ಟ್ರಂಪಣ್ಣನ ಅಮೆರಿಕದಲ್ಲಿ ಸುಳ್ಳುಗಳ ಸುನಾಮಿ!

Date: 18-11-2020


ಜಾಗತಿಕವಾಗಿ ಕುತೂಹಲದ ಕಡಲಿಗೆ ತಳ್ಳಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಈಗ ತೆರೆ ಬಿದ್ದಿದೆ. ಅಕ್ಷರಶಃ ಪ್ರತಿಷ್ಟೆಯ ರಣರಂಗವಾಗಿದ್ದ ಈ ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಅಲ್ಲಿಯ ನಾಯಕರು, ಜನರ ಭಾವನಾತ್ಮಕ ವಿಚಾರಗಳಿಗೆ ಹಾದಿ ತಪ್ಪಿಸುವ ಹೇಳಿಕೆಗಳನ್ನು ಹಾಗೂ ಸುಳ್ಳುಗಳಿಂದ ತುಂಬಿದ ಭಾಷಣಗಳನ್ನು ನೀಡಿದ್ದು, ಲೇಖಕ-ವಿಮರ್ಶಕ ರಂಗನಾಥ ಕಂಟನಕುಂಟೆ ಅವರು ತಮ್ಮ ‘ಮಾತಿನ ಮರೆ’ ಅಂಕಣದಲ್ಲಿ ಸಮೀಕರಿಸಿ-ವಿಶ್ಲೇಷಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದಿದೆ. ರಿಪಬ್ಲಿಕ್ ಪಕ್ಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋತಿದ್ದಾರೆ. ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬೈಡನ್ ಗೆದ್ದಿದ್ದಾರೆ. ಜಾಗತಿಕ ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಡೆದ ಈ ಚುನಾವಣೆ ಜಗತ್ತಿನ ಗಮನ ಸೆಳೆದಿತ್ತು. ಅಲ್ಲದೆ, ಜಗತ್ತಿನ ದೊಡ್ಡಣ್ಣನಂತೆ ವರ್ತಿಸುವ ಅಮೆರಿಕದಲ್ಲಿ ನಡೆಯುವ ಪ್ರತಿ ಸಲದ ಚುನಾವಣೆಯೂ ಜಗತ್ತಿನ ಕುತೂಹಲವನ್ನು ಕೆರಳಿಸಿಯೇ ಇರುತ್ತದೆ. ಅಲ್ಲಿ ನಡೆಯುವ ರಾಜಕೀಯ ಪಲ್ಲಟಗಳು ಜಗತ್ತಿನ ದಿಕ್ಕುಗಳನ್ನು ಬದಲಿಸುವ ಕಾರಣ ಇಡೀ ಜಗತ್ತು ಕುತೂಹಲದಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳನ್ನು ಗಮನಿಸುತ್ತಲೇ ಇರುತ್ತದೆ.

ಇನ್ನು, ಚುನಾವಣೆಯಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳು ಜನಮತ ಪಡೆದು ಆರಿಸಿ ಬಂದರೆ ದೇಶದ ಒಳಿತಿಗೆ ಏನೇನು ಯೋಜನೆಗಳನ್ನು ಹಮ್ಮಿಕೊಳ್ಳುತ್ತೇವೆ? ದೇಶದ ಜನರ ಬದುಕು ಮತ್ತು ಆರ್ಥಿಕತೆಯನ್ನು ಹೇಗೆ ನಿಭಾಯಿಸುತ್ತೇವೆ? ಎಂಬುದರ ಬಗೆಗೆ ಭರವಸೆಗಳನ್ನು ನೀಡಿ, ಜನರ ವಿಶ್ವಾಸವನ್ನು ಗಳಿಸಿಕೊಳ್ಳುತ್ತ ಅವರ ಮತಗಳನ್ನು ಪಡೆದು ಗೆದ್ದು ಬರುವುದಾಗಿರುತ್ತದೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದ ಪಕ್ಷ ಮತ್ತು ನಾಯಕರು ಆರಿಸಿ ಬಂದರೆ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಆಶ್ವಾಸನೆಗಳನ್ನು ಈಡೇರಿಸುತ್ತ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದಾಗಿರುತ್ತದೆ. ಆ ಮೂಲಕ ಒಂದು ಪಕ್ಷದ ಮತ್ತು ನಾಯಕರ ವಿಶ್ವಾಸವನ್ನು ಸಾರ್ವಜನಿಕವಾಗಿ ಉಳಿಸಿಕೊಳ್ಳುವುದಾಗಿರುತ್ತದೆ. ಇದು ಸಂಪೂರ್ಣವಾಗಿ ಅಲ್ಲದಿದ್ದರೂ ಸಾಧ್ಯವಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ವರ್ತಿಸಬೇಕಿರುತ್ತದೆ. ಆ ಮೂಲಕ ಸತ್ಯದ ನ್ಯಾಯ ನೀತಿಯ ಪಾಲನೆ ಮಾಡಬೇಕಿರುತ್ತದೆ. ರಾಜಕೀಯ ನಾಯಕರು ನ್ಯಾಯದ, ಸತ್ಯದ ಮತ್ತು ನುಡಿದಂತೆ ನಡೆಯುವುದು ಬಹಳ ಮುಖ್ಯವಾಗಿರುತ್ತದೆ. ಅವರಿಂದ ಜನ ಪ್ರಭಾವಿತರಾಗಿ ತಮ್ಮ ನಡೆ ನುಡಿಯನ್ನು ರೂಪಿಸಿಕೊಳ್ಳುತ್ತಿರುತ್ತಾರೆ.

ಆದರೆ ಇತ್ತೀಚಿನ ಚುನಾವಣೆಗಳನ್ನು ಗಮನಿಸಿದರೆ ಚುನಾವಣೆಯ ಸಂದರ್ಭದಲ್ಲಿ ಭರವಸೆಗಳನ್ನು ನೀಡುವಾಗಲೇ ಸುಳ್ಳು ಭರವಸೆಗಳನ್ನು ನೀಡಲಾಗುತ್ತದೆ. ಅಂದರೆ ತಮ್ಮ ಪ್ರಣಾಳಿಕೆಗಳು ಮತ್ತು ಚುನಾವಣೆಯ ಭಾಷಣಗಳ ಮೂಲಕ ಉದ್ದೇಶಪೂರಕವಾಗಿಯೇ ಸುಳ್ಳು ಭರವಸೆಗಳನ್ನು ನೀಡಲಾಗುತ್ತದೆ. ರಾಜಕೀಯ ನಾಯಕರು ತಮ್ಮ ಅಜ್ಞಾನದಿಂದ ಸುಳ್ಳುಗಳನ್ನು ಹೇಳುವುದು ಒಂದು ಬಗೆಯದಾದರೆ ಉದ್ದೇಶಪೂರ್ವಕವಾಗಿ, ವ್ಯವಸ್ಥಿತವಾಗಿ ಸುಳ್ಳುಗಳನ್ನು ಹೇಳುವುದು ಇನ್ನೊಂದು ಬಗೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದ್ದ ಡೊನಾಲ್ಡ್ ಟ್ರಂಪ್ ಅವರು ಈ ಎರಡೂ ರೀತಿಯಲ್ಲಿ ಸುಳ್ಳುಗಳನ್ನು ಹೇಳಿರುವುದನ್ನು ಅಲ್ಲಿನ ಮಾಧ್ಯಮಗಳು ಬಹಿರಂಗಪಡಿಸಿವೆ. ಅಂದರೆ ತಮ್ಮ ರಾಜಕೀಯ ಅಪ್ರಬುದ್ದತೆ, ಅಜ್ಞಾನ, ಉಡಾಫೆತನ ಹಾಗೂ ವ್ಯವಸ್ಥಿತವಾಗಿ ಹಾದಿ ತಪ್ಪಿಸುವ ಹೇಳಿಕೆಗಳು ಮತ್ತು ಸುಳ್ಳುಗಳಿಂದ ಜನರನ್ನು ನಂಬಿಸಲು ಪ್ರಯತ್ನಿಸಿರುವುದನ್ನು ಎತ್ತಿ ತೋರಿಸಲಾಗಿದೆ. ಈ ಕಾರಣಕ್ಕಾಗಿಯೇ, ಅವರಿಗೆ ಕಳೆದ ವರ್ಷ ’ವರ್ಷದ ಸುಳ್ಳುಗಾರ’ ಪ್ರಶಸ್ತಿಯನ್ನೂ ನೀಡಲಾಗಿದೆ!

ಸಾಮಾನ್ಯವಾಗಿ ಚುನಾವಣೆಯಲ್ಲಿ ತಮ್ಮ ಎದುರಾಳಿಗಳನ್ನು ಸೋಲಿಸುವ ಉದ್ದೇಶದಿಂದ ಕೆಲವು ಉತ್ಪೇಕ್ಷಿತ ಮಾತುಗಳು ವ್ಯಕ್ತವಾಗುತ್ತವೆ. ಹಾಗೆಯೇ ಎದುರಾಳಿಗಳ ಬಗೆಗೆ ಟೀಕೆಗಳು, ವಿಮರ್ಶೆಗಳನ್ನು ಮಾಡಲಾಗುತ್ತದೆ. ಸಾರ್ವಜನಿಕ ಚರ್ಚೆಗಳ ಮೂಲಕ ಜನಾಭಿಪ್ರಾಯವೂ ನಿರ್ಮಾಣವಾಗುವುದು. ಆ ಮೂಲಕ ಜನರು ಯೋಚಿಸಲು ಬೇಕಾದ ಒಂದು ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕಾಗುತ್ತದೆ. ಇದು ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಚರ್ಚೆ ಸಂವಾದಗಳು ಆರೋಗ್ಯಕರ ವಿಚಾರಗಳ ಸೃಷ್ಟಿಗೆ ಅತ್ಯಗತ್ಯ.

ಆದರೆ ಎದುರಾಳಿಗಳ ವಿರುದ್ದ ಇಲ್ಲದ ಕಟ್ಟು ಕತೆಗಳನ್ನು ಕಟ್ಟಿ ಮಾಧ್ಯಮಗಳ ಮೂಲಕ ಹರಡಿ ಜನರನ್ನು ಹಾದಿ ತಪ್ಪಿಸುವುದು ಅತ್ಯಂತ ಹೀನಾಯವಾದ ಚುನಾವಣೆಯ ತಂತ್ರವಾಗಿರುತ್ತದೆ. ನಿಜದ ಆಧಾರದ ಮೇಲೆ ನಡೆಯಬೇಕಾದ ಚರ್ಚೆಗಳು ಸುಳ್ಳುಗಳ ದಾಳಿಯಲ್ಲಿ ಅಂತ್ಯವಾಗುತ್ತವೆ. ಚುನಾವಣೆಗಳು ಒಂದು ರೀತಿಯಲ್ಲಿ ‘ಯುದ್ಧ ಸ್ವರೂಪಿ’ಯಾಗುತ್ತಿವೆ. ಆ ಯುದ್ಧ ದೇಶದ ಮನೋನೆಲೆಯಲ್ಲಿ ನಡೆದು ವಿಪರೀತ ಗಾಯಗಳಾಗುತ್ತಿವೆ. ಆ ಮೂಲಕ ಇಡೀ ದೇಶದ ಮನಸ್ಸುಗಳು ನಾಶವಾಗುತ್ತಿವೆ ಮತ್ತು ದೇಶಗಳು ಮಾನಸಿಕವಾಗಿ ವಿಭಜನೆಗೊಳ್ಳುತ್ತಿವೆ. ಇದಕ್ಕೆ ಭಾರತ ಮತ್ತು ಅಮೆರಿಕದಂತಹ ದೊಡ್ಡ ಪ್ರಜಾಪ್ರಭುತ್ವ ದೇಶಗಳೇ ಎತ್ತುಗೆಗಳಾಗಿವೆ. ಇದು ಪ್ರಜಾಪ್ರಭುತ್ವದ ಅವಸಾನಕ್ಕೂ ಕಾರಣವಾಗುವಂತಹ ಪರಿಸರವನ್ನು ಸೃಷ್ಟಿಸಿದೆ. ಇದು ಈ ಬಾರಿಯ ಅಮೆರಿಕ ಚುನಾವಣೆಯಲ್ಲಿಯೂ ನಡೆದಿದೆ. ಟ್ರಂಪ್ ಅವರು ಸುಳ್ಳುಗಳ ಮೂಲಕ ಜನರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಿರುವುದು ತಿಳಿದು ಬಂದಿದೆ.

ಅಲ್ಲದೆ, ಈ ಚುನಾವಣೆಗೆ ಮೊದಲು 2016ರಲ್ಲಿ ಅವರು ಮೊದಲ ಬಾರಿಗೆ ಅಧ್ಯಕ್ಷರಾಗಿ ಆರಿಸಿ ಬಂದ ನಂತರದಲ್ಲಿ, ಕಳೆದ ನಾಲ್ಕು ವರುಷಗಳಲ್ಲಿ ಅವರಾಡಿರುವ ಸುಳ್ಳುಗಳು ಮತ್ತು ಹಾದಿ ತಪ್ಪಿಸುವ ಹೇಳಿಕೆಗಳು ಎಷ್ಟು? ಎಂಬ ಬಗೆಗೆ ಅಧ್ಯಯನ ಮಾಡಲಾಗುತ್ತಿದೆ. ಈ ಬಗೆಗೆ ಅಲ್ಲಿನ ಮಾಧ್ಯಮಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಒಂದು ಅಂದಾಜಿನ ಪ್ರಕಾರ, ಇಪ್ಪತ್ತೈದು ಸಾವಿರ ಸುಳ್ಳುಗಳನ್ನು ಅವರಾಡಿದ್ದಾರೆ. ಪ್ರತಿ ದಿನ ಇಪ್ಪತ್ತಮೂರು ಸುಳ್ಳುಗಳನ್ನಾಡಿದ್ದಾರೆ! ಪ್ರಮುಖವಾಗಿ ಉದ್ಯೋಗ, ತೆರಿಗೆ, ಪರಿಸರ, ವಲಸೆ ಮತ್ತು ರಷ್ಯಾ ಹಾಗೂ ಉಕ್ರೇನ್ ದೇಶಗಳ ಬಗೆಗೆ ಹೆಚ್ಚು ಸುಳ್ಳುಗಳನ್ನು ಹೇಳಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ. ಕೊರೊನಾ ಒಂದರ ಮೇಲೆಯೇ ಸುಮಾರು 1200 ಸುಳ್ಳುಗಳನ್ನು ಹೇಳಿದ್ದಾರೆ. ಇವು ಸುಳ್ಳುಗಳು ಎಂದು ಗೊತ್ತಾದ ನಂತರ ಪತ್ರಿಕೆಗೆ ವರದಿ ಮಾಡುವುದು ಹೇಗೆ? ಎಂಬ ಪ್ರಶ್ನೆಯನ್ನು ಕೆಲವು ಪತ್ರಕರ್ತರು ಎತ್ತಿದ್ದಾರೆ. ಅಷ್ಟೇ ಯಾಕೆ ಮೊನ್ನೆನ ಚುನಾವಣೆಯ ಮತ ಎಣಿಕೆಯ ಸಂದರ್ಭದಲ್ಲಿ ತಮ್ಮ ಸೋಲು ಖಚಿತವಾಗುವ ಹೊತ್ತಿನಲ್ಲಿ ಟ್ರಂಪ್ ಅವರು ನಡೆಸಿದ ಪತ್ರಿಕಾಗೋಷ್ಟಿಯನ್ನು ನೇರ ಪ್ರಸಾರ ಮಾಡುತ್ತಿದ್ದ ಮಾಧ್ಯಮಗಳು ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ತಮ್ಮ ಪ್ರಸಾರವನ್ನು ನಿಲ್ಲಿಸಿದ್ದಾರೆ. ಮತ್ತು ಅವರ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆಯೂ ತೀರ್ಮಾನಿಸಿದ್ದಾರೆ. ಅಮೆರಿಕದಲ್ಲಿ ’ಸುಳ್ಳುಗಳ ಸುನಾಮಿ’ ಎದ್ದಿರುವುದಾಗಿ ಗಾರ್‍ಡಿಯನ್ ಪತ್ರಿಕೆ ವರ್ಣಿಸಿದೆ. ಸುಳ್ಳು, ಮತ್ತೊಂದು ಸುಳ್ಳು ಮಗದೊಂದು ಸುಳ್ಳು ಹೀಗೆ ಅಲೆ ಅಲೆಯಾಗಿ ಸುಳ್ಳುಗಳು ಅಪ್ಪಳಿಸುತ್ತಿರುವುದು ನಡೆದಿದೆಯೆನ್ನಲಾಗಿದೆ. ಇದರಿಂದ ನಮ್ಮ ದೇಶವೂ ಹೊರತಾಗಿಲ್ಲ. ಇಲ್ಲಿ ಸುಳ್ಳುಗಳನ್ನೆ ಉಸಿರಾಡುತ್ತ ಹಾಸಿ ಉಂಡು ಮಲಗಲಾಗುತ್ತಿದೆ. ಇದು ಬರಿಯ ರಾಜಕೀಯ ಕ್ಷೇತ್ರ ಮಾತ್ರವಾಗಿದ್ದರೆ ಸುಮ್ಮನಿರಬಹುದಿತ್ತು. ಶಿಕ್ಷಣ, ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರಗಳನ್ನು ಆವರಿಸಿದ್ದು ಅವು ಪ್ರಪಾತಕ್ಕೆ ಜಾರಿ ಬೀಳುವ ಹಾದಿಯಲ್ಲಿವೆ. ಇದು ಅಪಾಯಕಾರಿ ವಿದ್ಯಮಾನ.

ಹೀಗೆ, ಟ್ರಂಪ್ ಅವರು ಸುಳ್ಳುಗಳನ್ನು ಹೇಳುವುದನ್ನು ಗಮನಿಸಿದ ಕೆಲವು ಅಮೆರಿಕನ್ನರು ಆ ಸುಳ್ಳುಗಳನ್ನು ದಾಖಲಿಸಿ ಟ್ರಂಪ್ ಅವರ ನಿಜ ರೂಪವನ್ನು ತೋರಿಸಿ ಕೊಡಲು ಪ್ರಯತ್ನಿಸುತ್ತಾರೆ. ನ್ಯೂಯಾರ್ಕ್ ನ ಸೋಹೋ ಎಂಬಲ್ಲಿ ಅವರಾಡಿರುವ ಸುಳ್ಳುಗಳನ್ನು ಅನಾವರಣ ಮಾಡಲು ಉದ್ದನೆಯ ಗೋಡೆಯನ್ನೇ ರೂಪಿಸಲಾಗಿದೆ. ಅದರ ಮೇಲೆ ಅವರಾಡಿರುವ ಸುಮಾರು ಇಪ್ಪತ್ತೆರಡು ಸಾವಿರ ಸುಳ್ಳುಗಳನ್ನು ವಿವಿಧ ಬಣ್ಣಗಳಲ್ಲಿ ಬರೆಯಲಾಗಿದೆ. ಅದನ್ನು ಸಾರ್ವಜನಿಕರು ವೀಕ್ಷಿಸುತ್ತಿದ್ದಾರೆ. ಅದು ’ಸುಳ್ಳುಗಳ ಗೋಡೆ’ ಎಂದೇ ಪ್ರಸಿದ್ದವಾಗಿದೆ. ಇದೆಲ್ಲವನ್ನೂ ಗಮನಿಸಿರುವ ಕೆಲವರು ಟ್ರಂಪ್ ಅವರ ಆಡಳಿತದ ಕಾಲಾವಧಿಯು ’ಸುಳ್ಳುಗಳ ಬೊಂಬಾರ್‍ಡ್‌ಮೆಂಟ್’ನ ಕಾಲವಾಗಿತ್ತು ಎಂದು ಕರೆದಿದ್ದಾರೆ. ಅಂದರೆ ಈ ಹಿಂದಿನ ಯಾವ ಅಧ್ಯಕ್ಷರ ಕಾಲದಲ್ಲಿಯೂ ಕೂಡ ಇಷ್ಟೊಂದು ಸುಳ್ಳುಗಳನ್ನು ಆಡಲಾಗಿರಲಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ. ಇಂತಹ ಗೋಡೆ ಯೋಜನೆಯೊಂದನ್ನು ನಮ್ಮ ದೇಶದಲ್ಲಿ ಕೈಗೊಂಡರೆ, ಇಲ್ಲಿ ಚೀನಾ ಗೋಡೆಯಂತಹ ಒಂದು ಬೃಹತ್ ಗೋಡೆಯನ್ನೇ ನಿರ್ಮಾಣ ಮಾಡಬೇಕಾಗುತ್ತದೆ. ಸತ್ಯಾನ್ವೇಷಕರಾಗಿ ಉಸಿರಾಡಿದ ಗಾಂಧಿ ನೆಲದಲ್ಲಿ ಸುಳ್ಳುಗಳೇ ಅಬ್ಬರಿಸಿ ದಾಳಿ ಮಾಡುತ್ತಿವೆ.

ಹೀಗೆ ಸುಳ್ಳು ಹೇಳಿರುವುದರ ಪರಿಣಾಮವೇನು? ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆ. ಈಗಾಗಲೇ ಮಾಧ್ಯಮಗಳು ವರದಿ ಮಾಡಿರುವಂತೆ ಅಮೆರಿಕ ವಿಭಜನೆಗೊಂಡಿದೆ. ಇಷ್ಟೊಂದು ಸುಳ್ಳು ಹೇಳಿದ ಅಧ್ಯಕ್ಷರಿಗೆ ಚುನಾವಣೆಯಲ್ಲಿ ಶೇ.48ರಷ್ಟು ಮತಗಳು ಬಿದ್ದಿವೆ. ಕಳೆದ ಚುನಾವಣೆಯಲ್ಲಿ ಬಿದ್ದ ಮತಗಳಿಗಿಂತಲೂ ಹೆಚ್ಚು ಮತಗಳು ಬಂದಿರುವುದಾಗಿಯೂ ಕೆಲವು ವಿಶ್ಲೇಷಣೆಗಳು ತಿಳಿಸುತ್ತವೆ. ವರ್ಣಭೇದ, ವರ್ಗಭೇದ, ವಿದೇಶಾಂಗ ನೀತಿಗಳು ಮತ್ತು ಪ್ರಚ್ಛನ್ನ ಬಂಡವಾಳವಾದದ ಮೇಲೆ ದೇಶ ವಿಭಜನೆಗೊಂಡಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ’ಟ್ರಂಪ್ಗೆ ಮತ ಹಾಕಿ ಇಲ್ಲವೇ ಸಾಯಿರಿ’ ಎಂಬಂತಹ ಘೋಷಣೆ ಕೂಗುವಷ್ಟರ ಮಟ್ಟಿಗೆ ಅಲ್ಲಿ ರಾಜಕೀಯ ಅಸಹನೆ ಬೆಳೆದಿದೆ. ಚುನಾವಣೆಯಲ್ಲಿ ಆಗಿರುವ ಸೋಲನ್ನು ಒಪ್ಪಿಕೊಳ್ಳದೆ ಬೀದಿಗಿಳಿದು ಸುಳ್ಳು ಆರೋಪ ಮಾಡುತ್ತ ಪ್ರತಿಭಟನೆಗೆ ಅಲ್ಲಿನ ಒಂದು ಜನ ವರ್ಗ ಬೀದಿಗಿಳಿದಿದೆ ಅಂದರೆ ಅದೆಷ್ಟರ ಮಟ್ಟಿಗೆ ಟ್ರಂಪ್ ಜನರನ್ನು ಪ್ರಭಾವಿಸಿದ್ದಾರೆ ಎಂಬುದು ತಿಳಿದು ಬರುತ್ತದೆ. ಇಷ್ಟೊಂದು ಸುಳ್ಳು ಹೇಳಿಯೂ ಜನಪ್ರಿಯರಾಗಿದ್ದಾರೆ ಎಂಬುದೇ ಆಶ್ಚರ್ಯ.

ಹೀಗೆ ಸುಳ್ಳುಗಳನ್ನು ನಿತ್ಯವೂ ಉಸಿರಾಡುವ ಟ್ರಂಪ್ ಅವರಂತಹ ನಾಯಕರನ್ನು ಬೆಂಬಲಿಸುವ ಜನರು ಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ. ಅವರೊಳಗೆ ವರ್ಣ ದ್ವೇಷ, ವಲಸೆದಾರ ಸಮುದಾಯಗಳ ಬಗೆಗೆ ದ್ವೇಷ, ಇಸ್ಲಾಂ ಧರ್ಮದ ಬಗೆಗಿನ ದ್ವೇಷ ಹೀಗೆ ಹಲವು ಬಗೆಯ ದ್ವೇಷ ಭಾವನೆಗಳನ್ನು ಬಿತ್ತಲಾಗಿದೆ. ಅಂದರೆ ಭಾವನಾತ್ಮಕ ವಿಷಯಗಳನ್ನು ಜನರ ಮನಸ್ಸಿನಲ್ಲಿ ತುಂಬಿ ಜನರನ್ನು ದಿಕ್ಕು ತಪ್ಪಿಸಿ ಅವರನ್ನು ತಮ್ಮ ಸ್ವಾರ್ಥದ ಅಜೆಂಡಾಗಳಿಗೆ ಬಳಸಿಕೊಳ್ಳಲಾಗುತ್ತದೆ. ನಮ್ಮಲ್ಲಿ ಜಾತಿ ಧರ್ಮ ದ್ವೇಷಗಳನ್ನು ಸೃಷ್ಟಿಸುತ್ತ ಜನ ವಿವೇಕವನ್ನು ನಾಶ ಮಾಡುತ್ತ ದೇಶದ ನೆಮ್ಮದಿಯನ್ನು ಹಾಳುಗೆಡವಲಾಗುತ್ತಿದೆ. ಇಲ್ಲಿ ಜನರಿಗೆ ಆಹಾರ, ಆರೋಗ್ಯ ಉದ್ಯೋಗ ಆರ್ಥಿಕ ಅಭಿವೃದ್ಧಿಗಳಿಗಿಂತ ಜಾತಿ ಧರ್ಮಗಳ ಪೊಳ್ಳು ಭಾವನೆಗಳೇ ದೊಡ್ಡದಾಗಿ ಕಾಣಿಸುತ್ತಿವೆ. ಪ್ರತಿ ಚುನಾವಣೆಯಲ್ಲಿಯೂ ಜಾತಿ ಧರ್ಮಗಳಿಗೆ ಮತ ಹಾಕುವುದು ನಡೆದಿದೆ.

ಅಂದರೆ ಜನನಾಯಕರು ತಮ್ಮ ಹಾದಿ ತಪ್ಪಿಸುವ ಹೇಳಿಕೆಗಳು, ಸುಳ್ಳುಗಳು ಹಾಗೂ ಭಾವನಾತ್ಮಕ ವಿಚಾರಗಳಿಂದ ಜನರನ್ನು ದಿಕ್ಕೆಡಿಸುತ್ತಿದ್ದಾರೆ. ಇದಕ್ಕೆ ಮಾತೇ ಬಹುದೊಡ್ಡ ಆಯುಧ. ಅಂತಹ ಆಯುಧಕ್ಕೆ ಅಮೆರಿಕದಂತಹ ಅಕ್ಷರಸ್ಥರ, ಸಿರಿವಂತರ ದೇಶವೂ ಬಲಿಯಾಗುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾಗಿದೆ. ಆ ಮೂಲಕ ಪ್ರಜಾಪ್ರಭುತ್ವ ಮತ್ತು ಬಹುಸಂಸ್ಕೃತಿಗಳು ಬಿಕ್ಕಟ್ಟಿಗೆ ಸಿಕ್ಕಿಕೊಂಡಿವೆ.

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...