ವಿಮರ್ಶಾಪ್ರಜ್ಞೆ ಇಂದಿನ ಅಗತ್ಯ: ನರಹಳ್ಳಿ ಬಾಲಸುಬ್ರಹ್ಮಣ್ಯ

Date: 14-05-2022

Location: ಧಾರವಾಡ


`ಪ್ರಗತಿಶೀಲ ಪಂಥದ ಸಾಹಿತ್ಯದ ಆಶಯವು ಉತ್ಕೃಷ್ಟವಾದುದಾಗಿದ್ದರೂ ಶ್ರೇಷ್ಠ ಲೇಖಕರಿದ್ದರೂ ವಿಮರ್ಶಕರಿಲ್ಲದೆ ಸೊರಗುವಂಥಾಯಿತು’ ಎಂದು ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು. 

ಅವರು ಧಾರವಾಡದ ಸಂಗಾತ ಪುಸ್ತಕ ಮಳಿಗೆಯ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಭಿಪಾಯ ಹಂಚಿಕೊಂಡರು. 

`ನವೋದಯ ಸಾಹಿತ್ಯದ ಆರಂಭದಲ್ಲಿ ವಿಮರ್ಶಾ ಪ್ರಕಾರ ಹೆಚ್ಚು ಬೆಳೆದಿರಲಿಲ್ಲ. ಹೀಗಾಗಿ ಸಾಹಿತ್ಯಕ ಸ್ಪಂದನೆಯೇ ಅಲ್ಲಿ ಮುಖ್ಯವಾಗಿತ್ತು. ಪ್ರಗತಿಶೀಲ ಸಾಹಿತಿಗಳಲ್ಲಿ  ಅನಕೃ, ನಿರಂಜನ, ತರಾಸು ಮುಂತಾದ ಅನೇಕ ಶ್ರೇಷ್ಠ ಲೇಖಕರಿದ್ದರೂ ಅವರ ಕೃತಿಗಳು ವಿಮರ್ಶೆಗೊಳಪಡದೆ ಚರ್ಚೆ ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಗತಿಶೀಲ ಚಳವಳಿ ನೇಪತ್ಯಕ್ಕೆ ಸೇರಬೇಕಾಯಿತು. ನವ್ಯ ಕಾಲಘಟ್ಟದಲ್ಲಿ ವಿಮರ್ಶೆಯು ತುಂಬಾ ವ್ಯಾಪಕವಾಗಿ ಬೆಳೆದ ಕಾರಣಕ್ಕೆ ಗಟ್ಟಿ ಲೇಖಕರು ರೂಪುಗೊಳ್ಳುವಂತಾಯಿತು. ಅಡಿಗರಂಥವರೇ ತಮ್ಮ ಅಭಿಪ್ರಾಯಗಳ ಮೂಲಕ ಕೂಡ ಜನಾಭಿಪ್ರಾಯರೂಪಿಸುವುದಕ್ಕಿಂತ ಜನಾಭಿರುಚಿಯನ್ನು ತಿದ್ದುವ ಕೆಲಸ ಮಾಡಿದರು’ ಎಂದರು. 

ಅಲ್ಲದೆ `ಕೇವಲ ಚೆನ್ನಾಗಿದೆ ಚೆನ್ನಾಗಿಲ್ಲ ಎನ್ನುವ ಅಭಿಪ್ರಾಯಗಳೇ ವಿಮರ್ಶೆ ಎಂದಾಗಿಬಿಟ್ಟಿದೆ. ವಿಮರ್ಶೆ ಕೂಡ ಸೃಜನಶೀಲವಾದದ್ದೆ. ಸಾಹಿತ್ಯಕ ಬೆಳವಣಿಗೆಗೆ ಮಾತ್ರವಲ್ಲ ಸಮಾಜದ  ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೂ ವಿಮರ್ಶೆ ಅತ್ಯಗತ್ಯ’ ಎಂದ ಅವರು `ಸಾಹಿತ್ಯ ಎಲ್ಲರನ್ನು ಒಂದುಗೂಡಿಸುತ್ತದೆ ಎನ್ನುತ್ತೇವೆ. ಆದರೆ ಇವತ್ತು ಬೇರೆ ಬೇರೆ ಕಾರಣಕ್ಕೆ ಸಾಹಿತ್ಯಕವಲಯದಲ್ಲಿ ಗುಂಪುಗಳಾಗಿಬಿಟ್ಟಿವೆ. ಮೊದಲು ನಾವೆಲ್ಲ ಸ್ನೇಹಿತರಂತೆ ಬೆರೆಯುವುದನ್ನು ಕಲಿಯೋಣ. ಆನಂತರ ಸಾಹಿತ್ಯಕ ಚರ್ಚೆ ಮಾಡೋಣ’ ಎಂದರು. 

ಪುಸ್ತಕೋದ್ಯಮದ ಬಗೆಗೆ ಪ್ರಸ್ತಾಪಿಸಿದ ಅವರು `ಕನ್ನಡದಲ್ಲಿ ಅತ್ಯುತ್ತಮ ಕೃತಿಗಳು ಪ್ರಕಟವಾಗುತ್ತಿವೆ. ಸರಿಯಾದ ವಿತರಣಾ ವ್ಯವಸ್ಥೆ ಇಲ್ಲದ ಕಾರಣಕ್ಕೆ ಓದುಗರಿಗೆ ತಲುಪುತ್ತಿಲ್ಲ. ಸಂಗಾತದ ಪ್ರಯತ್ನ ಪ್ರಶಂಸನೀಯ. ಹೀಗೆ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿಯೂ ಸಾಹಿತ್ಯದಲ್ಲಿ ಆಸಕ್ತಿ ಇರುವವರು ಪುಸ್ತಕದ ಅಂಗಡಿಗಳನ್ನು ತೆರೆಯಬೇಕು. ಯುವಜನರನ್ನು  ಮುಟ್ಟಲು ಬೇರೆ ಬೇರೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಪುಸ್ತಕಮಾರಾಟ ಗೊಣಗುವ  ಕೆಲಸವಾಗದೆ ಘನತೆಯಿಂದ  ಬದುಕುವ ಪ್ರೀತಿಯ ಕೆಲಸ ಎನ್ನುವುದನ್ನು ತೋರಿಸಿಕೊಡಬೇಕು. ನಮ್ಮ ಸಾಹಿತ್ಯಾಸಕ್ತರು ಮಾತ್ರವಲ್ಲ; ಕನ್ನಡದ ಭಾಷೆೆ ಸಾಹಿತ್ಯದ ಬಗೆಗೆ ಆಸಕ್ತಿ ಇರುವವರೆಲ್ಲರೂ ಇಂಥ ಪ್ರಯತ್ನಗಳನ್ನು ಬೆಂಬಲಿಸಬೇಕು’ ಎಂದರು. 

ಸಂಗಾತ ಪತ್ರಿಕೆಯ ಸಂಪಾದಕ ಟಿ. ಎಸ್. ಗೊರವರ ಮಾತನಾಡಿ `ಇವತ್ತು ಸಾಹಿತಿಗಳಲ್ಲಿ ಕೂಡ ಸಣ್ಣ ಸಣ್ಣ  ಗುಂಪುಗಳಾಗಿ ಒಡೆದುಹೋಗುತ್ತಿದ್ದು ಅವರೆಲ್ಲರನ್ನು ಒಗ್ಗೂಡಿಸುವ ದಾರಿಗಳನ್ನು ಹುಡುಕಬೇಕಿದೆ. ಓದುವ ಅಭಿರುಚಿಯನ್ನು ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಹಾಗೆ ನೋಡಿದರೆ ಕನ್ನಡದಲ್ಲಿ ಪುಸ್ತಕಗಳನ್ನು ಕೊಳ್ಳುವ ಜನರಿದ್ದಾರೆ. ಸಕಾಲದಲ್ಲಿ ಅವರಿಗೆ ತಲುಪಿಸುವ ಕೆಲಸ ಮಾಡಬೇಕು ಮತ್ತು ಯುವ ಸಮುದಾಯವನ್ನು ಸಾಹಿತ್ಯದತ್ತ ಸೆಳೆಯುವ ಪ್ರಯತ್ನ ಮಾಡಬೇಕು’ ಎಂದರು. 

ಅಭಿನವದ ರವಿಕುಮಾರ್ ಮಾತನಾಡಿ,`ಧಾರವಾಡದಲ್ಲಿ ಹಲವು ಟ್ರಸ್ಟ್ಗಳಿವೆ, ಸಂಘ ಸಂಸ್ಥೆಗಳಿವೆ. ಅವುಗಳಲ್ಲಿ ಸಾಕಷ್ಟು ಹಣವೂ ಇದೆ. ಅಂಥ ಟ್ರಸ್ಟುಗಳು ಮತ್ತು ಸಂಘಸಂಸ್ಥೆಗಳ ನೆರವಿನೊಡನೆ ಸಂಗಾತ ತಿಂಗಳಿಗೊಂದು ಕಾರ್ಯಕ್ರಮವನ್ನು ಪುಸ್ತಕ ಮಳಿಗೆಯಲ್ಲಿಯೇ ಹಮ್ಮಿಕೊಳ್ಳಬಹುದು. ಇದು ಕೇವಲ ಪುಸ್ತಕ ಮಾರಾಟಮಳಿಗೆಯಾಗದೆ ಸಾಂಸ್ಕೃತಿಕ ಕೇಂದ್ರವಾಗಲಿ’ ಎಂದು ಹಾರೈಸಿದರು. 

ರಾಜೇಂದ್ರ ಬಡಿಗೇರ್, ದುರ್ಗ ಗೊರವರ  ಮುಂತಾದವರು ಸಂವಾದದಲ್ಲಿ ಪಾಲ್ಗೊಂಡರು.


 

MORE NEWS

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’

29-03-2024 ಬೆಂಗಳೂರು

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...