ವಿದ್ವತ್ ಪರಂಪರೆಯ ಕಳಚಿದ ಕೊನೆಯ ಕೊಂಡಿ ‘ಜೀವಿ’: ಮಲ್ಲೇಪುರಂ ಜಿ. ವೆಂಕಟೇಶ ವಿಷಾದ

Date: 22-04-2021

Location: ಬೆಂಗಳೂರು


ವಿದ್ವತ್ ಪರಂಪರೆಯ ಕೊನೆಯ ಕೊಂಡಿಯಂತಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಇನ್ನಿಲ್ಲ. ಹೀಗಾಗಿ, ಕೊನೆಯ ಕೊಂಡಿಯೇ ಕಳಚಿದಂತಾಗಿದೆ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ನುಡಿದರು.

ಇತ್ತೀಚೆಗೆ ಅಗಲಿದ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ (ಏ.21) ಸಂಜೆ ಶ್ರೀಕೃಷ್ಣರಾಜ್ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ಕಾಲು ಶತಮಾನದಿಂದ ‘ಜೀವಿ’ ಅವರ ಜತೆಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಅವರು, ಹಸ್ತಪ್ರತಿಯನ್ನು ತಿದ್ದಿ-ತೀಡಿ, ಇಂತೇರಿಸಿ ಶ್ರದ್ಧೆಯಿಂದ ಮುದ್ರಣ ಪ್ರತಿ ಸಿದ್ಧಪಡಿಸುತ್ತಿದ್ದರು. ಕನ್ನಡ ಪದಗಳ ನಿಷ್ಪತ್ತಿ; ವಿಶೇಷಣಗಳ ಬಳಕೆ ಎಲ್ಲಿ, ಹೇಗೆ, ಏಕೆ ಸಣ್ಣಕ್ಷರ, ದೊಡ್ಡಕ್ಷರಗಳು ಯಾವಾಗ ಬರಬೇಕು ಎಂಬುದರ ಬಗೆಗೆ ಅತ್ಯಂತ ಖಾಚಿತ್ಯವನ್ನು ಉಳ್ಳವರಾಗಿದ್ದರು. ಅವರ ವ್ಯಕ್ತಿತ್ವ ಮತ್ತು ವಿದ್ವತ್ ಎರಡೂ ಆಳ ಮತ್ತು ವಿಸ್ತಾರದಿಂದ ಕೂಡಿತ್ತು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ಮಾತನಾಡಿ ‘ತಾವು ಅಧ್ಯಕ್ಷರಾದ ವರ್ಷವೇ ಕಸಾಪದಿಂದ‘ಜೀವಿ’ ಅವರಿಗೆ ಶತಮಾನೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜೀವಿ ಅವರು ಅರವತ್ತರ ದಶಕದಲ್ಲಿ ಕಸಾಪ ಅಧ್ಯಕ್ಷರಾಗಿದ್ದಾಗ ಸರ್ಕಾರದಿಂದ 3 ಸಾವಿರ ರೂ. ವಾರ್ಷಿಕ ಅನುದಾನ ಬರುತ್ತಿತ್ತು. ಅಂದಿನ ಹಣಕಾಸು ಸಚಿವ ರಾಮಕೃಷ್ಣ ಹೆಗಡೆಯವರನ್ನು ಕಂಡು 25 ಸಾವಿರ ರೂ.ಗಳಿಗೆ ಹೆಚ್ಚಿಸಿದ್ದರು. ನಿರಂತರ ಪಾಂಡಿತ್ಯ ಪೋಷಣೆಯ ಮೂಲಕ ಭಾರತದ ಮುಂಚೂಣಿ ವಿದ್ವತ್ ಸಂಸ್ಥೆಗಳ ಸಾಲಿನಲ್ಲಿ ಪರಿಷತ್ತನ್ನು ತಂದು ನಿಲ್ಲಿಸಿದರು. ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿದ್ದಾಗ ಜೀವಿ ಅವರ ಜನ್ಮಶತಮಾನೋತ್ಸವದ ಆಚರಣೆಗಾಗಿ ಮೊದಲೇ 25 ಸಾವಿರ ರೂ. ಗಳನ್ನು ಪ್ರತ್ಯೇಕವಾಗಿ ತೆಗೆದಿರಿಸಿದ್ದಾಗಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ಮಾತನಾಡಿ ‘ಜಿ. ವೆಂಕಟಸುಬ್ಬಯ್ಯ ಅವರನ್ನು ಗಟ್ಟಿ ಬೇರಿನ, ಗಟ್ಟಿ ಕಾಂಡದ ಪೋಷಕಾಂಶಗಳಿರುವ ಯಥೇಚ್ಛ ನಾರು ಉಳ್ಳ ದಂಟಿನ ಸೊಪ್ಪು ಎಂದು ಬಣ್ಣಿಸಿದರು. ಅವರು ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಅನಂತರ ಕನ್ನಡ - ಕನ್ನಡ ಬೃಹತ್ ನಿಘಂಟಿನ ಪ್ರಧಾನ ಸಂಪಾದಕರಾಗಿ ನಾಲ್ಕು ದಶಕಗಳ ಕಾಲ ದಣಿವರಿಯದೆ ದುಡಿದಿದ್ದರಿಂದ ಭಾರತೀಯ ಭಾಷೆಗಳಲ್ಲೇ ಅತ್ಯಂತ ಅಪರೂಪವಾದ, ಅನನ್ಯವಾದ ನಿಘಂಟು ದಕ್ಕಿತು. ತನ್ಮೂಲಕ ಕನ್ನಡಕ್ಕೆ ಭಾರತದಲ್ಲಿ ಅಸ್ಮಿತೆಯನ್ನು ತಂದುಕೊಟ್ಟಿತು. ಅವರು ಕನ್ನಡ ಭಾಷೆಯ ಹೆಮ್ಮೆ ಎಂದರು. ಕಸಾಪ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪನಿರೂಪಿಸಿದರು.

MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...