ವೆತೆಗಳ ಕಳೆಯುವ ಕತೆಗಾರ! - ತೆರೆ ಎರಡು

Date: 14-12-2020

Location: .


ಅಕ್ಷರದ ಕನ್ನಡೀಕರಣ ಅಕ್ಕರ. ಅದರಲ್ಲಿ ಅಕ್ಷರವೂ ಇದೆ. ಹಾಗೆಯೇ ಅಕ್ಕರೆ‌ ಕೂಡ. ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ದೇಶಿಸಿ, ದೃಶ್ಯಮಾಧ್ಯಮದ ಮೂಲಕ ಕನ್ನಡಿಗರಲ್ಲಿ ಹೊಸ ಕಂಪನ ಸೃಷ್ಟಿಸಿದವರು ನಿರ್ದೇಶಕ ಪಿ. ಶೇಷಾದ್ರಿ. ಸತತವಾಗಿ ಏಳು ರಾಷ್ಟ್ರಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕ ಎಂಬ ಹೆಗ್ಗಳಿಕೆ ಇವರದ್ದು. ತೆರೆ ಹಿಂದಿನ ಗಮ್ಮತ್ತನ್ನು ನೆನೆಯುತ್ತಾ, ಧಾರಾವಾಹಿ ಶೀರ್ಷಿಕೆ ಗೀತೆ ಹುಟ್ಟಿದ ಸ್ವಾರಸ್ಯಕರ ಘಟನೆಯೊಂದನ್ನು ಅವರು ತಮ್ಮ ‘ಅಕ್ಕರದ ತೆರೆ’ ಅಂಕಣದಲ್ಲಿ ಹೀಗೆ ತೆರೆದಿಟ್ಟದ್ದಾರೆ.

ಒಂದು ಕಥೆಯಿಲ್ಲದೇ ಚಿತ್ರಕಥೆ ಆಗೋಕೆ ಸಾಧ್ಯ ಇಲ್ಲ. ಚಿತ್ರಕಥೆಯಿಲ್ಲದೆ ಸಿನಿಮಾ ಇಲ್ಲ. ಕಥೆ ಒಂದು ಆತ್ಮ, ಚಿತ್ರಕಥೆ ಅದರ ಶರೀರ. ಇನ್ನೊಂದು ವಿಧಾನದಲ್ಲಿ ಚಿತ್ರಕಥೆಯನ್ನು ಸಿನಿಮಾವೊಂದರ ಬ್ಲೂ ಪ್ರಿಂಟ್ ಎಂದೂ ಕರೆಯಲಾಗುತ್ತದೆ.

‘ಯಾವುದು ಸಣ್ಣಕತೆ ಎಂದು ಹೇಳುವುದಕ್ಕಿಂತ ಯಾವುದು ಸಣ್ಣಕತೆಯಲ್ಲ ಎಂದು ನಾನು ಸುಲಭವಾಗಿ ಹೇಳಬಲ್ಲೆ. ಸಣ್ಣ ಕತೆ ಒಂದು ಘಟನೆಯಲ್ಲ, ಜೋಕ್ ಅಲ್ಲ, ಸ್ವಾರಸ್ಯಕರ ಸಂಗತಿಯಲ್ಲ, ಗದ್ಯದಲ್ಲಿ ಬರೆದ ಭಾವಗೀತೆಯಲ್ಲ. ಅದೊಂದು ಮನೋರೋಗದ ಚರಿತ್ರೆಯೂ ಅಲ್ಲ ಅಥವಾ ಅದೊಂದು ವರದಿಯೂ ಅಲ್ಲ. ಸಣ್ಣ ಕತೆಗೆ ಹೆಚ್ಚಿನ ಆಯಾಮಗಳಿವೆ. ಲೇಖಕನಾದವನು ಯಾವುದೋ ಒಂದು ಮಾನವ ಚಟುವಟಿಕೆಯ ನಡುವೆ ನಮ್ಮನ್ನು ನಿಲ್ಲಿಸಿದಾಗ ಈ ಹೆಚ್ಚಿನ ಆಯಾಮಗಳು ಲಭ್ಯವಾಗುತ್ತವೆ. ಇದು ಅಮೆರಿಕನ್ ಕತೆಗಾರ್ತಿ ಮೇರಿ ಫ್ಲಾನೆರಿ ಓಕೋನರ್ ಅವರ ಅಭಿಪ್ರಾಯ.

ಪ್ರತಿಯೊಂದು ಸಾಹಿತ್ಯ ಕೃತಿಗೂ ಅದರದೇ ಆದ ಆಶಯಗಳಿರುತ್ತವೆ. ನಮ್ಮ ದತ್ತಣ್ಣ ಆಶಯಗಳನ್ನು ಹಿಡಿಯುವುದರಲ್ಲಿ ನಿಸ್ಸೀಮರು. ನಾನು ನನ್ನಲ್ಲಿ ಮೊಳಕೆಯೊಡದ ಕತೆಯನ್ನು ಅವರಿಗೆ ಮೊದಲು ಹೇಳುತ್ತೇನೆ. ಇದು ಸಿನಿಮಾ ಆಗುತ್ತದೆಯಾ ನೋಡಿ ಎಂದು ಅವರನ್ನು ಕೇಳಿದಾಗ ಅವರು ಹೇಳುವ ಮೊದಲ ಮಾತು: ‘ನನಗೆ ನಿನ್ನ ಕತೆ ಬೇಡ ಮಾರಾಯ. ಇದರ ಆಶಯವನ್ನು ಎರಡು ಸಾಲುಗಳಲ್ಲಿ ನನಗೆ ಬರೆದು ತೋರಿಸು. ಆ ಆಶಯ ನೀನು ಹೇಳುವ ಕತೆಯಲ್ಲಿದೆಯಾ ಎಂದು ನಂತರ ನಾನು ಹೇಳುತ್ತೇನೆ. ಆಮೇಲೆ ಬೇಕಿದ್ದರೆ ಸಿನಿಮಾ ಮಾಡುವ ಯೋಚನೆ ಮಾಡುವೆಯಂತೆ. ಆಮೇಲೆ ನಾನು ಕತೆಯಲ್ಲಿ ಆಶಯ ಹುಡುಕಿ ಹೇಳಿ ನಂತರ ಕತೆ ಹೇಳುವುದನ್ನು ಕಲಿತೆ. ಮುಂದೊಂದು ದಿನ ಎಸ್.ಎಲ್.ಭೈರಪ್ಪನವರ ಸಾಕ್ಷ್ಯಚಿತ್ರ ಮಾಡುವ ಸಂದರ್ಭದಲ್ಲಿ ಅವರನ್ನು ಕೇಳಿದೆ.

‘ಸಾರ್ ಕತೆಗೆ ಆಶಯ ಮುಖ್ಯವೇ?.

‘ನನಗೆ ಹಾಗನ್ನಿಸೋಲ್ಲ. ಕತೆಯ ಆಶಯ ಹಿಡಿದು ಬರೆಯಹೊರಟರೆ ಅದು ಕಲೆಯಾಗೋಲ್ಲ. ನಾವು ಬರೆಯುತ್ತಾ ಹೋಗಬೇಕು. ಓದುಗರು ಅದರಲ್ಲಿ ತನಗೆ ಬೇಕಾದ ಆಶಯವನ್ನು ಹುಡುಕಿಕೊಳ್ಳುತ್ತಾನೆ.

ಹಾಗಾದರೆ ಯಾವುದು ಸರಿ?

ಅದೇನೇ ಇರಲಿ. ಅಕ್ಷರಗಳಲ್ಲಿ ಅಡಗಿರುವ ಆಶಯವನ್ನು ಚಿತ್ರಿಕೆಯಲ್ಲಿ ತರುವುದು ಸುಲಭದ ವಿಚಾರವಲ್ಲ. ಇದರ ಅರಿವು ನನಗೆ ಕತೆಗಾರ ಮಾಡುವಾಗ ಸ್ಪಷ್ಟವಾಗಿ ಹೋಗಿತ್ತು. ಮೂಲ ಕಥೆಯ ಆಶಯ ಕೆಡಬಾರದೆಂಬ ಉದ್ದೇಶದಿಂದ ನಾವು ಕೆಲವು ತಂತ್ರಗಳನ್ನು ಅಲ್ಲಿ ಬಳಸಿದೆವು. ಕಥೆಯ ಬಗ್ಗೆ ವಿಮರ್ಶಕರಿಂದ ಆರಂಭದಲ್ಲಿ ಒಂದು ಪುಟ್ಟ ಟಿಪ್ಪಣಿ ಕೊಡುತ್ತಿದ್ದೆವು. ಕಥೆಯ ನಿರೂಪಣೆ ಹಿನ್ನೆಲೆ ಧ್ವನಿಯಲ್ಲಿ ನೀಡಿ ಕೆಲವು ಚಿತ್ರಿಕೆಗಳನ್ನು ತೋರಿಸುತ್ತಿದ್ದೆವು. ಇನ್ನುಳಿದಂತೆ ಪ್ರಮುಖವಾದ ದೃಶ್ಯಕ್ಕೆ ಹೊಂದುವ ಸನ್ನಿವೇಶಗಳನ್ನು ಮಾತ್ರ ಚಿತ್ರೀಕರಿಸಿ, ಅಂತ್ಯದಲ್ಲಿ ವಿಮರ್ಶಕರಿಂದ ಕತೆಯ ಆಶಯವನ್ನು ಹೇಳಿಸುತ್ತಿದ್ದೆವು. ಇಲ್ಲಿ ಕತೆಯ ಮೂಲ ಆಶಯಕ್ಕೆ ಎಲ್ಲೂ ತೊಡಕಾಗುತ್ತಿರಲಿಲ್ಲ. ಹಾಗಾಗಿ ಈ ಶೈಲಿಯನ್ನು ಅಪಾರ ವೀಕ್ಷಕರು ಮೆಚ್ಚಿಕೊಂಡಿದ್ದರು.ಈ ಕೆಲಸದಲ್ಲಿ ನಮಗೆ ಕಾಲ ಕಾಲಕ್ಕೆ ಸಲಹೆ ನೀಡಿದ ದಿಗ್ಗಜರು ಶ್ರೀ ಎಲ್.ಎಸ್.ಶೇಷಗಿರಿರಾವ್, ಶ್ರೀ ಗಿರಡ್ಡಿ ಗೋವಿಂದರಾಜ್, ಡಾ ಎ॓ಂ.ಎಚ್. ಕೃಷ್ಣಯ್ಯ ಮತ್ತು ಡಾ.ವಿಜಯಾ ಇದ್ದರು. ಅವರ ಮಾರ್ಗದರ್ಶನ ನಮಗೆ ಇದನ್ನು ಸಮರ್ಥವಾಗಿ ತಯಾರಿಸಲು ನೆರವಾಯಿತು.

ಇಪ್ಪತ್ತೈದು ವರ್ಷಗಳ ಹಿಂದೆ ಧಾರಾವಾಹಿಗಳು ಸಾಮಾನ್ಯವಾಗಿ ಹದಿಮೂರು ಕಂತುಗಳಿರುತ್ತಿದ್ದವು. ಹದಿಮೂರು ಸಂಖ್ಯೆಯಲ್ಲಿ ಏನಿದೆ ಎಂದು ಯಾರಿಗಾದರೂ ಅನ್ನಿಸಬಹುದು. ಒಂದು ಧಾರಾವಾಹಿ ಪ್ರಾರಂಭವಾದ ತೊಂಬತ್ತು ದಿನಗಳಿಗೆ ಅಂದರೆ ಮೂರು ತಿಂಗಳಿಗೆ ಸರಿಯಾಗಿ ಹದಿಮೂರು ಕಂತುಗಳನ್ನು ಪೂರೈಸುತ್ತಿದ್ದವು. ಯಾವುದೇ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಮತ್ತು ಒಳ್ಳೇ ಟಿಆರ್‌ಪಿ ಇದ್ದರೆ ಅವನ್ನು ಮತ್ತೊಂದು ಹದಿಮೂರು ಹೆಚ್ಚುವರಿ ಕಂತುಗಳಿಗೆ ಮುಂದುವರಿಸುತ್ತಿದ್ದರು. ಹಾಗಾಗಿ ನಾವು ‘ಕತೆಗಾರ ಪ್ರಾರಂಭಿಸಿದಾಗ ಹದಿಮೂರು ಕಂತುಗಳಿಗೇ ಎಂದೇ ನಿರ್ಧರಿಸಿ ಪ್ರಾರಂಭಿಸಿದ್ದು. ಆಮೇಲೆ ಅದು ಎಪ್ಪತ್ತೆಂಟು ಕಂತುಗಳವರೆಗೂ ಸಾಗಿದ್ದು ಇತಿಹಾಸ.

ಆಗ ಪ್ರತಿ ಕಂತಿನ ಆರಂಭದಲ್ಲಿ ಒಂದು ಶೀರ್ಷಿಕೆ ಗೀತೆ ಎಂದು ಇರುತ್ತಿತ್ತು. ಹಾಗಾಗಿ ನಮ್ಮ ಕಥನಕ್ಕೂ ಒಂದು ಶೀರ್ಷಿಕೆ ಗೀತೆ ಇರಲಿ ಎಂದುಕೊಂಡು ಎಚ್.ಎಸ್. ವೆಂಕಟೇಶಮೂರ್ತಿ ಅವರ ಬಳಿ ಹೋಗಿ ಒಂದು ಗೀತೆ ಬರೆದು ಕೊಡಿ ಎಂದು ಕೇಳಿದಾಗ ಅವರು ಸ್ವಲ್ಪ ಯೋಚಿಸಿ, ‘ಈಗಾಗಲೇ ನಿಮ್ಮ ಧಾರಾವಾಹಿಗೆ ಸರಿ ಹೊಂದುವ ಕವಿತೆ ಸಿದ್ಧವಿದೆಯಲ್ಲ ಎಂದರು. ನಮಗೆ ಆಶ್ಚರ್ಯವಾಯಿತು. ಅವರು ಒಳ ಹೋಗಿ ತಮ್ಮ ಸಂಗ್ರಹದಿಂದ ಒಂದು ಪುಸ್ತಕ ತಂದು ತೆರೆದು ತೋರಿಸಿದರು. ಅದು ಪು.ತಿ.ನರಸಿಂಹಾಚಾರ್ ಅವರ ಪದ್ಯ!

ವೆತೆ(ವ್ಯಥೆ)ಗಳ ಕಳೆಯುವ ಕತೆಗಾರ

ನಿನ್ನ ಕಲೆಗೆ ಯಾವುದು ಭಾರ?

ಆವುದು ವಿಸ್ತರ ಯಾವುದು ದುಸ್ತರ

ನಿನಗೆಲೆ ಹರ್ಷದ ಹರಿಕಾರ!

ಕಪಿ ಹಾರಿತು ಹೆಗ್ಗಡಲನು ಎಂಬೆ

ಕಡಲನೆ ಕಡೆದರು ಬೆಟ್ಟದೊಳೆಂಬೆ

ನಿನ್ನೂಹೆಯ ಹೇರಾಳವ ತುಂಬೆ

ಸೃಷ್ಟಿಕರ್ತನಿಗು ಅರಿದೆಂಬೆ

ಒಲುಮೆಬೇಹಿಗಾ ಮೇಘಮರಾಳ

ಮುನಿಯ ತೋಹಿಗಮರಾಂಗನೆ ಮೇಳ

ಸುರರೆಡೆಯಾಳೆ ಕಲಿಪುರುಷ ಕರಾಳ

ಅರಿವರಾರು ನಿನ್ನೈಂದ್ರಜಾಲ!

ಮಾತೊಳೆ ವಿಶ್ವವ ತೋಲಿಸುವ

ಬಗೆಯೊಳಿವೆಲ್ಲವ ಜಾಲಿಸುವ

ಮುದದೊಳಗೆಲ್ಲರ ಕೀಲಿಸುವ

ನಿನ್ನನದಾರಿಗೇ ಹೋಲಿಸುವ

ವೆತೆಗಳ ಕಳೆಯುವ ಕತೆಗಾರ

ನಿನ್ನ ಕಲೆಗೆ ಯಾವುದು ಭಾರ?

ಪುತಿನ ಅವರ ‘ಹೃದಯ ವಿಹಾರಿ’ ಎಂಬ ಕವನ ಸಂಕಲನದಲ್ಲಿ ಈ ಪದ್ಯ ಇತ್ತು. ಎಚ್.ಎಸ್.ವಿ. ಅವರೇ ಪುತಿನ ಅವರ ಮನೆಯ ದಾರಿಯನ್ನೂ ನಮಗೆ ತೋರಿಸಿದರು.

ನಾನು, ನಾಗೇಂದ್ರ ಶಾ ಹಾಗೂ ಪುತಿನ ಅವರ ಜಯನಗರದ ಮನೆಗೆ ಹೋದೆವು. ಅವರಿಗೆ ಅದಾಗಲೇ ಕಿವಿಗಳು ದೂರವಾಗಿದ್ದವು. ಅವರ ಬಳಿ ಪದ್ಯವನ್ನು ಬಳಸಿಕೊಳ್ಳಲು ಅನುಮತಿಯನ್ನು ಕೇಳಿದೆವು. ಅದಕ್ಕಾಗಿ ಸಂಭಾವನೆಯಾಗಿ ಐದು ನೂರು ರೂಪಾಯಿಗಳನ್ನು ಕೊಡುವುದಾಗಿ ಹೇಳಿದೆವು. ಅವರು ಒಪ್ಪಿದರು. ಐದುನೂರು ರೂಪಾಯಿಗಳ ಚೆಕ್ ಅನ್ನು ಅಲ್ಲೇ ಪಾವತಿಸಿದೆವು. ಅವರಿಗೆ ಅಷ್ಟರಲ್ಲಿ ದೃಷ್ಟಿಯೂ ಮಂದವಾಗಿತ್ತು. ಆ ಚೆಕ್ ಅನ್ನು ಸವರಿ ನೋಡಿದರು. ‘ಏ, ಪಾಟೀ.. ಇಂಗೆ ವಾ, ಇದ್ ಪಾರು. ಪಣಂ! ವಾ ಎಡುತಕೋ’ ಎಂದು ಒಳಗಿದ್ದ ತಮ್ಮ ಪತ್ನಿಯನ್ನು ಕರೆದು ತಮ್ಮ ಸಂಪಾದನೆಯನ್ನು ಅವರಿಗೆ ರವಾನಿಸುವಾಗ ಅವರ ಮುಖದಲ್ಲಿನ ಸಂಭ್ರಮವನ್ನು ನೋಡಬೇಕಿತ್ತು.

 

 

(ಸಶೇಷ)

ಈ ಅಂಕಣದ ಹಿಂದಿನ ಬರಹಗಳು

ಜಗತ್ತಿನಲ್ಲಿ ಮೊಟ್ಟ ಮೊದಲು ಕಥೆ ಹೇಗೆ ಹುಟ್ಟಿರಬಹುದು?

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...