ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ

Date: 29-08-2022

Location: ಬೆಂಗಳೂರು


“ಜಾತಿತಾರತಮ್ಯ ಉಂಟಾಗಲು ಪ್ರಮುಖವಾಗಿ ಎರಡು ಕಾರಣಗಳಿದ್ದವು. ಒಂದು ಆಹಾರ ಪದ್ಧತಿ, ಎರಡು ವಂಶಪರಂಪರೆ. ಮಾಂಸಾಹಾರಿಗಳಾದ ಅಸ್ಪೃಶ್ಯರನ್ನು ಅಸಹ್ಯವಾಗಿ ನೋಡುವುದು, ವಂಶವಾಹಿನಿಯ ಆಧಾರದ ಮೇಲೆ ವೃತ್ತಿಗಳನ್ನು ನಿಗದಿಗೊಳಿಸುವುದು, ಆಹಾರಪದ್ಧತಿಯ ಆಧಾರದ ಮೇಲೆ ಮೇಲು-ಕೀಳು ಎಂಬ ತರತಮ ಭೇದವನ್ನು ಹುಟ್ಟುಹಾಕುವುದು ನಡೆಯಿತು” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ವಚನಕಾರರು ಪ್ರತಿಪಾದಿಸಿದ ವರ್ಣ ಸಮಾನತೆ ಕುರಿತು ವಿಶ್ಲೇಷಿಸಿದ್ದಾರೆ.

ವರ್ಣಸಮಾನತೆ ಸಿಗಬೇಕಾದರೆ ಭಾರತದಂತಹ ದೇಶದಲ್ಲಿ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕಾಗುತ್ತದೆ. ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಬಿಳಿಯರ ವಿರುದ್ಧ ಹೋರಾಡಬೇಕಾಗುತ್ತದೆ. ಭಾರತದಲ್ಲಿ ವರ್ಣವ್ಯವಸ್ಥೆ ಜಾತಿಯ ಮೂಲಕ-ವೃತ್ತಿಯ ಮೂಲಕ ಬಂದರೆ, ಬೇರೆ ದೇಶಗಳಲ್ಲಿ ಅದು ಮನುಷ್ಯರ ಮುಖಬಣ್ಣದ ಮೂಲಕ ಬಂದಿದೆ. ಹೀಗಾಗಿ ಇಲ್ಲಿಯ ವರ್ಣಸಮಾನತೆಯೆಂದರೆ ಅದು ಜಾತಿಸಮಾನತೆಯೇ ಆಗಿದೆ. ಜಾತಿಗೂ-ವೃತ್ತಿಗೂ ಈ ದೇಶದಲ್ಲಿ ನೇರವಾದ ಸಂಬಂಧವಿದೆ. ಇಂತಿಂತಹ ಜಾತಿಯಲ್ಲಿ ಹುಟ್ಟಿದವರು, ಇಂತಿಂತಹ ವೃತ್ತಿಗಳನ್ನೇ ಮಾಡಬೇಕೆಂದು ವರ್ಣವವ್ಯಸ್ಥೆ ನಿಯಮಗಳನ್ನು ಮಾಡಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಈ ನಾಲ್ಕು ಜಾತಿವ್ಯವಸ್ಥೆಗಳನ್ನು ಹೇಳಿರುವ ಚಾತುರ್ವರ್ಣದ ಪ್ರತಿಪಾದಕರು ಅಸ್ಪೃಶ್ಯರನ್ನು ಈ ಚೌಕಟ್ಟಿನಿಂದ ಹೊರಗಿಟ್ಟಿದ್ದಾರೆ. ಹೀಗಾಗಿ ಅವರು ಪಂಚಮರೆಂದು ಕರೆಸಿಕೊಂಡಿದ್ದಾರೆ. ಪುರೋಹಿತಶಾಹಿ ವ್ಯವಸ್ಥೆ ಈ ದೇಶದಲ್ಲಿ ಅಸ್ಪೃಶ್ಯರಿಗೆ ತಾವು ನಿರ್ಮಿಸಿಕೊಂಡ ವರ್ಣವ್ಯವಸ್ಥೆಯಲ್ಲಿ ಸ್ಥಾನವನ್ನೇ ಕೊಟ್ಟಿರುವುದಿಲ್ಲ. ಈ ಕಾರಣಕ್ಕಾಗಿಯೇ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟುಹಾಕುತ್ತಾರೆ.

ಮನುಸ್ಮೃತಿ ಮತ್ತು ಭಗವದ್ಗೀತೆಗಳು ಶಾಸ್ತ್ರಗ್ರಂಥಗಳಾಗಿವೆ. ವೈದಿಕರಿಗೆ ಕಾನೂನು ಪುಸ್ತಕಗಳಾಗಿವೆ. ಡಾ.ಅಂಬೇಡ್ಕರ್ ಅವರು ರೂಪಿಸಿದ ಭಾರತದ ಸಂವಿಧಾನ ಭಾರತೀಯರ ನಿಜವಾದ ಕಾನೂನು ಪುಸ್ತಕವಾಗಿದೆ, ನಿಜವಾದ ಧರ್ಮವಾಗಿದೆ. ಆದರೆ ಈ ದೇಶವ್ಯವಸ್ಥೆಯಲ್ಲಿ ಮನುಸ್ಮೃತಿ-ಭಗವದ್ಗೀತೆಗಳೇ ಶತಮಾನಗಳಿಂದ ಬೇರುಬಿಟ್ಟಿರುವುದರಿಂದ ಕೆಲವು ಮತೀಯ ರಾಜಕೀಯ ಮುಖಂಡರು ಭಾರತದ ಸಂವಿಧಾನವನ್ನೇ ಬದಲಿಸಬೇಕೆಂದು ಇಂದು ಬಯಸಿದ್ದಾರೆ. ಅಂದರೆ ಶತಮಾನಗಳಿಂದ ಈ ಹೋರಾಟವಿದೆ; ಅದು ಇಂದಿಗೂ ಜೀವಂತವಾಗಿದೆ. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ನಿಜವಾದ ಸಮಾನತೆ ಬರಬೇಕಾದರೆ ಮೊದಲು ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕೆಂದು ಹೇಳಿದರು. ವೇದ-ಆಗಮ-ಸ್ಮೃತಿಗಳಲ್ಲಿರುವ ವರ್ಣವ್ಯವಸ್ಥೆಯ ಸಂಗತಿಗಳನ್ನು ನೇರವಾಗಿ ವಿರೋಧಿಸಿದರು.

ಮನುಸ್ಮೃತಿ ಮತ್ತು ಭಗವದ್ಗೀತೆ ಈ ದೇಶದ ಧಾರ್ಮಿಕ ಶಾಸ್ತ್ರಗ್ರಂಥಗಳು. ರಾಮಾಯಣ-ಮಹಾಭಾರತ ಮಹಾಕಾವ್ಯಗಳು ಈ ದೇಶದ ಸಾಂಸ್ಕೃತಿಕ ಪಠ್ಯಗಳು. ಶರಣರು ಈ ಧಾರ್ಮಿಕ-ಶಾಸ್ತ್ರಗ್ರಂಥಗಳನ್ನು ವಿರೋಧಿಸುತ್ತಾರೆಯೇ ಹೊರತು, ರಾಮಾಯಣ-ಮಹಾಭಾರತದಂತಹ ಸಾಂಸ್ಕೃತಿಕ ಪಠ್ಯಗಳನ್ನಲ್ಲವೆಂಬುದು ಬಹುಮುಖ್ಯ ಸಂಗತಿಯಾಗುತ್ತದೆ. ಈ ಮಹಾಕಾವ್ಯಗಳನ್ನು ರಚಿಸಿರುವ ವ್ಯಾಸ-ವಾಲ್ಮೀಕಿ ಕವಿಗಳು ಶೂದ್ರರಾಗಿದ್ದರೆಂಬುದಕ್ಕೆ ಶರಣರಲ್ಲಿ ಗೌರವಭಾವವಿದೆ. ವಾಲ್ಮೀಕಿ ಮತ್ತು ವ್ಯಾಸ ಮಹಾಕವಿಗಳು ಮನುಸ್ಮೃತಿ ಮತ್ತು ಭಗವದ್ಗೀತೆಗಳನ್ನು ವಿರೋಧಿಸದಿದ್ದರೂ ಆ ಮಹಾಕಾವ್ಯಗಳಲ್ಲಿ ಬರುವ ರಾಮ-ಕೃಷ್ಣರು ಸಾಂಸ್ಕೃತಿಕ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಎಲ್ಲ ಜನಸಮುದಾಯಗಳೂ ಇವೆ. ಈ ಕಾರಣಕ್ಕಾಗಿಯೇ ಇಂದು ರಾಮಾಯಣ-ಮಹಾಭಾರತದಂತಹ ಮಹಾಕಾವ್ಯಗಳು ಜನಪ್ರಿಯವಾಗಿವೆ. ಮನುಸ್ಮೃತಿ ಮತ್ತು ಭಗವದ್ಗೀತೆಯಂತಹ ಶಾಸ್ತ್ರಗ್ರಂಥಗಳು ಕಠಿಣ ಕಾನೂನುಗಳ ಮೂಲಕ ವರ್ಣವ್ಯವಸ್ಥೆಯನ್ನು ಗಟ್ಟಿಗೊಳಿಸಿದರೆ, ರಾಮಾಯಣ-ಮಹಾಭಾರತದಂತಹ ಸಾಂಸ್ಕೃತಿಕ ಪಠ್ಯಗಳು ಸೌಹಾರ್ದಯುತವಾಗಿ ಬಾಳುವುದನ್ನು ಕಲಿಸುತ್ತವೆ. ಈ ಕಾರಣಕ್ಕಾಗಿಯೇ ಶರಣರು ವರ್ಣವ್ಯವಸ್ಥೆಯ ಶಾಸ್ತ್ರಗ್ರಂಥಗಳನ್ನು ವಿರೋಧಿಸಿದರೇ ಹೊರತು, ಆ ಕಾಲದ ಸಾಂಸ್ಕೃತಿಕ ಪಠ್ಯಗಳನ್ನಲ್ಲವೆಂಬುದು ಗಮನಿಸಬೇಕಾದ ಸಂಗತಿಯಾಗುತ್ತದೆ.

ರಾಮಾಯಣ-ಮಹಾಭಾರತದಂತಹ ಕಾವ್ಯಗಳು ಕಾಲಕಾಲಕ್ಕೆ ಬೇರೆ ಬೇರೆ ರೂಪಗಳಿಂದ ಹುಟ್ಟಿಕೊಂಡುಬಂದಿವೆ. ವಾಲ್ಮೀಕಿ `ರಾಮಾಯಣ’ ಅಂದಿನ ಮಹಾಕಾವ್ಯವಾದರೆ, ಕುವೆಂಪು `ರಾಮಾಯಣ ದರ್ಶನಂ’ ಇಂದಿನ ಮಹಾಕಾವ್ಯವಾಗಿದೆ. ಬಿಲ್ಲುಬಾಣ ಹಿಡಿದ ರಾಮ ಅಲ್ಲಿ ಕಾಣಿಸಿದರೆ, ಶೂದ್ರ ತಪಸ್ವಿಯ ಪಾದಕ್ಕೆ ನಮಿಸುವ ಅಂತಃಕರಣಿ ರಾಮ ಇಲ್ಲಿ ಕಾಣಿಸುತ್ತಾನೆ. ಭಾರತೀಯ ಭಾಷೆಗಳ ಅನೇಕ ಕವಿಗಳು ಕಾಲದಿಂದ ಕಾಲಕ್ಕೆ ರಾಮಾಯಣ-ಮಹಾಭಾರತದ ವಸ್ತುವನ್ನಾಧರಿಸಿಯೇ ತಮ್ಮ ಹೊಸ ರಾಮಾಯಣ-ಮಹಾಭಾರತಗಳನ್ನು ಇಂದಿನವರೆಗೂ ಸೃಷ್ಟಿಸುತ್ತಲೇ ಬಂದಿದ್ದಾರೆ. ಯಾವ ಧರ್ಮಗಳಲ್ಲಿ ಸಾಂಸ್ಕೃತಿಕ ಪಠ್ಯಗಳಿರುವುದಿಲ್ಲವೋ ಅಂತಹ ಧರ್ಮಗಳು ಜಡತ್ವದಿಂದ ಸ್ಥಗಿತಗೊಳ್ಳುತ್ತವೆ, ಮತೀಯತೆಯ ಕಾರಣದಿಂದ ಕೋಮುಗಲಭೆಗಳಿಗೆ ಕಾರಣವಾಗುತ್ತವೆ. ಕೋಮು ಸಂಘರ್ಷವು, ಶಾಸ್ತ್ರಗ್ರಂಥಗಳಲ್ಲಿ-ಧರ್ಮಗ್ರಂಥಗಳಲ್ಲಿ ಕಾಣಿಸಿಕೊಂಡರೆ ಕೋಮು ಸೌಹಾರ್ದತೆ, ಸಾಂಸ್ಕೃತಿಕ ಪಠ್ಯಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಶರಣರು ಧರ್ಮದ ಮೂಲಕ ಸಾಮಾಜಿಕ ಚಳವಳಿಯನ್ನು ಹುಟ್ಟುಹಾಕಿದರು. ಹೀಗಾಗಿ ಯಾವ ಧರ್ಮಗಳಲ್ಲಿಯೂ ಇರದ ಚಳವಳಿ ಇವರ ಧರ್ಮದ ಕೇಂದ್ರವಾಯಿತು. ಶರಣರು ಸಾಮಾಜಿಕ-ಆರ್ಥಿಕ-ರಾಜಕೀಯ ಕ್ಷೇತ್ರಗಳಲ್ಲಿ ಸಮಾನತೆಯ ನೀತಿಯನ್ನು ರೂಪಿಸಿದರು. ಹೀಗಾಗಿ ಯಾವ ಸಮಾಜದಲ್ಲಿಯೂ ಕಾಣದ ಧಾರ್ಮಿಕ ತಾತ್ವಿಕತೆ ಇವರ ನವಸಮಾಜದಲ್ಲಿ ಕಾಣಿಸಿಕೊಂಡಿತು. ವರ್ಣಹೋರಾಟ ಪ್ರಾರಂಭಿಸುವ ಮೊದಲು ಅವರು ಹಿಂದಿನ ಧಾರ್ಮಿಕ-ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದರು. ವೇದ-ಆಗಮ-ಸ್ಮೃತಿಗಳನ್ನು ಓದಿಕೊಂಡರು. ಆಗ ಅವರಿಗೆ ನಿಜವಾದ ಸಮಸ್ಯೆಯೆಲ್ಲಿದೆಯೆಂಬುದು ತಿಳಿಯಿತು. ಇಂತಹ ಸಮಸ್ಯೆಗಳಿಗೆ ಕಾರಣ ಯಾರೆಂಬುದು ಸ್ಪಷ್ಟವಾಯಿತು. ಇದನ್ನೇ ಅವರು ಪ್ರಾಸಂಗಿಕವಾಗಿ ತಮ್ಮ ವಚನಗಳಲ್ಲಿ ಪ್ರಾಸ್ತಾಪಿಸಿದ್ದಾರೆ.

ಹಿಂದೆ ವರ್ಣವ್ಯವಸ್ಥೆಯನ್ನು ವೈದಿಕರು ಧರ್ಮದ ಹೆಸರಿನಲ್ಲಿ ಹುಟ್ಟುಹಾಕಿದರು. ಪುರೋಹಿತರ ಮೂಲಕ ಜಾರಿಗೆ ತಂದರು. ಇಂತಹ ಜಾತಿತಾರತಮ್ಯ ಉಂಟಾಗಲು ಪ್ರಮುಖವಾಗಿ ಎರಡು ಕಾರಣಗಳಿದ್ದವು. ಒಂದು ಆಹಾರ ಪದ್ಧತಿ, ಎರಡು ವಂಶಪಾರಂಪರೆ. ವಂಶವಾಹಿನಿಯ ಜಿನ್ಸಗಳನ್ನು ಹಿಡಿದುಕೊಂಡು ಅವರು ತಾರತಮ್ಯ ನೀತಿಯನ್ನು ಪ್ರಕಟಿಸಿದರು. ಮಾಂಸಾಹಾರಿಗಳಾದ ಅಸ್ಪೃಶ್ಯರನ್ನು ಅಸಹ್ಯವಾಗಿ ನೋಡತೊಡಗಿದರು. ವಂಶವಾಹಿನಿಯ ಆಧಾರದ ಮೇಲೆ ವೃತ್ತಿಗಳನ್ನು ನಿಗದಿಗೊಳಿಸಿದರು. ಆಹಾರಪದ್ಧತಿಯ ಆಧಾರದ ಮೇಲೆ ಮೇಲು-ಕೀಳು ಎಂಬ ತರತಮ ಭೇದವನ್ನು ಹುಟ್ಟುಹಾಕಿದರು.

ಈ ಎರಡು ವಿಚಾರಗಳ ಬಗ್ಗೆ ಶರಣರು ಚಿಂತನೆ ನಡೆಸಿದರು. ಅದರಲ್ಲಿಯೂ ಬಸವಣ್ಣನವರಂತಹ ಮುಖಂಡರು ಹೆಚ್ಚು ತಲೆಕೆಡಿಸಿಕೊಂಡರು. ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯರಂತಹ ದಲಿತ ವಚನಕಾರರು ಈ ಕುರಿತು ಹೆಚ್ಚು ಚಿಂತನೆ ಮಾಡಿದರು. ಕೃತಯುಗ, ತ್ರೈತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳಲ್ಲಿ ಸಾಮಾಜಿಕವ್ಯವಸ್ಥೆ ಹೇಗಿತ್ತು? ಯಾವ್ಯಾವ ಧರ್ಮಗಳು ಅಸ್ತಿತ್ವದಲ್ಲಿದ್ದವು? ಎಂಬಂತಹ ಮಹತ್ವದ ವಿಷಯಗಳ ಬಗೆಗೆ ಅಧ್ಯಯನ ಮಾಡಿದರು. ಈ ನಾಲ್ಕು ಯುಗಗಳಲ್ಲಿ ಆಹಾರಪದ್ಧತಿ ಹೇಗಿತ್ತೆಂಬುದ್ನನ್ನು ತಿಳಿದುಕೊಂಡರು.

ಹಿಂದಿನ ಯುಗಗಳಲ್ಲಿ ಬ್ರಾಹ್ಮಣರೇ ಮಾಂಸಾಹಾರಿಗಳಾಗಿದ್ದರೆಂಬ ಕಟುಸತ್ಯವನ್ನು ಉರಿಲಿಂಗಪೆದ್ದಿ ತಮ್ಮ ವಚನದಲ್ಲಿ ವಿವರಿಸಿದ್ದಾರೆ.

“.......ಕೃತಯುಗ ಮೂವತ್ನಾಲ್ಕುಲಕ್ಷದ ಐವತ್ಮೂರು ವರುಷಂಗಳಲ್ಲಿ
ಗಜಾಸುರನೆಂಬ ಆನೆಕೊಂದು

ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೆ ವೇದ?....

ತ್ರೇತಾಯುಗದ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರುಷಂಗಳಲ್ಲಿ
ಅಶ್ವನೆಂಬ ಕುದುರೆಯಕೊಂದು ಹೋಮಕ್ಕಿಕ್ಕಿ
ಮಾಂಸವ ತಿನ್ನಹೇಳಿತ್ತೇ ವೇದ?....
ದ್ವಾಪರ ಎಂಟುಲಕ್ಷದ ಐವತ್ನಾಲ್ಕು ಸಾವಿರ ವರುಷಂಗಳಲ್ಲಿ
ಮಹಿಷಾಸುರನೆಂಬ ಕೋಣನಕೊಂದು ಹೋಮಕ್ಕಿಕ್ಕಿ
ಮಾಂಸವ ತಿನ್ನಹೇಳಿತ್ತೇ ವೇದ?....
ಕಲಿಯುಗದ ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರುಷಂಗಳಲ್ಲಿ
ಹೋತನಕೊಂದು ಹೋಮಕ್ಕಿಕ್ಕಿ
ಮಾಂಸವ ತಿನ್ನಹೇಳಿತ್ತೆ ವೇದ?....”

- ಉರಿಲಿಂಗಪೆದ್ದಿ (ಸ.ವ.ಸಂ.6, ವ:1392)

ಉರಿಲಿಂಗಪೆದ್ದಿಗಳು ನಾಲ್ಕುಯುಗಗಳ ಜಾತಕವನ್ನೇ ತೆರೆದಿದ್ದಾರೆ. ಹೀಗೆ ಆನೆ, ಕುದುರೆ, ಕೋಣ, ಹೋತ-ಈ ಪ್ರಾಣಿಗಳನ್ನು ಹೋಮಕ್ಕಿಕ್ಕಿ ಬ್ರಾಹ್ಮಣನು ತಿನ್ನುತ್ತಿದ್ದರೆಂದು ಹೇಳಿದ್ದಾರೆ. ಹೀಗೆ ಪ್ರಾಣಿಗಳ ಹಿಂಸೆಯನ್ನು ಮಾಡಿ, ಅವುಗಳನ್ನು ಕೊಂದು ತಿನ್ನುತ್ತಿದ್ದ ಬ್ರಾಹ್ಮಣರನ್ನು ಈ ವಚನಕಾರ ಹೀನಹೊಲೆಯರು, ಜಿನುಗುಹೊಲೆಯರು, ಕುನ್ನಿಹೊಲೆಯರೆಂದು ಕರೆದಿದ್ದಾರೆ. “ಹರಿ ಮತ್ಸ್ಯಾವತಾರದಲ್ಲಿ ಮೀನುತಿಂಬುದು ಯಾವ ಆಚಾರ?” ಎಂದು ಉರಿಲಿಂಗಪೆದ್ದಿ ಈ ವಚನದ ಕೊನೆಯಲ್ಲಿ ನೇರವಾಗಿ ಪ್ರಶ್ನಿಸಿದ್ದಾರೆ. “ಇಂತೀಹೊನ್ನಗೋವ ತಿಂಬ ಕುನ್ನಿಗಳ ತೋರದಿರಾ” ಎಂದು ತಮ್ಮ ಇಷ್ಟದೈವವಾದ ವಿಶ್ವೇಶ್ವರಯ್ಯನಲ್ಲಿ ಕೇಳಿಕೊಂಡಿದ್ದಾರೆ. ಬ್ರಾಹ್ಮಣರೇ ಪ್ರಾಣಿಗಳನ್ನು ಹೋಮಕ್ಕಿಕ್ಕಿ ಮಾಂಸವ ತಿನ್ನುತ್ತಿದ್ದರೆಂಬುದಕ್ಕೆ ಅನೇಕ ಆಧಾರಗಳಿವೆ. ಅಂತಹ ಆಧಾರಗಳ ಹಿನ್ನಲೆಯಲ್ಲಿಯೇ ಈ ವಚನ ರಚನೆಯಾಗಿದೆ.

ಪ್ರಾಣಿಗಳನ್ನು ಹೋಮದ ಹೆಸರಿನಲ್ಲಿ ಬ್ರಾಹ್ಮಣರು ಕೊಂದು ತಿನ್ನುತ್ತಿದ್ದರೆ, ಅಸ್ಪೃಶ್ಯರು ಗೋವು ಸತ್ತಾಗ ಅದರ ಮಾಂಸ ತಿನ್ನುತ್ತಿದ್ದರೆಂದು ಹೇಳಿರುವ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಯಾರು ಹೊಲೆಯರು, ಯಾರು ಮಾದಿಗರು ನೀವೇ ನಿರ್ಣಯಿಸಿರೆಂದು ಪ್ರಶ್ನೆ ಹಾಕಿದ್ದಾರೆ.

“ಕುರಿಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿನೆಕ್ಕಿಹೋಯಿತು
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು
ಅದೆಂತೆಂದಡೆ; ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ”
- ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ (ಸ.ವ.ಸಂ.5, ವ:733)

ಈ ವಚನದಲ್ಲಿ ಕಾಳವ್ವೆ, ಬ್ರಾಹ್ಮಣರ ಮತ್ತು ಅಸ್ಪೃಶ್ಯರ ಆಹಾರ ಪದ್ಧತಿಯನ್ನು ಕುರಿತು ವಿವರವಾಗಿ ಹೇಳಿದ್ದಾರೆ. ಹಿಂದಿನ ಯುಗಗಳಲ್ಲಿ ಆನೆ, ಕುದುರೆ, ಕೋಣ, ಹೋತ ಈ ಪ್ರಾಣಿಗಳನ್ನು ಹೋಮಕ್ಕಿಕ್ಕಿ ಬ್ರಾಹ್ಮಣರು ಮಾಂಸ ತಿನ್ನುತ್ತಿದ್ದರೆಂದು ಉರಿಲಿಂಗಪೆದ್ದಿಗಳು ಹೇಳಿದರೆ, ನಂತರದಲ್ಲಿ ಬ್ರಾಹ್ಮಣರು ಕುರಿ-ಕೋಳಿ-ಕಿರಿಮೀನುಗಳನ್ನು ತಿನ್ನುತ್ತಿದ್ದರೆಂದು ಕಾಳವ್ವೆ ಹೇಳಿದ್ದಾರೆ. ಪೂಜೆಗೆ ಯೋಗ್ಯವಲ್ಲದ ಪ್ರಾಣಿಗಳನ್ನು ಬ್ರಾಹ್ಮಣರು ತಿನ್ನುತ್ತಿದ್ದರು. ಶಿವನಿಗೆ ಪಂಚಾಮೃತ ಕೊಡುವ ಪಶುವ ತಿನ್ನುವ ತಮಗೆ ಹೊಲೆಮಾದಿಗರು, ಕೀಳುಜಾತಿಯವರೆಂದು ಕರೆಯುತ್ತಿದ್ದಾರೆ. ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು ಶುದ್ಧವೆಂದು ಕುಡಿವ ಬ್ರಾಹ್ಮಣರನ್ನು ಆಕೆ ಬುದ್ಧಿಗೇಡಿ ವಿಪ್ರರೆಂದು ಕರೆದಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಆಹಾರ ಪದ್ಧತಿಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದಾರೆ. ಈ ಎರಡು ವಚನಗಳಲ್ಲಿ ಮಹತ್ವದ ವಿಚಾರಗಳಿವೆ. ಬ್ರಾಹ್ಮಣರು, ಹೋಮದ ಹೆಸರಿನಲ್ಲಿ ಪ್ರಾಣಿಗಳನ್ನು ಕೊಂದು ಅವುಗಳ ಮಾಂಸತಿಂದು, ಉಳಿದವರನ್ನು ಹೊಲೆಮಾದಿಗರೆಂದು ಕರೆಯುವುದು ಯಾವ ನ್ಯಾಯ? ಎಂದು ಈ ಶರಣ ದಂಪತಿಗಳು ಪ್ರಶ್ನಿಸಿದ್ದಾರೆ. ಬ್ರಾಹ್ಮಣರು ಹಿಂಸೆಯಿಂದ ಪ್ರಾಣಿಗಳ ಮಾಂಸ ತಿಂದರೆ, ಅಸ್ಪೃಶ್ಯರು ಅವು ಸತ್ತಾಗ ಅಹಿಂಸೆಯಿಂದ ಅವುಗಳ ಮಾಂಸ ತಿಂದಿದ್ದಾರೆ. ಇವರಲ್ಲಿ ಯಾರು ಹೊಲೆಯರು? ಯಾರು ಮಾದಿಗರು? ನೀವೇ ಹೇಳಿಯೆಂದು ಅವರು ಕೇಳಿರುವ ಪ್ರಶ್ನೆಗಳಿಗೆ ವ್ಯವಸ್ಥೆಯಲ್ಲಿ ಇಂದಿಗೂ ಉತ್ತರಗಳಿಲ್ಲ. ಇಂತಹ ಹಿಂಸೆಯ ಮೂಲಕ ಬಂದ ಮಾಂಸವನ್ನು ತಿನ್ನುವ ಬ್ರಾಹ್ಮಣರೇ ಹೊಲೆ ಮಾದಿಗರಾಗಿದ್ದಾರೆಂಬುದನ್ನು ಬಸವಣ್ಣನವರು ತಮ್ಮ ವಚನವೊಂದರಲ್ಲಿ ನಿಖರವಾಗಿ ಹೇಳಿದ್ದಾರೆ.

“ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ
ಕುಲವೇನೊ ಅವದಿರ ಕುಲವೇನೊ?
ಸಕಲಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮಕೂಡಲಸಂಗನ ಶರಣರೆ ಕುಲಜರು”

-ಬಸವಣ್ಣ (ಸ.ವ.ಸಂ.1, ವ:591)

ಈ ವಚನದಲ್ಲಿ ಯಾರು ಹೊಲೆಯರು ಯಾರು ಮಾದಿಗರೆಂಬುದನ್ನು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. ಹೋಮಕ್ಕಾಗಿ ಪ್ರಾಣಿಗಳನ್ನು ಕೊಲ್ಲುತ್ತಿದ್ದ ವಿಪ್ರರೇ ಮಾದಿಗರು; ಹೋಮದ ಹೆಸರಿನಲ್ಲಿ ಹಿಂಸೆಮಾಡಿ ಪ್ರಾಣಿಮಾಂಸ ತಿನ್ನುತ್ತಿದ್ದ ಅವರೇ ಹೊಲೆಯರು. ಸತ್ಯ ಸಂಗತಿ ಹೀಗಿರುವಾಗ ಊರ ಹೊರಗಿರುವ ಅಸ್ಪೃಶ್ಯರು ಹೇಗೆ ಹೊಲೆಮಾದಿಗರಾಗುತ್ತಾರೆಂಬ ಮೂಲಪ್ರಶ್ನೆ ಈ ವಚನದಲ್ಲಿದೆ. ಕೂಡಲಸಂಗನ ಶರಣರು ಸಕಲಜೀವಾತ್ಮರಿಗೆ ಲೇಸನ್ನೇ ಬಯಸುತ್ತಾರೆ. ಅವರೆಂದಿಗೂ ಪ್ರಾಣಿಹಿಂಸೆ, ಜೀವಹಿಂಸೆ ಮಾಡಿದವರಲ್ಲ ಹೀಗಾಗಿ ಅವರೇ ನಿಜವಾದ ಕುಲಜರೆಂದು ಬಸವಣ್ಣನವರು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಮೇಲು-ಕೀಳುಗಳಿಗೆ ಕಾರಣವಾಗಿದ್ದ ಆಹಾರ ಪದ್ಧತಿಯ ಬಗ್ಗೆ ಈ ವಚನಗಳು ಸ್ಪಷ್ಟ ದಾಖಲೆಗಳಾಗಿವೆ. ಈ ವಚನಗಳನ್ನು ಓದಿದಾಗ ಯಾರು ಹೊಲೆಯರು, ಯಾರು ಮಾದಿಗರು, ಯಾರು ಕುಲಜರು ಎಂಬ ಸತ್ಯ ಸಹಜವಾಗಿಯೇ ಹೊರಬರುತ್ತದೆ. ಯಾವ ಮಾನದಂಡದಿಂದ ಅಸ್ಪೃಶ್ಯರನ್ನು ಕೀಳಾಗಿ ಕಂಡಿದ್ದರೋ ಅದೇ ಮಾನದಂಡದಿಂದಲೇ ಶರಣರು ವಿಪ್ರರನ್ನು ಹೊಲೆಮಾದಿಗರೆಂದು ಕರೆದು; ಹೊಲೆಮಾದಿಗರನ್ನು ಕುಲಜರೆಂದು ಹೇಳಿದ್ದಾರೆ. ಇದು ಶರಣರ ಬಹುದೊಡ್ಡ ಕ್ರಾಂತಿಕಾರಕ ಹೆಜ್ಜೆಯಾಗಿದೆ.

“ಕೃತಯುಗದಲ್ಲಿ ಕುಂಜರನೆಂಬ ಆನೆಯ ತಿಂದರು ವಿಪ್ರರು
ತ್ರೇತಾಯುಗದಲ್ಲಿ ಅಶ್ವನೆಂಬ ಕುದುರೆಯತಿಂದರು ವಿಪ್ರರು
ದ್ವಾಪಾರಯುಗದಲ್ಲಿ ಮಹಿಷನೆಂಬಕೋಣವ ತಿಂದರು ವಿಪ್ರರು
ಕಲಿಯುಗದಲ್ಲಿ ಅಜನೆಂಬ ಹೋತನ ತಿಂದರು ವಿಪ್ರರು
ಇಂತು ಅನಂತ ಯುಗಂಗಳಲ್ಲಿ ಅನಂತ ಪ್ರಾಣಿವಧೆಯಂ ಮಾಡಿದರು.....”

-ಮೋಳಿಗೆ ಮಾರಯ್ಯ (ಸ.ವ.ಸಂ.8, ವ:1693)

ಮೋಳಿಗೆ ಮಾರಯ್ಯನವರು ಈ ವಚನದಲ್ಲಿ ಯಾವ್ಯಾವ ಯುಗಳಲ್ಲಿ ವಿಪ್ರರು ಯಾವ್ಯಾವ ಪ್ರಾಣಿಗಳನ್ನು ಕೊಂದು ತಿಂದರೆಂಬ ಚಿತ್ರಣವನ್ನು ವಿವರವಾಗಿ ಕಟ್ಟಿಕೊಟ್ಟಿದ್ದಾರೆ. ಇನ್ನೂ ಕೆಲವು ವಚನಕಾರರ ವಚನಗಳಲ್ಲಿ ಬ್ರಾಹ್ಮಣರು ಪ್ರಾಣಿಗಳನ್ನು ಹೋಮಕ್ಕೆ ಬಲಿಕೊಟ್ಟು ಅವುಗಳ ಮಾಂಸ ತಿನ್ನುತ್ತಿದ್ದರೆಂಬ ವಿವರಗಳನ್ನು ಒದಗಿಸಿದ್ದಾರೆ. 12ನೇ ಶತಮಾನದ ಪೂರ್ವದಲ್ಲಿ ಈ ವ್ಯವಸ್ಥೆ ಇದ್ದಿರಬೇಕು. ನಂತರದ ವರ್ಷಗಳಲ್ಲಿ ಬ್ರಾಹ್ಮಣರು ಮಾಂಸ ಆಹಾರವನ್ನು ನಿಷೇಧಿಸಿದರು. ಗೋ ಪೂಜೆಗೆ ಪ್ರಾಮುಖ್ಯತೆ ಕೊಟ್ಟರು. ಆದರೆ ಹಿಂದಿನ ಕಾಲಘಟ್ಟದಲ್ಲಿ ಅವರೇ ಮಾಂಸಾಹಾರಿಗಳಾಗಿದ್ದರೆಂಬ ವಿಷಯ ಅನೇಕ ಶಾಸನಗಳಲ್ಲಿಯೂ ಕಾಣಿಸಿಕೊಂಡಿದೆ. ಈ ಸತ್ಯವನ್ನು ಬಯಲಿಗೆಳೆದ 12ನೇ ಶತಮಾನದ ಶರಣರು ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಜಾತಿ ಅಸಮಾನತೆಯ ವಿರುದ್ಧ ಬಂಡಾಯವೆದ್ದರೆಂಬುದು ಮುಖ್ಯ ಸಂಗತಿಯಾಗುತ್ತದೆ.

“ಸಾಂಖ್ಯ-ಶ್ವಪಚ, ಅಗಸ್ತ್ಯ-ಕಬ್ಬಿಲ,
ದೂರ್ವಾಸ-ಮಚ್ಚಿಗ, ದಧೀಚಿ-ಕೀಲಿಗ
ಕಶ್ಯಪ-ಕಮ್ಮಾರ, ರೋಮಜ-ಕಂಚುಗಾರ
ಕೌಂಡಿಲ್ಯ-ನಾವಿದನೆಂಬುದನರಿದು
ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ?.....”

- ಮಾದಾರ ಚೆನ್ನಯ್ಯ (ಸ.ವ.ಸಂ.8, 1166)

ಮಾದಾರ ಚೆನ್ನಯ್ಯನವರ ಈ ವಚನ ಮತ್ತೊಂದು ಸತ್ಯವನ್ನು ಹೇಳುತ್ತ ಜಾತಿ ಅಸಮಾನತೆಯನ್ನು ನಿರಾಕರಿಸುತ್ತದೆ. ಇಲ್ಲಿ ಬರುವ ಸಾಂಖ್ಯ, ಅಗಸ್ತ್ಯ, ದೂರ್ವಾಸ, ದಧೀಚಿ, ಕಶ್ಯಪ, ರೋಮಜ, ಕೌಂಡಿಲ್ಯ ಈ ಏಳು ಋಷಿಗಳು ಕೀಳುಕುಲದಲ್ಲಿ ಹುಟ್ಟಿದ್ದರೂ ಋಷಿಗಳಾಗಿ, ತಪಸ್ವಿಗಳಾಗಿ, ಜ್ಞಾನಿಗಳಾಗಿ ಬೆಳೆದರು. ವಸ್ತುಸ್ಥಿತಿ ಹೀಗಿರುವಾಗ ಜಾತಿಯಿಂದ ಮೇಲು-ಕೀಳೆಂದು ಪರಿಗಣಿಸಬಾರದೆಂಬುದನ್ನು ಚೆನ್ನಯ್ಯನವರು ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಪ್ರರು ಅಸತ್ಯದಲ್ಲಿ ನಡೆಯುತ್ತಾರೆ. ತಾವೇ ಶ್ರೇಷ್ಠರೆಂದು ಹೇಳಿಕೊಳ್ಳುತ್ತಾರೆ. ಇದು ಸಲ್ಲದೆಂದು ಮಾದಾರ ಚೆನ್ನಯ್ಯನವರು ಬಹಳ ನಿಷ್ಠುರತೆಯಿಂದ ಸತ್ಯ ಸಂಗತಿಯನ್ನು ಹೇಳಿದ್ದಾರೆ.

“ಅಯ್ಯಾ ವಿಪ್ರರೆಂಬುವರು ಮಾತಂಗಿಯ ಮಕ್ಕಳೆಂಬುದಕ್ಕೆ ಇದೇ ದೃಷ್ಟ.
ಮತ್ತೆ ವಿಚಾರಿಸಿ ಕೇಳಿದರೆ ಹೇಳುವೆನು
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಕಡಿದು ಹಂಚಿತಿಂದರಂದು ಗೋಮಾಂಸವ
ಯಜ್ಞಕ್ರಮವೆಂದು ಹೋತನಕೊಂದು
ಚಿಕ್ಕ ಚಿಕ್ಕದಾಗಿ ಕಡಿದು ಭಕ್ಷಿಸಿದುದ ಕಂಡು
ಮಿಕ್ಕ ಹದಿನೇಳು ಜಾತಿ ವಿಪ್ರರ ಕೈಯಲನುಗ್ರಹವ ಪಡೆದು ತಿನ ಕಲಿತರಯ್ಯಾ”

-ಹಾವಿನಹಾಳ ಕಲ್ಲಯ್ಯ (ಸ.ವ.ಸಂ.9, ವ:1092)

ಈ ವಚನದಲ್ಲಿ ಹಾವಿನಹಾಳ ಕಲ್ಲಯ್ಯನೆಂಬ ವಚನಕಾರ, ವಿಪ್ರರೆಲ್ಲ ಮಾತಂಗಿಯ ಮಕ್ಕಳೆಂದು ಸ್ಪಷ್ಟಪಡಿಸಿದ್ದಾರೆ. ಗೋಮಾಂಸವನ್ನು ವಿಪ್ರರು ಕಡಿದು ಹಂಚಿ ತಿನ್ನುತ್ತಿದ್ದರೆಂದು ಹೇಳಿದ್ದಾರೆ. ಅದೇರೀತಿ ಹೋತನನ್ನು ಕಡಿದು ತಿನ್ನುತ್ತಿದ್ದರೆಂದು ತಿಳಿಸಿದ್ದಾರೆ. ವಿಪ್ರರಲ್ಲಿ ಹದಿನೇಳು ಜಾತಿಯ ವಿಪ್ರರಿದ್ದಾರೆ. ಇವರ ಕೈಯಲ್ಲಿ ಅನುಗ್ರಹ ಪಡೆದವರು ಸಹಜವಾಗಿಯೇ ಪ್ರಾಣಿಮಾಂಸವನ್ನು ತಿನಕಲಿತರೆಂದು ಕಲ್ಲಯ್ಯ ಇಲ್ಲಿ ಹೇಳಿದ್ದಾರೆ.

(ಮುಂದುವರಿಯುವುದು…)

ಈ ಅಂಕಣದ ಹಿಂದಿನ ಬರಹಗಳು:
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...