ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ

Date: 27-02-2023

Location: ಬೆಂಗಳೂರು


“ದಾಸಿಮಯ್ಯನ ವ್ಯಕ್ತಿತ್ವವನ್ನು ಬೆಳಗಿಸುವಲ್ಲಿ ದುಗ್ಗಳೆ ಪ್ರಮುಖ ಪಾತ್ರವಹಿಸಿದ್ದಳೆಂದು ಈ ವಚನದಿಂದ ತಿಳಿದುಬರುತ್ತದೆ. ಸಾಮಾನ್ಯವಾಗಿ ವಚನಕಾರ್ತಿಯರು ತಮ್ಮ ಪತಿಯನ್ನು ಕೊಂಡಾಡಿದ್ದಾರೆ. ಆದರೆ ದಾಸಿಮಯ್ಯ ಇಲ್ಲಿ ತನ್ನ ಪತ್ನಿಯನ್ನು ಕೊಂಡಾಡುತ್ತಿರುವುದು ವಿಶೇಷವಾಗಿದೆ,” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಕಾರ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ ಕುರಿತು ಬರೆದಿದ್ದಾರೆ...

ಆದ್ಯ ವಚನಕಾರ ಜೇಡರ ದಾಸಿಮಯ್ಯನ ಪತ್ನಿಯೇ ದುಗ್ಗಳೆ. 1148ರ ಗೊಬ್ಬೂರು ಶಾಸನದಲ್ಲಿ "ಜಾಡ ಕುಲತಿಲಕ ಜಾಡದಾಸಿಮಯ್ಯ" ಎಂಬ ಮಾತು ಬರುತ್ತದೆ. ಇದರಿಂದ ಈತ ಜಾಡರವನಾಗಿದ್ದು, ನೇಯ್ಗೆ ಕಾಯಕ ಮಾಡುತ್ತಿದ್ದನೆಂದು ತಿಳಿದು ಬರುತ್ತದೆ. ಈತನ ಕಾಲವನ್ನು ಕ್ರಿ.ಶ.1130 ರಿಂದ 1150ರ ನಡುವೆಯೆಂದು ಹೇಳಲಾಗಿದೆ. ದುಗ್ಗಳೆ, ದಾಸಿಮಯ್ಯನ ನಿಧನದ ನಂತರವೂ ಬದುಕಿದ್ದು ಈಕೆಯ ಕಾಲವನ್ನು ಕ್ರಿ.ಶ.1160 ಎಂದು ತಿಳಿಯಬಹುದಾಗಿದೆ. ಸುರಪುರ ತಾಲೂಕಿನ ಮುದನೂರಿನ ಕರಿಕಾಲದಂಡ ಕಾಮಯ್ಯ ಮತ್ತು ಶಂಕರಿ ದಂಪತಿಗಳ ಮಗನಾಗಿ ದಾಸಿಮಯ್ಯ ಜನಿಸುತ್ತಾನೆ.

ಮುದನೂರಿನ ನೇಯ್ಗೆಯ ಸಂಗಣ್ಣ ಮತ್ತು ಶ್ರೀದೇವಿಯರ ಮಗಳಾಗಿ ದುಗ್ಗಳೆ ಜನಿಸುತ್ತಾಳೆ. ಈಕೆ ಬಲು ಚತುರೆಯಾಗಿದ್ದಳೆಂದು ತಿಳಿದು ಬರುತ್ತದೆ. "ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ" ಕೃತಿಯಲ್ಲಿ ಒಂದು ಕಥೆ ಬರುತ್ತದೆ. ದಾಸಿಮಯ್ಯ ತಾನು ಗೃಹಸ್ಥಧರ್ಮವನ್ನು ಸ್ವೀಕರಿಸಬೇಕೆಂದಾಗ ತನ್ನನ್ನು ಚೆನ್ನಾಗಿ ಅರಿಯಬಲ್ಲ ಚತುರೆಯನ್ನು ಮದುವೆಯಾಗಬೇಕೆಂದು ತಿಳಿದು ಒಂದು ಉಪಾಯವನ್ನು ಮಾಡುತ್ತಾನೆ. ಒಂದು ಗಂಟಿನಲ್ಲಿ ಮಣ್ಣನ್ನು, ಮತ್ತೊಂದು ಗಂಟಿನಲ್ಲಿ ಅಕ್ಕಿಯನ್ನು, ಒಂದು ಕಬ್ಬಿನ ಕೋಲನ್ನು ಕೈಯಲ್ಲಿ ಹಿಡಿದುಕೊಂಡು "ಕಟ್ಟಿಗೆಯ ಮುಟ್ಟದೆ ಕಿಚ್ಚನೊಟ್ಟಿ, ನೀರ ಮುಟ್ಟದೆ ಮಳಲಕ್ಕಿಯಂ ಪಾಯಸವ ಮಾಡುವಲ್ಲಿ, ಕರಿಯ ಕಬ್ಬಿನಕೋಲ ಬಳೆಯೊಳಗಿಕ್ಕಿ ಬೆಂಕಿಯನುರುಹಿ ಮಳಲಕ್ಕಿಯಂ ಕೂಡಿ, ಪಾಯಸವಂ ಮಾಡಿ ನೀಡಿದಡೆ ಅಂತಪ್ಪ ಸ್ತ್ರೀಯಂ ಮದುವೆಯಾಗುವೆನೆಂದು" ಹೇಳುತ್ತ ದೇಶಾಟನೆ ಮಾಡುತ್ತಾನೆ. (ನೋಡಿ- ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಪು- 387, ಧಾರವಾಡ, 1968) ಮುದನೂರಿನ ಒಂಬತ್ತು ವರ್ಷದ ಚತುರೆ ದುಗ್ಗಳಮ್ಮ ಈ ಸವಾಲನ್ನು ಸ್ವೀಕರಿಸಿ ಪಾಯಸವನ್ನು ಮಾಡಿ ನೀಡುತ್ತಾಳೆ. ಆಗ ಆಕೆಯನ್ನು ಮೆಚ್ಚಿದ ದಾಸಿಮಯ್ಯ ಅವಳೊಂದಿಗೆ ಮದುವೆಯಾಗುತ್ತಾನೆ. ದುಗ್ಗಳೆ ದಾಸಿಮಯ್ಯನ ಮೆಚ್ಚಿನ ಮಡದಿಯಾಗಿ ಸಂಸಾರ ಪ್ರಾರಂಭಿಸುತ್ತಾಳೆ. "ಇಂತಪ್ಪ ಪೆಣ್ಣಾದಡೆ ಸಂಸಾರ ಲೇಸು" ಎಂದು ಸಂತೋಷದಿಂದ ಸಂಸಾರ ಮಡುತ್ತಾನೆ. "ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ" ಎಂದು ದಾಸಿಮಯ್ಯ ತನ್ನ ವಚನದಲ್ಲಿ ಹೇಳಿರಬೇಕಾದರೆ, ದುಗ್ಗಳೆ ದಾಸಿಮಯ್ಯನ ಅತ್ಯಂತ ಪ್ರೀತಿಯ ಮಡದಿಯಾಗಿದ್ದಳೆಂದು ತಿಳಿಯುತ್ತದೆ. ಹೀಗೆ ದುಗ್ಗಳೆ ಪತಿಗೆ ತಕ್ಕ ಸತಿಯಾಗಿದ್ದಳೆಂದು ಪುರಾಣಕಾವ್ಯಗಳು ಹೇಳುತ್ತವೆ.

ದಾಸಿಮಯ್ಯನು ದುಗ್ಗಳೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದನೆಂದು ತಿಳಿದುಬರುತ್ತದೆ. ತನ್ನ ಒಂದು ವಚನದಲ್ಲಿ ಆಕೆಯ ಗುಣಶೀಲ-ಸ್ವಭಾವಗಳನ್ನು ಕುರಿತು ಬಣ್ಣಿಸಿದ್ದಾನೆ.

"ಬಂದುದನರಿದು ಬಳಸುವಳು,
ಬಂದುದ ಪರಿಣಾಮಿಸುವಳು
ಬಂಧುಬಳಗವ ಮರಸುವಳು,
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ"
- ಜೇಡರ ದಾಸಿಮಯ್ಯ

ದಾಸಿಮಯ್ಯನ ವ್ಯಕ್ತಿತ್ವವನ್ನು ಬೆಳಗಿಸುವಲ್ಲಿ ದುಗ್ಗಳೆ ಪ್ರಮುಖ ಪಾತ್ರವಹಿಸಿದ್ದಳೆಂದು ಈ ವಚನದಿಂದ ತಿಳಿದುಬರುತ್ತದೆ. ಸಾಮಾನ್ಯವಾಗಿ ವಚನಕಾರ್ತಿಯರು ತಮ್ಮ ಪತಿಯನ್ನು ಕೊಂಡಾಡಿದ್ದಾರೆ. ಅದರೆ ದಾಸಿಮಯ್ಯ ಇಲ್ಲಿ ತನ್ನ ಪತ್ನಿಯನ್ನು ಕೊಂಡಾಡುತ್ತಿರುವುದು ವಿಶೇಷವಾಗಿದೆ. ಈ ಅಪರೂಪದ ದಂಪತಿಗಳನ್ನು ಕುರಿತು ಬಸವಣ್ಣ, ಕೋಲಶಾಂತಯ್ಯ, ಸೋಮಿದೇವಯ್ಯ, ಸತ್ಯಕ್ಕ ಈ ಮೊದಲಾದ ವಚನಕಾರರು ತಮ್ಮ ವಚನಗಳಲ್ಲಿ ಬಣ್ಣಿಸಿದ್ದಾರೆ. (ನೋಡಿ - ಮಿಶ್ರಸ್ತೋತ್ರದ ವಚನಗಳು, ಸಂ. ಡಾ.ವೀರಣ್ಣ ರಾಜೂರ)

12ನೇ ಶತಮಾನದ ಶರಣರು ಈ ದಂಪತಿಗಳನ್ನು ಕುರಿತು ಉಲ್ಲೇಖಿಸಿರುವ ಒಂದೆರಡು ವಚನಗಳನ್ನಿಲ್ಲಿ ನೋಡಬಹುದಾಗಿದೆ.
1. "ದಾಸನ ವಸ್ತ್ರವ ಬೇಡದ ಮುನ್ನ ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ"
- ಬಸವಣ್ಣ (ಸ.ವ.ಸಂ.1, ವ-444, 1993)
2. "ದಾಸನ ವಸ್ತ್ರವ ಸೀಳುವುದೊಂದು ಗರುವತನುವೆ?"
- ಬಸವಣ್ಣ (ಸ.ವ.ಸಂ.1, ವ-740, 1993)
3. "ಎನಗುಡಕೊಟ್ಟರಯ್ಯ ದಾಸ-ದುಗ್ಗಳೆಯರು"
- ಬಸವಣ್ಣ (ಸ.ವ.ಸಂ.7, ವ-188, 1993)
4. "ದಾಸ ದುಗ್ಗಳೆಯವರ ತವನಿಧಿ ಪ್ರಸಾದವು ಕೊಂಡೆನಯ್ಯಾ"
- ಬಸವಣ್ಣ (ಸ.ವ.ಸಂ.6, ವ-1212, 1993)
ಈ ನಾಲ್ಕು ವಚನಗಳಲ್ಲಿ ದಾಸಿಮಯ್ಯ-ದುಗ್ಗಳೆಯರ ಹೆಸರನ್ನು ಪ್ರಸ್ತಾಪಿಸಲಾಗಿದೆ.
ಬಸವಣ್ಣನು ಜೇಡರದಾಸಿಮಯ್ಯನ ಪರವಾಗಿ ದೇವರನ್ನೇ ಪ್ರಶ್ನಿಸಿದ್ದಾನೆ. "ದಾಸನ ವಸ್ತ್ರವನ್ನು ಪಡೆದು ನೀ ತವನಿಧೆಯನ್ನಿತ್ತೆ, ಇದೇನು ಮಹಾ?" ಎಂದು ಬಸವಣ್ಣ ಸ್ವತ: ದೇವರನ್ನೇ ಕೇಳಿದ್ದಾನೆ. ಶಿವನು ದಾಸನವಸ್ತ್ರವನ್ನು ಸೀಳುವ ಪ್ರಸಂಗ ಬರುತ್ತದೆ. ಆ ಪ್ರಸಂಗವನ್ನು ಉಲ್ಲೇಖಿಸಿದ ಬಸವಣ್ಣನು, ಇದು ನಿಮ್ಮ ಗರುವತನುವೆ ಎಂದು ಪ್ರಶ್ನಿಸಿದ್ದಾನೆ. ಮದನೂರಿನ ರಾಮನಾಥ ಮಂದಿರದ ಮಗ್ಗುಲಲ್ಲಿಯೇ ಬಾವಿಗಳಿವೆ. ಈ ಊರ ಸುತ್ತಮುತ್ತ ಜಲರಾಶಿಯೇ ಇದೆ. ಈ ಜಲಕ್ಕೆ ಸಂಬಂಧಿಸಿದಂತೆ ದಾಸಿಮಯ್ಯನಿಗೆ ಅಪಾರ ಜ್ಞಾನವಿತ್ತೆಂದು ತಿಳಿದುಬರುತ್ತದೆ. ರಾಮನಾಥ ಮಂದಿರದ ಎದುರಿಗಿರುವ ಇನ್ನೊಂದು ಗರ್ಭಗೃಹದಲ್ಲಿ ದಾಸಿಮಯ್ಯನ ಇತ್ತೀಚಿನ ಶಿಲ್ಪವೊಂದನ್ನು ಸ್ಥಾಪಿಸಲಾಗಿದೆ. ದುಗ್ಗಳೆಯೂ ಇಲ್ಲಿಯೇ ಲಿಂಗೈಕ್ಯಳಾಗಿರಬೇಕೆಂದು ನಂಬಬಹುದಾಗಿದೆ.

ದುಗ್ಗಳೆ ವಚನಗಳನ್ನು ರಚಿಸಿದ್ದು ಆಕೆಯ ಎರಡು ವಚನಗಳು ಪ್ರಕಟವಾಗಿವೆ. "ದಾಸಯ್ಯಪ್ರಿಯ ರಾಮನಾಥಾ" ಎಂಬುದು ಆಕೆಯ ವಚನಾಂಕಿತವಾಗಿದೆ. ಬಸವಣ್ಣನಿಂದ ಗುರುಪ್ರಸಾದಿಯಾದೆ, ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆ, ಪ್ರಭುದೇವರಿಂದ ಜಂಗಮಪ್ರಸಾದಿಯಾದೆ, ಮರುಳಶಂಕರದೇವರಿಂದ, ಮಹಾಪ್ರಸಾದಿಯಾದೆನೆಂದು ತನ್ನ ವಚನದಲ್ಲಿ ಹೇಳಿಕೊಂಡಿದ್ದಾಳೆ.

"ಭಕ್ತನಾದಡೆ ಬಸವಣ್ಣನಂತಾಗಬೇಕು ಜಂಗಮವಾದಡೆ ಪ್ರಭುದೇವರಂತಾಗಬೇಕು ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು ಐಕ್ಯನಾದಡೆ ಅಜಗಣ್ಣನಂತಾಗಬೇಕು ಇಂತಿವರ ಕಾರುಣ್ಯ ಪ್ರಸಾದವ ಕೊಂಡು
ಸತ್ತ ಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯ ದಾಸಯ್ಯಪ್ರಿಯ ರಾಮನಾಥಾ"

- ದುಗ್ಗಳೆ (ಸ.ವ.ಸಂ.5, ವ-786, 1993)

ಈ ವಚನವನ್ನು ನೋಡಿದಾಗ ದುಗ್ಗಳೆಗೆ ಕಲ್ಯಾಣದ ಶರಣರ ಸಂಪರ್ಕ ನಿಕಟವಾಗಿಯೇ ಇತ್ತೆಂದು ತಿಳಿದುಬರುತ್ತದೆ. ಒಬ್ಬೊಬ್ಬ ಶರಣನ ಗುಣವಿಶಿಷ್ಟತೆಯನ್ನು ಕಂಡುಕೊಳ್ಳುವುದು ದೂರದಲ್ಲಿದ್ದವರಿಗೆ ಸಾಧ್ಯವಾಗುವುದಿಲ್ಲ. ದುಗ್ಗಳೆ ಶರಣರ ಒಡನಾಟದಲ್ಲಿ ಅವರ ಗುಣವಿಶಿಷ್ಟತೆಯನ್ನು ಕಂಡುಕೊಂಡು ಎಲ್ಲರೂ ಒಪ್ಪುವಂತೆಯೇ ಹೇಳಿದ್ದಾಳೆ. ಇಂತಹ ಮಹಾಮಹಿಮರ ಕಾರಣದಿಂದ ತಾವು ಬದುಕಬೇಕಲ್ಲದೆ ತತ್ವದ ಮಾತು ತಮ್ಮಂತವರಿಗೇಕೆ? ಎಂದು ಕೇಳಿಕೊಂಡಿಂದ್ದಾಳೆ. ಆದ್ಯವಚನಕಾರನ ಮೆಚ್ಚಿನ ಮಡದಿಯಾಗಿ, ಶರಣಸಂಕುಲದ ವಿನಯಪೂರ್ಣ ಸದಸ್ಯೆಯಾಗಿ ದುಗ್ಗಳೆ ಗಮನ ಸೆಳೆಯುತ್ತಾಳೆ. ಆಕೆಯ ವ್ಯಕ್ತಿತ್ವ-ಸಾಧನೆ, ಕುರಿತು ಹೆಚ್ಚಿನ ಸಂಶೋಧನೆ

ನಡೆಯಬೇಕಾಗಿದೆ. ತನ್ನ ಸಮಕಾಲೀನ ಶರಣರನ್ನು ಮೇಲುಗಟ್ಟಿಕೊಂಡು ಬಸವಣ್ಣ ಇಲ್ಲಿ ದೇವರೊಡನೆ ವಾಗ್ವಾದಕ್ಕಿಳಿದಿದ್ದಾನೆ. ತನಗೆ ವಸ್ತ್ರವನ್ನು ಉಡಲು ದಾಸ- ದುಗ್ಗಳೆಯರು ಕೊಟ್ಟರೆಂದು ಕೋಲಶಾಂತಯ್ಯನು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾನೆ. ತಾನು ದಾಸ-ದುಗ್ಗಳೆಯರ ತವನಿಧಿ ಪ್ರಸಾದವ ತೆಗೆದುಕೊಂಡೆನೆಂದು ಉಪ್ಪರಗುಡಿ ಸೊವಿದೇವಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಹೀಗೆ ಅನೇಕ ವಚನಕಾರರು ದಾಸಿಮಯ್ಯ-ದುಗ್ಗಳೆಯರ ಮಹಿಮೆಯನ್ನು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ.

ಅನೇಕ ಜನಪದ ತ್ರಿಪದಿಗಳಲ್ಲಿ ದಾಸಿಮಯ್ಯ-ದುಗ್ಗಳೆಯರನ್ನು ಕುರಿತು ಗರತಿಯರು ಹಾಡಿದ್ದಾರೆ. ಜನಪದರ ನಾಲಗೆಯ ಮೇಲೆ ಈ ಶರಣ ದಂಪತಿಗಳು ಕುಣಿದಾಡಿದ್ದಾರೆ.
"ಹುಗ್ಗಿಯ ದುಗ್ಗಳೆ ಹುಗ್ಗಿ ಅಕ್ಕಿ ಕುಟ್ಟ್ಯಾಳ
ಹಿಗ್ಗಿಲಿ ಕಾಯಕ ಮಾಡ್ಯಾಳ| ದುಗ್ಗಳೆ
ಬಗ್ಗಿ ತಾ ನೀಡಿ ಪಂಕ್ತೀಗಿ||
"ಹಿಗ್ಗಿನಿಂದ ಕೇಳೆ ಮುದನೂರ ದುಗ್ಗಳೆ ಬಂದಾಳ
ಬಗ್ಗಿ ನಮಿಸ್ಯಾಳ ಶರಣರಿಗೆ| ತವನಿಧಿಯ ಕಲ್ಯಾಣದ ಜನಕ್ಕೆಲ್ಲಾ ಹಂಚ್ಯಾಳ||"

- (ಹಾಡಿದವರು - ಬಸಮ್ಮ ಸಬರದ)

ಇಂತಹ ಅನೇಕ ತ್ರಿಪದಿಗಳನ್ನು ಕುಕನೂರಿನಲ್ಲಿ ನನ್ನ ಅತ್ತೆ ಬಸಮ್ಮ ಮತ್ತು ಆಕೆಯ ಗೆಳತಿಯರು ಹಾಡುತ್ತಿದ್ದರು. ಇಂತಹ ಕೆಲವು ಹಾಡುಗಳು ಪ್ರಕಟವಾಗದೆ ಹಾಗೆಯೇ ಉಳಿದುಕೊಂಡಿವೆ. ಜಾನಪದದಲ್ಲಿ, ದಾಸಿಮಯ್ಯ ದುಗ್ಗಳೆಯರನ್ನು ಗೌರವದಿಂದ ಕಾಣಲಾಗಿದೆ. ದಾಸಿಮಯ್ಯನ ನೇಯ್ಗೆಯ ಕಾಯಕ ಅಷ್ಟೊಂದು ಪ್ರಸಿದ್ಧಿಯಾಗಿತ್ತು ಮತ್ತು ಅದು ತುಂಬ ಸರಳವಾಗಿತ್ತು. ಅಂತೆಯೇ ಜನಪದರು ದಾಸಿಮಯ್ಯನ ನೆನೆಸಿ ಕೂಸು ನೇಯುವುದಯ್ಯ ಎಂದು ಹೇಳಿದ್ದಾರೆ. ದಾಸಿಮಯ್ಯನ ನಿಧನದ ನಂತರ ದುಗ್ಗಳೆ ಕಲ್ಯಾಣಕ್ಕೆ ಬಂದಿರಬೇಕು, ಅಲ್ಲಿ ಶರಣರ ಸಂಗದಲ್ಲಿ ಇದ್ದಿರಬೇಕೆಂದು ಈ ತ್ರಿಪದಿಗಳಿಂದ ತಿಳೆದು ಬರುತ್ತದೆ. ಮುದನೂರಿನಲ್ಲಿ ರಾಮನಾಥ ಮಂದಿರವಿದೆ. ಇದೇ ದಾಸಿಮಯ್ಯನ ವಚನಾಂಕಿತವಾಗಿದೆ. ಲಿಂಗವಂತ ಜಾಡರ ಸಮುದಾಯಕ್ಕೆ ಸೇರಿದ ಈ ದಂಪತಿಗಳು ತಮ್ಮ ಕಾಯಕ ದಾಸೋಹದಿಂದ ಜನಮನ್ನಣೆಯನ್ನು ಪಡೆದವರಾಗಿದ್ದಾರೆ. ದಾಸಿಮಯ್ಯನ ಕೆಲವು ಸ್ಮಾರಕಗಳು ಮುದನೂರಿನಲ್ಲಿವೆ. ದಾಸಿಮಯ್ಯ ಇಲ್ಲಿಯೇ ವಾಸವಾಗಿದ್ದನೆಂದು ಒಂದು ಹಳೆಯ ಮನೆಯನ್ನು ತೋರಿಸುತ್ತಾರೆ. ಆದರೆ ಅದು ಹನ್ನೆರಡನೇ ಶತಮಾನದಲ್ಲಿ ಕಟ್ಟಿಸಿದ್ದ ಮನೆಯಲ್ಲವೆಂಬುದು ಸ್ಪಷ್ಟವಾಗುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು:
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಶಾಂಭವಿದೇವಿ

ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು
ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...