ವರ್ತಮಾನಕ್ಕೆ ಧ್ವನಿಯಾದ ರೈತ ಗೀತೆಗಳು


ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ರೈತರ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ದೇಶ-ವಿದೇಶಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಚಳವಳಿಯ ಭಾಗವಾಗಿ ಕರ್ನಾಟಕದ ಕವಿಗಳು ಹೋರಾಟಗಾರರು ರಚಿಸಿದ ಕವಿತೆಗಳ ಸಂಕಲನ ಹೊನ್ನಾರು ಒಕ್ಕಲು. ಹಿರಿಯ ಹೋರಾಟಗಾರ್ತಿ ಕೆ. ಷರೀಫಾ ಹಾಗೂ ಯಮುನಾ ಗಾಂವ್ಕರ್ ಸಂಪಾದಿಸಿರುವ ಕೃತಿಗೆ ಹಿರಿಯ ಚಿಂತಕ, ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಅವರು ಬರೆದ ಮುನ್ನುಡಿಯ ಪೂರ್ಣ ಪಠ್ಯ ಇಲ್ಲಿದೆ.

ಭಾರತೀಯ ಪ್ರಜಾಪ್ರಭುತ್ವದ ಕೇಂದ್ರವಾದ ದೆಹಲಿಯ ಸಂಸತ್ ಭವನದಿಂದ ಸುಮಾರು 40 ಕಿಮೀ ಸುತ್ತಮುತ್ತ ಕಡೆಗಳಲ್ಲಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ಮೂರು ಕಾಯ್ದೆಗಳ ವಿರುದ್ಧ ಲಕ್ಷಾಂತರ ರೈತರು ಭಾರತದ ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಚಳುವಳಿಯನ್ನು ಮಟ್ಟ ಹಾಕಲು ಸಾಧ್ಯವಿರುವುದನ್ನೆಲ್ಲ ಮಾಡುತ್ತಿದೆ. ಭಾರತದ ಜೊತೆಗೆ ವಿಶ್ವವೇ ಅದನ್ನು ಗಮನಿಸುತ್ತಿದೆ.

ರೈತರ ಈ ಚಳುವಳಿಯನ್ನು ಒರೆಸಿ ಹಾಕುವುದು ಕಷ್ಟ. ಏಕೆಂದರೆ ಚಳುವಳಿ ನಡೆಸುವವರು ಅನ್ನದಾತರು ಮತ್ತು ಅವರೆಲ್ಲ ದÉಹಲಿಯ ಗಡಿ ಭಾಗಗಳಲ್ಲಿ ಸುಮಾರು 25 ಎಕರೆ ಜಾಗದಲ್ಲಿ ಊರುಗಳನ್ನೇ ಕಟ್ಟಿಕೊಂಡು ಕುಳಿತಿದ್ದಾರೆ. ಈ ಊರಿನ ಅಲ್ಲಲ್ಲಿ ರೈತರ ಸಮಸ್ಯೆಗಳ ಕುರಿತು ಉಪನ್ಯಾಸಗಳು, ಚರ್ಚೆಗಳೂ ನಡೆಯುತ್ತಿರುತ್ತವೆ. ಗ್ರಂಥಾಲಯಗಳು ತಲೆ ಎತ್ತಿವೆ. ಯುವಕರಿಗಾಗಿ ಜಿಮ್ ಕೂಡಾ ಇದೆ. ಉಚಿತ ವೈದ್ಯಕೀಯ ವ್ಯವಸ್ಥೆ ಮತ್ತು ಆಹಾರ ಎಲ್ಲರಿಗೂ ದೊರೆಯುತ್ತದೆ. ಚಿತ್ರಕಲಾ ಶಿಬಿರಗಳು, ಪೆÇೀಸ್ಟರ್‍ಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿವೆ. ಹೀಗೆ ಜಾತಿ, ಮತ, ಪ್ರದೇಶ ಮತ್ತು ವಯಸ್ಸಿನ ಹಂಗಿಲ್ಲದೆ ಚಳುವಳಿ ನಿರತ ರೈತರ ಊರು ದೇಶದ ರಾಜಧಾನಿಯ ಪಕ್ಕದಲ್ಲಿ ನಿರ್ಮಾಣವಾಗಿರುವುದು ದೇಶ ವಿದೇಶಗಳಲ್ಲಿ ಸುದ್ದಿಯಾಗಿದೆ. ಇಲ್ಲಿರುವ ಎಷ್ಟೋ ರೈತರ ಮಕ್ಕಳು ಅಮೆರಿಕಾ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲಾಂಡ್‍ಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಚಳುವಳಿಗೆ ಅಂತರ್ರಾಷ್ಟ್ರೀಯ ಆಯಾಮ ತಾನಾಗಿಯೇ ಪ್ರಾಪ್ತವಾಗಿದೆ. ಭಾರತದ ಕೃಷಿ ಪದ್ಧತಿಯು ಕಾಪೆರ್Çರೇಟ್ ಹಿಡಿತಕ್ಕೆ ಬರುವುದನ್ನು ವಿಶ್ವದಾದ್ಯಂತ ಜನರು ಖಂಡಿಸುತ್ತಿದ್ದಾರೆ. ಸಂವಿಧಾನದ ಪ್ರಕಾರ ಕೃಷಿಯು ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತದೆ. ಅದರ ಬಗ್ಗೆ ಕೇಂದ್ರ ಸರ್ಕಾರವು ಈ ಬಗೆಯ ತೀರ್ಮಾನ ತಗೊಂಡದ್ದು ಸಂವಿಧಾನ ಬಾಹಿರವಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಸಂವಿಧಾನ ತಜ್ಞರೂ ಕೇಳುತ್ತಿದ್ದಾರೆ. ಸರ್ಕಾರವು ರೈತರೊಡನೆ ನಡೆಸಿದ 11 ಸಭೆಗಳೂ ವಿಫಲವಾಗಿವೆ. ಸಮಸ್ಯೆಯನ್ನು ಸುಪ್ರೀಂಕೋರ್ಟ್‍ಗೆ ದಾಟಿಸಲಾಗಿದೆ. ಅಲ್ಲಿ ಏನಾಗುವುದೋ ತಿಳಿಯದು. ಈ ನಡುವೆ ಚಳುವಳಿಯು ನಿಧಾನವಾಗಿ ಅನೇಕ ರಾಜ್ಯಗಳಿಗೆ ವ್ಯಾಪಿಸುತ್ತಿದೆ. ಸರ್ಕಾರವೂ ಚಳುವಳಿ ನಿರತ ರೈತರನ್ನು ಬಗ್ಗುಬಡಿಯಲು ತನ್ನೆಲ್ಲಾ ಶಕ್ತಿಯನ್ನು ಬಳಸುತ್ತಿದೆ.

ದೆಹಲಿಯಿಂದ ಭೌಗೋಳಿಕವಾಗಿ ಸಾಕಷ್ಟು ದೂರದಲ್ಲಿರುವ ಕರ್ನಾಟಕವು ರೈತ ಚಳುವಳಿಗೆ ಗಂಭೀರವಾಗಿ ಸ್ಪಂದಿಸುತ್ತಿರುವುದು ಬಹಳ ಕುತೂಹಲವಾದ ಸಂಗತಿಯಾಗಿದೆ. ಬಹಳ ಜನ ಕನ್ನಡಿಗರು ರೈತರೊಡನೆ ಇದ್ದಾರೆ. ಹಾಗೆ ನೋಡಿದರೆ, ಸಾಮಾಜಿಕ ನ್ಯಾಯದ ವಿಷಯದಲ್ಲಿ ಕರ್ನಾಟಕವು ದೇಶದ ಇತರೆ ರಾಜ್ಯಗಳಿಗಿಂತ ಒಂದು ಮುಂದಿಡುತ್ತಲೇ ಬಂದಿದೆ. 2016 ರಲ್ಲಿ ಜೆಎನ್‍ಯು ವಿನಲ್ಲಿ ನಡೆದ ಕನ್ನಯ್ಯ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಮೂರು ಪುಸ್ತಕಗಳು ಪ್ರಕಟವಾದವು. ಜೊತೆಗೆ ಜೆಎನ್‍ಯು ಹೋರಾಟದ ಭಾಗವಾಗಿ ಪ್ರಕಟವಾದ ರಾಷ್ಟ್ರೀಯತೆ ಕುರಿತು ಮಹತ್ವದ ಪುಸ್ತಕವೂ ಕನ್ನಡಕ್ಕೆ ಅನುವಾದವಾಯಿತು. ಈಗ ರೈತ ಚಳುವಳಿಗೆ ಪೂರಕವಾದ ಪ್ರಸ್ತುತ ಪುಸ್ತಕ `ಹೊನ್ನಾರು ಒಕ್ಕಲು’ ಪ್ರಕಟವಾಗುತ್ತಿದೆ. ಖ್ಯಾತ ಲೇಖಕಿ ಮತ್ತು ಹೋರಾಟಗಾರ್ತಿ ಕೆ.ಷರೀಫಾ ಮತ್ತು ಯಮುನಾ ಗಾಂವ್ಕರ್ ಈ ಪುಸ್ತಕವನ್ನು ಆಸ್ಥೆಯಿಂದ ಸಂಪಾದಿಸಿಕೊಟ್ಟಿದ್ದಾರೆ.
ನಾನು ಈ ಪುಸ್ತಕವನ್ನು ಚಳುವಳಿಯ ಒಂದು ಚಾರಿತ್ರಿಕ ದಾಖಲಾತಿ ಎಂದು ಗುರುತಿಸುತ್ತೇನೆ. ಇದರಲ್ಲಿ ಕನ್ನಡದ ಹಿರಿಯ ಲೇಖಕರ ಕವಿತೆಗಳಿವೆ. ಹೋರಾಟಗಾರರ ಹಾಡುಗಳಿವೆ ಮತ್ತು ಹೊಸ ಕವಿಗಳ ಹೊಸ ಭಾವಗಳಿವೆ. ಇವುಗಳನ್ನು ಓದುವುದೆಂದರೆ ಕಳೆದ ಒಂದು ಶತಮಾನದ ರೈತರ ಬವಣೆಗಳಿಗೆ ಸಾಕ್ಷಿಯಾದಂತೆ. ಬೇಂದ್ರೆ, ಕುವೆಂಪು, ದಿನಕರ ದೇಸಾಯಿ, ಸವಿತಾ ನಾಗಭೂಷಣ, ವೈದೇಹಿ, ಬರಗೂರು ರಾಮಚಂದ್ರಪ್ಪ, ಎಸ್.ಜಿ.ಸಿದ್ದರಾಮಯ್ಯ, ಸಿದ್ದಲಿಂಗಯ್ಯ, ರಂಜಾನ್ ದರ್ಗಾ, ಮಾಲತಿ ಪಟ್ಟಣಶೆಟ್ಟಿ, ಬಿ.ಟಿ.ಲಲಿತಾನಾಯಕ್, ಆರ್.ಜಿ.ಹಳ್ಳಿ ನಾಗರಾಜ್, ವಸುಂಧರಾ ಭೂಪತಿ, ಎಸ್.ಮಂಜುನಾಥ್, ಕಾ.ವೆಂ.ಶ್ರೀನಿವಾಸಮೂರ್ತಿ, ಮೊದಲಾದವರ ಕವಿತೆಗಳು ಸಾಹಿತ್ಯಕವಾಗಿಯೂ ಮೌಲಿಕವಾದವು. ಶಾರದಾ ಗೋಪಾಲ, ಮಾಧವಿ ಭಂಡಾರಿ, ಯಮುನಾ ಗಾಂವ್ಕರ, ಮಂಜುಳಾ ಹುಲಿಕುಂಟೆ, ಗಿರೀಶ್ ಹಂದಲಗೆರೆ, ವಿಜಯಕಾಂತ್ ಪಾಟೀಲ್, ಶಶಿರಾಜ್ ಹರತಲೆ, ಪದ್ಮ ಟಿ.ಚಿನ್ಮಯಿ, ಅರುಣ್ ಜೋಳದಕೂಡ್ಲಿಗಿ, ಎಚ್.ಆರ್.ನವೀನ್‍ಕುಮಾರ್ ಮೊದಲಾದವರ ಹಾಡುಗಳು ಅವರ ನಿರಂತರ ಹೋರಾಟಗಳ ಭಾಗವಾಗಿ ಹುಟ್ಟಿಕೊಂಡಿವೆ. ಬೇಲೂರು ರಘುನಂದನ್, ಚಿದಾನಂದ ಸಾಲಿ, ಸೌಮ್ಯ ಕೆ.ಆರ್., ಚಂಸು, ರೇಣುಕಾ ಹೆಳವರ, ಕೊಟ್ರೇಶ್ ಕೊಟ್ಟೂರು, ಸಚಿನ್ ಅಂಕೋಲಾ, ವಿಲ್ಸನ್ ಕಟೀಲ್ ಮೊದಲಾದ ಹೊಸ ತಲೆಮಾರಿನ ಕವಿಗಳು ಹೋರಾಟದ ಹಾಡುಗಳಿಗೆ ಹೊಸ ಭಾಷೆಯನ್ನು ಹುಡುಕುತ್ತಾ ಹೊರಟಿದ್ದಾರೆ.

ಹೀಗಾಗಿ ಇಲ್ಲಿನ ಬಹುಬಗೆಯ ಕವಿತೆಗಳನ್ನು ಯಾವುದೋ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಹಾಕಿ ವಿಮರ್ಶಿಸಲಾಗದು. ಎಲ್ಲ ರಚನೆಗಳ ಕೇಂದ್ರದಲ್ಲಿ ಇರುವುದು ರೈತನೇ ಹೌದಾದರೂ ಅವುಗಳ ಕಾರ್ಯ ಮಾತ್ರ ಬೇರೆ ಬೇರೆ. ಕೆಲವು ಕವಿತೆಗಳು ತಮ್ಮ ಸಾಹಿತ್ಯಿಕ ಮೌಲ್ಯಗಳಿಗೆ ಹೆಸರಾದರೆ, ಮತ್ತೆ ಕೆಲವನ್ನು ಚಳುವಳಿಗಳಲ್ಲಿ ಹಾಡಿಕೊಳ್ಳಬಹುದು. ಮತ್ತೆ ಕೆಲವು ಹೊಸ ಸಂಕೇತ - ಪ್ರತಿಮೆಗಳ ಮೂಲಕ ಕವಿತೆಗಳಗಡಿ ರೇಖೆಗಳನ್ನು ವಿಸ್ತರಿಸುತ್ತವೆ. ಇವುಗಳಲ್ಲಿ ಯಾವುದು ಶ್ರೇಷ್ಠ ಮತ್ತು ಯಾವುದು ಕನಿಷ್ಟ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲವೂ ತಮ್ಮ ಕಾಲದ ಅಗತ್ಯಗಳಿಗನುಗುಣವಾಗಿ ಸೃಷ್ಟಿಯಾದವು.

ಇಲ್ಲಿನ ಎಲ್ಲಾ ಕವಿತೆಗಳಲ್ಲಿ ಕಂಡುಬರುವ ಸಾಮಾನ್ಯ ಅಂಶವೆಂದರೆ ಭಾರತೀಯ ರೈತ ನಿಜಕ್ಕೂ ಬಡವ ಮತ್ತು ಶೋಷಿತ. ಅವನಿಗೆ ತನ್ನದೇ ಜಮೀನಿಲ್ಲ. ಆದರೆ ಅವನ ಜೀವನವು ಜಮೀನಿನಲ್ಲಿಯೇ ಕಳೆದುಹೋಗುತ್ತದೆ. ಈ ಕುರಿತು ಅವನಲ್ಲಿಯೂ ತಿಳುವಳಿಕೆ ಹುಟ್ಟಬೇಕು. ಇತರರಲ್ಲಿಯೂ ಅರಿವು ಮೂಡಬೇಕು. ಸದ್ಯಕ್ಕೆ ಅವನಲ್ಲಿ ಒಂದು ಎಚ್ಚರ ಮೂಡಿದೆ. ನ್ಯಾಯಕ್ಕಾಗಿ ಆತ ಹೋರಾಡುತ್ತಿದ್ದಾನೆ. ಅವನ ಜೊತೆ ನಿಲ್ಲಬೇಕಾದ್ದು ಎಲ್ಲ ಸಂವೇದನಾಶೀಲರ ಕರ್ತವ್ಯ. ಹಾಗೆ ನಿಲ್ಲದವರು ಬಿ.ಶ್ರೀನಿವಾಸ್ ಹೇಳುವ ಹಾಗೆ `ಲೋಕದ ಸಾಲಿಯ ಮುಂದೆ ನಿಂತ ಬೆತ್ತಲೆ ಅಪರಾಧಿ’ಯಾಗುವುದಂತೂ ನಿಜ. ಅನ್ನದಾತನಿಲ್ಲದೇ ಲೋಕವಿಲ್ಲ. ಸಚಿನ್ ಅಂಕೋಲಾ ಹೇಳುವ ಹಾಗೆ ರೈತರು `ತಟ್ಟೆಗೆ ಅನ್ನ ಕೊಟ್ಟವರು ಜಗದ ಹೊಟ್ಟೆಗೆ ತುತ್ತನಿಟ್ಟವರು’. ವಿಲ್ಸನ್ ಕಟೀಲ್ ಹೊಸ ಪ್ರತಿಮೆಗಳಿಗಾಗಿ ಹುಡುಕಾಡುತ್ತಲೇ ಇರುವ ಕವಿ. ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಅವರ `ಅನ್ನದ ಪ್ರತಿರೋಧ’ ಕವಿತೆಯ ಮಾರ್ಮಿಕ ಸಾಲುಗಳಿವು -

`ಆತ ಆಜ್ಞಾಪಿಸಿದ -
ಇನ್ನು ಒಂದು ಶಬ್ದ ಹೆಚ್ಚು ಮಾತಾಡಿದರೆ
ನನ್ನ ಕಾಲು ತೊಳೆದ ನೀರು ನೀನು ಕುಡಿಯಬೇಕಾದೀತು
ರೈತ ತಣ್ಣಗೆ ಉತ್ತರಿಸಿದ
ನಾನು ತುಳಿದ ಮಣ್ಣಲ್ಲಿ ಬೆಳೆದದ್ದನ್ನೇ ನೀನು ಉಣ್ಣುತ್ತಿದ್ದೀಯಾ’

ಇದೇ ರೀತಿ ರಂಗನಾಥ ಕಂಟನಕುಂಟೆಯವರ-
`ಮತ್ತೆ ಇಬ್ಬಾಯ ಖಡ್ಗಗಳ
ಹಾದಿಯಲಿ ನೆಟ್ಟು
ನಡೆವವರ ಪಾದಗಳ ಸೀಳಿ
ನೆತ್ತರ ಚಿತ್ತಾರ ಬಿಡಿಸಿ ಸಂಭ್ರಮಿಸಬಹುದು’
ಎಂಬ ಸಾಲುಗಳಾಗಲೀ

ದೀಪದ ಮಲ್ಲಿಯವರ
`ಸಾಲು ಸಾಲು ಹೆಣದ ರಾಶಿ
ಒಂದಕೂನು ಇಲ್ಲ ಸಾಕ್ಷಿ
ಸಾವಿದ್ದ ಮನೆಯಲ್ಲೂ
ಸಾಸಿವೆಯೂ ದಕ್ಕದ
ಕಾಲ ಇದೋ ಬರುತಿದೆ’

ಎಂಬ ಸಾಲುಗಳಾಗಲೀ ಹೋರಾಟವನ್ನು ಹೊಸ ಭಾಷೆಯಲ್ಲಿ ಕಟ್ಟುವ ಪ್ರಯತ್ನಗಳಾಗಿವೆ.

ಮಹಾಂತೇಶರ
`ಯಾವ ಗೋಡೆಗಳೂ ಬಂಧಿಸಲಾರವು
ನಮ್ಮನ್ನು ಯಾವ ಬಂದೂಕಿನ ನಳಿಕೆಗಳೂ ಬಗ್ಗಿಸಲಾರವು’

ಎಂಬ ಘೋಷಣೆ, ಪಿ.ಆರ್.ವೆಂಕಟೇಶ್‍ರ `ಇನ್ನು ದೇವಗಿಲ್ಲ ನಿದ್ದೆ ಬಡಬಡಿಸಿದೆ ಗೋಪುರ. ಬೆವರುಕ್ಕಿದ ಬಿರುಗಾಳಿಗೆ ತರಗೆಲೆ ಕಸ ಕಾಪುರ’ ಎಂಬ ಸಿಟ್ಟು, ಗಣೇಶ್ ಹೊಸ್ಮನೆಯವರ `ಯಾವುದಕ್ಕೂ ಗತಿಯಿಲ್ಲದವರು ಮೈ ಚರ್ಮವನ್ನೇ ಸುಟ್ಟು ರೊಟ್ಟಿ ಮಾಡಿಕೊಳ್ಳುತ್ತಾರೆ’ ಎಂಬ ಆಕ್ರೋಶ ಬಹುಕಾಲ ನೆನಪಲ್ಲಿ ಉಳಿಯುವಂಥವು. ಹಿಂದಿಯಿಂದ ರವಿಕುಮಾರ ಟೆಲೆಕ್ಸ್ ಅನುವಾದಿಸಿದ ಕವಿಯ ಸಾಲುಗಳು ಯಾರನ್ನಾದರೂ ಚುಚ್ಚಿ ಎಬ್ಬಿಸುವ ಶಕ್ತಿ ಹೊಂದಿವೆ -

ನೀವು ವಿದ್ಯಾರ್ಥಿಗಳ ಹೋರಾಟವನ್ನು
ಬೆಂಬಲಿಸಲಿಲ್ಲ
ಪರಾವಾಗಿಲ್ಲ ಬಿಡಿ
ನಿಮಗದರಿಂದೇನೂ ಲಾಭವಿರಲಿಲ್ಲ
ನೀವು ಎನ್.ಆರ್.ಸಿ. ವಿರೋಧಿಸಿ
ಪ್ರಜಾತಾಂತ್ರಿಕ ಸತ್ಯಾಗ್ರಹಿಗಳಿಗೆ ಜೊತೆಯಾಗಲಿಲ್ಲ
ಪರವಾಗಿಲ್ಲ ಬಿಡಿ
ಅವರಿಂದ ನಿಮಗೇನೂ ಅನುಕೂಲವಿರಲಿಲ್ಲ
ನೀವು ಗುಂಪು ಹತ್ಯೆಗೀಡಾದವರ
ದುಃಖತಪ್ತ ಕುಟುಂಬಗಳ ಜೊತೆಗೂ ನಿಲ್ಲಲಿಲ್ಲ
ಪರವಾಗಿಲ್ಲ ಬಿಡಿ
ಅವರಿಗಾಗಿ ನಿಮ್ಮಲ್ಲಿ ಕರುಣೆ ಇರಲಿಲ್ಲ.

ಹೀಗೆ ಬೆಳೆಯುತ್ತಾ ಹೋಗುವ ಈ ಕವಿತೆಯು ನಿಜಕ್ಕೂ ಬೇಜವಾಬ್ದಾರೀ ಜನರನ್ನು ಅಣಕಿಸುತ್ತದೆ ಮತ್ತು ದೇಶದಾದ್ಯಂತ ಜನರ ಪ್ರತಿಭಟನೆಗಳು ಒಂದೇ ರೀತಿಯಲ್ಲಿ ನಡೆಯುತ್ತಿವೆ ಎಂಬ ಸೂಚನೆಯನ್ನೂ ನೀಡುತ್ತದೆ.
`ಅನ್ನದಾತರ ಬಿರಿದ ಪಾದಗಳಲ್ಲಿ ನಿಮ್ಮ ಪಾರ್ಲಿಮೆಂಟಿನ ಬೇರುಗಳಿವೆ’ ಎಂದು ಮಂಜುಳಾ ಹುಲಿಕುಂಟೆ ಬರೆದರೆ `ಕಾಡ್ಗಿಚ್ಚೇ ಕುಣಿದರು ಇಂದು ಮತ್ತೆ ಹುಟ್ಟುತ್ತಾನೆ ಸೂರ್ಯ. ಚಿಗುರುವುದು ನೆಲ ನಿತ್ಯ’ ಎಂದು ಪೀರ್‍ಭಾಷಾ ಆಶಾವಾದಿಯಾಗುತ್ತಾರೆ. ಉಜ್ಜಜ್ಜಿ ರಾಜಣ್ಣ ಮತ್ತು ರಾಜೇಶ್ವರಿಯವರು ಜನಪದ ಹಾದಿಯನ್ನು ತುಳಿದರೆ, ದಸ್ತಗೀರ್ ದಿನ್ನಿ ಗಜಲ್ ಬರೆಯುತ್ತಾರೆ. ಹೋರಾಟವನ್ನೇ ಮೈಗೂಡಿಸಿಕೊಂಡು ಬೆಳೆದ ಯಮುನಾ ಗಾಂವ್ಕರ್ ಕರ್ನಾಟಕದ ಗಡಿ ರೇಖೆಗಳನ್ನು ದಾಟಿ ಮಹಾರಾಷ್ಟ್ರದ ನಾಸಿಕದ ರೈತ ಜಾತಾದ ಬಗ್ಗೆ ಬರೆಯುತ್ತಾರೆ.
ಅಲ್ಲಾಗಿರಿರಾಜ್ ಕನಕಗಿರಿ ಕೂಡಾ ನಮ್ಮಲ್ಲಿ ಅಚ್ಚರಿ ಹುಟ್ಟಬಲ್ಲ ಕವಿತೆಗಳನ್ನು ಬರೆಯುತ್ತಲೇ ಇರುವವರು. ಅವರು ಬರೆಯುವುದು ಹೀಗೆ-

ಸರಕಾರ ರೊಕ್ಕ ಮುದ್ರಿಸಬಹುದೆ ಹೊರತು
ತುಂಡು ರೊಟ್ಟಿಯನ್ನೆಲ್ಲ ನೆನಪಿರಲಿ
ನೀವು ಜಲ ಫಿರಂಗಿ ಸಿಡಿಸಬಹುದು ನಮ್ಮ ಮೈ ಮೇಲೆ
ನಾವು ಮುಂಗಾರು ಮಳೆಯ ಆರ್ಭಟವೆಂದು ಭಾವಿಸುತ್ತೇವೆ’
ಇಲ್ಲಿ ಕಂಡು ಬರುವ ಪ್ರತಿಭಟನೆಯ ಸ್ವರೂಪ ಅನ್ಯಾದೃಶ್ಯವಾದುದು

ಬರಗೂರರ ಕೆಳಗಿನ ಹಾಡು ಈಗಾಗಲೇ ಕರ್ನಾಟಕದಾದ್ಯಂತ ಓಡಾಡಿದೆ -

ಕತ್ತಲೆಯ ಬಯಲಲ್ಲಿ ಬೆಳಕನ್ನು ಹುಡುಕಿದರು
ಬೆತ್ತಲೆಯ ಭ್ರಷ್ಟತೆಗೆ ಕೂತಲ್ಲೆ ಕನಲಿದರು
ಕೆಂಡಗಣ್ಣಿನ ಬೆವರು ಎದ್ದು ನಿಂತಿದೆ ಇಲ್ಲಿ
ಕುರ್ಚಿಗಂಟಿದ ಪೆಂಗರು ನಾಶವಾಗುವುದಲ್ಲಿ

ಡಾ. ವಿನಯಾ ಒಕ್ಕುಂದ ಅವರು ತಮ್ಮ ಪುಟ್ಟ ಕವಿತೆಯಲ್ಲಿ ಇಡೀ ದೇಶದ ರೈತರನ್ನು `ನರ ಉಬ್ಬಿದ ಮುಂಗೈ’ ಚಿತ್ರದಲ್ಲಿ ಕಾಣುವ ಬಗೆಯ ಅಪೂರ್ವವಾದುದು -

`ಕಂಡ, ಒಮ್ಮೆ ಹರಿಯಾಲೀ ರುಮಾಲಿನಲಿ
ಒಮ್ಮೆ ಧಾರವಾಡೀ ಹಳದಿ ಪಟಗಾದಲಿ
ಒಮ್ಮೆ ಕಡೆಯ ಹಾಸಿಗೆಯಲ್ಲಿದ್ದ ಬೋಳುನೆತ್ತಿಯಲಿ
ಅದೇ ಬರಲು ಬೆರಳು, ಚಪ್ಪಟೆ ಉಗುರು
ನನ್ನ ಬೊಗಸೆಯಲ್ಲೇ ಮಿಡುಕಿ ತಣ್ಣಗಾಗಿದ್ದ ಅದೇ
ನರ ಉಬ್ಬಿದ ಮುಂಗೈ, ನೆತ್ತಿ ಸವರಿದ


ಸಂಕಲನದಲ್ಲಿ ನನಗೆ ಇಷ್ಟವಾದ ಎಲ್ಲ ಕವಿತೆಗಳನ್ನು ಹೀಗೆ ಉದ್ದರಿಸುತ್ತಾ ಹೋದರೆ ಮುನ್ನುಡಿ ಉದ್ದವಾಗುತ್ತದೆಯೆಂದು ನಾನು ಬಲ್ಲೆ. ಡಾ. ಕೆ.ಷರೀಫಾ, ಡಾ. ಆರ್.ತಾರಿಣಿ ಶುಭದಾಯಿನಿ, ವೈದೇಹಿ, ಸುಬ್ರಾಯ ಮತ್ತಿಹಳ್ಳಿ, ಶಾಂತರಾಮ ನಾಯಕ ಹಿಚಕಡ, ಗುರುಬಸವರಾಜ, ಹೆಚ್.ಆರ್.ಸುಜಾತ, ಕೆ.ನೀಲಾ, ಎಂ.ಇಕ್ಬಾಲ್ ಹುಸೇನ್, ಎ.ಎಸ್.ಮಕಾನದಾರ, ಬಿ.ಎಂ.ಬಶೀರ್, ಶಿವಸುಂದರ್, ನಾ. ದಿವಾಕರ ಮೊದಲಾದ ಪ್ರಸಿದ್ಧರ ಕವಿತೆಗಳನ್ನು ಇಲ್ಲಿ ಓದುವುದೇ ಒಂದು ವಿಶಿಷ್ಟ ಅನುಭವ.
ಕರ್ನಾಟಕದಿಂದ ಎಷ್ಟೋ ದೂರದಲ್ಲಿ ನಡೆಯುತ್ತಿರುವ ರೈತ ಚಳುವಳಿಯನ್ನು ತಮ್ಮದೆಂಬಂತೆ ಪರಿಭಾವಿಸಿ, ಅದನ್ನು ಕವಿತೆಯ ರೂಪದಲ್ಲಿ ಅಭಿವ್ಯಕ್ತಿಸಿದ ಇಲ್ಲಿನ ಕವಿಗಳ ಸಾಮಾಜಿಕ ಬದ್ಧತೆ ಮತ್ತು ಕಳಕಳಿ ಚಾರಿತ್ರಿಕವಾದುದು. ಕಾಲದ ಅಗತ್ಯಕ್ಕೆ ಧ್ವನಿಯಾದ ಅವರೆಲ್ಲರಿಗೂ ಅಭಿನಂದನೆಗಳು. ಕವಿತೆಗಳನ್ನು ಸಂಪಾದಿಸಿಕೊಟ್ಟ ಕೆ.ಷರೀಫಾ ಹಾಗೂ ಯಮುನಾ ಗಾಂವ್ಕರ್‍ರವರಿಗೆ ಕೃತಜ್ಞತೆಗಳು.

ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...