ವರ್ಣ ವ್ಯಾಖ್ಯಾನ

Date: 30-03-2022

Location: ಬೆಂಗಳೂರು


'ಕಲಾವಿದ ಕ್ಯಾಂಡಿನಸ್ಕಿ ನಿರ್ದಿಷ್ಟ ಉದ್ಧೇಶವಿಟ್ಟುಕೊಂಡು ಈ ವರ್ಣ ಅಭ್ಯಾಸದಲ್ಲಿ ತೊಡಗಿಲ್ಲ. ಇದೊಂದು ಬಗೆಯ ಆಟ. ಕಲಾವಿದನಿಲ್ಲಿ ಸಂಪೂರ್ಣ ಸ್ವತಂತ್ರ. ಅದನ್ನು ಯಥೇಚ್ಛವಾಗಿ ಅವನು ಬಳಸಿಕೊಂಡಿದ್ದಾನೆ' ಎನ್ನುತ್ತಾರೆ ಲೇಖಕ ಲಕ್ಷ್ಮಣ ಬಾದಾಮಿ. ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ಕಲಾವಿದ ವಾಸಿಲಿ ಕ್ಯಾಂಡಿನಸ್ಕಿ ಅವರ ಕಲರ್ ಸ್ಟಡಿ ಕಲಾಕೃತಿಯ ಕುರಿತು ವಿಶ್ಲೇಷಿಸಿದ್ದಾರೆ.

ಕಲಾಕೃತಿ: ‘ಕಲರ್ ಸ್ಟಡಿ’
ಕಲಾವಿದ: ವಾಸಿಲಿ ಕ್ಯಾಂಡಿನಸ್ಕಿ
ದೇಶ: ರಷ್ಯಾ/ ಫ್ರೆಂಚ್
ಕಲಾಪಂಥ: ಅಮೂರ್ತ

ತಾವರೆಕೆರೆ, ಹಾಲಕೆರೆ, ಮೀನಕೆರೆ ಹೀಗೆ ನಾನಾ ಕೆರೆಗಳಿರುವಂತೆ ಇದನ್ನು ಬಹುವರ್ಣ ಕೆರೆ ಅಥವಾ ಬಹುವರ್ಣ ಕೊಳ ಎಂದು ಭಾವಿಸೋಣ. ಅಲ್ಲಿ ಎಸೆದ ಒಂದು ಏಟಿಗೆ ಎದ್ದಿವೆ ನಾನಾ ವರ್ಣದ ಜಲತರಂಗಗಳು!! ಹೀಗೆ ಹನ್ನೆರಡು ಏಟು, ಹನ್ನೆರಡು ಬಾರಿಯೂ ನಾನಾ ರೀತಿಯ ವರ್ಣ ತರಂಗಗಳು ಉಂಟಾಗಿವೆ. ಯಾಕೆ? ಹೇಗೆ? ಏನು? ಅಂತ ಪ್ರಶ್ನಿಸುವುದಕ್ಕೆ ಮುಂಚೆ ಅಲ್ಲಿ ಉಂಟಾದ ಉತ್ತರವನ್ನು ಆಸ್ವಾದಿಸುವುದರಲ್ಲಿ ಸೊಗಸಿದೆ. ಆಗಸದಲ್ಲುಂಟಾಗುವ ಕಾಮನಬಿಲ್ಲು, ಅದರ ಬಣ್ಣ ಅದಕ್ಕೆಲ್ಲ ಒಂದು ನೈಸರ್ಗಿಕ ನಿಯಮವಿದೆ. ಹೋಳಿಯಲ್ಲಾಡುವ ರಂಗಿನಾಟಕ್ಕೆ ಯಾವ ನಿಯಮವಿಲ್ಲ, ಬಂಧವಿಲ್ಲ. ಪರಸ್ಪರ ಬಣ್ಣ ಎರಚಿ ಖುಶಿ ಪಡುವುದೇ ಹೋಳಿ ಹಬ್ಬದ ಉದ್ಧೇಶ. ಪರಿಣಾಮದ ಬಗ್ಗೆ ಮುಂಜಾಗ್ರತೆಯಿಂದ ಕ್ರಿಯೆಯಲ್ಲಿ ತೊಡಗುವುದು ಒಂದು ವಿಧ. ಅದರ ಬಗ್ಗೆ ಚೌಕಾಶಿ ಮಾಡದೇ ಕ್ರಿಯೆಯ ಸ್ವಾತಂತ್ರ್ಯವನ್ನು ಸೂರೆ ಮಾಡುವುದು ಇನ್ನೊಂದು ವಿಧ. ಇದು ಎರಡನೇ ವಿಧಕ್ಕೆ ಸೇರಿದ ಕೃತಿ. ಕಲಾವಿದ ಕ್ಯಾಂಡಿನಸ್ಕಿ ನಿರ್ದಿಷ್ಟ ಉದ್ಧೇಶವಿಟ್ಟುಕೊಂಡು ಈ ವರ್ಣ ಅಭ್ಯಾಸದಲ್ಲಿ ತೊಡಗಿಲ್ಲ. ಇದೊಂದು ಬಗೆಯ ಆಟ. ಕಲಾವಿದನಿಲ್ಲಿ ಸಂಪೂರ್ಣ ಸ್ವತಂತ್ರ. ಅದನ್ನು ಯಥೇಚ್ಛವಾಗಿ ಅವನು ಬಳಸಿಕೊಂಡಿದ್ದಾನೆ.

ಇದೊಂದು ಅಮೂರ್ತ ಕಲಾಕೃತಿಯಾಗಿರುವುದರಿಂದ ನೋಡುಗನು ತನ್ನ ಸಂವೇದನೆಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಅನ್ವಯಿಸಿ ನೋಡಬಹುದು. ಯಾಕೆಂದರೆ ಈ ಬಗೆಯ ಕಲಾಕೃತಿಯನ್ನು ನಿರ್ದಿಷ್ಟ ಅರ್ಥಕ್ಕೆ ಸೀಮಿತಗೊಳಿಸುವುದೆಂದರೆ ಕಲೆಯ ಸ್ವಾತಂತ್ರ್ಯವನ್ನು ಕತ್ತು ಹಿಚುಕಿದಂತೆಯೇ ಸರಿ. ಕವಿ ತನ್ನ ಕಾವ್ಯದ ಕುರಿತು ಹೀಗೆ ಹೇಳುತ್ತಾನೆ- 'ಕಾವ್ಯವನ್ನು ಕೈಯಲ್ಲಿ ಹಿಡಿದುಕೊಂಡು ಅರ್ಥ ಹುಡುಕಬಾರದು, ಅದರಂಥ ಅನರ್ಥ ಕ್ರಿಯೆ ಮತ್ತೊಂದಿಲ್ಲ.’1 (ರಾಗಂ, `ಇರುವಷ್ಟು ಕಾಲ.. ಇರುವಷ್ಟೇ ಕಾಲ: ಕಣ್ವ ಪ್ರಕಾಶನ ಬೆಂಗಳೂರು) ಕವಿ ತನ್ನ ಅಕ್ಷರ ಕಾವ್ಯದ ಕುರಿತು ಹೇಳಿದ ಮಾತು ಈ ವರ್ಣಕಾವ್ಯಕ್ಕೂ ಅನ್ವಯಿಸುತ್ತದೆ. ಸ್ವತಃ ಸಂಗೀತಗಾರನಾಗಿದ್ದ ಕ್ಯಾಂಡಿನಸ್ಕಿ ಆಲಾಪನೆಗಳನ್ನು ವಿಸ್ತರಿಸುವಂತೆ ಪರಿಪರಿಯ ವರ್ಣತಂತುಗಳನ್ನು ಮೀಟಿ ಎಳೆದಿದ್ದಾನೆ. `ಬಣ್ಣಗಳನ್ನು ಕೇಳಬಹುದು ಮತ್ತು ಧ್ವನಿಯನ್ನು ನೋಡಬಹುದು’ ಎಂದಿರುವ ಅವನು ಕೆಲವು ಪೇಂಟಿಂಗ್‍ಳನ್ನು ಸಂಗೀತವೆಂದೇ ಬಗೆದಿದ್ದಾನೆ.

ಚಿತ್ರದಲ್ಲಿ ಒಂದು ನಿರ್ದಿಷ್ಟ ವಸ್ತುವಿಲ್ಲ, ಹನ್ನೆರಡು ಚೌಕಗಳಿವೆ. ಪ್ರತಿ ಚೌಕದಲ್ಲಿ ಬಳಸಿದ ಬಣ್ಣಗಳಿಗೆ ಯಾವುದೇ ನಿಯಮವಿಲ್ಲ, ಪ್ರಮಾಣವಿಲ್ಲ. ಆತ ಈ ಚಿತ್ರವನ್ನು Colour Study ಎಂದಿರುವುದರಿಂದ ಒಂದೊಂದು ಚೌಕಾಕಾರದಲ್ಲೂ ಬೇರೆ ಬೇರೆ ಬಣ್ಣಗಳಿಂದ ಮೂರ್ನಾಲ್ಕು ರೌಂಡು ಸುತ್ತಿದ್ದಾನೆ. ಪ್ರತೀ ವೃತ್ತವೂ ತನ್ನದೇ ಆದ ವಕ್ರಾಕಾರದಲ್ಲಿ ಸುತ್ತಿಕೊಂಡು ಒಂದು ಇನ್ನೊಂದಕ್ಕಿಂತ ಭಿನ್ನವಾಗಿವೆ. ಬಣ್ಣಗಳ ಸಂಯೋಜನೆಯೂ ಪ್ರತಿ ವೃತ್ತಕ್ಕೆ ವಿಭಿನ್ನವಾಗಿ ಪ್ರತಿಯೊಂದನ್ನು ಸಂಪೂರ್ಣ ಪ್ರತ್ಯೇಕಿಸಿಬಿಡುತ್ತದೆ. ಬಳಸಿರುವ ಬಣ್ಣಗಳಲ್ಲಿ ಕೆಂಪು, ಹಳದಿ, ನೀಲಿ ಹೆಚ್ಚು ರಾಚುತ್ತಿವೆ. ಹಾಗೆ ನೋಡಿದರೆ ಇದು ಪೂರ್ಣಗೊಂಡ ಕೃತಿಯಲ್ಲ. ಆದರೂ ಅವನ ಮಹತ್ವದ ಕೃತಿಗಳಲ್ಲಿ ಇದು ಒಂದಾಗಿದೆ, ಕಾರಣ ಇದರ ವರ್ಣವೈಖರಿ! ಒಂದೆಡೆ ಕೇಂದ್ರಿಕೃತಗೊಂಡ ಚೌಕಾಕಾರದಲ್ಲಿ ವಿವಿಧ ಬಣ್ಣಗಳ ಈ ಪ್ರಯೋಗವನ್ನು ನಡೆಸಿರುವುದು- ಸೃಜನಶೀಲ ಪ್ರಕ್ರಿಯೆಯಲ್ಲಿ ಪೂರಕ ವಸ್ತುಗಳಾಗಿರುವ ಬಣ್ಣಗಳನ್ನು ವಿಭಿನ್ನವಾಗಿ ಸಂಯೋಜಿಸಿದಾಗ ಹೇಗೆ ಗ್ರಹಿಸಲಾಗುತ್ತದೆ ಎಂಬುದರ ಕುರಿತು ಇದು ಒಂದು ಸಣ್ಣ ಅಧ್ಯಯನವಾಗಿದೆ.

ಕ್ಯಾಂಡಿನಸ್ಕಿಯನ್ನು `ವರ್ಣಮೋಹಿ’ ಎನ್ನಬಹುದು. `ಚಿತ್ರದಲ್ಲಿ ವರ್ಣವು ದೃಶ್ಯ ಅಂಶಕ್ಕಿಂತ ಹೆಚ್ಚಿನ ಪಾತ್ರ ವಹಿಸುತ್ತದೆ. ಬಣ್ಣವು ಅದರ ಆತ್ಮ. ಬಣ್ಣಗಳು ಪರಸ್ಪರ ಮತ್ತು ನೋಡುಗರೊಂದಿಗೆ ಸಂವಹನ ನಡೆಸುತ್ತವೆ’ ಎಂಬುದರ ಕುರಿತು ತನ್ನ ದೃಷ್ಟಿಕೋನವನ್ನು ತನ್ನ ಪುಸ್ತಕದಲ್ಲಿ ಕಾವ್ಯಾತ್ಮಕವಾಗಿ ವರ್ಣಿಸಿದ್ದಾನೆ. ಸ್ವತಃ ಸಂಗೀತಗಾರನಾಗಿದ್ದ ಕ್ಯಾಂಡಿನಸ್ಕಿ ಪಿಯಾನೊ ಮತ್ತು ಸೆಲ್ಲೊ ವಾದ್ಯಗಳನ್ನು ನುಡಿಸುತ್ತಿದ್ದನು. ಸಂಗೀತ ಮತ್ತು ವರ್ಣಚಿತ್ರಕಲೆಗಳೆರಡನ್ನೂ ಭೇದವಿಲ್ಲದೇ ಅವನು ನೋಡುತ್ತಿದ್ದನು. ಸಂಗೀತ ಭಾಷೆಯImprovasations, Compositions ನಂತಹ ಪದಗಳನ್ನು ತನ್ನ ಅನೇಕ ಕೃತಿಗಳ ಶೀರ್ಷಿಕೆಯಾಗಿ ನೀಡಿದ್ದಾನೆ.

ಕ್ಯಾಂಡಿನಸ್ಕಿಯ ಅಮೂರ್ತಕ್ಕೆ ಮೂರ್ತ ರೂಪ ನೀಡುವ ಕಲಾವಿದನಾಗಿದ್ದಾನೆ. ಅವನ ಬಹುತೇಕ ಕಲಾಕೃತಿಗಳು ನಿಸ್ಸಂದೇಹವಾಗಿಯೂ ಸಂಗೀತ ಲಯದ ಚಹರೆಯನ್ನು ಹಿಡಿದಿಟ್ಟಿವೆ. `ಸಂಗೀತ ಪ್ರಪಂಚಕ್ಕೆ ಹತ್ತಿರವಾಗುವ ಅವನ ಚಿತ್ರಗಳಲ್ಲಿ ಕೇವಲ ಬಣ್ಣ ಮತ್ತು ರೇಖೆಗಳನ್ನು ತನ್ನ ಮನಸ್ಸಿನ ಆಧ್ಯಾತ್ಮಿಕ ಅವಸ್ಥೆಗಳನ್ನು ಅಭಿವ್ಯಕ್ತಿಸಲು ಬಳಸಿದ್ದಾನೆ. ಅವನ ಚಿತ್ರಣ ಅಮೂರ್ತವಾಗಿದ್ದು ಯಾವುದೇ ಹೊರಜಗತ್ತಿನ ವಸ್ತುವಿನ ನಿರೂಪಣೆಯಾಗುವುದಿಲ್ಲ.’2 (ಕಣ್ನೆಲೆ) ಕಲಾವಿದನು ತನ್ನ ತೀವೃ ಹಂಬಲವನ್ನು ಮುಕ್ತ ರೂಪಗಳಿಂದ ಈ ತೆರನಾಗಿ ಕೃತಿಗಳಲ್ಲಿ ತೋರಿಸಿದ್ದಾನೆ. ಇನ್ನೂ ಕೆಲವು ಕೃತಿಗಳಲ್ಲಿ ಜ್ಯಾಮಿತಿಯ ರೂಪಗಳು ಒಂದು ನಿಯತಿಯಲ್ಲಿ ಸಂಯೋಜನೆಗೊಂಡಿವೆ. ಮತ್ತೊಂದು ಬಗೆಯ ಕೃತಿಗಳಿವೆ; ಅವು ಕಲಾವಿದನ ಸ್ವಾತಂತ್ರ್ಯವನ್ನು ಮೀರಿದ ಹಂತದವು ಎನ್ನಬಹುದು. ಒಂದು ಬಗೆಯ ಸ್ವೇಚ್ಛೆಯವು ಅಂದರೂ ಅನ್ನಬಹುದು! ಅಲ್ಲಿ ಬಣ್ಣಗಳು, ರೇಖೆಗಳು ಯದ್ವಾತದ್ವಾ ದಿಕ್ಕಾಪಾಲಾಗಿ ಸಂಚರಿಸಿವೆ.

ಅಮೂರ್ತ: ಜಗತ್ತಿನಲ್ಲಿರುವ ದೃಶ್ಯಪ್ರಪಂಚಕ್ಕೆ ಸಂಪೂರ್ಣ ಭಿನ್ನವಾಗಿ, ಸ್ವತಂತ್ರವಾಗಿ ಬಣ್ಣ ಮತ್ತು ರೇಖೆಗಳನ್ನೆ ಮುಖ್ಯ ದೃಶ್ಯಭಾಷೆಯಾಗಿ ಇಲ್ಲಿ ಬಳಸ್ಪಲ್ಪಡುತ್ತದೆ. ಬಣ್ಣಗಳು ಇಲ್ಲಿ ಸಂಗೀತದ ನಾದ ಪ್ರವಹಿಸುವಂತೆ ಹರಡಿ ಅಮೂರ್ತ ರೂಪವನ್ನುಂಟು ಮಾಡುತ್ತವೆ. ಅಮೂರ್ತಕಲೆಗೆ ಸಂವಾದಿಯಾಗಿ ಸಾಂಕೇತಿಕವಲ್ಲದ ಕಲೆ, ವಸ್ತುನಿಷ್ಠವಲ್ಲದ ಕಲೆ, ಪ್ರಾತಿನಿಧ್ಯೇತರ ಕಲೆ ಎಂಬುದಾಗಿ ಹೇಳಬಹುದು. ಫೋಟೊಗ್ರಫಿಯ ಶೋಧದನಂತರ ಕಲಾವಿದರು ಬಹಳಷ್ಟು ಭಿನ್ನವಾಗಿ ಯೋಚಿಸಲು ಆರಂಭಿಸಿದರು. ವಸ್ತುಗಳು, ವ್ಯಕ್ತಿಗಳು ಮತ್ತು ಭೂದೃಶ್ಯಗಳನ್ನು ಕೆಮೆರಾ ಯಥವತ್ತಾಗಿ ಸೆರೆಹಿಡಿದು ಕೊಡುತ್ತಿದ್ದರಿಂದ ವಾಸ್ತವವಾದಿಗಳು ಕೆಮೆರಾಕ್ಕಿಂತ ಭಿನ್ನ ಚಿತ್ರಣಕ್ಕೆ ಮುಂದಾದರು. ಅಮೂರ್ತ ಪಂಥ ಆರಂಭಕ್ಕೂ ಮುನ್ನವೇ ಹಲವು ಶೈಲಿಗಳಲ್ಲಿ ಕಲಾವಿದರು ಅಮೂರ್ತ ಅಂಶಗಳನ್ನು ಬಳಸಿದ್ದರು. ಇಂಪ್ರೆಶ್ಶನಿಸಂ, ಪೋಸ್ಟ್ ಇಂಪ್ರೆಶ್ಶನಿಸಂ ಮತ್ತು ಕ್ಯೂಬಿಸಂಗಳಲ್ಲಿ ಅಮೂರ್ತತೆಯ ಲಕ್ಷಣಗಳಿವೆ. ಆದರೆ ಹೊರ ಪ್ರಪಂಚದಲ್ಲಿಲ್ಲದ ಸಂಪೂರ್ಣ ಅಮೂರ್ತವಾಗಿರುವ ಚಿತ್ರಣವನ್ನು ಮೊದಲು ಮಾಡಿದ ಶ್ರೆಯಸ್ಸು ವಾಸಿಲಿ ಕ್ಯಾಂಡಿನಸ್ಕಿಗೆ ಸಲ್ಲುತ್ತದೆ.

ವಾಸಿಲಿ ಕ್ಯಾಂಡಿನಸ್ಕಿ ಅವರ ಇತರೆ ಕಲಾಕೃತಿಗಳು:

ಈ ಅಂಕಣದ ಹಿಂದಿನ ಬರೆಹಗಳು:
ಚಂದವಿರುವುದಷ್ಟೇ ಕಲೆಯಲ್ಲ
ಕನಸುಗಳು ಮೈದೋರಿದಾಗ
ಕತ್ತಲೆಯ ಅಳತೆಗಾರ
ದುಃಖದ ಉತ್ಪಾತ - ದಿ ಸ್ಕ್ರೀಮ್
ಹಸಿವು ತಣಿಸುವ ತಾಯಿ
ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು
ಗೌಳಿಗಿತ್ತಿಯ ಮೌನ ಜಾಗರಣೆ!
ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...