ವಸುಮತಿ ಉಡುಪ ಅವರ –“ಮೃಗತೃಷ್ಣಾ”

Date: 10-01-2022

Location: ಬೆಂಗಳೂರು


‘ಹೆಣ್ಣಿನ ಮೃದು-ಮಧುರ-ಭಾವನೆಗಳು ಸುಗಂಧಿನಿ ಪಾತ್ರದ ಮೂಲಕ ಸುಂದರವಾಗಿ ಅಭಿವ್ಯಕ್ತಗೊಂಡಿವೆ. ಮೃಗತೃಷ್ಣಾ ನಾಟಕದ ಪ್ರತಿಯೊಂದು ಪಾತ್ರಗಳೂ ಅವುಗಳ ಆಶಯಗಳಿಗೆ ತಕ್ಕಂತೆ ಬೆಳೆದು ನಿಂತಿವೆ’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ 'ಮಹಿಳಾ ರಂಗಭೂಮಿ’ ಅಂಕಣದಲ್ಲಿ ವಸುಮತಿ ಉಡುಪ ಅವರ “ಮೃಗತೃಷ್ಣಾ” ನಾಟಕದ ಕುರಿತು ವಿಶ್ಲೇಷಿಸಿದ್ದಾರೆ. 

ಕತೆ-ಕಾದಂಬರಿಗಳ ಮೂಲಕ ಗುರುತಿಸಿಕೊಂಡಿರುವ ವಸುಮತಿ ಉಡುಪ ಅವರು ಮಹತ್ವದ ಲೇಖಕಿ. 1999ರಲ್ಲಿ ಇವರ ಪ್ರಥಮ ನಾಟಕ ಪ್ರಕಟವಾಯಿತು. ಅದೇ ಮೃಗತೃಷ್ಣಾ. ಗ್ರೀಕ್ ಪುರಾಣಕತೆಯ ಪ್ರಸಂಗವೊಂದರಿಂದ ಪ್ರೇರಿತಗೊಂಡು ಈ ನಾಟಕ ರಚಿಸುವುದಾಗಿ ಅವರು ನಾಟಕದ ಮುನ್ನುಡಿಯಲ್ಲಿ ಹೇಳಿದ್ದಾರೆ. ಹೀಗೆ ಪ್ರೇರಣೆ ಪಡೆದಿದ್ದರೂ ಇದು ಇವರ ಸ್ವತಂತ್ರ ನಾಟಕವಾಗಿದೆ. ಶಿವಮೊಗ್ಗದ ಅಭಿನಯ ತಂಡದವರಿಂದ ರಂಗಪ್ರಯೋಗಗೊಂಡು ಸತತ ಮೂರುಬಾರಿ ರಾಜ್ಯಮಟ್ಟದ ನಾಟಕಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ. 1999ರಲ್ಲಿ ಶಿವಮೊಗ್ಗದ ಕರ್ನಾಟಕ ಸಂಘದಿಂದ ಈ ನಾಟಕ ಪ್ರಕಟವಾಗಿದೆ. ತುಳುವಿನಲ್ಲಿಯೂ ಈ ನಾಟಕ ಪ್ರದರ್ಶನ ಕಂಡಿದೆ.

ಈ ನಾಟಕವು ದೇವಮಾನವ ಸಂಬಂಧಗಳ ಮುಖಾಮುಖಿಯಾಗಿದೆ. ದೇವಲೋಕದ ಸುಗಂಧಿನಿ, ಭೂಲೋಕದ ರಾಜನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಪ್ರೀತಿಸಿ ಮದುವೆಯಾದರೂ ಬದುಕಿನ ಕೊನೆಯ ಹಂತದಲ್ಲಿ ಈ ದಂಪತಿಗಳು ಅನೇಕ ತೊಂದರೆಗಳನ್ನನುಭವಿಸುತ್ತಾರೆ. ಇದಕ್ಕೆ ಮುಖ್ಯಕಾರಣವಾಗಿರುವುದು ಇವರು ಬೇರೆ ಬೇರೆ ಲೋಕದವರಾಗಿರುವರೆಂಬುದು ಗ್ರೀಕ್ ಪುರಾಣದ ಈ ಕತೆಯಂತೆ ಹಿಂದೂ ಪುರಾಣದಲ್ಲಿಯೂ ಇಂತಹ ಕಥಾನಕಗಳಿವೆ. ಅವುಗಳಲ್ಲಿ ಊರ್ವಶಿ-ಪುರೂರವ, ವಿಶ್ವಾಮಿತ್ರ-ಮೇನಕೆಯವರ ಪ್ರಸಂಗಗಳನ್ನು ಉದಾಹರಿಸಬಹುದಾಗಿದೆ.

ಚಾತುರ್ವರ್ಣ ವ್ಯವಸ್ಥೆಯಲ್ಲಿ ಅನೇಕ ಕಟ್ಟುಪಾಡುಗಳಿವೆ. ಜಾತಿ-ಜಾತಿಗಳಲ್ಲಿ, ವರ್ಗ-ವರ್ಗಗಳಲ್ಲಿ, ಗಂಡು-ಹೆಣ್ಣುಗಳಲ್ಲಿ ಈ ಮೇಲು-ಕೀಳು ಎಂಬುದು ಇಲ್ಲಿ ಸಾಮಾನ್ಯ ಮತ್ತು ಸಹಜವಾಗಿದೆ. ಭೂಲೋಕದಲ್ಲಿರುವ ಮನುಷ್ಯರಲ್ಲಿಯೇ ಹೀಗೆ ಭೇದಭಾವ, ಭಿನ್ನ ರೀತಿಯಿರುವಾಗ, ದೇವಲೋಕ ಮತ್ತು ಭೂಲೋಕದ ಸಂಬಂಧ ಎಷ್ಟೊಂದು ಕಷ್ಟದಾಯಕವೆಂಬುದನ್ನು ನಾಟಕ ಹೇಳುತ್ತದೆ. ಮೂಲ ಕತೆ ಇಲ್ಲಿ ಯಥಾವತ್ತಾಗಿ ನಾಟಕ ರೂಪ ಪಡೆದಿದೆ. 

ಪುರಾಣದ ಕಥಾವಸ್ತುವನ್ನು ತೆಗೆದುಕೊಂಡು ಅದನ್ನು ವರ್ತಮಾನಕ್ಕೆ ಪರಿವರ್ತಿಸುವ ಅನೇಕ ನಾಟಕಗಳು ಇವೆ. ಅವುಗಳಲ್ಲಿ ಗಿರೀಶ ಕಾರ್ನಾಡರ “ಯಯಾತಿ” ಮಹತ್ವದ ನಾಟಕವಾಗಿದೆ. ಈ ನಾಟಕದಲ್ಲಿ ಅನೇಕ ಹೊಸ ಒಳನೋಟಗಳಿವೆ. ಅಂತಹ ಸಾಧ್ಯತೆಗಳು ಮೃಗತೃಷ್ಣಾದಲ್ಲಿ ಕಾಣಿಸುವುದಿಲ್ಲ. ಆದರೆ “ಮೃಗತೃಷ್ಣಾ” ಒಂದು ಸುಂದರ ನಾಟಕವಾಗಿ ಮೂಡಿಬಂದಿದೆ. ಪುರಾಣದ ವಸ್ತುವಾಗಿರಲಿ, ಇತಿಹಾಸದ ವಸ್ತುವಾಗಿರಲಿ ಅದನ್ನು ವರ್ತಮಾನದಲ್ಲಿ ಕಟ್ಟಲು ಕೆಲವು ನಾಟಕಕಾರರು ಪ್ರಯತ್ನಿಸಿದ್ದಾರೆ. ಚಾತುರ್ವರ್ಣ ವ್ಯವಸ್ಥೆಯ ಮೂಲಕ ಹುಟ್ಟಿಕೊಂಡ ಈ ಭೇದ ಸಂಸ್ಕೃತಿಯನ್ನು ಪ್ರತಿಭಟಿಸುವ ಕೆಲವು ನಾಟಕಗಳು ನಮ್ಮಲ್ಲಿವೆ. ಇನ್ನು ಕೆಲವು ನಾಟಕಗಳು ಪುರಾಣ ಕಥೆಗಳನ್ನು ಯಥಾವತ್ತಾಗಿ ತಂದಿಡುವುವಲ್ಲಿ ಯಶಸ್ವಿಯಾಗಿವೆ. “ಮೃಗತೃಷ್ಣಾ” ಮೂರನೆಯ ವರ್ಗಕ್ಕೆ ಸೇರುತ್ತದೆ. ಆದರೆ ಇಂತಹ ನಾಟಕಗಳೇ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಅಂತೆಯೇ ಈ ನಾಟಕ ಮೂರು ಸಲ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ.

ಭಾರತೀಯ ಮನಸ್ಸು, ಚಾತುರ್ವರ್ಣ ವ್ಯವಸ್ಥೆಯನ್ನು ಶತಮಾನಗಳಿಂದ ಒಪ್ಪಿಕೊಂಡುಬಂದಿವೆ. ಹೀಗಾಗಿ ಇಲ್ಲಿ ಭೇದ ಸಂಸ್ಕೃತಿಯೆಂಬುದು ಸಾಮಾನ್ಯವಾಗಿದೆ. ಇಂತಹ ಭೇದ ಸಂಸ್ಕೃತಿಯನ್ನು ಮುರಿಯಲು ಪ್ರಯತ್ನಿಸುವ ಕೃತಿಗಳು ಇಲ್ಲಿ ಜನಮನಗೆಲ್ಲುವುದಿಲ್ಲ. ಸ್ವಾತಂತ್ರ್ಯ ಬಂದು ಏಳೂ ದಶಕಗಳು ಕಳೆದಿದ್ದರೂ ಇಲ್ಲಿ ಜಾತಿ ಅಸಮಾನತೆ ಹಾಗೆಯೇ ಉಳಿದಿದೆ, ವರ್ಗ ಅಸಮಾನತೆ ಹೆಚ್ಚಾಗಿದೆ. ಪುರಾಣ ಕತೆಗಳು ಜನರನ್ನು ಆಕರ್ಷಿಸಿದಂತೆ ಇಲ್ಲಿ ಇತಿಹಾಸದ ಪ್ರಸಂಗಗಳು ಆಕರ್ಷಿಸುವುದಿಲ್ಲ. ಭೇದ ಸಂಸ್ಕೃತಿ ಯಾವಾಗಲೂ ವಾಸ್ತವಕ್ಕೆ ವಿರುದ್ಧವಾಗಿರುತ್ತದೆ, ಸಮಾನತೆಯನ್ನು ಅದು ಗೌಣವಾಗಿ ಕಾಣುತ್ತದೆ. ಹೀಗಾಗಿ ಇಲ್ಲಿ ಹೆಸರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ, ಹೇಳಲು ಮಾತ್ರ ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದೆ. ಒಳಗೆ ಹೋಗಿ ನೋಡಿದರೆ ಇಂದಿಗೂ ಜಾತಿ ಜಗಳಗಳು, ಕೋಮುಗಲಭೆಗಳು ನಿತ್ಯ ನಿರಂತರವಾಗಿವೆ. ಸರಕಾರಗಳೂ ಕೂಡ ಜಾತಿಗಳನ್ನೇ ಕೇಂದ್ರವಾಗಿಟ್ಟು ಕೊಂಡು, ಚುನಾವಣೆ ನಡೆಸುತ್ತವೆ. ಇದೇ ಜಾತಿ-ವರ್ಗಗಳ ಮಾನದಂಡದಲ್ಲಿ ಬಜೆಟ್ ಹಂಚಿಕೆ ಮಾಡುತ್ತವೆ.

ಎಂಟು ದೃಶ್ಯಗಳಲ್ಲಿ ವ್ಯಾಪಿಸಿರುವ ಈ ನಾಟಕವು ಎಲ್ಲ ಭೇದಗಳಿಗಿಂತ, ಎಲ್ಲ ಕಟ್ಟಳೆಗಿಂತ ಪ್ರೀತಿ ದೊಡ್ಡ ದೆಂದು ಸಾರುತ್ತದೆ. ಈ ಕಾರಣದಿಂದಲೇ ಈ ನಾಟಕ ಇಂದಿಗೂ ಪ್ರಸ್ತುತವಾಗುತ್ತದೆ. ಈ ಭೇದ ಸಂಸ್ಕೃತಿಯ ವಿರುದ್ಧ ಪ್ರತಿಭಟಿಸಿದಿದ್ದರೂ, ಪ್ರೀತಿ-ತ್ಯಾಗದಂತಹ ಮೌಲ್ಯಗಳ ಮೂಲಕ ನಾಟಕ ಪರಿಣಾಮವನ್ನುಂಟು ಮಾಡುತ್ತದೆ. ಪ್ರತಿಭಟನೆ, ಸಂಘರ್ಷಗಳಿರಲಾರದೆಯೂ ಪ್ರೇಮತತ್ವವನ್ನು ನಾಟಕ ಗೆಲ್ಲಿಸುತ್ತದೆ. ಹೀಗಾಗಿ ಈ ನಾಟಕ ಮುಖ್ಯವಾಗುತ್ತದೆ.

ಈ ನಾಟಕದಲ್ಲಿ ಎರಡು ಲೋಕಗಳು ಬರುತ್ತವೆ. ಒಂದು ದೇವಲೋಕ, ಅದರ ಹೆಸರು ಅಲಕಾಪುರಿ. ಮತ್ತೊಂದು ಭೂಲೋಕ ಅದರ ಹೆಸರು ಅಲಕನಂದೆ. ಅಲಕಾಪುರಿ-ಅಲಕನಂದೆ ಎರಡೂ ಹೆಸರುಗಳಲ್ಲಿ ಅಕಾರವೇ ಮೊದಲ ಅಕ್ಷರವಾಗಿದೆ. ಈ ಅಕಾರ ಕೇವಲ ಒಂದು ಅಕ್ಷರವಾಗಿರದೆ, ಪ್ರೀತಿ ಮೌಲ್ಯದ ಸಂಕೇತ ವಾಗಿದೆ. ದೇವಲೋಕದ ಅಲಕಾಪುರಿಗೂ, ಭೂಲೋಕದ ಅಲಕನಂದೆಗೂ, ಭೂಲೋಕದ ಅಲಕಮಂದೆಗೂ ತುಂಬ ವ್ಯತ್ಯಾಸವಿದೆ. ಅಲಕಾಪುರಿಯಲ್ಲಿ ಸಾವನ್ನುಗೆದ್ದ ದೇವತೆಗಳಿದ್ದರೆ, ಅಲಕನಂದೆಯಲ್ಲಿ ಸತ್ತು-ಹುಟ್ಟುವ ಮನಷ್ಯರಿದ್ದಾರೆ. ಅಲಕಾಪುರಿಯಲ್ಲಿ ಮಹಾಪ್ರಭು ಇದ್ದಾನೆ. ಅವನ ರಾಣಿಯಿದ್ದಾಳೆ. ಅವರ ಮಗಳು ಈ ನಾಟಕದ ನಾಯಕಿ ಸುಗಂಧಿನಿ ಇದ್ದಾಳೆ. ಸುಗಂಧಿನಿಗೆ ಸಖಿಯರಿದ್ದಾರೆ, ರಾಜರಿಗೆ, ದಾಸಿಯರಿದ್ದಾರೆ. ಭೂಲೋಕದ ಅಲಕನಂದೆಯು ಹಸ್ತಿನಾವತಿಯಲ್ಲದೆ. ಹಸ್ತಿನಾವತಿಯ ಮಹಾರಾಜ ಭುವನ ವರ್ಮನೇ ಇಲ್ಲಿಯ ನಾಯಕ ನಾಗಿದ್ದಾನೆ. ಈ ಮಹಾರಾಜನಿಗೆ ರಕ್ತಾಕ್ಷನೆಂಬ ಆಪ್ತನಿದ್ದಾನೆ; ರಾಜಪರಿವಾರವಿದೆ. ಪ್ರಜೆಗಳಿದ್ದಾರೆ. ದೇವಲೋಕದ ಸುಗಂಧಿನಿ, ಭೂಲೋಕದ ರಾಜನನ್ನು ಪ್ರೀತಿಸಿ ಮದುವೆಯಾಗಿ ಸಂಸಾರ ನಡೆಸಿದ ನಂತರ ನಾಲ್ಕು ಮಕ್ಕಳು ಹುಟ್ಟುತ್ತಾರೆ. ರಾಜ ಭವನವರ್ಮ ಮುತ್ತಜ್ಜನಾಗುತ್ತಾನೆ; ಮೊಮ್ಮಗನ ಮಗ ಕಿರಿಯರಾಜ ನಾಟಕಕ್ಕೆ ಹೊಸ ತಿರುವು ಕೊಡಲು ಪ್ರಯತ್ನಿಸುತ್ತಾನೆ. ಆದರೆ ಆ ಪ್ರಯತ್ನ ಸಫಲವಾಗುವುದಿಲ್ಲ. ಸುಗಂಧಿನಿ ಭೂಲೋಕ ಬಿಟ್ಟು, ಸ್ವರ್ಗ ಲೋಕಕ್ಕೆ ಅಲಕಾಪುರಿಗೆ ಹೊರಟು ಹೋಗುತ್ತಾಳೆ. ಅವಳ ಪ್ರಯತ್ನದಿಂದ ಭುವನ ವರ್ಮನಿಗೆ ಶಾಪವಾಗಿದ್ದ ವರವು ಕೊನೆಗೊಳ್ಳುತ್ತದೆ. ಪ್ರಾರಂಭದಲ್ಲಿದ್ದ ಸ್ಥಿತಿಯೇ ಕೊನೆಯ ದೃಶ್ಯದ ಸ್ಥಿತಿಯಾಗುತ್ತದೆ. ಈ ದೀರ್ಘ ಪಯಣದಲ್ಲಿ ಪ್ರೀತಿ ಮಾತ್ರ ಗೆದ್ದು ನಿಲ್ಲುತ್ತದೆ. ಇದು ಈ ನಾಟಕದ ಕಥಾ ವಸ್ತುವಾಗಿದೆ.

ಮೊದಲನೇ ದೃಶ್ಯದಲ್ಲಿ ದೇವಕನ್ನಿಕೇಯರು ಇಳೆಗೆ ಇಳಿದು ಬರುತ್ತಾರೆ. ದೇವಕನ್ನಿಕೆ ಸುರಸುಂದರಿ ಸುಗಂಧಿನಿ ತನ್ನ ಇಬ್ಬರು ಸಖೀಯರೊಂದಿಗೆ ಭೂಮಿಗಿಳಿದು ಬಂದು ಅಕಲನಂದೆಯ ತಟದಿ ವಿಹಾರ ಮಾಡುತ್ತಾರೆ. ಹುಣ್ಣಿಮೆಯ ರಾತ್ರಿಯಲ್ಲಿ, ಸೋನೆಯ ಬೆಳದಿಂಗಳಲ್ಲಿ ಅಲಕನಂದೆಯ ಪರಿಸರ ಸುಗಂಧಿನಿಗೆ, ದೇವಲೋಕಕ್ಕಿಂತಲೂ ಸುಂದರವಾಗಿ ಕಾಣಿಸುತ್ತದೆ. ಸಖಿಯರಿಬ್ಬರ ವಿರೋಧದ ನಡುವೆಯೂ ಸುಗಂಧಿನಿ ಸಖಿಯರನ್ನು ಬಿಟ್ಟು ದೂರ ದೂರ ಹೋಗಿ ಅಲಕನಂದೆಯ ತಟದಲ್ಲಿ ಒಬ್ಬಳೇ ವಿಹರಿಸುತ್ತಿರುವಾಗ, ಹಸ್ತಿನಾವತಿಯ ಮಹಾರಾಜ ಭೂವನವರ್ಮ ಕಾಣಿಸಿಕೊಳ್ಳುತ್ತಾನೆ. ಹರಿಣಿಬೇಟೆಗೆಂದು ಅದರ ಬೆನ್ನತ್ತಿಬಂದ ರಾಜನಿಗೆ ಅಲಕನಂದೆಯಲ್ಲಿ ಹರಿಣಾಕ್ಷಿಸಿಗುತ್ತಾಳೆ. ಸುರಸುಂದರಿಯಾದ ಸುಗಂಧಿನಿಯ ಸೌಂದರ್ಯಕ್ಕೆ ಮಾರುಹೋದ, ರಾಜನು ಅವಳಲ್ಲಿ ಮೋಹಗೊಳ್ಳುತ್ತಾನೆ. ಅದೇ ರೀತಿ ಸುಗಂಧಿನಿಯೂ ರಾಜನ ಮೋಹ ಪರವಶದಲ್ಲಿ ಬೀಳುತ್ತಾಳೆ. ಮೊದಲ ದೃಶ್ಯದಲ್ಲಿ, ಮೊದಲ ಭೇಟಿಯಲ್ಲಿಯೇ ಇಬ್ಬರಲ್ಲಿಯೂ ಪ್ರೇಮಾಂಕುಶವಾಗಿ, ರಾಜನಿಗೆ ಮತ್ತೆ ಬರುವದಾಗಿ ಮಾತುಕೊಟ್ಟು ಸುಗಂಧಿನಿ ಅಲಕಾಪುರಿಗೆ ಮರಳಿ ಬರುತ್ತಾಳೆ.

ಎರಡನೇಯ ದೃಶ್ಯ ಅಲಕಾಪುರಿಯಲ್ಲಿ ನಡೆಯುತ್ತದೆ. ತನ್ನ ಮಗಳು ಭೂಲೋಕದ ಮನುಷ್ಯ ನನ್ನು ಪ್ರೀತಿಸಿದ ವಿಷಯ ತಿಳಿದ ಮಹಾಪ್ರಭು ಸಿಟ್ಟಿಗೆದ್ದಿದ್ದಾನೆ. ಮಹಾರಾಣಿಯನ್ನು ವಿಚಾರಿಸುತ್ತಾನೆ. ಸಖಿಯರನ್ನು ಕರೆಸಿ ಕೇಳುತ್ತಾನೆ. ಸುಗಂಧಿನಿಯನ್ನು ಕರೆದು ಪ್ರಶ್ನಿಸುತ್ತಾನೆ. ತನ್ನ ಮಗಳ ನಿರ್ಣಯ ಅಚಲವೆಂದು ತಿಳಿದನಂತರ ತಾನೂ ಅದಕ್ಕೆ ಒಪ್ಪಿಗೆಕೊಡುತ್ತಾನೆ. ಒಪ್ಪಿಗೆಯ ಜತೆಗೆ ಅಳಿಯನಿಗೆ ಅಮರತ್ವವನ್ನು ದಯಪಾಲಿಸುತ್ತಾನೆ. ಹಸ್ತಿನಾವತಿಯ ರಾಜ ಭೂವನವರ್ಮ ಚಿರಂಜೀವಿಯಾಗಲೆಂದು ವರಕೊಡುತ್ತಾನೆ. ಸುಗಂಧಿನಿಗೆ ಅತೀವ ಸಂತೋಷವಾಗುತ್ತದೆ. ತಮ್ಮ ಪ್ರೇಮವಿವಾಹಕ್ಕೆ ತಂದೆ ಒಪ್ಪಿದ್ದಲ್ಲದೆ, ತನ್ನ ಪತಿಗೆ ಚಿರಂಜೀವಿಯಾಗಲೆಂದು ವರಕೊಟ್ಟಿದ್ದು ಮತ್ತಿಷ್ಟು ಸಂತೋಷವಾಗಿ, ತಂದೆ-ತಾಯಿಯರಿಂದ ಬೀಳ್ಕೊಂಡು ಅಲಕನಂದೆಗೆ ಆಗಮಿಸುತ್ತಾಳೆ. ಅಲ್ಲಿ ಇವಳಿಗಾಗಿ ದಾರಿಕಾಯುತ್ತ ಕುಳಿತಿದ್ದ ರಾಜ ಕಾಣಿಸುತ್ತಾನೆ. ಇಬ್ಬರೂ ಹಸ್ತಿನಾವತಿಗೆ ಬರುತ್ತಾರೆ.

ಮುಂದಿನ ದೃಶ್ಯಗಳು ಭುವನವರ್ಮ ಅರಸನ ಅರಮನೆಯಲ್ಲಿ ನಡೆಯುತ್ತವೆ. ತಾನು ಚಿರಂಜೀವಿಯೆಂಬ ವರ ಪಡೆದಿದ್ದೇನೆಂದು ರಾಜನು ತನ್ನ ಆಪ್ತ ರಕ್ತಾಕ್ಷನಿಗೆ ಹೇಳಿದಾಗ ರಕ್ತಾಕ್ಷನು ಒಂದು ಸವಾಲು ಹಾಕುತ್ತಾನೆ. ನೀನು ಕೇವಲ ಚಿರಂಜೀವಿಯಾಗಿರುವಿ, ಆದರೆ ಚಿರಯೌವನಿಗನಲ್ಲ, ಎಲ್ಲರಂತೆ ನಿನಗೂ ಮುಪ್ಪು ಬರುತ್ತದೆ. ಮುಪ್ಪಿನಲ್ಲಿ ನರಳಬೇಕಾಗುತ್ತದೆ. ಈ ನರಳುವ ಬದುಕು, ಹಾಸಿಗೆ ಹಿಡಿದ ಚಿರಂಜೀವತ್ವದಿಂದ ಏನು ಪ್ರಯೋಜನ? ಮುಪ್ಪಾಗಿ ನರುತ್ತಿರುವಾಗ ಎಲ್ಲರೂ ಸಾವನ್ನು ಬಯಸುತ್ತಾರೆ. ಆದರೆ ನೀನು ಚಿರಂಜೀವಿಯಾಗಿರುವುದರಿಂದ ಕೊನೆಯವರೆಗೂ ನರಳುತ್ತಲೇ ಇರಬೇಕಾಗುತ್ತದೆ. ಆದುದರಿಂದ ಇದು ನಿನಗೆ ವರವಲ್ಲ ಶಾಪವಾಗಿದೆ ಎಂದು ರಕ್ತಾಕ್ಷ ಹೇಳಿದಾಗ, ರಾಜನು ಆಲೋಚಿಸುತ್ತಾನೆ. ರಕ್ತಾಕ್ಷನ ಮಾತು ಸತ್ಯವೆನಿಸುತ್ತದೆ. ತಾನು ಸುಗಂಧಿನಿಯನ್ನು ಮದುವೆಯಾಗಬಾರದಿತ್ತೆಂದು ಪರಿತಪಿಸುತ್ತಾನೆ. ಸುಗಂಧಿನಿಯ ತಂದೆ ತನಗೆ ವರಕೊಟ್ಟಿದ್ದೇನೆಂದು ಹೇಳುತ್ತ ಅದರೊಳಗೆ ಶಾಪವನ್ನಿಟ್ಟಿದ್ದನೆಂಬ ಸತ್ಯ ತಿಳಿದ ಕೂಡಲೇ ಚಡಪಡಿಸುತ್ತಾನೆ. ತನಗೆ ಈವರಬೇಡ, ಇದು ತನ್ನ ಬಹುದೊಡ್ಡ ಶಾಪವಾಗಿದೆ. ಈ ಶಾಪದಿಂದ ತಾನು ಮುಕ್ತಿಹೊಂದಬೇಕೆಂದು ಪ್ರಯತ್ನಿಸುತ್ತಾನೆ. ತನ್ನಷ್ಟಕ್ಕೆ ತಾನಿದ್ದಿದ್ದರೆ ಈ ಅನಾಹುತವಾಗುತ್ತಿರಲಿಲ್ಲ. ದೇವಲೋಕದವರು ಯಾವಾಗಲೂ ಮೋಸಗಾರರು, ಮನುಷ್ಯ ಲೋಕದವರನ್ನು ಕಂಡರೆ ಅವರಿಗಾಗುವುದಿಲ್ಲ, ತಾನು ಸುಗಂಧಿನಿಯನ್ನು ಪ್ರೇಮಿಸಿ ಮದುವೆಯಾಗಿ ತಪ್ಪು ಮಾಡಿ ಬಿಟ್ಟೆನೆಂದು ಪಶ್ಚಾತಾಪ ಪಡುತ್ತಾನೆ.

ಈ ಸತ್ಯ ತಿಳಿದ ಕೂಡಲೇ ರಾಜನು ಸುಗಂಧಿನಿಯ ಮೇಲೆ ಸಿಟ್ಟಾಗುತ್ತಾನೆ. ಇದೆಲ್ಲ ನಿನ್ನಿಂದಲೇ ಆಯಿತೆಂದು ದೂರುತ್ತಾನೆ. ನಿನ್ನ ಮಾತು ಕೇಳಿ ನಾನು ಮೂರ್ಖನಾದೆನೆಂದು ಸಂಕಟಪಡುತ್ತಾನೆ. ಚಿರಂಜೀವಿತ್ವವನ್ನು ದಯಪಾಲಿಸಿದವನ ಎದುರು, ಚಿರಯೌವನವನ್ನು ಬೇಡಬಾರದಿತ್ತೇ? ಎಂದು ಹೆಂಡತಿಯನ್ನು ದೂರುತ್ತಾನೆ. 

“ಆ ವರದ ಗರ್ಭದಲ್ಲಡಗಿದ್ದ ಈ ಶಾಪ ನನಗೆ ಗೊತ್ತೇ ಆಗಲಿಲ್ಲ” ಎಂದು ಸುಗಂಧಿನಿ ಹೇಳಿದಾಗ. ಅಂತಹ ತಂದೆಯ ಮಗಳಾದ ನಿನ್ನನ್ನು ನಾನು ಹೇಗೆ ನಂಬಲಿ? ನನ್ನಲ್ಲಿರುವ ಸಂಪತ್ತು, ರಸವನ್ನು ಹೀರಿ ಒಣ ತೊಗಟೆಯಾದ ಮೇಲೆ ಬಿಸಾಕಿಹೋಗುವ ಉಪಾಯ ವಿದೆಯೇ ಇದರ ಹಿಂದೇ? ಎಂದು ಪ್ರಶ್ನಿಸುತ್ತಾನೆ. “ನಾನು ನಿನಗಾಗಿ ಎಲ್ಲವನ್ನು ತೊರೆದು ಬಂದಿದ್ದೇನೆ, ನನಗೆ ಸುಳ್ಳು ಅಪವಾದ ಹೊರಿಸಬೇಡವೆಂದು” ಸುಗಂಧಿನಿ ಬೇಡಿಕೊಳ್ಳುತ್ತಾಳೆ. ಆಗ ರಾಜ ಅವಳಿಗೆ ಒಂದು ಮಾತು ಹೇಳುತ್ತಾನೆ. “ನನ್ನ ಮೇಲೆ ಪ್ರೀತಿ ಇದ್ದರೆ ಈಗಿಂದೀಗಲೇ ಅಲಕಾಪುರಿಗೆ ಹೋಗಿ ನಿನ್ನ ತಂದೆಯ ಕಾಲನ್ನು ಹಿಡಿದುಕೊಂಡ ಚಿರಯೌವನದ ವರವನ್ನು ಪಡೆದುಕೊಂಡು ಬಾ” ಎಂದು ತಿಳಿಸುತ್ತಾನೆ. ಅಂತಹ ತಂದೆಯ ಮುಖವನ್ನು ನೋಡಲಾರೆ, ಅಲ್ಲಿಗೆ ಹೋದೆನೆಂದರೆ ಮತ್ತೆ ನಾನು ಮರಳಿ ಬರುವಂತಿಲ್ಲ. ನನಗೂ ಸ್ವಾಭಿಮಾನವಿದೆ. ಚಿರಯೌವನದ ಭಿಕ್ಷೆಯನ್ನು ನನ್ನ ತಂದೆಯ ಬಳಿ ಕೇಳಲಾರೆನೆಂದು ಸ್ಪಷ್ಟಪಡಿಸುತ್ತಾಳೆ. ಆಗ ರಾಜನಿಗೆ ಸಿಟ್ಟುಬರುತ್ತದೆ.

“ನೀನು ಯಾವ ಜಾತಿಯ ಹೆಣ್ಣು? ನನ್ನನ್ನು ಇಕ್ಕಳದ ನಡುವೆ ಸಿಕ್ಕಿಸಿಬಿಟ್ಟೆಯಲ್ಲ? ಎಂದು ನೊಂದು ಕೊಳ್ಳುತ್ತಾನೆ. ನನ್ನ ಮುದಿತನ ನೋಡಿ ಸಂಭ್ರಮಪಡುವ ಆಸೆಯಿದೆಯೇ ನಿನಗೆ? ಎಂದು ಮಾತಿನಲ್ಲೇ ಚುಚ್ಚುತ್ತಾನೆ. “ಬಂದುದನ್ನು ಎದುರಿಸುವ ಧೈರ್ಯವಿರಬೇಕು ರಾಜ? ಆತ್ಮವಿಶ್ವಾಸ ಇರಬೇಕು”. ಎಂದು ಭರವಸೆ ಮೂಡಿಸಲು ಪ್ರಯತ್ನಿಸುತ್ತಾಳೆ. ಅವಳ ಭರವಸೆಯ ಮಾತುಗಳಿಗೆ ರಾಜನು ಸ್ವಲ್ಪ ಸುಧಾರಿಸಿಕೊಂಡವನಂತೆ ಕಾಣುತ್ತಾನೆ.

ಆದರೇ ದೃಶ್ಯದಲ್ಲಿ ಸುಗಂಧಿನಿ ಆತ್ಮವಿಮರ್ಶೆಗೆ ತೊಡಗುತ್ತಾಳೆ. ಭುವಿಯ ಬಾಳೆಂದರೆ ಇಷ್ಟು ಭಯಾನಕವೇ? ಎಂದು ಆಶ್ಚರ್ಯಪಡುತ್ತಾಳೆ. “ಭೂಲೋಕ ಇದು, ಇಲ್ಲಿ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಇಲ್ಲದಿದ್ದರೆ ಅಮೃತ ವಿಷಯವಾಗಿ ಹೋದೀತೆಂದು” ಎಚ್ಚರವಹಿಸುತ್ತಾಳೆ. ಅಷ್ಟರಲ್ಲಿ ಕಿರಿಯರಾಜ ಬರುತ್ತಾನೆ. 

ದೇವಲೋಕದ ಸುಗಂಧಿನಿ ಚಿರಯೌವನೆಯಾಗಿದ್ದರಿಂದ ಅವಳು ಇಂದಿಗೂ ಹಾಗೇ ಕಾಣುತ್ತಾಳೆ. ಇದನ್ನು ನೋಡಿದ ಕಿರಿಯರಾಜನು ತನ್ನ ಮುತ್ತಜ್ಜಿಯಾದ ಸುಗಂಧಿನಿಯ ಮೇಲೆ ಮೋಹಗೊಳ್ಳುತ್ತಾನೆ”. ನೀನು ನನ್ನ ಮುತ್ತಜ್ಜಿಯಾದರೆ ಯಾರು ನಂಬುತ್ತಾರೆ? ದೇವತೆಗಳಿಗೆ ಇಂತಹ ಸಂಬಂಧಗಳ ಬಂಧನ ಇರುವುದಿಲ್ಲ, ಅದೇನಿದ್ದರೂ ನಮ್ಮಂತಹ ಮಾನವ ಮಾತ್ರರಿಗೆ ಮಾತ್ರ” ಎಂದು ಹೇಳುತ್ತಾನೆ. ನಿಮ್ಮಂತಹ ಮನಷ್ಯರ ಜತೆಗೇ ನಾನು ಎಷ್ಟೋ ಸಂವತ್ಸರಗಳನ್ನು ಕೇಳದಿದ್ದೇನೆ. ನಾನೂ ಮನುಷ್ಯಳೇ ಎಂದು ಸುಗಂಧಿನಿ ಹೇಳಿದರೂ, ಕಿರಿಯರಾಜ ಒಪ್ಪುವುದಿಲ್ಲ. “ಸುರಲೋಕದಿಂದ ಉದುರಿದ ಪಾರಿಜಾತ ಪುಷ್ಪನೀನು” ಎಂದು ಅವಳಲ್ಲಿ ಮೋಹ ತೋರುತ್ತಾನೆ. ಆಗ ಸುಗಂಧಿನಿಗೆ ಸಿಟ್ಟು ಬರುತ್ತದೆ. “ಕಾಮಾತುರಾಣಾಂ ನಭಯಂನಲಜ್ಜಾ” ಎಂದ್ಹೇಳಿ ನೀನು ನಿರ್ಲಜ್ಜ, ಹಿರಿಯರಾಜರ ಬಗ್ಗೆ ನಿನಗೆ ಗೌರವವಿಲ್ಲವೆ? ಎಂದು ಪ್ರಶ್ನಿಸುತ್ತಾಳೆ. ಹಿರಿಯರಾಜನೊಬ್ಬ ಮುದಿಗೂಬೆ ಅವನಿಗೆ ಯಾರು ಹೆದರುತ್ತಾರೆ? ಎಂದು ಹೇಳಿದಾಗ “ರಾಜರಿಗೆ ಹೆದರದಿದ್ದರೆ ಬಿಡು ಲೋಕಕ್ಕಾದರೂ ಭಯಪಡು. ನಿನಗೆ ಮನಸಾಕ್ಷಿಯೆಂಬುದಿಲ್ಲವೆ?” ಎಂದು ಸಿಟ್ಟಿಗೆ ಬರುತ್ತಾಳೆ. “ನಿನ್ನ ತಂದೆಯ, ತಂದೆಯ ತಂದೆಯನ್ನು ಹೊತ್ತಿದ ಉದರ ಇದು ಎಂಬ ಅರಿವುಂಟೆ ನಿನಗೆ? ನಾಲಿಗೆಯನ್ನು ಬಿಗಿ ಹಿಡಿ, ಮರ್ಯಾದೆಯಿಂದ ನಡೆದುಕೊ” ಎಂದು ಎಚ್ಚರಿಸುತ್ತಾಳೆ.

ಮುಂದಿನ ದೃಶ್ಯದಲ್ಲಿ ರಾಜ ಮುಪ್ಪಿನಿಂದ ನರಳುತ್ತಿದ್ದಾನೆ, ಉದ್ವೇಗಗೊಂಡು ಬಳಲುತ್ತಿದ್ದಾನೆ. ನಿರ್ಧರಿಸಿ ದಾಸಿಯಿಂದ ವಿಷತರಿಸಿಕೊಂಡು ಕುಡಿಯುತ್ತಾನೆ. ಆಗ ಸುಗಂಧಿನಿಯ ಪ್ರವೇಶವಾಗುತ್ತದೆ. ದಾಸಿಯಿಂದ ಕಿರಿರಾಜನ ವಿಷಯ ತಿಳಿದುಕೊಂಡ ರಾಜನು ಸುಗಂಧಿನಿಯನ್ನು ಮೂದಲಿಸುತ್ತಾನೆ. ಮರಿಮಗನ ಮಗ್ಗುಲನ್ನು ಸೇರಿದ ನಿನ್ನನ್ನು ಕುರಿತು ಚಿಂತಿಸಲೇ? ಎಂದು ಪ್ರಶ್ನಸುತ್ತಾನೆ, ನೀನು ಜಾರಿಣಿಯೆಂದು ದೂರುತ್ತಾನೆ”. ನಿನ್ನ ಲೋಕಕ್ಕೆ ತಿರುಗಿ ಹೋಗು, ನನ್ನ ಕಣ್ಣೆದುರಿಗಿರಬೇಡ” ಎಂದು ಆಜ್ಞೆ ಮಾಡುತ್ತಾನೆ. ನಿನ್ನ ಸಂಕಟಕ್ಕೆ ನನ್ನ ತಂದೆಯ ಹತ್ತಿರ ಪರಿಹಾರ ಕೇಳುತ್ತೇನೆಂದು ರಾಜನಕಾಲಿಗೆ ನಮಸ್ಕರಿಸಿ ಸುಗಂಧಿನಿ ಅಲಕಾಪುರಿಗೆ ಹೋಗುತ್ತಾಳೆ.

ಕ್ರೂರ ವಿಷ ಕುಡಿದರೂ ತಾನು ಸಾಯಲಿಲ್ಲವೆಂದು ಪರಿತಪಿಸುತ್ತಾನೆ. ಸುಗಂಧಿನಿ ಅರಮನೆ ಬಿಟ್ಟು ಹೋದನಂತರ ಚಡಪಡಿಸುತ್ತಾನೆ. ನೂರಾರುವರ್ಷ ತನ್ನ ಬಾಳಸಂಗಾತಿಯಾಗಿದ್ದವಳ ಮೇಲೆ ಅಪವಾದ ಹೋರಿಸಿ ಕಳಿಸಿ ಬಿಟ್ಟೆನಲ್ಲಾ ಎಂದು ಪಶ್ಚಾತಾಪ ಪಡುತ್ತಾನೆ. ನನ್ನನ್ನು ಕ್ಷಮೀಸಿ ಬಿಡುದೇವಿ, ನನ್ನ ಪ್ರೀತಿಯನ್ನು ನಾನೇ ಕೈಯಾರೆ ಕೊಂದೆನೆಂದು ಮುಖ ಮುಚ್ಚಿಕೊಳ್ಳುತ್ತಾನೆ.

ಎಂಟನೇ ದೃಶ್ಯ ಅಲಕಾಪುರಿಯಲ್ಲಿ ನಡೆಯುತ್ತದೆ. ಮಹಾಪ್ರಭುವಿನ ಸನ್ನಿಧಿಯಲ್ಲಿ ರಾಣಿ ಕುಳಿತಿದ್ದಾಳೆ. ಸುಗಂಧಿನಿ ತನ್ನ ನೋವನ್ನು ತಂದೆಯೆದುರು ತೋಡಿಕೊಳ್ಳುತ್ತಿದ್ದಾಳೆ. ಈ ಅಸಹಾಯಕತೆಯೇ ನಮ್ಮಿಬ್ಬರನ್ನು ಬೇರ್ಪಡಿಸಿತೆಂದು ಹೇಳುತ್ತಾಳೆ. “ಅಸಹಾಯಕತೆ ಎದುರು ನಿನ್ನ ಪ್ರೀತಿ ಸೋತಿತಲ್ಲವೇ?” ಎಂದುತಂದೆ ಕೇಳಿದಾಗ, ಸುಗಂಧಿನಿ, “ಪ್ರೀತಿ ಎಂದಿಗೂ ಸೋಲುವುದಿಲ್ಲ ತಂದೆ, ನನ್ನ ಪತಿ ಸಂಶಯದ ಸುಳಿಯಲ್ಲಿ ಸಿಲುಕಿದ್ದಾನೆ. ಆ ಸುಳಿಯಲ್ಲಿ ಅವನು ಮುಳುಗಬಾರದು, ಅವನನ್ನು ತ್ಯಜಿಸಿ ಬಂದ ಮಾತ್ರಕ್ಕೆ ನನ್ನ ಪ್ರೀತಿ ಅಳಿದಿಲ್ಲ, ನಿಮ್ಮವರವೇ ನಮ್ಮ ಬದುಕನ್ನು ಹಾಳುಮಾಡಿತೆಂದು ಸ್ಪಷ್ಟಪಡಿಸುತ್ತಾಳೆ. ಆಗ ಸುಗಂಧಿನಿಯ ತಂದೆ ಪರಿಹಾರ ಹೇಳುತ್ತಾನೆ.

“ನಿನ್ನ ಪತಿಗೆ ಮಣ್ಣಿನ ಸಂಬಂಧ ಶಾಶ್ವತ ಅವನು ರೂಪಾಂತರಗೊಂಡು ತನ್ನ ಮುದಿತನದ ನೋವಿನಿಂದ ಬಿಡುಗಡೆ ಹೊಂದುವಂತೆ ಮಾಡುತ್ತೇನೆ. ನೆಲದ ಮಣ್ಣಿನಲ್ಲಿ ಅವನು ಒಂದು ಹುಳುವಾಗಲಿ. ಗ್ರೀಷ್ಮದಲ್ಲಿ ಒಳಗಿಕೊಂಡಿದ್ದು, ಮಳೆಯಲ್ಲಿ ಚಿಗಿತು, ಚಿರಂಜೀವಿತ್ವದ ವರವನ್ನು ಉಳಿಸಿಕೊಂಡಿರಲಿ. ಹಳೆಯ ನೆನಪುಗಳೆಲ್ಲಾ ಅವನಿಂದ ಮರೆಯಾಗಿ ಹೋಗಲಿ” ಎಂದು ತಂದೆ ಮತ್ತೊಂದು ವರವನ್ನು ಕೊಟ್ಟನಂತರ ಸುಗಂಧಿನಿಗೆ ಸಂತೋಷವಾಗುತ್ತದೆ. “ನೋವಿಲ್ಲದಂತಹ ಬದುಕನ್ನು ತನ್ನ ಪತಿ ಬದುಕುವಂತಾದರೆ ನನಗೆ ಸಮಾಧಾನ. ನಿಮ್ಮ ಕರುಣೆಗೆ ಈ ಸುಗಂಧಿನಿ ಸಮಸ್ಕರಿಸುತ್ತಾಳೆ” ಎಂದು ಹೇಳುತ್ತಾಳೆ. ಹಿಮ್ಮೇಳದ ಹಾಡಿನೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ಈ ನಾಟಕದಲ್ಲಿ ಸುಗಂಧಿನಿಯ ತಂದೆ ಮಹಾಪ್ರಭು ಮತ್ತು ಅವಳ ಪತಿ ಭೂವನವರ್ಮ ಇವರ ನಡುವೆ ಸಂಘರ್ಷವಿಲ್ಲ. ದೇವ-ಮಾನವರ ನಡುವೆ ಇಲ್ಲಿ ಸಂಘರ್ಷ ನಡೆಯದಿದ್ದರೂ, ದೇವಲೋಕದವರು ಮೋಸಗಾರರೆಂಬ ಭಾವನೆ ಭುವನವರ್ಮನಿಗಿದೆ. ದೇವಲೋಕದವರು ಚಿರಂಜಿವಿಗಳೂ, ಭೂಲೋಕದವರು ಎಂದಿದ್ದರೂ ಮರಣ ಹೊಂದುವವರು. ಹೀಗಾಗಿ ದೇವಲೋಕದವರು-ಭೂಲೋಕದವರು ಕೂಡಿರಲು ಸಾಧ್ಯವಿಲ್ಲ ವೆಂಬ ಸಂದೇಶ ಈ ನಾಟಕದ ಮೂಲಕ ಹೋಗುತ್ತದೆ. ಈ ದೇವಲೋಕವೆಂಬುದು ಪುರಾಣ ಕಲ್ಪನೆ, ಭೂಲೋಕವೆಂಬುದು ವಾಸ್ತವದ ಸತ್ಯ. ಭೂಲೋಕದಲ್ಲಿಯೂ ಮನುಷ್ಯ ಮನುಷ್ಯರಲಲಿಯೇ ಅನೇಕ-ಭೇದಗಳಿವೆ. ಜಾತಿ-ವರ್ಗ-ಪ್ರದೇಶ-ಬಣ್ಣ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿ ಮೇಲು-ಕೀಳು ಭಾವನೆಗಳಿವೆ. ಶ್ರೀಮಂತ-ಬಡವರ ನಡುವೆ, ಮೇಲ್ಜಾತಿ-ಕೆಳಜಾತಿಗಳ ನಡುವೆ, ಉತ್ತರಭಾರತ-ದಕ್ಷಿಣಭಾರತದ ನಡುವೆ, ಕಪ್ಪು-ಬಿಳುಪು ವರ್ಣದವರೊಡನೆ ಸಂಬಂಧ ಮಾಡುವುದು, ಮದುವೆಯಾಗುವುದರಿಂದ ಎಷ್ಟೊಂದು ಸಮಸ್ಯೆಗಳು ಸವಾಲುಗಳಿರುವಾಗ, ದೇವಲೋಕ-ಭೂಲೋಕದವರೊಡನೆ ಸಂಬಂಧ ಸಾಧ್ಯವೇ ಇಲ್ಲವೆಂಬ ವಾಸ್ತವ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೆ ಈ ನಾಟಕ ಮುಖ್ಯವಾಗುವುದು ಅಂತಹ ಸಂಬಂಧ ಸಾಧ್ಯವೆಂಬುದನ್ನು ತೋರಿಸುವುದರಿಂದ ಸಂಘರ್ಷದ ಬದಲು-ಸಹನೆಯ ಮೂಲಕ, ದ್ವೇಷದ ಬದಲು-ಪ್ರೀತಿಯ ಮೂಲಕ, ಅಹಂಭಾವದ ಬದಲು-ಅಂತಃಕರಣದ ಮೂಲಕ ಇಂತಹ ಸಂಬಂಧ ಸಾಧ್ಯವೆಂಬ ಸತ್ಯವನ್ನು ಸುಗಂಧಿನಿ ಸಾರಿ ಹೇಳುತ್ತಾಳೆ.

ಈ ನಾಟಕವು ಸ್ತ್ರೀಸಾಧ್ಯತೆಯ ನಾಟಕವಾಗಿದೆ. ಇಲ್ಲಿ ಸ್ತ್ರೀವಾದದ ತೀವ್ರತೆಯಿರದೆ, ಸ್ತ್ರೀಸಹನೆಯ ಅಂತಃಕರಣವಿದೆ. ಪ್ರೀತಿ-ತ್ಯಾಗ-ಸಹನೆಯ ಮೂಲಕ ಎಂತಹ ಸಮಸ್ಯೆ-ಸವಾಲುಗಳನ್ನು ಗೆಲ್ಲಬಹುದೆಂಬ ಆಶಾಭಾವನೆಯಿದೆ. ಹೀಗಾಗಿ ನಾಟಕ ಎಲ್ಲರಿಗೂ ಇಷ್ಟವಾಗುತ್ತದೆ. ಹೆಣ್ಣು ಗುಲಾಮಳೂ ಅಲ್ಲ, ಜಗಳಗಂಟಿಯೂ ಅಲ್ಲ, ಹೆಣ್ಣೊಂದು ಮೇರು ಪರ್ವತವಿದ್ದ ಹಾಗೆ. ಪರ್ವತ ಹತ್ತಿದಷ್ಟೂ ಲೋಕ ವಿಶಾಲವಾಗಿ ಕಾಣಿಸುವಂತೆ, ಸುಗಂಧಿನಿಯಂತಹ ಸ್ತ್ರೀ ಇಲ್ಲಿ ಹೊಸ ಸಾಧ್ಯತೆಗಳ ಸಂಕೇತವಾಗಿದ್ದಾಳೆ.

ದೇವಲೋಕದ ಸುಂದರನೊಂದಿಗೆ ಮದುವೆಯಾಗಿ ಈ ಸುಂದರಿ ಸುಖದಿಂದಿರಬಹುದಿತ್ತು. ಆದರೆ ಅಂತಹ ಸಾಧ್ಯತೆಯನ್ನು ಕೈಬಿಟ್ಟು ಸುಗಂಧಿನಿ ಭೂಲೋಕದ ಮನುಷ್ಯನಲ್ಲಿ ಅನುರಕ್ತೆಯಾಗುತ್ತಾಳೆ. ತಂದೆ-ತಾಯಿ-ಸಖಿಯರ ಮಾತರನ್ನು ಕೇಳದೆ, ತನ್ನ ದೃಢನಿರ್ಧಾರಕ್ಕೆ ಬದ್ಧಳಾಗುತ್ತಾಳೆ. ಹೀಗೆ ಎಲ್ಲ ಸುಖ-ಸಂಭ್ರಮವನ್ನು ತೊರೆದ ಸುಗಂಧಿನಿ ಭೂಲೋಕ ಸೇರಿ, ಅಲ್ಲಿಯನರಮಾನವನೇ ತನ್ನ ಸರ್ವಸ್ವವೆಂದು ನಂಬುತ್ತಾಳೆ, ಪ್ರೀತಿಸುತ್ತಾಳೆ, ಭೂವನವರ್ಮನ ವಂಶವನ್ನು ಬೆಳೆಸುತ್ತಾಳೆ. ಆದರೆ ತನ್ನ ವಂಶದ ಕುಡಿ, ತನ್ನ ಮರಿಮೊಮ್ಮಗ ಕಿರಿಯರಾಜನು, ತನ್ನ ಮೇಲೆ ಮೋಹಗೊಂಡಾಗ ನೊಂದುಕೊಳ್ಳುತ್ತಾಳೆ.

ಜಾಣತನದಿಂದ ಸೂಕ್ಷ್ಮವಾಗಿ ಆ ಸಮಸ್ಯೆಯನ್ನು ಬಗೆಹರಿಸುತ್ತಾಳೆ. ಭುವನವರ್ಮರಾಜನು ಯಾವಾಗ, ಸುಗಂಧಿನಿಯ ಮೇಲೆ ಕಿರಿಯ ರಾಜನೊಂದಿನ ಸಂಬಂಧದ ಆರೋಪ ಹೊರಿಸುತ್ತಾನೋ ಆಗ ಅವಳಿಗೆ ತುಂಬ ನೋವಾಗುತ್ತದೆ. ಸುಗಂಧಿನಿಯನ್ನು ಅವಳ ಪತಿಯೇ ಜಾರಿಣೆಯೆಂದು ಕರೆದಾಗ ಆಕೆಗೆ ತುಂಬ ಸಂಕಟವಾಗುತ್ತದೆ. ಆದರೂ ಸಹನೆ ಕಳೆದುಕೊಳ್ಳದೆ ರಾಜನಿಗೆ ಸಮಾಧಾನ ಪಡಿಸುತ್ತಾಳೆ. ರಾಜ ಅವಳನ್ನು ಅರಮನೆಯಿಂದ ಹೊರಹಾಕಿದ ಮೇಲೆ ದೇವಲೋಕಕ್ಕೆ ಹೋದ ನಂತರವೂ, ರಾಜನ ಮುಪ್ಪಿನ ಬಗೆಗೆ ಚಿಂತಿಸುತ್ತಾಳೆ. ತನ್ನ ಸ್ವಾಭಿಮಾನವನ್ನು ಕೈ ಬಿಟ್ಟು, ತಂದೆಯಲ್ಲಿ ಕೈಮುಗಿದು ಕೇಳಿಕೊಳ್ಳುತ್ತಾಳೆ. ತನ್ನ ಗಂಡನನ್ನು ಈ ಸಂಕಟದಿಂದ ಪಾರುಮಾಡೆಂದು ಕೇಳಿಕೊಂಡು ಮತ್ತೊಂದು ವರವನ್ನು ಪಡೆಯುತ್ತಾಳೆ. ಇಲ್ಲಿ ಸುಗಂಧಿನಿಯ ಪ್ರೀತಿ ಅಚಲವಾಗಿದೆ, ಅವಳ ನಿರ್ಧಾರ ದೃಢವಾಗಿದೆ, ಆಕೆಯ ವರ್ತನೆ ಉಚಿತವಾದದ್ದಾಗಿದೆ, ಅವಳ ಮನಸ್ಸು ವಿಶಾಲವಾದುದ್ದಾಗಿದೆ. ಪ್ರಾರಂಭದಿಂದ ಕೊನೆಯವರೆಗೂ ಇಲ್ಲಿ ಸುಗಂಧಿನಿ ತಾಯಿಯ ಅಂತಃಕರಣವನ್ನು ತೋರಿಸುತ್ತಲೇ ಎತ್ತರೆತ್ತರಕೆ ಬೆಳೆದು ನಿಲ್ಲುತ್ತಾಳೆ. ಒಂದು ಹೆಣ್ಣು ಹೇಗೆ ಬೆಳೆಯ ಬಲ್ಲಳೆಂಬ ಹೊಸ ಮಾದರಿಯೊಂದು ಇಲ್ಲಿ ಪ್ರಕಟವಾಗಿದೆ. ಹೀಗಾಗಿ ಮೃಗತೃಷ್ಣಾ ಮಹತ್ವದ ನಾಟಕವಾಗಿ ಕಾಣಿಸಿಕೊಳ್ಳುತ್ತದೆ.

ಪ್ರಾರಂಭದಲ್ಲಿ ನಾಟಕದ ಓಟ ತೀವ್ರವಾಗಿದೆಯೆನಿಸುತ್ತದೆ. ಅಲಕಾಪುರದಿಂದ ಅಲಕನಂದೆಗೆ ತನ್ನ ಸಖಿಯರೊಂದಿಗೆ ವಿಹಾರಕ್ಕೆ ಬಂದ ಸುಗಂಧಿನಿ ಸಖಿಯರು ಬೇಡವೆಂದರೂ ಒಬ್ಬಂಟಿಯಾಗಿ ಅರಣ್ಯ ಪ್ರವೇಶಿಸುತ್ತಾಳೆ. ಅಲ್ಲಿ ಬೇಟೆಗೆಂದು ಬಂದ ಭುವನವರ್ಮನನ್ನು ನೋಡಿ ಅವನಲ್ಲಿ ಅನುರಕ್ತೆಯಾಗುತ್ತಾಳೆ. ಭೇಟಿಯಾದ ನಂತರ ಅವನು ಅವಳಿಗೆ ಇಷ್ಟವಾಗುತ್ತಾನೆ. ಇದೇ ದೃಶ್ಯದಲ್ಲಿಯೇ ಇಬ್ಬರಲ್ಲಿ ಪ್ರೀತಿ ಹುಟ್ಟುತ್ತದೆ. ಆ ಪ್ರೀತಿ ಬೆಳೆದು ನಿಲ್ಲುತ್ತದೆ. ಸುಗಂಧಿನಿ ರಾಜನಿಗೆ ಪ್ರೇಮದಾಣೆ ಕೊಟ್ಟು ಅಲಕಾಪುರಿಗೆ ಮರುಳುತ್ತಾಳೆ. ಈ ಪ್ರಸಂಗಗಳನ್ನು ಎರಡು ದೃಶ್ಯಗಳಲ್ಲಿ ವಿಸ್ತರಿಸಬಹುದಿತ್ತು. ನೋಡಿದಾಕ್ಷಣವೇ ಪ್ರೀತಿ ಹುಟ್ಟುವುದು, ಹುಟ್ಟಿದಾಕ್ಷಣವೇ ಅದು ತೀವ್ರಗೊಳ್ಳುವುದು ಅವಸರವಾಯಿತೆನಿಸುತ್ತದೆ. ಉಳಿದಂತೆ ಎಲ್ಲ ದೃಶ್ಯಗಳೂ ಸರಿಯಾಗಿಯೇ ಇವೆ. ದೃಶ್ಯದ ಪ್ರಾರಂಭದಲ್ಲಿ ಬಂದಿರುವ ಹಿಮ್ಮೇಳದ ಹಾಡುಗಳಲ್ಲಿ ಕಾವ್ಯಾಂಶವಿಲ್ಲ ಅವೂ ಸಂಭಾಷಣೆಯಂತೆಯೇ ಇವೆ. ನಾಟಕದ ಪ್ರತಿ ಪುಟಗಳಲ್ಲಿಯೂ ಇಂಗ್ಲಿಷ್ ಅಂಕಿಗಳಿವೆ. ಕನ್ನಡ ಸಾಹಿತಿಗಳಾದವರು ಕನ್ನಡ ಅಂಕಿಗಳನ್ನು ಬಳಸಬೇಕು. ಇಂತಹ ಕೆಲವು ಮಿತಿಗಳ ನಡುವೆಯೂ ಈ ನಾಟಕ ದೃಶ್ಯದಿಂದ ದೃಶ್ಯಕ್ಕೆ ಬೆಳೆಯುತ್ತ ಹೋಗುತ್ತದೆ. ಈ ನಾಟಕದಲ್ಲಿ ಬರುವ ಸಂಭಾಷಣೆಗಳು ಸೂಕ್ತವ ಸಮಯೋಚಿತವೂ ಆಗಿವೆ. ಅನೇಕ ಸಂಭಾಷಣೆಗಳಲ್ಲಿ ಕಾವ್ಯ ಝರಿಗಳು ಕಾಣಿಸುತ್ತವೆ.

1.“ಹುಣ್ಣಿಮೆಯ ತುಂಬು ಚಂದಿರ ಆಗಸದಲ್ಲಿ ಕಂಗೊಳಿಸುವಾಗ ತನ್ನ ಮನೋನಿಗ್ರಹ ಒಡೆದು ಚೂರುಚೂರಾಗಿ ಬೆಳದಿಂಗಳ ಧಾರೆಗುಂಟ ಇಳಿದು ಬಂದು”-ಸುಗಂಧಿನಿ(ಪು:12)
2.“ನನ್ನಲ್ಲೂ ನಿನ್ನಂತೆ ಮಿಡಿವ ಹೃದಯವಿದೆ. ತುಡಿವಚೇತನವಿದೆ. ಶಬ್ದಕ್ಕೆ ನಿಲುಕದ ಭಾವನೆಗಳಿವೆ”. (ಪು:19)
3.“ಪ್ರೀತಿ ಇದ್ದಲ್ಲಿ ಭಯ ಇರುವುದಿಲ್ಲ. ಭೀತಿ ಅನ್ನುವುದು ಪ್ರೀತಿಯ ವೈರಿ. ಹೇಡಿಯಾದವರು ಪ್ರೀತಿಸಲು ಸಾಧ್ಯವಿಲ್ಲ”.- (ಪು:27)
4.“ಸುರಲೋಕದಿಂದ ಉದುರಿದ ಪಾರಿಜಾತ ಪುಷ್ಪದಂತೆ ಎಲ್ಲರೊಡನೆ ಇದ್ದೂ ಎಲ್ಲಂತಿಲ್ಲದ ನೀನು ನಾರೀರತ್ನದಂತೆ”. ಕಿರಿಯರಾಜ (ಪು:56)
5.“ಸಾವು ಇಲ್ಲದ ಬದುಕಿಗಿಂತಾ ದೊಡ್ಡಶಾಪ ಇನ್ನ್ಯಾವುದೂ ಇಲ್ಲ”. ರಾಜ (ಪು:63)
6.“ಸುಖ ಹೆಚ್ಚಾದಷ್ಟೂ ಮುದಿತನ ಬೇಗ ಬಂದು ಬಿಡುತ್ತದೆ”. ರಕ್ತಾಕ್ಷ (ಪು:44)

ಇಂತಹ ಸಂಭಾಷಣೆಗಳ ಸಾಲುಗಳ ಕಾವ್ಯಾತ್ಮಕವಾಗಿರುವಂತೆ, ಜೀವನಾನುಭವದ ಮಹತ್ವದ ನುಡಿಗಳೂ ಆಗಿವೆ. ನಾಟಕಕಾರರು ಈ ನಾಟಕದಲ್ಲಿ ಅನೇಕ ಗಾದೆ ಮಾತುಗಳನ್ನು ಬಳಸಿದ್ದಾರೆ. ಅವು ಸಂದರ್ಭಕ್ಕೆ ತಕ್ಕಂತೆ ಬಳಕೆಯಾಗಿ ಪರಿಣಾಮವನ್ನುಂಟು ಮಾಡುತ್ತವೆ. ಅವುಗಳಲ್ಲಿ ಈ ಕೆಳಗಿನವುಗಳನ್ನು ಉದಾಹರಿಸಬಹುದಾಗಿದೆ.

1.ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡುವುದಿಲ್ಲ (ಪು:45)
2.ಅತಿಯಾದ ಅಮೃತ ವಿಷವಾಗಿ ಹೋದೀತು (ಪು:55)
3.ಗೋರ್ಕಲ್ಲ ಮೇಲೆ ಮಳೆಸುರಿದಂತೆ (ಪು:59)
4.ಕೈಲಾಗದವರು ಕೋಪ ಮಾಡಿಕೊಳ್ಳಬಾರದು (ಪು:63)
5.ಕಾಮಾಲೆ ಕಣ್ಣಿಗೆ ಜಗತ್ತೆಲ್ಲಾ ಹಳದಿ (ಪು:66)

ಇಂತಹ ಗಾದೆ ಮಾತುಗಳಿಂದ, ಸತ್ವಯುತವಾದ ಸಂಭಾಷಣೆಗಳಿಂದ ನಾಟಕ ಬೆಳೆದು ನಿಂತಿದೆ. ಈ ನಾಟಕದ ಭಾಷೆ ತುಂಬ ಸರಳವಾಗಿದ್ದು ಎಲ್ಲರಿಗೂ ತಿಳಿಯುವಂತಿದೆ. ಹೆಣ್ಣಿನ ಮೃದು-ಮಧುರ-ಭಾವನೆಗಳು ಸುಗಂಧಿನಿ ಪಾತ್ರದ ಮೂಲಕ ಸುಂದರವಾಗಿ ಅಭಿವ್ಯಕ್ತಗೊಂಡಿವೆ. ಇಲ್ಲಿಯ ಪ್ರತಿಯೊಂದು ಪಾತ್ರಗಳೂ ಅವುಗಳ ಆಶಯಗಳಿಗೆ ತಕ್ಕಂತೆ ಬೆಳೆದು ನಿಂತಿವೆ. ಇಷ್ಟೆಲ್ಲ ಪಾತ್ರಗಳ ನಡುವೆ ಸುಗಂಧಿನಿ ಪಾತ್ರವು ಅತ್ಯಂತ ಮಹತ್ವದ್ದಾಗಿ, ಕಾಣಿಸುತ್ತದೆ. ಆದರ್ಶಕ್ಕೆ ಮತ್ತೊಂದು ಹೆಸರಿನಂತಿರುವ ಸುಗಂಧಿನಿ ನಾಟಕದುದ್ದಕ್ಕೂ ಬೆಳೆಯುತ್ತಲೇ ಹೋಗುತ್ತಾಳೆ. ಸುಗಂಧಿನಿಯಾಡುವ ನುಡಿಗಳು ಸ್ಪಷ್ಟವಾಗಿ ತಿಳಿಯುತ್ತಲೇ ಹೊಳೆಯಲು ಪ್ರಾರಂಭಿಸುತ್ತವೆ. ಆ ಹೊಳೆವ ಬೆಳಕಿನಲ್ಲಿ ಅವಳ ಪಾತ್ರ ಬೆಳದಿಂಗಳಾಗಿ ಕಾಣಿಸಿಕೊಂಡಿದೆ. ಇಂತಹ ಮಹತ್ವದ ನಾಟಕವನ್ನು ರಚಿಸಿದ ವಸುಮತಿ ಉಡುಪ ಅವರು ಅಭಿನಂದನಾರ್ಹರಾಗಿದ್ದಾರೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...