ವಿಡಂಬನೆ

Date: 17-11-2022

Location: ಬೆಂಗಳೂರು


“ಬಯಲು ಎಲ್ಲಾ ಕಡೆಯೂ ಒಂದೇ ರೀತಿಯಾಗಿರುತ್ತದೆ. ಮಳೆ ಎರಡೂ ಕಡೆ ಒಂದೇ ರೀತಿ ಬರುತ್ತದೆ; ಗಾಳಿ, ಊರು-ಕೇರಿಯೆಂಬ ಭೇದ ಮಾಡದೆ ಎರಡೂ ಕಡೆ ಬೀಸುತ್ತದೆ. ಸತ್ಯಸಂಗತಿ ಹೀಗಿರುವಾಗ ಊರು-ಕೇರಿಯ ನಡುವೆ ಭೇದ ಹುಟ್ಟಿಸುವುದೇಕೆ? ಎಂದು ಇಲ್ಲಿ ಪ್ರಶ್ನಿಸಿದ್ದಾಳೆ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ‘ವಿಡಂಬನೆ’ಯ ಬಗ್ಗೆ ಬರೆದಿದ್ದಾರೆ.

ಸಮಾಜ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ಕಂಡ ಶರಣೆಯರು, ಸಮಾನತೆ ಬರಬೇಕಾದರೆ ಮೊದಲು ಜನಮನವನ್ನು ಬದಲಿಸಬೇಕೆಂಬ ಸತ್ಯವನ್ನರಿತುಕೊಂಡರು. ಹೀಗಾಗಿ ಈ ಅಸಮಾನತೆಯನ್ನು ಹೊಡೆದೋಡಿಸಲು ಅವರು ರಾಜನ ವಿರುದ್ಧ, ಅರಸೊತ್ತಿಗೆಯ ವಿರುದ್ಧ ಬಂಡೇಳಲಿಲ್ಲ, ಬದಲಿಗೆ ಜನಮನದಲ್ಲಿದ್ದ ಮೂಢನಂಬಿಕೆಗಳ ವಿರುದ್ಧ, ಸಂಪ್ರದಾಯಗಳ ವಿರುದ್ಧ ಬಂಡೆದ್ದರು. ಇದು ವಚನಕ್ರಾಂತಿಯ ವೈಶಿಷ್ಟ ್ಯತೆ. ಜನರು ಹೇಗಿರುತ್ತಾರೋ ಹಾಗೆ ನಾಡು ಇರುತ್ತದೆ. ಇಂತಹ ನಾಡನ್ನು ಆಳುವ ಒಬ್ಬ ಅರಸನ ವಿರುದ್ಧ ಯುದ್ಧ ಮಾಡುವದಕ್ಕಿಂತ, ಜನಮನವನ್ನೇ ಬದಲಿಸಿ ಅಹಿಂಸಾಕ್ರಾಂತಿ ಮಾಡುವುದು ಶರಣ-ಶರಣೆಯರ ಉದ್ದೇಶವಾಗಿತ್ತು. ಅಂತೆಯೇ ಅವರು ಇಲ್ಲಿಯ ಮೂಢನಂಬಿಕೆಗಳ ಅಪಾಯವನ್ನು ತಿಳಿಸಿ ಹೇಳಿದರು. ಅಜ್ಞಾನದಿಂದ ಮನುಷ್ಯ ಹೇಗೆ ಅಮಾಯಕನಾಗುತ್ತಾನೆಂಬುದನ್ನು ವಿವರಿಸಿ ಹೇಳಿದರು. ಜನ ಇವರ ನುಡಿಗಳ ಕಡೆಗೆ ಲಕ್ಷ್ಯ ವಹಿಸದೇ ಹೋದಾಗ, ಸಾಮಾಜಿಕ ವಿಡಂಬನೆಯ ಮೂಲಕ ಚುಚ್ಚಿ ಹೇಳಿದರು.

ಸಾಹಿತ್ಯ ಪರಿಭಾಷೆಯಲ್ಲಿ ಧ್ವನ್ಯಾರ್ಥ-ವ್ಯಂಗ್ಯಾರ್ಥಗಳಿಗೆ ಪ್ರಾಮುಖ್ಯತೆ ಇದೆ. ಇಂತಹ ವ್ಯಂಗ್ಯಾರ್ಥಗಳಿಗೆ ಶರಣೆಯರು ಆಧ್ಯಾತ್ಮದ ಲೇಪ ಹಚ್ಚಿದರು. ಆಗ ಅದು ಲೌಕಿಕದ ಮೂಲಕ - ಅಲೌಕಿಕತೆಯ ಕಡೆಗೆ, ಇಹದ ಮೂಲಕ - ಪರದ ಕಡೆಗೆ ಕರೆದೊಯ್ಯುವ ಸಾಧನವಾಯಿತು. ದೇವರು-ಧರ್ಮದ ಹೆಸರಿನಲ್ಲಿ ಮಡಿಮಾಡುವ, ಶೀಲ ಮಾಡುವ, ಭೇದವನ್ನುಂಟು ಮಾಡುವ ಮೂಢ ಭಕ್ತರನ್ನು ಅಕ್ಕ ನೇರವಾಗಿ ವಿಡಂಬಿಸಿದ್ದಾಳೆ.

"ಶೀಲ ಶೀಲವೆಂಬಿರಯ್ಯಾ
ಶೀಲದ ನೆಲೆಯ ಬಲ್ಲಡೆ ಹೇಳಿರೊ, ಅರಿಯದಿದ್ದಡೆ ಕೇಳಿರೊ..."
ಎಂದು ಪ್ರಾರಂಭವಾಗುವ ಈ ವಚನದಲ್ಲಿ ಯಾವುದು ಶೀಲ, ಯಾವುದು
ಭವಿಯೆಂಬುದನ್ನು ವಿವರಿಸಿ ಹೇಳಿದ್ದಾಳೆ. ಕಾಮ-ಕ್ರೋಧ-ಲೋಭ-ಮೋಹ-ಮದ- ಮತ್ಸರ ಈ ಅರಿಷಡ್‍ವರ್ಗಗಳೆಲ್ಲಾ ಭವಿಗಳೆಂದು ಹೇಳಿದ ಅಕ್ಕ ಆಮಿಷವೆಂಬುದು ಏಳನೆಯ ಭವಿಯೆಂದು ತಿಳಿಸಿದ್ದಾಳೆ.

"ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು
ಲಿಂಗವಿಲ್ಲದವರ ಭವಿ ಭವಿ ಎಂಬಿರಿ"
ನಿಮಗೆ ನಾಚಿಕೆಯಾಗುವದಿಲ್ಲವೆ? ಎಂದು ಕೇಳಿದ್ದಾಳೆ. ನಿಜವಾದ ಭವಿ-ಭಕ್ತ
ಪರಿಕಲ್ಪನೆಯನ್ನು ಈ ವಚನ ಹೇಳುತ್ತದೆ.
"ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು
ತಲೆ ಜಡಗಟ್ಟಿದವರೆಲ್ಲ ಹೊಲೆಯರ ಸಂತಾನ..."
- ಅಕ್ಕಮ್ಮ (ಸ. ವ. ಸಂ. 5, ವ-526)

ಎಂದು ತೀವ್ರ ವಿಡಂಬನೆಗೆ ತೊಡಗುವ ಅಕ್ಕಮ್ಮ ಈ ವಚನದಲ್ಲಿ ಅರಿವಿನ ಮಹತ್ವವನ್ನು ಹೇಳಿದ್ದಾಳೆ. ಭಕ್ತಿಯ ಹೆಸರಿನಲ್ಲಿ ಬತ್ತಲೆ ತಿರುಗುವುದು, ತಲೆಬೋಳಿಸಿಕೊಳ್ಳುವುದು, ಜಡಿಬಿಡುವುದು ಇದೆಲ್ಲ ವ್ಯರ್ಥವೆಂದು ತಿಳಿಸಿದ ಈ ವಚನಕಾರ್ತಿ, ಅರಿವು ಹೊಂದಬೇಕೆಂದು ಹೇಳಿದ್ದಾಳೆ. ಹೀಗೆ ಹುಚ್ಚರಂತೆ ವರ್ತಿಸುವದಕ್ಕಿಂತ ಅರಿವು -ಆಚಾರದತ್ತ ಗಮನ ಕೊಡಬೇಕೆಂದು ತಿಳಿಸಿದ್ದಾಳೆ.

ನಿಜವಾದ ಅನುಭವವನ್ನು ಹೊಂದದೆ ತಾವು ಅನುಭಾವಿಗಳೆಂದು, ತಮ್ಮನ್ನು ತಾವೇ ಶ್ರೇಷ್ಠರೆಂದು ಕರೆದುಕೊಳ್ಳುವ ಅನುಭಾವಿಗಳ ಬಗೆಗೆ ಅಮುಗೆ ರಾಯಮ್ಮ ಪ್ರಶ್ನೆಗಳ ಸುರಿಮಳೆಗರಿದಿದ್ದಾಳೆ. ಹೀಗೆ ತಮ್ಮಷ್ಟಕ್ಕೆ ತಾವೇ ಅನುಭಾವಿಗಳೆಂದು ತಿಳಿದುಕೊಂಡ ಇಂತಹ ಅಜ್ಞಾನಿಗಳ ಮುಖವ ನೋಡಲಾಗದೆಂದು ಹೇಳಿದ್ದಾಳೆ. ಕಣ್ಣಲ್ಲಿ ಕಾಮವನ್ನಿಟ್ಟುಕೊಂಡು, ಮನಸ್ಸಿನಲ್ಲಿ ಆಸೆಯನ್ನಿಟ್ಟುಕೊಂಡು, ಅಂಗದಲ್ಲಿ ಅಹಂಕಾರವನ್ನು ಹೊಂದಿ ತಿರುಗುವವರು ಅನುಭಾವಿಗಳಾಗುತ್ತಾರೆಯೆ? ಸಾಧ್ಯವಿಲ್ಲವೆಂದಿದ್ದಾಳೆ.

"ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ ತಮ್ಮ ತಮ್ಮ ಹಿರಿಯತನವ ಮುಂದುಗೊಂಡು
ಕುರಿಗಳಂತೆ ತಿರುಗುವ ಜಡರುಗಳ ಅನುಬಾವಿಗಳೆಂಬೆನೆ?"
- ಅಮುಗೆ ರಾಯಮ್ಮ (ಸ.ವ.ಸಂ.5, ವ-593)
ಎಂದು ಪ್ರಶ್ನಿಸುವ ರಾಯಮ್ಮ ಇಂತಹ ಅನುಭಾವಿಗಳನ್ನು ಸೂಳೆಯರ ಮನೆಯಲ್ಲಿ

ಸೇವೆ ಮಾಡುವ ದಾಸಿಯರಿಗೆ ಹೋಲಿಸಿದ್ದಾಳೆ. ಹೇಗೆ ಆ ದಾಸಿಯರು ತಮ್ಮ ಹೊಟ್ಟೆಪಾಡಿಗಾಗಿ ಸೂಳೆ ಹೇಳಿದಂತೆ ಕೇಳುತ್ತಾರೋ ಹಾಗೆ ಇಂತಹ ಅನುಭಾವಿಗಳೂ ಕೂಡ ಹೊಟ್ಟೆ ಹೊರೆವವರೇ ಆಗಿದ್ದಾರೆಂದು ಸ್ಪಷ್ಟಪಡಿಸುತ್ತಾಳೆ. ``ಆನೆಯ ವೇಷವ ತೊಟ್ಟು ಹಂದಿಯಂತೆ ತಿರುಗುವ ಅಜ್ಞಾನಿಗಳನೇನೆಂಬೆನಯ್ಯ?'' ಎಂದು ಇನ್ನೊಂದು ವಚನದಲ್ಲಿ ವಿಡಂಬಿಸಿದ್ದಾಳೆ. ಇದೇ ರೀತಿ ಕಾಳವ್ವೆ, ಮೋಳಿಗೆ ಮಹಾದೇವಿ, ಲಿಂಗಮ್ಮ ಮೊದಲಾದ ಶರಣೆಯರು ಸಮಾಜದಲ್ಲಿ ಕಣ್ಣಿಗೆ ಕಂಡ ಮೌಢ್ಯತೆಯ ಬಗೆಗೆ, ಅಂಧಶ್ರದ್ಧೆಯ ಬಗೆಗೆ, ವಿಡಂಬನೆ ಮಾಡುತ್ತಲೇ ಜನಸಮುದಾಯಕ್ಕೆ ಹಿತವಾಗುವ ನುಡಿಗಳನ್ನು ಹೇಳಿದ್ದಾರೆ.

ತಾವು ವಿರಕ್ತರೆಂದು ಹೇಳಿಕೊಂಡು ತಿರುಗುವವರನ್ನು ಕುರಿತು ಅಕ್ಕಮಹಾದೇವಿ
ತೀವ್ರವಾದ ವಿಡಂಬನೆ ಮಾಡಿದ್ದಾಳೆ. ``ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ
ವಿರಕ್ತನೆ? ಬಿಟ್ಟಮಂಡೆಯ ಕೇಶವ ನುಣ್ಣಿಸಿ ಬಣ್ಣಿಸಿ, ಎಣ್ಣೆಯ ಗಂಟ ಹಾಕಿದಡೆ

ವಿರಕ್ತನೆ? ಬಿಟ್ಟಮಂಡೆಯ ಕಟ್ಟದಿರ್ದಡೆ ವಿರಕ್ತನೆ?'' ಮೂಗನಂತೆ ಮಾತನಾಡದಿರ್ದಡೆ ವಿರಕ್ತನೆ? ಅಡವಿಯಾರಣ್ಯದಲ್ಲಿರ್ದಡೆ ವಿರಕ್ತನೆ? ಎಂಬಂತಹ ಪ್ರಶ್ನೆಗಳನ್ನು ಕೇಳಿ, ಕೊನೆಗೆ ಇವರಾರೂ ವಿರಕ್ತರಲ್ಲವೆಂದು ಉತ್ತರವನ್ನೂ ತಾನೇ ಹೇಳಿದ್ದಾಳೆ. ಮೃಡನಲ್ಲಿ ನಂಬಿಕೆಯಿಡುವವನು, ದ್ವಂದ್ವವನ್ನು ಮೀರಿದವನು ವಿರಕ್ತನಪ್ಪನೆಂದು ತಿಳಿಸಿದ್ದಾಳೆ.

``ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ
ನೋಡಬಹುದೆ?'' ಎಂದು ಪ್ರಶ್ನಿಸಿರುವ ಅಕ್ಕಮ್ಮ ಅನಾಚಾರಿಗಳನ್ನು ಕಟುವಾಗಿ
ವಿಡಂಬಿಸಿದ್ದಾಳೆ. ಆಚಾರವೆಂಬುದು ಸಂತೆಯ ಬೆವಹಾರವೆ? ಜೂಜಿನ ಮಾತೆ? ಎಂದು
ಪ್ರಶ್ನಿಸಿದ್ದಾಳೆ. ಅರಿವು ಇದ್ದರೆ ಸಾಲದು ಅದನ್ನು ಜಾರಿಗೆ ತರಲು ಆಚಾರ-ಆಚರಣೆ
ಬೇಕೇಬೇಕು. ಇಂತಹ ಆಚಾರದಲ್ಲಿ ತಪ್ಪಿ ನಡೆಯಬಾರದೆಂಬ ಎಚ್ಚರಿಕೆ ಕೊಟ್ಟಿದ್ದಾಳೆ. ವೇಷತೊಟ್ಟು ಜನರನ್ನು ಮೋಸಗೊಳಿಸುವ ಕಾವಿಧಾರಿಗಳನ್ನು ಕುರಿತು, ಸ್ವಾಮಿಗಳನ್ನು ಕುರಿತು ಅಕ್ಕಮ್ಮ ತೀವ್ರತರವಾಗಿ ವಿಡಂಬಿಸಿದ್ದಾಳೆ.

"ವೇಷ ಎಲ್ಲಿರದು? ಸೂಳೆಯಲ್ಲಿ, ಡೊಂಬನಲ್ಲಿ? ಭೈರೂಪನಲ್ಲಿರದೆ?" ಎಂದು ಕೇಳುತ್ತಲೇ ವೇಷಧಾರಿಗಳ ಬಣ್ಣವನ್ನು ಬಯಲು ಮಾಡಿದ್ದಾಳೆ. ಜನರಿಗೆ ಮೋಸ ಮಾಡುವ, ಧರ್ಮದ ಹೆಸರಲ್ಲಿ ಶೋಷಣೆ ಮಾಡುವ ಜನರನ್ನು ಕಂಡು, ವೇಷ ತೋರಿ ಒಡಲ ಹೊರಿವವರನ್ನು ನೋಡಿ, ತರಾಟೆಗೆ ತೆಗೆದುಕೊಂಡಿದ್ದಾಳೆ.

"ಕತ್ತೆಯಂತೆ ಬತ್ತಲೆಯಿದ್ದಡೇನು, ಇಷ್ಟಲಿಂಗ ಸಂಬಂಧಿಯಾಗಬಲ್ಲನೆ? ಕಟ್ಟಿದ ಲಿಂಗವ ಕಯ್ಯಲ್ಲಿ ಹಿಡಿದಡೇನು ನಿತ್ಯನಾಗಬಲ್ಲನೆ?"
- ಅಮುಗೆ ರಾಯಮ್ಮ (ಸ.ವ. ಸಂ. 5, ವ-622)

ಎಂದು ಕೇಳಿರುವ ರಾಯಮ್ಮ, ತನ್ನ ತಾನರಿತಾಗಲೇ ಮುಕ್ತಿ ಸಾಧ್ಯವೆಂದು ಹೇಳಿದ್ದಾಳೆ. ಇಲ್ಲದಿದ್ದರೆ ಮಾಡುವ ಆಚರಣೆಗಳೆಲ್ಲ ವ್ಯರ್ಥವಾಗುತ್ತವೆಂಬ ಮಾತನ್ನು ತಿಳಿಸಲು ಈ ಶರಣೆ ಕತ್ತೆ ಬೂದಿಯಲ್ಲಿ ಬಿದ್ದು ಹೊರಳಾಡಿದಂತೆ ಎಂಬಂತಹ ಉದಾಹರಣೆ ಕೊಡುತ್ತಾಳೆ. "ಅಮುಗೇಶ್ವರ ಲಿಂಗವನರಿಯದವರು ಓದಿದಡೇನು?

ಬಿಟ್ಟಡೇನು?" ಎಂದು ಪ್ರಶ್ನಿಸುತ್ತಲೇ ಸಾಮಾಜಿಕ ವಿಡಂಬನೆಗೆ ತೊಡಗಿದ್ದಾಳೆ. "ದೃಢವಿಲ್ಲದ ಭಕ್ತಿ ತಳ ಒಡೆದ ಮಡಕೆಯಲ್ಲಿ ನೀರ ತುಂಬಿದಂತೆ" ಎಂದು ಹೇಳಿರುವ ಆಯ್ದಕ್ಕಿ ಲಕ್ಕಮ್ಮ ಭಕ್ತಿಯಿಲ್ಲದವರನ್ನು, ಅರಿವು ಇಲ್ಲದವರನ್ನು ಕುರಿತು ಕಟು ವಿಡಂಬನೆ ಮಾಡಿದ್ದಾಳೆ. "ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು, ನಡೆಯಿಲ್ಲದ ನುಡಿ ಅರಿವಿಗೆ ಹಾನಿಯೆಂದು ವೈಜ್ಞಾನಿಕವಾದ ಚಿಂತನೆ ಮಾಡಿದ್ದಾಳೆ. ತ್ಯಾಗ-ಭೋಗಗಳಿಗಿಂತ ಸಹಜವಾದ ಸರಳ ಭಕ್ತಿಯೇ ಶ್ರೇಷ್ಠವೆಂದು ಹೇಳಿದ್ದಾಳೆ.

ಈ ವ್ಯವಸ್ಥೆಯಲ್ಲಿ ದೇವರ ಹೆಸರಿನಲ್ಲಿ ಅನೇಕ ಆಚರಣೆಗಳು ನಡೆಯುತ್ತವೆ. ಆರ್ಚನೆ-ಪೂಜೆ ಮಾಡುವದು, ಮಂತ್ರ ಹೇಳುವದು, ತಂತ್ರ ಕಟ್ಟುವುದು, ದೂಪ- ದೀಪಾರತಿ ಬೆಳಗುವುದು ಸಹಜವಾದ ಧಾರ್ಮಿಕ ಕ್ರಿಯೆಗಳಾಗಿವೆ. ಆದರೆ ಸತ್ಯಕ್ಕ ಇದೆಲ್ಲವನ್ನೂ ನಿರಾಕರಿಸುತ್ತಾಳೆ. ವಿಡಂಬಿಸುತ್ತಾಳೆ.

"ಅರ್ಚನೆ ಪೂಜನೆ ನೇಮವಲ್ಲ ಮಂತ್ರ ತಂತ್ರ ನೇಮವಲ್ಲ
ಧೂಪ ದೀಪಾರತಿ ನೇಮವಲ್ಲ..."
- ಸತ್ಯಕ್ಕ (ಸ. ವ. ಸಂ. 5, ವ-1207)

ಎಂದು ಹೇಳುತ್ತ, ಹೀಗೆ ಬಹಿರಂಗವಾಗಿ ಪೂಜಿಸುವವರನ್ನು ವಿಡಂಬಿಸುತ್ತ, ಡಾಂಭಿಕ ಭಕ್ತಿ ಸಲ್ಲದು ಎಂದಿದ್ದಾಳೆ. ಪರಧನ, ಪರಸ್ತ್ರೀಯರಿಗೆ ಆಸೆಪಡದಿರುವುದೇ ನಿಜವಾದ ನೇಮವೆಂದು ಸ್ಪಷ್ಟಪಡಿಸಿದ್ದಾಳೆ. ಶರಣೆಯರ ದೃಷ್ಟಿಯಲ್ಲಿ ಭಕ್ತಿಯೆಂದರೆ ಅದು ಆಂತರಿಕ ಸ್ವಚ್ಛತೆ, ಅಂತರಂಗದ ಶುದ್ಧಿ. ಅಂತರಂಗ ಶುದ್ಧಿಯಾದಾಗಲೇ ಭಕ್ತರಾಗಲು ಸಾಧ್ಯವೆಂದು ನಂಬಿದ ಇವರು ಬಾಹ್ಯ ಪೂಜೆಯನ್ನು ವಿಡಂಬಿಸಿದ್ದಾರೆ.

ವಿವಿಧ ತೀರ್ಥಕ್ಷೇತ್ರಗಳಿಗೆ ಹೋಗಿ ತಿರುಗುವವರನ್ನು ಕಂಡು ಮರುಗಿದ್ದಾರೆ. ಶಿವಶರಣೆಯರ ಭಕ್ತಿಯೇ ಕ್ರಾಂತಿಕಾರಕವಾಗಿದೆ. ಉಳಿದವರು ಹೇಳುವ ಭಕ್ತಿಗೂ ಇವರ ಬಕ್ತಿಗೂ ತುಂಬ ವ್ಯತ್ಯಾಸವಿದೆ. ಹಿಂಸಾಭಕ್ತಿಯನ್ನು ತೀವ್ರವಾಗಿ ವಿರೋಧಿಸಿರುವ ಶರಣೆಯರು, ಮುಗ್ಧ ಭಕ್ತಿಯನ್ನು ಮೆಚ್ಚಿಕೊಂಡಿದ್ದಾರೆ.

"ಕರುಣಾಕರ ನೀನೆಂದೆನಿಸಿಕೊಂಡೆ ಸಿರಿಯಾಳನ ಮಗನ ಬೇಡುವರೇನಯ್ಯಾ?"
- ಸತ್ಯಕ್ಕ (ಸ.ವ. ಸಂ. 5, ವ-1220)
ಎಂದು ಶಿವನನ್ನೇ ಸತ್ಯಕ್ಕ ಪ್ರಶ್ನಿಸಿದ್ದಾಳೆ. ಹಿಂಸಾಭಕ್ತಿಯನ್ನು ಯಾರೇ ಮಾಡಿದರೂ ಅದು ತಪ್ಪೆಂದು ಸ್ಪಷ್ಟಪಡಿಸಿದ್ದಾಳೆ.
"ಮನವ ಗೆದ್ದಿಹನೆಂದು ತನುವ ಕರಗಿಸಿ ಕಾಯವ ಮರಗಿಸಿ
ನಿದ್ರೆಯ ಕೆಡಸಿ ವಿದ್ಯೆಯ ಕಲಿತೆಹೆನೆಂಬ ಬುದ್ಧಿಹೀನರಿರಾ ನೀವು ಕೇಳಿರೋ"
- ಹಡಪದ ಲಿಂಗಮ್ಮ (ಸ.ವ. ಸಂ. 5, ವ-1244)
"ನಮ್ಮ ಶರಣರು ಮನವನೆಂತು ಗೆದ್ದಹರೆಂದಡೆ, ಕಾಮ-ಕ್ರೋಧ ತೊರೆದರು,
ಲೋಭ-ಮೋಹ-ಮದ-ಮತ್ಸರವ ಬಿಟ್ಟರು" ಎಂದು ವಿವರಿಸುತ್ತ ಶಿವಶರಣರ
ಭಕ್ತಿಯ ನೆಲೆಗಳನ್ನು ಬಹುಸೊಗಸಾಗಿ ಕಟ್ಟಿಕೊಟ್ಟಿದ್ದಾಳೆ. ಆಶೆ-ರೋಷವನ್ನು ಬಿಡದೆ ಸಾಧಿಸುವದಕ್ಕಾಗುವದಿಲ್ಲವೆಂದು ಹೇಳಿದ್ದಾಳೆ. ನಮ್ಮೊಳಗಡೆಯೇ ಇರುವ ಚಿತ್‍ಶಕ್ತಿಯನ್ನು, ಪ್ರತಿಭೆಯನ್ನು ಕಂಡುಕೊಳ್ಳಬೇಕಾದರೆ, "ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು. ಮೋಡವಿಲ್ಲದ ಚಂದ್ರನಂತಿರಬೇಕೆಂದು" ತಿಳಿಹೇಳಿದ್ದಾಳೆ. ಮನಸ್ಸಿನಲ್ಲಿ ಕತ್ತಲೆಯನ್ನಿಟ್ಟುಕೊಂಡು, ದೇಹದಲ್ಲಿ ಹಮ್ಮನ್ನುಳಿಸಿಕೊಂಡು ಘನವ ಕಾಣಬೇಕೆಂದು ಏನು ಮಾಡಿದರೂ ಅದು ಸಾಧ್ಯವಾಗದೆಂದು ವಿವರಿಸಿದ್ದಾಳೆ. ಘನವ ಕಾಣಬೇಕಾದರೆ ಮನ, ಅಕ್ಕಿ ಥಳಿಸಿದಂತೆ ನಿರ್ಮಲವಾಗಿರಬೇಕು. ಕನ್ನಡಿ ನೋಡಿದಂತೆ ಸ್ಪಷ್ಟವಾಗಿರಬೇಕೆಂದು ವಿಶ್ಲೇಷಿಸಿದ್ದಾಳೆ. ಆಸೆ ಇರುವವರೆಗೆ ರೋಷ ಬಿಡುವದಿಲ್ಲ, ಕಾಮ ಇರುವವರಿಗೆ ಕಳವಳ ಬಿಡುವದಿಲ್ಲವೆಂದು ಹೇಳಿ ತಾವು ವಿರಕ್ತರು, ತಾವು ಅನುಭಾವಿಗಳೆಂದು ಸ್ವಯಂಘೋಷಣೆ ಮಾಡಿಕೊಂಡು ತಿರುಗುವವರನ್ನು ಕಳ್ಳರೆಂದು ಕರೆದಿದ್ದಾಳೆ. ಅಂತರಂಗ-ಬಹಿರಂಗ ಶುದ್ಧವಿಲ್ಲದವರನ್ನು ಸಂತೆಯ ಸೂಳೆಯರೆಂದು ಹೇಳಿದ್ದಾಳೆ.

ಊರು-ಕೇರಿ ವಿಷಯ ಬಂದಾಗ ಸಾಮಾನ್ಯವಾಗಿ ಊರೊಳಗೆ ಇರುವವರದು ಒಂದು ನೀತಿಯಾದರೆ, ಊರ ಹೊರಗೆ ಇರುವವರದು ಮತ್ತೊಂದು ರೀತಿಯಾಗಿರುತ್ತದೆ. ಆದರೆ ಬೊಂತಾದೇವಿ ಹೀಗೆ ಊರು-ಕೇರಿಗಳನ್ನು ಒಡೆದು ಭೇದ ಹುಟ್ಟಿಸುವವರನ್ನು ಕಂಡು ತೀವ್ರವಾಗಿ ವಿಡಂಬಿಸಿದ್ದಾಳೆ.

"ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ? ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ?" ಎಂದು ಪ್ರಶ್ನಿಸುವದರ ಮೂಲಕ ಜಾತ್ಯಾತೀತ ಮೌಲ್ಯವನ್ನು ಎತ್ತಿಹಿಡಿದಿದ್ದಾಳೆ.

ಬಯಲು ಎಲ್ಲಾ ಕಡೆಯೂ ಒಂದೇ ರೀತಿಯಾಗಿರುತ್ತದೆ. ಮಳೆ ಎರಡೂ ಕಡೆ ಒಂದೇ ರೀತಿ ಬರುತ್ತದೆ; ಗಾಳಿ, ಊರು-ಕೇರಿಯೆಂಬ ಭೇದ ಮಾಡದೆ ಎರಡೂ ಕಡೆ ಬೀಸುತ್ತದೆ. ಸತ್ಯಸಂಗತಿ ಹೀಗಿರುವಾಗ ಊರು-ಕೇರಿಯ ನಡುವೆ ಭೇದ ಹುಟ್ಟಿಸುವುದೇಕೆ? ಎಂದು ಪ್ರಶ್ನಿಸಿದ್ದಾಳೆ.

"ತೊಬರದ ಕೊಳ್ಳಿಯಂತೆ ಉರಿವಾತ ಭಕ್ತನೆ? ಹುಸಿದು ತಂದು ಮಾಡುವಾತ ಭಕ್ತನೆ?"
- ಕಾಳವ್ವೆ (ಸ.ವ. ಸಂ.5, ವ-737)

ಎಂದು ಪ್ರಶ್ನಿಸಿರುವ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಡಾಂಭಿಕ ಭಕ್ತರನ್ನು ಕಂಡು ಕಿಡಿಕಾರಿದ್ದಾಳೆ. ಭಕ್ತಿಯೆಂಬುದು ತೋರಿಕೆಯಲ್ಲಿಲ್ಲವೆಂದು ಸ್ಪಷ್ಟಪಡಿಸಿದ್ದಾಳೆ.

ಹೀಗೆ ಶಿವಶರಣೆಯರು ತಮ್ಮ ಅನೇಕ ವಚನಗಳಲ್ಲಿ ಸಾಮಾಜಿಕ ವಿಡಂಬನೆ ಮಾಡಿದ್ದಾರೆ. ಈ ವಿಡಂಬನೆಯಲ್ಲಿ ಸಮಾನತೆಯ ತತ್ವಗಳಿವೆ. ಸತ್ಯದ ಸಂಗತಿಗಳಿವೆ. ಮೂಢ ಜನರನ್ನು ಕುರಿತು, ಷಡ್‍ವೈರಿಗಳಿಗೆ ಗುಲಾಮರಾದವರನ್ನು ಕುರಿತು, ಅಹಂಕಾರದಿಂದ ಮೆರೆವವರನ್ನು ಕುರಿತು ಶರಣೆಯರು ವಿಡಂಬನೆ ಮಾಡಿದ್ದರೂ, ಅದರಲ್ಲಿ ಅಂತಃಕರಣವಿದೆ. ಜನತೆ ಸತ್ಯ ತಿಳಿದುಕೊಳ್ಳಬೇಕೆಂಬ ಕಳಕಳಿಯಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...