ವಚನಕಾರರು ಕೇವಲ ಕವಿಗಳಲ್ಲ, ನಿರ್ಮೋಹಿ ಶರಣರು ಎನ್ನುವುದನ್ನು ಮರೆಯುವಂತಿಲ್ಲ


"ತಾಯಿಯ ತವರೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಮಾಸ್ತಿಕಟ್ಟೆ, ಶಿಕಾರಿಪುರ, ನ್ಯಾಮತಿ, ಕೊಲ್ಲೂರು, ಶೃಂಗೇರಿ, ಹುಂಚ ಮುಂತಾದ ಕಡೆಗೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೋದಾಗಲೆಲ್ಲಾ ನಿಸರ್ಗವನ್ನು ಬೆರಗುಗಣ್ಣಿನಿಂದ ನೋಡುತ್ತ ಕೌತುಕದಿಂದ ವೀಕ್ಷಿಸುತ್ತಿದ್ದೆ," ಎನ್ನುತ್ತಾರೆ ಕಾವ್ಯಶ್ರೀ ಮಹಾಗಾಂವಕರ. ಅವರು ತಮ್ಮ "ಬಯಲಿಗೊಂದು ಬಟ್ಟೆ" ಕೃತಿಗೆ ಬರೆದ ಲೇಖಕರ ನುಡಿ.

'ನಾನು ಯಾರು?' ಎನ್ನುವ ಪ್ರಶ್ನೆ ಬಾಲ್ಯದಲ್ಲೇ ಕಾಡಿದ ನೆನಪು. ಅದಕ್ಕೆ ಕಾರಣವೂ ಇದೆ. ಮೈಸೂರಿನ ಪಡುವಾರಹಳ್ಳಿಯಲ್ಲಿ ನೆಲೆಸಿದ್ದ ಎಪ್ಪತ್ತರ ದಶಕದ ಸಂದರ್ಭವದು. ಆಗ ಮನೆಯ ಸಮೀಪದಲ್ಲಿದ್ದ ರಾಮ ಮಂದಿರದಲ್ಲಿ ಬ್ರಹ್ಮಕುಮಾರಿ ಸೆಂಟರ್‌ನವರು ಚಿತ್ರಪಟಗಳ ಸಹಾಯದಿಂದ ಮನುಷ್ಯ, ಜನನ, ಮರಣ, ಪಾಪ, ಪುಣ್ಯಗಳ ಕುರಿತು ಸುಂದರವಾಗಿ ವಿವರಿಸಿ ಹೇಳುತ್ತಿದ್ದರು. ಹಾಗೆಯೆ ಚಾಮುಂಡಿ ಬೆಟ್ಟದ ಬಳಿಯೂ ಒಂದು ಕೇಂದ್ರವಿತ್ತು. ಅಲ್ಲಿ ಹೋದಾಗಲೆಲ್ಲಾ ಮತ್ತೆ ಮತ್ತೆ ಕೇಳುವ ಅವಕಾಶವನ್ನು ಅವ್ವ-ಅಪ್ಪ ಒದಗಿಸುತ್ತಿದ್ದರು. ಅದು ನನ್ನನ್ನು ಅಂತರ್ಮುಖಿಯಾಗಿಸಿದ ಕ್ಷಣ.

ತಾಯಿಯ ತವರೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಮಾಸ್ತಿಕಟ್ಟೆ, ಶಿಕಾರಿಪುರ, ನ್ಯಾಮತಿ, ಕೊಲ್ಲೂರು, ಶೃಂಗೇರಿ, ಹುಂಚ ಮುಂತಾದ ಕಡೆಗೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೋದಾಗಲೆಲ್ಲಾ ನಿಸರ್ಗವನ್ನು ಬೆರಗುಗಣ್ಣಿನಿಂದ ನೋಡುತ್ತ ಕೌತುಕದಿಂದ ವೀಕ್ಷಿಸುತ್ತಿದ್ದೆ. ಮಲೆನಾಡಿನ ಅಂಕು ಡೊಂಕಾದ ರಸ್ತೆಗಳು, ಸಣ್ಣಸಣ್ಣ ತಿರುವುಗಳು, ಮರಗಳ ತುದಿ ಕಾಣುವ ಆಳವಾದ ಪ್ರಪಾತ ಕಂಡಾಗಲೆಲ್ಲಾ ಭಯಭೀತಳಾಗುತ್ತಿದ್ದೆ. ಆಗ ಬಾಲ್ಯದ ದಿನಗಳಲ್ಲಿ 'ನಾನು ಸಾಯ್ತೀನಾ?' ತೀವ್ರವಾಗಿ ಕಾಡಿದ ಪ್ರಶ್ನೆ! ಅವ್ವ ಲಿಂಗವಂತರು ಸಾಯುವುದೇ ಇಲ್ಲ ಎಂದಾಗ ನಂಬಿ ನಿರಾಳವಾಗಿದ್ದೆ. ಮುಗ್ದತೆಯಿಂದ ಹೌದೆಂದು ಭಾವಿಸಿ ಸಂಭ್ರಮಿಸಿದ ಒಂದಷ್ಟು ಕಾಲ. ಈಗ ನೆನೆದರೆ ಎಲ್ಲವೂ ನಗುವಿನ ಅಲೆಯಲ್ಲಿ ತೇಲಿಸಿಕೊಂಡು ಹೋಗುತ್ತದೆ. ಆದರೆ ಹುಟ್ಟು, ಸಾವು, ದೇಹದ ಕುರಿತು ಆಲೋಚಿಸುವಂತೆ ಮಾಡಿದ ಪ್ರಸಂಗಗಳಿವು. ಅವುಗಳೆಲ್ಲ 'ತಿಳುವಳಿಕೆ'ಯ ಮೆಟ್ಟಿಲುಗಳಾದವು ಎಂದು ಭಾವಿಸಬಹುದು.

ಆಗಿನ್ನೂ ಐದನೇ ತರಗತಿಯಲ್ಲಿ ಓದುತ್ತಿದ್ದೆ. ಅವ್ವ-ಅಪ್ಪ ಉಡುತಡಿಗೆ ಕರೆದುಕೊಂಡು ಹೋಗಿದ್ದರು. ಅವರಿಬ್ಬರೂ ಶರಣರ ಬಗ್ಗೆ ಆಗಾಗ ಹೇಳುತ್ತಿದ್ದರು. ಅದೆಷ್ಟು ತಲೆಗೆ ಹೋಗುತ್ತಿತ್ತೊ? ಅದೆಷ್ಟು ತಲೆಯ ಮೇಲಿಂದ ಹೋಗುತ್ತಿತ್ತೊ? ಆದರೆ ಅದೇನೊ ಒಂದು ತರಹದ ಮಾನಸಿಕ ಪ್ರಚೋದನೆಗೆ ಎಡೆ ಮಾಡಿಕೊಂಡದ್ದಂತೂ ಸತ್ಯ. ಮುಂದೆ ಶಾಲೆಯಲ್ಲಿ ಒಂದೆರಡು ಶರಣರ ವಚನಗಳು ಪಠ್ಯದಲ್ಲಿ ಇದ್ದರಿಂದ ಕಲಿಸಲಾರಂಭಿಸಿದರು.

'ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರ ಹೊಸೆದು ಬೆಣ್ಣೆಯ ಕೊಂಬಂತೆ
ಚೆನ್ನಮಲ್ಲಿಕಾರ್ಜುನ
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪೂರಗಿರಿಯ ಉರಿಯಕೊಂಬಂತೆ'

ಈ ವಚನ ಪಠ್ಯದ ಮೂಲಕ ಬಾಯಿಪಾಠವಾಗಿತ್ತು. ಮುಂದೆ 2006ರಲ್ಲಿ ನನ್ನ ಮೊದಲ ಪುಸ್ತಕ 'ಪ್ರೇಮ ಕಾವ್ಯ' ಬಿಡುಗಡೆ ಕಾರ್ಯಕ್ರಮ ನಡೆಯಿತು. ಬೀದರಿನ ಕರ್ನಾಟಕ ಲೇಖಕಿಯರ ಸಂಘ ಅದನ್ನು ಪ್ರಕಟಿಸಿತ್ತು. ಅದರ ಅಧ್ಯಕ್ಷರಾದ ನನ್ನ ಅವ್ವ ಯಶೋದಮ್ಮ ಸಿದ್ದಬಟ್ಟೆಯವರು ವಾರ್ಷಿಕೋತ್ಸವದಂದು ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಆಗ ಸಮಯದ ಅಭಾವದಿಂದಾಗಿ ನನ್ನ ಮಾತಿಗೆ ಅವಕಾಶವಿರಲಿಲ್ಲ. ಆದರೆ ಪ್ರೇಕ್ಷಕರೊಬ್ಬರು ಎದ್ದು ನಿಂತು, `ಕೃತಿ ರಚಿಸಿದ ಲೇಖಕಿಯೂ ಮಾತನಾಡಬೇಕು ಎಂದರು. ಅವರು ಅಪ್ಪನ ಸ್ನೇಹಿತರಾದ ಮಾಣಿಕಪ್ಪ ನಾಗೂರೆ. ನನ್ನ ಮಾತನ್ನು ಆರಂಭಿಸುವ ಮೊದಲು ಈ ವಚನ ಹೇಳಿದ್ದೆ. ಎಲ್ಲರೂ 'ಅಬ್ಬಾ! ರಾಣಿ ಏಟರೆ ಶಾಣೆ ಹಳಾ' ಎಂದು ಹೊಗಳಿದಾಗ ಆಶ್ಚರ್ಯ! ಅದು ನಾನಲ್ಲ! ಅದು ವಚನಗಳ ಮೌಲ್ಯ! ಅದು ವಚನಗಳ ಶಕ್ತಿ! ಅದು ವಚನಗಳ ವಿಸ್ತಾರ! ಈ ಶಕ್ತಿಯನ್ನು ನಮ್ಮದಾಗಿಸಿಕೊಳ್ಳಲು ಅಧ್ಯಯನದ ಅಗತ್ಯವಿದೆ ಎಂದು ಅರ್ಥವಾಯಿತು. ಅಂದಿನ ಅನುಭವ 'ತಿಳುವಳಿಕೆಯಿಂದ ಅರಿವಿನತ್ತ' ಪಯಣಿಸಲು ಅನುವಾಯಿತು.

ಒಮ್ಮೆ ಡಾ. ಜಯಶ್ರೀ ದಂಡೆಯವರು ಬಸವ ಪಥ ಪತ್ರಿಕೆಗೆ ಶರಣೆಯರ ಯಾವುದಾದರು ಒಂದು ವಚನವನ್ನು ವಿಶ್ಲೇಷಣೆ ಮಾಡಿ ಕೊಡಲು ತಿಳಿಸಿದರು. ಆದರೆ ನನಗೆ ಆ ಸಾಮರ್ಥ್ಯವಿಲ್ಲ ಎನಿಸಿತು. ವಿಶ್ಲೇಷಣೆಗೆ ನ್ಯಾಯ ಒದಗಿಸದೆ ಇದ್ದರೆ? ಎನ್ನುವ ಅನುಮಾನ ಕಾಡಿದಾಗ, ಆತ್ಮವಿಶ್ವಾಸ ಕಳೆದುಕೊಂಡೆನು. ಆ ಅವಕಾಶವನ್ನು ವಿನಮ್ರವಾಗಿ ವಾಸ್ತವ ಒಪ್ಪಿಕೊಂಡು ಹಿಂದೆ ಸರಿದೆ. ಅಪ್ಪನಿಗೆ ಬೇಸರವಾದರೂ ಸತ್ಯ ಒಪ್ಪಿಕೊಂಡೆ ಎನ್ನುವ ಸಮಾಧಾನವಿತ್ತು. ವಚನಗಳ ಅಧ್ಯಯನದ ಅವಶ್ಯಕತೆ ಎಷ್ಟು? ಎಂದು ಸಂಪೂರ್ಣ ತಿಳುವಳಿಕೆಗೆ ಬಂತು.

ಮಕ್ಕಳನ್ನು ಶಾಲೆಗೆ ಕಳಿಸುವ ಗಡಿಬಿಡಿಯಲ್ಲಿ ಸಮಯವೇ ಸಿಗುತ್ತಿರಲಿಲ್ಲ. ಆದರೂ ಹತ್ತು ನಿಮಿಷಗಳ ವಚನ ಗಾಯನ ಮತ್ತು ವಿದ್ವಾಂಸರಿಂದ ವಿಶ್ಲೇಷಣೆಯನ್ನು ಬಸವ ಸಮಿತಿಯ ದೂರದರ್ಶನ ಕಾರ್ಯಕ್ರಮದಲ್ಲಿ ವೀಕ್ಷಿಸುತ್ತಿದ್ದೆ. ಬೇರೆ ಬೇರೆ ವಚನಕಾರರ ವಿವಿಧ ವಚನಗಳನ್ನು ಆಲಿಸುವ, ತಿಳಿಯುವ ಅವಕಾಶವದು. ಶರಣರನ್ನು ತಿಳಿದುಕೊಳ್ಳಲು, ವಚನ ಸಾಹಿತ್ಯವನ್ನು ಅಭ್ಯಾಸ ಮಾಡಲು ಪ್ರೇರಣೆ ನೀಡಿದವು. ಇದರೊಂದಿಗೆ ಅನೇಕ ಶರಣರ ಪುಸ್ತಕಗಳನ್ನು ಸಂಗ್ರಹಿಸತೊಡಗಿದೆ.

ಕೇವಲ ಶರಣ ಸಾಹಿತ್ಯಕ್ಕೇ ಮೀಸಲಾದ ಬಸವ ಟಿವಿಯಲ್ಲಿ ಅಕ್ಕನ ವಚನಗಳ ವಿಶ್ಲೇಷಣೆ ಮಾಡುವಂತೆ ಹಿತೈಷಿಗಳಾದ ಚಿಂತಕ ಪ್ರೊ. ಸಿದ್ದು ಯಾಪಲಪರವಿಯವರು ಹೇಳಿದರು. ನನ್ನ ಓದು-ಬರಹದ ಶಕ್ತಿ ಮತ್ತು ಮಿತಿಯನ್ನು ಗ್ರಹಿಸಿದ್ದ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದೆ. ನನ್ನ ಆಸಕ್ತ ಮನಸು ಸಂತಸದಿಂದ ಸಿದ್ಧತೆ ಮಾಡಿಕೊಂಡು ಮುಂದುವರಿಯಿತು. ಆಗ ನಿಜಾರ್ಥದ ತಿಳುವಳಿಕೆಯಿಂದ ಅರಿವಿನತ್ತ ಪಯಣದಾರಂಭವಾಯಿತು. ಅಕ್ಕನ `ಬಯಲ ಬದುಕಿಗೊಂದು ಬಟ್ಟೆ' ಕಂಡುಕೊಳ್ಳುವ ಒಂದು ಸಣ್ಣ ಪ್ರಯತ್ನದ ಆರಂಭಕೆ ಮುನ್ನುಡಿ ಬರೆಯಲಾಯಿತು.

ಆರಂಭದಲ್ಲಿ ಎಲ್. ಪ್ರಕಾಶ ಅವರ 'ನಮ್ಮ ಕನ್ನಡ' ಪೋರ್ಟಲ್‌ಗೆ ಅಕ್ಕಮಹಾದೇವಿಯ ಇಪ್ಪತ್ತೈದು ವಚನಗಳ ವಿಶ್ಲೇಷಣೆಯ ``ಅಕ್ಕನೆಡೆಗೆ'' ಅಂಕಣ ಬರೆದೆ. ನಂತರ ವೀರೇಶ ಸೌದ್ರಿಯವರ e-suddi ಆನ್‌ಲೈನ್ ಪತ್ರಿಕೆಗೆ ಬರೆಯಲಾರಂಭಿಸಿದೆ. ಇಲ್ಲಿಯೂ ``ಅಕ್ಕನೆಡೆಗೆ'' ಅಂಕಣದ ಶೀರ್ಷಿಕೆ ಮುಂದುವರಿಸಿದೆ. ಸುಮಾರು ಐವತ್ತು ವಚನಗಳ ಅರಿಯುವ ಈ ಪಯಣದಲ್ಲಿ ತೊಡಕಾದಾಗಲೆಲ್ಲಾ ನೆರವಿಗೆ ಬಂದವರು ಪ್ರೊ. ಸಿದ್ದು ಯಾಪಲಪರವಿ ಮತ್ತು ಪತ್ರಕರ್ತರಾದ ವೆಂಕಟೇಶ ಮಾನು. ಸಂಪಾದಕರಾದ ವೀರೇಶ ಸೌದ್ರಿಯವರು ಅಕ್ಕನ ವಚನ ವಿಶ್ಲೇಷಣೆಯನ್ನು ನಿರಂತರ ಪ್ರಕಟಿಸಿ ಪ್ರೋತ್ಸಾಹಿಸಿದರು. ಅನೇಕ ಆಪ್ತರು, ಸ್ನೇಹಿತರು, ಸಹಪಾಠಿಗಳು ನನ್ನ ಈ ಬರಹವನ್ನು ಓದಿ, ವಾಟ್ಸ್ಆಪ್ ಮೂಲಕ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ್ದಾರೆ. ಇವರೆಲ್ಲರಿಗೂ ಪ್ರೀತಿಯ ಶರಣುಗಳು.

ಈ ಕೃತಿಗೆ ಮುನ್ನುಡಿ ಬರೆಯುವಂತೆ ವೆಂಕಟೇಶ ಮಾನು ಅವರಿಗೆ ಕೇಳಿಕೊಂಡಿದ್ದೆ. ಆಗ ಅವರು ತುಂಬಾ ಮುಜುಗರದಿಂದ, `ನಾನು ಬಹಳ ಚಿಕ್ಕವನು ಮೇಡಮ್' ಎಂದಿದ್ದರು. ಹಾಗೆ ಹೇಳಿದ್ದು ಅವರ ದೊಡ್ಡ ಗುಣ. ಒಂದು ದಿನ ಇದ್ದಕ್ಕಿದ್ದ ಹಾಗೆ ಕಾಲ್ ಮಾಡಿ, `ಮೇಡಮ್ ಮುನ್ನುಡಿ ಬರೀತೇನೆ. ನಿಮ್ಮ ವಚನ ವಿಶ್ಲೇಷಣೆಯನ್ನು ಪ್ರತಿ ವಾರ ಓದಿದರೂ, ಈಗ ಮುನ್ನುಡಿ ಬರೆಯುವ ದೃಷ್ಟಿಯಿಂದ ಇನ್ನೊಮ್ಮೆ ಓದುವೆ. ಒಟ್ಟುಗೂಡಿಸಿದ ವಚನಗಳ ಇಡೀ ಫೈಲನ್ನು ಕಳುಹಿಸಿ' ಎಂದರು. ನಂತರ ಸುಧೀರ್ಘವಾದ ಮುನ್ನುಡಿ ಬರೆದು ಮೇಲ್ ಮಾಡಿದರು, ನನ್ನ ಮಾತಿಗೆ `ಇಲ್ಲ' ಎನ್ನಲಾಗದೆ. ಇಂದು ಈ ಪುಸ್ತಕ ಪ್ರಕಟಣೆಗೆ ಹೋಗುವ ಮುನ್ನವೇ ಮುನ್ನುಡಿ ಬರೆದ ಮಾನು ಮೌನವಾಗಿದ್ದಾರೆ, ಇಹಲೋಕ ಯಾತ್ರೆ ಮುಗಿಸಿ ಹೊರಟೇ ಹೋದರು. ಇದು ನನ್ನ ಮನಸಿಗೆ ಬಹಳ ನೋವಿನ ಸಂಗತಿ. ಬಸವಾದಿ ಶರಣರು ಆ ನಿಸ್ವಾರ್ಥ, ನಿರ್ಮಲ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುವೆ.

ಪ್ರತಿ ವಚನ ವಿಶ್ಲೇಷಣೆಯನ್ನು ಅಪ್ಪ ಬಿ.ಜಿ. ಸಿದ್ದಬಟ್ಟೆಯವರ ಮುಂದೆ ಓದಿದಾಗ, ತಮ್ಮ ಇಳಿ ವಯಸ್ಸಿನಲ್ಲೂ ಬೆರಗು ಗಣ್ಣಿನಿಂದ ಕೇಳಿ, 'ಇಷ್ಟೆಲ್ಲಾ ಯಾವಾಗ್ ತಿಳ್ಕೊಂಡಿ ಮಗಾ! ನಮುಗಾ ಐನ್ಸಿ ವರ್ಷ ಆದುರ್ನು ತಿಳ್ಯಲೇ ಹೋಯ್ತು. ಮಾಡ್ ಮಗಾ ಸಾಹಿತ್ಯದ ಕೆಲ್ಸಾ. ಇದೆಲ್ಲಾ ನೋಡ್ಲಾಕ ನಾ ಹಿನಾ ಜೀವಂತ ಇರಬೇಕಾಯ್ತುದ್ ಮಗಾ' ಎಂದು ನಗುತ್ತ ಹೇಳುವ ಅಪ್ಪನ ಮಾತುಗಳಲ್ಲಿ ಬದುಕುವ ಉತ್ಸಾಹ. ಅವರ ಈ ಮಾತು ನೆನಪಾದಾಗ ಕಣ್ಣಲ್ಲಿ ನೀರು ಚಿಮ್ಮಿದರೂ ಅದೇನೋ ಸಡಗರ. ಸದಾ ಮಗಳನ್ನು ಪ್ರೀತಿಸುವ, ಸಾಹಿತ್ಯದ ಹಾದಿಯನ್ನು ಪ್ರೋತ್ಸಾಹಿಸುವ, ಬೆನ್ನೆಲುಬಾಗಿರುವ, ಆಲದ ಮರದಂತಹ ಅಪ್ಪನಿಗೆ ಕೋಟಿ ಕೋಟಿ ಶರಣುಗಳು.

ನನ್ನ ವಚನಾಧ್ಯಯನದ ಸಂದರ್ಭದಲ್ಲಿ, ಅಕ್ಕನ ವಚನಗಳನ್ನು ನೋಡುವ ದೃಷ್ಟಿ ಹೇಗಿರಬೇಕೆಂದು? ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತೆ ಮಾಡಿತು. ಆರಂಭದಲ್ಲಿ ಇದ್ದ ಗೊಂದಲಗಳು ಕ್ರಮೇಣ ಕಡಿಮೆಯಾಗುತ್ತ ಬಂದವು. ಈ ಹಾದಿಯಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಂದ ಕೂಡಿದ ನಮ್ಮನ್ನು, ನಾವು ಬಿಡುಗಡೆಗೊಳಿಸುವ ಅವಶ್ಯಕತೆಯಿದೆ ಎನಿಸಿತು. ನಿಧಾನವಾಗಿ ನಮ್ಮೊಳಗಿನ ಸಂಕುಚಿತ ಭಾವವನ್ನಳಿಸಿ ಬಯಲು ದರ್ಶನಕ್ಕೆ ಸಿದ್ದವಾಗುವ ಮನಸ್ಥಿತಿಯ ಅಗತ್ಯ ಗೋಚರವಾಯಿತು. ಆಗ ಮಾತ್ರ ನಾವು ಅಕ್ಕನ ವಚನಗಳಷ್ಟೇ ಅಲ್ಲ, ಇತರ ಶರಣರನ್ನು ಅರಿಯಲು ಸಾಧ್ಯ. ಈ ಮಧ್ಯೆ ಮೈಸೂರಿನಲ್ಲಿ ಮೂರು ದಿನದ ಧ್ಯಾನ ಶಿಬಿರ ಮತ್ತು ಬಸವಕಲ್ಯಾಣದ ಇಷ್ಟಲಿಂಗ ಪೂಜೆ, ಶಿವಯೋಗದ ಲಿಂಗಧ್ಯಾನಕ್ಕೆ ಹತ್ತಿರವಾಗಿಸಿತು.

ವಾಸ್ತವ ನೆಲೆಯಲ್ಲಿ ಬದುಕಿ, ಸತ್ಯದ ಆಧಾರದ ಮೇಲೆ ಬಾಳಿದ ಶರಣರ ಅನುಭವಗಳೇ ವಚನಗಳು. ವಚನಕಾರರು ಕೇವಲ ಕವಿಗಳಲ್ಲ, ನಿರ್ಮೋಹಿ ಶರಣರು ಎನ್ನುವುದನ್ನು ಮರೆಯುವಂತಿಲ್ಲ. ಶರಣರ ವಚನಗಳನ್ನು ಅರಿಯುವಾಗ ಆರಂಭದಲ್ಲಿ ಅಜ್ಞಾನ ನಮ್ಮನ್ನು ಕಾಡುತ್ತದೆ, ನಂತರ ನಿರಂತರ ಅಧ್ಯಯನ, ಅನುಭವ ಮತ್ತು ಅನುಭಾವದ ಹಂತ ತಲುಪುವ ನಮ್ಮ ಪ್ರಯತ್ನ ಅರ್ಥಪೂರ್ಣ. ಅನೇಕ ಬಾರಿ ಅಕ್ಕನ ಬದುಕಿನ ವೈಯಕ್ತಿಕ ವಿಷಯಗಳು ನಮ್ಮನ್ನು ಬಹಳ ಕಾಡುತ್ತವೆ. ಹುಟ್ಟು, ಯೌವನ, ಕಾಮ, ಮದುವೆ, ಉಡುತಡಿಯಿಂದ ಕಲ್ಯಾಣದ ಪಯಣ, ಅಲ್ಲಮ ಮತ್ತು ಇತರ ಶರಣರ ಪರೀಕ್ಷೆ, ಕದಳಿಯ ಪಯಣ, ಐಕ್ಯ ಮುಂತಾದ ಸಂಗತಿಗಳು ಅನೇಕ ಲೌಕಿಕ ಪ್ರಶ್ನೆಗಳನ್ನು ಹುಟ್ಟು ಹಾಕಿ ಕಾಡುತ್ತವೆ. ಅದರಾಚೆಗಿನ ಅಲೌಲಿಕ ಜಗತ್ತನ್ನು ತಲುಪುವ ಪ್ರಯತ್ನ ಮಾಡಿದರೆ, ಉಳಿದೆಲ್ಲವೂ ಗೌಣ. ನಮ್ಮದೇ ಆದ ಸಂಕುಚಿತ ಆಲೋಚನಾ ಕ್ರಮಗಳನ್ನು ಬದಿಗಿರಿಸಿ, ಮುಕ್ತ ಮನಸ್ಥಿತಿಯ ಚಿಂತನೆ ಹೊಂದಿದ್ದರೆ ಮಾತ್ರ ನಮಗೆ ಅಕ್ಕ ಒಂದಿಷ್ಟೇ ಇಷ್ಟು ದಕ್ಕುತ್ತಾಳೆಂಬ ಭರವಸೆ.

ಅಕ್ಕ ಅದ್ಭುತ ಕವಿ! ಅವಳ ಕಾವ್ಯ ಕಟ್ವುವ ಕಲೆಗೆ ಮನಸೋಲುವುದು ಸಹಜ. ಅಲ್ಲಿ ಬಳಸಲಾದ ಪ್ರತಿಮೆಗಳು, ರೂಪಕಗಳು, ಉಪಮೆಗಳು ಅಚ್ಚರಿ ಹುಟ್ಟಿಸುತ್ತವೆ. ಅವುಗಳನ್ನು ಭೇದಿಸುವ, ಅರ್ಥೈಸುವ, ಜೀರ್ಣಿಸುವ ಶಕ್ತಿಯನ್ನು ಬೆಳೆಸಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ ಈ ಕೃತಿ. ಇದು ಈ ಹೊತ್ತಿನ ಮಟ್ಟಿಗೆ ಅರ್ಥೈಸಲಾದ ವಿವರಣೆ ಎಂದು ಹೇಳಬಹುದು. ಇದರ ಇನ್ನೊಂದಿಷ್ಟು ಹೊಸ ರೂಪಗಳು ನಾಳೆ ಮತ್ತೆ ತೆರೆದುಕೊಳ್ಳಬಹುದು. ಅಕ್ಕನ ವಚನಗಳು ಆ ಶಕ್ತಿ, ಸಾಮರ್ಥ್ಯ ಹೊಂದಿರುವ ದಿಗಂತ. ನಾವು ನಿರಂತರ ಅಧ್ಯಯನದಲ್ಲಿ ತೊಡಗಿ, ತಿಳಿಯುವ ಪ್ರಯತ್ನ ಮಾಡೋಣ, ಇಂತಹ ಒಂದು ಸಣ್ಣ ಪಯಣಕೆ ಜೊತೆಯಾದ ಎಲ್ಲರಿಗೂ ಕೃತಜ್ಞತೆಗಳು. ತಂದೆ ಸಮಾನರಾದ ಶರಣಜೀವಿ ಡಾ. ನಾ. ಮೊಗಸಾಲೆಯವರು, ವಿದ್ಯಾಶಂಕರ ಅವರ ಸುಪುತ್ರರಾದ ಮಹೇಶ ಅವರನ್ನು ಪರಿಚಯಿಸಿ, ಪ್ರಕಟಣೆಗೆ ಕಾರಣರಾದರು. ಪುಸ್ತಕ ಸುಂದರವಾಗಿ ಮೂಡಿ, ಹೊರ ಬರಲು ಕಾರಣರಾದ ಎಲ್ಲ ಮನಸುಗಳಿಗೆ ಮತ್ತೊಮ್ಮೆ ಸಾವಿರದ ಶರಣುಗಳು.

MORE FEATURES

ಕವಿತೆಗಳಿಲ್ಲದಿದ್ದರೆ ಮನುಷ್ಯ ಮೃಗವಾಗಿಯೇ ಇರುತ್ತಿದ್ದ

15-02-2025 ಬೆಂಗಳೂರು

“ಕವಿಯು ಈ ಕವನವು ಹೊಸ ವರ್ಷದ ಆರಂಭವನ್ನು ಸನಾತನ ಸಾಂಸ್ಕೃತಿಕ ಹಬ್ಬಗಳ ಹಿನ್ನೆಲೆಯಲ್ಲಿ ಕವಿಯು ವೈಭೋಗದಿಂದ ವಿವರಿ...

ಅವರ ಹೋರಾಟದ ಕತೆಯೂ ಇದೆ

15-02-2025 ಬೆಂಗಳೂರು

“ಸಾಹಿತ್ಯಿಕವಾಗಿ ಶ್ಯಾಮಲಾ ಇಷ್ಟರ ಮಟ್ಟಿನ ಸಫಲತೆ ಪಡೆದಿದ್ದರೆ ಅದರಲ್ಲಿ ಅವರ ಹೋರಾಟದ ಕತೆಯೂ ಇದೆ,” ಎನ್ನ...

Bannada Jinke; ಕವಿಯಾಗದವನು ಸಾಹಿತಿಯಾಗಲು ಸಾಧ್ಯವಿಲ್ಲ

14-02-2025 ಬೆಂಗಳೂರು

“ಇದರಲ್ಲಿ ವಿವಿಧ ಕಾಲಘಟ್ಟದಲ್ಲಿ ಬರೆದ ಅವರ ಬಹುಪಾಲು ಅತ್ಯುತ್ತಮ ಕತೆಗಳು ಇರುವುದರಿಂದ ಪರೋಕ್ಷವಾಗಿ ಇವು ಅವರ ಪ್...