ಉತ್ತಮ ತಂತ್ರ-ನಿರೂಪಣಾ ಶೈಲಿಯ ಪತ್ತೇದಾರಿ ಕಾದಂಬರಿ ‘ಬೇಟೆ’


ಕನ್ನಡ ಸಾಹಿತ್ಯದಲ್ಲಿ ‘ಪತ್ತೇದಾರಿ ಕಾದಂಬರಿ’ ರಚನೆಯ ತೀವ್ರತೆ ಕಳೆದುಕೊಳ್ಳುವ ಸಂದರ್ಭದಲ್ಲಿ ಈ ಪ್ರಕಾರವನ್ನೇ ಇಷ್ಟಪಟ್ಟು ತಮ್ಮ ಮೊದಲ ಕಾದಂಬರಿಯಾಗಿಸಿರುವ ಲೇಖಕಿ ಶೈನಾ ಶ್ರೀನಿವಾಸ ಶೆಟ್ಟಿ ಅವರ ‘ಬೇಟೆ’ ಕೃತಿಯು, ಉತ್ತಮ ಕೃತಿಯೊಂದರ ಎಲ್ಲ ಗುಣ ವಿಶೇಷಗಳನ್ನು ಒಳಗೊಂಡಿದ್ದು, ಸದ್ಯಕ್ಕಂತೂ, ಗುಪ್ತಗಾಮಿನಿಯಂತಿರುವ ‘ಪತ್ತೇದಾರಿ ಕಾದಂಬರಿ’ಯ ಹರವುವನ್ನು ತೋರಿದ್ದಾರೆ ಎಂದು ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ ಬರಹವಿದು;

ವ್ಯಕ್ತಿ-ವಿಷಯ-ಘಟನೆಗಳ ನಿಗೂಢತೆಯನ್ನು ಕಾಯ್ದುಕೊಳ್ಳುತ್ತಲೇ, ಬರಹದ ಕೊನೆಯವರೆಗೂ ಓದುವ ಅನಿವಾರ್ಯತೆಯನ್ನು ಸೃಷ್ಟಿಸುವ ‘ಪತ್ತೇದಾರಿ’ ಗುಣವಿಶೇಷದ ಕಾದಂಬರಿಗಳು, ಆಂಗ್ಲ ಸಾಹಿತ್ಯಕ್ಕೆ ಹೋಲಿಸಿದರೆ, ಕನ್ನಡ ಸಾಹಿತ್ಯಕ್ಕೆ ತೀರಾ ಹೊಸದು. ಎನ್. ನರಸಿಂಹಯ್ಯನವರು, ಓದುಗರಿಗೆ ಪತ್ತೇದಾರಿ ಕಾದಂಬರಿಗಳ ರುಚಿ ತೋರಿದರು. ನಂತರ ಬಂದ ಎಚ್.ಕೆ. ಅನಂತರಾಮ್, ಸುದರ್ಶನ ದೇಸಾಯಿ ಸೇರಿದಂತೆ ಕೆಲವೇ ಜನರು ಈ ಮಾರ್ಗದಲ್ಲಿ ಕಾಣಿಸಿಕೊಂಡರೂ; ಈ ಕ್ಷೇತ್ರವು, ನದಿಯ ನೀರು ತೊರೆಯಾಗಿ ಕೊನೆಗೆ ಬತ್ತಿದ ಒರತೆಯಾದ ಸಂಗತಿಯನ್ನು ತಳ್ಳಿ ಹಾಕುವಂತಿಲ್ಲ. ಒಂದಂತೂ ಸ್ಪಷ್ಟ. ಪತ್ತೇದಾರಿ ಕಾದಂಬರಿ ಬರೆಯಲು ಹತ್ತು ಹಲವು ಜ್ಞಾನಶಾಖೆಗಳ ಅರಿವಿರಬೇಕು. ಕಲ್ಪನಾ ಸಾಮರ್ಥ್ಯವು ಸಮೃದ್ಧವಾಗಿರಬೇಕು. ಕೊಲೆ, ಸುಲಿಗೆ, ಶೃಂಗಾರ ಸನ್ನಿವೇಶಗಳ ಹೀಗೆ ಸುದೀರ್ಘ ವಿವರಣೆ, ಮುಂದೆ ಏನಾಗುತ್ತದೋ…! ಎಂಬ ಕುತೂಹಲದ ‘ಎಕ್ಸಲ್ ರೇಟರ್’ ಮಾತ್ರ ಗರಿಷ್ಠವಾಗಿರಬೇಕು..ಹೀಗೆ ಹಲವು ಅಂಶಗಳ ಅರ್ಹತೆಗಳನ್ನು ನಿರ್ಲಕ್ಷಿಸುವಂತಿಲ್ಲ. ‘ಪತ್ತೇದಾರಿ ಕಾದಂಬರಿಗಳಿಗೆ ಓದುಗರಿದ್ದೂ, ಬರೆಯುವವರಿಲ್ಲ’ ಎಂಬ ವಿಚಾರವೂ ಇದೆ. ಏನೇ ಇರಲಿ; ಕನ್ನಡ ಸಾಹಿತ್ಯದಲ್ಲಿ ಪತ್ತೇದಾರಿ ಕಾದಂಬರಿಗಳ ಸೃಷ್ಟಿಯು ಗುಪ್ತಗಾಮಿನಿಯಂತೆ ತನ್ನ ಹರಿವು ಸಾಬೀತುಪಡಿಸುತ್ತಿದೆ ಎಂಬುದಕ್ಕೆ ಶೈನಾ ಶ್ರೀನಿವಾಸ ಶೆಟ್ಟಿ ಅವರ ‘ಬೇಟೆ’ ಕಾದಂಬರಿಯು, ಹತ್ತು ಹಲವು ರೀತಿಯಲ್ಲಿ ಹೊಸ ಭರವಸೆಗಳನ್ನು ಹುಟ್ಟಿಸುತ್ತದೆ. ಈ ಕೃತಿಯನ್ನು ಲೇಖಕಿಯು ‘ಕಾದಂಬರಿ’ ಎಂದೇ ಹೇಳಿಕೊಂಡಿದ್ದು, ನಿಗೂಢತೆಯನ್ನು ಕಾಯ್ದುಕೊಂಡೇ ಸಾಗುವ ನಿರೂಪಣಾ ಶೈಲಿ ಮಾತ್ರ ‘ಪತ್ತೇದಾರಿ’ಯ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.

ಕುಂದಾಪುರದ ಕರಾವಳಿಯ ಹಸಿರು, ಬೆಟ್ಟ, ಕಣಿವೆ, ನೀರು, ಕಡಲ ಅಬ್ಬರ ಹೀಗೆ ವೈವಿಧ್ಯಮಯ ಚಿತ್ರಣದ ಆಕರ್ಷಣೆ ಹಾಗೂ ವೈಶಿಷ್ಟ್ಯಗಳನ್ನು ಕಥಾನಾಯಕಿ ವೈಷ್ಣವಿಯ ಬಾಲ್ಯದ ಅನುಭವಗಳೊಂದಿಗೆ ಆರಂಭವಾಗುವ ಕಾದಂಬರಿಯು, ಮದುವೆ ನಂತರವೂ ಅದೇ ಪರಿಸರದಲ್ಲಿ ಈ ಕಥಾನಾಯಕಿಗೆ ಸರ್ಕಾರಿ ಉದ್ಯೋಗದ ಭಾಗ್ಯ. ಆದರೆ, ಆ ಪರಿಸರದಲ್ಲಿ ಸಂಭವಿಸುವ ದುರಂತಗಳು, ಅವುಗಳ ಕಾರಣಗಳ ಹುಡುಕಾಟವೇ ಇಲ್ಲಿಯ ಕಥಾವಸ್ತು. ಒಬ್ಬ ಸಾಧಾರಣ ವ್ಯಕ್ತಿ, ಊಹಿಸಲೂ ಸಾಧ್ಯವಿಲ್ಲ ಎನ್ನಬಹುದಾದ ಅಲಕ್ಷ್ಯಕ್ಕೆ ಅರ್ಹನಾದ ವ್ಯಕ್ತಿಯೊಬ್ಬ ಖಳನಾಯಕನಾಗಿ, ಒಟ್ಟು ಆರು ವ್ಯಕ್ತಿಗಳನ್ನು ಕೊಲ್ಲುತ್ತಾನೆ. ಈ ಸರಣಿ ಹತ್ಯೆಯ ಹಿಂದೆ ಒಂದು ಕ್ಷುಲ್ಲಕ ಕಾರಣ- ಮೆಣಸು ಕಾಳುಗಳ ಆತನ ಕಳವು ಬಯಲಾದದ್ದು. ಇದನ್ನು ಮುಚ್ಚಿಕೊಳ್ಳಲು ಒಂದು ಕೊಲೆ, ಆ ಕೊಲೆಯನ್ನು ರಹಸ್ಯವಾಗಿಡಲು ಮತ್ತೊಂದು ಕೊಲೆ... ಹೀಗೆ ಸರಣಿಯಲ್ಲಿ ಆರು ಜೀವಗಳ ಹತ್ಯೆಯಾಗುವುದು. ವಿಶೇಷ ಎಂದರೆ, ಈ ಎಲ್ಲ ಜೀವಹರಣದ ಪ್ರಕರಣಗಳು, ವ್ಯಕ್ತಿಯೊಬ್ಬನಿಂದಾಗದೇ, ಹುಲಿ ದಾಳಿಯಿಂದಾಗಿವೆ ಎಂಬಂತೆ ಬಿಂಬಿಸಿ, ಹುಡುಕಾಟ ಹಾಗೂ ಗೊಂದಲದ ತೀವ್ರತೆ ಹೆಚ್ಚಿಸಿ, ತನಿಖೆಯು ಮತ್ತಷ್ಟು ಆಳವಾಗುತ್ತಾ, ಓದುಗರ ಕುತೂಹಲ ಕೆರಳಿಸುವ ಎಲ್ಲ ಗುಣಗಳನ್ನು ‘ಬೇಟೆ’ ಒಳಗೊಂಡಿದೆ. ಈ ಪ್ರಕರಣದ ಹಿಂದೆ ಒಬ್ಬ ಹಂತಕನಿದ್ದಾನೆ ಎಂಬುದರ ಬದಲಿಗೆ ಹುಲಿಯಂತಹ ಒಂದು ಪ್ರಾಣಿ ಇದೆ ಎಂಬಷ್ಟು ಖಚಿತವಾಗಿ ಬಿಂಬಿಸುವ ‘ತಂತ್ರ’ವು ಲೇಖಕಿಯ ಅಸಾಧಾರಣ ಕಲ್ಪನಾ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತದೆ.

ತೋಟದ ಕೂಲಿಯೇ ಖಳನಾಯಕ: ಪ್ರಾಣಿಗಳ ಚರ್ಮ, ಉಗುರು, ಕೊಂಬು ಇತ್ಯಾದಿ ಸಂಗ್ರಹದ ಒಂದು ತಾಣವಾಗಿರುವ ಕಥಾನಾಯಕಿಯ ಮನೆಯಿಂದಲೇ ಹುಲಿಯ ಚರ್ಮ, ಹುಲಿಯ ಉಗುರನ್ನುಕಳವು ಮಾಡಿ, ಅವುಗಳನ್ನು ಧರಿಸಿ, ರಾತ್ರಿ ಹೊತ್ತಲ್ಲಿ ಹುಲಿ ದಾಳಿ ನಡೆಸಿದೆ ಎಂಬಂತೆ, ಆ ಮೃತ ದೇಹದ ಮೇಲೆ ಉಗುರುಗಳಿಂದ ಹರಿದ ಗಾಯಗಳನ್ನು ಮಾಡಿ, ತನಗೇನು ಗೊತ್ತಿಲ್ಲ ಎಂಬಂತೆ ಅಮಾಯಕನ ಫೋಜು ಕೊಡುತ್ತಿದ್ದ ಈ ತೋಟಿಗ ಹೆಸರು-ಜಾಣು. ತಾನು ಕಾವಲಿರುವ ತೋಟದಿಂದಲೇ ಮೆಣಸು ಕಾಳಗಳನ್ನು ಕಳವು ಮಾಡುವಾಗ ಯಜಮಾನಿಯ ಕೈಗೆ ಸಿಕ್ಕು ಬಿದ್ದು, ಈ ಅಪಮಾನದಿಂದ ಕುದಿಯುವ ಈತ ಯಜಮಾನಿಯನ್ನು ಹತ್ಯೆ ಮಾಡುತ್ತಾನೆ. ದೇಹದ ಮೇಲೆ ಹುಲಿ ಉಗುರುಗಳ ಗುರುತಿರುವ ಕಾರಣಕ್ಕೆ ‘ಹುಲಿ ದಾಳಿ’ ಪ್ರಕರಣ ದಾಖಲಾಗುತ್ತದೆ. ಎಷ್ಟೇ ಎಚ್ಚರಿಕೆಯಿಂದ ಸಾಕ್ಷಿಗಳನ್ನು ನಾಶ ಮಾಡಿದರೂ ಕೆಲವೊಂದು ಸಾಕ್ಷಿಗಳನ್ನು ಕೊಲೆಗಾರ ಮರೆತುಬಿಟ್ಟಿರುತ್ತಾನೆ ಎಂಬ ಮಾತಿಗೆ ಪೂರಕವಾಗಿ ಒಂದು ಹತ್ಯ ಜರುಗಿದಾಗ ಮತ್ತೊಂದು ಪಾತ್ರ ನೋಡುತ್ತದೆ . ಅದನ್ನು ಮುಗಿಸುವ ಹೊತ್ತಿಗೆ ಮಗದೊಂದು ಪಾತ್ರ ಸಾಕ್ಷಿಯಾಗುತ್ತದೆ. ಹೀಗೆ ಸಾಕ್ಷಿಗಳ ನಾಶದಲ್ಲೇ ಸುತ್ತುವ ಖಳನಾಯಕ, ವೈದ್ಯರು, ಲ್ಯಾಬ್ ಅಸಿಸ್ಟಂಟ್ ಸೇರಿ ಒಟ್ಟು ಆರು ಜನರು ಹತ್ಯೆಯಾಗುತ್ತದೆ. ಈ ಹಂತಕನ ಜೊತೆ ಇನ್ನಿಬ್ಬರು ಸೇರಿ, ತಮಗೆ ತೊಡಕಾದ ವ್ಯಕ್ತಿಗಳ ಹತ್ಯೆ ಸಂಚು ರೂಪಿಸಿ, ಕೆಲವೆಡೆ ಯಶಸ್ವಿಯಾದರೆ, ಕೆಲವೆಡೆ ಅರ್ಧ ಯಶಸ್ಸು ಕಾಣುತ್ತಾರೆ. ಹೀಗೆ, ಕಥೆಯು ಹತ್ಯೆ ಪ್ರಕರಣಗಳ ಸರಣಿಯಾಗಿ ಮುಂದುವರಿಯುತ್ತದೆ.

ಕಥಾನಾಯಕಿಯೂ ತನಿಖಾಧಿಕಾರಿ: ತಾನೊಬ್ಬ ಗ್ರಾಮ ಅಭಿವೃದ್ಧಿ ಅಧಿಕಾರಿ (ಪಿಡಿಓ) ಎಂದು ಮೊದಮೊದಲು ಬಿಂಬಿಸುವ ಕಥಾನಾಯಕಿ, ತನಿಖೆಯ ಪ್ರಕರಣಗಳು ತಮ್ಮ ನಿಗೂಢತೆಯನ್ನು ಹಂತಹಂತವಾಗಿ ಬಿಚ್ಚಿಕೊಳ್ಳುತ್ತಿದ್ದಂತೆ ಅವಳೇ ‘ತನಿಖಾಧಿಕಾರಿ’ ಎಂದು ಅಚ್ಚರಿ ಮೂಡಿಸುವುದು, ಪಿಡಿಓ ಇದ್ದು ಪೊಲೀಸ್ ಅಧಿಕಾರಿಯಂತೆ ಸಾಕ್ಷ್ಯಗಳ ಸಂಗ್ರಹದಲ್ಲಿ ಆಸಕ್ತಿ ತೋರುವ ಕಥಾನಾಯಕಿ, ತನ್ನ ಕರ್ತವ್ಯ ನಿರ್ವಹಿಸುತ್ತಾಳೆ ಎಂದ ರಹಸ್ಯವನ್ನು ಪತಿ ಸೇರಿದಂತೆ ಕುಟುಂಬದ ಯಾವುದೇ ಸದಸ್ಯರಿಗೂ ತಿಳಿದಿರುವುದಿಲ್ಲ. ಅಷ್ಟೇಕೆ? ಸಂಶಯಾತ್ಮಕ ವ್ಯಕ್ತಿಗಳಿಂದ ಮಾಹಿತಿ ಪಡೆಯುವ ಪೊಲೀಸ್ ಅಧಿಕಾರಿಗೂ ತಿಳಿಯದು. ಸರಣಿ ಹಂತಕನ ಪತ್ತೆ ಮಾಡುವ ಕಥಾನಾಯಕಿ, ವಿಷಯವನ್ನು ಒಂದಾದ ನಂತರ ಮತ್ತೊಂದಂತೆ ವಿವರಿಸುತ್ತಾ, ಹಂತಕ ‘ಜಾಣು’, ಆತ ಹತ್ಯೆ ಮಾಡುವ ಪರಿ, ಹುಲಿ ದಾಳಿಯಿಂದ ವ್ಯಕ್ತಿ ಸತ್ತ ಎಂಬಂತೆ ತೋರಿಸಲು ಹುಲಿ ವೇಷ ಹಾಗೂ ಉಗುರುಗಳನ್ನು ತಮ್ಮ ಯಜಮಾನರ ಮನೆಯಿಂದಲೇ ಕದ್ದಿರುತ್ತಾನೆ. ಅದರಿಂದಲೇ, ಮನೆಯ ಯಜಮಾನಿ ಸೇರಿದಂತೆ ಆರು ಜನರನ್ನು ಹತ್ಯೆ ಮಾಡುತ್ತಿರುತ್ತಾನೆ. ಮೃತದೇಹಗಳ ಪರೀಕ್ಷೆಯು ‘ಹುಲಿ ದಾಳಿ’ ಸಾಕ್ಷ್ಯ ನೀಡುತ್ತಿತ್ತೇ ವಿನಃ ವ್ಯಕ್ತಿಯ ಸುಳಿವು ನೀಡುತ್ತಿರಲಿಲ್ಲ. ಒಂದು ಹಂತದಲ್ಲಿ, ‘ವಿಷಯ ಬಹಿರಂಗ ಪಡಿಸಿದರೆ ಹುಷಾರ್’ ಎಂದು ಹೆದರಿಕೆ ಹಾಕುವ ಸಂದರ್ಭದ ಪಾತ್ರ -ಗೌರಿ, ಆಕೆಯ ಕಿವಿಯೋಲೆಗೆ ಸಿಕ್ಕ ಹಂತಕ ಕೂದಲು, ಈ ಸಾಕ್ಷ್ಯ ಹಿಡಿದು, ಅದು ‘ಜಾಣು’ವಿನದ್ದು ಎಂದು ವಿಧಿವಿಜ್ಞಾನ ಪರೀಕ್ಷೆ ತಿಳಿಸುತ್ತದೆ. ಹೀಗೆ, ಕಥಾನಾಯಕಿಯಿಂದ ಸಾಕ್ಷ್ಯಗಳ ಸಂಗ್ರಹವಾಗಿದ್ದು, ಪೊಲೀಸರಿಗೂ ತಿಳಿಯದು. ಸಾಮನ್ಯವಾಗಿ, ಬಹುತೇಕ ಪತ್ತೇದಾರಿ ಕಾದಂಬರಿಯಲ್ಲಿ ತನಿಖಾಧಿಕಾರಿಗಳು ಪುರುಷರೇ ಆಗಿದ್ದು, ತಮ್ಮ ತನಿಖೆಗೆ ಪೂರಕವಾಗಿ ಮಹಿಳೆಯ ಸಹಕಾರವನ್ನು ಬಳಸಿಕೊಳ್ಳುವುದನ್ನು ಕಾಣುತ್ತೇವೆ. ಆದರೆ, ಕಾದಂಬರಿಯಲ್ಲಿ.ಮಹಿಳೆಯೇ ತನಿಖಾಧಿಕಾರಿಯಾಗಿದ್ದು, ಬರೆದವರು ಸಹ ಲೇಖಕಿಯೇ ಆಗಿದ್ದರಿಂದ, ಮಹಿಳಾ ಶಕ್ತಿಯ-ಜಾಣ್ಮೆಯ ದರ್ಶನ ಮಾಡಿಸಿದ್ದು ಕಾದಂಬರಿಯ ವಿಶೇಷ.

ಮನೋವೈಜ್ಞಾನಿಕ ಪಾತ್ರ : ಮೇಲ್ನೋಟಕ್ಕೆ ಸಾಮಾನ್ಯನಂತೆ ಕಂಡರೂ ವಿಚಾರಗಳು ಭಯಂಕರವಾಗಿರುವ ವ್ಯಕ್ತಿಯನ್ನು ಮನೋವೈಜ್ಞಾನಿಕವಾಗಿ ‘ಸೈಕೋಪಾತ್’ ಎನ್ನಲಾಗುತ್ತದೆ. ತಾನೊಬ್ಬ ‘ಹಂತಕ’ ‘ಅಪಾಯಕಾರಿ’ ಎಂಬುದರ ಕಿಂಚಿತ್ತೂ ಸುಳಿವು ನೀಡಲಾರ. ಸಮಯ ಸಿಗುತ್ತಲೇ ಊಹೆಗೂ ಮೀರಿದ ಅಪಾಯ ಮಾಡುತ್ತಾನೆ. ಆತನ ವಿಚಾರ-ಭಾವ ಹಾಗೂ ವರ್ತನೆಯಲ್ಲಿ ಕಲ್ಪನೆಗೂ ಮೀರಿದ ಭೀಕರತೆ ಇರುತ್ತದೆ. ಕರುಣಾಮಯಿಯಂತೆ ತೋರುವ ಆತನ ಮನಸ್ಸಿನಲ್ಲಿ ಹಸಿದ ಹೆಬ್ಬುಲಿಯೊಂದು ಬೇಟೆಗಾಗಿ ಘರ್ಜಿಸುತ್ತಿರುತ್ತದೆ. ಹೊಂಚು ಹಾಕುತ್ತಿರುತ್ತದೆ. ಬೇಟೆಯನ್ನು ಸಮೀಪಿಸುತ್ತಿದ್ದಂತೆ ವೇಗ ಓಡುವ ವೇಗ ಹೆಚ್ಚಿಸಿಕೊಂಡು, ಬೇಟೆ ತಪ್ಪದಂತೆ ದಾಳಿ ಮಾಡುತ್ತದೆ. ಅದು ಪ್ರಾಣಿಯಾದ್ದರಿಂದ, ಹೆಜ್ಜೆಗಳ ಗುರುತು ಬಿಟ್ಟುಹೋಗುತ್ತದೆ. ಆದರೆ, ಈ ಸೈಕೋಪಾತ್ ಮಾತ್ರ ಪ್ರಜ್ಞಾಪೂರ್ವಕವಾಗಿ ಸಾಕ್ಷ್ಯಗಳ ನಾಶಕ್ಕೆ ಯತ್ನಿಸುತ್ತಾನೆ. ಆದರೂ, ಅಪ್ರಜ್ಙಾಪೂರ್ವಕವಾಗಿ ನಡೆಯುವ ಪ್ರಕ್ರಿಯೆಯಲ್ಲಿ ಗುರುತುಗಳು ಉಳಿದುಕೊಳ್ಳುತ್ತವೆ. ಅವನ್ನು ಗುರುತಿಸುವ ಸೂಕ್ಷ್ಮತೆಯು ತನಿಖಾಧಿಕಾರಿಯ ದಿಟ್ಟತನ, ದೃಷ್ಟಿಕೋನ, ಜಾಣ್ಮೆ ಎಲ್ಲವನ್ನೂ ಅವಲಂಬಿಸುತ್ತದೆ. ಸೈಕೋಪಾತ್ ನಂತಹ ಅಪಾಯಕಾರಿ ಮನಸ್ಥಿತಿಯ ಪಾತ್ರದ ಎಲ್ಲ ಗುಣ ಲಕ್ಷಣಗಳನ್ನು ‘ಜಾಣು’ ವಿನ ವಿಚಾರ-ಭಾವ-ವರ್ತನೆಯಲ್ಲಿ ತೋರಿದ್ದು, ಮನೋವೈಜ್ಞಾನಿಕ ಅಧ್ಯಯನಕ್ಕೆ ಪೂರಕ ಸಾಮಗ್ರಿಗಳನ್ನು ಒದಗಿಸುತ್ತದೆ.

(ಪುಟ:112, ಬೆಲೆ: 120, ಹೆಚ್.ಎಸ್. ಆರ್.ಎ. ಪ್ರಕಾಶನ, 2021)

MORE FEATURES

ಓದುಗರಿದ್ದೆಡೆ ಪುಸ್ತಕ ತಲುಪಿಸುವುದ...

16-10-2021 ಬೆಂಗಳೂರು

ಭಾರತೀಯ ಪುಸ್ತಕ ವಲಯದ ಅತಿ ದೊಡ್ಡ ಭಂಡಾರ ಎಂದೇ ಖ್ಯಾತಿಯ ಸಪ್ನ ಬುಕ್ ಹೌಸ್, ಓದುಗ-ಲೇಖಕ-ಪ್ರಕಾಶಕ ಹೀಗೆ ಪುಸ್ತಕೋದ್ಯಮದ ...

ಮೂಲಭೂತವಾದವನ್ನು ಜಿಕೆಜಿ ಅದರ ಎಲ್ಲ...

16-10-2021 ಬೆಂಗಳೂರು

‘ಜಿಕೆಜಿ ಸಾರ್ವಜನಿಕ ಬುದ್ಧಿಜೀವಿಯಾದವರು ಹೇಗಿರಬೇಕು ಎನ್ನುವುದರ ಬಗ್ಗೆ ಆಳವಾಗಿ ಯೋಚಿಸಿ, ತಮ್ಮದೇ ಆದ ನಿಲುವನ್ನ...

"ಗಾಂಧಿ ನೇಯ್ದಿಟ್ಟ ಬಟ್ಟೆಯ ಬಿಡಿಸಿ...

16-10-2021 ಬೆಂಗಳೂರು

‘ಅಂತರಂಗದ ಆಲಯಕ್ಕೆ ಸುಲಭವಾಗಿ ಬಿಟ್ಟುಕೊಳ್ಳುವ ರಾಯಸಾಬರ ಕವಿತೆಗಳು, ಅಷ್ಟು ಸುಲಭಕ್ಕೆ ಹೊರಹೋಗಲು ಬಿಡದೆ ಕಾಯ್ದು...