ತುಸು ನಿಂತು ನೋಡು,  ಅನುಭವ ಪಡೆ...


ಗಣೇಶ ಅಮೀನಗಡ ಅವರ ತುಸುವೆ ಕುಡಿವ ಗಂಡನ್ನ ಕೊಡು ತಾಯಿ... ಲಲಿತ ಪ್ರಬಂಧಗಳ ಸಂಕಲನದ ಕುರಿತು ರಾಜೀವ ತಾರಾನಾಥ ಅವರು ಬರೆದ ಮುನ್ನುಡಿ ಇಲ್ಲಿದೆ. 

ನನ್ನ ಸಾಹಿತಿಯ ಜೀವನದ ಅವತಾರದಲ್ಲಿ ಸಾಕಷ್ಟು ಮುನ್ನುಡಿಗಳನ್ನು ಓದಿದ್ದೀನಿ. ಕೆಲವನ್ನೂ ಬರೆದಿದ್ದೂ ಉಂಟು. ಅವೆಲ್ಲ ಕಾದಂಬರಿ ಗಳೊ, ಕವನಸಂಕಲನಗಳೊ ಅಥವಾ ವಿಮರ್ಶೆಗಳೊ.
ಲಲಿತ ಪ್ರಬಂಧಗಳನ್ನು ಕನ್ನಡದಲ್ಲಿ ಹೆಚ್ಚು ಓದಿಲ್ಲ. ಹೌದು, ಇಂಗ್ಲಿಷಿನಲ್ಲಿರುವ ಭವ್ಯ ಪ್ರಬಂಧಗಳನ್ನು ಲ್ಯಾಂಬï, ಹಾಜïಲಿಟ್, ಸ್ಟೀವನ್‍ಸನ್, ಆ್ಯಡಿಸನ್ ಮತ್ತು ಸ್ಟೀಲï ಇಂಥವರ ಎಸ್ಸೆಗಳನ್ನು ಓದಿ, ಅಭ್ಯಾಸ ಮಾಡಿದ್ದೇನೆ. ಆದರೆ ಇಪ್ಪತ್ತು ವರ್ಷಗಳಾಯಿತು ಸಾಹಿತ್ಯಲೋಕದಿಂದ ಸ್ವಲ್ಪ ದೂರ ಸರಿದಿದ್ದೇನೆ. ಹೀಗಿರುವಾಗ ಗೆಳೆಯ ಗಣೇಶ ಅಮೀನಗಡನ ಪ್ರಬಂಧಗಳ ಸಂಕಲನ ನನ್ನ ಮುಂದೆ ಇದೆ; ಆತನ ಒತ್ತಾಯ ಇವಕ್ಕೆ ಬರಿ ಎಂದು.

ಪ್ರಬಂಧಗಳಿಗೆ ಮುನ್ನುಡಿ ಬರೆಯುವ ಪ್ರಯತ್ನ ನನಗೇನೊ ಹೊಸದು. ಕವನವೊ, ನಾಟಕವೊ, ಕಥೆಯೊ ಅಥವಾ ಕಾದಂಬರಿಯೊ ಇದ್ದರೆ ಅವುಗಳ ಅನುಭವ ಬೇರೆ. ಸ್ಥೂಲವಾಗಿ ಹೇಳುವುದಾದರೆ ಒಂದು ಕಾದಂಬರಿ ಅಥವಾ ಕಥೆ ‘ಮುಂದೇನಾಯಿತು, ಆಮೇಲೆ?' ಅಂತಹ ಒಳಗಿರುವ ಪ್ರಶ್ನೆಗಳಿಗೆ ಜವಾಬುಗಳನ್ನು ಕಟ್ಟುತ್ತಾ ಹೋಗುತ್ತವೆ. ಇಲ್ಲಿನ ಪ್ರಬಂಧಗಳು ನಿಂತು ನೋಡು, ನೋಡಿದ್ದರ ಸಂಪೂರ್ಣ ಅನುಭವ ಪಡೆ ಅಂತ ಹೇಳುತ್ತವೆ.
ಅಮೀನಗಡನ ಸ್ವಾಭಾವಿಕ ನೋಟದ ಧಾಟಿಯನ್ನು ಗಮನಿಸಿದರೆ; ಮೊಟ್ಟಮೊದಲಿಗೆ ನನಗೆ ಕಾಣ ಸುವುದು ಅವನ ಆಸಕ್ತಿಗಳ ಹರವು. ಊದಿನಕಡ್ಡಿಯಿಂದ ಹಿಡಿದು ರೈಲ್ವೆ ಲೋಕೊ ಪೈಲಟï ತನಕ, ಇಡ್ಲಿಯಿಂದ ಮೈಸೂರುಪಾಕ್ ತನಕ, ಮದುವೆಯಿಂದ ಶವಸಂಸ್ಕಾರ ತನಕ ಗಮನಾರ್ಹವಾದವು. ಆದರೆ ನಾನು ಇಲ್ಲಿ ವಿಮರ್ಶಕನಲ್ಲ, ಮುನ್ನುಡಿಗಾರ.

ತನ್ನ ಬರಹದಲ್ಲಿ ಅಮೀನಗಡ ಏನು ಮಾಡಬಯಸುತ್ತಾನೊ ಎಂದು ನನ್ನ ಕೇಳಿದರೆ, ಅಮೀನಗಡ ನಿಂತು ನೋಡ್ತಾನ, ಪಡ್ತಾನ. ಹೆಚ್ಚಾಗಿ ಅವನ ದೃಷ್ಟಿ ಸಣ್ಣ ಮುಗುಳ್ನಗೆಯೊಂದಿಗೆ ಕೂಡಿದೆ. ಹಾಗೆಂದು ಈತನಿಗೆ ಸೀರಿಯಸ್‍ನೆಸ್ ಇಲ್ಲ ಎನ್ನುವ ಹಾಗಿಲ್ಲ. ಅವನ ದೃಷ್ಟಿಯ ಹಿಂದೆ ಜನರ ನೋವನ್ನು ಚೂಪಾಗಿ ಅನುಭವಿಸುವ ಶಕ್ತಿ ಇದೆ. ದೃಷ್ಟಾಂತಕ್ಕೆ ರೈಲ್ವೆ ಲೋಕೊ ಪೈಲಟ್‍ಗಳ ಕುರಿತ ಪ್ರಬಂಧ. ಇದರಲ್ಲಿ ರೈಲ್ವೆ ಚಾಲಕರ ನೋವನ್ನು ಹಿಡಿದಿಟ್ಟಿರುವುದು ಅಮೀನಗಡನ ಬರವಣ ಗೆಗೆ ಸಾಕ್ಷಿಯಾಗಿದೆ.

ಆದರೆ ಈ ನಮ್ಮ ಕಾಲ ಗಡಿಬಿಡಿಯದು. ಓದುಗರಿಗೆ ಅದೇ ರುಚಿ. ಅದನ್ನೇ ಬೇಡುತ್ತಾರೆ. ಅದರ ವಿಪರೀತ ನಮ್ಮಲ್ಲಿ ಈಗ ಕಾಣುತ್ತಿರುವ ಗಲಭೆ, ಹಿಂಸೆ, ಅವೈಚಾರಿಕತೆ, ಕುರುಡು ರೊಚ್ಚಿಗೆಬ್ಬಿಸುವ ಮಾತುಗಳು ಹಾಗೂ ಧೋರಣೆಗಳು. ಆದರೆ ಈ ಸಂಕಲನ ನಮ್ಮೆಲ್ಲರಿಗೂ ತುಸು ನಿಂತು ಅನುಭವಿಸು, ಸಂಪೂರ್ಣ ನೋಡು ಎಂದು ಒತ್ತಾಯಿಸು ತ್ತದೆ. ಬೇಜಾರು, ದುಃಖ, ಗಡಿಬಿಡಿ ಇವೆಲ್ಲದರ ಹಿಂದೆ ಇರತಕ್ಕಂತಹ ಒಂದು ಜಾಗೃತವಾದ ಹಾಗೂ ಸ್ಥಿರವಾದ ಅನುಭವ ಕೇಂದ್ರವನ್ನು ಗಮನಿಸು ಅಂತ ಹೇಳುವ ಹಾಗಿದೆ. ಇದು ನನ್ನ ಅನುಭವ. ಇದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಓಡಬೇಡ, ಗೊಂದಲ ಬೇಡ, ಸ್ವಲ್ಪ ನಿಲ್ಲು, ನೋಡು, ಅನುಭವ ಪಡು... ಇದೇ ಈ ಸಂಕಲನದ ಕೇಂದ್ರ. 

ಓದುಗರೂ ಸಾವಕಾಶವಾಗಿ ಇಲ್ಲಿನ ಪ್ರಬಂಧಗಳನ್ನು ನೋಡಿ ತಮ್ಮೊಳಗೆ ಒಂದು ಕಂಡೂ ಕಾಣ ಸದಂತಹ ಸೌಖ್ಯ ಪಡೆದರೆ ಈ ಸಂಕಲನ ಗೆದ್ದಂತೆ.


 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...