Date: 10-01-2021
ಅಕ್ಷರದ ಕನ್ನಡೀಕರಣ ಅಕ್ಕರ. ಅದರಲ್ಲಿ ಅಕ್ಷರವೂ ಇದೆ. ಹಾಗೆಯೇ ಅಕ್ಕರೆ ಕೂಡ. ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ದೇಶಿಸಿ, ದೃಶ್ಯಮಾಧ್ಯಮದ ಮೂಲಕ ಕನ್ನಡಿಗರಲ್ಲಿ ಹೊಸ ಕಂಪನ ಸೃಷ್ಟಿಸಿದವರು ನಿರ್ದೇಶಕ ಪಿ. ಶೇಷಾದ್ರಿ. ಸತತವಾಗಿ ಏಳು ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಹೆಗ್ಗಳಿಕೆ ಇವರದ್ದು. ಕತೆ ಹಾಗೂ ಚಲನಚಿತ್ರವು ಹುಟ್ಟಿದ ಗಮ್ಮತ್ತನ್ನು ತಮ್ಮ ‘ಅಕ್ಕರದ ತೆರೆ’ ಅಂಕಣದಲ್ಲಿ ಅವರು ತೆರೆದಿಟ್ಟಿದ್ದು ಇಲ್ಲಿದೆ.
‘ಕತೆಗಾರದ ಮೊದಲ ಕಂತನ್ನು ಶಿವಕೋಟ್ಯಾಚಾರ್ಯರ ವಡ್ಡಾರಾಧನೆಯ ‘ಸುಕುಮಾರ ಸ್ವಾಮಿಯ ಕತೆಯ ಪುಟ್ಟ ಪ್ರಸಂಗದೊಂದಿಗೆ ಆರಂಭಿಸಿದೆವು ಎಂದು ಹಿಂದೆ ಹೇಳಿದ್ದೆನಲ್ಲಾ ಆ ಮೊದಲ ಕಂತಿನಲ್ಲೇ ಪಂಜೆಮಂಗೇಶರಾಯರ ‘ಕಮಲಪುರದ ಹೋಟ್ಲಿನಲ್ಲಿ ಕತೆಯ ಪ್ರಸಂಗವನ್ನೂ ಚಿತ್ರೀಕರಿಸಿದೆವು. ಕಮಲಪುರದ ಹೋಟ್ಲಿನಲ್ಲಿ ಕತೆಯ ಕುರಿತು ಹೇಳುವ ಮುಂಚೆ ಆಗಿನ ಭಾಷಾ ಬಳಕೆಯ ಕ್ರಮ ಹೇಗಿತ್ತು ಎನ್ನುವುದಕ್ಕೆ ಸುಕುಮಾರ ಸ್ವಾಮಿಯ ಕಥೆಯ ಆರಂಭದ ಕೆಲವು ಸಾಲುಗಳನ್ನು ಉದ್ಧರಿಸುತ್ತೇನೆ ಗಮನಿಸಿ.
ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ವತ್ಸೆಯೆಂಬುದು ನಾಡಲ್ಲಿ ಕೌಸಂಬಿಯೆಂಬುದು ಪೊಳಲದನಾಳ್ವನತಿಬಳನೆಂಬರಾಸತನ ಮಹಾದೇವಿ ಮನೋಹರಿಯೆಂಬೊಳ್ ಪೆಸರ್ಗೆ ತಕ್ಕಂತೆ ನೋಡಿದರೆಲ್ಲರ್ಗಳ ಕಣ್ಣಾಲಿಗೆ ಸೊಗಯಿಸುವಳ್ ಸತ್ಯ ಶೌಚಾಚಾರಂಗಳಿಂ ಕೂಡಿದೊಳ್ ಅತ್ಯಂತ ರೂಪಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳ ನೊಡೆಯಲಂತವರ್ಗಳಿಷ್ಠ ವಿಷಯ ಕಾಮ ಭೋಗಂಗಳನನುಭವಿಸುತಿರೆ ಮತ್ತಾ ಅರಸನ ಮಂತ್ರಿ ಸೋಮಶರ್ಮನೆಂಬೊನಾತನ ಭಾರ್ಯೆ ಕಾಶ್ಯಪಿಯೊಂಬೊಳ್ ಇರ್ವ್ವರ್ಗ್ಗಂ ಮಕ್ಕಳಗ್ನಿಭೂತಿ ವಾಯುಭೂತಿಯೆಂಬವರ್ಗಳ್...
ಈ ಸುಕುಮಾರ ಸ್ವಾಮಿಯ ಕತೆ ರಚಿತವಾದದ್ದು ಸುಮಾರು 920ರಲ್ಲಿ. ಇದಾದ ಸುಮಾರು ಸಾವಿರ ವರ್ಷಗಳ ನಂತರ ಬರೆಯಲ್ಪಟ್ಟಾದ್ದು ಪಂಜೆಮಂಗೇಶರಾಯರ ‘ಕಮಲಪುರದ ಹೋಟ್ಲಿನಲ್ಲಿ ಕತೆ. ಅದರ ರಚನೆಯ ಕ್ರಮವನ್ನು ಕೂಡ ಗಮನಿಸಿ:
ಕಮಲಪುರದ ಬಂದರ್ ಸ್ಥಳವು ವಸಂತ ಋತುವಿನ ಸಂಧ್ಯಾತಪದಿಂದ ಸುಖ ಹೊಂದುತ್ತಲಿತ್ತು. ವೀರಪುರದಿಂದ ಬಂದು ದಂಡೆಯಲ್ಲಿ ನಿಂತಿದ್ದ ಒಂದೆರಡು ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತ್ತಲಿದ್ದವು. ದೋಣಿಗಾರನು ಈಳಿಗೆಯನ್ನು ಕಾಲಿಂದ ಒತ್ತಿ ಹಿಡಿದು, ಕೈಯಲ್ಲಿದ್ದ ಮೀನನ್ನು ತರಿದು, ಬಳಿಯ ನೀರು ತುಂಬಿದ ಮಣ್ಣಿನ ಪಾತ್ರೆಗೆ ಒಟ್ಟುತ್ತಿದ್ದನು. ಆಗಾಗ ಹಾರಿ ಬರುವ ಕಾಗೆಗಳನ್ನು ಅಟ್ಟುತ್ತಿದ್ದನು....
ನಂತರದ ಕತೆಯ ಸಾರಾಂಶ ಹೀಗಿದೆ:
ಈ ಹೋಟ್ಲಿರೋದು ಬಂಟ್ವಾಳದಲ್ಲಿ. ಇದರ ಯಜಮಾನ ಪೂರ್ಣಸ್ವಾಮಿ ಅಯ್ಯಂಗಾರರು. ಅವರಿಗೆ ತಮ್ಮ ಬದುಕಿನಲ್ಲಿ ಆಗಿ ಹೋದ ಯಾತ್ರೆಗಳ ಸಾಹಸದ ಕತೆಗಳನ್ನ ಹೇಳೋದು ಅಂದ್ರೆ ಉತ್ಸಾಹವೋ ಉತ್ಸಾಹ. ಮೈಯೆಲ್ಲಾ ಬಾಯಾಗಿ ಕತೆ ಹೇಳುತ್ತಾರೆ. ಒಮ್ಮೆ ಅವರು ರಾಮೇಶ್ವರದ ಸಮುದ್ರದಲ್ಲಿ ಮುಳುಗುತ್ತಿದ್ದ ಒಂದು ಹಡಗಿಗೆ ಬೆನ್ನುಕೊಟ್ಟು ತೇಲಿಸಿ ಕನ್ಯಾಕುಮಾರಿಯ ಭೂಶಿರವನ್ನು ಮುಟ್ಟಿಸಿದ್ದರಂತೆ! ಹೋಟೆಲ್ಲಿಗೆ ಬರುವ ಗಿರಾಕಿಗಳೇ ಇವನ ಶ್ರೋತೃಗಳು. ಅವರೆಲ್ಲಾ ಇವರ ಕತೆಗಳನ್ನು ಬಾಯಿಬಿಟ್ಟುಕೊಂಡು ಕೇಳುತ್ತಿದ್ದರು. ಮತ್ತೆ ಕೆಲವರು ಇವರ ಬೆನ್ನ ಹಿಂದೆ ಇದೆಲ್ಲಾ ಸುಳ್ಳೇ ಸುಳ್ಳು ಎಂದು ಆಡಿಕೊಳ್ಳುತ್ತಿದ್ದದ್ದೂ ಉಂಟು. ಅಂಥವರನ್ನು ಉದ್ದೇಶಿಸಿ ಅಯ್ಯಂಗಾರರು ಆಗ ನನ್ನೊಟ್ಟಿಗೆ ಗುಂಡಾಚಾರ ಅಂತ ಒಬ್ಬರಿದ್ದರು. ಅವರು ನನ್ನೆಲ್ಲ ಸಾಹಸಗಳನ್ನೆಲ್ಲಾ ಬಲ್ಲವರು, ಆತನನ್ನು ನೀವು ನೋಡಬೇಕಿತ್ತು... ಎಂದು ನಂಬಿಸುತ್ತಿರುತ್ತಾರೆ. ಒಂದು ದಿನ ಇವನ ಹೋಟ್ಲಿನಲ್ಲಿ ಆ ಗುಂಡಾಚಾರ ಅನ್ನುವ ವ್ಯಕ್ತಿ ಪ್ರತ್ಯಕ್ಷವಾಗುತ್ತಾನೆ. ಬಂದವನೇ, ತಾನು ಅಯ್ಯಂಗಾರರ ಅನೇಕ ಸಾಹಸಗಳಲ್ಲಿ ಜೊತೆಯಾಗಿದ್ದವನೆಂದು ಕೊಚ್ಚಿಕೊಳ್ಳುತ್ತಾ, ಒಮ್ಮೆ ಅಯ್ಯಂಗಾರರು ಕಾವೇರಿ ನದಿಯಲ್ಲಿ ಸ್ನಾನ ಮಾಡುವಾಗ ಮೊಸಳೆಗೆ ಆಹುತಿಯಾಗುತ್ತಿದ್ದರು. ನಾನು ರಕ್ಷಿಸಿದೆ. ಐವತ್ತು ಅಡಿ ಮೊಸಳೆ ಎಲ್ಲಿ? ನನ್ನ ಪವಿತ್ರ ದರ್ಬೆ ಎಲ್ಲಿ? ಎಂದಾಗ ಅಯ್ಯಂಗಾರರು ವಿಧಿಯಿಲ್ಲದೆ ಹೌದೌದು ಎಂದು ಅಯ್ಯಂಗಾರರು ತಲೆಯಾಡಿಸುತ್ತಾರೆ. ವಿಧಿಯಿಲ್ಲದೆ ಗುಂಡಾಚಾರಿಗೆ ಕಾಫಿ ತಿಂಡಿ ಕೊಟ್ಟು ಉಳಿಯಲು ತಾವು ಕೊಡುತ್ತಾರೆ. ಕೆಲವು ದಿನಗಳು ಕಳೆಯುತ್ತವೆ. ಅವನು ಅಲ್ಲಿಂದ ಹೊರಡುವುದೇ ಇಲ್ಲ. ತನ್ನ ಮಾತುಗಳಿಂದ ಅಯ್ಯಂಗಾರರಿಗೆ ಬಿಸಿ ತುಪ್ಪವಾಗುತ್ತಾನೆ. ಅಯ್ಯಂಗಾರರ ಸಾಹಸ ಕತೆಗಳೇ ಅವರಿಗೆ ಮುಳುವಾಗುತ್ತವೆ. ಕೊನೆಯಲ್ಲಿ ಗುಂಡಾಚಾರರಿಂದ ಹೇಗೆ ಮುಕ್ತಿ ಪಡೆಯುತ್ತಾರೆ ಎಂಬುದೇ ಕತೆ.
ವಿಶೇಷ ಎಂದರೆ ಈ ಕತೆ ಹುಟ್ಟಿಕೊಂಡ ದಿನಗಳಲ್ಲೇ ಪಶ್ಚಿಮದಲ್ಲಿ ಸಿನಿಮಾ ಕೂಡ ಕಣ್ಣುಬಿಡತೊಡಗಿತ್ತು. ಒಟ್ಟಿಗೇ ಹುಟ್ಟಿದ ಎರಡೂ ಮಾಧ್ಯಮಗಳ ಕೊಳ್-ಕೊಡುಗೆ ಮಾತ್ರ ವಿಶೇಷ.
ನಿಮ್ಮಲ್ಲಿ ಎಷ್ಟು ಜನರಿಗೆ ಇದರ ನೆನಪಿದೆಯೋ ಗೊತ್ತಿಲ್ಲ. ಆದರೆ ನನಗೆ ಚನ್ನಾಗಿ ನೆನಪಿದೆ. ನಮ್ಮೂರಲ್ಲಿ ಜಾತ್ರೆ ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಹರಿಕಥೆ ಏರ್ಪಡಿಸುತ್ತಿದ್ದರು. ಒಬ್ಬರೇ ನಿಂತು ಎಷ್ಟು ಸೊಗಸಾಗಿ ಕಥೆಯನ್ನು ಹೇಳುತ್ತಿದ್ದರೆಂದರೆ ಕೇಳುಗರು ಪರವಶರಾಗಿ ತಲೆದೂಗಬೇಕು. ಅದಕ್ಕೆ ಅವರೊಂದು ಚಿತ್ರಕಥೆಯನ್ನು ಕೂಡ ಮಾಡಿಕೊಂಡಿರುತ್ತಿದ್ದರು. ಅದು ಅವರ ಬಾಯಲ್ಲಿ ಆಕರ್ಷಕವಾಗಿ ನಿರೂಪಿತವಾಗುತ್ತಿತ್ತು. ಇಲ್ಲಿ ಯಾಕೆ ಹರಿಕಥೆಯ ಉದಾಹರಣೆ ತೆಗೆದುಕೊಂಡೆನೆಂದರೆ ಹರಿಕಥೆಯಲ್ಲಿ ಒಬ್ಬನೇ ವ್ಯಕ್ತಿ ನುಡಿಯಬೇಕು, ಹಾಡಬೇಕು, ಅಭಿನಯಿಸಬೇಕು. ನೂರಾರು ಜನರನ್ನು ಗಂಟೆಗಟ್ಟಳೆ ಹಿಡಿದಿಟ್ಟುಕೊಳ್ಳದಿದ್ದರೆ ಯಾರು ಕತೆ ಕೇಳುತ್ತಾರೆ? ಒಬ್ಬ ಸಿನಿಮಾ ಚಿತ್ರಕಥೆಗಾರ ಮತ್ತು ನಿರ್ದೇಶಕನದ್ದೂ ಇದೇ ಕೆಲಸ. ಆದರೆ ಇವನಿಗೆ ಬೇರೆ ಬೇರೆ ಸಲಕರಣೆಗಳ, ವ್ಯಕ್ತಿಗಳ ಬೆಂಬಲವಿರುತ್ತದೆ. ಆತ ತನ್ನ ಕಥೆಯನ್ನು ತೆರೆಯ ಮೇಲೆ ಚಲಿಸುವ ಚಿತ್ರಗಳ ಸಹಾಯದಿಂದ ನಿರೂಪಿಸುತ್ತಾನೆ.
ಈ ಸಿನಿಮಾ ಒಂದು ಅದ್ಭುತ! ಯಾರೊಬ್ಬರಿಗಾದರೂ ಗೊತ್ತಿತ್ತೆ? ನೂರ ಇಪ್ಪತ್ತೈದು ವರ್ಷಗಳ ಹಿಂದೆ ಪಶ್ಚಿಮದಲ್ಲಿ ಹುಟ್ಟಿ ಬಂದ ಈ ಸಿನಿಮಾ ಎಂಬ ಯಂತ್ರಕಲೆ ತ್ರಿವಿಕ್ರಮನಾಗಿ ಬೆಳೆದು ನಮ್ಮನ್ನೆಲ್ಲ ಹೀಗೆ ಆವರಿಸಿಕೊಳ್ಳುತ್ತದೆ ಎಂದು?
ಆರಂಭದಲ್ಲಿ ಲ್ಯೂಮಿಯೇರ್ ಸಹೋದರರು ಪ್ಯಾರಿಸಿನಲ್ಲಿ ಆರಂಭಿಸಿದ ಚಲನಚಿತ್ರದ ವಾಸ್ತವಿಕ ದೃಶ್ಯಗಳು ಹೇಗಿದ್ದವು ಗೊತ್ತೇ?
-ಮಗುವೊಂದು ತಿಂಡಿಯನ್ನು ತಿನ್ನುತ್ತಿರುವುದು.
-ಮನೆಯ ಬೆಕ್ಕು ಹಾಲು ಕುಡಿಯುತ್ತಿರುವುದು.
-ಕೆಲಸಗಾರರು ಕಾರ್ಖಾನೆಯ ಕೆಲಸ ಮುಗಿಸಿಕೊಂಡು ಹೊರಗೆ ಬರುತ್ತಿರುವುದು.
-ಸಮುದ್ರದಲ್ಲಿ ದೋಣಿಯೊಂದು ದಡ ಮುಟ್ಟುತ್ತಿರುವುದು.
-ರೈಲೊಂದು ಫ್ಲಾಟ್‌ಫಾರ್ಮ್‌ಗೆ ಬರುತ್ತಿರುವುದು, ಇತ್ಯಾದಿ...
ಇಂತಹ ದೃಶ್ಯಗಳಿಂದ ಆರಂಭವಾದ ಚಲನಚಿತ್ರ ಇಂದು ಕೆಲವು ಗಂಟೆಗಳ ಸ್ವಾರಸ್ಯವಾದ, ಕಲ್ಪನಾ ಶಕ್ತಿಯಿಂದ ಕೂಡಿದ, ಇತರ ಕಲೆಗಳಾದ ಸಾಹಿತ್ಯ, ಸಂಗೀತ, ನೃತ್ಯಗಳನ್ನು ಒಳಗೊಂಡ ಮನೋರಂಜನೆ ಕೊಡುವ ಒಂದು ವಿಶಿಷ್ಟ ಮಾಧ್ಯಮವಾಗಿ ಬೆಳೆದಿದೆ. ಕಾಲದಿಂದ ಕಾಲಕ್ಕೆ ತಂತ್ರಜ್ಞಾನದ ಸಹಾಯದಿಂದ ಮೈದುಂಬಿಕೊಂಡಿದೆ.
(ಸಶೇಷ)
ಈ ಅಂಕಣದ ಹಿಂದಿನ ಬರಹಗಳು
ತಮ್ಮ ಸಂಗೀತ ಮಾತ್ರದಿಂದಲೇ ಒಂದು ಪೀಳಿಗೆಯ ಜನಸಮುದಾಯವನ್ನು ಆರ್ಕಷಿಸಿದ ಸ್ವರ ಮಾಂತ್ರಿಕ ಎ. ಆರ್. ರೆಹಮಾನ್. ಎ. ...
‘ರಾಜಕೀಯ ಭಿನ್ನಮತ’ ವ್ಯಕ್ತಪಡಿಸುವವರನ್ನು ಪ್ರಭುತ್ವವು ತನ್ನ ವಾಗ್ದಾಳಿಗಳ ಮೂಲಕ ದಮನ ಮಾಡಲು ಹಾಗೂ ಅವರ ಮ...
ಬೇಂದ್ರೆ ಅಜ್ಜನ್ನ ನೋಡಿದ್ ಮ್ಯಾಲ, ’ಯಪ್ಪಾ, ಈ ಹಾಡು ಬರದ್ ಮನಶ್ಯಾ ಇವನನಾ! ಅಂತ ಚೋಜಿಗ ಆಗಿ, ಒಮ್ಮೆರ ಆ ಅಜ್ಜನ್...
Daily Column View All
Competition
Exclusive
Latest Story
Latest Poem
Kathe Kelu Kanda
Kathe Kelona Banni
Nanu Mattu Nanna Kavite
Author of the Month
©2021 Bookbrahma.com, All Rights Reserved