ಉದ್ವೇಗ ರಹಿತ ಮಾತುಕತೆ: ವಿಚಾರ-ಚಿಂತನೆಗಳಿಗೇ ಮನ್ನಣೆ

Date: 21-01-2023

Location: ಜೈಪುರ


ಜೈಪುರ: ಉತ್ಸಾಹ-ಸಂಭ್ರಮ-ಸಂತಸಗಳೊಂದಿಗೆ ಭಾಗವಹಿಸುತ್ತಿರುವ ಯುವಕ-ಯುವತಿಯರು. ಕಿಕ್ಕಿರಿದು ನೆರೆದು ನಿಂತು ನೋಡಿ ಮಾತುಕತೆಗಳನ್ನು ಆಲಿಸಿದ ಜನ ಸಮೂಹ. ಪುಸ್ತಕದಲ್ಲಿ ಲೇಖಕರ ಹಸ್ತಾಕ್ಷರ ಪಡೆಯಲು ಸರದಿ ಸಾಲಿನಲ್ಲಿ ನಿಂತ ಜನ. ವರ್ತಮಾನವು ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಜಿಜ್ಞಾಸೆ ಹಾಗೂ ಸಮಕಾಲೀನ ವಿದ್ಯಮಾನ-ಬೆಳವಣಿಗೆಗಳ ಬಗ್ಗೆ ಚರ್ಚೆ, ಮಾತುಕತೆಗಳು ಜೈಪುರ ಸಾಹಿತ್ಯ ಉತ್ಸವದ ಎರಡೂ ದಿನ ಕಂಡು ಬಂದವು.

ಪುಸ್ತಕವೇ ಕೇಂದ್ರ: ಇದುವರೆಗೆ ನಡೆದ ಸಂವಾದಗಳು ಬಹುತೇಕ ಅಲ್ಲ ಎಲ್ಲವೂ ಪುಸ್ತಕ ಕೇಂದ್ರಿತವೇ ಆಗಿದ್ದವು. ಪುಸ್ತಕದೊಳಗಿನ ಹೂರಣ ಹಾಗೂ ಪುಸ್ತಕದಾಚೆಗಿನ ಲೇಖಕನ ವಿಚಾರ-ಅಭಿಪ್ರಾಯ-ಅನಿಸಿಕೆಗಳನ್ನು ಕೇಳಲು- ತಿಳಿದುಕೊಳ್ಳಲು ಜನ ಉತ್ಸುಕರಾಗಿದ್ದ ದೃಶ್ಯ ಕಂಡು ಬಂತು. ಎಲ್ಲ ವಿಚಾರ-ಸಂವಾದಗಳಿಗೂ ಪುಸ್ತಕವೇ ಕೇಂದ್ರ ಬಿಂದು. ಲೇಖಕರ ಮೂಲಕ ಹಾದು ಬಂದ ಈ ಪುಸ್ತಕಗಳ ಸೊಬಗು-ಸೊಗಸು ಅರಿಯಲು ಜನ ಆಸಕ್ತರಾಗಿದ್ದರು.

ಕ್ಲಾರ್ಕ್ಸ್‌ ಅಮೆರುವಿನ ಪ್ರಾಂಗಣದಲ್ಲಿ ಐದು ಸಮನಾಂತರ ವೇದಿಕೆಗಳಲ್ಲಿ ಸಂವಾದಗಳನ್ನು ಏರ್ಪಡಿಸಲಾಗಿದೆ. ಫ್ರಂಟ್‌ ಲಾನ್‌ ಪ್ರಮುಖ ವೇದಿಕೆಯಾದರೆ ಅದಕ್ಕೆ ಸರಿದೊರೆಯಾಗಿರುವ ವೇದಿಕೆ ’ಚಾರ್‌ ಬಾಗ್‌’. ಈ ಎರಡೂ ವೇದಿಕೆಗಳನ್ನು ಹೋಟೆಲ್‌ನ ಆವರಣದ ಉದ್ಯಾನವನ -ಬಯಲಿನಲ್ಲಿ ಟೆಂಟ್‌ ಹಾಕಿ ನಿರ್ಮಿಸಲಾಗಿದೆ. ಮೊಗಲ್‌ ಟೆಂಟ್‌ ಕೂಡ ಹೊರಾಂಗಣದಲ್ಲಿ ಹಾಕಲಾದ ಮತ್ತೊಂದು ವೇದಿಕೆ. ಬೈಠಕ್‌ ಮತ್ತು ದರ್ಬಾರ್‌ ಹಾಲ್‌ಗಳು ಹೋಟೆಲ್‌ನ ಒಳಾಂಗಣದ ವೇದಿಕೆಗಳು. ಹಲವು ವಿದ್ವಾಂಸರ-ಲೇಖಕರ-ಚಿಂತಕರ ಮಾತುಕತೆಗಳಿಗೆ ವೇದಿಕೆಯಾದವು. ಐದೂ ಕಡೆಗಳಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದ ಸಂವಾದಗಳಲ್ಲಿ ಭಾಗವಹಿಸುವುದಕ್ಕಾಗಿ ಜನ ಕಾರ್ಯಕ್ರಮ ಪಟ್ಟಿ ಕೈಯಲ್ಲಿ ಹಿಡಿದು ಹುಡುಕುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯ ಆಗಿತ್ತು. ಪಟ್ಟಿಯಲ್ಲಿ ಗುರುತು ಹಾಕಿಕೊಂಡಿದ್ದ ವೇದಿಕೆಗಳೆಡೆಗೆ ಹೋಗುವುದು ಅಲ್ಲಿ ಆ ಸಂವಾದ ಮುಗಿದ ನಂತರ ಮತ್ತೊಂದು ವೇದಿಕೆಯತ್ತ ಹೋಗುತ್ತಿದ್ದರು. ಪ್ರತಿಯೊಂದು ಸಂವಾದವೂ ಸಮಯಕ್ಕೆ ಸರಿಯಾಗಿ ಆರಂಭವಾಗಿ ಮುಗಿಯುತ್ತವೆ. ನಿಗದಿತ ಕಾಲಾವಧಿಯಲ್ಲಿಯೇ ಚರ್ಚೆ ನಡೆಯುತ್ತಿದ್ದವು. ತಣ್ಣಗಿನ ಮಂದ್ರ ಸ್ತರದಲ್ಲಿ ನಡೆಯುತ್ತಿದ್ದ ಮಾತುಕತೆಗಳು ತಾರಕಕ್ಕೆ ಹೋಗಿದ್ದು ಇಲ್ಲವೇ ಇಲ್ಲ. ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಕೂಡ ಉದ್ವೇಗರಹಿತವಾಗಿ ಮಂಡಿಸುತ್ತಿದ್ದ ಕ್ರಮ ಗಮನಾರ್ಹ ಆಗಿತ್ತು.

ಶಶಿ ತರೂರ್‌ ಸೂಪರ್‌ ಸ್ಟಾರ್‌: ಕೇರಳದ ತಿರುವನಂತಪುರದ ಸಂಸದ ಶಶಿ ತರೂರ್‌ ಎರಡೂ ದಿನಗಳ ಕಾಲ ಗಮನ ಸೆಳೆಯುವ ಸ್ಟಾರ್‌ ಆಗಿದ್ದರು. ಸಂವಾದ ನಡೆಸಿಕೊಟ್ಟರು, ಸಂವಾದದಲ್ಲಿ ಭಾಗಿಯಾಗಿದ್ದರು. ಎರಡ್ಮೂರು ವೇದಿಕೆಗಳಲ್ಲಿ ಪುಸ್ತಕ ಅನಾವರಣ ಮಾಡುವ ಪ್ರಕ್ರಿಯೆ ಕೇಂದ್ರ ಬಿಂದುವಾಗಿದ್ದರು. ತರೂರ್‌ ಮಾತುಗಳನ್ನು ಕೇಳಲು ಜನ ಉತ್ಸುಕರಾಗಿ ಭಾಗವಹಿಸುತ್ತಿದ್ದರು. ಅವರು ಒಂದು ವೇದಿಕೆಯಿಂದ ಮತ್ತೊಂದು ವೇದಿಕೆಗೆ ತೆರಳುವ ಅವಸರ ಕಂಡು ಬಂತು.

 

MORE NEWS

ಸುರಕ್ಷಿತ ಮತ್ತು ನೈರ್ಮಲ್ಯದ ಕುರಿತ ವಿಚಾರ ಸಂಕಿರಣ

05-02-2024 ಬೆಂಗಳೂರು

ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...

ಯುವ ಸಾಹಿತಿಗಳ ಭರವಸೆಯ ಹುಮ್ಮಸ್ಸಿನೊಂದಿಗೆ ತೆರೆ

23-01-2023 ಜೈಪುರ

16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...

ಮುಂದಿನ ಪೀಳಿಗೆಯನ್ನು ಉತ್ತೇಜಿಸಿದ ಸಾಹಿತ್ಯ ಉತ್ಸವ : ಸಂಜಯ್‌ ರಾಯ್

23-01-2023 ಜೈಪುರ

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...