ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ಶಿವಶರಣೆಯರು

Date: 20-12-2022

Location: ಬೆಂಗಳೂರು


“ಕ್ರಿ.ಶ.1160 ರಲ್ಲಿ ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ರೇವಣಸಿದ್ಧನ ಪತ್ನಿಯರ ಕುರಿತು ಇಲ್ಲಿ ಮಾತನಾಡುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ‘ವೇದ ಕಂಚುಕಿ’ ಹಾಗೂ ‘ಸೌಂದರೀ ದೇವಿ’ ಕುರಿತು ಬರೆದಿದ್ದಾರೆ.

ವೇದ ಕಂಚುಕಿ:

ವಚನಕಾರ್ತಿ ಆಗಮಮೋಹಿನಿ ಹಾಗೆ ಈಕೆಯೂ ಕೂಡ ರೇವಣಸಿದ್ಧನ ಪತ್ನಿಯಾಗಿದ್ದಾಳೆ. ಈಕೆಯ ಕಾಲವನ್ನು ಕವಿಚರಿತೆಕಾರರು ಕ್ರಿ.ಶ.1160 ಎಂದು ಹೇಳಿದ್ದಾರೆ. ಈಕೆಯೂ ಕೂಡ ತನ್ನ ಸವತಿಯರ ಜತೆಯಲ್ಲಿ ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಳೆಂದು ತಿಳಿದುಬರುತ್ತದೆ. ಈಕೆಯೂ ವಚನ ರಚನೆ ಮಾಡಿದ್ದು ಈಕೆಯ ಒಂದು ವಚನ ಮುಕ್ತಿಕಂಠಾಭರಣದಲ್ಲಿ ಪ್ರಕಟವಾಗಿದೆ. "ವೇದಕಂಚುಕಿ" ಅಂಕಿತದಲ್ಲಿಯೇ ಈಕೆ ವಚನ ರಚಿಸಿದ್ದಾಳೆ. ರೇವಣಸಿದ್ಧಯ್ಯನ ಎಲ್ಲ ಪತ್ನಿಯರೂ ರಾಜಕುಮಾರಿಯರಾಗಿದ್ದರಿಂದ ವೇದಕಂಚುಕಿ ಕೂಡಾ ರಾಜಕುಮಾರಿಯಾಗಿರಬೇಕು. ಯಾವ ರಾಜನ ಮಗಳೆಂಬುದು ತಿಳಿದು ಬಂದಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯಚರಿತ್ರೆ (ಸಂಪುಟ-4, ಭಾಗ-1)ಯಲ್ಲಿ ಡಾ.ಕೆ.ಜಿ.ನಾರಾಯಣ ಪ್ರಸಾದ್ ಅವರು ಈಕೆಯ ಬಗೆಗೆ ಬರೆದಿದ್ದಾರೆ. ಪ್ರಾರಂಭದಲ್ಲಿ ಇವರ ಮನೆತನದಲ್ಲಿ ವೇದ ಪಠಿಸಲಾಗುತ್ತಿತ್ತೆಂದು ತಿಳಿದುಬರುತ್ತದೆ. ವಚನಚಳವಳಿಯಪ್ರಭಾವಕ್ಕೊಳಗಾದ ವೇದಕಂಚುಕಿ, ವೇದ ಪಾರಾಯಣವನ್ನು ಕೈಬಿಟ್ಟು ಶರಣರ ಸಿದ್ಧಾಂತಕ್ಕೆ ಬದ್ಧಳಾದಳೆಂದು ತಿಳಿದುಬರುತ್ತದೆ.

"ಎಮ್ಮಾರ್ಯರರ್ಚಿಪ ಲಿಂಗ ಬಯಲಾದುದೆಂಬೆನೆ ಬಯಲಾದುದಿಲ್ಲ ಆಕಾರವಿಡಿದಿಹುದೆಂಬೆನೆ ನುಡಿಗಡಣದ ಬೆಳಗು ತೋರುವುದಿಲ್ಲ. ಗುರುಜಂಗಮ ನುಡಿದಂತೆ ಲಿಂಗ ನುಡಿವಡೆ
ಬಂದ ವೇದಕಂಚುಕಿ ಓಂಕಾರದ ಮುಖ ನೋಡಯ್ಯ ಚೆನ್ನಬಸವಯ್ಯ"

- ಮುಕ್ತಿಕಂಠಾಭರಣ, ವ-103, 1971

ಈ ವಚನದಲ್ಲಿ ವೇದಕಂಚುಕಿ ಲಿಂಗದ ಬಗೆಗೆ ಮಹತ್ವದ ವಿಚಾರವನ್ನು ತಿಳಿಸಿದ್ದಾಳೆ. ತಮ್ಮ ಹಿರಿಯರು ಪೂಜಿಸುವ ಲಿಂಗವು ಬಯಲಾದುದಿಲ್ಲ, ಅದು ನಿರಾಕಾರವಾದುದಾಗಿದೆ. ಆಕಾರವಿಡಿದು ಪೂಜಿಸಲು ಹೋದರೆ ಅದು ಕಾಣಿಸುವುದಿಲ್ಲ. ಗುರುಜಂಗಮನುಡಿಸಿದಂತೆ ಅದು ನುಡಿಯುತ್ತದೆಂದು ಹೇಳಿದ್ದಾಳೆ. ಈ ವಿಷಯವನ್ನು ಚೆನ್ನಬಸವಣ್ಣನಿಗೆ ಹೇಳಿದ್ದಾಳೆ. ಚೆನ್ನಬಸವಣ್ಣ ಈ ವಿಷಯದಲ್ಲಿ ಪರಿಣಿತನಾಗಿದ್ದರಿಂದ ತನ್ನ ಇಂಗಿತವನ್ನು ಆತನೆದುರು ಬಿಚ್ಚಿಟ್ಟಿದ್ದಾಳೆ. ವೇದಕಂಚುಕಿ ಪ್ರಮುಖ ಶರಣೆಯಾಗಿದ್ದಾಳೆ.

ಸೌಂದರೀ ದೇವಿ:

ಸೌಂದರೀ ದೇವಿ ಕೂಡಾ ರೇವಣಸಿದ್ಧನ ಪತ್ನಿಯಾಗಿದ್ದು ಈಕೆಯ ಕಾಲವನ್ನು ಕವಿಚರಿತೆಕಾರರು ಕ್ರಿ.ಶ.1160 ಎಂದು ಗುರುತಿಸಿದ್ದಾರೆ. ಈಕೆ ರಾಜೇಂದ್ರಚೋಳನ ಮಗಳಾಗಿದ್ದಳು. ತನ್ನ ಸವತಿಯರ ಜತೆಗೂಡಿ ಈಕೆಯೂ ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಳು. ಈಕೆಗೆ ರುದ್ರಮುನಿಯೆಂಬ ಮಗುವಾಗುತ್ತದೆ. ಚೆನ್ನಬಸವಣ್ಣನು ಅಲ್ಲಮಪ್ರಭುವಿನ ಪಾದದಲ್ಲಿ ಅಸುನೀಗಿದಾಗ ಈಕೆಯೂ ಅಲ್ಲಿಗೆ ಬಂದು ಶೋಕವನ್ನು ವ್ಯಕ್ತಪಡಿಸಿದ ವಿಷಯ ದಾಖಲಾಗಿದೆ. ಸೌಂದರೀದೇವಿ ವಚನ ರಚಿಸಿದ್ದು ಈಕೆ ತನ್ನ ಹೆಸರನ್ನೇ ವಚನಾಂಕಿತವನ್ನಾಗಿ ಮಾಡಿಕೊಂಡಿದ್ದಾಳೆ. "ಮುಕ್ತಿಕಂಠಾಭರಣ"ದಲ್ಲಿ ಈಕೆಯ ವಚನ ಪ್ರಕಟವಾಗಿದೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯಚರಿತ್ರೆ ಸಂಪುಟ-4, ಭಾಗ-1ರಲ್ಲಿ ಈಕೆಯ ಬಗೆಗೆ ಲೇಖನ ಪ್ರಕಟವಾಗಿದೆ. ಈ ಲೇಖನವನ್ನು ಡಾ.ಕೆ.ಜಿ.ನಾರಾಯಣ ಪ್ರಸಾದ ಬರೆದಿದ್ದಾರೆ. ಸೌಂದರೀದೇವಿ ಸುಂದರಿಯಾಗಿದ್ದು ರೇವಣ್ಣಸಿದ್ಧನ ಮೆಚ್ಚಿನ ಮಡದಿಯಾಗಿದ್ದಳೆಂದು ತಿಳಿದುಬರುತ್ತದೆ.

"ಗುರುಲಿಂಗ ಜಂಗಮದ ಭೇದದಲ್ಲಿ ಆರ ನಿಂದೆ ಆರಿಗಯ್ಯಾ
ಸಾಗರದಲ್ಲಿಪ್ಪ ಲಹರಿಗಳ ತಾಡನೆ ಲಹರಿಗೆನಲುಂಟೆ?
ಗುರುದೂಷಣೆ ಇಲ್ಲ ಗುರುದೂಷಣೆ ಇಲ್ಲ
ತನ್ನ ಮೂಗು ತಾ ಕೊಂದಡೆ ಆರಪಮಾನ ಉಸುರಯ್ಯಾ
ಶ್ರೀ ಗುರು ಸೋಮಲಿಂಗ ಶರಣೆಸೌಂದರಿಗೆ ಅಪ್ಪಣ್ಣಾ"

- ಮುಕ್ತಿಕಂಠಾಭರಣ, ವ-213, ಪು.104, 1971

ಗುರುಲಿಂಗ ಜಂಗಮದ ಪರಿಕಲ್ಪನೆಗೆ ಶರಣರು ಹೊಸ ಸ್ಪರ್ಶ ನೀಡಿದ್ದಾರೆ. ಶರಣರು ಬರುವುದಕ್ಕಿಂತ ಮೊದಲೇ ಗುರು, ಲಿಂಗ, ಜಂಗಮರ ಬಗೆಗೆ ಅನೇಕರು ಹೇಳಿದ್ದಾರೆ. ಆದರೆ ಶರಣರು ಗುರು-ಲಿಂಗ-ಜಂಗಮರನ್ನು ಕಂಡ ಪರಿ ಬೇರೆಯಾಗಿದೆ. (ವಿವರಗಳಿಗಾಗಿ ನೋಡಿ-"ಶರಣರ ಧಾರ್ಮಿಕ ಸಿದ್ಧಾಂತಗಳು" -ಡಾ.ಬಸವರಾಜ ಸಬರದ) ಇಲ್ಲಿ ಸೌಂದರೀದೇವಿ ಗುರು-ಲಿಂಗ-ಜಂಗಮದಲ್ಲಿ ಭೇದವನ್ನೆಣಿಸಬಾರದೆಂದು ಹೇಳಿದ್ದಾಳೆ. ಗುರುದೂಷಣೆ ಮಾಡಿದರೆ ತನ್ನ ಮೂಗನ್ನು ತಾನೇ ಕೊಂದಂತೆಂದು ಸ್ಪಷ್ಟಪಡಿಸಿದ್ದಾಳೆ. ಈಕೆಯ ಗುರು ಸೋಮಲಿಂಗನಾಗಿದ್ದನೆಂದು ಈ ವಚನದಿಂದ ಸ್ಪಷ್ಟವಾಗುತ್ತದೆ. ರೇವಣಸಿದ್ಧರ ಪತ್ನಿಯರಾಗಿದ್ದ ಈ ನಾಲ್ಕು ವಚನಕಾರ್ತಿಯರನ್ನು ಕುರಿತು ವಿಶೇಷ ಚರ್ಚೆ ನಡೆಯಬೇಕಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಸಾಮಾಜಿಕ ಪ್ರಜ್ಞೆ
ಆಗಮ ಮೋಹಿನಿ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...