ವಸ್ತ್ರ ಸಂಹಿತೆಯ ಸುತ್ತ

Date: 21-02-2022

Location: ಬೆಂಗಳೂರು


'ಹಿಜಾಬ್‌ ಮುಸ್ಲಿಂ ಧರ್ಮದವರ ಎಲ್ಲರ ಗುರುತು ಅಲ್ಲ; ಹಾಗೆಯೆ ಕೇಸರಿ ಶಾಲು ಕೂಡ ʼಹಿಂದುʼ ಎನ್ನುವವರ ಎಲ್ಲರ ಗುರುತು ಅಲ್ಲ. ಇಲ್ಲಿ ಎರಡೆ ಧರ್ಮ ಮಾತ್ರ ಇಲ್ಲ. ಹಲವು ಧರ್ಮಗಳು ಇವೆ. ಹಾಗೆಯೆ ಹಲವು ಆಚಾರಗಳು ಇವೆ. ಹೀಗಿರುವಾಗ ಎರಡು ಧರ್ಮಗಳ ಜನರನ್ನು ಪರಸ್ಪರ ವೈರಿಗಳನ್ನಾಗಿ ಮಾಡಿ ತಮ್ಮ ರಾಜಕೀಯ ವೋಟ್‌ ಬ್ಯಾಂಕ್‌ ಮಾಡಿಕೊಳ್ಳುವ ಯಾವುದೇ ಪಕ್ಷ ರಾಜಕಾರಣ ತಿರಸ್ಕಾರಾರ್ಹ' ಎನ್ನುತ್ತಾರೆ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ವಸ್ತ್ರ ಸಂಹಿತೆಯ ಕುರಿತು ಚರ್ಚಿಸಿದ್ದಾರೆ.

ಹಿಜಾಬ್‌ ಧರಿಸಿ ಬರುವುದು ನಮ್ಮ ಹಕ್ಕು ಎಂದು; ಇದು ನಮ್ಮ ಸ್ವಂತ ನಿರ್ಧಾರ ಎಂದು ಕೆಲವು ವಿದ್ಯಾರ್ಥಿನಿಯರು ಹೇಳುತ್ತಿದ್ದಾರಲ್ಲ! ಇದು ನಿಜವಾಗಿಯೂ ಅವರ ಸ್ವಂತ ನಿರ್ಧಾರವಾ? ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜುಗಳಿಗೆ ಬರಬಾರದು; ಅವರು ಧರಿಸಿ ಬಂದರೆ 'ನಾವುʼ ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ಕೆಲವರು ವಾದಿಸುತ್ತಿದಾರೆ. ಇದು ಅವರ ಸ್ವಂತ ನಿಲುವಾ? ನೆನ್ನೆ ಮೊನ್ನೆಯವರೆಗೆ ಇರದೆ ಇದ್ದ ಇಂತಹ ಸಂಘರ್ಷದ ಮಾತು, ವೈರತ್ವದ ನಡೆ ಈಗ ಧುತ್ತನೆ ಏತಕ್ಕೆ ಎದ್ದಿದೆ? ರಾಷ್ಟ್ರಧ್ವಜ ಹಾರಿಸುವ ಧ್ವಜಸ್ಥಂಭದ ಮೇಲೆ ಕೇಸರಿ ಧ್ವಜ ಹಾರಿಸುವ ಮನಸ್ಸು ವಿದ್ಯಾರ್ಥಿಗಳಿಗೆ ಹೇಗೆ ಬಂತು? ತಾವೇ ಓದುತ್ತಿರುವ ಕಾಲೇಜಿಗೆ ಕಲ್ಲು ಎಸೆಯುವ ಮನಸ್ಸು ವಿದ್ಯಾರ್ಥಿಗಳಿಗೆ ಹೇಗೆ ಬಂತು? ಹಿಜಾಬ್‌ ಧರಿಸಲು ಅವಕಾಶ ಕೊಡದೆ ಇದ್ದಲ್ಲಿ ನಾವು ಕಾಲೇಜಿಗೇ ಬರುವುದಿಲ್ಲ ಎಂಬಂತಹ ಮನಸ್ಥಿತಿ ಏತಕ್ಕೆ ಬಂತು? ಇಂತಹ ಮನಸ್ಥಿತಿಯನ್ನು ರೂಪಿಸುವ ಹಿಂದೆ ಯಾರ ಕೈವಾಡ ಇದೆ?

ಯಾವ ಬಟ್ಟೆ ಧರಿಸಬೇಕು ಎಂಬುದು ಆ ಬಟ್ಟೆಯನ್ನು ಧರಿಸುವವರ ವಯಕ್ತಿಕ ಆಯ್ಕೆ. ಆದರೆ ಇಂದು ಬಟ್ಟೆಯು ಅದನ್ನು ಧರಿಸುವವರ ಆಯ್ಕೆ ಆಗಿದೆಯಾ? ದೇಶ ಮತ್ತು ಧರ್ಮ ಎರಡೂ ಒಂದೇನಾ? ಕೇಸರಿ ಬಟ್ಟೆ ಮತ್ತು ಹಿಜಾಬ್/‌ಬುರ್ಖಾ ಎರಡೂ ವೈರಿಗಳೇ? ಶಾಲಾ ಕಾಲೇಜುಗಳಲ್ಲಿ ಕೆಲವರು ಅಲ್ಲಾ ಹೋ ಅಕ್ಬರ್‌ ಎಂದರೆ ಮತ್ತೆ ಕೆಲವರು ಜೈ ಶ್ರೀರಾಮ್‌ ಎನ್ನುತ್ತಾರಲ್ಲ! ಹಾಗಾದರೆ ಇಲ್ಲಿ ಸಂವಿಧಾನ ಒದಗಿಸಿರುವ ನ್ಯಾಯವ್ಯವಸ್ಥೆಗೆ ಏನಾಗಿದೆ? ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಇಲ್ಲವೆ ಅಫಘಾನಿಸ್ತಾನಕ್ಕೆ ಹೋಗಿ ಎಂದು ಹೇಳುವವರಿಗೆ ಇಲ್ಲಿ ಬಹುಭಾಷಿಕ, ಬಹುಧಾರ್ಮಿಕ, ಬಹುಪಾಂಥಿಕ ಬದುಕು ಇದೆ ಎನ್ನುವುದೇ ಮರೆತು ಹೋಗಿದೆಯೆ? ನಮ್ಮ ಇಂಡಿಯಾ ರಾಷ್ಟ್ರ ಒಂದು ಪಂಥದವರ ಸ್ವತ್ತೆ?

ಇಂದು ಶಾಲಾ ಕಾಲೇಜು ಮಕ್ಕಳ ಮನಸ್ಸನ್ನು ರಾಜಕೀಯ ಪಕ್ಷಗಳು ಮತ್ತು ಹುಸಿ ಧಾರ್ಮಿಕ ಗುಂಪುಗಳು ನಿಯಂತ್ರಿಸುತ್ತಿವೆ; ರೂಪಿಸುತ್ತಿವೆ. ಚಿಕ್ಕ ವಯಸ್ಸಿನಿಂದಲೆ ಜಾತೀಯತೆ, ಧರ್ಮಲಂಡತೆಯನ್ನು ಮಕ್ಕಳ ಮನಸಿನಲ್ಲಿ ಬಿತ್ತುವುದು ನಡೆಯುತ್ತಿದೆ. ಪಿಯು ಮತ್ತು ಪದವಿ ಕಲಿಯುವ ಹದಿಹರೆಯದ ವಯಸ್ಸು ಸ್ವಂತ ನಿಲುವನ್ನು ತಳೆಯುವ ವಯಸ್ಸು. ಇಂತಹ ವಯಸ್ಸಿನಲ್ಲಿ ಅವರ ಶಿಕ್ಷಣಕ್ಕೆ ಕಲ್ಲು ಹಾಕಿ ಅವರ ಮನಸ್ಸನ್ನು ತಮ್ಮ ಸಿದ್ಧಾಂತ, ಪಾಂಥಿಕತೆ ಕಡೆಗೆ ಎಳೆದುಕೊಂಡರೆ ಜೀವಮಾನ ಇಡೀ ಅವರನ್ನು ತಮ್ಮ ದಾಳಗಳನ್ನಾಗಿ ಬಳಸಬಹುದು ಎಂಬ ತಿಳಿವು ಕೆಲವರ ಮನದಲ್ಲಿ ಇರುವಂತೆ ಕಾಣುತ್ತಿದೆ. ಆದರೆ ಮನುಷ್ಯ ಜೀವಿಗಳು ಯಾವಾಗ ಬೇಕಾದರೂ ವೈಚಾರಿಕವಾಗಿ ಬದಲಾಗಬಲ್ಲರು ಎಂಬುದನ್ನು ಅವರಿಗೆ ತಿಳಿಸಬೇಕಿದೆ. ಖಂಡಿತವಾಗಿಯೂ ಇಂದಿನ ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದದ ರೂಪ ಪಡೆದಿರುವುದು ರಾಜಕೀಯ ಹಿತಾಸಕ್ತಿಯಿಂದಲೆ.

ಬಟ್ಟೆ ಧರಿಸುವುದು, ಊಟ ಮಾಡುವುದು ವಸ್ತ್ರ ಸಂಹಿತೆಯಾಗಿ ಆಹಾರ ಸಂಹಿತೆಯಾಗಿ ನಮ್ಮಲ್ಲಿ ಪ್ರಾದೇಶಿಕವಾಗಿ ಆಯಾ ಹವಾಮಾನಕ್ಕೆ ತಕ್ಕಂತೆ ರೂಪಗೊಳ್ಳಬೇಕಾಗಿರುವುದು ಸಹಜ. ಆದರೆ ಹಾಗಾಗದೆ ಧರ್ಮ, ಪಂಥಗಳು ನಮ್ಮ ಬಟ್ಟೆ, ಆಹಾರಗಳನ್ನು ಹಿಂದಿನಿಂದಲು ನಿಯಂತ್ರಿಸುತ್ತ ಬಂದಿವೆ. ಆಧುನಿಕ ಕಾಲದಲ್ಲಿ ಹವಾಮಾನವನ್ನೆ ಬದಲಿಸುವ ಶಕ್ತಿಯನ್ನು ಮನುಷ್ಯ ಪಡೆದಿರುವುದರಿಂದ ಇಂದು ನಮ್ಮ ನಮ್ಮ ಊಟ, ಬಟ್ಟೆಯ ಆಯ್ಕೆ ನಮ್ಮ ನಮ್ಮ ವಯಕ್ತಿಕ ಆಯ್ಕೆಯೆ ಆಗಬೇಕು. ಆದರೆ ಹಾಗಾಗುತ್ತಿಲ್ಲ. ನಮ್ಮಲ್ಲಿ ಹೆಣ್ಣಿನ ವಸ್ತ್ರವನ್ನು ನಿರ್ಧರಿಸುವವರು ಗಂಡಸರು. ಹಿಂದು, ಮುಸ್ಲಿಮ್‌, ಜೈನ ಅಥವಾ ಯಾವುದೇ ಪಂಥ, ಧರ್ಮ ಆದರೂ ಅಲ್ಲೆಲ್ಲ ಹೆಂಗಸರು ಯಾವ ರೀತಿ ಬಟ್ಟೆ ಧರಿಸಬೇಕು ಎಂಬುದನ್ನು ಗಂಡಸರೇ ನಿರ್ಧರಿಸುತ್ತಾರೆ. ವಸ್ತ್ರಸಂಹಿತೆ ಮಹಿಳೆಯರಿಗೇ ಏಕೆ? ಹಲವಾರು ಸಲ ನಮ್ಮ ನಾಯಕರೆ ಹೆಣ್ಣುಮಕ್ಕಳು ತುಂಡು ಉಡುಗೆ ಹಾಕಿದರೆ ಅತ್ಯಾಚಾರಗಳು ಆಗುತ್ತವೆ ಎಂದು ಹೇಳುತ್ತಾರೆ. ಆಕೆ ಪ್ಯಾಂಟ್ ಹಾಕಬೇಕಾ ಬೇಡವಾ? ಬಾಬ್ ಕಟ್ ಮಾಡಿಸಿಕೊಳ್ಳಬೇಕಾ ಬೇಡವಾ? ಎಲ್ಲವನ್ನೂ ಇವರೇ ನಿರ್ಧರಿಸುತ್ತಾರೆ. ಸೀರೆ ಉಡುವ ಕಷ್ಟಸುಖ ಬಲ್ಲವರೆ ಬಲ್ಲರು.

ಹೆಂಗಸರ ಊಟದ ಪ್ರಮಾಣ, ವಿಧಾನ, ಸಮಯಗಳನ್ನೂ ನಮ್ಮಲ್ಲಿ ಗಂಡಸರೆ ನಿರ್ಧರಿಸುತ್ತಾರೆ! ಅವರ ನಡೆ, ನುಡಿ, ನಗು ಇತ್ಯಾದಿಗಳನ್ನೂ ಅವರೇ ನಿರ್ಧರಿಸುತ್ತಾರೆ! ಅದಕ್ಕೆ ಅವರದ್ದೆ ʼನೀತಿʼ ನಿಯಮಗಳನ್ನು ಅವರು ರೂಪಿಸಿಕೊಂಡಿದ್ದಾರೆ. ಶಿಕ್ಷಣ ಇಂಥ ಲಿಂಗರಾಜಕಾರಣಕ್ಕೆಲ್ಲ ತಿಲಾಂಜಲಿ ಖಂಡಿತಾ ನೀಡಬಲ್ಲುದು. ಆರ್ಥಿಕ ಶಕ್ತಿ ಮಾತ್ರವಲ್ಲ; ವೈಚಾರಿಕೆ ಶಕ್ತಿಯನ್ನೂ ಶಿಕ್ಷಣ ನೀಡಬಲ್ಲುದು. ಅದರಿಂದಲೆ ಹೆಣ್ಣಿನ ಕಲಿಕೆಯನ್ನು ನಿಯಂತ್ರಿಸುವ ಕೆಲಸವನ್ನು ಧರ್ಮದ ಹೆಸರಿನಲ್ಲಿ ನಮ್ಮ ಸಮಾಜ ಮಾಡುತ್ತಿದೆ. ಯಾವುದೇ ಕಾರಣ ಇರಲಿ; ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸುವುದಕ್ಕೆ ಏನೇ ಹುನ್ನಾರ ನಡೆದರೂ ನಾವು ಅದನ್ನು ವಿರೋಧಿಸಬೇಕಿದೆ. ಕೊರೋನಾ ಕಾರಣಕ್ಕೆ ಈಗಾಗಲೇ ಶಿಕ್ಷಣ ಹಳ್ಳ ಹಿಡಿದು ಹೋಗಿದೆ. ಇನ್ನು ಇಂತಹ ವಸ್ತ್ರದ ಬಿಕ್ಕಟ್ಟು ಹುಟ್ಟಿಸಿ ರಜೆ ಘೋಷಣೆ ಮಾಡಿದರೆ ಜಾಗತಿಕವಾಗಿ ನಮ್ಮ ಮಕ್ಕಳು ಸ್ಪರ್ಧೆಯನ್ನು ಎದುರಿಸುವುದು ಹೇಗೆ? ಹೆಂಗಸರಿಗೆ, ಹುಡುಗಿಯರಿಗೆ ಹಿಜಾಬ್ ಹಾಕುವುದು ನಿಜವಾಗಿಯು ಅವರ ಇಷ್ಟ ಅನ್ನುವುದಾದರೆ; ಅವರು ಹಿಜಾಬ್ ಹಾಕಿ ಬಂದರೆ ಏನು ತೊಂದರೆ? ಅದು ಯಾವ ರೀತಿ ಶಿಕ್ಷಣಕ್ಕೆ, ಸಹಪಾಠಿಗಳಿಗೆ ತೊಂದರೆ ಕೊಡುತ್ತದೆ? ಹಾಗೆಯೇ ಕೇಸರಿ ಶಾಲು ಹಾಕುವವರು ಹಾಕಿಕೊಳ್ಳಲಿ ಬಿಡಿ. ಟಿಕಳಿ, ಬಿಂದಿ, ಕುಂಕುಮ, ನಾಮ ಧರಿಸುವವರು ಧರಿಸಲಿ ಬಿಡಿ. ಅವರವರಿಗೇ ಒಂದೊಮ್ಮೆ ಬೇಡ ಅನ್ನಿಸುತ್ತದೆ. ಆಗ ಅವರೇ ಬಿಡುತ್ತಾರೆ. ಮೊದಲು ಅವರಲ್ಲಿ ವಿವೇಕ ಬೆಳೆಸಬೇಕು. ನಿರ್ಬಂಧ ಹೇರಿ ಹಠ ಹುಟ್ಟಿಸುವುದಲ್ಲ.

ಕೆಲವರು ಎಂಥ ವಿತಂಡವಾದ ಮಾಡುತ್ತಿದ್ದಾರೆ ಎಂದರೆ; ʼಅವರುʼ ಬಿಂದಿ, ಟಿಕಳಿ, ಕುಂಕುಮ ಧರಿಸಿ ಬರುತ್ತಾರಲ್ಲಾ; ಅವರಿಗು ಅವನ್ನೆಲ್ಲ ಅಳಿಸಿ ಒಳಗೆ ಬರಲು ಹೇಳಿ ಆಗ ನಾವೂ ʼನಮ್ಮʼ ಹಿಜಾಬ್‌ ತೆಗೆದಿಟ್ಟು ಬರುತ್ತೇವೆ ಎನ್ನುತ್ತಾರೆ! ನಾವು ಸತ್ತರೂ ಪರವಾಗಿಲ್ಲ ನಮಗೆ ಹಿಜಾಬ್‌ ಬೇಕು ಎಂದು ಕೆಲವರು ಹೇಳಿದ್ದಾರೆ. ಕೆಲವರಂತೂ ಅವರವರ ಧರ್ಮವನ್ನು ಪಾಲಿಸುವುದು ನಮ್ಮ ಹಕ್ಕು ಎಂದಿದ್ದಾರೆ. 16-02-22ರ ಪ್ರಜಾವಾಣಿ ವರದಿಯ ಪ್ರಕಾರ 43 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ (ಪೋಷಕರ ಆಶಯದಂತೆ?) ಎಸ್. ಎಸ್.‌ ಎಲ್.‌ ಸಿ. ಪೂರ್ವಸಿದ್ಧತಾ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ! ಶಾಲಾ ಕಾಲೇಜಿನ ಯೂನಿಫಾರಮ್ಮಿನ ಜೊತೆಯಲ್ಲೆ ತಲೆಗೆ ತಲೆವಸ್ತ್ರ ಹಾಕಿದರೆ ತಪ್ಪೇನು? ಎಂದೂ ಕೆಲವರು ಕೇಳುತ್ತಿದ್ದಾರೆ. ಕೆಲವರು ಇನ್ನೂ ಮುಂದೆ ಹೋಗಿ ಹಿಜಾಬ್‌ ಹಾಕುವುದು ದೇಶದ್ರೋಹ ಎನ್ನುತ್ತಿದ್ದಾರೆ! ನಾವೆಲ್ಲ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವಾ? ಧರ್ಮಪ್ರಭುತ್ವದಲ್ಲಿ ಬದುಕುತ್ತಿದ್ದೇವಾ?

ಹಿಜಾಬ್‌ ಮುಸ್ಲಿಂ ಧರ್ಮದವರ ಎಲ್ಲರ ಗುರುತು ಅಲ್ಲ; ಹಾಗೆಯೆ ಕೇಸರಿ ಶಾಲು ಕೂಡ ʼಹಿಂದುʼ ಎನ್ನುವವರ ಎಲ್ಲರ ಗುರುತು ಅಲ್ಲ. ಇಲ್ಲಿ ಎರಡೆ ಧರ್ಮ ಮಾತ್ರ ಇಲ್ಲ. ಹಲವು ಧರ್ಮಗಳು ಇವೆ. ಹಾಗೆಯೆ ಹಲವು ಆಚಾರಗಳು ಇವೆ. ಹೀಗಿರುವಾಗ ಎರಡು ಧರ್ಮಗಳ ಜನರನ್ನು ಪರಸ್ಪರ ವೈರಿಗಳನ್ನಾಗಿ ಮಾಡಿ ತಮ್ಮ ರಾಜಕೀಯ ವೋಟ್‌ ಬ್ಯಾಂಕ್‌ ಮಾಡಿಕೊಳ್ಳುವ ಯಾವುದೇ ಪಕ್ಷ ರಾಜಕಾರಣ ತಿರಸ್ಕಾರಾರ್ಹ. ಯಾವ ಧರ್ಮದವರೂ ಇಲ್ಲಿ ಯಾವ ರಾಜಕೀಯ ಪಕ್ಷಕ್ಕು ಗುತ್ತಿಗೆ ಕೊಟ್ಟುಕೊಂಡಿಲ್ಲ. ಒಂದು ದೇಶ ಒಂದು ಧರ್ಮ, ಒಂದು ದೇಶ ಒಂದು ಭಾಷೆ ಎಂಬ ಸಿದ್ಧಾಂತ ಇಲ್ಲಿ ಎಂದೂ ನಡೆದಿಲ್ಲ. ಮುಂದೂ ನಡೆಯದ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಧಾರ್ಮಿಕ ಸ್ವಾತಂತ್ರ್ಯಕ್ಕೆ ನಮ್ಮ ಸಂವಿಧಾನವೇ ಅವಕಾಶ ನೀಡಿದೆ. ಹೀಗಿರುವಾಗ ಹಿಜಾಬ್‌ ಧರಿಸುವುದು ಅದು ಹೇಗೆ ದೇಶದ್ರೋಹ ಆಗುತ್ತದೆ? ಕೇಸರಿ ಶಾಲು ಧರಿಸುವುದು ಕೂಡ ದೇಶದ್ರೋಹ ಅಲ್ಲ. ಆದರೆ ಶಾಲೆಗೆ ಬರುವಾಗ ಯಾರೂ ಇತರರನ್ನು ಇಂಥ ದಿರಿಸು ಧರಿಸಬೇಡಿ; ಇಂಥದ್ದೇ ದಿರಿಸು ಧರಿಸಿ ಎಂದು ಹೇಳಬಹುದೆ? ಸಮಾಜಕ್ಕಿಂತ ಶಾಲಾ ಕಾಲೇಜುಗಳು ಹೇಗೆ ಭಿನ್ನವಾಗಿರುತ್ತವೆ? ಸಮಾಜದಲ್ಲಿ ಅಸಮಾನತೆ ತುಂಬಿ ತುಳುಕುವಾಗ ಸಮವಸ್ತ್ರ ತರುವುದರಿಂದ ಮತ್ತು ಧಾರ್ಮಿಕ ಲಾಂಛನಗಳನ್ನು ಶಾಲಾ ಕಾಲೇಜುಗಳಲ್ಲಿ ನಿಷೇಧ ಮಾಡುವುದರಿಂದ ಸಮಾನತೆ ಸಾಧಿಸಲು ಸಾಧ್ಯವೆ?

ಎಷ್ಟೆ ವಿವಿಧತೆಗಳು ಇರಲಿ ನಮ್ಮ ದೇಶವನ್ನು ಒಂದು ದೇಶವಾಗಿ ಇರಿಸಿರುವುದು ನಮ್ಮ ಸಂವಿಧಾನ. ಅದಕ್ಕೆ ನಾವೆಲ್ಲರೂ ಬದ್ಧರಾಗಿ ಇರಬೇಕಾದುದು ನಮ್ಮ ಕರ್ತವ್ಯ. ನಾವು ನಮ್ಮ ನಮ್ಮ ಧರ್ಮಗಳನ್ನು ಸಹಬಾಳ್ವೆಗೆ ಮರುರೂಪಿಸಿಕೊಳ್ಳಬೇಕು. ಧರ್ಮ ಎಂದರೆ ಹೊಸ ಹೊಸತಾದ ಅರಿವನ್ನು ಪಡೆಯುವ ದಾರಿ. ʼಅರಿವಂ ಪೊಸಯಿಸುವುದೆ ಧರ್ಮಂʼ ಎಂದು ಪಂಪ ಬಹಳ ಹಿಂದೆಯೆ ಹೇಳಿದ್ದಾನೆ. ʼಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮುಮಂ ಪರಧರ್ಮಮುಮಂʼ ಎಂದು ಶ್ರೀವಿಜಯ ಕೂಡ ಹೇಳಿದ್ದಾನೆ. ಚಿನ್ನದಂತಹ ಅಮೂಲ್ಯವಾದ ಆಚಾರ ಯಾವುದಾದರು ಇದ್ದರೆ ಅದು ಪರರ ಧರ್ಮ ಮತ್ತು ವಿಚಾರಗಳನ್ನು ಸಹನೆಯಿಂದ ಕಾಣುವುದು. ಇಂತಹ ನಾಡಿನಲ್ಲಿ ಬಾಳುತ್ತಿರುವ ನಾವು ಯಾವುದೋ ಒಂದು ಅಥವಾ ಇನ್ನೊಂದು ರಾಜಕೀಯ ಪಕ್ಷಕ್ಕೆ ನಮ್ಮ ವೈಚಾರಿಕತೆಯನ್ನು ಒತ್ತೆ ಇಟ್ಟು ಯಾರೋ ಕೆಲವರು ಅಧಿಕಾರ ಹಿಡಿಯಲು ದಾಳಗಳಾಗುವುದು ಬೇಕಿಲ್ಲ.

ಧಾರ್ಮಿಕತೆ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಮ್ಮೆ ಬೇರ್ಪಡಿಸದ ಹಾಗೆ ಬೆಸುಗೆ ಆಗಿಬಿಟ್ಟಿರುತ್ತದೆ. ಅದನ್ನು ನಾವು ಎಷ್ಟೊ ವೇಳೆ ಧಾರ್ಮಿಕತೆ ಎಂದು ಗುರ್ತಿಸುವುದೇ ಇಲ್ಲ. ನಿತ್ಯಾಚಾರ ಎಂಬಂತೆ ನಾವದನ್ನು ಪಾಲಿಸುತ್ತ ಇರುತ್ತೇವೆ. ಎಲ್ಲ ಶಾಲಾ ಕಾಲೇಜುಗಳಲ್ಲಿ ಬಹುಪಾಲು ವೇಳೆ ಗಣೇಶ ಪೂಜೆ, ಶಾರದ ಪೂಜೆ ಮಾಡುತ್ತೇವೆ. ಅದನ್ನು ಯಾವ ಮುಸ್ಲಿಮರೂ ವಿರೋಧಿಸುವುದಿಲ್ಲ. ಪೀರಲು ಕುಣಿತದಲ್ಲಿ, ಅಲಾಬಿ ಹಬ್ಬದಲ್ಲಿ ಮುಸ್ಲಿಮೇತರರೂ ಪಾಲ್ಗೊಳ್ಳುತ್ತಾರೆ. ಹಲವಾರು ಸಲ ಅಯ್ಯಪ್ಪನ ಮಾಲೆಯನ್ನು ಹಾಕಿ ಒಬ್ಬಿಬ್ಬರು ಹುಡುಗರು ನಮ್ಮ ಕಾಲೇಜಿಗೆ ಬಂದಾಗ ಈ ಹಿಂದೆ ಯಾವ ಮುಸ್ಲಿಮರೂ ವಿರೋಧಿಸಿಲ್ಲ. ಹೆಣ್ಣು ಮಕ್ಕಳು ಸೀರೆ ಉಡುವುದನ್ನಾಗಲೀ, ಟಿಕಳಿ, ಬಿಂದಿ ಇಡುವುದನ್ನಾಗಲಿ ಯಾವ ಮುಸ್ಲಿಮ್‌ ಹೆಣ್ಣು ಮಕ್ಕಳೂ ಈ ಹಿಂದೆ ವಿರೋಧಿಸಿರಲಿಲ್ಲ. ಒಬ್ಬಿಬ್ಬರು ನಾವು ಓದುವಾಗ ಗಂಧಾಕ್ಷತೆ ಧರಿಸಿಯೂ, ಹಿಜಾಬ್‌ ಧರಿಸಿಯೂ, ಪಿಳ್‌ ಜುಟ್ಟು ಬಿಟ್ಟೂ ಬರುತ್ತಿದ್ದರು. ಆಗ ಯಾರೂ ಯಾರನ್ನೂ ಆಕ್ಷೇಪ ಮಾಡುತ್ತಿರಲಿಲ್ಲ. ಎಂದೂ ಇಲ್ಲದ ಸಂಘರ್ಷ ಇಂದೇಕೆ?

ಕೆಲವರು ಸಮವಸ್ತ್ರ ಸಮಾನತೆಯ ಕುರುಹು ಎನ್ನುತ್ತಿದ್ದಾರೆ. ಆದರೆ ಅದೇ ಇತರರ ತಲೆವಸ್ತ್ರವನ್ನು ಟಾರ್ಗೆಟ್‌ ಮಾಡಿ ಅವರನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಬಾರದಲ್ಲವೆ? ಸೈನಿಕರಿಗೆ ಸಮವಸ್ತ್ರ ಇದೆ. ಪೋಲೀಸರಿಗೆ ಸಮವಸ್ತ್ರ ಇದೆ. ಲಾಯರ್ ಗಳಿಗೆ ಸಮವಸ್ತ್ರ ಇದೆ. ಶಾಲಾಕಾಲೇಜಿಗೆ ಏಕೆ ಬೇಡ? ಎಂದು ಕೆಲವರು ಪ್ರಶ್ನೆ ಹಾಕುತ್ತಾರೆ. ಸಮವಸ್ತ್ರ ಶಾಲಾ ಕಾಲೇಜುಗಳಲ್ಲಿ ನಾವೆಲ್ಲ ಒಂದೇ ಎನ್ನುವುದನ್ನು ಸಾರುವುದಾದರೆ ಸರಿ. ಆದರೆ ಸಮವಸ್ತ್ರದ ಹೆಸರಿನಲ್ಲಿ ಅಲ್ಪಸಂಖ್ಯಾತರ ಕುರುಹುಗಳನ್ನು ಅಸ್ಪೃಶ್ಯತೆಯಿಂದ ಕಾಣುವುದು ಸರಿಯಲ್ಲ. ಕೋಮುವಾದಿ ಧೃವೀಕರಣಕ್ಕೆ ಸಮವಸ್ತ್ರವನ್ನು ಬಳಸುವುದು ಸರಿಯಲ್ಲ. ಸಮವಸ್ತ್ರವು ಧರ್ಮಸಂಘರ್ಷದ ಸಾಧನ ಆಗುವುದು ತರವಲ್ಲ.

ವಸ್ತ್ರಸಂಹಿತೆಯೆ ಬೇರೆ, ಸಮವಸ್ತ್ರವೆ ಬೇರೆ. ಕಾಲೇಜಿಗೆ ಹೆಣ್ಣುಮಕ್ಕಳು ಈಜುಡುಗೆಯಲ್ಲಿ ಬರಬಾರದು. ಅದಕ್ಕೊಂದು ಶಿಸ್ತು, ರೀತಿ ಇರಬೇಕು. ಹೇಗೆ ಬರಬೇಕು ಹೇಗೆ ಇರಬೇಕು ಎಂಬುದು ನಮ್ಮ ನಮ್ಮ ವಿವೇಕ. ಅಂತಹ ವಿವೇಕವನ್ನು ಕಲಿಸುವುದು ಕೂಡ ಶಿಕ್ಷಣದ ಕೆಲಸ. ಆದರೆ ಧರ್ಮಾಂಧತೆಯನ್ನು ಕಲಿಸುವುದು ಶಿಕ್ಷಣದ ಕೆಲಸ ಅಲ್ಲ. ಆದರೆ ಇಂದು ಶಿಕ್ಷಕರು, ಶಿಕ್ಷಣ ಸಂಸ್ಥೆಗಳಿಗಿಂತ ಇತರ ಶಕ್ತಿಗಳೇ ಶಿಕ್ಷಣವನ್ನು ನಿಯಂತ್ರಿಸುತ್ತಿವೆ!

ಧಾರ್ಮಿಕ ಲಾಂಛನಗಳಾದ ಹಿಜಾಬ್‌, ಬುರ್ಖಾ, ಟೋಪಿ, ಪೇಟ, ಜನಿವಾರ, ಶಿವದಾರ, ಲಿಂಗ, ಮುದ್ರೆ, ರುದ್ರಾಕ್ಷಿ, ವಿಭೂತಿ, ಕಚ್ಚೆ ಪಂಚೆ, ಶಾಲು, ಪಿಳ್ ಜುಟ್ಟು, ಗಂಧಾಕ್ಷತೆ, ಕೃಪಾಣ, ಟರ್ಬನ್, ನಾಮ, ಕಮಂಡಲ, ಪುಚ್ಛ ಇತ್ಯಾದಿ ಇತ್ಯಾದಿ ಎಲ್ಲವನ್ನೂ ತ್ಯಾಗ ಮಾಡಿ ಎಂದರೆ ಆಗುತ್ತದೆಯೆ? ಹಾಗೆ ಈ ಎಲ್ಲವನ್ನೂ ತ್ಯಾಗ ಮಾಡಿದರೆ ಏನೂ ಕೊಳ್ಳೆ ಹೋಗುವುದಿಲ್ಲ ಎನ್ನುವುದು ಬೇರೆ ಮಾತು. ಹೆಂಗಸರ ಕುಂಕುಮ, ಟಿಕಳಿ, ತಾಳಿ, ಬಳೆ, ಕಾಲುಂಗುರ, ಕಡಗ, ಓಲೆ, ಮೂಗುತಿ, ಸೀರೆ, ಎಲ್ಲವನ್ನೂ ನಾವು ಧಾರ್ಮೀಕರಣ ಮಾಡಿದ್ದೇವೆ. ಇವೆಲ್ಲವನ್ನೂ ತೊರೆದರೆ ಹೆಂಗಸರಿಗೆ ಏನೂ ನಷ್ಟವಿಲ್ಲ. (ಕೆಲವರು ಇವಕ್ಕು ವೈಜ್ಞಾನಿಕ ಕಾರಣಗಳನ್ನು ಕೊಡುತ್ತಾರೆ) ಆದರೆ ಇವನ್ನೆಲ್ಲ ಹಿಂದೂಗಳಿಗೆ ಹಾಕಬೇಡಿ ಎಂದು ಹಿಂದೂಗಳೆ ಹೇಳಲಾರರು. ಮುಸ್ಲಿಮರೂ ತಮ್ಮ ಲಾಂಛನಗಳನ್ನು ಧರಿಸಬೇಡಿ ಎಂದು ತಮ್ಮವರಿಗೆ ಅವರೆ ಹೇಳಲಾರರು. ಅಷ್ಟರ ಮಟ್ಟಿಗೆ ನಾವು ಧರ್ಮಧಾರಿಗಳೂ ಧರ್ಮಭೀತರೂ ಆಗಿದ್ದೇವೆ.

ಇಂದು ಶಾಲಾ ಕಾಲೇಜುಗಳಲ್ಲಿ ಕಲಿತ ಮುಸ್ಲಿಮ್‌ ಹೆಣ್ಣುಮಕ್ಕಳು ಖಂಡಿತಾ ನಾಳೆ ವೈಚಾರಿಕತೆ ಪಡೆದು ಬುರ್ಖಾ, ಹಿಜಾಬ್‌ಗಳನ್ನು ನಿರಾಕರಿಸುತ್ತಾರೆ. ಎಲ್ಲ ಧಾರ್ಮಿಕ ಲಾಂಛನಗಳನ್ನೂ ನಿರಾಕರಿಸುತ್ತಾರೆ. ಹಾಗೊಂದು ವೇಳೆ ಆಗದಿದ್ದರೆ ನಮ್ಮ ಶಿಕ್ಷಣದಲ್ಲೆ ಎಲ್ಲೊ ದೋಷ ಇದೆ ಎಂದು ನಾವು ತಿಳಿಯಬೇಕು. ನಾವು ಧಾರ್ಮಿಕ ವೈರತ್ವ ಬೆಳೆಸಿಕೊಂಡು ಕಚ್ಚಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗದೆ ಹೋಗುವಂತೆ ಆಗಬಾರದಷ್ಟೆ.

ನಮ್ಮಲ್ಲಿ ಕರ್ನಾಟಕದ ಸಚಿವರೊಬ್ಬರು ರಾಷ್ಟ್ರಧ್ವಜ ಹಾರಿಸುವುದಿಲ್ಲ; ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುತ್ತಾರೆ! ಇದಕ್ಕಾಗಿ ಕಲಾಪವೂ ಬಲಿಯಾಗುತ್ತಿದೆ. ಕಾಂಗ್ರೆಸ್ ಶಾಸಕರೊಬ್ಬರು ಮಹಿಳೆಯರು ತಮ್ಮ ಸೌಂದರ್ಯ ಬಚ್ಚಿಟ್ಟುಕೊಳ್ಳಬೇಕು ಇಲ್ಲದಿದ್ದರೆ ಅತ್ಯಾಚಾರಗಳು ಆಗುತ್ತವೆ ಎನ್ನುತ್ತಾರೆ. ವಿವಾದ ಆದ ಮೇಲೆ ಕ್ಷಮೆ ಕೇಳುತ್ತಾರೆ. ಈ ಹಿಜಾಬ್‌ ವಿವಾದದ ಹಿಂದೆ ಐಸಿಸ್‌, ಐಎಸ್‌ಐ, ಕೆ.ಎಫ್‌.ಡಿ. ಮತ್ತಿತರ ಸಂಘಟನೆಗಳ ಕೈವಾಡ ಇದೆ; ಇದರ ಸಮಗ್ರ ತನಿಖೆ ಆಗಬೇಕು ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ! ಎಂತಹ ಸಮಾಜದಲ್ಲಿ ನಾವಿದ್ದೇವೆ!?

ಇಂದಿನ ಈ ಹಿಜಾಬ್‌ ಕೇಸರಿ ಶಾಲು ವಿವಾದ ನಮ್ಮ ಸಮಾಜದಲ್ಲಿ ಹುಟ್ಟಿರುವ ವಿವಾದವಲ್ಲ; ಕೆಲವರು ಸೇರಿ ಸೃಷ್ಟಿಸಿರುವ ವಿವಾದ. ಈಗಿದು ಪ್ರಪಂಚದಾದ್ಯಂತ ಹಬ್ಬಿ ಅಂತಾರಾಷ್ಟ್ರೀಯ ಮೀಡಿಯ ಗಮನ ಸೆಳೆದಿದೆ. ಇದಕ್ಕಾಗಿ ಅರಬ್‌ ದೇಶಗಳೆಲ್ಲ ಹಿಂದೂ ಧಾರ್ಮಿಕರನ್ನು ಹತ್ತಿಕ್ಕುವ ಮಾತಾಡುತ್ತವಂತೆ! ಇಡಿ ವಿಶ್ವವೇ ಧಾರ್ಮಿಕ ಧೃವೀಕರಣಕ್ಕೆ ಒಳಗಾಗಬೇಕೆ? ಇದಕ್ಕೆ ತುಪ್ಪ ಮೊದಲು ಸುರಿದವರು ನಮ್ಮ ಮೀಡಿಯಾದವರೆ. ಈಗಿದು ಕೋರ್ಟ್‌ನಲ್ಲಿ ಬಗೆಹರಿಯಲು ಕಾದಿದೆ. ನಮ್ಮ ನಮ್ಮಲ್ಲೆ ಅನುವುತನುವಾಗಿ ಬಗೆಹರಿಸಿಕೊಳ್ಳಬಹುದಾದ ಸಂಗತಿಗೆ ಕೋರ್ಟಿಗೆ ಹೋಗುವ ಸ್ಥಿತಿ ತಂದುಕೊಳ್ಳುವುದು ಪ್ರಗತಿಯ ಗುರುತಲ್ಲ. ನಮ್ಮ ಮನೆಯ ಕಿಚ್ಚನ್ನು ವಿಶ್ವಕ್ಕೇ ರಾಚಿ ಅವರಿವರಿಂದ ಬುದ್ಧಿ ಹೇಳಿಸಿಕೊಳ್ಳುವುದು ಇನ್ನೂ ನಾಚಿಕೆಯ ಸಂಗತಿ. ಖಂಡಿತಾ ಶಿಕ್ಷಣ ಸಂ‍ಸ್ಥೆಗಳು ಧಾರ್ಮಿಕ ಪ್ರಚಾರಕ್ಕಾಗಿ ಇಲ್ಲ. ಆದರೆ ಕೆಲವರು ಅದಕ್ಕಾಗೇ ಬಳಸಲು ಹವಣಿಸುತ್ತಿರುವಂತೆ ಕಾಣುತ್ತಿದೆ! ಇದು ತಿರಸ್ಕಾರಾರ್ಹ.

ಈ ಅಂಕಣದ ಹಿಂದಿನ ಬರೆಹಗಳು:
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು

ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು

ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...