ವಿಮಾನ ನಿಲ್ದಾಣಕ್ಕೆ ಸ್ವಾಗತ

Date: 09-06-2021

Location: ಬೆಂಗಳೂರು


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗಿಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರು. ವಿಮಾನಯಾನದ ಉಗಮ, ಸ್ವರೂಪ, ಪರಿಶೀಲನೆ-ತಪಾಸಣೆ ಹೀಗೆ ವಿವಿಧ ಪ್ರಕ್ರಿಯೆಯಲ್ಲಿ ಪಡೆದ ಅನುಭವಗಳನ್ನು ತಮ್ಮ ‘ಏರೋ ಪುರಾಣ’ ಅಂಕಣದಲ್ಲಿ ವಿವರಿಸಿದ್ದಾರೆ.

ವಿಮಾನಗಳು ತಮ್ಮ ಇರುವಿಕೆಯ ಬಹುಭಾಗವನ್ನು ಆಕಾಶದಲ್ಲಿ ಕಳೆಯುತ್ತವೆ ಮತ್ತೆ ಅವು ಎಂದೆಂದಿಗೂ ಹಾರಿಕೊಂಡೇ ಹಾಯಾಗಿರಲಿ ಎಂದು ವಿಮಾನಗಳನ್ನು ಖರೀದಿಸಿ ಚಲಾಯಿಸುವ ಏರ್ಲೈನ್ ಸಂಸ್ಥೆಗಳ ಮಾಲಿಕರು ಹಾರೈಸುತ್ತಾರೆ . ಹಲವು ಕೋಟಿ ಬೆಲೆಯ ವಿಮಾನಗಳು ಕಾರಾಣಾಂತರದಿಂದ ಒಂದು ದಿನ ಹಾರದೇ ಇದ್ದರೂ ತಮ್ಮ ಯಜಮಾನರಿಗೆ ಅಪಾರ ನಷ್ಟವನ್ನು ಉಂಟುಮಾಡುತ್ತವೆ. ಹಾಗಂತ ಹಾರುವ ವಿಮಾನಗಳ ಪ್ರತಿಕ್ಷಣದ ಲಕ್ಷ್ಯ, ಭೂಮಿಯ ಮೇಲಿನ ಯಾವುದೋ ದಿಕ್ಕು ,ನೆಲದ ಮೇಲಿನ ಯಾವುದೋ ತಾಣ. ಒಂದು ಊರಿನಲ್ಲಿ ಗಾಳಿಯ ಮೆಟ್ಟಿಲನ್ನು ಹದಿನೈದಿಪ್ಪತ್ತು ನಿಮಿಷಗಳಲ್ಲಿ ರಭಸದಲ್ಲಿ ಏರಿ, ನೆಲದಿಂದ ಎಂಟು ಹತ್ತು ಕಿಲೋಮೀಟರು ಎತ್ತರದ ಆಕಾಶದಲ್ಲಿ ಪ್ರಯಾಣ ನಡೆಸಿ ಕೊನೆಗೆ ಇನ್ನೊಂದು ಊರಿನಲ್ಲಿ ಸರಸರನೆ ಇಳಿಯುವುದು ವಿಮಾನಗಳ ಅತ್ಯಂತ ಸಾಮಾನ್ಯ ದಿನಚರಿ.ಮತ್ತೆ ಈ ದೈನಂದಿನ "ವಿಮಾನ ಡೈರಿ"ಯಲ್ಲಿ, ಗಾಳಿಯ ಮೇಲಿಡುವ ಹೆಜ್ಜೆಹೆಜ್ಜೆಯಲ್ಲೂ ಗುರಿ ಮುಟ್ಟಲು ಬೇಕಾಗುವ ಸಮಯ,ಇನ್ನುಳಿದ ರಹದಾರಿ ,ಹಾದಿಯುದ್ದಕ್ಕೂ ಎದುರಾಗಬಹುದಾದ ವಾತಾವರಣದ ವೈಪರೀತ್ಯಗಳು, ಹೀಗೆ ಯೋಚಿಸುತ್ತ ಚಾಲಕನ ಆದೇಶವನ್ನು ಪಾಲಿಸುತ್ತ ವಿಮಾನಗಳು ಸಾಗುತ್ತವೆ . ಈ ನಿತ್ಯಯಾನದ ಶುರು ಮತ್ತು ಕೊನೆ ಎರಡೂ ಗಮ್ಯಗಳೇ , ಇಡೀ ಪ್ರಯಾಣದ ದಿಕ್ಕುದೆಸೆಗಳನ್ನು ನಿರ್ಧರಿಸುವ ನಿರ್ಣಾಯಕ ಮೈಲಿಗಲ್ಲುಗಳು .ಮತ್ತೆ ಆ ಮೈಲಿಗಲ್ಲುಗಳು ಯಾವ ಊರು ಪ್ರದೇಶದಲ್ಲಿ ಇದ್ದರೂ ಅವನ್ನು "ನಿಲ್ದಾಣ" ಎಂದು ಕರೆಯುತ್ತಾರೆ. ಟ್ಯಾಕ್ಸಿ,ಆಟೋ ರಿಕ್ಷಾ , ಬಸ್ಸು ,ರೈಲು, ಹಡಗು ಹೀಗೆ ಸಂಚಾರದ ಮಾಧ್ಯಮ ಮಾದರಿ ಯಾವುದೇ ಇದ್ದರೂ ಅವವುಗಳ ನಿಯಮಿತ ತಂಗುದಾಣ ಇರುತ್ತದಲ್ಲ,ಹಾಗೆ ವಿಮಾನಗಳೂ ತಮ್ಮದೇ ಆದ ನಿಲ್ಲುವ ತಾಣದಲ್ಲಿ ಪ್ರಯಾಣ ಮುಗಿಸಿ ಬಂದು "ಉಸ್" ಎಂದು ಉಸಿರು ಬಿಟ್ಟು ಸುಧಾರಿಸಿಕೊಳ್ಳುತ್ತವೆ. ಒಳಗಿರುವವರನ್ನು ವಿನಮ್ರವಾಗಿ ಕೆಳಗಿಳಿಸಿ ಹೊರಗೆ ಕಾಯುತ್ತಿರುವವರನ್ನು ವಿನೀತವಾಗಿ ಹತ್ತಿಸಿಕೊಳ್ಳುತ್ತವೆ. ಬಸ್ಸುಗಳು ನಿಲುಗಡೆಯಾಗಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಲ್ಲಿ ರೈಲುಗಳು ಬರುವುದಿಲ್ಲ, ರಿಕ್ಷಾಗಳು ನಿಲುಗಡೆಯಾಗುವಲ್ಲಿ ಟಾಕ್ಸಿಗಳು ನಿಂತು ಸುಧಾರಿಸಿಕೊಳ್ಳುವುದಿಲ್ಲ , ಮತ್ತೆ ಈ ಇವುಗಳೆಲ್ಲ ತಂಗುವ ತಾಣದ ಆಸುಪಾಸಲ್ಲೂ ಹಡಗುಗಳು ವಿರಮಿಸುವುದಿಲ್ಲ. ನೆಲ ಜಲ ಆಕಾಶವನ್ನು ಕ್ರಮಿಸಿ ಆಕ್ರಮಿಸಿ ಸಂಚಾರ ನಡೆಸುವ ಈ ಎಲ್ಲ ಪ್ರಯಾಣದ ಆಯ್ಕೆಗಳದೂ ಅವವುಗಳ ಚಾರಿತ್ಯ್ರ ಉದ್ದೇಶ ಲಕ್ಷಣಗಳಿಗೆ ಹೊಂದಿಕೊಳ್ಳುವ ಅವುಗಳ ಹಕ್ಕಿನ, ಅಧಿಕಾರದ ನಿಲ್ದಾಣ.

ಏರ್ಪೋರ್ಟ್ ,ಏರೋಡ್ರಮ್ ಎನ್ನುವ ಹೆಸರಿನಿಂದ ಕರೆಸಿಕೊಳ್ಳುವ ವಿಮಾನಗಳ ನಿಲ್ದಾಣ ಮೇಲ್ನೋಟಕ್ಕೆ ವಿಮಾನಗಳು ಇಳಿದು ಹಾರುವ ನಡುವಿನ ಸಮಯ ಕಳೆಯುವ ತಾಣವಾಗಿ , ಯಾತ್ರಿಗಳು ಹತ್ತಿ ಇಳಿಯುವ ಸ್ಥಳವಾಗಿ ಕಂಡರೂ ಅದರ ಒಳಗೆ ಸಂಕೀರ್ಣ ಸುವಿಶಾಲ ಪ್ರಪಂಚ ಇದೆ . ವಿಮಾನ ಜಗತ್ತಿನೊಳಗಿನ ಒಂದು ನಿಗೂಢ ಸೋಜಿಗ ಮಿನಿ ವಿಶ್ವವಿದೆ. ವಿಮಾನಗಳು ಓಡಿ ಆಕಾಶವನ್ನು ಏರುವ , ವೇಗವಾಗಿ ನೆಲಕ್ಕೆ ಬಂದು ಇಳಿಸುವ ಪಥ ಅಥವಾ "ರನ್ವೆ" (Runway),ವಿಮಾನ ನಿಲ್ದಾಣವೊಂದರ ಅತ್ಯಂತ ಮುಖ್ಯ ಅಂಗ . ವಿಮಾನ ನಿಲ್ದಾಣದಲ್ಲಿ ಏನಿಲ್ಲದಿದ್ದರೂ ಅಲ್ಲೊಂದು "ರನ್ವೇ" ಅಂತೂ ಖಂಡಿತ ಇರಬೇಕು. ಟಾರಿನಿಂದ ನಿರ್ಮಿತವಾದ ಕಸ ಕಡ್ಡಿ ಕಲ್ಲುಗಳಿರದೇ ಓಟವನ್ನು ಸರಾಗ ಮಾಡಬಲ್ಲ ಈ ಪಥ ,ಎರಡರಿಂದ ನಾಲ್ಕು ಕಿಲೋಮೀಟರು ಉದ್ದ ಇರುತ್ತದೆ. ಹಾಗಂತ ಅಪರೂಪಕ್ಕೆ ಸಣ್ಣ ವಿಮಾನಗಳನ್ನು ಮಾತ್ರ ಹತ್ತಿಸಿ ಇಳಿಸುವ ಜಗತ್ತಿನ ಮೂಲೆಮೂಲೆಯಲ್ಲಿ ಇರುವ ಕೆಲವು ವಿಮಾನ ನಿಲ್ದಾಣಗಳ ಪಥಗಳು ಹುಲ್ಲು ಕಲ್ಲುಗಳಿಂದಲೇ ತುಂಬಿರುವ ದೊರಗು ಕಚ್ಚಾ ಬಯಲಾಗಿರುವ ಸಾಧ್ಯತೆಯೂ ಇದೆ. ವಿಮಾನ ಪ್ರಯಾಣ ಶುರುವಾದ ಕಾಲದಲ್ಲಿ ವಿಮಾನಗಳು ಹುಲ್ಲುಗಾವಲಿನ ಮೇಲಿನಿಂದಲೇ ನೆಗೆಯುವುದು ಅಲ್ಲೇ ಮತ್ತೆ ಇಳಿಯುವುದು ಸಾಮಾನ್ಯವಾಗಿತ್ತು.ಬರೇ ಅರ್ಧ ಕಿಲೋಮೀಟರು ಉದ್ದದ "ರನ್ವೇ" ಯಲ್ಲಿ ಆ ಕಾಲದ ಸಣ್ಣ ವಿಮಾನಗಳು ಹತ್ತಿ ಇಳಿಯುತ್ತಿದ್ದವು. ಇನ್ನು ದೂರಪ್ರಯಾಣಕ್ಕೆ ಬಳಸಲಾಗುತ್ತಿದ್ದ "ಸಮುದ್ರ ವಿಮಾನಗಳು" (Sea Plane) ನೀರಿನ ಮೇಲೆ ಇಳಿಯುವ ಹತ್ತುವ ಅನುಕೂಲಕ್ಕಾಗಿ ವಿಮಾನ ನಿಲ್ದಾಣಗಳು ಯಾವುದೊ ಸರೋವರದ ಹತ್ತಿರ ಇರಬೇಕಾದ ಅನಿವಾರ್ಯತೆಯೂ ಇತ್ತು . ವಿಮಾನದ ಗಾತ್ರ,ವೇಗ,ಬಳಸುವ ಎಂಜಿನ್ ಇತ್ಯಾದಿಗಳು ತೀವ್ರ ಪರಿವರ್ತನೆಯನ್ನು ಕಂಡಿರುವ ಈ ಕಾಲದಲ್ಲಿ ವಿಮಾನಗಳು ನೀರಿನ ಮೇಲೆ ಇಳಿಯುವ ಸಾಧ್ಯತೆ ಇಲ್ಲ (ಉದ್ದೇಶಪೂರ್ವಕವಾಗಿ!). ಗಂಟೆಗೆ ಸುಮಾರು 250 ಕಿಲೋಮೀಟರು ವೇಗದಲ್ಲಿ ನೆಲವನ್ನು ಸ್ಪರ್ಶಿಸುವ ದೊಡ್ಡ ವಿಮಾನಗಳು ಉದ್ದವೂ ,ದೃಡವೂ ,ಸ್ವಚ್ಛವೂ ಆಗಿರುವ ಮತ್ತೆ ದೀರ್ಘ ಬಾಳಿಕೆ ಬರುವ ವಸ್ತುವಿನಿಂದ ನಿರ್ಮಾಣ ವಾದ "ರನ್ವೆ" ಯನ್ನು ವಿಮಾನಗಳು,ನಿಲ್ದಾಣಗಳು ಈ ಕಾಲದಲ್ಲಿ ಬಯಸುತ್ತವೆ.

ಇನ್ನು ವಿಮಾನಗಳು ಚಾಲಕ ಬಯಸಿದಂತೆಯೋ ಅಥವಾ ತಮ್ಮಷ್ಟಕ್ಕೋ ಇಳಿದು ಹತ್ತುವಂತೆ ಕಂಡರೂ ವಿಮಾನಗಳಿಗೆ ನಿರ್ದೇಶನ ನೀಡುವಲ್ಲಿ ನಿಲ್ದಾಣದಲ್ಲಿರುವ ಸಂಚಾರ ನಿಯಂತ್ರಣ ಕೇಂದ್ರ (Air traffic Control) ಪಾತ್ರ ಅತ್ಯಂತ ಮಹತ್ವದ್ದು. ನಿಲ್ದಾಣವೊಂದರ ಸುಪರ್ದಿಗೆ ಬರುವ ಆಕಾಶ ವಲಯದಲ್ಲಿ ಪ್ರತಿಕ್ಷಣವೂ ಎಷ್ಟು ವಿಮಾನಗಳು ಒಳ ಬರುತ್ತಿವೆ ಹೊರ ಹೋಗುತ್ತಿವೆ ಎಂದು ನಿಗಾ ಇಡುವುದು ಕೆಳಗೆ ನಿಲ್ದಾಣದಲ್ಲಿ ಕುಳಿತ ನಿಯಂತ್ರಕರ ನಿರಂತರ ಕೆಲಸ. ನಿಂತಿರುವ ವಿಮಾನಗಳು ಸರತಿಯಲ್ಲಿ ಓಡಲು ಶುರು ಮಾಡಿ ಹಾರುವುದು ಮತ್ತೆ ಪ್ರಯಾಣ ಮುಗಿಸಿ ಬಂದ ವಿಮಾನಗಳು ಇಳಿಯುವುದು ,ಇಳಿದವು "ರನ್ವೇ" ಯಿಂದ ಬದಿಗೆ ನಿಧಾನವಾಗಿ ಚಲಿಸಿ ತಮಗೆಂದೇ ಮೀಸಲಾದ ಸ್ಥಾನಕ್ಕೆ ತಲುಪಿ ನಿಲ್ಲುವುದು ಎಲ್ಲವೂ "ಸಂಚಾರ ನಿಯಂತ್ರಣ ಕೇಂದ್ರ"ದ ಸಂಪರ್ಕದಲ್ಲಿ, ನಿಲ್ದಾಣದ ಭೂ ಸಿಬ್ಬಂದಿಗಳ (Ground Staff ) ಮಾರ್ಗದರ್ಶನದಲ್ಲಿ . ನಿಯಂತ್ರಣ ಅಧಿಕಾರಿಗಳ ತಪ್ಪು ಅಂದಾಜಿನಲ್ಲಿ ,ತಮ್ಮ ಮೇಲಿನ ಆಕಾಶದಲ್ಲಿ ಇರುವ ವಿಮಾನಗಳಿಗೆ ತಪ್ಪು ಲೆಕ್ಕಾಚಾರ ರವಾನೆಯಾಗಿ ವಿಮಾನಗಳು ಒಂದಿನ್ನೊಂದಕ್ಕೆ ಹತ್ತಿರ ಬಂದು ಡಿಕ್ಕಿ ಹೊಡೆದು ಗಂಭೀರ ಅಪಘಾತ ಸಂಭವಿಸಿದ ಘಟನೆಗಳಿವೆ. ಹಲವು ವಿಮಾನಗಳಿಂದ ತುಂಬಿರುವ ಆಕಾಶದಲ್ಲಿ ಪ್ರತಿ ವಿಮಾನಕ್ಕೂ ನಿರ್ದಿಷ್ಟ ಎತ್ತರ ,ಮಾರ್ಗದಲ್ಲಿ ಅವಕಾಶ ಮಾಡಿಕೊಡುವುದು, ನೆಲದ ಮೇಲಿನ ನಿಯಂತ್ರಣ ಕೇಂದ್ರದ ಮುಖ್ಯ ಜವಾಬ್ದಾರಿಗಳಲ್ಲೊಂದು . ಪ್ರಯಾಣ ಯಾವಾಗ ಶುರು ಮಾಡಬೇಕು ,ಯಾವ ಸಮಯಕ್ಕೆ "ರನ್ವೇ" ಯಲ್ಲಿ ಇರಬೇಕು, ಯಾವಾಗ ಹಾರಬೇಕು, ಇನ್ನೂ ಇಳಿಯುವ ವಿಮಾನವಾದರೆ ಮುಂದಿನ ಹಿಂದಿನ ವಿಮಾನಗಳನ್ನು ನೋಡಿಕೊಂಡು ಯಾವ ಸರತಿಯಲ್ಲಿ ನಿಲ್ದಾಣದ ನೆಲಮುಟ್ಟಬೇಕು ಎನ್ನುವ ನಿರ್ದೇಶನಗಳು ಸಿಗುವುದೂ ಇಲ್ಲಿಂದಲೇ . ಆಕಾಶವನ್ನು ಏರಿದ ನಿಲ್ದಾಣದ ನಿಯಂತ್ರಣ ಕೊಠಡಿಯ ಸಂಪರ್ಕದಿಂದ ದೂರಾದ ಮೇಲೆ ಹಾದಿಯುದ್ದಕ್ಕೂ ಸಿಗುವ ಒಂದಿಲ್ಲೊಂದು ನಿಲ್ದಾಣದ ನಿಯಂತ್ರಣ ವ್ಯವಸ್ಥೆಯೊಟ್ಟಿಗೆ ಸಂಪರ್ಕ ಇಟ್ಟುಕೊಂಡೆ ವಿಮಾನಗಳು ಪ್ರಯಾಣ ಮುಂದುವರಿಸುತ್ತವೆ. ಇಳಿಯುವ ಹತ್ತುವ ಸ್ಥಳಗಳಲ್ಲಿರುವ ಎರಡು ನಿಲ್ದಾಣಗಳಲ್ಲದೇ ಹಾದಿಯುದ್ದಕ್ಕೂ ವಿಮಾನಗಳು ನಿರಂತರ ಒಂದಿಲ್ಲೊಂದು ನಿಲ್ದಾಣದ ಜೊತೆಗೆ ಸಂಪರ್ಕದಲ್ಲಿ ಇರುತ್ತವೆ. ಮತ್ತೆ ತುರ್ತಾಗಿ ವಿಮಾನ ಇಳಿಸಬೇಕಾದ ಸಂದರ್ಭದಲ್ಲಿ ತಾವು ಹಾರುವ ಎತ್ತರದಿಂದ ಒಂದು ಗಂಟೆ ಯಾನದಲ್ಲಿ ನಿಲ್ದಾಣವೊಂದನ್ನು ಸೇರುವ ಹಾಗೆ ವಿಮಾನಗಳ ಮಾರ್ಗವೂ ನಿರ್ಧರಿತವಾಗಿರುತ್ತದೆ.ಹೀಗೆ ನಿಯಮಿತ ಸಮಯದಲ್ಲಿ ನಿಲ್ದಾಣವೊಂದನ್ನು ಸೇರುವ ಸಾಮರ್ಥ್ಯ ವಿಮಾನ ಹಾಗು ಎಂಜಿನ್ ಗಳ ವಿನ್ಯಾಸದೊಳಗಿನ ಮಾನದಂಡವೂ ಹೌದು . ಇನ್ನು ವಿಮಾನಗಳ ಮೇಲ್ವಿಚಾರಣೆ ದುರಸ್ತಿ , ಹಾಗು ಪ್ರಯಾಣಿಕರ ನಿರ್ವಹಣೆ ,ಸರಕು ಸಾಗಾಣಿಕೆ ವ್ಯವಸ್ಥೆ ನಿಲ್ದಾಣದ ಇತರ ಪ್ರಮುಖ ಹೊಣೆಗಾರಿಕೆಗಳು .ನಿಯಮಿತವಾಗಿ ನಿರಂತರವಾಗಿ ವಿಮಾನ ತಯಾರಕರ ಸೂಚನೆಯಂತೆ ವಿಮಾನಗಳ ದೇಹ ,ವ್ಯವಸ್ಥೆಗಳು ತಪಾಸಣೆಗೆ ಒಳಪಡುತ್ತಿರಬೇಕು, ಅಗತ್ಯ ಬಿದ್ದಲ್ಲಿ ದುರಸ್ತಿಯೂ ತುರ್ತಾಗಿ ನಡೆಯಬೇಕು. ಇಂತಹ ಕೆಲಸ ಮಾಡುವ ಕೌಶಲ ಇರುವ ಸಂಸ್ಥೆಗಳು ನಿಲ್ದಾಣದ ಒಳಗೇ ಇರುತ್ತವೆ. ಇನ್ನು ವಿಮಾನಗಳು ಹಾರುವಷ್ಟು ಹೊತ್ತೂ ನಿರಂತರವಾಗಿ ಒಳ ಬರುವ, ಹೊರ ಹೋಗುವ ಅಪಾರ ಸಂಖ್ಯೆಯ ಪ್ರಯಾಣಿಕರ ಸುರಕ್ಷತಾ ತಪಾಸಣೆ , ಸಾಮಾನು ಸರಂಜಾಮುಗಳ ಪರೀಕ್ಷೆ ,ಅವನ್ನು ಸರಿಯಾದ ವಿಮಾನಕ್ಕೆ ಮುಟ್ಟಿಸುವ ಹೊಣೆ ,ಪ್ರಯಾಣ ಮುಗಿದ ಮೇಲೆ ನಿರ್ಗಮಿಸುವ ಯಾತ್ರಿಗಳಿಗೆ ಸುಸೂತ್ರವಾಗಿ ತಲುಪಿಸುವುದು , ಯಾತ್ರಿಗಳ ಊಟ ಉಪಹಾರಗಳನ್ನು ವಿಮಾನದೊಳಗೆ ಸೇರಿಸಿಕೊಳ್ಳುವುದು, ಪ್ರತಿ ಪ್ರಯಾಣದ ನಂತರ ವಿಮಾನವನ್ನು ಸ್ವಚ್ಛಗೊಳಿಸುವುದು,ಕಸ ತ್ಯಾಜ್ಯಗಳ ವಿಲೇವಾರಿ, ವಿಶಾಲ ನಿಲ್ದಾಣದೊಳಗಿನ ಸಾರಿಗೆ ಸಾಗಾಟ ವ್ಯವಸ್ಥೆ,ಯಾತ್ರಿಗಳನ್ನು ವಿಮಾನದೊಳಗೆ ಹತ್ತಿಸಿಕೊಳ್ಳಲು ಇಳಿಸಲು ಅನುಕೂಲವಾಗುವ ಸಂಚಾರ ಸೇತುವೆಗಳ (Air bridge) ನಿಭಾಯಿಸುವಿಕೆ,ದೇಶ ವಿದೇಶಗಳಿಗೆ ಸರಕು ಸಾಗಾಟ ಇತ್ಯಾದಿಗಳು ವಿಮಾನ ನಿಲ್ದಾಣದ ಸಂಕೀರ್ಣ ರಚನೆಯ ,ಬಹುಮುಖಿ ವ್ಯಕ್ತಿತ್ವದ ಭಾಗಗಳು.

ಜಗತ್ತಿನಲ್ಲಿ ನಲವತ್ತು ಸಾವಿರಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಿವೆ. ಅವುಗಳಲ್ಲಿ ಕೆಲವು ಸಾವಿರ ವಿಮಾನ ನಿಲ್ದಾಣಗಳು ನಿತ್ಯವೂ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವಂತಹವು. ಇನ್ನು ,ಒಂದು ಲಕ್ಷಕ್ಕಿಂತ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುವ ಅತಿದೊಡ್ಡ ನಿಲ್ದಾಣಗಳೂ ಇವೆ. ವಿಮಾನಗಳು ಆಗಷ್ಟೇ ಹಾರಲು ಆರಂಭಿಸಿದ 1920-30ರ ಸಮಯದಲ್ಲಿ ವಿಮಾನಗಳಲ್ಲಿ ಸಂಚರಿಸಲು ಬರುವವರಿಗಿಂತ ಹೆಚ್ಚು ಜನರು ನಿಲ್ದಾಣವನ್ನು ನೋಡಿ ಹೋಗಲು ಬರುತ್ತಿದ್ದರಂತೆ. ಕೆಲವು ಸಾವಿರ ಜನರು ವರ್ಷವೊಂದರಲ್ಲಿ ನಿಲ್ದಾಣವೊಂದರಿಂದ ಪ್ರಯಾಣಿಸುವವರಿದ್ದರೆ,ಲಕ್ಷಕ್ಕೂ ಮಿಕ್ಕಿ ಜನರು ಹಾರುವ ಇಳಿಯುವ ವಿಮಾನಗಳನ್ನು ಕುತೂಹಲದಿಂದ ನೋಡಲು ಆಗಮಿಸುತ್ತಿದ್ದವರಂತೆ. ವಿಮಾನ ನಿಲ್ದಾಣಕ್ಕೆ ಬರೇ ಪ್ರವಾಸಿಯಂತೆ ಬಂದು ಸುತ್ತಿ ನೋಡಿ ಹೋಗುವವರ ಸಂಖ್ಯೆ ಈ ಕಾಲದಲ್ಲಂತೂ ತೀರ ಕಡಿಮೆ ಅಥವಾ ಸುರಕ್ಷತೆಯ ನಿಟ್ಟಿನಿಂದ ಹಾಗೆಯೇ ನೋಡಿ ಹೋಗಲು ಅನುಮತಿ ಪಡೆಯುವುದು ಈಗ ಅಷ್ಟು ಸುಲಭವೂ ಅಲ್ಲ. ನಿಲ್ದಾಣಗಳು ಯಾವ ಕಾಲದಲ್ಲಿ ಎಲ್ಲೇ ಇದ್ದರೂ, ಅದನ್ನೇ ನೋಡಲೆಂದು ಜನರು ಬರುವವರಿದ್ದರೂ ಇಲ್ಲದಿದ್ದರೂ, ನಿಲ್ದಾಣದ ಬೇರೆಬೇರೆ ಅಂಗಗಳು ವ್ಯವಸ್ಥೆಗಳು ಎಲ್ಲವೂ ಸೇರಿ ವಿಮಾನವೊಂದನ್ನು ಸುರಕ್ಷಿತವಾಗಿ ಹಾರಿಸಿ ಇಳಿಸುವಲ್ಲಿ ,ಪ್ರಯಾಣಿಕರ ಯಾನವನ್ನು ಸುಗಮವಾಗಿಸುವಲ್ಲಿ ದುಡಿಯುವುದು ಮಾತ್ರ ಮುಂದುವರಿದಿದೆ. ಹೊಸ ಸೌಲಭ್ಯ ಸೌಕರ್ಯಗಳು ವಿಮಾನ ನಿಲ್ದಾಣಗಳನ್ನು ತುಂಬುತ್ತಿದ್ದರೂ ಬಳಕೆದಾರರಿಗೆ ಅನುಕೂಲತೆಗಳನ್ನು ಸೃಷ್ಟಿಸುತ್ತಿದ್ದರೂ ,ನಿಲ್ದಾಣಗಳ ಮೂಲಭೂತ ಜವಾಬ್ದಾರಿಗಳು ಹಿಂದಿನಂತೆಯೇ ಇವೆ.ಇನ್ನು ವಿಭಿನ್ನ ಹೊಣೆಗಾರಿಕೆಗಳ ಹಲವು ಕಾರ್ಯಾಚರಣೆಗಳು ಏಕಕಾಲಕ್ಕೆ ನಡೆಯುವ ವಿಮಾನ ನಿಲ್ದಾಣವೊಂದರ ನಿರ್ವಹಣೆಯಲ್ಲಿ ಸವಾಲುಗಳಿರುವಂತೆಯೇ , ನಿಲ್ದಾಣಗಳ ವಿನ್ಯಾಸ ನಿರ್ಮಾಣವೂ ಸರಳವಾದುದಲ್ಲ . ನಿರ್ಮಾಣಕ್ಕೆ ಪ್ರಶಸ್ತವಾದ ಸ್ಥಳವನ್ನು ಆಯುವುದರಿಂದಲೇ ಮುಂದೆ ಸಿದ್ಧವಾಗಲಿರುವ ನಿಲ್ದಾಣ ಎದುರಿಸುವ ಸವಾಲುಗಳ ಸರಣಿ ಆರಂಭ ಆಗುತ್ತದೆ. ಪ್ರಯಾಣಿಕರ ದೃಷ್ಟಿಯಿಂದ ನಿಲ್ದಾಣವೊಂದು ನಗರ ಪ್ರದೇಶದ ಹತ್ತಿರ ಇರುವುದನ್ನು ಬಯಸುತ್ತದೆ . ಆದರೆ ಎತ್ತರದ ಕಟ್ಟಡಗಳಿರುವ ಸ್ಥಳದಿಂದ , ಶಬ್ದ ಹಾಗು ಪರಿಸರ ಮಾಲಿನ್ಯಗಳ ಕಾರಣಕ್ಕೆ ಜನವಸತಿ ಪ್ರದೇಶಗಳಿಂದ ದೂರ ಇರಬೇಕಾದ ಅಗತ್ಯವೂ ಇದೆ. ಇನ್ನೂರು ಮುನ್ನೂರು ಎಕರೆಗಳ ಬಯಲು ಪ್ರದೇಶದಲ್ಲಿ ನಿರ್ಮಾಣಗೊಳ್ಳುವ ದೊಡ್ಡ ನಿಲ್ದಾಣಗಳು ಪರಿಸರ ಹೋರಾಟಗಳ ವಸ್ತುವೂ ಆಗಿವೆ. 250 ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ,ದಿನಕ್ಕೆ 1300 ವಿಮಾನಗಳನ್ನು ಸ್ವಾಗತಿಸುವ ,ಎರಡು ಲಕ್ಷ ಜನರು ಹತ್ತಿ ಇಳಿಯುವ , ಜಗತ್ತಿನ "ಬ್ಯುಸಿ" ಏರ್ಪೋರ್ಟ್ ಗಳಲ್ಲಿ ಒಂದಾಗಿರುವ ಲಂಡನ್ನಿನ ಹೀತ್ರೋ ನಿಲ್ದಾಣಕ್ಕೆ ಮೂರನೆಯ "ರನ್ವೇ" 2009ರಲ್ಲಿ ಸೂಚಿತವಾಗಿತ್ತು. ಹಿಂದಿಗಿಂತ ಹೆಚ್ಚು ವಿಮಾನಗಳು ಆಗಮಿಸಿ ಹೆಚ್ಚಲಿರುವ ಮಾಲಿನ್ಯ,ಸದ್ದು, ಸ್ಥಳಾಂತರಗೊಳ್ಳಬೇಕಾದ ಜನವಸತಿಗಳ ದೃಷ್ಟಿಯಿಂದ ಪ್ರತಿರೋಧ ಎದುರಿಸಿದ ಈ ಯೋಜನೆ ಹನ್ನೊಂದು ವರ್ಷಗಳ ನಂತರ, ಅಂದರೆ ಕಳೆದ ಡಿಸೆಂಬರ್ ಅಲ್ಲಿ ಇಲ್ಲಿನ ಸರ್ವೋಚ್ಛ ನ್ಯಾಯಾಯಲಯದಲ್ಲಿ ಗೆಲವು, ಮಾನ್ಯತೆ ಪಡೆಯಿತು.ಜಗತ್ತಿನ ಮೂಲೆಮೂಲೆಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣದ ವಿಸ್ತರಣೆಯ ಕುರಿತಾಗಿ ನಡೆದ ಪ್ರತಿಭಟನೆ ಹೋರಾಟಗಳ ದೀರ್ಘ ಪಟ್ಟಿಯೇ ಇದೆ. ಅಂತಹ ಪ್ರತಿಭಟನೆಗಳಲ್ಲಿ ಟೀಕೆಗಳಲ್ಲಿ ವಿಮಾನ ಉದ್ಯಮದಿಂದ ವಾತಾವರಣಕ್ಕೆ ಸೇರಲ್ಪಡುವ ಇಂಗಾಲದ ಡೈ ಆಕ್ಸೈಡ್ ಅನ್ನು ಬೇರೆ ಬೇರೆ ವಿಧಾನದಿಂದ ಅಳೆದು ಹೋಲಿಸಿ ಹೇಳುತ್ತಾರೆ. ಜಗತ್ತಿನ ಮಾನವ ಪ್ರೇರಿತ ಒಟ್ಟು ಮಾಲಿನ್ಯದ ಎರಡು ಪ್ರತಿಶತ, ಎಲ್ಲ ಬಗೆಯ ಸಾರಿಗೆ ವ್ಯವಸ್ಥೆಗಳು ಉಗುಳುವಿಕೆಯ 12 ಪ್ರತಿಶತ ಹೀಗೆ ಮಾಲಿನ್ಯದ ವಿಚಾರದಲ್ಲಿ ವಿಮಾನ ಉದ್ಯಮದ ಬಗೆಗಿನ ಉಲ್ಲೇಖ ಗಮನಿಸುವಿಕೆ ಹೆಚ್ಚುತ್ತಿದೆ. ಪ್ರತಿಕ್ರಿಯೆಯಾಗಿ ವಿಮಾನ ತಯಾರಕ ಕಂಪೆನಿಗಳು ಕಡಿಮೆ ಹೊಗೆಯುಗುಳುವ ಅಥವಾ ಮಾಲಿನ್ಯವನ್ನೇ ಹುಟ್ಟುಹಾಕದ ಪರ್ಯಾಯ ಇಂಧನ ವ್ಯವಸ್ಥೆಯನ್ನು ಬಳಸುವ ವಿಮಾನಗಳ ಬಗೆಗೆ ಇದೀಗ ಕಾರ್ಯೋನ್ಮುಖರಾಗಿದ್ದಾರೆ. ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ವಿದ್ಯುತ್ ಶಕ್ತಿಯಿಂದ, ಜೈವಿಕ ಇಂಧನಗಳಿಂದ ,ಹೈಡ್ರೋಜನ್ ಇಂಧನದಿಂದ ಹಾರುವ ವಿಮಾನಗಳನ್ನು ಆಕಾಶದಲ್ಲಿ ಕಾಣುವ ಕನಸು ಕಾಣುತ್ತಿದ್ದಾರೆ . ಅಂತಹ ಯೋಚನೆಗಳು ಯೋಜನೆಗಳು ನಿಜವಾದಾಗ ವಿಮಾನಗಳಿಗೆ ಹೊಸಜನ್ಮ ಸಿಗಲಿದೆ ಮತ್ತೆ ಅಂತಹ ವಿಮಾನಗಳನ್ನು ಆಲೈಸಿ ಓಲೈಸಿ ಸಂತೈಸಿ ನಿಭಾಯಿಸುವ ನಿಲ್ದಾಣಗಳಿಗೂ ವಿಶಿಷ್ಟ ರೂಪಾಂತರ ದೊರೆಯಲಿದೆ. ಮತ್ತೆ ಆ ವಿಮಾನಗಳನ್ನು ಅದರ ಯಾತ್ರಿಗಳನ್ನು ಅವರ ಸರಕು ಸಾಮಾನುಗಳನ್ನು ಅವೆಲ್ಲವುಗಳ ಗಿಜಿಗಿಜಿ ಹಾರಾಟ ಓಡಾಟ ಸದ್ದುಗದ್ದಲಗಳನ್ನು ಆಗಲೂ ನಿಲ್ದಾಣಗಳು ಹಾರ್ದಿಕವಾಗಿ ಸ್ವಾಗತಿಸಲಿವೆ.

ಈ ಅಂಕಣದ ಹಿಂದಿನ ಬರಹಗಳು

ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು

ಒಂದು ಆಕಾಶ ಹಲವು ಏಣಿಗಳು

ಆಗಸದ ಬಂಡಿಗಳ ಅಂಗರಚನಾಶಾಸ್ತ್ರ

ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ

ಗಗನಯಾನದ ದೈತ್ಯ ಹೆಜ್ಜೆಗಳು

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...