ವೈಕಂ ಮಹಮ್ಮದ್ ಬಶೀರರ ’The Man’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ

Date: 09-09-2022

Location: ಬೆಂಗಳೂರು


ಬದುಕಿನ್ನು ಮುಗಿದೇ ಹೋಯಿತೆನ್ನುವಾಗ ಅಚ್ಚರಿಯೊಂದು ಎದುರಾಗುತ್ತದೆ. ಜೀವನದ ದಿಸೆಯನ್ನೆ ಬದಲಾಯಿಸುತ್ತದೆ. ನೋವಿನ ಹಿಂದೆ ನಲಿವಿನ ಕಿರಣವೊಂದು ಮೂಡುತ್ತದೆ ಎನ್ನುತ್ತಾರೆ ಲೇಖಕಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ವೈಕಂ ಬಷೀರರ ಕಥೆಯೊಂದು ಕಟ್ಟಿಕೊಡುವ ಇಂಥ ಬಗೆಯನ್ನು ಚರ್ಚಿಸಿದ್ದಾರೆ.

ಪರಸ್ಪರ ಸಾಂಗತ್ಯದ ಅರಿವು ಮತ್ತು ಭಾವ ಸ್ಪಂದನೆಯ ನೆರವು ಮನುಷ್ಯ ಜಗತ್ತಿನ ಅನಿವಾರ್ಯಗಳಲ್ಲವೇ? ಹಾಗಾಗಿಯೇ ಅಮೇರಿಕಾದಂತಹ ದೇಶದ ಅಧ್ಯಕ್ಷನಾಗಿಯೂ

“Just as I would not like to be a slave
So as I would not like to be a master”

ಎಂದು ಅಬ್ರಾಹಂ ಲಿಂಕನ್ ಹೇಳಿದ್ದರೆಂದು ಕಾಣುತ್ತದೆ. ಮನುಷ್ಯ ಮನುಷ್ಯನಿಗಾಗದೇ ಇರಲು ಸಾಧ್ಯವೇ? ಎಂದು ಹಿಂದಿನ ಜನ ಹೇಳುತ್ತಿದ್ದರಲ್ಲ!! ಮನಃಶಾಸ್ತ್ರಜ್ಞರ ವ್ಯಾಖ್ಯಾನವನ್ನೆ ಬದಲಿಸಿಬಿಡುವಂತಹ ವರ್ತನೆಗಳನ್ನು ಆಗಾಗ ಮನುಷ್ಯರು ಪ್ರದರ್ಶಿಸಿದಾಗ ಅಚ್ಚರಿಯಾಗುತ್ತದೆ. ಅಂತೆ ಪರಮ ವೈರಿಯೂ ಮಿತ್ರನಾಗಿಬಿಡುವ, ಪರಮ ಸತ್ಯವಿದೆಯಲ್ಲ ಅದಂತೂ ರೋಮಾಂಚನಕಾರಿಯಾದದ್ದು.

ಮನುಷ್ಯನ ಸ್ವಭಾವ ವಿಸ್ಮೃತಿಗಳ ಬಗ್ಗೆ ಬರೆದ ಹಲವು ಭಾರತೀಯ ಕಥೆಗಾರರರಲ್ಲಿ ಮಲೆಯಾಳಂ ಕಥೆಗಾರರಾದ ವೈಕಂ ಮಹಮ್ಮದ ಬಶೀರ ಹೆಸರನ್ನು ಉಲ್ಲೇಖಿಸಲೇಬೇಕು. ಮಲೆಯಾಳಂ ಕಥಾ ಪ್ರಪಂಚದ ಬಹುದೊಡ್ಡ ಹೆಸರು ಬಶೀರ ಅವರದು. ವೈಕಂ ಮಹಮ್ಮದ್ ಬಶೀರರ ಕಥೆಯೊಂದು ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಈ ಕಥೆ ಮಲಿಯಾಳಂ ಭಾಷೆಯಿಂದ ಇಂಗ್ಲೀಷಿಗೆ ವಿ. ಅಬ್ದುಲ್ಲಾ ಅವರಿಂದ ಅಷ್ಟೇ ಸುಂದರವಾಗಿ ಅನುವಾದಿತವಾಗಿದೆ. ಸರಳ ಶೈಲಿಯಲ್ಲಿ ತಟ್ಟನೇ ಅರ್ಥವಾಗುವ ಬಶೀರರ ಕಥೆಗಳು ತಮ್ಮ ನಿಗೂಢತೆಯನ್ನು ತೋರುವುದು ಕಥೆಯನ್ನು ವಿವರಿಸಹೋದಂತೆಲ್ಲಾ ವಿಶ್ಲೇಷಿಸಹೋದಂತೆಲ್ಲಾ ಬಹು ಆಯಾಮಗಳಲ್ಲಿ ತೆರೆದುಕೊಳ್ಳುವ ಕಾರಣದಿಂದ ವಿಶಿಷ್ಟವೆನಿಸುತ್ತವೆ. ಮತ್ತು ಪ್ರತಿ ಸಲವೂ ಆ ಕುರಿತು ಪಾಠ ಮಾಡುವಾಗಲೂ ಬೇರೆ ಬೇರೆ ಮಾನಸಿಕ ದಂದ್ವಗಳಲ್ಲಿಯ ಆಳವನ್ನು ಅಳೆದಂತೆ ಭಾಸವಾಗಿಯೂ ಮತ್ತದೇ ಗೌಪ್ಯತೆಯ ಪೊರೆಯಲ್ಲಿ ಹುದುಗಿಕೊಳ್ಳುತ್ತವೆ. ಕಿಸೆಗಳ್ಳತನದ ಸಾಮಾನ್ಯ ಘಟನೆಯ ಮೂಲಕವೇ ವ್ಯಕ್ತಿಯೊಬ್ಬನ ನಿಜ ಸ್ವರೂಪವನ್ನು, ಮಾನವೀಯ ಗುಣವನ್ನು ಪ್ರಕಾಶಪಡಿಸಿದ ಬಶೀೀರರ ಕಲ್ಪನಾ ವಿಲಾಸಕ್ಕೆ, ಕಥನ ತಂತ್ರಕ್ಕೆ ಮರುಳಾಗಲೇಬೇಕು.. ಸರಳವಾದ ಕಥೆಯೊಂದು ವಿಶಿಷ್ಟ ಧ್ವನಿಯನ್ನು ಹೊಮ್ಮಿಸುವ ಮುಖೇನ ಹೇಗೆ ಪರಿಣಾಮಕಾರಿಯಾಗಬಲ್ಲದು ಎಂಬುದಕ್ಕೆ ಈ ಕಥೆ ಸಾಕ್ಷಿ.

“ Oru manushyan” [ The Man] ಎನ್ನುವುದು ಅವರ ಒಂದು ಕಥೆ. ಅಲ್ಲಿಯ ನಾಲ್ಕು ಸಾಲುಗಳು ಹೀಗಿವೆ.

I have some vague notions about human beings, including myself. There are around me good men and thieves, those who suffer from various infectious diseases and from madness-one has to live carefully. The world is more evil than good. We reliaze this only after we get hurt.

ಈ ಸಾಲುಗಳಲ್ಲಿ ಅಡಗಿರುವುದು ಮನುಷ್ಯರೆಲ್ಲರ ಅನುಭವಗಳ ಸಾಮಾನ್ಯ ಸಂಗತಿ. ಎಷ್ಟೋ ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ನಾವು ಅಂದುಕೊಂಡದ್ದೆಲ್ಲ ವ್ಯತಿರಿಕ್ತವಾಗಿ ಅನಾವರಣಗೊಳ್ಳುತ್ತದೆ. ಕೆಲವೊಮ್ಮೆ ದೂರದಿಂದ ಸುಂದರವಾಗಿ ಕಾಣುವ ಎಲ್ಲವೂ ಹತ್ತಿರದ ಸಂಪರ್ಕದಿಂದ ನಿಜರೂಪವನ್ನು ಬಿಟ್ಟುಕೊಡುತ್ತವೆ. ಅದರಲ್ಲೂ ಮನುಷ್ಯ ಯಾವ ನಾಡಿನವನೇ ಆಗಿರಲಿ, ಆತನಲ್ಲಿ ಗುಣಗಳು, ದೋಷಗಳು ಇದ್ದೇ ಇರುತ್ತವೆಯಲ್ಲವೇ? ಅದಕ್ಕಾಗಿಯೇ ಅನಿಸುತ್ತದೆ ವ್ಯಕ್ತಿತ್ವದಲ್ಲಿ ಪರಿಪೂರ್ಣತೆಯನ್ನು ಗಳಿಸುವುದು, ಗಳಿಸಲು ಶ್ರಮಿಸುವುದು ಕೂಡಾ ಒಂದು ರೀತಿಯಲ್ಲಿ ಹಾಸ್ಯಾಸ್ಪದವೂ ಅಪಾಯಕಾರಿಯೂ ಆಗಿ ಪರಿಣಮಿಸಬಲ್ಲದು. ಬದಲಿಗೆ ಸಹಜ ಮನುಷ್ಯರಾಗಿ ಇದ್ದು ಬಿಡಬೇಕು. ಮನುಷ್ಯ ಜಗತ್ತಿನ ಆತನ ಮಾಸಿಸಿಕ ಭಿನ್ನತೆಗಳನ್ನು, ಸ್ವೀಕರಿಸುವ ಜೊತೆಗೆ ಎಲ್ಲರೂ ಎಲ್ಲ ಕಾಲದಲ್ಲೂ ಕೆಟ್ಟವರು ಇಲ್ಲ ಒಳ್ಳೆಯವರು ಎಂಬ ಸಾಮಾನ್ಯ ನಿರ್ಣಯಕ್ಕೆ ಬರಕೂಡದು. ಮಾನವೀಯತೆಯನ್ನೇ ಉಸಿರಾಡುವ ಬದುಕಿನ ಸಿದ್ಧಾಂತವನ್ನಾಗಿ ಮಾಡಿಕೊಂಡವರು ಕೂಡಾ ಪರಿಸ್ಥಿತಿ ಬಂದರೆ ಕ್ರೌರ್ಯದ ಪರಮಾವಧಿಯನ್ನು ಮೆರೆಯುತ್ತಾರೆ. ಹಾಗೇ ಕ್ರೌರ್ಯವನ್ನೇ ಜೀವನದುದ್ದಕ್ಕೂ ಮಾಡುತ್ತ ಬಂದ ವ್ಯಕ್ತಿ ಕೂಡಾ ಒಮ್ಮೊಮ್ಮೆ ದಯಾಳುತನದಲ್ಲಿ ಶ್ರೀಮಂತಿಕೆ ಮೆರೆಯುತ್ತಾನೆ. ಇಂತಹ ದ್ವಂದ್ವ ನಿಲುವುಗಳು ಎಲ್ಲರಲ್ಲೂ ಇದ್ದೇ ಇರುತ್ತವೆ. ಇದನ್ನೆ ಈ ಕಥೆಗಾರ ಇಲ್ಲಿ ಸುಂದರವಾಗಿ ಸರಳವಾಗಿ ಕಥೆಯಾಗಿಸುತ್ತಾರೆ.

ನಿರೂಪಕ ತನಗೆ ಅಪರಿಚಿತವಾದ ಪ್ರದೇಶವೊಂದರಲ್ಲಿ ತಂಗಿದ್ದಾನೆ. ಅದಂತೂ ಕಳ್ಳಕಾಕರ,, ದರೋಡೆಕೋರರ, ಖೂನಿಗಳ ನೆಲ. ದುಷ್ಟತನಕ್ಕೆ ಆಡಂಬೊಲದಂತಿದೆ. ತನ್ನ ಮೂಲನೆಲಯಿಂದ ದೂರದ ಸ್ಥಳದಲ್ಲಿ ತಂಗಿರುವ ನಿರೂಪಕ ಜೀವನೋಪಾಯಕ್ಕೆ ಇಂಗ್ಲೀಷ್ ಕಲಿಸುವ ಕೆಲಸ ಮಾಡುತ್ತಿದ್ದಾನೆ. ಹಣ ಕೂಡಿಡುವ ಆಸೆಯಿಂದ ದಿನವೊಂದಕ್ಕೆ ಒಂದೇ ಊಟ ಒಂದೇ ಚಹ ಕುಡಿದು ಬದುಕು ನಡೆಸಿದ್ದಾನೆ. ಅಂದೂ ಹಾಗೇ ಗಿಜಿಗಿಜಿಗುಡುವ ರೆಸ್ಟೊರೆಂಟೊಂದರಲ್ಲಿ ಊಟ ಮಾಡಿ ಚಹ ಕುಡಿದು ಇನ್ನೆನು ತಾನು ಈವರೆಗೆ ಕೂಡಿಟ್ಟ ಹಣದಲ್ಲಿ ಬಿಲ್ ಪಾವತಿಸಲು ತನ್ನ ಹಣದ ಪಾಕೀಟಿಟ್ಟ ಜೇಬಿಗೆ ಕೈಯಿಳಿಸಿದ್ದಾನೆ. ಆದರೆ ಇಡೀ ದೇಹವೇ ಸ್ನಾನ ಮಾಡಿದಂತೆ ಆ ಕೈ ಅಲ್ಲೇ ಬೆವೆತುಹೋಗಿದೆ. ಹಣದ ಪಾಕೀಟು ಅಲ್ಲಿಲ್ಲ. ಪಿಕ್ ಪಾಕೆಟ್ ಆಗಿದೆ.

ರೆಸ್ಟೊರೆಂಟ್ ಮಾಲೀಕನಿಗೆ ವಿಷಯ ಹೇಳುತ್ತಲೂ ಆತನ ಕಣ್ಣುಗಳಲ್ಲಿಯ ಕ್ರೌರ್ಯ ಮೆರೆಯುತ್ತದೆ. ನಿರೂಪಕ ನಾಟಕವಾಡುತ್ತಿದ್ದಾನೆ ಎಂದು ತಪ್ಪಾಗಿ ತಿಳಿದು ಹಣ ನೀಡದಿದ್ದಲ್ಲಿ ಕಣ್ಣುಗಳನ್ನು ಕಿತ್ತು ಹಾಕುತ್ತೇನೆಂದು ಬೆದರಿಸುತ್ತಾನೆ. ಮಾನವೀಯತೆಯನ್ನೇ ಮರೆತಂತೆ ವರ್ತಿಸುವ ಅಲ್ಲಿನ ಜನ ನಿರೂಪಕನ ಸಹಾಯಕ್ಕೇ ಬರುವುದಿಲ್ಲ. ಅಸಹಾಯಕತೆ ಮತ್ತು ನಾಚಿಕೆಗಳಿಂದ ಮುದುಡಿಹೋದ ನಿರೂಪಕ ಹಣಹೊಂದಿಸಿ ತರುವವರೆಗೂ ತನ್ನ ಕೋಟನ್ನು ಇಟ್ಟುಕೊಳ್ಳುವಂತೆ ವಿನಂತಿಸುತ್ತಾನೆ. ವಿಕಾರವಾಗಿ ನಗುತ್ತಾ ಮಾಲೀಕ ನಿರೂಪಕ ಧರಿಸಿದ ಬಟ್ಟೆಗಳನ್ನು ಒಂದೊಂದಾಗಿ ಕಳಚಿ ಇಡುವಂತೆ ಹೇಳುತ್ತಾನೆ. ಒಂದೊಂದಾಗಿ ನಿರೂಪಕ ಬಟ್ಟೆ ಕಳಚಿಡುತ್ತಾನೆ. ಕೊನೆಯಲ್ಲಿ ಪಾಯಿಜಾಮವನ್ನೂ ಕಳಚುವಂತೆ ಹೇಳುತ್ತಲೂ ನಿರೂಪಕ ಅಪಮಾನದಿಂದ ಬೆಂದು ಹೋಗುತ್ತಾನೆ. ಅಲ್ಲಿದ್ದ ಜನರೆಲ್ಲ ಹಸಿದ ತೋಳಗಳಂತೆ ನಿರೂಪಕನಿಗೆ ಭಾಸವಾಗುತ್ತಾರೆ.

ಇನ್ನೇನು ಪಾಯಿಜಾಮಿನ ಗುಂಡಿಗಳನ್ನು ನಿಧಾನವಾಗಿ ಒಂದೊಂದಾಗಿ ಕಳಚಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬನ ದನಿ ಕೇಳಿಬರುತ್ತದೆ. ಆರು ಅಡಿ ಎತ್ತರದ, ದಪ್ಪ ಮೀಸೆಯ, ಬೆಳ್ಳಗಿನ ಬಣ್ಣದ ವ್ಯಕ್ತಿಯೊಬ್ಬ ಅಲ್ಲಿ ನಿಂತಿರುತ್ತಾನೆ. ನಿರೂಪಕನ ಬಿಲ್‍ನ ಮೊತ್ತವನ್ನೂ ಆ ವ್ಯಕ್ತಿ ಭರಿಸುತ್ತಾನೆ. ತನ್ನೊಡನೆ ಕರೆದೊಯ್ಯುತ್ತಾನೆ. ಇನ್ನೇನು ಬದುಕೇ ಸಾವಾದ ಹೊತ್ತು, ಹತಾಶೆಯಲ್ಲಿ ಮುಳುಗಿದ ನಿರೂಪಕನಿಗೆ ಈತ ದೇವರಂತೆ ಕಂಡುಬರುತ್ತಾನೆ. ಸಂತೋಷಗೊಂಡ ನಿರೂಪಕ ಆತನ ಹೆಸರು ಕೇಳುತ್ತಲೂ ಆತ ಮೌನವಾಗಿ ನಗುತ್ತಾನೆ. ನಿರೂಪಕನೇ ಆತನಿಗೆ ಮರ್ಸಿ[ ಕರುಣೆ] ಎಂದು ಕರೆದು ಖುಷಿಪಡುತ್ತಾನೆ. ಆದರೆ ಸ್ವಲ್ಪ ದೂರ ಹೋಗುತ್ತಲೂ ನಿರ್ಜನ ಪ್ರದೇಶದಲ್ಲಿ ಆ ಅಪರಿಚಿತ ವ್ಯಕ್ತಿ ತನ್ನ ಅಂಗಿಯ ಬೇರೆ ಬೇರೆ ಜೇಬುಗಳಿಂದ ನಿರೂಪಕನ ಪಾಕೀಟನ್ನು ಒಳಗೊಂಡು ಒಟ್ಟು ಐದು ಹಣದ ಪಾಕಿಟು ತೆಗೆದಿಟ್ಟು ನಿರೂಪಕನ ಪಾಕೀಟನ್ನು ತೆಗೆದುಕೊಳ್ಳುವಂತೆ ಹೇಳುತ್ತಾನೆ. ಈ ಸಂಗತಿಯನ್ನು ಯಾರಿಗೂ ಹೇಳದಂತೆ ಮತ್ತು ಮತ್ತೆಂದೂ ಆ ಸ್ಥಳಕ್ಕೆ ಹಿಂತಿರುಗಿ ನೋಡದಂತೆ ಹೊರಟು ಹೋಗೆಂದು ಹೇಳಿ “ದೇವರು ಒಳ್ಳೆಯದನ್ನು ಮಾಡಲಿ” ಎಂದೂ ಹಾರೈಸುತ್ತಾನೆ.

ಬದುಕಿನ್ನು ಮುಗಿದೇ ಹೋಯಿತೆನ್ನುವಾಗ ಅಚ್ಚರಿಯೊಂದು ಎದುರಾಗುತ್ತದೆ. ಜೀವನದ ದಿಸೆಯನ್ನೆ ಬದಲಾಯಿಸುತ್ತದೆ. ನೋವಿನ ಹಿಂದೆ ನಲಿವಿನ ಕಿರಣವೊಂದು ಮೂಡುತ್ತದೆ. ಅಲ್ಲವೇ? ಇಂತಹದ್ದನ್ನು ಮನುಷ್ಯನಲ್ಲಿಯ ಪೂರ್ಣ ಪರಿವರ್ತನೆ ಎನ್ನಲಾಗದು. ಅದು ಆ ಕ್ಷಣದ ಪರಿವರ್ತನೆಯೂ ಆಗಿರಬಹುದು. ಅಥವಾ ಸಂಪೂರ್ಣ ಬದಲಾವಣೆಯೂ ಆಗಿರಬಹುದು.

ಹಾಗಾಗೇ ಎದುರಾದ ಸಂದರ್ಭವನ್ನು ಅರಗಿಸಿಕೊಳ್ಳಲಾಗದಿದ್ದರೂ ನಿರೂಪಕನೂ ಆ ಅಪರಿಚಿತನಿಗೆ ಶುಭ ಕೋರುತ್ತಾನೆ. ಕಿಸೆಗಳ್ಳನಾದ ಆತನೇ ತನ್ನ ಹಣವನ್ನು ಎಗರಿಸಿದ್ದು ಎಂಬುದು ವೇದ್ಯವಾದರೂ ನಿರೂಪಕ ಆತನನ್ನು “God Bless You“ ಎಂದು ಹರಸುತ್ತಾನೆ. ಅಷ್ಟೇ ಅಲ್ಲ, ಆತ ನಿರೂಪಕನ ನೆನಪಿನಿಂದ ಮರೆಯಾಗುವುದೇ ಇಲ್ಲ.

ವಿಭಿನ್ನ ಸಂದರ್ಭಗಳಲ್ಲಿಯೂ, ಪರಿಸರದಲ್ಲಿಯೂ ನೈತಿಕ ವಿಚಾರಗಳು ಒಂದೇ ನೆಲೆಯಲ್ಲಿ ಹೇಗೆ ಪರಿಗಣಿಸಲ್ಪಡುತ್ತವೆ? ಎಂದಿಗೂ ನಾವು ಇತರರ ಕೃತ್ಯಗಳ ಕುರಿತು ಯಾಕೆ ನಿಖರ ನಿರ್ಣಯಗಳನ್ನು ನೀಡಲಾರೆವು? ಯಾವುದೇ ಸಮಸ್ಯೆಯಾಗಲೀ ಸಂದರ್ಭವೇ ಆಗಲೀ ಏಕೆ ಒಂದೇ ಮುಖದಲ್ಲಿ ಪರಿಗಣಿಸಲ್ಪಡದು? ಎಂಬ ಎಲ್ಲ ಜಿಜ್ಞಾಸೆಗಳಿಗೆ ’The Man’ ಕಥಾನಕ ಹೇಳುತ್ತದೆ ‘ನೀನೊಬ್ಬ ಮನುಷ್ಯ ಸ್ವಭಾವಗಳಿಂದ ಹೊರತಾಗದ ಸಾಮಾನ್ಯ ಮನುಷ್ಯ’.

ಕಲ್ಲು ಹೃದಯದಲ್ಲೂ ಇರುವ ಕರುಣೆಯನ್ನು ಯಾರೂ ಅಲ್ಲಗಳೆಯಲಾರರು ಅಲ್ಲವೇ?

-ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...