಹಿಸುವ ಧ್ಯಾನವೇ ಅಲೆಮಾರಿ : ನಾಗತಿಹಳ್ಳಿ ಚಂದ್ರಶೇಖರ


"ನಾನು ಬೆರಗಿನಿಂದ ಕಂಡ ಮನುಷ್ಯರು, ನೀರು, ಭೂಮಿ ಮತ್ತು ಆಕಾಶಗಳೆಂಬ ಸಂಪತ್ತನ್ನು ಇಲ್ಲಿ ಇರಿಸಿದ್ದೇನೆ. ಓದುಗರ ಅನುಭವ ಕೋಶವು ಶ್ರೀಮಂತವಾಗಲೆಂದು ಆಶಿಸಿ ಈ ಸಂಪತ್ತನ್ನು ಸಂಕೋಚ ಮತ್ತು ವಿನಯದಿಂದ ಹಂಚಿಕೊಂಡಿದ್ದೇನೆ ಎನ್ನುತ್ತಾರೆ ಲೇಖಕ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್". ಅವರ ಜಗಲಿಯಿಂದ ಜಗತ್ತು ಕೃತಿಗೆ ಬರೆದ ಮುಖಾಮುಖಿ ಮಾತುಗಳು ನಿಮ್ಮ ಓದಿಗಾಗಿ.....

ಕಳೆದ ನಾಲ್ಕು ದಶಕಗಳ ಅಲೆಮಾರಿ ಬರವಣಿಗೆಯನ್ನು ಕ್ರೋಢೀಕರಿಸುವಾಗ ಬಾಲ್ಯದ ಘಟನೆ ನೆನಪಾಗುತ್ತಿದೆ. ಶಿಕ್ಷಕರು 'ಮುಂದೆ ಡಾಕ್ಟರಾಗ್ತಿನಿ, ಎಂಜಿನಿಯರ್ ಆಗ್ತಿನಿ' ಎಂಬ ಸಿದ್ಧ ಉತ್ತರ ಉರು ಹಚ್ಚಿಸಿದ್ದರೂ ಶಾಲಾ ಇನ್ಸ್‌ ಪೆಕ್ಟರ್‌ಗೆ ನಾನು ಅವಿಧೇಯನಾಗಿ 'ಲಾರಿ ಡ್ರೈವರ್ ಆಗ್ತಿನಿ' ಎಂದು ಎದೆ ಸೆಟೆ ಹೇಳಿ ಗೂಸಾ ತಿಂದಿದ್ದು, ಆ ಅವಿಧೇಯತೆಯಲ್ಲಿ ಹಲವು ಸತ್ಯಗಳಿದ್ದುವೆಂದು ಈಗ ಅರಿವಾಗುತ್ತಿದೆ. ಊರ ಬದಿ ಹಾದು ಹೋಗುವ ಹೆದ್ದಾರಿ, ಅಲ್ಲಿ ಸಂಚರಿಸುವ ಆಲ್ ಇಂಡಿಯಾ ಪರ್ಮಿಟ್ ಲಾರಿಗಳು, ಅಲ್ಲಿ ಡ್ರೈವರನಾದರೆ ಉಚಿತವಾಗಿ ಇಡೀ ದೇಶ ನೋಡಬಹುದೆಂಬ ನನ್ನ ಮುಗ್ಧ ಲೆಕ್ಕಾಚಾರ ಹಾಗೆ ಮಾತನಾಡಿಸಿತ್ತು.

ಅಲೆಮಾರಿತನವು ಬಹುಮುಖ್ಯವಾದ ಒಂದು ಜೀವನ ಮೌಲ್ಯ ಸ್ಥಾವರದ ಅಳಿವು ಮೀರಲು ಯತ್ನಿಸುವ ಒಂದು ಜಂಗಮ ಸ್ಥಿತಿ. ತಿರುಗಾಟ ಬರಿಯ ವ್ಯಸನವಲ್ಲ. ತಿರುಗುತ್ತಲೇ ಒಳ-ಹೊರಗಣ್ಣಿನಿಂದ ಸೂಕ್ಷ್ಮವಾಗಿ ಗ್ರಹಿಸುವ ಧ್ಯಾನ ಸ್ಥಿತಿ. ಲೋಕಾನುಭವವು ಮನುಷ್ಯರ ಅನುಭವದ ದಿಗಂತಗಳನ್ನು ವಿಸ್ತರಿಸುತ್ತದೆ. ಅಕ್ಷಾಂಶ-ರೇಖಾಂಶಗಳ ಮೇಲೆ ಜಾರುಗುಪ್ಪೆ ಆಡಿಸುತ್ತದೆ. ಬಹು ಎತ್ತರದಿಂದ, ಎತ್ತರವಾಗಿ ಯೋಚಿಸಲು ಕಲಿಸುತ್ತದೆ. ಸುಳ್ಳು ಗಡಿಗಳನ್ನು ದಾಟಿ, ಕೃತಕ ಬೇಲಿಗಳನ್ನು ಕಿತ್ತೊಗೆದು ಒಂದೇ ಭೂಮಿ, ಒಬ್ಬನೇ ಮನುಷ್ಯ ಎಂಬ ದಾರ್ಶನಿಕತೆಯನ್ನು ಬೋಧಿಸುತ್ತದೆ. ಸೂಕ್ಷ್ಮ ಒಳನೋಟ ಉಳ್ಳ ಪ್ರವಾಸಿಯ ಅನುಭವ ಲೋಕ ಅತ್ಯಂತ ಶ್ರೀಮಂತವಾದುದು. ಇದು ಒಂದೇ ಕಡೆ ನೆಲೆ ನಿಂತು ಗಳಿಸುವ ಸಾಮ್ರಾಜ್ಯ ಸಿರಿಗಿಂತ ಘನವಾದ ಸಂಪತ್ತು.

ನಾನು ಬೆರಗಿನಿಂದ ಕಂಡ ಮನುಷ್ಯರು, ನೀರು, ಭೂಮಿ ಮತ್ತು ಆಕಾಶಗಳೆಂಬ ಸಂಪತ್ತನ್ನು ಇಲ್ಲಿ ಇರಿಸಿದ್ದೇನೆ. ಓದುಗರ ಅನುಭವ ಕೋಶವು ಶ್ರೀಮಂತವಾಗಲೆಂದು ಆಶಿಸಿ ಈ ಸಂಪತ್ತನ್ನು ಸಂಕೋಚ ಮತ್ತು ವಿನಯದಿಂದ ಹಂಚಿಕೊಂಡಿದ್ದೇನೆ.

ಈ ನಾಲ್ಕು ದಶಕಗಳಲ್ಲಿ ಆಗಬೇಕಾದ್ದು, ಆಗಬಾರದ್ದು ಅನಿಯಂತ್ರಿತವಾಗಿ ನಡೆದಿವೆ ಅತ್ತ ಥೇಮ್ಸ್, ಕೊಲರೆಡೋ ಮತ್ತು ನೈಲ್ ನದಿಗಳಲ್ಲೂ ಇತ್ತ ಬ್ರಹ್ಮಪುತ್ರ, ಗಂಗೆ ಮತ್ತು ಕಾವೇರಿಯರಲ್ಲೂ ಬಹಳ ನೀರು ಹರಿದಿದೆ. ಹೊಸ ನಾಣ್ಯಗಳು ಬಂದಿವೆ, ಹೊಸ ಅಧ್ಯಕ್ಷರು, ಪ್ರಧಾನಿಗಳು ಮೊಬೈಲ್, ಫೇಸ್‌ಬುಕ್, ಇನ್‌ಸ್ಟಗ್ರಾಂ, ಟ್ವಿಟರ್, ಯೂಟ್ಯೂಬ್ ಇತ್ಯಾದಿಗಳು ದಾಳಿ ಇಟ್ಟಿವೆ. ಜತೆಯಲ್ಲಿ ಸಾಂಕ್ರಾಮಿಕ, ಯುದ್ಧ, ರಕ್ತಪಾತಗಳೂ ಸಹ. ಪ್ರಜ್ಞಾಪೂರ್ವಕವಾಗಿಯೇ ಹಳೆಯ ಅಂಕಿ ಅಂಶಗಳನ್ನು ಇಲ್ಲಿ ಹಾಗೆಯೇ ಕಾದಿರಿಸಿದ್ದೇನೆ. ಈ ಚಾರಿತ್ರಿಕ ಮಾಹಿತಿಗಳು ಸ್ಥಿರವಾಗಿದ್ದೂ ಚಲಿಸುವ ಸತ್ಯಗಳನ್ನು ಹೇಳುತ್ತವೆ. ತರತಮದ ಗ್ರಹಿಕೆಗೆ ನೆರವಾಗುತ್ತವೆ. ನನ್ನ ಮೊದಲ ವಿಶ್ವ ಪ್ರದಕ್ಷಿಣೆಗೆ ತೆತ್ತ ವಿಮಾನ ವೆಚ್ಚವು ಈಗ ಬೆಂಗಳೂರು - ದೆಹಲಿ ಯಾನಕ್ಕೆ ಸಾಕಾಗುವುದಿಲ್ಲ, ಪ್ರವಾಸೀ ಬರವಣಿಗೆ ಅಂಕಿ-ಅಂಶಗಳಿಂದ ತುಂಬಿ ಹೋಗಬಾರದು. ಹಾಗೆಯೇ ಅವುಗಳನ್ನು ನಿರ್ಲಕ್ಷಿಸಲೂ ಆಗದು. ಏಕೆಂದರೆ ಅವು ಒಂದು ಕಾಲಘಟ್ಟದ ವಾಸ್ತವಗಳನ್ನು ಸೂಚಿಸುವುದರ ಮೂಲಕ ನಮ್ಮ ನೆನಪುಗಳಿಗೊಂದು ಬಣ್ಣ ಬಳಿಯುತ್ತವೆ.

ಇಲ್ಲಿನ ಪ್ರತಿ ಹೆಜ್ಜೆಗೂ ಪೂರಕವಾದ ಸಾವಿರಾರು ಚಿತ್ರಗಳು ನನ್ನ ಖಾಸಗಿ ಸಂಗ್ರಹದಲ್ಲಿವೆ. ಆದರೂ ಈ ಕೃತಿಯನ್ನು ಬೇಕೆಂದೇ ನಿರಾಭರಣೆಯಾಗಿಸಿದ್ದೇನೆ. ಕಾರಣ ಓದುಗರು ಚಿತ್ರಕ ಶಕ್ತಿಯಿಂದ ತಮ್ಮ ಮನೋಭಿತ್ತಿಯಲ್ಲಿ ಮೂಡಿಸಿಕೊಳ್ಳಬಹುದಾದ ಸ್ವೋಪಜ್ಞ ಚಿತ್ರಗಳು ಬಹಳ ಮುಖ್ಯ. ಅಕ್ಷರ ಮಾಧ್ಯಮದ ಮೇಲೆ ದೃಶ್ಯಮಾಧ್ಯಮದ ಹೇರಿಕೆ ಈಗ ಬಹಳ ಹೆಚ್ಚಾಗಿದೆ. ಅಕ್ಷರಗಳನ್ನು ಚಿತ್ರಗಳು ವಿವರಿಸಬೇಕಿಲ್ಲ. ಚಿತ್ರಗಳನ್ನು ವಿವರಿಸುವುದು ಅಕ್ಷರದ ಕೆಲಸವಲ್ಲ. ಅಕ್ಷರಗಳ ನಡುವೆ ಇರಬಹುದಾದ ಚಿತ್ರಗಳನ್ನು ತಾನೇ ಕಟ್ಟಿಕೊಳ್ಳುವುದು ಓದಿನ ಕೆಲಸ, ಕಥೆ ಕಾದಂಬರಿಗಳಂತೆಯೇ ಈ ಸ್ವಾತಂತ್ರ್ಯವನ್ನು, ಈ ಸವಾಲನ್ನು ಓದುಗರಿಗೇ ಬಿಟ್ಟಿದ್ದೇನೆ. ನನ್ನ ಅಲೆಮಾರಿತನದ ಪ್ರಾತಿನಿಧಿಕವಾದ ಹೆಜ್ಜೆ ಗುರುತುಗಳು ಮಾತ್ರ ಇಲ್ಲಿವೆ. ಅವು ಪೂರ್ವದಿಂದ ಪಶ್ಚಿಮದವರೆಗೆ, ದಕ್ಷಿಣದಿಂದ ಉತ್ತರದವರೆಗೆ, ಈಶಾನ್ಯದಿಂದ ನೈರುತ್ಯದವರೆಗೆ, ಆಗ್ನೇಯದಿಂದ ವಾಯುವ್ಯದವರೆಗೆ ಮತ್ತು ಭೂಮಿಯಿಂದ ಆಕಾಶದವರೆಗೆ ಊರಿವೆ. ನೋಡಿದ ಎಲ್ಲ ದೇಶಗಳ ಬಗ್ಗೆ ಬರೆಯಲಾಗದು. ಬರೆಸಿಕೊಳ್ಳುವ ಶಕ್ತಿ ಆಯಾ ದೇಶಕ್ಕೇ ಇರುತ್ತದೆ. ಇಲ್ಲಿ ಅಮೆರಿಕಾದಂಥ ದೊಡ್ಡ ದೇಶವೂ ಸಿಕ್ಕಿಂನಂಥ ಪುಟ್ಟ ರಾಜ್ಯವೂ ಇದೆ.

ಈ ವಸುಂಧರೆ ಎಲ್ಲರನ್ನೂ ಸಾಕುವಷ್ಟು ಸಮೃದ್ಧವಾಗಿದ್ದಾಳೆ. ಎಲ್ಲರೂ ಇಲ್ಲಿ ನೆಮ್ಮದಿಯಿಂದ ಬಾಳಬಹುದು. ಆದರೆ ನಾವಿಲ್ಲಿ ಎಲ್ಲವನ್ನೂ ಹಾಳುಗೆಡವುತ್ತ ಕುಳಿತಿದ್ದೇವೆ. ಪಲಾಯನವಾದಿ ಪಶ್ಚಿಮದ ಮೋಹದಂತೆಯೇ ಬರಿಯ ಭಾವಾವೇಶದ ಹುಸಿ ದೇಶಪ್ರೇಮವೂ ನಿರರ್ಥಕ. ಈಗ ಲೋಕಕ್ಕೆ ಬೇಕಾದ್ದು ಸಮನ್ವಯ. ಪೂರ್ವದ ಧ್ಯಾನಿ ಬೇರುಗಳು ಪಶ್ಚಿಮದ ಹೊಸ ಹೂ, ಹಣ್ಣುಗಳನ್ನು ನೀಡುವಂತಾಗಲಿ.

- ಅಲೆಮಾರಿ

ನಾಗತಿಹಳ್ಳಿ ಚಂದ್ರಶೇಖರ್‌ ಅವರ ಲೇಖಕ ಪರಿಚಯಕ್ಕಾಗಿ

MORE FEATURES

ಅನುಭವವೆನ್ನುವ ಆಸ್ವಾದವನ್ನು ಮೀರಿಸುವ ಅನುಭೂತಿ ‘ಅಪ್ಪ ಕಾಣೆಯಾಗಿದ್ದಾನೆ’ : ದಯಾ ಗಂಗನಘಟ್ಟ

03-02-2023 ಬೆಂಗಳೂರು

''ಬಿಳೀ ಸುಣ್ಣದ ಗೋಡೆಯ ಮೇಲೆ ಬಿಸಿಲು ಕೋಲೊಂದು ನೆರಳನ್ನು ಚಿತ್ತಾರವಾಗಿ ಹರಡುವಂತೆ ಬೇಲೂರು ರಘುನಂದನ್ ರವರ ಕಥ...

ನಿರಂತರ ‘ನೃತ್ಯ ಸಂಭ್ರಮ’

03-02-2023 ಬೆಂಗಳೂರು

''ಕರ್ನಾಟಕ ಸಂಗೀತ ಪಿತಾಮಹರೆನಿಸಿರುವ ಪುರಂದರ ದಾಸರು ಸಂಗೀತ ಕಲಿಕೆಗೆ ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸಿ...

ಭಾವನೆಗಳೊಂದಿಗೆ ಬಾಂಧವ್ಯ ಬೆಸೆಯುವ ಕಲೆ ‘ಕಥಾಗತ’ : ಸದ್ಯೋಜಾತ ಭಟ್ಟ

03-02-2023 ಬೆಂಗಳೂರು

''ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಆಕಾಲಕ್ಕೆ ಕೊಂಡೊಯ್ಯುವ ಕಲೆ ನವೀನ್ ಅವರು ಸಿದ್ಧಿಸಿಕೊಂಡ...