ವಿಡಂಬನಾತ್ಮಕ ನಿರೂಪಣೆಯ 'ಭುವನ್ ಶೋಮ್'

Date: 26-09-2020

Location: ಬೆಂಗಳೂರು


ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು ಮೃಣಾಲ್‌ ಸೇನ್. ಅವರ ನಿರ್ದೇಶನದ ’ಭುವನ್‌ ಶೋಮ್‌’‌ ಕ್ಲಾಸಿಕ್‌ಗಳಲ್ಲಿ ಒಂದು ನವಿಲನೋಟ ಅಂಕಣದಲ್ಲಿ ಪ್ರಾಧ್ಯಾಪಕ -ಲೇಖಕ ಡಾ. ಸುಭಾಷ್ ರಾಜಮಾನೆ ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಕಾರ್ಲ್‌ಮಾರ್ಕ್ಸ್‌ನ ಸಿದ್ಧಾಂತದಿಂದ ಗಾಢವಾಗಿ ಪ್ರಭಾವಿತರಾಗಿದ್ದ ಮೃಣಾಲ್ ಸೇನ್ ಅವರು ವಾಣಿಜ್ಯಾತ್ಮಕ ಶೈಲಿಯಲ್ಲಿ ಸಿನಿಮಾ ಕತೆಯನ್ನು ಹೇಳುವ ಸಂಪ್ರದಾಯವನ್ನು ಮುರಿದು ವಿಭಿನ್ನವಾದ ನಿರೂಪಣೆಯ ಚಲನಚಿತ್ರಗಳಿಗೆ ನಾಂದಿ ಹಾಡಿದ ಭಾರತೀಯ ನಿರ್ದೇಶಕರಲ್ಲಿ ಮುಖ್ಯರಾಗಿದ್ದಾರೆ. 1969ರಲ್ಲಿ ಹಿಂದಿಯಲ್ಲಿ ಬಿಡುಗಡೆಯಾದ ಮೃಣಾಲ್ ಸೇನ್‌ರ ಭುವನ್ ಶೋಮ್, ಮಣಿ ಕೌಲ್ ಅವರ ಉಸ್ಕಿ ರೋಟಿ ಹಾಗೂ ಬಸು ಚಟರ್ಜಿಯವರ ಸಾರಾ ಆಕಾಶ್-ಈ ಮೂರು ಸಿನಿಮಾಗಳು ಭಾರತೀಯ ಸಿನಿಮಾ ಉದ್ಯಮಕ್ಕೆ ಹೊಸ ರಕ್ತಸಂಚಲನೆಯನ್ನು ನೀಡಿದವು. ಬಂಗಾಳಿ ನಿರ್ದೇಶಕನೊಬ್ಬ ಮೊದಲ ಬಾರಿಗೆ ಹಿಂದಿಯಲ್ಲಿ ಸಿನಿಮಾ ಮಾಡಿದವರೆಂದರೆ ಮೃಣಾಲ್ ಸೇನ್. ಮುಂದೆ ಸತ್ಯಜಿತ್ ರಾಯ್ ಅವರು ಹಿಂದಿಯಲ್ಲಿ ಶತರಂಜ್ ಕೆ ಖಿಲಾಡಿ (1977) ಎಂಬ ಮಹತ್ವದ ಸಿನಿಮಾವನ್ನು ಮಾಡಿದರು. ಇವುಗಳಲ್ಲಿ ಭುವನ್ ಶೋಮ್‌ನ್ನುಚಲನಚಿತ್ರ ವಿಮರ್ಶಕರು, ಭಾರತದ ಮೊದಲ ನ್ಯೂ ಇಂಡಿಯನ್ ಸಿನಿಮಾ ಎಂದೇ ಗುರುತಿಸಿದ್ದಾರೆ.

ಮೃಣಾಲ್ ಸೇನ್‌ರು ಭುವನ್ ಶೋಮ್‌ಗಿಂತ ಮೊದಲು ನಿರ್ದೇಶಿಸಿದ ಏಳು ಚಲನಚಿತ್ರಗಳು ಅವರಿಗೆ ಬಂಗಾಳದ ಆಚೆಗೆ ಹೇಳಿಕೊಳ್ಳುವಂತಹ ಖ್ಯಾತಿಯನ್ನು ತಂದುಕೊಡಲಿಲ್ಲ; ನಿರ್ಮಾಪಕರು ಹೂಡಿದ್ದ ಹಣವನ್ನು ಕೂಡ ಅವು ನಿರೀಕ್ಷಿತ ಪ್ರಮಾಣದಲ್ಲಿ ಗಳಿಕೆ ಮಾಡಲಿಲ್ಲ. ಕೆಲವು ನಿರ್ಮಾಪಕರು ಅವರಿಂದ ದೂರವಾಗಿದ್ದರು. ಮೃಣಾಲ್ ಸೇನ್‌ರ ಸಿನಿಮಾಗಳು ಕಳಪೆಯಾಗಿದ್ದವು ಎಂದರ್ಥವಲ್ಲ. ನಾಯಕ ಕೇಂದ್ರಿತ ಜನಪ್ರಿಯ ಮಾದರಿಯ ರೋಮ್ಯಾಂಟಿಕ್ ಸಿನಿಮಾಗಳಿಗೆ ಒಗ್ಗಿಹೋಗಿದ್ದ ಪ್ರೇಕ್ಷಕರಿಗೆ ಮೃಣಾಲ್ ಸೇನ್‌ರ ಚಿತ್ರಗಳು ರುಚಿಸುತ್ತಿರಲಿಲ್ಲ. ಇಂತಹ ಸನ್ನಿವೇಶದಲ್ಲಿ 1969ರಲ್ಲಿ ಕೇಂದ್ರ ಸರ್ಕಾರದಿಂದ ಸ್ಥಾಪನೆಯಾದ ಚಲನಚಿತ್ರ ಹಣಕಾಸು ನಿಗಮದಿಂದ (FFC) ಮೃಣಾಲ್ ಸೇನ್‌ರಿಗೆ ಸಿನಿಮಾ ಮಾಡಲು ಆರ್ಥಿಕ ನೆರವು ಒದಗಿತು. ಆಗಲೇ ಭುವನ್ ಶೋಮ್‌ದಂತಹ ಭಿನ್ನ ಧಾಟಿಯ ಸಿನಿಮಾ ತಯಾರಾಯಿತು. ಇಂದಿರಾ ಗಾಂಧಿಯವರು ಭಾರತದ ಪ್ರಧಾನಿಯಾಗಿದ್ದ ಸಂದರ್ಭದಲ್ಲೇ 1971ರಲ್ಲಿ ಚಲನಚಿತ್ರ ಹಣಕಾಸು ನಿಗಮದ (NFDC) ಉದ್ದೇಶವನ್ನು ಭಾರತೀಯ ಸಂಸ್ಕೃತಿ, ಶಿಕ್ಷಣ ಮತ್ತು ಆರೋಗ್ಯಕರ ಮನೋರಂಜನೆಯ ಪ್ರಚಾರಕ್ಕಾಗಿ ಸಿನಿಮಾವನ್ನು ಪರಿಣಾಮಕಾರಿ ಮಾಧ್ಯಮವಾಗಿ ಬೆಳೆಸಲು ಹಾಗೂ ಅಭಿವೃದ್ಧಿಪಡಿಸಲು ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ನೆರವನ್ನು ನೀಡಲಾಗುವುದು ಎಂದು ಘೋಷಿಸಲಾಯಿತು. ನಂತರದಲ್ಲಿ ಇದಕ್ಕಾಗಿಯೇ ಪ್ರತ್ಯಕವಾದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವನ್ನು 1981ರಲ್ಲಿ ಸ್ಥಾಪಿಸಲಾಯಿತು. ಇದರಿಂದ ಹೊಸ ಪ್ರತಿಭೆಗಳಿಗೆ ಒಂದಿಷ್ಟು ಅವಕಾಶಗಳು ದೊರಕಿದ್ದರಿಂದ ಸಾಮಾಜಿಕ ವಾಸ್ತವತೆಯನ್ನು ಕಲಾತ್ಮಕವಾಗಿ ಬಿಂಬಿಸುವ ಹಾಗೂ ಸಾಮಾಜಿಕ ಪರಿವರ್ತನೆಯತ್ತ ತುಡಿಯುವ ಸಿನಿಮಾಗಳು ತಯಾರಾಗಲು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಬಂದ ಭುವನ್ ಶೋಮ್ ಸಿನಿಮಾ ಕಲಾತ್ಮಕವಾಗಿ ಹೊಸ ಭಾಷ್ಯವನ್ನೇ ಬರೆಯಿತು.
ಭುವನ್ ಶೋಮ್ ಬನಪೂಲ್ (ಬಲಾಯಿಚಂದ್ ಮುಖ್ಯೋಪಾಧ್ಯಾಯ) ಅವರ ಸಣ್ಣಕತೆಯನ್ನು ಆಧರಿಸಿದ ಸರಳ ಹಾಗೂ ನೇರ ನಿರೂಪಣೆಯ ಸಿನಿಮಾ. ಇದರ ಸರಳತೆಯ ಶೈಲಿಯೇ ಸಿನಿಮಾದ ಸೌಂದರ್ಯವನ್ನು ಹೆಚ್ಚಿಸಿದೆ. ಸಿನಿಮಾದಲ್ಲಿ ಕತೆಯೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಗೌಣವಾಗಿದೆ. ಅತಿ ಸಾಮಾನ್ಯ ಎನ್ನಿಸುವ ಕತೆಯನ್ನೇ ಮೃಣಾಲ್ ಸೇನ್‌ರ ಕೈಯಲ್ಲಿ ನಿರೂಪಣೆಯ ವಿಧಾನ, ಸಂಕಲನ, ಸ್ಟಿಲ್ ಚಿತ್ರಿಕೆಗಳ ಬಳಕೆ, ಹಿನ್ನೆಲೆ ಸಂಗೀತ ಹಾಗೂ ಧ್ವನಿಯ ಪರಿಣಾಮದಿಂದ ಸಂಪೂರ್ಣವಾಗಿ ವಿನೂತನ ಸಿನಿಮಾ ಭಾಷೆಯೊಂದು ನಿರ್ಮಾಣವಾಯಿತು. ಸಿನಿಮಾದ ಆರಂಭವೇ ನವೀನತೆಯಿಂದ ಕೂಡಿದೆ; ಹಳಿಯ ಮೇಲೆ ಓಡುತ್ತಿರುವ ರೈಲು ಸದ್ದಷ್ಟೇ ಕೇಳುವ ಹಾಗೆ ಮಾಡಿ, ರೈಲು ಹಳಿಗಳ ಮೇಲೆ ವೇಗವಾಗಿ ಚಲಿಸುತ್ತಿರುವ ಕ್ಯಾಮರಾದ ಚಲನೆಯನ್ನು ತೋರಿಸುವುದರ ಮೂಲಕ ಸಿನಿಮಾ ತೆರೆದುಕೊಳ್ಳುತ್ತದೆ. ರೈಲು ಹಳಿಗಳ ಮೇಲೆಯೇ ಸಿನಿಮಾ ಶೀರ್ಷಿಕೆಯ ಕಾರ್ಡುಗಳು ಮೂಡುತ್ತ ಹೋಗುತ್ತವೆ. ಚಲಿಸುತ್ತಿರುವ ರೈಲು ಎಂಜಿನ್ ಮತ್ತು ಗಾಲಿಗಳ ಸದ್ದಿಗೆ ಹೊಂದಿಕೆಯಾಗುವ ಹಿನ್ನೆಲೆ ಸಂಗೀತವು ಆರಂಭದಲ್ಲೇ ನೋಡುಗರನ್ನು ಆಯಸ್ಕಾಂತದಂತೆ ಸೆಳೆದುಬಿಡುತ್ತದೆ.

ರೈಲ್ವೇ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡು, ಪ್ರಾಮಾಣಿಕತೆ, ಶಿಸ್ತುಬದ್ಧತೆ, ಗಂಭೀರತೆ ಮತ್ತು ಹಟಮಾರಿತನಕ್ಕೆ ಅನ್ವರ್ಥನಾಮವೆಂದರೆ ಶೋಮ್ ಸಾಬ್ (ಉತ್ಪಲ್ ದತ್ತ). ಆತ ಎಷ್ಟೊಂದು ಆದರ್ಶ ಮತ್ತು ಶಿಸ್ತಿನ ಮನುಷ್ಯನೆಂದರೆ ಯಾವುದೋ ತಪ್ಪು ಮಾಡಿದನೆಂಬ ಕಾರಣಕ್ಕೆ ತನ್ನ ಮಗನನ್ನೇ ಕೆಲಸದಿಂದ ತೆಗೆದುಹಾಕಿದನೆಂದು ಅಲ್ಲಿಯ ಟಿಕೇಟ್ ಕಲೆಕ್ಟರ್‌ರು ಮಾತನಾಡುತ್ತಾರೆ. ಶೋಮ್ ಸಾಬ್‌ರ ಬಾಯಲ್ಲಿ ಸದಾ ಉರಿಯುತ್ತಿರುವ ಸಿಗರೇಟು ಹಾಗೂ ತಲೆಯಲ್ಲಿ ನೂರಾರು ವಿಚಾರಗಳ ಮಿಂಚು. ತಪ್ಪು ಮಾಡಿದ್ದಕ್ಕೆ ಶಿಕ್ಷಿಸದೇ ಬಿಡುವುದಿಲ್ಲವೆಂಬ ಕಾರಣಕ್ಕೆ ಕೈಕೆಳಗಿನ ಕೆಲಸಗಾರರು ಶೋಮ್ ಸಾಬ್‌ರ ಎದುರಿನಲ್ಲಿ ಅದೆಷ್ಟು ಭಯ-ಭಕ್ತಿಯಿಂದ ನಡೆದುಕೊಂಡಂತೆ ನಟಿಸುತ್ತಾರೆ; ಆದರೆ ಅವರ ಹಿಂದೆ ಎಲ್ಲರೂ ಸಿಟ್ಟಿನಿಂದ ಬೈಯುವವರೇ. ಜಾಧವ ಪಟೇಲ್ ಎಂಬ ಟಿಕೇಟ್ ಕಲೆಕ್ಟರ್‌ನೊಬ್ಬ ದಿನನಿತ್ಯದ ಖರ್ಚಿಗಾಗಿ ಗ್ರಾಹಕರಿಂದ ದುಡ್ಡು ಕಿತ್ತಿರುವ ಆಪಾದನೆಯು ಶೋಮ್ ಸಾಬ್‌ರಿಗೆ ತಲುಪುತ್ತದೆ. ಈ ಘಟನೆಯಿಂದಲೇ ಸಿನಿಮಾ ಆರಂಭವಾಗುತ್ತದೆ. ಈ ಘಟನೆಯ ಹಿನ್ನೆಲೆಯಲ್ಲೇ ಶೋಮ್ ಸಾಬ್‌ರ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಬೇರೆಯವರ ದೃಷ್ಠಿಕೋನದ ಮುಖಾಂತರವೇ ನಿರೂಪಿತವಾಗಿದೆ.
ಐವತ್ತು ವರ್ಷ ದಾಟಿರುವ ಹಾಗೂ ವಿದುರನಾಗಿ ಒಂಟಿಯಾಗಿರುವ ಶೋಮ್ ಸಾಬ್‌ರ ಮೇಜು ಯಾವಾಗಲೂ ಕಡತಗಳಿಂದಲೇ ತುಂಬಿ ಹೋಗಿರುತ್ತದೆ. ಅವರು ಕಛೇರಿಯ ಕೆಲಸವನ್ನು ನಿರ್ವಹಿಸುವ ಬಗೆಯನ್ನು ಅನಿಮೇಶನ್ ತಂತ್ರದಿಂದ ತೋರಿಸಿದ್ದು ವಿಶೇಷವಾಗಿದೆ. ಶೋಮ್ ಸಾಬ್‌ರನ್ನು ಬಂಗಾಳ ಮೂಲದವರೆಂದು ಪರಿಚಯಿಸುವಾಗ ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಗೋರ್, ಸತ್ಯಜಿತ ರಾಯ್ ಹಾಗೂ ಒಂದು ಸಾಮೂಹಿಕ ಪ್ರತಿಭಟನೆಯ ಚಿತ್ರಿಕೆಗಳನ್ನು ತೋರಿಸಿರುವುದು ನಿರ್ದೇಶಕರ ಸೃಜನಶೀಲ ಕಲ್ಪನೆಗೆ ಸಾಕ್ಷಿಯಾಗಿದೆ. ಚಿತ್ರದಲ್ಲಿರುವ ಇಂತಹ ಹಲವು ಸನ್ನಿವೇಶದ ಚಿತ್ರಿಕೆಗಳು ಸಿನಿಮಾದ ಕಲಾತ್ಮಕ ಮೌಲ್ಯವನ್ನು ಹೆಚ್ಚಿಸಿವೆ.

ಶೋಮ್ ಸಾಬ್‌ರಿಗೆ ತಮ್ಮ ಏಕತಾನತೆಯ ಕೆಲಸದಿಂದ ತುಂಬ ಬೇಸರವಾಗಿ ಅದರ ನಿವಾರಣೆಗಾಗಿ ಹಕ್ಕಿಗಳ ಬೇಟೆಯ ವಿಚಾರವೊಂದು ಅವರ ಮನದಲ್ಲಿ ಸುಳಿಯುತ್ತದೆ. ಕೆಲಸಕ್ಕೆ ರಜೆ ಹಾಕಿ ಗುಜರಾತ್‌ನ ಹಳ್ಳಿಯೊಂದಕ್ಕೆ ಹೋಗಲು ನಿರ್ಧರಿಸುತ್ತಾರೆ. ಈ ಹಳ್ಳಿಯ ಪ್ರಯಾಣವು ಅವರನ್ನು ಹೊಸ ಮನುಷ್ಯನನ್ನಾಗಿಸುತ್ತದೆ. ಪಟ್ಟಣದ ಶೋಮ್ ಸಾಬ್‌ರ ಎತ್ತಿನ ಗಾಡಿಯಲ್ಲಿ ಕುಳಿತು ಪ್ರಯಾಣಿಸುತ್ತಿರುವುದನ್ನು ಹಳ್ಳಿಯ ಜನರು ಅಪರೂಪದ ಪ್ರಾಣಿಯೆಂಬಂತೆ ವೀಕ್ಷಿಸುತ್ತಾರೆ. ಪಟ್ಟಣದ ವ್ಯಕ್ತಿಯೊಬ್ಬನ ನೋಟದ ಮೂಲಕ ಗ್ರಾಮೀಣ ಪ್ರದೇಶಗಳ ಅವಲೋಕನವನ್ನು ನಾವು ಕಾಣುತ್ತೇವೆ. ಖಾಕಿ ಬಟ್ಟೆ ಹಾಕಿರುವ ಹಾಗೂ ಕೈಯಲ್ಲಿ ಬಂದೂಕು ಹಿಡಿದಿರುವ ಶೋಮ್ ಸಾಬ್‌ರ ಗಾಡಿಯ ಎದುರಿನಲ್ಲಿ ಕೋಣವೊಂದು ನಿಂತಾಗಿನ ಸನ್ನಿವೇಶದಲ್ಲಿ ಹಾಸ್ಯಾಸ್ಪದರಾಗಿ ತೋರುತ್ತಾರೆ. ಯಾಕೆಂದರೆ ಈ ಗ್ರಾಮೀಣ ಜಗತ್ತು ಶೋಮ್ ಸಾಬ್‌ರಿಗೆ ಅಪರಿಚಿತ ಲೋಕ. ಪಟ್ಟಣದಲ್ಲಿ ಅಧಿಕಾರದಿಂದ ಆಜ್ಞೆ ಮಾಡುತ್ತಿದ್ದವರು; ಈಗ ಹಳ್ಳಿಯಲ್ಲಿ ಬೇರೆಯವರ ಆಜ್ಞೆಯಂತೆ ಅವರು ನಡೆದುಕೊಳ್ಳುವುದು ನವಿರಾದ ಹಾಸ್ಯ ಪ್ರಸಂಗಗಳಿಗೆ ಕಾರಣವಾಗುತ್ತದೆ.

ಶೋಮ್ ಸಾಬ್‌ರಿಗೆ, ಗೌರಿ (ಸುಹಾಸಿನಿ ಮುಲಯ್) ಎಂಬ ಹಳ್ಳಿಯ ತರುಣಿಯೊಬ್ಬಳ ಪರಿಚಯವಾಗುತ್ತದೆ. ಇವರು ಹಕ್ಕಿಗಳ ಬೇಟೆಯಾಡುವ ರೀತಿಯನ್ನು ಕಂಡ ಗೌರಿ ಕಿಸಕ್ಕೆಂದು ನಗುತ್ತಾಳೆ. ಹಕ್ಕಿಗಳ ಬೇಟೆಯ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿಕೊಡು ಬಂದಿರುವ ಶೋಮ್‌ರಿಗೆ ಅದರ ಯಾವ ಪ್ರಯೋಜನವೂ ಆಗದು. ನಿಜವಾಗಿಯು ಬೇಟೆ ಆಡುವುದನ್ನು ಗೌರಿ ಕಲಿಸಿಕೊಡುತ್ತಾಳೆ. ಆಕೆ ಶೋಮ್‌ರಿಗೆ ತನ್ನ ತಂದೆಯ ದೋತಿ ಹಾಗೂ ಪೇಟವನ್ನು ಧರಿಸುವಂತೆ ಮಾಡುತ್ತಾಳೆ. ಯಾಕೆಂದರೆ ಬೇಟೆಗೆ ಹೋದಾಗಲೆಲ್ಲ ಹಕ್ಕಿಗಳು ಬಂದೂಕಿನ ಸದ್ದಿಗೆ ಹಾರಿ ಹೋಗುತ್ತಿರುತ್ತವೆ. ಶೋಮ್ ಸಾಬ್‌ರು ಯಾರೋ ಹೊರಗಿನಿಂದ ಬಂದಿರುವ ಹೊಸಬನಂತೆ ಕಾಣಬಾರದೆಂದು ಹಳ್ಳಿಯ ಜನರ ಬಟ್ಟೆಯನ್ನೇ ತೊಡುವಂತೆ ಗೌರಿ ಪುಸಲಾಯಿಸುತ್ತಾಳೆ. ಅಷ್ಟಾಗಿಯು ಹಕ್ಕಿಗಳು ಹಾರಿ ಹೋಗುತ್ತಿರುತ್ತವೆ. ಅದಕ್ಕೆ ಗೌರಿಯು ಮತ್ತೊಂದು ಉಪಾಯ ಕಂಡುಕೊಳ್ಳುತ್ತಾಳೆ. ತೆಂಗಿನ ಗರಿಗಳನ್ನು ತಂದು ಶೋಮ್ ಸಾಬ್‌ರನ್ನು ತೆಂಗಿನ ಮರವಾಗಿಸುತ್ತಾಳೆ. ಆಗ ಅವರು ಹಾರಿಸಿದ ಗುಂಡಿಗೆ ಹಕ್ಕಿಯೊಂದು ಕೆಳಕ್ಕೆ ಬೀಳುತ್ತದೆ; ಆದರೆ ಅದು ಗುಂಡಿನ ಶಬ್ದಕ್ಕೆ ಹೆದರಿ ಬಿದ್ದಿರುತ್ತದೆ. ಮರಳುಗಾಡಿನಲ್ಲಿ ಗೌರಿ ಮತ್ತು ಶೋಮ್ ಸಾಬ್ ಹಕ್ಕಿಗಳ ಬೇಟೆಗೆ ತೊಡಗಿಕೊಳ್ಳುವ ದೃಶ್ಯಗಳು ಅದ್ಭುತವಾಗಿವೆ. ಹಕ್ಕಿಗಳ ಸ್ವಚ್ಛಂದ ಹಾರಾಟದ ಚಿತ್ರಿಕೆಗಳು ಅಷ್ಟೇ ಸಹಜವೆಂಬಂತೆ ಕ್ಯಾಮರಾದಲ್ಲಿ ಸೆರೆಯಾಗಿವೆ.
ಶೋಮ್ ಸಾಬ್‌ರಿಗೆ ಗೌರಿಯ ತಂದೆಯಿಂದ ತಮ್ಮ ಅಳಿಯ ರೈಲ್ವೇ ಇಲಾಖೆಯಲ್ಲಿ ಟಿಕೇಟ್ ಕಲೆಕ್ಟರ್ ಆಗಿರುವುದು ತಿಳಿಯುತ್ತದೆ. ಅವರು ಗೌರಿಗೆ ಆತನ ಹೆಸರನ್ನು ಕೇಳಿದಾಗ ಆಕೆ ನಾಚಿಕೆಯಿಂದ ಹೇಳುವುದಿಲ್ಲ. ಆಗ ಗೌರಿಯು ಅಲ್ಲೊಬ್ಬ ಶೋಮ್ ಸಾಬ್ ಅನ್ನೋ ಅಧಿಕಾರಿ ಇದ್ದಾನಂತೆ; ತನ್ನ ಗಂಡ ಖರ್ಚಿಗಾಗಿ ಹಣ ಪಡೆದಿದ್ದಕ್ಕಾಗಿ ಆ ಅಧಿಕಾರಿ ತುಂಬ ತೊಂದರೆ ಕೊಡುತ್ತಿರುವುದರ ಬಗ್ಗೆ ತನ್ನ ಗಂಡ ಪತ್ರ ಬರೆದಿರುವುದಾಗಿ ತಿಳಿಸುತ್ತಾಳೆ. ಸಣ್ಣಪುಟ್ಟ ಖರ್ಚಿಗೆ ಸ್ವಲ್ಪ ಲಂಚ ಪಡೆದರೆ ಅಲ್ಲಿಯ ಶೋಮ್ ಸಾಬ್‌ರಿಗೇನು ಕಷ್ಟವಂತೆ ಎಂದು ಸಿಟ್ಟಿನಿಂದ ಕೇಳುತ್ತಾಳೆ. ಇದನ್ನೆಲ್ಲ ಕೇಳಿಸಿಕೊಳ್ಳುವ ಶೋಮ್ ಸಾಬ್ ತಮ್ಮೋಳಗೇ ನಕ್ಕು ಸುಮ್ಮನಾಗುತ್ತಾರೆ. ಆ ಮನೆಯ ಗೋಡೆಯ ಮೇಲಿರುವ ಫೋಟೋವನ್ನು ನೋಡಿದಾಗ ಅದು ಜಾಧವ ಪಟೇಲ್‌ನದ್ದೇ ಆಗಿರುತ್ತದೆ. ಬೇಟೆಯಲ್ಲಿ ಹೆದರಿ ಬಿದ್ದಿದ್ದ ಹಕ್ಕಿಯನ್ನು ತೆಗೆದುಕೊಂಡು ತಮ್ಮ ಪಟ್ಟಣಕ್ಕೆ ಹೊರಡಲು ಸಿದ್ಧರಾಗುತ್ತಾರೆ. ಆಗ ಗೌರಿಯು ಶೋಮ್ ಅವರಲ್ಲಿ ತಮಗೇನಾದರು ಆ ಮೇಲಧಿಕಾರಿಯ ಪರಿಚಯವಿದ್ದರೆ ತನ್ನ ಗಂಡ ಒಳ್ಳೆಯವನೆಂದು ಹೇಳಿ ಬಚಾವ್ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ಸ್ವಲ್ಪ ದೂರ ಹೋಗಿದ್ದ ಶೋಮ್ ಆ ಹಕ್ಕಿಯನ್ನು ಗೌರಿಗೆ ಸಾಕಲು ಕೊಟ್ಟು ಪಟ್ಟಣದತ್ತ ಹೊರಡುತ್ತಾನೆ.
ಹಳ್ಳಿಯ ಪಯಣವು ಶೋಮ್‌ನ ಮನಸ್ಸನ್ನು ಪರಿವರ್ತಿಸುತ್ತದೆ. ದರ್ಪ ಹಾಗೂ ಗಂಭೀರ ಸ್ವಭಾವದ ಶೋಮ್‌ನ ಹಟಮಾರಿತನದ ಬಗ್ಗೆ ಆತನ ಎದರಿನಲ್ಲೇ ಗೌರಿ ಮಾತನಾಡಿದರೂ, ಅದನ್ನೆಲ್ಲ ಅವನು ಲಘುವಾಗಿಯೇ ಸ್ವೀಕರಿಸುತ್ತಾನೆ. ತನ್ನನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಈ ಪಯಣವು ಶೋಮ್‌ನ ನಡತೆಯನ್ನು ಪರಿವರ್ತಿಸುತ್ತದೆ. ಪಟ್ಟಣಕ್ಕೆ ಹೋದಾಗ ಕಛೇರಿಯ ಕೋಣೆಯಲ್ಲಿ ಕುಳಿತಾಗ ಶೋಮ್ ಸಾಬ್‌ನ ವ್ಯಕ್ತಿತ್ವವೇ ಬದಲಾಗಿರುತ್ತದೆ. ಆತ ಜಾಧವ ಪಟೇಲ್‌ನ ಅಮಾನತ್ತು ಪತ್ರವನ್ನು ಹರಿದು ಹಾಕಿದ್ದಲ್ಲದೆ, ಆತನನ್ನು ತನ್ನ ಹಳ್ಳಿಯ ಸಮೀಪಕ್ಕೆ ವರ್ಗಾವಣೆ ಮಾಡುವ ಆದೇಶವನ್ನೂ ಹೊರಡಿಸುತ್ತಾನೆ.
ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಚಿತ್ರಕತೆಯ ನಿರೂಪಣೆಯ ಧ್ವನಿ ಅಮಿತಾಬ್ ಬಚ್ಚನ್ ಅವರದ್ದು. ಅಮಿತಾಬ್ ಅವರು ಕೆ.ಎ.ಅಬ್ಬಾಸ್ ನಿರ್ದೇಶನದ ಸಾಥ್ ಹಿಂದುಸ್ತಾನಿ ಚಿತ್ರದಲ್ಲಿ ನಟಿಸುವ ಮೊದಲು ಭುವನ್ ಶೋಮ್ ಚಿತ್ರಕ್ಕೆ ತಮ್ಮ ಧ್ವನಿಯನ್ನು ನೀಡಿದ್ದರು. ಅವರ ಧ್ವನಿಯನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಮೃಣಾಲ್ ಸೇನ್‌ರಿಗೆ ಸಲ್ಲುತ್ತದೆ. ಚಿತ್ರದ ಬೇಟೆಯ ದೃಶ್ಯಗಳು ಫ್ರೆಂಚ್‌ನ ಜೀನ್ ರೆನೈರ್ ನಿರ್ದೇಶನದ ರೂಲ್ಸ್ ಆಫ್ ದಿ ಗೇಮ್(೧೯೩೯) ಚಿತ್ರದಲ್ಲಿ ಬರುವ ಬೇಟೆಯ ದೃಶ್ಯದಿಂದ ಪ್ರೇರಿತವಾಗಿವೆ. ಹಳ್ಳಿಯಲ್ಲಿ ಶೋಮ್ ಸಾಬ್‌ನ ಎದುರಲ್ಲೇ ಕೋಣ ನಿಂತಾಗ ಹಾಗೂ ಕಬ್ಬಿನ ಗದ್ದೆಯಲ್ಲಿ ಬಂದೂಕು ಹಿಡಿದುಕೊಂಡು ಓಡುವ ಚಿತ್ರಿಕೆಗಳನ್ನು ಕಂಡಾಗ ಅಕಿರಾ ಕುರೋಸಾವನ ರಾಶೋಮನ್ ಸಿನಿಮಾದ ಕೆಲವು ಚಿತ್ರಿಕೆಗಳು ನೆನಪಾಗುತ್ತವೆ.

ಮೃಣಾಲ್ ಸೇನ್‌ರ ಸಿನಿಮಾ ಪಯಣ ರಾತ್ ಭೋರೆ(1956) ಚಲನಚಿತ್ರದಿಂದ ಆರಂಭವಾಗಿ ಮತಿರ್ ಮನಿಷ್(1966)ವರೆಗಿನ ಚಿತ್ರಗಳು ಸರಳ ನಿರೂಪಣೆಯ ಮಾದರಿಯನ್ನು ಹೊಂದಿವೆ. ಬೈಶೆ ಶ್ರಾವಣ್ (1960) ಚಿತ್ರದಿಂದ ಮೃಣಾಲ್ ಸೇನ್ ಸಮರ್ಥ ನಿರ್ದೇಶಕರೆನಿಸಿಕೊಂಡರು. ಭುವನ್ ಶೋಮ್ (1969) ಅತ್ಯುತ್ತಮ ಸಾಮಾಜಿಕ ವಿಡಂಬನೆಯ ಚಿತ್ರವೆಂದು ಹೆಸರಾಗಿದೆ. ಮೃಣಾಲ್ ಸೇನ್‌ರ ಎಡಪಂಥೀಯ ಚಿಂತನೆಗಳನ್ನು ಕಲ್ಕತ್ತ 71 (1972), ಪದಾತಿಕ್(1973) ಚೋರಸ್ (1974)ಗಳಲ್ಲಿ ಕಾಣುತ್ತೇವೆ. ಮಧ್ಯಮ ವರ್ಗದ ಜನಸಾಮಾನ್ಯರ ದಿನನಿತ್ಯದ ಕಷ್ಟದ ಅನುಭವಗಳು ಏಕ ದಿನ್ ಪ್ರತಿದಿನ್(1979) ಮತ್ತು ಕರಿಜ್ (1982) ಚಿತ್ರಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತಿಯನ್ನು ಪಡೆದಿವೆ.
ಭುವನ್ ಶೋಮ್ ಕಡತಗಳಲ್ಲೇ ಕಳೆದುಹೋಗಿದ್ದ ವ್ಯಕ್ತಿಯೊಬ್ಬನನ್ನು ಹೊಸ ಅನುಭವಕ್ಕೆ ತೆರೆದುಕೊಳ್ಳುವಂತೆ ಮಾಡುವ ಸಿನಿಮಾ. ವಾಸ್ತವವನ್ನು ನೇರವಾಗಿ ಹಾಗೂ ಪ್ರತ್ಯಕ್ಷವಾಗಿ ಕಾಣುವಂತೆ ಮಾಡುವುದರ ಮೂಲಕ ಸ್ವ-ಅರಿವನ್ನು ಮೂಡಿಸುತ್ತದೆ. ಬೇಟೆಯ ಹವ್ಯಾಸವು ಅನಾದಿ ಕಾಲದಿಂದಲೂ ಮನುಷ್ಯನಲ್ಲಿರುವ ಮೂಲ ಪ್ರವೃತ್ತಿಗಳಲ್ಲಿ ಒಂದು. ಶೋಮ್ ಸಾಬ್‌ಗೆ ಹಳ್ಳಿಯ ಬದುಕಿನ ಅನುಭವವಾದ ಮೇಲೆ ಮನುಷ್ಯರ ಬೇಟೆಯನ್ನು ನಿಲ್ಲಿಸುತ್ತಾರೆ. ಸ್ವ-ಪರಿವರ್ತನೆಯ ಮುಖಾಂತರ ಸಾಮಾಜಿಕ ಪರಿವರ್ತನೆ ಸಾಧ್ಯವೆಂಬುದನ್ನು ವೈನೋದಿಕ ಶೈಲಿಯಲ್ಲಿ ನಿರೂಪಿತವಾಗಿರುವ ಅಪರೂಪದ ಚಲನಚಿತ್ರ ಇದಾಗಿದೆ. ಈ ಸಿನಿಮಾ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ನಟ- ವಿಭಾಗಗಳಲ್ಲಿ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದುಕೊಂಡಿದೆ.

ಈ ಅಂಕಣದ ಹಿಂದಿನ ಬರೆಹಗಳು

ಡ್ರೀಮ್ಸ್: ಅಕಿರ ಕುರೋಸಾವನ ಭಗ್ನ ಹಾಗೂ ಸುಂದರ ಕನಸುಗಳ ಜಗತ್ತು

ಮಸಾನ್: ’ಸ್ಥಾಪಿತ ಮೌಲ್ಯಗಳ ದಾಟುವಿಕೆ’

ಟೇಸ್ಟ್ ಆಫ್ ಚೆರಿ: ‘ಮನುಷ್ಯನ ಒಂಟಿತನ ಮತ್ತು ದ್ವಂದ್ವಗಳ ತಾಕಲಾಟ’

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...