'ಉರುಳಿದ ಕಟ್ಟಡ ಮರಳಿದ ನೆನಪು'ಗಳಲ್ಲಿ ಮೂಡಿದ ಕೃತಿ


" ಒಬ್ಬ ಬರಹಗಾರ ರೂಪುಗೊಳ್ಳಲು ಹಲವು ವಿಚಾರಗಳು ಕೂಡಿಬರಬೇಕಾಗುತ್ತದೆ. ಬಾಲ್ಯದಿಂದಲೇ ನನ್ನಲ್ಲಿ ಓದುವ ಮತ್ತು ಬರೆಯವ ಸ್ಫೂರ್ತಿಯನ್ನು ತುಂಬಿದ, ಪ್ರೋತ್ಸಾಹಿಸಿದ ನನ್ನ ತಂದೆಯವರ ಒತ್ತಾಸೆಯನ್ನು ನೆನಪಿಸಿಕೊಳ್ಳಲೇಬೇಕು" ಎನ್ನುತ್ತಾರೆ ಲೇಖಕ ಶಶಿಧರ ಹಾಲಾಡಿ. ಅವರ ‘ಉರುಳಿದ ಕಟ್ಟಡ ಮರಳಿದ ನೆನಪು’ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...

ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಶುಕ್ರವಾರ “ಶಶಾಂಕಣ” ದಲ್ಲಿ ನಾನು ಬರೆದ ಅಂಕಣಗಳ ಸಂಗ್ರಹವಿದು. “ವಿಶ್ವವಾಣಿ” ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣಗಳಿಂದ ಆಯ್ದ ಬರಹಗಳು ಇಲ್ಲಿವೆ. ಇಲ್ಲಿ ಬಾಲ್ಯದ ನೆನಪುಗಳಿವೆ, ಪರಿಸರಕ್ಕೆ ಸಂಬಂಧಿಸಿದ ಅಂಕಣಗಳಿವೆ, ಕೆಲವು ಸಮಕಾಲೀನ ಸನ್ನಿವೇಶಗಳಿಗೆ ಸ್ಪಂದನೆಗಳ ರೂಪದಲ್ಲಿ ಹೊರಬಂದ ಬರಹಗಳಿವೆ, ಕೆಲವು ಅಂಕಣಗಳು ಐತಿಹಾಸಿಕ ವಿಷಯಗಳನ್ನೂ ಒಳಗೊಂಡಿವೆ. ಆದರೆ ಇವುಗಳ ಪೈಕಿ, ನನಗೆ ಹೆಚ್ಚು ಇಷ್ಟವಾದುದು ಪರಿಸರಕ್ಕೆ ಸಂಬಂಧಿಸಿದ ಮತ್ತು ಬಾಲ್ಯಕ್ಕೆ ಸಂಬಂಧಿಸಿದ ಬರಹಗಳು. ಇಂತಹ ಬರಹಗಳನ್ನು ಓದುಗರು ಸಹ ಹೆಚ್ಚು ಮೆಚ್ಚಿದ್ದಾರೆ.

ಒಬ್ಬ ಬರಹಗಾರ ರೂಪುಗೊಳ್ಳಲು ಹಲವು ವಿಚಾರಗಳು ಕೂಡಿಬರಬೇಕಾಗುತ್ತದೆ. ಬಾಲ್ಯದಿಂದಲೇ ನನ್ನಲ್ಲಿ ಓದುವ ಮತ್ತು ಬರೆಯವ ಸ್ಫೂರ್ತಿಯನ್ನು ತುಂಬಿದ, ಪ್ರೋತ್ಸಾಹಿಸಿದ ನನ್ನ ತಂದೆಯವರ ಒತ್ತಾಸೆಯನ್ನು ನೆನಪಿಸಿಕೊಳ್ಳಲೇಬೇಕು. ಸಾಹಿತ್ಯ ರಚನೆಯಲ್ಲಿ ನನ್ನಲ್ಲಿದ್ದ ಆಸಕ್ತಿಯನ್ನು ಕಂಡು, ಸದಾ ಕಾಲ “ನೀನು ಬರೆಯುತ್ತಾ ಹೋಗು” ಎಂದು ಪ್ರೋತ್ಸಾಹಿಸಿತ್ತಿದ್ದರು. ಸ್ವತಂತ್ರ ಪೂರ್ವ ಕಾಲದಲ್ಲಿ ಕೇವಲ ಆರನೆಯ ತರಗತಿಯ ತನಕ ಓದಿದ್ದ ಅವರು, ಸತಃ ಸಾಕಷ್ಟು ಸಾಹಿತ್ಯಾಭಿರುಚಿಯನ್ನು ರೂಢಿಸಿಕೊಂಡಿದ್ದರು. ಅವರ ಬಾಲ್ಯ ಮತ್ತು ಯುವದಿನಗಳಲ್ಲಿ ಸಾಕಷ್ಟು ಬರವಣಿಗೆಯನ್ನು ಮಾಡಿದ್ದರು, ಚಿತ್ರಗಳನ್ನು ಸಹ ಬಿಡಿಸುತ್ತಿದ್ದರು! ಬೆಂಗಳೂರಿನಲ್ಲಿ ಹೋಟೆಲ್ ಒಂದರಲ್ಲಿ ಮಾಣಿಯಾಗಿದ್ದ ಸಮಯದಲ್ಲಿ, ಎಂ.ಟಿ.ವಿ. ಆಚಾರ್ಯ ಅವರ ಚಿತ್ರಕಲಾ ಶಾಲೆಗೆ ಸೇರಿ, ಚಿತ್ರ ಬರೆಯುವುದನ್ನು ಅವರು ಕಲಿತಿದ್ದರು. ತಮ್ಮ ಗೆಳೆಯರ ಜತೆ ಸೇರಿಕೊಂಡು, “ಬಿರುಗಾಳಿ” ಎಂಬ ಕೈಬರಹದ ಪತ್ರಿಕೆಯನ್ನೂ ಅವರು ಹೊರತಂದದ್ದುಂಟು! ಅದಕ್ಕೆ ಮಾಸ್ಟ್ ಹೆಡ್ ರಚಿಸಿದ್ದರೂ ಅವರೇ; ಗೂಳಿಯೊಂದು ಗುಟುರು ಹಾಕುತ್ತಾ ಓಡುವ ಚಿತ್ರವನ್ನು ಅಲ್ಲಿ ಅವರು ಅಡಕಗೊಳಿಸಿದ್ದರು. ನಂತರದ ದಿನಗಳಲ್ಲಿ ಕೈಬರಹದಲ್ಲೇ ಅವರು ಕೆಲವು ಕಾದಂಬರಿಗಳನ್ನು ಅನುವಾದಿಸಿದ್ದುಂಟು.

ನೋಟ್‌ಬುಕ್‌ನಲ್ಲಿ ಅನುವಾದಿಸಿ ಬರೆದ ಅವುಗಳನ್ನು ಓದಲು ನನಗೆ ಕೊಡುತ್ತಿದ್ದರು. ಅವರ ಬರಹ ಸಾಹಸವನ್ನು ಕಂಡು ನನ್ನಲ್ಲೂ ಬರೆಯುವ ಉತ್ಸಾಹ ಮೂಡಿ ಬಂದಿದ್ದರೆ, ಅಚ್ಚರಿಯಿಲ್ಲ! ಅದಕ್ಕೇ ಇರಬಹುದು, ನಾನು ಮೊದಲ ಕಥೆಯನ್ನು ನಾಲ್ಕನೆಯ ತರಗತಿಯಲ್ಲಿ ಬರೆದಿದ್ದೆ! ಆರನೆಯ (ಅಥವಾ ಏಳನೆಯ) ತರಗತಿಯಲ್ಲಿದ್ದಾಗ, ನಾನು ಬರೆದಿದ್ದ ಮಕ್ಕಳ ಕಥೆಯೊಂದು “ನವಭಾರತ” ಪತ್ರಿಕೆಯಲ್ಲಿ ಬೆಳಕು ಕಂಡಿತ್ತು. ಇದೆಲ್ಲಾ ಏಕೆ ಹೇಳಿದೆನೆಂದರೆ, ಸಾಹಿತ್ಯ ಅಥವಾ ಕಲಾ ವಲಯದಲ್ಲಿ ಮುಂದುವರಿಯಲು ಹಿರಿಯರ ಒತ್ತಾಸೆ, ಪ್ರೋತ್ಸಾಹ ನಿಜಕ್ಕೂ ಅಮೂಲ್ಯ ನನ್ನ ತಂದೆಯವರ ತಂದೆಯವರು ಯಕ್ಷಗಾನದಲ್ಲಿ ನುರಿತಿದ್ದರಂತೆ; ಅವರ ತಂದೆಯವರು, ಅಂದರೆ ನನ್ನ ತಂದೆಯ ಅಜ್ಜನವರು ಯಕ್ಷಗಾನ ಪದಗಳನ್ನು ಹೇಳುತ್ತಿದ್ದರು ಮಾತ್ರವಲ್ಲ. ನಮ್ಮ ಹಳ್ಳಿಯವರಿಗೆ ಯಕ್ಷಗಾನ ಪದ್ಯಗಳನ್ನು ಹಾಡಲು ತರಬೇತಿ ನೀಡುತ್ತಿದ್ದರಂತೆ! ಆದ್ದರಿಂದ, ನನ್ನ ಬರವಣಿಗೆಯ ಹವ್ಯಾಸವು ಮುಂದುವರಿಯಲು ನನ್ನ ತಂದೆಯವರ ಪ್ರೋತ್ಸಾಹವನ್ನು ನಾನು ಸದಾಕಾಲ ನೆನೆಯುತ್ತಲೇ ಇರುತ್ತೇನೆ. ಅದೇ ರೀತಿ, ನನ್ನ ಕಾಲೇಜು ದಿನಗಳಲ್ಲಿ, ಕಾಲೇಜಿನ ಪಠ್ಯಕ್ಕಿಂತಲೂ ಹೆಚ್ಚು ಇತರ ಪುಸ್ತಕಗಳನ್ನು, ಅದರಲ್ಲೂ ಮುಖ್ಯವಾಗಿ ಲೈಬ್ರರಿಯಿಂದ ಎರವಲು ತಂದ ಕಾದಂಬರಿಗಳನ್ನು ಓದಲು ಮುಕ್ತ ಅವಕಾಶ ನೀಡಿದ ನನ್ನ ಅಮ್ಮ ಮತ್ತು ಅಮ್ಮಮ್ಮ ಇವರ ಪ್ರೋತ್ಸಾಹವೂ ಸ್ಮರಣಾರ್ಹ. ಅವರು ನೀಡಿದ ಆ ಸ್ವಾತಂತ್ರ್ಯದಿಂದಾಗಿ, ನಾನಾ ರೀತಿಯ ಕಾದಂಬರಿಗಳನ್ನು, ಇತರ ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ-ಓದುವ ಅವಕಾಶವಾಯಿತು.

ಈಚಿನ ವರ್ಷಗಳಲ್ಲಿ ನಮ್ಮ ಮನೆಯಲ್ಲಿ ಪುಸ್ತಕಗಳ ರಾಶಿ ಇದ್ದದ್ದೇ. ಅವುಗಳನ್ನು ಹರಡಿಕೊಂಡು, ಬಿಡುವಿನ ವೇಳೆಯಲ್ಲಿ ಓದುತ್ತಾ, ಬರೆಯುತ್ತಾ ಕುಳಿತಿರುವ ನನ್ನನ್ನು ಸಹಿಸಿಕೊಂಡು, ನನ್ನ ಈ ಹವ್ಯಾಸಕ್ಕೆ ಬೆಂಬಲ ನೀಡಿದ ನನ್ನ ಮಡದಿ ಮತ್ತು ಮಕ್ಕಳ ಪ್ರೋತ್ಸಾಹವಂತೂ ಅಪಾರ. ಕಾಲಕಾಲಕ್ಕೆ ಊಟ, ತಿಂಡಿ ಮತ್ತು ಇತರ ಅಗತ್ಯಗಳನ್ನು ನೋಡಿಕೊಂಡು, ನನ್ನ ಬರವಣಿಗೆಯ ಸಾಹಸವನ್ನು ಮುಂದುವರಿಸಲು ಅನುವು ಮಾಡಿಕೊಟ್ಟ ಮಡದಿಯ ಪ್ರೋತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

MORE FEATURES

`ನಾಗರ ನುಂಗಿದ ನವಿಲುʼ ಸಂಕಲನದ 54 ಕವಿತೆಗಳೂ ಭಾಷೆಯನ್ನು ಹೊಸದುಗೊಳಿಸಿವೆ: ಪುರುಷೋತ್ತಮ ಬಿಳಿಮಲೆ

01-06-2023 ಬೆಂಗಳೂರು

`ನಾಗರ ನುಂಗಿದ ನವಿಲುʼ ಸಂಕಲನದ 54 ಕವಿತೆಗಳೂ ಭಾಷೆಯನ್ನು ಹೊಸದುಗೊಳಿಸಿವೆ. ರೂಪಕಗಳನ್ನು ಮರುರೂಪಿಸಿವೆ. ಸಮಕಾಲೀನ ಬದುಕ...

ನೋಟದಲ್ಲಿ ಹುಡುಕಾಟವಿದ್ದರೆ ಪುಟ್ಟ ವಿಷಯವೂ ದೊಡ್ಡ ಪಾಠ ಶಾಲೆಯಾಗುತ್ತದೆ

01-06-2023 ಬೆಂಗಳೂರು

"ಮನುಷ್ಯ ಕೆಟ್ಟವನೆನಿಸಿಕೊಳ್ಳುವುದು ಹಿಂದೆ ಮುಂದೆ ಯೋಚಿಸದೆ ಹರಿಬಿಡುವ ತನ್ನ ನಾಲಿಗೆಯಿಂದಲೇ. ಮಾತು ಮಧುರವಾಗಿದ್ದ...

ಚೈತನ್ಯವನ್ನು ಆನಂದಮಯವಾಗಿರಿಸಿರುವ ಕಲೆಯೆಂದರೆ ಯಕ್ಷಗಾನ : ಸೃಜನ್‌ ಗಣೇಶ್‌ ಹೆಗಡೆ

01-06-2023 ಬೆಂಗಳೂರು

"ಕಾಲ ಬದಲಾದಂತೆಯೆ ಕಲೆಯ ಮತ್ತು ಕಲಾವಿದರ ಮನಃಸ್ಥಿತಿಗಳಾಗಲಿ ವ್ಯವಸ್ಥೆಗಳಾಗಲಿ ಬದಲಾಗಿದೆಯಾದರೂ ಯಕ್ಷಗಾನ ಕಲೆ ಅಂದ...