ಕಲಬುರಗಿ ಅಂದ್ರ ಏನನ್ಕೊಂಡೀರಿ: ಉರ್‍ದು ಹುಟ್ಟಿದ ಊರು

Date: 01-02-2020

Location: ಕಲಬುರಗಿ


    ಕರೇರಿ ಕಲಬುರಗಿ ಉರ್‍ದು ಹುಟ್ಟೀದ್ ಜಾಗ ಅದ. ಬಹಮನಿಗಳು ಇಲ್ಲಿ ರಾಜ್ಯ ಸ್ತಾಪಿಸಿದಾಗ ಅರಾಬಿಕ್ ಅದಿಕಾರದ ಬಾಶೆಯಾಗಿದ್ದಿತು. ರಾಜ್ಯ, ಅರಮನೆಯ ದೊಡ್ಡ ಹುದ್ದೆಗಳೆಲ್ಲ ಪರ್‍ಶಿಯನ್ನರಿಗೆ ಇದ್ದವು. ನೆಲದ ಬಾಶೆ ಕನ್ನಡ, ಆಳುವರ ಬಾಶೆ ಪರ್‍ಶಿಯನ್. ತೆರಿಗೆ ಕಟ್ಟಿಸಿಕೊಳ್ಳೋಕೆ ಒಬ್ಬರು, ಕಟ್ಟುವುದಕ್ಕೆ ಇನ್ನೊಬ್ಬರು ಪರಸ್ಪರರನ್ನು ಮಾತನಾಡಿಸಲೇಬೇಕು. ಇಬ್ಬರಿಗೂ ಪರಸ್ಪರರ ಬಾಶೆ ಬರುವುದಿಲ್ಲ. ಮಾತನಾಡಲೇಬೇಕಾದ ಅನಿವಾರ್‍ಯತೆಯಲ್ಲಿ ಅವರು ಅರಮನೆಯ ಸುತ್ತಮುತ್ತ ಪರಸ್ಪರ ಎದುರಾದರು. ಏನೋ ಮಾತಾಡಿದರು, ಹೇಗೊ ಅರ್‍ತ ಮಾಡಿಕೊಂಡರು. ಹಾಗೆ ದಿನಗಳ ಕಳೆದವು, ಇಬ್ಬರಿಗೂ ಅರ್‍ತವಾಗುವ ಕೆಲವು ಪದಗಳು, ಅರ್‍ತಗಳು ಬೆಳೆದವು. ಕ್ರಮೇಣ ಅವು ಇಬ್ಬರ ಬಾಶೆಯ ಅಂಶಗಳನ್ನು ಪರಸ್ಪರ ಹದವಾಗಿ ಬೆರೆಯುವುದಕ್ಕೆ ಆಸ್ಪದ ಒದಗಿಸಿದವು.

   ಹೀಗೆ ಪರಸ್ಪರ ಅರ್‍ತವಾಗದ ಬಾಶೆಗಳ ಮಂದಿ ಎದುರುಬದುರಾದಾಗ ಅವೆರಡೂ ಅಲ್ಲದ ಒಂದು ಬಾಶಾಬಗೆ ಹುಟ್ಟುವುದು ಸಾಮಾನ್ಯ. ಜಗತ್ತಿನಾದ್ಯಂತ ಇಂತಾ ರೂಪಗಳು ಬೆಳೆದಿರುವುದನ್ನು ನೋಡಬಹುದು. ಇದನ್ನು ಬಾಶಾವಿಗ್ನಾನದಲ್ಲಿ ಪಿಜಿನ್ ಎನ್ನುತ್ತಾರೆ. ಇದನ್ನು ಕನ್ನಡ-ಪರ್‍ಶಿಯನ್ ಬರುತ್ತಿದ್ದವರು ಪರಸ್ಪರರ ಜೊತೆ ಮಾತನಾಡಬೇಕಾದಾಗ ಬಳಸುತ್ತಿದ್ದರು. ಮುಕ್ಯವಾಗಿ ಇದು ಮಾರುಕಟ್ಟೆ, ಮಿಲಿಟರಿ ಮೊದಲ್ಗೊಂಡು ಮನೆಯ ಹೊರಗಿನ ವಲಯಗಳಲ್ಲಿ ಬಳಕೆಯಾಗಿತ್ತಿದ್ದಿತು. ಕ್ರಮೇಣ ಇದು ಒಂದು ವ್ಯವಸ್ತೆಯಾಗಿ ಬೆಳೆಯಿತು. ಹಾಗೆ ಇದು ಮನೆಯ ಒಳಗಿನ ವಲಯಗಳನ್ನೂ ಆವರಿಸಿಕೊಂಡಿತು. ಮನೆಯೊಳಗೆ ಇದು ಬಂದ ಮೇಲೆ ಆ ಮನೆಯ ನಂತರದ ತಲೆಮಾರು ಇದನ್ನು ಎಳವೆಯಲ್ಲಿಯೆ ಕಲಿಯತೊಡಗಿತು. ಅಂದರೆ ಈಗ ಈ ಪಿಜಿನ್ ಅನ್ನು ತಾಯ್ಮಾತಿನಂತೆ ಕಲಿಯುವ ದೇಸಿಮಾತುಗರು ಬೆಳೆದರು. ತಾಯ್ಮಾತಿನ ಮಾತುಗರು ಬೆಳೆದ ಹಂತವನ್ನು ಬಾಶಾವಿಗ್ನಾನ ಕ್ರಿಯೋಲ್ ಎನ್ನುತ್ತದೆ. ದೇಸಿ ಮಾತುಗರು ಬೆಳೆದ ಮೇಲೆ ವ್ಯಾಕರಣ ಹೆಚ್ಚು ಸ್ಪಶ್ಟಗೊಳ್ಳುತ್ತದೆ. ಈಗ ಇದು ಬಾಶೆಯಾಗಿ ಬೆಳೆಯುತ್ತದೆ. ಹೀಗೆ ಉರ್‍ದು ಒಂದು ಬಾಶೆಯಾಗಿ ಬೆಳೆಯಿತು. ಹೀಗೆ ಕನ್ನಡ-ಪರ್‍ಶಿಯನ್ ಪರಸ್ಪರ ಬೆರೆತವು. ಇದರಲ್ಲಿ ಕನ್ನಡದ ವ್ಯಾಕರಣ ಮತ್ತು ಪರ್‍ಶಿಯನ್ನಿನ ಪದಕೋಶಗಳು ಬೇರೆಯುತ್ತವೆ. ಈಗಲೂ ಉರ್‍ದುವಿನ ವ್ಯಾಕರಣ ಹೆಚ್ಚಾಗಿ ಕನ್ನಡದ ವ್ಯಾಕರಣದ ಪಡಿಯಚ್ಚಿನಂತೆ ಇದೆ. ಹೀಗೆ ಉರ್‍ದು ಹುಟ್ಟಿದ್ದು ಕಲಬುರಗಿಯಲ್ಲಿಯೆ, ಕಲಬುರಗಿಯ ಅರಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿಯೆ, ಮಾರುಕಟ್ಟೆ, ಮಿಲಿಟರಿ ಮೊದಲಾದ ಪ್ರದೇಶದಲ್ಲಿದ್ದವರ ಸಲುವಾಗಿಯೆ. ಉರ್‍ದುವಿನ ಮೊದಮೊದಲ ಮಾತುಗರೂ ಈ ವಲಯಗಳಲ್ಲಿ ಬದುಕಿದ್ದವರೆ. ಈ ನೆಲದ ಬಡವರ ಬಾಶೆಯಾಗಿ ಉರ್‍ದು ಬೆಳೆಯುತ್ತದೆ. ಬಡವರ ಹತ್ತಿರಕ್ಕೆ ಬಂದ ಸೂಪಿ ಶರಣ ಬಂದೆ ನವಾಜ ಉರ್‍ದುವಿನಲ್ಲಿಯೆ ಮಾತನಾಡಿದ ಮತ್ತು ಬರೆದ. ಹೀಗೆ ಉರ್‍ದು ಬೇಗನೆ ಬರಹವನ್ನು ಪಡೆದುಕೊಂಡಿತು. ಕ್ರಮೇಣ ಅದು ಅರಮನೆಯ ಒಳಗೆ ಹೋಗುತ್ತದೆ. ಆದಿಲ್ ಶಾಹಿಗಳ ಕಾಲದಲ್ಲಿ ಹೆಚ್ಚೂಕಡಿಮೆ ಆಸ್ತಾನದ ಒಳಗೆ ವ್ಯಾಪಕವಾಗಿ ಆವರಿಸಿಕೊಳ್ಳುತ್ತದೆ.

ಬರಹದಲ್ಲಿ ಪರ್‍ಶಿಯನ್ ಉಳಿದುಕೊಂಡಿದ್ದರೂ ಉರ್‍ದು ವ್ಯಾಪಕವಾಗಿ ಬೆಳೆಯುತ್ತದೆ. ಸಂಗೀತ, ಸಾಹಿತ್ಯ, ಸೂಪಿ ಹೀಗೆ ಹಲವು ಕಡೆ ಉರ್‍ದು ಸಂಪದ್ಬರಿತವಾಗಿ ಬೆಳೆಯುತ್ತದೆ. ಆನಂತರ ಹಯ್ದರಾಬಾದ ನಿಜಾಮರು, ಸುರಪುರದ ದೊರೆಗಳು, ಹಾಗೆಯೆ ದೂರದ ಮಯ್ಸೂರಿನ ಒಡೆಯರೂ ಉರ್‍ದುವನ್ನು ಆಡಳಿತದಲ್ಲಿ ಬಳಸುತ್ತಾರೆ. ನಿಜಾಮರಲ್ಲಿ ಉರ್‍ದು ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಇದರಿಂದಾಗಿ ಆಡಳಿತದ ಸುತ್ತ ಇದ್ದ ಈ ಬಾಗದ ಲಿಂಗಾಯತ, ಬ್ರಾಹ್ಮಣ ಮೊದಲಾಗಿ ಮೇಲ್ಜಾತಿ-ಮೇಲ್ವರ್‍ಗದವರು ಉರ್‍ದುವನ್ನು ಬಹು ಆಸ್ತೆಯಿಂದ ಕಲಿಯುತ್ತಾರೆ. ಹೀಗೆ ದಕ್ಕನದ ಉರ್‍ದುವಿನ ಕತೆ. ಉತ್ತರದಲ್ಲಿಯೂ ಇಂತದೆ ಬೆಳವಣಿಗೆಗಳಲ್ಲಿ ಬೇರೆ ಬೇರೆ ಕಡೆ ಇಂತದೆ ಉರ್‍ದು ಹುಟ್ಟಿ ಬೆಳೆಯುತ್ತವೆ. ಸ್ವತಂತ್ರ ಕಾಲಕ್ಕೆ ಇವುಗಳನ್ನು ಉರ್‍ದು-ಹಿಂದಿ ಎಂದು ಎರಡು ಬಾಶೆಗಳಾಗಿ ಒಡೆದು ನಿಲ್ಲಿಸಲಾಗುತ್ತದೆ. ಹೀಗೆ ಕಲಬುರಗಿ ಉರ್‍ದುವಿನ ಹುಟ್ಟಿದೂರು, ಉರ್‍ದುವಿನ ನೆಲ.

-ಡಾ. ಬಸವರಾಜ ಕೋಡಗುಂಟಿ

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...